Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ...

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ರಾಜಕೀಯ ಇಚ್ಛಾಶಕ್ತಿ ತೋರಿಸಲಿ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ26 July 2025 10:33 AM IST
share
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ರಾಜಕೀಯ ಇಚ್ಛಾಶಕ್ತಿ ತೋರಿಸಲಿ
ಸಮಾಜದ ಕಟ್ಟಕಡೆಯ ಮನುಷ್ಯರು ಜನತಂತ್ರದ ಪರಿಧಿಯಿಂದ ಇನ್ನೂ ಹೊರಗೆ ಉಳಿದಿದ್ದಾರೆ. ಜಮೀನ್ದಾರಿ ಧಣಿಗಳು ಜಾತಿ ಕವಚ ಧರಿಸಿ ಅಧಿಕಾರ ನಡೆಸುತ್ತಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದ ಬಡವರಿಗೆ ಪಟ್ಟಭದ್ರರ ಕಪಿಮುಷ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಉಳಿದವರ ಪಾಡೇನು? ಅಳುವವರ ಜಾತಿ ಸಂಖ್ಯಾಬಲ ಕಡಿಮೆಯೇ. ಕಾಲಾಳುಗಳ ಬಲದ ಮೇಲೆ ಕುಣಿಯುತ್ತಿರುತ್ತಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪಟ್ಟಭದ್ರರ ಬಲ ಕುಗ್ಗಿಸುವಲ್ಲಿ ಪ್ರಬಲ ಅಸ್ತ್ರವಾಗಿ ಪ್ರಯೋಗಗೊಳ್ಳಲಿ.

ಕರ್ನಾಟಕದ ‘ಅಹಿಂದ’ ವರ್ಗ ಮತ್ತು ಪ್ರಜ್ಞಾವಂತ ಸಮುದಾಯ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅತಿಯಾಗಿ ಬೆಂಬಲಿಸುತ್ತಾ ಬಂದಿರುವುದು ಅವರ ಸಾಮಾಜಿಕ ನ್ಯಾಯದ ಬದ್ಧತೆಯ ಕಾರಣಕ್ಕೆ. ಕಳೆದ ಒಂದು ದಶಕದಿಂದ ಈಚೆಗೆ ಭಾರತದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾ ಅದರ ಮೂಲಸ್ವರೂಪವನ್ನು ವಿರೂಪಗೊಳಿಸಲಾಗುತ್ತಿದೆ.

ಹಾಗೆ ನೋಡಿದರೆ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೂಲ ಆಶಯ ಇನ್ನೂ ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಯೇ ಇಲ್ಲ. ಭಾರತದ ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಕರ್ನಾಟಕ ತುಸು ಮುಂದಿದೆಯಷ್ಟೇ. ಆದರೆ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ.

ಬಸವಣ್ಣ ಮತ್ತು ಬಸವಾದಿ ಶರಣರು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಕನಸು ಕಂಡವರು. ಆಧುನಿಕ ಕರ್ನಾಟಕದಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಕಮಿಷನ್ ಮೂಲಕ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಜೀವ ತುಂಬಿದವರು. ಸ್ವತಂತ್ರ ಕರ್ನಾಟಕದಲ್ಲಿ ನಾಗನಗೌಡ ಸಮಿತಿ ಸೇರಿದಂತೆ ಕೆಲವು ಕಮಿಷನ್ ವರದಿ ಮೂಲಕ ಹಿಂದುಳಿದ ವರ್ಗಗಳಿಗೆ ಸಮಾಧಾನಪಡಿಸುವ ಕೆಲಸ ನಡೆದಿದ್ದವು ಹೊರತು ಕ್ರಾಂತಿಕಾರಿ ಹೆಜ್ಜೆ ಯಾರೂ ಇಟ್ಟಿರಲಿಲ್ಲ.

ಮೊದಲ ಬಾರಿಗೆ ಕರ್ನಾಟಕದಲ್ಲಿ ದೇವರಾಜ ಅರಸು ಅವರು ಎಲ್.ಜಿ. ಹಾವನೂರು ಆಯೋಗದ ವರದಿ ಅನುಷ್ಠಾನಗೊಳಿಸುವ ಮೂಲಕ ಚರಿತ್ರೆ ನಿರ್ಮಿಸಿದರು. ಸಾಮಾಜಿಕ ನ್ಯಾಯ ಪಾಲನೆಯ ಭಾಗವಾಗಿ ಜಾರಿಗೊಂಡ ಹಾವನೂರು ಆಯೋಗದ ವರದಿ ಅನುಷ್ಠಾನ ಮತ್ತು ಭೂಮಿತಿ ಕಾಯ್ದೆ ಜಾರಿ, ಉಳುವವನೇ ಭೂಮಿಯ ಒಡೆಯ ಕಾನೂನುಗಳು ಕರ್ನಾಟಕದ ಸಾಮಾಜಿಕ ಬದುಕಿನಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ್ದವು. ಹಾಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ತಂದೆ ಭೀಮಣ್ಣ ಖಂಡ್ರೆಯವರು ಸದನದಲ್ಲಿ ಹಾವನೂರು ಆಯೋಗದ ವರದಿಯ ಪ್ರತಿಯನ್ನು ಹರಿದು ಹಾಕುವ ಮೂಲಕ ಪಟ್ಟಭದ್ರ ಶಕ್ತಿಗಳ ಪ್ರತಿನಿಧಿಯಾಗಿ ತಮ್ಮ ಆಕ್ರೋಶ ಹೊರ ಹಾಕಿದ್ದರು.

ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರು. ಜಾತಿ ಬಲ ಹೊಂದದೆ ಇದ್ದರೂ ಸಾಮಾಜಿಕ ನ್ಯಾಯದ ಪರ ನಿಂತು ಶೋಷಿತ ಸಮುದಾಯಗಳಿಗೆ ಗಟ್ಟಿ ಧ್ವನಿಯಾದರು. ಹಾವನೂರು ಆಯೋಗದ ವರದಿಯ ಪ್ರತಿ ಹರಿದು ಹಾಕಿದವರಿಗೆ ಅದನ್ನು ಅನುಷ್ಠಾನಕ್ಕೆ ತರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಭೂಮಿತಿ ಕಾಯ್ದೆ ಮತ್ತು ಉಳುವವನೇ ಭೂಮಿಯ ಒಡೆಯ ಮುಂತಾದ ಅತ್ಯಂತ ಕ್ರಾಂತಿಕಾರಿ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಬಿಡಲಿಲ್ಲ. ಭೂಮಿತಿ ಕಾಯ್ದೆ ಅಂದು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರೆ, ಉಳುವವನೇ ಭೂಮಿಯ ಒಡೆಯ ಆಗಿದ್ದರೆ ಕರ್ನಾಟಕದಲ್ಲಿ ಜಮೀನ್ದಾರಿ ವ್ಯವಸ್ಥೆಯ ಪಳೆಯುಳಿಕೆಯೇ ಇರುತ್ತಿರಲಿಲ್ಲ. ದುರಂತವೆಂದರೆ ಭೂಮಿತಿ ಕಾಯ್ದೆಯ ಸಣ್ಣ ಪುಟ್ಟ ಲೋಪಗಳನ್ನು ಬಳಸಿಕೊಂಡ ಜಮೀನ್ದಾರಿ ವರ್ಗ ಭೂಮಿಯ ರೂಪದಲ್ಲಿದ್ದ ಸಂಪತ್ತನ್ನು ಬೇರೆ ರೂಪಕ್ಕೆ ಪರಿವರ್ತಿಸಿಕೊಂಡು ಬಿಟ್ಟಿತು. ಕರ್ನಾಟಕದ ರಾಜಕಾರಣವನ್ನು ಈಗ ನಿಯಂತ್ರಿಸುತ್ತಿರುವವರೇ ಜಾತಿ ಬಲ ಮತ್ತು ಸಂಪತ್ತಿನ ಬಲ ಹೊಂದಿರುವ ರೂಪಾಂತರಗೊಂಡ ಜಮೀನ್ದಾರಿ ಪಳೆಯುಳಿಕೆಯೇ. ಕ್ಯಾಪಿಟೇಷನ್ ಮಾಫಿಯಾ, ರಿಯಲ್ ಎಸ್ಟೇಟ್ ಮತ್ತು ರಾಜಕಾರಣದ ಮೂಲಕ ಎಂಭತ್ತರ ದಶಕದಲ್ಲಿ ಮತ್ತೆ ಮರು ಹುಟ್ಟು ಪಡೆದ ಜಮೀನ್ದಾರಿ ಪಳೆಯುಳಿಕೆ ಈಗ ಯಾರ ನಿಯಂತ್ರಣಕ್ಕೂ ಸಿಗದ ಮತ್ತು ಯಾವ ಶಕ್ತಿಗೂ ಬಗ್ಗದಷ್ಟು ಗಟ್ಟಿಯಾಗಿ ತಳವೂರಿದೆ.

ಹಾಗೆ ನೋಡಿದರೆ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಜಮೀನ್ದಾರಿ ಪಳೆಯುಳಿಕೆಯ ಅಟ್ಟಹಾಸವೇ ಅನುರಣನಗೊಳ್ಳುತ್ತಿದೆ. ಕಮ್ಯುನಿಸ್ಟ್ ಪಕ್ಷಗಳು ರಾಜಕೀಯವಾಗಿ ಶಕ್ತಿಯುತವಾಗಿಲ್ಲ.

ಕರ್ನಾಟಕದಲ್ಲಿ ಗಣಿ ಮಾಫಿಯಾದ ಉಪಉತ್ಪನ್ನವಾಗಿ ಹುಟ್ಟಿಕೊಂಡ ರಾಜಕಾರಣ ಚುನಾವಣಾ ರಾಜಕೀಯದ ಸ್ವರೂಪವನ್ನೇ ವಿರೂಪಗೊಳಿಸಿತು. ಗಣಿ ಮಾಫಿಯಾ ಮೇಲ್ನೋಟಕ್ಕೆ ಬಡವರ ಮಕ್ಕಳೂ ಬೆಳೆದರು ಎಂಬ ಭ್ರಮೆ ಹುಟ್ಟಿಸಿದರೂ ಆ ಬಡವರ ಮಕ್ಕಳು ಎಂತಹವರು ಎಂಬುದು ಸ್ಪಷ್ಟವಾಗಿ ಗೋಚರಿಸಿತು. ಜನಾರ್ದನ ರೆಡ್ಡಿ, ಶ್ರೀರಾಮುಲು ಜಮೀನ್ದಾರಿ ಪಳೆಯುಳಿಕೆಯ ವಿರುದ್ಧದ ಪರ್ಯಾಯ ರಾಜಕೀಯ ಶಕ್ತಿ ಎಂದು ಈ ಹೊತ್ತಿಗೂ ಅನಿಸುತ್ತಿಲ್ಲ. ಗಣಿ ಮಾಫಿಯಾದ ಮೂಲಕ ಹಣ ಮಾಡಿದ ಲೂಟಿಕೋರರ ಗ್ಯಾಂಗ್ ಕಾರಣಕ್ಕೆ ಚುನಾವಣೆಗಳು ದುಬಾರಿಯಾದವು. 2004ರ ಚುನಾವಣೆಗೂ ಮುಂಚೆ ಸಮಾಜವಾದ, ಸಮತಾವಾದ, ಸರಳತೆ, ಸಜ್ಜನಿಕೆ ಎಂದೆಲ್ಲ ಮಾತುಗಳ ರಾಜಕಾರಣ ಮಾಡುತ್ತಿದ್ದವರು ಒಂದೋ ಭ್ರಷ್ಟರಾಗಿ ರಾಜಕೀಯದಲ್ಲಿ ಜೀವಂತರಾಗಿದ್ದಾರೆ. ಭ್ರಷ್ಟರಾಗಲು ಧೈರ್ಯತೋರದವರು ರಾಜಕೀಯ ತೊರೆದಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರೂಪಾಂತರಗೊಂಡ ಸಮಾಜವಾದಿಗಳಂತೆ ಕಾಣುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವವ ಕನಿಷ್ಠ ಹತ್ತು ಕೋಟಿ ಹಣ ಖರ್ಚು ಮಾಡುವ ಶಕ್ತಿ ಹೊಂದಿರಬೇಕು ಎಂಬುದನ್ನು ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡು ಬಿಟ್ಟಿವೆ. ಆ ಕಾರಣಕ್ಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಿಂದಕ್ಕೆ ಸರಿದು ಗುತ್ತಿಗೆದಾರರು, ವ್ಯಾಪಾರಿಗಳು, ಬೆಟ್ಟಿಂಗ್ ಮಾಫಿಯಾದಲ್ಲಿ ದುಡ್ಡು ಮಾಡಿದವರು, ಕಾಪಿಟೇಷನ್ ಮಾಫಿಯಾದವರು, ಗಣಿಗಳ್ಳರು ಮಾತ್ರ ಜನ ನಾಯಕರಾಗುತ್ತಿದ್ದಾರೆ. ಥೈಲಿ ರಾಜಕಾರಣಕ್ಕೆ ಸಾಮಾಜಿಕ ನ್ಯಾಯದ ಪರಿಭಾಷೆಯೇ ಅರ್ಥ ಆಗುವುದಿಲ್ಲ. ಇನ್ನೂ ಸಾಮಾಜಿಕ ನ್ಯಾಯ ಪರಿಕಲ್ಪನೆ ಅರ್ಥವಾಗುವುದು ದೂರದ ಮಾತು.

ವಾಸ್ತವದಲ್ಲಿ ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ವಿ.ಆರ್. ಸುದರ್ಶನ್, ಕೆ.ಆರ್. ರಮೇಶ್ ಕುಮಾರ್, ಬಿ.ಎಲ್. ಶಂಕರ್, ಬಿ. ಆರ್. ಪಾಟೀಲ್ ಮುಂತಾದವರು ಇರಬೇಕಿತ್ತು. ವಿ.ಆರ್. ಸುದರ್ಶನ್, ಬಿ.ಎಲ್. ಶಂಕರ್ ಒಂದು ಎಂಎಲ್‌ಸಿ ಹುದ್ದೆಗೂ ಪರಿಗಣಿಸಲಾಗದಷ್ಟು ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯ ಪರಿಪಾಲನೆಯ ಅದಮ್ಯ ಬಯಕೆ ಜೀವಂತವಾಗಿದ್ದರೂ ವ್ಯವಸ್ಥೆ ಅನುಷ್ಠಾನಗೊಳಿಸಲು ಬಿಡುತ್ತಿಲ್ಲ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅನುಷ್ಠಾನದಲ್ಲಿಯಾದ ಹಿನ್ನಡೆ ಮಾತ್ರ ಎಂದು ಪರಿಗಣಿಸಬೇಕಾಗಿಲ್ಲ. ಎಲ್ಲ ಹಂತದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವತಂತ್ರ ಕರ್ನಾಟಕದಲ್ಲಿ ಕಬ್ಬಲಿಗ ಸಮುದಾಯದ ಒಬ್ಬ ವ್ಯಕ್ತಿಯೂ ಒಂದೇ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ನೇಮಕಗೊಂಡಿಲ್ಲ ಎಂಬ ಕಟುಸತ್ಯ ಗೊತ್ತಿದ್ದರೂ ಮುಖ್ಯಮಂತ್ರಿಗಳಿಗೆ ಸಾಮಾಜಿಕ ನ್ಯಾಯದ ಪರ ನಿಲ್ಲಲು ಸಾಧ್ಯವಾಗುತ್ತಿಲ್ಲ. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಯಾವುದೇ ವಿಷಯದಲ್ಲಿ ರಾಜಿಯಾದರೂ ಸಾಮಾಜಿಕ ನ್ಯಾಯದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಆ ಕಾರಣಕ್ಕಾಗಿಯೇ ಕರ್ನಾಟಕದ ಅಹಿಂದ ವರ್ಗ ಮತ್ತು ಪ್ರಜ್ಞಾವಂತ ಸಮುದಾಯ, ಸಿದ್ದರಾಮಯ್ಯ ಅವರು ಕಾಂತರಾಜು-ಜಯಪ್ರಕಾಶ್ ಹೆಗ್ಡೆಯವರು ಸಿದ್ಧಪಡಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅನುಷ್ಠಾನಗೊಳಿಸುತ್ತಾರೆ ಎಂದು ಬಲವಾಗಿ ನಂಬಿತ್ತು.

2014ರಲ್ಲಿ (27 ಜೂನ್‌2014)ಹಿರಿಯ ನ್ಯಾಯವಾದಿ ಎಚ್. ಕಾಂತರಾಜು ಅವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಇದೇ ಸಿದ್ದರಾಮಯ್ಯ ಅವರು. ಡಾ. ಸಿ.ಎಸ್. ದ್ವಾರಕಾನಾಥ್ ಅವರು ಆಯೋಗದ ಅಧ್ಯಕ್ಷರಾಗಿದ್ದಾಗಲೇ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ತಯಾರಿ ನಡೆದಿದ್ದವು. ಕೇಂದ್ರ ಸರಕಾರದಿಂದ ನೆರವು ಬಂದಿತ್ತು. ಕಾಂತರಾಜು ಅವರು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಾಗಲೇ ಅವರು ಮಾಡಬೇಕಾದ ಕೆಲಸ ನಿಗದಿಯಾಗಿತ್ತು. ಆಗ ಎಚ್. ಆಂಜನೇಯ ಸಮಾಜ ಕಲ್ಯಾಣ ಮಂತ್ರಿಯಾಗಿದ್ದರು. ಮೊದಲ ಆದ್ಯತೆಯ ಮೇಲೆ ಸಮೀಕ್ಷೆ ಕೈಗೊಂಡು ಅನುಷ್ಠಾನಗೊಳಿಸಿದ್ದರೆ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಹೊಸ ವ್ಯಾಖ್ಯಾನ ನೀಡಿದ ಪ್ರಥಮರ ಸಾಲಿನಲ್ಲಿ ಸೇರುತ್ತಿದ್ದರು. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಜಾತಿ ಗಣತಿ ಎಂದು ವ್ಯಾಖ್ಯಾನಿಸಿದ ಪಟ್ಟಭದ್ರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಯೋಗವು ನ್ಯಾಯಾಲಯಕ್ಕೆ ಇದು ಜಾತಿ ಗಣತಿ ಅಲ್ಲ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಲಿಖಿತ ಸ್ಪಷ್ಟೀಕರಣ ನೀಡಿತು.

ಎಪ್ರಿಲ್ ಹನ್ನೊಂದು 2015ರಿಂದ ಸಮೀಕ್ಷೆ ಆರಂಭವಾಯಿತು. 1.6 ಲಕ್ಷ ಗಣತಿದಾರರು ಒಟ್ಟು 6.35 ಕೋಟಿ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದರು ಎಂದೂ ಆಯೋಗ ಹೇಳಿಕೊಂಡಿತು. ಅದು ಒಟ್ಟು 1.35 ಕುಟುಂಬಗಳಿಗೆ ತಲುಪಿ ದತ್ತಾಂಶ ಸಂಗ್ರಹಿಸಿತ್ತು. ನಲವತ್ತು ದಿನಗಳ ಕಾಲ ನಡೆದ ಸಮೀಕ್ಷೆ ಕಾರ್ಯಕ್ಕೆ ಒಟ್ಟು ರೂ. 165.5 ಕೋಟಿ ಹಣವನ್ನು ಆಯೋಗ ಖರ್ಚು ಮಾಡಿತ್ತು. ಇದರಲ್ಲಿ ಕೇಂದ್ರ ಸರಕಾರ ನೀಡಿದ ಏಳು ಕೋಟಿ ಹಣ ಸೇರಿದೆ. ಕಾಂತರಾಜು ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸಲಾಯಿತು. ಅಷ್ಟೊತ್ತಿಗೆ ಸಮೀಕ್ಷೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿತ್ತು. ಸಮುದಾಯವಾರು ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿಯೇ ಸೋರಿಕೆ ಮಾಡಿದ್ದರು. ಆಯೋಗ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಪ್ರಕ್ರಿಯೆಯನ್ನು ಬೇಗ ಮುಗಿಸಿದ್ದರೆ ಗೊಂದಲಗಳು ಮತ್ತು ಟೀಕೆಗಳನ್ನು ನಿಲ್ಲಿಸಬಹುದಿತ್ತು. ಜನಸಂಖ್ಯೆ ಮಾಹಿತಿ ಲಿಂಗಾಯತರು, ಒಕ್ಕಲಿಗರು ಮಾತ್ರವಲ್ಲ ತಮ್ಮ ಸಮುದಾಯದ ಸಂಖ್ಯಾಬಲ ಹೆಚ್ಚಿದೆ ಎಂದು ಭ್ರಮೆಯಲ್ಲಿ ಇರುವ ಎಲ್ಲ ಸಮುದಾಯಗಳನ್ನು ಕೆರಳಿಸಿತು. ಕಡಿಮೆ ಜನಸಂಖ್ಯೆಯ ಸತ್ಯ ಖಾಯಂ ಆಗಿ ಸ್ಥಾಪಿತವಾದರೆ ರಾಜಕೀಯ ಪ್ರಾತಿನಿಧ್ಯ ಕುಸಿಯಬಹುದು ಎಂಬ ಭೀತಿ ಪಟ್ಟಭದ್ರ ಸಮುದಾಯಗಳ ನಾಯಕರಲ್ಲಿ ಮೂಡಿತು. ಅದಾಗಲೇ ವೀರಶೈವ ಲಿಂಗಾಯತ ಬೇರೆ ಬೇರೆ ಎಂಬ ವಾದಗಳು, ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಮುಂಚೂಣಿಗೆ ಬಂದಿದ್ದರಿಂದ ಕಾಂತರಾಜು ಸಮೀಕ್ಷೆಯ ವರದಿ ಹಿನ್ನೆಲೆಗೆ ಸರಿದಿತ್ತು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಿತು. ಯಾರಿಗೂ ಸ್ಪಷ್ಟ ಬಹುಮತ ಸಿಗದೇ ಹೋದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಆ ಮೈತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲವಾದ್ದರಿಂದ ಒಂದೇ ವರ್ಷದಲ್ಲಿ ಮೈತ್ರಿ ಸರಕಾರ ಪತನವಾಯಿತು. ನಂತರ ಬಿಜೆಪಿಯ ‘ಆಪರೇಷನ್’ ಸರಕಾರ ಬಂತು. ಯಡಿಯೂರಪ್ಪ, ಬೊಮ್ಮಾಯಿ ಯಾರಿಗೂ ಕಾಂತರಾಜು ಸಿದ್ಧಪಡಿಸಿದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ನೆನಪಿಗೆ ಬರಲೇ ಇಲ್ಲ. ಬಿಜೆಪಿ ಸರಕಾರ ಕೆ. ಜಯಪ್ರಕಾಶ್ ಹೆಗ್ಡೆಯವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. 2023ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತು. ಸಿದ್ದರಾಮಯ್ಯ ಅವರೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಜಯಪ್ರಕಾಶ್ ಹೆಗ್ಡೆಯವರಿಗೆ ಕಾಂಗ್ರೆಸ್ ಸರಕಾರ ಬೆಂಬಲ ಮುಂದುವರಿಸಿದ್ದರಿಂದ ಕಾಂತರಾಜು ಸಮೀಕ್ಷೆಯ ವರದಿಯ ಪರಿಷ್ಕೃತ ರೂಪ ಸಿದ್ಧಪಡಿಸಿ ಸರಕಾರದ ಸೂಚನೆಗೆ ಕಾಯುತ್ತಾ ಕೂತಿದ್ದರು. ಯಾವುದೇ ವರದಿಯ ಪರಿಷ್ಕೃತ ರೂಪ ಹಳೆಯದು ಆಗುವುದಿಲ್ಲ. ಅದು ಬದಲಾದ ಕಾಲದ ಮಾಹಿತಿಯನ್ನು ಅಗತ್ಯವಾಗಿ ಒಳಗೊಂಡಿರುತ್ತದೆ. ಆದರೆ ತಮ್ಮ ಜನಸಂಖ್ಯೆಯೇ ಹೆಚ್ಚು ಎಂದು ವಾದಿಸುವವರಿಗೆ ಸತ್ಯ ಇಷ್ಟವಾಗುವುದಿಲ್ಲ. ಕಾಂತರಾಜು-ಜಯಪ್ರಕಾಶ್ ಹೆಗ್ಡೆ ವರದಿಗೆ ಬಿಜೆಪಿಗಿಂತಲೂ ಕಾಂಗ್ರೆಸ್ ನಾಯಕರೇ ಹೆಚ್ಚು ವಿರೋಧ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಆಪ್ತ ವಲಯದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಬಹುಪಾಲು ನಾಯಕರು ವರದಿ ಅವೈಜ್ಞಾನಿಕವಾಗಿದೆ ಎಂಬ ಭಾವನೆ ಇಟ್ಟುಕೊಂಡಿದ್ದರು. ವಿಶೇಷವಾಗಿ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರಿಗೆ ಸಮುದಾಯದ ಹಿತಕ್ಕಿಂತಲೂ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂದು ಆ ವರದಿಯನ್ನು ವಿರೋಧಿಸಿದರು. ಕೊನೆಗೆ ಆ ಪ್ರಕರಣ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ಹೋಗಿ ಮರು ಸಮೀಕ್ಷೆ ಮಾಡಬೇಕು ಎಂದು ಫರ್ಮಾನು ಹೊರಡಿಸಲಾಯಿತು. ಹಾಗಾದರೆ ವ್ಯಯ ಮಾಡಿದ ಕೋಟಿ ಕೋಟಿ ಹಣವನ್ನು ಯಾರು ಭರಿಸುತ್ತಾರೆ? ಹೆಚ್ಚು ಸಮಯ ತೆಗೆದುಕೊಂಡು ಸಿದ್ಧಪಡಿಸಿದ ವರದಿಯನ್ನು ಅವೈಜ್ಞಾನಿಕ ಎಂದು ವಿರೋಧಿಸಿದ ಪಟ್ಟಭದ್ರರು ತಮಗೆ ಅನುಕೂಲಕರವಲ್ಲದ ಯಾವ ಸಮೀಕ್ಷೆಯನ್ನೂ ಒಪ್ಪಿಕೊಳ್ಳಲಾರರು ಎನಿಸುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಾಗಿ ಕರ್ನಾಟಕದ ಏಳು ಕೋಟಿ ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಆ ಕೆಲಸಕ್ಕಾಗಿ ಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 1.65 ಲಕ್ಷ ಗಣತಿದಾರರನ್ನು ಬಳಸಿಕೊಳ್ಳಲು ಯೋಜಿಸಿದ್ದಾರೆ. ಸೆಪ್ಟಂಬರ್ 22ರಂದು ಆರಂಭವಾಗಿ ಅಕ್ಟೋಬರ್ ಏಳರವರೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಕ್ತಾಯಗೊಳ್ಳಬೇಕೆಂದು ಸೂಚಿಸಿದ್ದಾರೆ. ತೆಲಂಗಾಣ ರಾಜ್ಯದ ಮಾದರಿಯಲ್ಲಿ ಸಮೀಕ್ಷೆ ನಡೆಸಬೇಕು ಮತ್ತು ಮೂರು ತಿಂಗಳಲ್ಲಿ ಇಡೀ ಪ್ರಕ್ರಿಯೆ ಮುಗಿಯಬೇಕು ಎಂದು ಆಯೋಗಕ್ಕೆ ಸೂಚಿಸಿದ್ದಾರೆ. ಒಳಮೀಸಲಾತಿ ಸಮೀಕ್ಷೆ 25 ದಿನ ಕಾಲಾವಕಾಶ ಕೊಟ್ಟಾಗಲೂ ಇನ್ನೂ ನಗರ ಪ್ರದೇಶದಲ್ಲಿ ಸಂಪೂರ್ಣ ಪೂರೈಸಲು ಸಾಧ್ಯವಾಗಿಲ್ಲ. ಮುಂದಿನ ಆಯವ್ಯಯ ಮಂಡನೆಗೂ ಮುಂಚೆ ಸಮೀಕ್ಷೆಯ ದತ್ತಾಂಶ ಸರಕಾರಕ್ಕೆ ಲಭ್ಯವಾಗಬೇಕೆಂದು ಅಪೇಕ್ಷೆ ವ್ಯಕ್ತ ಪಡಿಸಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ದಾವಣಗೆರೆಯಲ್ಲಿ ಗುರು ಮತ್ತು ವಿರಕ್ತರ ಬೃಹತ್ ಸಮಾವೇಶ ನಡೆಸಿ ಪಕ್ಷಾತೀತವಾಗಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಲಿಂಗಾಯತರ ಜನಸಂಖ್ಯೆ ಕಡಿಮೆ ಎಂದು ತೋರಿಸಿದರೆ ಸುಮ್ಮನಿರುವುದಿಲ್ಲ ಎಂಬ ಅರ್ಥ ಬರುವಂತೆ ಕಾಂಗ್ರೆಸ್ ನಾಯಕರು ಸೇರಿದಂತೆ ಎಲ್ಲರೂ ಒಂದೇ ರಾಗ ಹಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿಯ ಆಧಾರದಲ್ಲಿ ಸಾಮಾಜಿಕ ನ್ಯಾಯ ತತ್ವದಡಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಿದೆ. ಇದೊಂದು ಸವಾಲಿನ ಕಾರ್ಯವೂ ಹೌದು. ಸಿದ್ದರಾಮಯ್ಯ ಅವರು ದಾಖಲೆ ಅವಧಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರೂ ದೇವರಾಜ ಅರಸು ಅವರ ಹಾಗೆ ಸಂಪತ್ತಿನ ಒಡೆಯರು ಮತ್ತು ಜಾತಿ ಬಲ ಉಳ್ಳವರಿಗೆ ಶಾಕ್ ಕೊಡುವ ಕೆಲಸ ಮಾಡಲು ಸಾಧ್ಯವಾಗಿಲ್ಲ. ಜಾತಿ ಬಲ ಮತ್ತು ಅಪಾರವಾದ ಸಂಪತ್ತು ಒಂದೆಡೆ ಇದ್ದರೆ ರಾಜಕೀಯ ಅಧಿಕಾರ ಅನಾಯಾಸವಾಗಿ ದಕ್ಕಿಸಿಕೊಳ್ಳಬಹುದು ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಪ್ರತೀ ಚುನಾವಣೆಯಲ್ಲಿ ಆ ಭಾವನೆ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ. ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದರೂ ಸರಕಾರಿ ವ್ಯವಸ್ಥೆಯ ಭಾಗವಾಗದ ಅಸಂಖ್ಯಾತ ಸಮುದಾಯಗಳು ಇವೆ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಹುದ್ದೆಗಳು, ಐಎಎಸ್, ಕೆಎಎಸ್ ಮುಂತಾದ ಸರಕಾರಿ ಹುದ್ದೆಗಳು ಕೆಲವೇ ಸಮುದಾಯಗಳ ಸ್ವತ್ತು ಆಗಿ ಗಿರಕಿ ಹೊಡೆಯುತ್ತಿವೆ. ಸಮಾಜದ ಕಟ್ಟಕಡೆಯ ಮನುಷ್ಯ ಜನತಂತ್ರದ ಪರಿಧಿಯಿಂದ ಇನ್ನೂ ಹೊರಗೆ ಉಳಿದಿದ್ದಾರೆ. ಜಮೀನ್ದಾರಿ ಧಣಿಗಳು ಜಾತಿ ಕವಚ ಧರಿಸಿ ಅಧಿಕಾರ ನಡೆಸುತ್ತಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯದ ಬಡವರಿಗೆ ಪಟ್ಟಭದ್ರರ ಕಪಿಮುಷ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಉಳಿದವರ ಪಾಡೇನು? ಅಳುವವರ ಸಂಖ್ಯಾಬಲ ಕಡಿಮೆಯೇ. ಕಾಲಾಳುಗಳ ಬಲದ ಮೇಲೆ ಕುಣಿ ಯುತ್ತಿರುತ್ತಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪಟ್ಟಭದ್ರರ ಬಲ ಕುಗ್ಗಿಸುವಲ್ಲಿ ಪ್ರಬಲ ಅಸ್ತ್ರವಾಗಿ ಪ್ರಯೋಗಗೊಳ್ಳಲಿ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X