ಕರ್ನಾಟಕದ ಕೆಟ್ಟ ರೈಲ್ವೆ ವ್ಯವಸ್ಥೆಯೂ, ಸೋಮಣ್ಣನೆಂಬ ಮಂತ್ರಿಯೂ...

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸಮ್ಮಿಶ್ರ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೆದಿದೆ. ಕರ್ನಾಟಕದಿಂದ ವಿ. ಸೋಮಣ್ಣ ರೈಲ್ವೆ ಮತ್ತು ಜಲಸಂಪನ್ಮೂಲದಂತಹ ಪ್ರಮುಖ ಖಾತೆಗಳ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಬಿಜೆಪಿಯವರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ತಂದೆಯ ಹಾಗೆ ಮಹತ್ವದ ಖಾತೆಯ ಮಂತ್ರಿಯಾಗಬಹುದೆಂದು ಬಲವಾಗಿ ನಂಬಿದ್ದರು. ಅಷ್ಟಕ್ಕೂ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತ ಇತ್ತು. ಆಡಳಿತದ ಅನುಭವವೂ ಇರುವುದರಿಂದ ಮಂತ್ರಿಯಾದರೆ ಒಳ್ಳೆಯ ಕೆಲಸ ಮಾಡಬಹುದೆಂದು ಸಾಮಾನ್ಯ ಜನತೆ ಭಾವಿಸಿದ್ದರು. ಬಿ.ಎಲ್. ಸಂತೋಷ್ ಹಸ್ತಕ್ಷೇಪದಿಂದ ವಿ. ಸೋಮಣ್ಣ ಆಕಸ್ಮಿಕ ಮಂತ್ರಿಯಾದರು. ಹಾಗೆ ನೋಡಿದರೆ ಸೋಮಣ್ಣ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಹಾಗಂತ ಕೇಂದ್ರದಲ್ಲಿ ಮಂತ್ರಿಯಾಗಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಮುಖ್ಯವಾಗಿ ಆಡಳಿತದ ಅನುಭವದ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಚೆನ್ನಾಗಿ ಗೊತ್ತಿರಬೇಕು. ಇಂಗ್ಲಿಷ್ ಗೊತ್ತಿರದಿದ್ದರೂ ನಡೆಯುತ್ತದೆ, ಆದರೆ ಭಾಷೆಯ ತಿಳುವಳಿಕೆ ಅಗತ್ಯ. ಈ ಹಿಂದೆ ಕರ್ನಾಟಕದಿಂದ ಕೇಂದ್ರದಲ್ಲಿ ಮಂತ್ರಿಗಳಾಗಿ ಯಶಸ್ವಿಯಾದ ಬಹುತೇಕರು ಭಾಷೆಯ ಕಾರಣಕ್ಕೆ ಗಮನ ಸೆಳೆಯುವ ಕೆಲಸ ಮಾಡಲು ಸಾಧ್ಯವಾಗಿತ್ತು.
ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಸಿ. ಕೆ. ಜಾಫರ್ ಶರೀಫ್, ಕೊಂಡಜ್ಜಿ ಬಸಪ್ಪ, ಬಿ. ಶಂಕರಾನಂದ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಅನಂತಕುಮಾರ್ ಮುಂತಾದವರಿಗೆ ಇಂಗ್ಲಿಷ್ ಅಥವಾ ಹಿಂದಿ ಭಾಷೆ ಗೊತ್ತಿದ್ದರಿಂದಲೇ ಕರ್ನಾಟಕಕ್ಕೆ ಒಳ್ಳೆಯ ಯೋಜನೆಗಳನ್ನು ತರಲು ಸಾಧ್ಯವಾಗಿತ್ತು. ಜಾಫರ್ ಶರೀಫ್ ಅವರು ರೈಲ್ವೆ ಮಂತ್ರಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಮಂತ್ರಿಯಾಗಿ ಗಮನ ಸೆಳೆದಿದ್ದರು. ಕೇವಲ ಒಂಭತ್ತು ತಿಂಗಳ ಕಾಲ ರೈಲ್ವೆ ಮಂತ್ರಿಯಾಗಿ ಹೆಸರು ಮಾಡಿದ್ದರು. ಶೋಭಾ ಕರಂದ್ಲಾಜೆ, ಜಿ.ಎಂ. ಸಿದ್ದೇಶ್, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಿಗಜಿಣಗಿ, ಭಗವಂತಪ್ಪ ಖೂಬಾ ಮುಂತಾದವರು ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಪಡೆದರೂ ಯಶಸ್ವಿಯಾಗಲಿಲ್ಲ. ಅವರ ವೈಫಲ್ಯಕ್ಕೆ ಭಾಷೆಯೂ ಒಂದು ಪ್ರಮುಖ ಕಾರಣವಾಗಿತ್ತು. ಶೋಭಾ ಕರಂದ್ಲಾಜೆ ಮತ್ತು ರಮೇಶ್ ಜಿಗಜಿಣಗಿ ಅವರು ಕರ್ನಾಟಕದಲ್ಲಿ ಮಂತ್ರಿಗಳಾಗಿ ಅಪಾರ ಅನುಭವ ಪಡೆದಿದ್ದರು. ಆದರೆ ಕೇಂದ್ರದಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಡಿ.ವಿ. ಸದಾನಂದಗೌಡರಿಗೆ ಆಡಳಿತದ ಅನುಭವವೂ ಇತ್ತು, ತಕ್ಕ ಮಟ್ಟಿಗೆ ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದರು. ಏಳು ವರ್ಷಗಳ ಕಾಲ ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ದೊರೆತರೂ ಕನಸುಗಳಿಲ್ಲದ ಹಾದಿಯಲ್ಲಿ ನಡೆದ ಕಾರಣಕ್ಕೆ ಹೆಜ್ಜೆ ಗುರುತುಗಳನ್ನು ಮೂಡಿಸಲು ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಮಹತ್ವದ ಖಾತೆಗಳ ಮಂತ್ರಿಯಾಗಿಯೂ ಪ್ರಹ್ಲಾದ್ ಜೋಶಿ ಕರ್ನಾಟಕದ ಒಳಿತಿಗೆ ಏನನ್ನೂ ಮಾಡದೆ ಹೋಗಿದ್ದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ. ಅಲ್ಪ ಅವಧಿಗೆ ರೈಲ್ವೆ ಮಂತ್ರಿಯಾಗಿದ್ದ ಸುರೇಶ್ ಅಂಗಡಿ ಏನಾದರೂ ಮಾಡುವ ಹಂಬಲ ಇಟ್ಟುಕೊಂಡಿದ್ದರು. ಆದರೆ ಕೋವಿಡ್ ಅವರನ್ನು ಬಲಿ ಪಡೆದಿದ್ದರಿಂದ ಅವರ ಸಾಧನೆ ದಾಖಲಾಗಲೇ ಇಲ್ಲ.
ಈಗ ಕರ್ನಾಟಕದಿಂದ ಕೇಂದ್ರ ಸರಕಾರದಲ್ಲಿ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಅತ್ಯಂತ ಪ್ರಮುಖ ಖಾತೆಗಳ ಮಂತ್ರಿಯಾಗಿದ್ದಾರೆ. ಆದರೆ ಅವರಲ್ಲಿ ಸ್ವಂತಿಕೆ ಮತ್ತು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇರುವುದರಿಂದ ಏನನ್ನೂ ನಿರೀಕ್ಷಿಸಲಾಗದು ಎಂಬುದು ಸಾಬೀತಾಗಿದೆ. ಜೋಶಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಚೆನ್ನಾಗಿ ಗೊತ್ತು. ಅವರಿಬ್ಬರೂ ರಬ್ಬರ್ ಸ್ಟ್ಯಾಂಪ್ ತರಹ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಮಹತ್ವದ ಖಾತೆಗಳೇನೋ ದೊರೆತಿವೆ. ಇಬ್ಬರೂ ಕರ್ನಾಟಕದಲ್ಲಿ ಮಂತ್ರಿಗಳಾಗಿ ಅಪಾರ ಅನುಭವ ಪಡೆದವರು. ಆದರೆ ಅವರ ಸಾಧನೆಗಳು ಮಾತನಾಡುತ್ತಿಲ್ಲ. ಈ ಹಿಂದೆ ಶೋಭಾ ಕರಂದ್ಲಾಜೆಯವರಿಗೆ ಕೃಷಿ ಖಾತೆಯ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಅವರಿಂದ ಕರ್ನಾಟಕಕ್ಕೆ ಏನೂ ಲಾಭವಾಗಲಿಲ್ಲ.
ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ. ಸೋಮಣ್ಣ ಕರ್ನಾಟಕದಲ್ಲಿ ಹಲವು ವರ್ಷಗಳ ಕಾಲ ಮಂತ್ರಿಯಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡವರು. ಸದಾ ಕ್ರಿಯಾಶೀಲರಾಗಿರುವ ಸೋಮಣ್ಣ ಒಂದು ವರ್ಷದ ಅವಧಿಯಲ್ಲಿ ಭಾಷೆಯ ಮಿತಿಯನ್ನು ಮೆಟ್ಟಿ ನಿಂತು ಅತ್ಯುತ್ತಮ ಕೆಲಸ ಮಾಡಬಹುದಿತ್ತು. ಜಲಸಂಪನ್ಮೂಲ ಖಾತೆಯ ಆಳ ಅಗಲ ಸೋಮಣ್ಣ ಅವರಿಗೆ ಇನ್ನೂವರೆಗೂ ಅರ್ಥವಾಗಿಲ್ಲ ಅನಿಸುತ್ತದೆ. ರೈಲ್ವೆ ಖಾತೆಗೆ ಸಂಬಂಧ ಪಟ್ಟಂತೆ ಅದು ಇದು ಮಾತನಾಡುತ್ತಿರುತ್ತಾರೆ, ಆದರೆ ಸಾಧನೆಗಳು ಮಾತ್ರ ಮಾತನಾಡುತ್ತಿಲ್ಲ.
1853ರಲ್ಲಿ ಅಸ್ತಿತ್ವಕ್ಕೆ ಬಂದ ಭಾರತೀಯ ರೈಲ್ವೆ ಬ್ರಿಟಿಷರ ಕನಸಿನ ಕೂಸು.ಆಂಗ್ಲ ಅಧಿಕಾರಿಗಳು ಭಾರತ ಸುತ್ತಿದ್ದು ಆಗಿನ ಏಕೈಕ ಮತ್ತು ಸುಖಕರ ಪ್ರಯಾಣದ ಸಾಧನವಾದ ರೈಲ್ವೆ ಮೂಲಕ. ಈಗಲೂ ರೈಲ್ವೆ ಹೆಚ್ಚು ಅನುಕೂಲಕರ ಪ್ರಯಾಣದ ಸಾಧನವಾಗಿದೆ. ಆಗ ಶ್ರೀಮಂತರೂ ಹೆಚ್ಚು ರೈಲ್ವೆ ಪ್ರಯಾಣವನ್ನೇ ಅವಲಂಬಿಸಿದ್ದರು. ಈಗ ಜಿಲ್ಲೆಗೊಂದು ವಿಮಾನ ನಿಲ್ದಾಣಗಳು ಆರಂಭವಾಗುತ್ತಿರುವುದರಿಂದ ಶ್ರೀಮಂತರು ಮತ್ತು ಮೇಲ್ ಮಧ್ಯಮ ವರ್ಗದವರು ರೈಲ್ವೆ ಪ್ರಯಾಣದಿಂದ ದೂರವಾಗುತ್ತಿದ್ದಾರೆ. ಸದ್ಯ ರೈಲ್ವೆ ಪ್ರಯಾಣವನ್ನು ಕೆಳ ಮಧ್ಯಮ ವರ್ಗದವರು ಮತ್ತು ಬಡವರು ಹೆಚ್ಚು ಅವಲಂಬಿಸಿದ್ದಾರೆ. ಎಂಟ್ಹತ್ತು ವರ್ಷಗಳ ಹಿಂದೆ ಮಂತ್ರಿ, ಶಾಸಕರಿಗೂ ರೈಲ್ವೆ ಅನಿವಾರ್ಯವಾಗಿತ್ತು. ಇಷ್ಟಾದರೂ ರೈಲ್ವೆ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ರೈಲು ಅತ್ಯಂತ ಕಡಿಮೆ ವೆಚ್ಚದ ಪ್ರಯಾಣದ ಸಾಧನವಾಗಿದೆ. ಅಗ್ಗದ ದರವೂ ರೈಲ್ವೆಯನ್ನು ಹೆಚ್ಚು ಜನ ಅವಲಂಬಿಸಲು ಪ್ರಮುಖ ಕಾರಣವಾಗಿದೆ.
ರೈಲ್ವೆಯಂತಹ ಪ್ರಮುಖ ಖಾತೆಯ ಮಂತ್ರಿಯಾಗಿ ಒಂದು ವರ್ಷ ಕಳೆದರೂ ಸೋಮಣ್ಣ ತುಮಕೂರು ಆಚೆ ದೃಷ್ಟಿ ಹರಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ಒಟ್ಟು 463 ರೈಲ್ವೆ ನಿಲ್ದಾಣಗಳಿವೆ. ಅವುಗಳಲ್ಲಿ 104 ಹಾಲ್ಟ್‌ಗಳು ಸೇರಿವೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಅತ್ಯಂತ ದೊಡ್ಡ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ಬಹುಪಾಲು ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಕರ್ನಾಟಕದಲ್ಲಿ ಮೂರು ರೈಲ್ವೆ ವಿಭಾಗಗಳಿವೆ. ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ಡಿವಿಷನ್ ಸೇರಿ ಒಟ್ಟು 38 ಸಾವಿರಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆಯ ಮಂತ್ರಿಯಾಗಿದ್ದಾಗ ಕಲಬುರಗಿಗೆ ರೈಲ್ವೆ ವಿಭಾಗ ಮಂಜೂರು ಆಗಿತ್ತು. ಹತ್ತು ವರ್ಷಗಳು ಕಳೆದರೂ ಕಲಬುರಗಿ ರೈಲ್ವೆ ವಿಭಾಗದ ಕನಸು ಸಾಕಾರಗೊಂಡಿಲ್ಲ. ಸದ್ಯ ಕಲಬುರಗಿ, ಸೊಲ್ಲಾಪುರ ರೈಲ್ವೆ ವಿಭಾಗದ ಭಾಗವಾಗಿದೆ. ಕಲ್ಯಾಣ ಕರ್ನಾಟಕದ ವಿಭಾಗ ಕೇಂದ್ರವಾಗಿರುವ ಕಲಬುರಗಿ ಸೊಲ್ಲಾಪುರ ನಗರಕ್ಕಿಂತಲೂ ಹೆಚ್ಚು ಮೂಲಭೂತ ಸೌಕರ್ಯ ಪಡೆದಿದೆ. ಸೊಲ್ಲಾಪುರ ರೈಲ್ವೆ ವಿಭಾಗದ ಆದಾಯದಲ್ಲಿ ಕಲಬುರಗಿಯದು ಸಿಂಹ ಪಾಲಿದೆ. ರೈಲ್ವೆ ಮಂತ್ರಿ ಸೋಮಣ್ಣ ಅವರಿಗೆ ಅತ್ಯುತ್ತಮ ಕೆಲಸ ಮಾಡುವ ಇರಾದೆ ಇದ್ದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರ ಸಲಹೆ ಪಡೆದುಕೊಂಡು ಮುಂದುವರಿಯುತ್ತಿದ್ದರು.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರು ಇಡುವುದೇ ದೊಡ್ಡ ಸಾಧನೆ ಎಂದು ಸೋಮಣ್ಣ ಬಲವಾಗಿ ನಂಬಿದಂತಿದೆ.
ಹಿಂದಿ ಭಾಷೆಯ ಅರಿವು ಇಲ್ಲದಿದ್ದರೂ ಅತ್ಯುತ್ತಮ ಕೆಲಸ ಮಾಡಿ ತೋರಿಸುತ್ತೇನೆ ಎಂಬ ಛಲ ಸೋಮಣ್ಣ ಅವರಿಗೆ ಇದ್ದಿದ್ದರೆ ಇಷ್ಟೊತ್ತಿಗೆ ಗಮನಾರ್ಹ ಸಾಧನೆ ಮಾಡುತ್ತಿದ್ದರು. ಕರ್ನಾಟಕದ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಒಮ್ಮೆ ಭೇಟಿ ನೀಡಿದ್ದರೂ ಅಲ್ಲಿಯ ಸ್ಥಿತಿಗತಿ ಸೋಮಣ್ಣ ಅವರಿಗೆ ಅರ್ಥ ಆಗಿರುತ್ತಿತ್ತು. ಅಧಿಕಾರಿಗಳು ಹೇಳಿದ್ದನ್ನು ಕೇಳುವ ಮತ್ತು ಅಷ್ಟನ್ನೇ ಅನುಷ್ಠಾನಗೊಳಿಸುವ ಮಂತ್ರಿ ಸಮಸ್ಯೆಯ ಮೂಲ ಅರಿಯುವಲ್ಲಿ ವಿಫಲನಾಗುತ್ತಾನೆ ಎಂಬುದಕ್ಕೆ ಸೋಮಣ್ಣ ತಾಜಾ ನಿದರ್ಶನ.
ವಂದೇಭಾರತ್ ಸೇರಿದಂತೆ ಹೊಸ ರೈಲುಗಳನ್ನು ತರುವುದು ಮುಖ್ಯವಲ್ಲ. ಆ ರೈಲುಗಳ ಸುಗಮ ಸಂಚಾರಕ್ಕೆ ಅಗತ್ಯವಾದ ಮೂಲ ಸೌಕರ್ಯಗಳು ಸಿದ್ಧವಾಗಿರಬೇಕು. ಈ ಹಿಂದೆ ಯುದ್ಧೋಪಾದಿಯಲ್ಲಿ ಗೇಜ್ ಪರಿವರ್ತನೆ ಕೆಲಸ ಆಗಿದ್ದರಿಂದ ಸುಗಮ ಸಂಚಾರಕ್ಕೆ ಹೆಚ್ಚು ಅನುಕೂಲವಾಯಿತು. ಈಗ ಇಲಾಖೆಯ ಮಟ್ಟದಲ್ಲಿ ಅಗತ್ಯವಾಗಿ ಆಗಲೇಬೇಕಾದ ಕೆಲಸಗಳೆಂದರೆ: ಜೋಡಿ ಹಳಿಗಳ ನಿರ್ಮಾಣ ಕಾರ್ಯ. ಇಲೆಕ್ಟ್ರಿಫಿಕೇಷನ್ ಕಾರ್ಯ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ವಂದೇಭಾರತ್‌ನಂತಹ ರೈಲುಗಳು ಗರಿಷ್ಠ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ವಂದೇ ಭಾರತ್ ರೈಲುಗಳ ವೇಗಕ್ಕೆ ಪೂರಕವಾದ ಮೂಲ ಸೌಕರ್ಯಗಳು ಇಲ್ಲದೆ ಹೋದರೆ ಅವುಗಳ ಕಾರ್ಯಕ್ಷಮತೆ ಕುಗ್ಗುತ್ತದೆ. ನಾನು ಕಂಡಂತೆ ಬೆಂಗಳೂರಿಗೆ ಬರುವ ವಂದೇ ಭಾರತ್ ರೈಲು ನಿಗದಿತ ಸಮಯಕ್ಕೆ ತಲುಪಿದ ನಿದರ್ಶನ ಇಲ್ಲ. ಕನಿಷ್ಠ ಅರ್ಧ ಗಂಟೆಯಾದರೂ ತಡವಾಗಿ ತಲುಪುವುದು ವಂದೇ ಭಾರತ್ ರೈಲಿನ ಅನಿವಾರ್ಯತೆಯಾಗಿದೆ. ಆರಂಭದಲ್ಲೇ ವಿಶ್ವಾಸಾರ್ಹತೆ ಕಳೆದುಕೊಂಡರೆ ವಂದೇ ಭಾರತ್ ರೈಲು ಕೂಡಾ ಉಳಿದ ರೈಲುಗಳು ಸಾಲಿಗೆ ಸೇರುತ್ತದೆ. ಈ ಹೊತ್ತು ವಿಮಾನ ಪ್ರಯಾಣ ಹೆಚ್ಚು ಜನಪ್ರಿಯವಾಗಲೂ ಅವುಗಳ ಸಮಯ ಪಾಲನೆ ಪ್ರಮುಖ ಪಾತ್ರ ವಹಿಸಿದೆ. ಏರ್ ಇಂಡಿಯಾ ಸಮಯ ಪಾಲನೆ ಮತ್ತು ಸುರಕ್ಷತೆಯಲ್ಲಿ ಒಂದು ಶಿಸ್ತು ರೂಢಿಸಿಕೊಳ್ಳದ ಕಾರಣಕ್ಕೆ ಚಿಂತಾಜನಕ ಸ್ಥಿತಿಗೆ ತಲುಪಿದೆ.
ವಂದೇ ಭಾರತ್ ರೈಲು ಒಂದು ಜನಪ್ರಿಯ ಬ್ರಾಂಡ್ ಆಗಿ ಜನಮಾನಸದಲ್ಲಿ ನೆಲೆ ನಿಲ್ಲುವಂತಾಗಬೇಕಾದರೆ ಸಮಯ ಪಾಲನೆ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ.
ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಅತಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಆದರೆ ಸ್ವಚ್ಛತೆ, ಸುರಕ್ಷತೆ ಮತ್ತು ಸಮಯ ಪಾಲನೆ ಸೇರಿದಂತೆ ಯಾವುದರಲ್ಲೂ ವಂದೇ ಭಾರತ್ ರೈಲು ವಿಶೇಷ ಛಾಪು ಮೂಡಿಸುತ್ತಿಲ್ಲ.
ಇನ್ನು ರೈಲ್ವೆ ನಿಲ್ದಾಣಗಳ ಸ್ಥಿತಿಗತಿ, ನಿರ್ವಹಣೆ, ಸ್ವಚ್ಛತೆ, ಸಮಯ ಪಾಲನೆ, ಸುರಕ್ಷತೆ ಎಲ್ಲದರಲ್ಲೂ ಕರ್ನಾಟಕದ ರೈಲ್ವೆ ವ್ಯವಸ್ಥೆ ಹಿಂದಿದೆ. ಸೋಮಣ್ಣ ಕೇವಲ ಕರ್ನಾಟಕದ ರೈಲ್ವೆ ಮಂತ್ರಿಯಲ್ಲ ನಿಜ. ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ಮತ್ತು ಸೋಮಣ್ಣನವರ ತವರು ರಾಜ್ಯದ ರೈಲ್ವೆ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆಯೆಂದರೆ ಇನ್ನು ಬಿಹಾರ, ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳ ರೈಲ್ವೆ ವ್ಯವಸ್ಥೆ ಯಾವ ಮಟ್ಟದಲ್ಲಿ ಇದ್ದಿರಬಹುದು. ನೀವೇ ಊಹಿಸಿ.
ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳ ರೈಲ್ವೆ ನಿಲ್ದಾಣಗಳು ಗಬ್ಬು ನಾರುತ್ತವೆ. ಆಧುನೀಕರಣದ ನೆಪದಲ್ಲಿ ಸಾಕಷ್ಟು ಕಾಮಗಾರಿ ಕೈಗೊಂಡರೂ ಯಾವ ನಿಲ್ದಾಣಗಳಿಗೂ ಆಧುನಿಕ ಸ್ಪರ್ಶ ದೊರೆತಿಲ್ಲ. ವಯಸ್ಸಾದವರು ರೈಲ್ವೆ ಪ್ರಯಾಣ ಮಾಡಲಾರದಷ್ಟು ಅನನುಕೂಲಗಳಿವೆ. ಎಸ್ಕೇಲೇಟರ್‌ಗಳು ಸದಾ ಒಂದಲ್ಲ ಒಂದು ಕಾರಣದಿಂದ ಸ್ಥಗಿತವಾಗಿರುತ್ತವೆ. ಸಣ್ಣ ಪುಟ್ಟ ನಿಲ್ದಾಣಗಳು ಬಿಡಿ, ಬೆಂಗಳೂರು, ಹುಬ್ಬಳ್ಳಿಯಂತಹ ದೊಡ್ಡ ನಿಲ್ದಾಣಗಳಲ್ಲೇ ರೈಲು ಬರುವ, ಹೋಗುವ ಸಮಯದ ಕುರಿತು ಸಮರ್ಪಕ ಮಾಹಿತಿ ನೀಡುವುದಿಲ್ಲ. ಯಾವ ರೈಲು ಯಾವ ಪ್ಲಾಟ್‌ಫಾರ್ಮ್‌ಗೆ ಬರುತ್ತದೆ ಎಂಬುದರ ಮಾಹಿತಿ ಒದಗಿಸುವುದಿಲ್ಲ. ಅಷ್ಟೇ ಯಾಕೆ ಯಾವ ಬೋಗಿ ಎಲ್ಲಿ ನಿಲ್ಲುತ್ತದೆ ಎಂಬುದರ ವಿವರ ಮುಂಚಿತವಾಗಿ ನೀಡುವುದಿಲ್ಲ. ಪ್ರಯಾಣಿಕರು ಸದಾ ಒತ್ತಡದಲ್ಲೇ ಒದ್ದಾಡುತ್ತಿರುತ್ತಾರೆ. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ರೈಲು ನೀರು ಒದಗಿಸುವುದಿಲ್ಲ. ಖಾಸಗಿ ಕಂಪೆನಿಗಳ ಹೊಲಸು ನೀರು ಮಾರಾಟಕ್ಕೆ ಅವಕಾಶ ಮಾಡಿಕೊಡುವುದರ ಉದ್ದೇಶವೇ ಕಮಿಷನ್. ಕಮಿಷನ್ ಆಸೆಗೆ ರೈಲ್ವೆ ನಿಲ್ದಾಣಗಳ ನೀರು ಆಹಾರ ಮತ್ತು ಇನ್ನಿತರ ತಿಂಡಿ ತಿನಿಸುಗಳು ಕಲುಷಿತಗೊಂಡಿವೆ. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆಯಿಂದ ಕೂಡಿದ ಶೌಚಾಲಯ ವ್ಯವಸ್ಥೆ ಇಲ್ಲ. ರೈಲ್ವೆ ನಿಲ್ದಾಣಗಳ ಶೌಚಾಲಯ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆಯೆಂದರೆ, ಒಮ್ಮೆ ಅಲ್ಲಿ ಹೋಗಿ ಬಂದರೆ ಇನ್ಫೆಕ್ಷನ್ ಆಕ್ರಮಿಸುವುದು ಗ್ಯಾರಂಟಿ. ಇನ್ನು ಸಣ್ಣ ಪುಟ್ಟ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ಮಾಣ ಮಾಡಿದ್ದರೂ ನೀರಿನ ವ್ಯವಸ್ಥೆ ಒದಗಿಸಿರುವುದಿಲ್ಲ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಿಪೇಡ್ ಟ್ಯಾಕ್ಸಿ ಸೌಲಭ್ಯ ಇದ್ದೂ ಇಲ್ಲದಂತಹ ಸ್ಥಿತಿ ತಲುಪಿದೆ. ಯಶವಂತಪುರ ರೈಲ್ವೆ ನಿಲ್ದಾಣ ನವೀಕರಣಗೊಳ್ಳುತ್ತಿರುವುದರಿಂದ ಅದನ್ನು ಲೆಕ್ಕಕ್ಕೆ ಹಿಡಿಯುವುದು ಬೇಡ. ಯಲಹಂಕ ರೈಲ್ವೆ ನಿಲ್ದಾಣ ಅತ್ಯಂತ ಕನಿಷ್ಠ ಮಟ್ಟದ ಸೌಲಭ್ಯದಿಂದ ನಿತ್ಯ ಪ್ರಯಾಣಿಕರಿಗೆ ತೊಂದರೆ ಕೊಡುತ್ತಲೇ ಇರುತ್ತದೆ. ಪ್ರಿಪೇಡ್ ಟ್ಯಾಕ್ಸಿ ಸೌಲಭ್ಯ ಇಲ್ಲದಿರುವುದರಿಂದ ಆಟೊ ರಿಕ್ಷಾ ಸುಲಿಗೆ ಮಿತಿಮೀರಿದೆ. ಬಹುಪಾಲು ರೈಲುಗಳಲ್ಲಿ ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಅಕ್ರಮ ಸೀಟು ಹಂಚಿಕೆ ಮಾಡಿ ಹಣ ಮಾಡುವ ದಂಧೆ ಅವ್ಯಾಹತವಾಗಿ ನಡೆದಿದೆ. ಬಡವರಿಗೆ ಅಗ್ಗದ ದರದ ಕಾರಣಕ್ಕೆ ಭಾರತೀಯ ರೈಲ್ವೆ ವ್ಯವಸ್ಥೆ ಎಷ್ಟೇ ಕೊಳಕಾಗಿದ್ದರೂ ಅನಿವಾರ್ಯವಾಗಿದೆ. ವಿಮಾನ ನಿಲ್ದಾಣಗಳಷ್ಟು ಲಕ್ಸುರಿ ವ್ಯವಸ್ಥೆ ರೈಲ್ವೆ ನಿಲ್ದಾಣಗಳಲ್ಲಿ ಯಾರೊಬ್ಬರೂ ನಿರೀಕ್ಷೆ ಮಾಡಲಾರರು.
ಭಾರತ ಜಪಾನ್ ದೇಶಕ್ಕೂ ಮೀರಿ ಅಭಿವೃದ್ಧಿ ಹೊಂದಿದೆ ಎಂದು ಸುಳ್ಳು ಹೇಳುವವರಿಗೆ ಕರ್ನಾಟಕದ ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಜಪಾನ್ ರೈಲು ವ್ಯವಸ್ಥೆಯ ಹತ್ತಿರ ನಿಲ್ಲಬೇಕೆಂದರೆ ಭಾರತಕ್ಕೆ ಇನ್ನೂ ಐವತ್ತು ವರ್ಷ ಹಿಡಿಯುತ್ತದೆ.
ರೈಲ್ವೆ ಮಂತ್ರಿ ಸೋಮಣ್ಣನವರಿಗೆ ಹಿಂದಿ, ಇಂಗ್ಲಿಷ್ ಭಾಷೆಗಳು ಗೊತ್ತಿರದಿದ್ದರೂ ಜನರ ಭಾವನೆಗಳನ್ನು ಅರಿತು ಕಾರ್ಯ ನಿರ್ವಹಿಸಿದರೆ ಅತ್ಯುತ್ತಮ ಕೆಲಸಗಾರ ಎನಿಸಿಕೊಳ್ಳುತ್ತಾರೆ.
ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಕನಿಷ್ಠ ಪಕ್ಷ ಕರ್ನಾಟಕದ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಒಮ್ಮೆಯಾದರೂ ಭೇಟಿ ನೀಡಿದರೆ ಅಲ್ಲಿಯ ನರಕದ ದರ್ಶನವಾಗುತ್ತದೆ. ಒಂದೊಂದೇ ಸಮಸ್ಯೆಗೆ ಪರಿಹಾರ ಕಂಡುಕೊಂಡರೂ ಐದು ವರ್ಷಗಳಲ್ಲಿ ಕರ್ನಾಟಕದ ರೈಲ್ವೆ ನಿಲ್ದಾಣಗಳಲ್ಲಿ ಸೋಮಣ್ಣ ಅವರ ಛಾಪು ಎದ್ದು ಕಾಣಬಹುದು.
ಬೆಂಗಳೂರಿಗೆ ಸರ್ಕ್ಯುಲರ್ ರೈಲ್ವೆ ಯೋಜನೆ ತರುತ್ತಿರುವುದು ಒಳ್ಳೆಯ ಬೆಳವಣಿಗೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗುವುದರಿಂದ ಹೊಸ ಯೋಜನೆಗಳು ಸೋಮಣ್ಣ ಸಚಿವರಾಗಿದ್ದಾಗಲೇ ಕಾರ್ಯ ಆರಂಭ ಮಾಡುತ್ತವೆ ಎಂದು ಹೇಳಲಾಗದು. ಆದರೆ ಹಾಲಿ ಇರುವ ರೈಲ್ವೆ ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡಿದರೆ ಅಲ್ಲಿ ಜನಸಾಮಾನ್ಯರು ಓಡಾಡಲು ಸಹ್ಯ ಎನಿಸಿಕೊಳ್ಳುತ್ತವೆ. ಇದೇ ಮಾದರಿ ಭಾರತದ ಎಲ್ಲ ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಬಹುದಾಗಿದೆ. ಮಳೆಗಾಲದಲ್ಲಿ ಕರ್ನಾಟಕದ ಯಾವ ರೈಲ್ವೆ ನಿಲ್ದಾಣವೂ ನಿಂತುಕೊಳ್ಳಲು ಲಾಯಕ್ ಆಗಿರುವುದಿಲ್ಲ. ರೈಲ್ವೆ ಮಂತ್ರಿಯಾಗಿ ಸೋಮಣ್ಣ ದೇಶದ ಬೇರೆಡೆಗೆ ಪ್ರಯಾಣಿಸುವಾಗ ವಿಮಾನ ಬಳಸಲಿ. ಆದರೆ ಕರ್ನಾಟಕದ ಒಳಗಡೆ ಪ್ರವಾಸ ಮಾಡುವಾಗ ಕಡ್ಡಾಯವಾಗಿ ರೈಲ್ವೆ ಪ್ರಯಾಣ ಮಾಡಿದರೆ ಸ್ಥಿತಿಗತಿ ಅರಿತುಕೊಳ್ಳಲು ಮತ್ತು ಸುಧಾರಣೆ ತರಲು ಸಹಾಯ ಆಗುತ್ತದೆ.
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರು ಇಡುವುದು ಒಂದು ದಿನದ ಕೆಲಸ. ಸಿದ್ದಗಂಗಾ ಶ್ರೀಗಳ ಆತ್ಮ ಸಂತೃಪ್ತಿಯಿಂದ ಸೋಮಣ್ಣನವರಿಗೆ ಹರಸಬೇಕೆಂದರೆ ಅವರು ಕರ್ನಾಟಕದ ರೈಲ್ವೆ ವ್ಯವಸ್ಥೆಗೆ ಕಾಯಕಲ್ಪ ನೀಡಲು ಮುಂದಾಗಬೇಕಿದೆ.
ಬಿಜೆಪಿಯಲ್ಲಿನ ಸಂತೋಷ್ ಬಣ ಸೋಮಣ್ಣ ರೈಲ್ವೆ ಮಂತ್ರಿಯಾಗಿ ಏನೂ ಮಾಡಲಾರರು ಎಂದೇ ಭಾವಿಸಿದೆ. ಹಿಂದಿ, ಇಂಗ್ಲಿಷ್ ಗೊತ್ತಿಲ್ಲ, ದಿಲ್ಲಿ ಆಡಳಿತ ವ್ಯವಸ್ಥೆಯ ಸ್ವರೂಪ ರಾಜ್ಯಕ್ಕಿಂತಲೂ ಭಿನ್ನವಾಗಿದೆ. ಅದನ್ನು ಅರ್ಥ ಮಾಡಿಕೊಂಡು ಅನುಷ್ಠಾನ ಮಾಡುವುದರಲ್ಲೇ ಮೂರು ವರ್ಷ ಕಳೆದು ಹೋಗುತ್ತದೆ.
ಅಷ್ಟಕ್ಕೂ ಸೋಮಣ್ಣನವರಿಗೆ ಮಂತ್ರಿಗಿರಿ ಕೊಡಿಸಿದ್ದೇ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಎಂಬುದು ಎಲ್ಲರಿಗೂ ಗೊತ್ತಿದೆ. ಸೋಮಣ್ಣ ರೈಲ್ವೆ ಮತ್ತು ಜಲಸಂಪನ್ಮೂಲ ಮಂತ್ರಿಯಾಗಿ ಗಮನಾರ್ಹ ಕೆಲಸ ಮಾಡಲಿಲ್ಲವೆಂದರೆ ಕೆಟ್ಟ ಹೆಸರು ಬರುವುದು ಸಂತೋಷ್ ಅವರಿಗೆ. ರಾಜಕೀಯ ಗುರು ಬಿ.ಎಲ್. ಸಂತೋಷ್ ಅವರ ಮಾನ ಉಳಿಸಲಾದರೂ ಸೋಮಣ್ಣ ಅತ್ಯುತ್ತಮ ಕೆಲಸ ಮಾಡಿ ತೋರಿಸಬೇಕಿದೆ. ಕರ್ನಾಟಕ ಮಾತ್ರವಲ್ಲ ಇಡೀ ಭಾರತೀಯ ರೈಲ್ವೆ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಟಿಕೆಟ್ ಬುಕಿಂಗ್ ಮಾಫಿಯಾ ಯಾರ ನಿಯಂತ್ರಣಕ್ಕೂ ಸಿಗದಷ್ಟು ಬೆಳೆದು ನಿಂತಿದೆ. ಬೆಡ್‌ಶೀಟ್ ಪೂರೈಕೆಯ ದಂಧೆಯೂ ಜೋರಾಗಿದೆ. ರೈಲ್ವೆ ವ್ಯವಸ್ಥೆ ಸುಧಾರಿಸಿದರೆ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರೆಯುತ್ತದೆ. ಅಷ್ಟು ಮಾತ್ರವಲ್ಲ ಟೂರಿಸಂ ಕ್ಷೇತ್ರದ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ತಿಂಗಳಾನುಗಟ್ಟಲೆ ಮುಂಚೆ ಬುಕ್ ಮಾಡಿದರೂ ರೈಲ್ವೆ ಕಾಯ್ದಿರಿಸಿದ ಟಿಕೆಟ್ ಸಿಗುವುದಿಲ್ಲ. ಹೆಚ್ಚು ಜನ ಪ್ರಯಾಣಿಸಿದರೆ ರೈಲ್ವೆ ಇಲಾಖೆಗೆ ಹೆಚ್ಚು ಆದಾಯ ಹರಿದುಬರುತ್ತದೆ. ಪ್ರಯಾಣ ಮಾಡಬಯಸುವ ಎಲ್ಲ ಪ್ರಯಾಣಿಕರಿಗೆ ಟಿಕೆಟ್ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ಬಡವರು ಪ್ರಯಾಣಿಸುವ ರೈಲು ಬೋಗಿಗಳು ಜನದಟ್ಟಣೆಯಿಂದ ಕೂಡಿ ನರಕ ತೋರಿಸಿಬಿಡುತ್ತವೆ. ಮೂರನೇ ದರ್ಜೆಯ ಪ್ರಯಾಣವೂ ಸೇರಿದಂತೆ ಎಲ್ಲೆಡೆ ಸ್ವಚ್ಛತೆ, ಸುರಕ್ಷತೆ ವ್ಯವಸ್ಥೆ ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕು. ಕರ್ನಾಟಕದಲ್ಲಿ ಎಂತಹ ಬಡವರೂ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದಿಲ್ಲ. ಬಿಹಾರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಾಯ್ದಿರಿಸಿದ ಟಿಕೆಟ್ ಹೊರತು ಪಡಿಸಿ ಉಳಿದಂತೆ ಯಾರೂ ಟಿಕೆಟ್ ಖರೀದಿ ಮಾಡುವುದಿಲ್ಲ.
ಕರ್ನಾಟಕದ ಜನ ಸಜ್ಜನರು, ಸುಸಂಸ್ಕೃತರು. ಕರ್ನಾಟಕದ ರೈಲ್ವೆ ವ್ಯವಸ್ಥೆ ಸುಧಾರಿಸಿದರೆ, ಜನರು ವಿಮಾನ ಪ್ರಯಾಣದತ್ತ ಚಿತ್ತ ಹರಿಸುವುದಿಲ್ಲ. ರೀಲು ಬಿಡುವ ಮಾತುಗಳು ಸಾಧನೆಯಾಗುವುದಿಲ್ಲ. ಸಮಸ್ಯೆ ಅರಿತು ಸೈಲೆಂಟ್ ಆಗಿ ಕಾರ್ಯ ನಿರ್ವಹಿಸಿದರೆ ಕೆಲಸಗಳೇ ಮಾತನಾಡುತ್ತವೆ. ಸೋಮಣ್ಣ ಅತ್ಯುತ್ತಮ ಕೆಲಸ ಮಾಡದಿದ್ದರೆ ಕೆಟ್ಟ ಹೆಸರು ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ಸೋಮಣ್ಣನವರ ರಾಜಕೀಯ ಗುರು ಬಿ.ಎಲ್. ಸಂತೋಷ್ ಅವರಿಗೂ ಕಳಂಕ ತಟ್ಟುತ್ತದೆ. ಉಳಿದ ದಿನಗಳಲ್ಲಿ ಸೋಮಣ್ಣ ಅತ್ಯುತ್ತಮ ಕೆಲಸ ಮಾಡಿದರೆ ಅವರ ಬದುಕೂ ಸಾರ್ಥಕವಾಗುತ್ತದೆ.