ಚಿತ್ರರಂಗದ ‘ಸವಾಲು’ ಗೆದ್ದ ಸಿನೆಮಾಗಳು

ಕನ್ನಡದಲ್ಲಿ ಪ್ರತಿಭಾವಂತ ಲೇಖಕರು, ನಟ ನಟಿಯರಿಗೆ ಕೊರತೆಯಿಲ್ಲ. ಸಿದ್ಧಸೂತ್ರಕ್ಕೆ ಕಟ್ಟು ಬಿದ್ದು ಕನ್ನಡ ಚಿತ್ರರಂಗ ತೀವ್ರ ಹಿನ್ನಡೆ ಅನುಭವಿಸಿದೆ. ಸಿದ್ಧಸೂತ್ರ ತೊರೆದು ಬದುಕಿನ ತಾಜಾ ಅನುಭವವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟರೆ ಕನ್ನಡದ ಪ್ರೇಕ್ಷಕ ಖಂಡಿತಾ ಕೈ ಹಿಡಿಯುತ್ತಾನೆ. ದುನಿಯಾ ಸೂರಿಯಿಂದ ಹಿಡಿದು ಡಾಲಿ ಧನಂಜಯ್‌ವರೆಗೆ ಕನ್ನಡ ಚಿತ್ರರಂಗದ ಸಂವೇದನಾಶೀಲ ಮನಸ್ಸುಗಳು ಸಿದ್ಧಸೂತ್ರ ತೊರೆದು ಹೊಸದನ್ನು ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆಮಿರ್‌ಖಾನ್ ‘ಲಾಲ್ ಸಿಂಗ್ ಛಡ್ಡಾ’ದಂತಹ ಸಿನೆಮಾ ಮಾಡಿ ಕೈ ಸುಟ್ಟುಕೊಂಡಿರಬಹುದು. ಆದರೆ ಪ್ರತೀ ಪ್ರಯೋಗವು ಸ್ವಂತಿಕೆಯ ಹುಡುಕಾಟದಲ್ಲಿ ಬಹು ದೊಡ್ಡ ಪಾಠವಾಗುತ್ತದೆ. ಕನ್ನಡ ಚಿತ್ರರಂಗ ಈಗಲೂ ಅತ್ಯುತ್ತಮವಾದುದನ್ನು ಕೊಡಬಲ್ಲದು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಲಾತ್ಮಕ-ಕಮರ್ಷಿಯಲ್ ಭೇದ ಅಳಿಸಿ ಅತ್ಯುತ್ತಮ ಚಲನಚಿತ್ರಗಳನ್ನು ನೀಡುವುದು ನಮ್ಮವರ ಗುರಿಯಾಗಬೇಕು.
ಕೋವಿಡ್ ಪೂರ್ವದಲ್ಲಿಯೂ ಭಾರತೀಯ ಚಲನಚಿತ್ರರಂಗ ಪ್ರೇಕ್ಷಕರ ಕೊರತೆ ಅನುಭವಿಸುತ್ತಿತ್ತು. ಕೋವಿಡ್ ನಂತರವಂತೂ ಚಿತ್ರರಂಗ ಉದ್ದಾರವಾಗಲಾರದೆಂದೇ ಹಲವರು ಭಾವಿಸಿದ್ದರು. ಒಂದು ಕಾಲದಲ್ಲಿ ಚಲನಚಿತ್ರದ ನಾಯಕ ನಟರನ್ನು ದೇವರಿಗಿಂತಲೂ ಹೆಚ್ಚು ಆರಾಧಿಸಲಾಗುತ್ತಿತ್ತು. ಆಗ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿರಲಿಲ್ಲ. ಕ್ರಿಕೆಟ್ ಮಾತ್ರವಲ್ಲ ಉಳಿದ ಕ್ರೀಡೆಗಳು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರೂ ಚಲನಚಿತ್ರ ಕಲಾವಿದರಷ್ಟು ಜನಪ್ರಿಯತೆ ಹೊಂದಿರಲಿಲ್ಲ.
ಭಾರತೀಯ ಚಲನಚಿತ್ರ ರಂಗದಲ್ಲಿ ನಾಯಕ ನಟರೊಂದಿಗೆ ಅತ್ಯುತ್ತಮ ನಿರ್ದೇಶಕರು ಜನಪ್ರಿಯತೆ ಗಳಿಸಿದ್ದರು. ಪ್ರಥ್ವಿರಾಜ್ ಕಪೂರ್, ರಾಜ್ ಕಪೂರ್ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಎಲ್ಲವೂ ಆಗಿದ್ದರು. ನಟ, ನಿರ್ಮಾಪಕ, ನಿರ್ದೇಶಕ ಎಲ್ಲವೂ ಆಗಿದ್ದರಿಂದ ಸಹಜವಾಗಿಯೇ ಕಿಂಗ್ ಮೇಕರ್ ಎನಿಸಿಕೊಂಡಿದ್ದರು. ಮೊಗಲ್-ಇ-ಆಝಮ್, ದೇವದಾಸ್, ಉಮ್ರಾವೋ ಜಾನ್ ನಂಥ ಹೆಸರಾಂತ ಹಿಂದಿ ಸಿನೆಮಾಗಳು ಏಕಕಾಲಕ್ಕೆ ಕಮರ್ಷಿಯಲ್ ಮತ್ತು ಕಲಾತ್ಮಕವಾಗಿದ್ದವು. ಪ್ರೇಕ್ಷಕರು ಅವುಗಳನ್ನು ಅತ್ಯುತ್ತಮ ಚಲನಚಿತ್ರಗಳೆಂದೇ ನೋಡುತ್ತಿದ್ದರು. ನಂತರ ನಾಯಕ ನಟ ಕೇಂದ್ರಿತ ಚಲನಚಿತ್ರಗಳ ಹಾವಳಿ, ಅಬ್ಬರ ಹೆಚ್ಚಾದಾಗ ಸತ್ಯಜಿತ್ ರೇ ಮತ್ತಿತರರು ಸದಭಿರುಚಿಯ ಚಲನಚಿತ್ರಗಳನ್ನು ನಿರ್ಮಿಸಿ ಮುಖ್ಯವಾಹಿನಿಯ ಚಿತ್ರರಂಗವನ್ನು ಸರಿದಾರಿಗೆ ತಂದಿದ್ದರು. ಗುರುದತ್ತ್ ಅವರ ಬಹುಪಾಲು ಚಲನಚಿತ್ರಗಳು ಅತ್ಯುತ್ತಮ ಕತೆಯ ಕಾರಣಕ್ಕೆ ಗಮನ ಸೆಳೆಯುತ್ತಿದ್ದವು. 60,70 ಮತ್ತು 80ರ ದಶಕದ ಹಿಂದಿ ಚಲನಚಿತ್ರಗಳು ನಾಯಕ ನಟ ಕೇಂದ್ರಿತವಾಗಿದ್ದರೂ ಅತ್ಯುತ್ತಮ ಕತೆ, ಚಿತ್ರಕತೆ, ಸಂಭಾಷಣೆ, ಹಾಡು-ಸಂಗೀತದ ಮೂಲಕ ಗಮನ ಸೆಳೆಯುತ್ತಿದ್ದವು. ದಿಲೀಪ್‌ಕುಮಾರ್, ಸಂಜೀವ್ ಕುಮಾರ್, ಅಶೋಕ್ ಕುಮಾರ್, ಕಪೂರ್ ಕುಟುಂಬದ ಎಲ್ಲ ಕುಡಿಗಳು ಅಂದಿನ ಚಿತ್ರರಂಗದ ಪೈಪೋಟಿ ಮತ್ತು ಸವಾಲುಗಳನ್ನು ಎದುರಿಸಿಯೇ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದರು. ಶಮ್ಮಿಕಪೂರ್, ಶಶಿಕಪೂರ್, ರಿಷಿಕಪೂರ್ ಇತ್ತೀಚಿನ ರಣವೀರ್‌ಕಪೂರ್‌ವರೆಗೆ ತಮ್ಮ ನಟನಾ ಸಾಮರ್ಥ್ಯದಿಂದ ಚಲನಚಿತ್ರ ರಂಗದಲ್ಲಿ ಮುಂದುವರಿದಿದ್ದಾರೆ. ಹಿಂದಿ ಚಲನಚಿತ್ರ ರಂಗದ ನಟಿಯರು ಕೂಡಾ ಅಭಿನಯ ಸಾಮರ್ಥ್ಯದಿಂದಲೇ ಹೆಸರು ಮಾಡಿದ್ದರು. ಮಧುಬಾಲ, ನರ್ಗಿಸ್, ವೈಜಯಂತಿ ಮಾಲಾ, ವಹಿದಾ ರಹಮಾನ್ ಮಾತ್ರವಲ್ಲ ಹೆಲೆನ್, ಝೀನತ್ ಅಮಾನ್‌ರಂಥ ನಟಿಯರು ಶ್ರಮದಿಂದ ಉಳಿದುಕೊಂಡಿದ್ದರು. ಎಪ್ಪತ್ತರ ದಶಕದಿಂದ ಈಚೆಗೆ ಹಿಂದಿ ಚಲನಚಿತ್ರರಂಗವನ್ನು ದಕ್ಷಿಣ ಭಾರತದ ಮತ್ತು ಬೆಂಗಾಲಿ ನಟಿಯರೇ ಜನಪ್ರಿಯತೆಯ ಉತ್ತುಂಗಕ್ಕೆ ತಲುಪಿದ್ದರು. ವೈಜಯಂತಿ ಮಾಲಾ ಅವರಿಂದ ಶುರುವಾದ ಈ ಪಾರುಪತ್ಯ ಹೇಮಾಮಾಲಿನಿ, ರೇಖಾ, ಜಯಪ್ರದ, ಶ್ರೀದೇವಿ ಮುಂತಾದ ನಾಯಕ ನಟಿಯರ ಜನಪ್ರಿಯತೆಯೊಂದಿಗೆ ಮುಂದುವರಿದಿತ್ತು. ಈಗ ವಿದ್ಯಾ ಬಾಲನ್, ರಶ್ಮಿಕಾ ಮಂದಣ್ಣ ಮುಂತಾದ ದಕ್ಷಿಣ ಭಾರತದ ನಟಿಯರು ಆ ಪರಂಪರೆಯನ್ನು ಮುಂದುವರಿಸಿದ್ದಾರೆ. ಕಮಲ್ ಹಾಸನ್, ರಜನಿಕಾಂತ್ ಮುಂತಾದ ನಟರು ಅಮಿತಾ ಬಚ್ಚನ್, ರಾಜೇಶ್ ಖನ್ನಾ, ಸುನೀಲ್ ದತ್ತ್, ಧರ್ಮೇಂದ್ರ ಅವರಷ್ಟೇ ಜನಪ್ರಿಯರಾಗಿದ್ದರು. ಹಿಂದಿ ಚಿತ್ರರಂಗದ ಅತ್ಯಂತ ಮಹತ್ವದ ಸಿನೆಮಾ ಶೋಲೆ ನಿರ್ಮಾಣಗೊಂಡಿದ್ದೇ ಬೆಂಗಳೂರು ಸಮೀಪದ ರಾಮನಗರ ಪರಿಸರದಲ್ಲಿ. ನಾಟಕ ಮತ್ತು ಚಲನಚಿತ್ರಗಳು ಮನರಂಜನೆಯ ಪ್ರಭಾವಿ ಮಾಧ್ಯಮಗಳು ಎನಿಸಿದ್ದಾಗ ಅವು ತಮ್ಮ ಸ್ಥಾನದಲ್ಲಿ ಹೆಚ್ಚು ಸುಭದ್ರವಾಗಿದ್ದವು. ದೊಡ್ಡ ಪರದೆ ಭಾರತೀಯ ಚಲನಚಿತ್ರರಂಗದಲ್ಲಿ ಎಲ್ಲ ಬಗೆಯ ಪ್ರಯೋಗಗಳನ್ನು ನಡೆಸಿಯೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತ್ತು. ಭಾರತೀಯ ಚಲನಚಿತ್ರರಂಗವೆಂದರೆ ಕೇವಲ ಹಿಂದಿ ಚಿತ್ರರಂಗ ಎಂಬ ಭಾವನೆ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಬೆಂಗಾಲಿ ಮತ್ತು ದಕ್ಷಿಣ ಭಾರತದ ಚಲನಚಿತ್ರರಂಗದ ನಟ ನಟಿಯರು ಮತ್ತು ಅವರ ಚಲನಚಿತ್ರಗಳು ಹಿಂದಿ ಚಿತ್ರರಂಗವನ್ನು ಪ್ರಭಾವಿಸುವಷ್ಟು ಅತ್ಯುತ್ತಮ ಗುಣಮಟ್ಟ ಹೊಂದಿದ್ದವು.
ದಕ್ಷಿಣ ಭಾರತದ ನಟರಾದ ಡಾ. ರಾಜಕುಮಾರ್, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ನಟಿಯರಾದ ಸಾವಿತ್ರಿ, ಜಯಲಲಿತಾ, ಬಿ. ಸರೋಜಾದೇವಿ, ಭಾರತಿ, ಆರತಿ, ಲಕ್ಷ್ಮೀ, ಜಯಂತಿ, ಮಂಜುಳಾ ಮುಂತಾದವರು ಹಿಂದಿ ಚಿತ್ರರಂಗದ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ನಟಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ತೆಲುಗು ಚಿತ್ರರಂಗದ ಕೆ. ವಿಶ್ವನಾಥ್ ನಿರ್ದೇಶಿಸಿದ ಶಂಕರಾಭರಣಂ ಚಲನಚಿತ್ರ ಭಾರತೀಯ ಚಲನಚಿತ್ರ ರಂಗವನ್ನು ಗಾಢವಾಗಿ ಪ್ರಭಾವಿಸಿತ್ತು. ತಮಿಳಿನ ಕೆ. ಬಾಲಚಂದರ್, ಮಣಿರತ್ನ, ತೆಲುಗಿನ ರಾಮ್ ಗೋಪಾಲ್ ವರ್ಮಾ ಮುಂತಾದವರು ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸುವಂತಹ ಅತ್ಯುತ್ತಮ ಚಲನಚಿತ್ರಗಳನ್ನು ನೀಡಿದವರು. ದಕ್ಷಿಣ ಭಾರತದ ಗಾಯಕ-ಗಾಯಕಿ, ಸಂಗೀತ ನಿರ್ದೇಶಕರಾದ ಎಸ್. ಜಾನಕಿ, ಪಿ. ಸುಶೀಲಾ, ವಾಣಿ ಜಯರಾಂ, ಜೇಸುದಾಸ್, ಎಸ್.ಪಿ. ಬಾಲಸುಬ್ರಮಣ್ಯಂ, ಇಳಯರಾಜ, ಎ.ಆರ್. ರೆಹಮಾನ್ ಮುಂತಾದವರು ಭಾರತದುದ್ದಕ್ಕೂ ಜನಪ್ರಿಯತೆ ಗಳಿಸಿದ್ದರು. ಈಗಲೂ ಅದೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.
ಟಿ.ವಿ. ಆವಿಷ್ಕಾರ ಮತ್ತು ಅದರ ಉಪ ಉತ್ಪಾದನೆಗಳಾದ ಧಾರಾವಾಹಿ, ರಿಯಾಲಿಟಿ ಶೋಗಳು ಬಂದ ಮೇಲೆ ಭಾರತೀಯ ಚಿತ್ರರಂಗ ಪೈಪೋಟಿ ಎದುರಿಸಬೇಕಾಯಿತು. ಕಿರು ತೆರೆಯ ತಾಂತ್ರಿಕ ಶಕ್ತಿ ಹೆಚ್ಚು ಪ್ರಬಲವಾಗುತ್ತಾ ಹೋದಂತೆ ಕನ್ನಡ ಚಿತ್ರರಂಗವೂ ಸೇರಿ ಭಾರತೀಯ ಚಿತ್ರರಂಗ ಅನಿವಾರ್ಯವಾಗಿ ಹೆಚ್ಚು ಸವಾಲುಗಳನ್ನು ಎದುರಿಸಬೇಕಾಯಿತು.
ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಮರ್ಷಿಯಲ್-ಕಲಾತ್ಮಕ ಎಂಬ ಭೇದ ಇರಲಿಲ್ಲ. ಹಿಂದಿ ಚಲನಚಿತ್ರ ರಂಗದಲ್ಲಿ ವಿಶೇಷವಾಗಿ ನಾಯಕ ನಟ ಕೇಂದ್ರಿತ ಸಿನೆಮಾಗಳ ಅಬ್ಬರ ಹೆಚ್ಚಾದಾಗ ಕೆಲವರು ಸದಭಿರುಚಿಯ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ನಿರ್ಮಿಸಿದ್ದರು. ಸತ್ಯಜಿತ್ ರೇ, ಶ್ಯಾಮ್ ಬೆನಗಲ್, ಗೋವಿಂದ ನಿಹಲಾನಿ, ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಚಂದ್ರಶೇಖರ ಕಂಬಾರ ಮುಂತಾದವರು ಸದಭಿರುಚಿ ಚಲನಚಿತ್ರಗಳನ್ನು ನಿರ್ಮಿಸಿ ಒಟ್ಟು ಭಾರತೀಯ ಚಿತ್ರರಂಗಕ್ಕೆ ಸಿನೆಮಾ ವ್ಯಾಕರಣ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದರು. ಆ ಮೂಲಕ ಸ್ಮಿತಾ ಪಾಟೀಲ್, ಶಬಾನಾ ಆಝ್ಮಿ, ರೋಹಿಣಿ ಹಟ್ಟಂಗಡಿ, ನಾಸಿರುದ್ದೀನ್ ಶಾ, ಓಂಪುರಿ, ಶ್ರೀರಾಮ್ ಲಾಗೂ, ಅಮೋಲ್ ಪಾಲೇಕರ್, ಅನಂತ್‌ನಾಗ್ ಮುಂತಾದ ನಟ ನಟಿಯರು ಬೆಳಕಿಗೆ ಬರಲು ಸಾಧ್ಯವಾಯಿತು.
ಆದರೆ ಕನ್ನಡದಲ್ಲಿ ಮಾತ್ರ ಈ ಕಮರ್ಷಿಯಲ್ ಮತ್ತು ಕಲಾತ್ಮಕದ ಅಂತರ ಹೆಚ್ಚುತ್ತಾ ಹೋಯಿತು.
ಮನೆಯಲ್ಲಿಯೇ ಮನರಂಜನೆ ಸಿಗುವ ಅವಕಾಶಗಳು ಹೆಚ್ಚಾದಂತೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುವ ಸವಾಲು ಎದುರಾಯಿತು. ನಾಯಕನಟರ ಅದೆಷ್ಟೋ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋಲು ಅನುಭವಿಸಿದವು. ಕಲಾತ್ಮಕ ಅಂಶಗಳನ್ನು ಒಳಗೊಂಡು ಕಮರ್ಶಿಯಲ್ ಆಗಿ ಯಶಸ್ವಿಯಾದ ಹಲವಾರು ಸಿನೆಮಾಗಳು ಹಿಂದಿ ಮತ್ತು ಭಾರತೀಯ ಇತರ ಭಾಷೆಗಳಲ್ಲಿ ನೋಡಲು ಸಿಗುತ್ತವೆ.
ಮೂಲತಃ ಮಸಾಲೆ ಚಲನಚಿತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಆಮಿರ್‌ಖಾನ್ 2001ರಲ್ಲಿ ‘ಲಗಾನ್’ ಸಿನೆಮಾ ಮೂಲಕ ಹೊಸ ಸಾಧ್ಯತೆಯನ್ನು ನಿರೂಪಿಸಿದರು. ಮಸಾಲಾ ಚಲನಚಿತ್ರಗಳ ಸೂತ್ರಗಳಿಗೆ ತದ್ವಿರುದ್ಧವಾಗಿ ಲಗಾನ್ ಸಿನೆಮಾವನ್ನು ನಿರ್ಮಿಸಲಾಗಿತ್ತು. ಫೈಟ್ ಸೇರಿದಂತೆ ಯಾವ ಮಸಾಲಾ ಅಂಶಗಳೂ ಆ ಸಿನೆಮಾದಲ್ಲಿ ಇರಲಿಲ್ಲ. ಬ್ರಿಟಿಷ್ ಕಾಲದ ಒಂದು ಘಟನೆಯೇ ಲಗಾನ್ ಚಿತ್ರದ ಕತೆ. ಲಗಾನ್ ಅಂದರೆ ಟ್ಯಾಕ್ಸ್ ರಿಯಾಯಿತಿ ಪಡೆಯಲು ಬ್ರಿಟಿಷ್ ಕ್ರಿಕೆಟ್ ತಂಡದೊಂದಿಗೆ ಅನನುಭವಿ ಸ್ಥಳೀಯ ತಂಡ ಕ್ರಿಕೆಟ್ ಆಟ ಅಡಿ ಗೆಲುವು ಸಾಧಿಸುವುದು ಕತೆಯ ಮುಖ್ಯ ತಿರುಳು. ನಾಯಕ, ನಾಯಕಿ, ಒಬ್ಬ ವಿಲನ್ ಮತ್ತು ಫೈಟ್ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬ ಸಿದ್ಧ ಸೂತ್ರ ಧಿಕ್ಕರಿಸಿ, ಕತೆಯ ಕಾರಣಕ್ಕೆ ಒಂದು ಸಿನೆಮಾವನ್ನು ಯಶಸ್ವಿಗೊಳಿಸಬಹುದು ಎಂಬುದನ್ನು ಆಮಿರ್‌ಖಾನ್ ರುಜುವಾತುಪಡಿಸಿದ್ದರು. ಇಪ್ಪತ್ತೈದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಲಗಾನ್ ಚಲನಚಿತ್ರ ಅಂದಾಜು ರೂ. 660 ಕೋಟಿಯನ್ನು ಗಲ್ಲಾ ಪೆಟ್ಟಿಗೆಯಲ್ಲಿ ಸಂಪಾದನೆ ಮಾಡಿತ್ತು. ಲಗಾನ್ ಯಶಸ್ಸಿನಿಂದ ಪ್ರೇರಿತರಾದ ಆಮಿರ್‌ಖಾನ್ ಮತ್ತು ಇತರರು ಸಿದ್ಧ ಸೂತ್ರಗಳ ಸಿನೆಮಾಗಳಿಂದ ದೂರ ಸರಿದು ಅತ್ಯುತ್ತಮ ಕತೆಯನ್ನು ಆಯ್ಕೆ ಮಾಡಿಕೊಂಡು ಚಲನಚಿತ್ರಗಳನ್ನು ರೂಪಿಸತೊಡಗಿದರು. 2007ರಲ್ಲಿ ನಿರ್ಮಾಣವಾದ ಆಮಿರ್‌ಖಾನ್ ಅಭಿನಯದ ‘ತಾರೆ ಝಮೀನ್ ಪರ್’ ಚಲನಚಿತ್ರ ಅತ್ಯಂತ ಸೂಕ್ಷ್ಮ ಸಂವೇದಿ ಕತೆ ಆಧರಿಸಿದ್ದು. ಆ ಬಗೆಯ ಕತೆ ಆಧರಿಸಿದ ಅನೇಕ ಸಿನೆಮಾಗಳು ತೆರೆ ಕಂಡು ಪ್ರೇಕ್ಷಕರ ಆಕಳಿಕೆಯ ಉತ್ತರದಿಂದ ತತ್ತರಿಸಿ ಹೋಗಿದ್ದವು. ಆದರೆ ತಾರೆ ಝಮೀನ್ ಪರ್ ಸಿನೆಮಾ ಎಲ್ಲ ಸಿದ್ಧ ಸೂತ್ರಗಳಿಗೆ ಸವಾಲಾಗಿ ಯಶಸ್ಸು ಪಡೆಯಿತು. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡುವ ಅನಿವಾರ್ಯತೆ ಸೃಷ್ಟಿಸಿದ ಆ ಸಿನೆಮಾ ಭಾರತೀಯ ಚಲನಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಿಸಿತು. ಕೇವಲ ಹನ್ನೆರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ತಾರೆ ಝಮೀನ್ ಪರ್ ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ ಅಂದಾಜು ರೂ. 98.48 ಕೋಟಿಯನ್ನು ಗಳಿಸಿತು. ಪ್ರೇಕ್ಷಕರ ಅಭಿರುಚಿ ಕೆಟ್ಟಿದೆ ಎನ್ನುವ ನಿರ್ದೇಶಕರಿಗೆ ಆ ಸಿನೆಮಾ ಉತ್ತರವಾಗಿತ್ತು.
2009ರಲ್ಲಿ ತೆರೆ ಕಂಡ ಆಮಿರ್‌ಖಾನ್ ಅಭಿನಯದ ‘3 ಈಡಿಯಟ್’ ಚಲನಚಿತ್ರ ಕೂಡಾ ಮಸಾಲಾ ಅಂಶಗಳಿಂದ ಹೊರತಾದದ್ದು. ಭಾರತೀಯ ಶಿಕ್ಷಣ ವ್ಯವಸ್ಥೆಯ ಟೊಳ್ಳುತನ ಬಯಲು ಮಾಡುವ ಆ ಚಿತ್ರ ರೂ. 55 ಕೋಟಿಯಲ್ಲಿ ನಿರ್ಮಾಣಗೊಂಡಿತ್ತು.ಅಷ್ಟೇನು ಜನಪ್ರಿಯವಲ್ಲದ ಕತೆ ಆಧರಿಸಿದ 3 ಈಡಿಯಟ್ ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ 415 ಕೋಟಿ ಹಣವನ್ನು ದುಡಿಯಿತು. ಒಂದಕ್ಕಿಂತ ಒಂದು ಭಿನ್ನ ಕಥಾ ವಸ್ತು ಹೊಂದಿದ ಆಮಿರ್ ಖಾನ್ ಸಿನೆಮಾಗಳು ಮಸಾಲಾ ಸೂತ್ರಕ್ಕೆ ಸವಾಲಾಗಿ ಯಶಸ್ಸು ಪಡೆದಿದ್ದವು. 2014ರಲ್ಲಿ ತೆರೆ ಕಂಡ ‘ಪಿ.ಕೆ.’ ಸಿನೆಮಾ ಧರ್ಮ ಗುರುಗಳ ಡಾಂಭಿಕತೆ ಅನಾವರಣಗೊಳಿಸುವ ಅತ್ಯಂತ ವಿವಾದಾತ್ಮಕ ಅಂಶಗಳನ್ನು ಒಳಗೊಂಡ ಕತೆ ಆಧರಿಸಿದ್ದು. ಆಮಿರ್‌ಖಾನ್ ಅಭಿನಯದ ಆ ಸಿನೆಮಾ ಸಾಮಾಜಿಕ ಧಾರ್ಮಿಕ ಜಾಗೃತಿಯ ಆಶಯ ಹೊಂದಿರುವಂತಹದ್ದು. ರೂ. 122 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಪಿ.ಕೆ. ಸಿನೆಮಾ ಅಂದಾಜು 769.89 ಕೋಟಿಯಷ್ಟು ಹಣವನ್ನು ಗಳಿಸಿ ಇತಿಹಾಸ ನಿರ್ಮಿಸಿತು. ಕೇವಲ ಕತೆ ಮತ್ತು ಅಭಿನಯದ ಕಾರಣಕ್ಕೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತಂದ ಆ ಸಿನೆಮಾ ಧಾರ್ಮಿಕ ಗುರುಗಳ ನಯವಂಚನೆಗೆ ಕನ್ನಡಿ ಹಿಡಿದಿತ್ತು.
2016ರಲ್ಲಿ ತೆರೆ ಕಂಡ ಎರಡು ಹಿಂದಿ ಸಿನೆಮಾಗಳು ಮಹಿಳಾ ಸಬಲೀಕರಣದ ಕತೆ ಹೊಂದಿದ್ದವು. ಮಸಾಲಾ ಸಿನೆಮಾ ಮಾಡುವವರಿಗೆ ಈ ಕತೆಗಳು ಚಲನಚಿತ್ರಕ್ಕೆ ತಕ್ಕುದಾದ ವಸ್ತುವೇ ಅಲ್ಲ. ಹಾಗೆ ನೋಡಿದರೆ ನೋಟ್ ಬಂದಿ ಕಾರಣಕ್ಕೆ ಪ್ರೇಕ್ಷಕರು ತಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಪರದಾಡುತ್ತಿದ್ದರು. ರೂ. 30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ‘ಪಿಂಕ್’ ಸಿನೆಮಾ ರೇಪ್ ಕಥಾ ವಸ್ತು ಮತ್ತು ಅದರ ಪರಿಣಾಮಗಳನ್ನು ಅತ್ಯಂತ ಸೆನ್ಸಿಬಲ್ ಆಗಿ ಅನಾವರಣಗೊಳಿಸುವ ಚಿತ್ರ. ಮಸಾಲಾ ಅಂಶಗಳೇ ಅಲ್ಲಿ ಇರಲಿಲ್ಲ. ಆದರೆ ಆ ಸಿನೆಮಾ 157.32 ಕೋಟಿ ಹಣ ಮಾಡಿ ಸಿದ್ಧಸೂತ್ರದ ಮೇಲೆ ನಂಬಿಕೆ ಇಟ್ಟ ನಟ ಮತ್ತು ನಿರ್ದೇಶಕರನ್ನು ಬೆರಗುಗೊಳಿಸಿತ್ತು. ಅಮಿತಾಬ್ ಬಚ್ಚನ್ ನಟಿಸಿದ ಆ ಸಿನೆಮಾ ಕತೆ ಮತ್ತು ಅಭಿನಯದ ಕಾರಣಕ್ಕೆ ಯಶಸ್ಸಿನ ದಡ ತಲುಪಿತ್ತು. ಸ್ಟಾರ್‌ಗಿರಿ ಮೀರಿ ಆ ಸಿನೆಮಾ ಪ್ರೇಕ್ಷಕರ ಮನ ಗೆದ್ದಿತ್ತು. ಅದೇ ವರ್ಷ ತೆರೆ ಕಂಡ ಇನ್ನೊಂದು ಸಿನೆಮಾ ದಂಗಲ್. ಕೇವಲ ರೂ. ಎಪ್ಪತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಆ ಸಿನೆಮಾ ಒಟ್ಟು 2,200 ಕೋಟಿ ಹಣ ಮಾಡಿ ದಾಖಲೆ ನಿರ್ಮಿಸಿತು. ನೋಟ್ ಬಂದಿಯ ತಾಪತ್ರಯಗಳನ್ನು ಬದಿಗಿಟ್ಟು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ದಂಗಲ್ ಸಿನೆಮಾ ನೋಡಿದ್ದರು. ಆಮಿರ್ ಖಾನ್ ಅಭಿನಯದ ದಂಗಲ್ ಕೂಡಾ ಸಿದ್ದ ಸೂತ್ರ ಮತ್ತು ಮಸಾಲಾ ಅಂಶಗಳಿಂದ ಹೊರತಾದದ್ದು.
ಇದು ಕೇವಲ ಆಮಿರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ಸಿನೆಮಾಗಳಿಗೆ ಸೀಮಿತವಾದ ವಿದ್ಯಮಾನವಲ್ಲ. ಇರ್ಫಾನ್ ಖಾನ್, ವಿದ್ಯಾ ಬಾಲನ್, ನವಾಝುದ್ದೀನ್ ಸಿದ್ದೀಕಿ, ಮನೋಜ್ ವಾಜಪೇಯಿ, ಪಂಕಜ್ ತ್ರಿಪಾಠಿ ಮುಂತಾದವರು ಅಭಿನಯಿಸಿದ ಚಲನಚಿತ್ರಗಳಿಗೂ ಪ್ರೇಕ್ಷಕರು ಪ್ರತಿಸ್ಪಂದನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಂತರ ಚಿತ್ರರಂಗಕ್ಕೆ ಉಳಿಗಾಲವಿಲ್ಲ ಎಂದೇ ಭಾವಿಸಲಾಗಿತ್ತು. ಆಶ್ಚರ್ಯದ ಸಂಗತಿಯೆಂದರೆ ಕೋವಿಡ್ ನಂತರ ನಿರ್ಮಾಣವಾದ ಹಲವಾರು ಸಿನೆಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಅದು ಅತ್ಯುತ್ತಮ ಕತೆ ಮತ್ತು ಸಾಮಾಜಿಕ ಕಾಳಜಿಯ ಕಾರಣಕ್ಕೆ. ತಮಿಳುನಾಡಿನ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಅತ್ಯಂತ ಜನಪ್ರಿಯ ಕಲಾವಿದರು. ಅನೇಕ ಸಿದ್ಧಸೂತ್ರಗಳ ಸಿನೆಮಾಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದವರು. 2021ರಲ್ಲಿ ಆ ದಂಪತಿ ‘ಜೈ ಭೀಮ್’ ಹೆಸರಿನ ಸಾಮಾಜಿಕ ಕಾಳಜಿಯುಳ್ಳ ಸಿನೆಮಾ ನಿರ್ಮಾಣ ಮಾಡಿದರು. ಕೆಳ ಜಾತಿ ಎಂಬ ಕಾರಣಕ್ಕೆ ಶೋಷಣೆಗೆ ಒಳಗಾಗುವ ಮತ್ತು ನ್ಯಾಯದಿಂದ ವಂಚಿತವಾಗುವ ಸಮುದಾಯದ ಕತೆ ವ್ಯಥೆ ನಿರೂಪಿಸುವ ಈ ಸಿನೆಮಾದಲ್ಲಿ ಮಸಾಲಾ ಅಂಶಗಳಿಗೆ ಜಾಗವೇ ಕಲ್ಪಿಸಿಲ್ಲ. ಕೇವಲ ರೂ. 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಜೈ ಭೀಮ್’ ಚಲನಚಿತ್ರ ಅಂದಾಜು ರೂ. 415 ಕೋಟಿ ಸಂಪಾದಿಸಿ ಸಿದ್ಧಸೂತ್ರಗಳ ಸಿನೆಮಾಗಳಿಗೆ ತಕ್ಕ ಉತ್ತರ ನೀಡಿತ್ತು. ಹಾಗೆ ನೋಡಿದರೆ ‘ಕಾಂತಾರ’ ಸಾಮಾಜಿಕ ಜಾಗೃತಿಯ ಸಿನೆಮಾ ಅಲ್ಲ. ಒಂದಷ್ಟು ಮಸಾಲಾ ಅಂಶಗಳನ್ನು ಒಳಗೊಂಡ ಪ್ರಯೋಗಶೀಲ ಸಿನೆಮಾ. ಹೀಗಿದ್ದೂ ಕಾಂತಾರ ಸಿನೆಮಾ ಕೇವಲ ರೂ. ಹದಿನಾರು ಕೋಟಿಯಲ್ಲಿ ನಿರ್ಮಾಣಗೊಂಡು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ್ದು ಕನ್ನಡ ಚಿತ್ರರಂಗದಲ್ಲಿ ಅಪರೂಪದ ಸಂಗತಿಯೇ ಸರಿ. ಕಾಂತಾರ 2022ರಲ್ಲಿ ನಿರ್ಮಾಣಗೊಂಡು ಅಂದಾಜು ರೂ. 400 ಕೋಟಿ ಮಾಡಿದ್ದು ಸಾಮಾನ್ಯ ಸಂಗತಿಯೇನಲ್ಲ.
ರಾಜಮೌಳಿಯ ಬಾಹುಬಲಿ, ಹೊಂಬಾಳೆ ಫಿಲಂಸ್‌ನವರ ಕೆ. ಜಿ.ಎಫ್. 1 ಮತ್ತು 2 ದೊಡ್ಡ ಬಜೆಟ್‌ನ ಪಕ್ಕಾ ಮಸಾಲಾ ಅಂಶಗಳನ್ನು ಒಳಗೊಂಡ ಸಿನೆಮಾಗಳು. ಅವು ನೂರಾರು ಕೋಟಿ ಸುರಿದು ಸಾವಿರಾರು ಕೋಟಿ ಸಂಪಾದಿಸುವುದು ಆಶಯ ರಹಿತ ಕೇವಲ ವ್ಯಾಪಾರಕ್ಕಾಗಿ. ತೆಲುಗಿನ ‘ಪುಷ್ಪ’ 1 ಮತ್ತು 2 ಹಣ ಗಳಿಸಲು ನಡೆಸಿದ ಮಸಾಲಾ ಕಸರತ್ತು ಅಷ್ಟೇ.
ಆದರೆ 2025ರ ಹೊತ್ತಿನಲ್ಲಿ ಸಾಮಾಜಿಕ ಕಾಳಜಿ ಹೊತ್ತ ಮತ್ತು ಮಸಾಲಾ ಅಂಶಗಳಿಂದ, ಸಿದ್ಧ ಸೂತ್ರದಿಂದ ದೂರವಿದ್ದು ಸಿನೆಮಾ ನಿರ್ಮಿಸುವುದು ಅತ್ಯಂತ ಸವಾಲಿನ ಕೆಲಸ. ಪ್ರೇಕ್ಷಕರು ಮನೆಯಲ್ಲೇ ಎಲ್ಲ ಬಗೆಯ ಮನರಂಜನೆ ಪಡೆಯುತ್ತಿರುವಾಗ ಅವರನ್ನು ಚಿತ್ರಮಂದಿರಗಳಿಗೆ ಕರೆ ತರುವುದು ಕಷ್ಟದ ಕೆಲಸ. ಅಂಗೈಯಲ್ಲಿ ಅರಮನೆ ಎನ್ನುವಂತೆ ಮೊಬೈಲ್ ಎಲ್ಲವನ್ನು ಒದಗಿಸುತ್ತಿರುವಾಗ ಪ್ರೇಕ್ಷಕರು ದೂರದ ಚಿತ್ರ ಮಂದಿರಗಳಿಗೆ ಬಂದು ಸಿನೆಮಾ ನೋಡುತ್ತಾರೆಂದರೆ ಸೋಜಿಗದಂತೆ ತೋರುತ್ತದೆ. ಅದರಲ್ಲೂ ಮಸಾಲಾ ಅಂಶಗಳಿಲ್ಲದ, ಸಾಮಾಜಿಕ ಕಾಳಜಿ ಹೊಂದಿದ ಸಿನೆಮಾಗಳನ್ನು ನೋಡಲು ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಬರುವುದು ಪವಾಡವೇ ಸರಿ. ಚಲನಚಿತ್ರ ರಂಗದಲ್ಲಿ ಕೇವಲ ಕತೆ, ಅಭಿನಯ ಮತ್ತು ಮೇಕಿಂಗ್ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆದ ಆಮಿರ್ ಖಾನ್ ಅಭಿನಯದ ‘ಸಿತಾರೆ ಝಮೀನ್ ಪರ್’ ಮತ್ತು ರಾಜ್ ಬಿ. ಶೆಟ್ಟಿಯವರ ‘ಸು ಫ್ರಮ್ ಸೋ’ ಸಿನೆಮಾಗಳು ಹೊಸ ಸಾಧ್ಯತೆಯ ಪ್ರತೀಕದಂತಿವೆ. ರೂ. 65 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಆಮಿರ್ ಖಾನ್ ಅವರ ‘ಸಿತಾರೆ ಝಮೀನ್ ಪರ್’ ಗಲ್ಲಾ ಪೆಟ್ಟಿಗೆಯಲ್ಲಿ ರೂ. 263.42 ಕೋಟಿ ಸಂಪಾದಿಸಿ ಪ್ರೇಕ್ಷಕ ವರ್ಗಕ್ಕೆ ಏನು ಕೊಡಬೇಕು ಎನ್ನುವುದನ್ನು ಮನವರಿಕೆ ಮಾಡಿಸಿದೆ. ಆಮಿರ್ ಖಾನ್ ಅವರು ಸಿತಾರೆ ಝಮೀನ್ ಪರ್ ಸಿನೆಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾರೆ ಎಂದು ಸ್ಪಷ್ಟ ಸಂದೇಶ ರವಾನಿಸಿದರು. ಚಿತ್ರ ಮಂದಿರಗಳಿಗೆ ಬಂದು ಸಿನೆಮಾ ನೋಡುವ ಪರಿಪಾಠ ತಪ್ಪಬಾರದೆಂದು ದೃಢ ನಿರ್ಧಾರ ಮಾಡಿದ್ದರು. ಇಂಥ ದುರಿತ ಕಾಲದಲ್ಲೂ ಒಂದು ಸಿನೆಮಾ ನೋಡಲು ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಬರುವಂತೆ ಮಾಡುವುದು ಬಹು ದೊಡ್ಡ ಸವಾಲು ಸ್ವೀಕರಿಸಿದಂತೆ. ಆ ಸವಾಲನ್ನು ಹಿಂದಿ ಚಿತ್ರರಂಗದಲ್ಲಿ ಆಮಿರ್ ಖಾನ್ ಸಮರ್ಥವಾಗಿ ಎದುರಿಸಿದ್ದಾರೆ. ಕನ್ನಡದಲ್ಲಿ ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನೆಮಾ ಯಶಸ್ಸು ಪಡೆದುಕೊಂಡು ಮುಂದುವರಿಯುತ್ತಿರುವುದು ಅಭಿಮಾನ ಪಡುವ ಸಂಗತಿ. ಸು ಫ್ರಮ್ ಸೋ ಸಿನೆಮಾ ಕೇವಲ ರೂ. ಆರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ರೂ. 60ಕೋಟಿ ಸಂಪಾದಿಸಿರುವುದು ಕನ್ನಡದಲ್ಲಿ ಕ್ರಿಯಾಶೀಲವಾಗಿರುವ ಎಲ್ಲರಿಗೂ ಸ್ಫೂರ್ತಿ ನೀಡುವ ಸಂಗತಿ. ಮಲಯಾಳಂ ಚಿತ್ರರಂಗ ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸಬಹುದು ಎನ್ನುವುದು ಸಿದ್ಧ ಮಾಡಿ ತೋರಿಸಿದೆ. ಈಗ ಕನ್ನಡ ಚಿತ್ರರಂಗವೂ ರುಜುವಾತುಪಡಿಸುತ್ತಿದೆ.
ಕನ್ನಡದಲ್ಲಿ ಪ್ರತಿಭಾವಂತ ಲೇಖಕರು, ನಟ ನಟಿಯರಿಗೆ ಕೊರತೆಯಿಲ್ಲ. ಸಿದ್ಧಸೂತ್ರಕ್ಕೆ ಕಟ್ಟು ಬಿದ್ದು ಕನ್ನಡ ಚಿತ್ರರಂಗ ತೀವ್ರ ಹಿನ್ನಡೆ ಅನುಭವಿಸಿದೆ. ಸಿದ್ಧಸೂತ್ರ ತೊರೆದು ಬದುಕಿನ ತಾಜಾ ಅನುಭವವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟರೆ ಕನ್ನಡದ ಪ್ರೇಕ್ಷಕ ಖಂಡಿತಾ ಕೈ ಹಿಡಿಯುತ್ತಾನೆ. ದುನಿಯಾ ಸೂರಿಯಿಂದ ಹಿಡಿದು ಡಾಲಿ ಧನಂಜಯ್‌ವರೆಗೆ ಕನ್ನಡ ಚಿತ್ರರಂಗದ ಸಂವೇದನಾಶೀಲ ಮನಸ್ಸುಗಳು ಸಿದ್ಧಸೂತ್ರ ತೊರೆದು ಹೊಸದನ್ನು ನೀಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆಮಿರ್‌ಖಾನ್ ‘ಲಾಲ್ ಸಿಂಗ್ ಛಡ್ಡಾ’ದಂತಹ ಸಿನೆಮಾ ಮಾಡಿ ಕೈ ಸುಟ್ಟುಕೊಂಡಿರಬಹುದು. ಆದರೆ ಪ್ರತೀ ಪ್ರಯೋಗವು ಸ್ವಂತಿಕೆಯ ಹುಡುಕಾಟದಲ್ಲಿ ಬಹು ದೊಡ್ಡ ಪಾಠವಾಗುತ್ತದೆ. ಕನ್ನಡ ಚಿತ್ರರಂಗ ಈಗಲೂ ಅತ್ಯುತ್ತಮವಾದುದನ್ನು ಕೊಡಬಲ್ಲದು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಲಾತ್ಮಕ-ಕಮರ್ಷಿಯಲ್ ಭೇದ ಅಳಿಸಿ ಅತ್ಯುತ್ತಮ ಚಲನಚಿತ್ರಗಳನ್ನು ನೀಡುವುದು ನಮ್ಮವರ ಗುರಿಯಾಗಬೇಕು.