ಕನ್ನಡ ಚಿತ್ರರಂಗ ಮತ್ತು ಪ್ರತಿಭಾನ್ವೇಷಣೆ

ಸ್ವಂತಿಕೆಯ ಹುಡುಕಾಟದಲ್ಲಿ ಮಲಯಾಳಂ ಚಿತ್ರರಂಗ ಬಿಕ್ಕಟ್ಟಿನ ಸಂದರ್ಭದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಭಾರತೀಯ ಭಾಷೆಗಳಲ್ಲಿ ಕನ್ನಡ ಸಾಹಿತ್ಯ ಅಗ್ರಗಣ್ಯ ಸ್ಥಾನ ಪಡೆದಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡಿಗರದು. ಕನ್ನಡ ಚಿತ್ರರಂಗದ ಮಂದಿಗೆ ‘ಸು ಫ್ರಮ್ ಸೋ’ ಚಿತ್ರ ತಂಡಕ್ಕಿರುವ ಪ್ರತಿಭೆ ಮತ್ತು ಕೌಶಲ್ಯ ಇದ್ದರೆ ಸಾಕು. ರಾಜ್ ಬಿ. ಶೆಟ್ಟಿಯಷ್ಟು ಕನ್ನಡ ಸಾಹಿತ್ಯ ಸಂಸ್ಕೃತಿಯ ಅರಿವು ಇದ್ದರೆ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಪ್ರೇಕ್ಷಕರ ಮನ ಗೆಲ್ಲಬಹುದು. ಕನ್ನಡ ಚಿತ್ರ ರಂಗ ಬೆಂಗಳೂರು ಚಿತ್ರರಂಗವಾಗದೆ ಸಮಸ್ತ ಕನ್ನಡದ ಪ್ರತಿಭೆಗಳ ಸಂಗಮವಾದರೆ ಅದರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಪ್ರತಿಭಾನ್ವೇಷಣೆಯ ಕೊರತೆಯಿಂದ ಬಳಲುತ್ತಿದೆ. ಆ ಕೊರತೆ ನೀಗಿಸಿಕೊಂಡರೆ ಅದು ತನ್ನ ಮೊದಲಿನ ವೈಭವವನ್ನು ಮರು ಸಂಪಾದಿಸಬಹುದು.
ಕೇವಲ ಐದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ‘ಸು ಫ್ರಮ್ ಸೋ’ ಕನ್ನಡ ಸಿನೆಮಾ ರೂ. ನೂರಾ ಹದಿನೈದು ಕೋಟಿಗೂ ಮೀರಿ ಗಲ್ಲಾ ಪೆಟ್ಟಿಗೆಯಲ್ಲಿ ಹಣ ಗಳಿಸಿದ್ದು ಸದ್ಯದ ಮಟ್ಟಿಗೆ ಬಹುದೊಡ್ಡ ದಾಖಲೆಯೇ ಸರಿ. ಕಳೆದ ಆರೇಳು ವರ್ಷಗಳಲ್ಲಿ ಜನ ಚಿತ್ರಮಂದಿರಗಳಿಗೆ ಬಂದು ಸಿನೆಮಾ ವೀಕ್ಷಿಸುವ ಆಸಕ್ತಿ ಕಳೆದು ಕೊಳ್ಳುತ್ತಿರುವುದು ಭಾರತೀಯ ಚಿತ್ರರಂಗದ ವಿದ್ಯಮಾನವೇ ಆಗಿದೆ. ಹಿಂದಿ, ಮಲಯಾಳಂ, ತಮಿಳು, ತೆಲುಗು ಚಿತ್ರಗಳು ಚಿತ್ರಮಂದಿರಗಳಲ್ಲಿ ಮುಗ್ಗರಿಸಿದರೂ ಒಟಿಟಿ ವೇದಿಕೆಯಲ್ಲಿ ಅವಕಾಶ ಪಡೆದು ಕನಿಷ್ಠ ಪಕ್ಷ ಹಾಕಿದ ಬಂಡವಾಳಕ್ಕೆ ಮೋಸವಾಗುತ್ತಿಲ್ಲ. ಆದರೆ ಕನ್ನಡ ಸಿನೆಮಾಗಳ ಪರಿಸ್ಥಿತಿ ಭಿನ್ನವಾಗಿದೆ. ಬಹುಪಾಲು ಕನ್ನಡ ಸಿನೆಮಾಗಳನ್ನು ಯಾವ ಒಟಿಟಿ ವೇದಿಕೆಯವರೂ ಖರೀದಿಸಲು ಮುಂದೆ ಬರುತ್ತಿಲ್ಲ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳನ್ನೂ ಒಟಿಟಿಯವರು ಕ್ಯಾರೇ ಎನ್ನುತ್ತಿಲ್ಲ.
ಕಳೆದ ವರ್ಷ ಕನ್ನಡ ಚಿತ್ರರಂಗದ ಕೆಲವರು ಹತಾಶರಾಗಿ ಚಿತ್ರರಂಗದ ಕೆಟ್ಟ ಸ್ಥಿತಿ ಸುಧಾರಿಸಲೆಂದು ಪ್ರಾರ್ಥಿಸಿ ಹೋಮ ಹವನ ಮಾಡಿಸಿದರು. ಇಂಥ ಸಂದಿಗ್ಧ ಸ್ಥಿತಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ‘ಸು ಫ್ರಮ್ ಸೋ’ ಸಿನೆಮಾ ನೂರಾ ಹದಿನೈದು ಕೋಟಿಗೂ ಮೀರಿ ಹಣ ಗಳಿಸಿದ್ದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಮೂವತ್ತೊಂದು ದಿನಗಳಲ್ಲಿ ಈ ಪ್ರಮಾಣದ ಲಾಭ ಮಾಡಿದ ಸಿನೆಮಾ ಕನ್ನಡ ಚಿತ್ರರಂಗದ ದಿಗ್ಗಜರಿಗೆ ಹಲವು ಪಾಠಗಳನ್ನು ಕಲಿಸಿದೆ. ಒಂದು ಚಲನಚಿತ್ರದ ಯಶಸ್ಸಿಗೆ ಅತ್ಯಂತ ಜನಪ್ರಿಯ ನಟ-ನಟಿಯರ ಅಗತ್ಯವಿಲ್ಲ ಎಂಬುದನ್ನು ಈ ಸಿನೆಮಾ ಸಿದ್ಧ ಮಾಡಿದೆ. ಭಾರೀ ಬಂಡವಾಳ, ಟಿ.ವಿ.ಗಳಲ್ಲಿ ದುಬಾರಿ ಪ್ರಮೋಷನ್ ಇಲ್ಲದೆಯೂ ಒಂದು ಸಿನೆಮಾ ಜನಮನವನ್ನು ಆಕರ್ಷಿಸಬಲ್ಲದು ಎಂಬುದು ‘ಸು ಫ್ರಮ್ ಸೋ’ ಸಿನೆಮಾದಿಂದ ಸಾಬೀತಾಗಿದೆ.
ಹಾಗೆ ನೋಡಿದರೆ ರಾಜ್ ಬಿ. ಶೆಟ್ಟಿ ಮಾತ್ರ ಈ ಸಿನೆಮಾದಲ್ಲಿರುವ ಏಕೈಕ ಚಿರಪರಿಚಿತ ನಟ. ‘ಒಂದು ಮೊಟ್ಟೆಯ ಕತೆ’, ‘ಗರುಡ ಗಮನ ವೃಷಭ ವಾಹನ’ ಮುಂತಾದ ಚಲನಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ತಕ್ಕ ಮಟ್ಟಿಗೆ ಪರಿಚಯವಿರುವ ರಾಜ್ ಬಿ. ಶೆಟ್ಟಿ ಇನ್ನೂ ಬೆಳೆಯುತ್ತಿರುವ ಪ್ರತಿಭಾವಂತ ನಟ. ಅತ್ಯುತ್ತಮ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ಸ್ಟಾರ್‌ಗಿರಿಯ ಭಾರ ಹೊತ್ತವರಲ್ಲ. ಹೆಸರಾಂತ ನಟ-ನಟಿಯರು, ಚಿರಪರಿಚಿತ ಕಲಾವಿದರು ಪಾತ್ರವರ್ಗದಲ್ಲಿರುವ ಹಲವು ಸಿನೆಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋಲುತ್ತಿರುವ ಈ ದುರಿತ ಕಾಲದಲ್ಲಿ ‘ಸು ಫ್ರಮ್ ಸೋ’ ದಾಖಲೆಯ ಗೆಲುವು ದಕ್ಕಿಸಿಕೊಂಡಿದ್ದು ದಿಗ್ಗಜರನ್ನು ಬೆರಗುಗೊಳಿಸಿದೆ. ರಾಜ್ ಬಿ. ಶೆಟ್ಟಿ, ರವಿ ರೈ ಕಳಸ ಮತ್ತು ಶಶಿಧರ್ ಶೆಟ್ಟಿ ಬರೋಡ ಸೇರಿ ನಿರ್ಮಾಣ ಮಾಡಿರುವ ಈ ಚಲನಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ಹೊಸಬರಾಗಿರುವ ಜೆ.ಪಿ. ತುಮಿನಾಡ್ ನಿರ್ದೇಸಿದ್ದಾರೆ. ಕಥೆ, ಚಿತ್ರ ಕಥೆ, ಸಂಭಾಷಣೆ ಎಲ್ಲವೂ ಜೆ.ಪಿ. ತುಮಿನಾಡ್ ಅವರದು ಎಂದು ಹೇಳಿಕೊಂಡರೂ ರಾಜ್ ಬಿ. ಶೆಟ್ಟಿಯವರ ಕ್ರಿಯಾಶೀಲತೆ ಮಹತ್ವದ ಪಾತ್ರ ವಹಿಸಿದ್ದು ಚಿತ್ರದ ಎಲ್ಲ ಹಂತದಲ್ಲೂ ಎದ್ದು ಕಾಣುತ್ತದೆ. ‘ಸು ಫ್ರಮ್ ಸೋ’ ಸಿನೆಮಾ ತಂಡದಲ್ಲಿ ಚಿತ್ರರಂಗದ ಒಳ ಹೊರಗು ಗೊತ್ತಿರುವುದು ರಾಜ್ ಬಿ. ಶೆಟ್ಟಿಯವರಿಗೆ ಮಾತ್ರ. ರವಿಯಣ್ಣನ ಪಾತ್ರದಾರಿ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್ ಸೇರಿ ಬೆರಳೆಣಿಕೆಯ ಕಲಾವಿದರು ಚಿತ್ರರಂಗದೊಂದಿಗೆ ಗುರುತಿಸಿಕೊಂಡವರು. ಉಳಿದವರು ಹೊಸಬರು. ಆದರೆ ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕನ್ನಡ ರಂಗಭೂಮಿಯ ಅತಿಹೆಚ್ಚು ಜನ ಪ್ರತಿಭಾವಂತ ಕಲಾವಿದರನ್ನು ಬಳಸಿಕೊಂಡ ಏಕೈಕ ಕನ್ನಡ ಚಲನಚಿತ್ರ ಇದೊಂದೇ ಇರಬೇಕು. ಸಂಧ್ಯಾ ಅರಕೆರೆ, ದೀಪಕ್ ರೈ, ಮೈಮ್ ರಾಮದಾಸ್, ಪುಷ್ಪ ರಾಜ್ ಬೋಳಾರ್, ಮಮತಾಶೆಟ್ಟಿ, ಮನೀಶ್ ಶೆಟ್ಟಿ, ಪ್ರಕೃತಿ ಅಮೀನ್ ಮುಂತಾದವರು ಕನ್ನಡ ಚಿತ್ರರಂಗಕ್ಕೆ ಹೊಸಬರಾಗಿರಬಹುದು. ಆದರೆ ನಟನೆಗೆ ಹೊಸಬರಲ್ಲ ಎನ್ನುವುದನ್ನು ಸಿನೆಮಾದುದ್ದಕ್ಕೂ ರುಜುವಾತು ಪಡಿಸಿದ್ದಾರೆ. ನಟನಾ ಕೌಶಲ್ಯ ಗೊತ್ತಿರುವ ಪಳಗಿದ ಕಲಾವಿದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಷ್ಟು ದಿನ ಅವರಿಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿರಲಿಲ್ಲ ಅಷ್ಟೇ.
ಕನ್ನಡ ಚಿತ್ರರಂಗದ ಬಹುಪಾಲು ಹಿರಿಯ ಕಲಾವಿದರು ನಟನೆಯ ಪಾಠಗಳನ್ನು ಕಲಿತಿದ್ದೇ ರಂಗಭೂಮಿಯಲ್ಲಿ. ಕೆಲವರು ವೃತ್ತಿರಂಗಭೂಮಿಯಲ್ಲಿ ನಟನಾ ಕಲೆ ಕಲಿತಿದ್ದರೆ, ಇನ್ನೂ ಕೆಲವರು ಹವ್ಯಾಸಿ ತಂಡಗಳಲ್ಲಿ ರಂಗ ಶಿಕ್ಷಣ ದಕ್ಕಿಸಿಕೊಂಡಿದ್ದಾರೆ. ನಟನೆಯ ಪಾಠಗಳನ್ನು ಎಲ್ಲೂ ಕಲಿಯದೇ ಚಿತ್ರರಂಗದಲ್ಲಿ ನೆಲೆ ನಿಂತವರು ಇದ್ದಾರೆ. ರಾಷ್ಟ್ರಮಟ್ಟದಲ್ಲಿ ನಟನೆಯ ಪಾಠಗಳನ್ನು ಕಲಿಸಿಕೊಡುವ ರಾಷ್ಟ್ರೀಯ ನಾಟಕ ಶಾಲೆ, ಪುಣೆ ಫಿಲಂ ಇನ್‌ಸ್ಟಿಟ್ಯೂಟ್ ಇವೆ. ಆದರೆ ಕನ್ನಡದಲ್ಲಿ ನಟನೆಯ ಪಾಠಗಳನ್ನು ಹೇಳಿಕೊಡುವ ಹೆಸರಾಂತ ವೃತ್ತಿಪರ ಸಂಸ್ಥೆಗಳು ಇಲ್ಲ.
ವರನಟ ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುಪಾಲು ಕಲಾವಿದರು ರಂಗಭೂಮಿಯಿಂದಲೇ ಬಂದವರು. ಆರಂಭ ಕಾಲದ ನಟ-ನಟಿಯರ ತರಬೇತಿ ಕೇಂದ್ರ ವೃತ್ತಿರಂಗಭೂಮಿಯ ಹೆಸರಾಂತ ನಾಟಕ ಕಂಪೆನಿಗಳೇ ಆಗಿದ್ದವು. ಗುಬ್ಬಿ ವೀರಣ್ಣನವರ ಗುಬ್ಬಿ ನಾಟಕ ಕಂಪೆನಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ಕಲಾವಿದರಿಗೆ ನಟನಾ ಕೌಶಲ್ಯ ಕಲಿಸಿದ ನಾಟಕ ಶಾಲೆಯಂತಿತ್ತು. ಶಂಕರ್‌ನಾಗ್, ಅನಂತ್‌ನಾಗ್ ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ಮರಾಠಿ ರಂಗಭೂಮಿಯಲ್ಲಿ ಹೆಸರು ಮಾಡಿದ್ದರು. ವಿಷ್ಣುವರ್ಧನ್, ಸಿ. ಆರ್. ಸಿಂಹ, ಶ್ರೀನಾಥ್, ನರಸಿಂಹ ರಾಜು, ಜಯಂತಿ, ಲೀಲಾವತಿ, ಮುಸುರಿ ಕೃಷ್ಣಮೂರ್ತಿ, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಗಂಗಾಧರ್ ಮುಂತಾದವರು ರಂಗಭೂಮಿಯಲ್ಲೇ ಬಣ್ಣ ಹಚ್ಚಿ ನಟರು ಎನಿಸಿಕೊಂಡವರು. ರಂಗಭೂಮಿಯಲ್ಲಿ ನಟನಾ ಕೌಶಲ್ಯ ಕಲಿತು ಕನ್ನಡ ಚಲನಚಿತ್ರ ರಂಗದಲ್ಲಿ ನಟರಾಗಿ ಬೆಳೆದ ಕಲಾವಿದರ ಬಹು ದೊಡ್ಡ ಪಡೆಯೇ ಇದೆ. ಟಿ.ಎಸ್.ನಾಗಾಭರಣ, ಉಮಾಶ್ರೀ, ಚರಣ್ ರಾಜ್, ಪ್ರಕಾಶ್ ರಾಜ್, ರಾಮಕೃಷ್ಣ, ಉಮೇಶ್, ಶ್ರೀಧರ್, ರಮೇಶ್ ಭಟ್, ಅರುಂಧತಿ ನಾಗ್, ರಂಗಾಯಣ ರಘು, ಮಂಡ್ಯ ರಮೇಶ್, ಯಶ್, ಡಾಲಿ ಧನಂಜಯ ಸೇರಿ ಹಲವರು ಕನ್ನಡ ರಂಗಭೂಮಿಯಲ್ಲಿ ತರಬೇತಿ ಪಡೆದು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ರಂಗಭೂಮಿ ಪ್ರತಿಯೊಬ್ಬ ನಟನಿಗೆ ತರಬೇತಿ ನೀಡುವ ರಂಗ ಶಾಲೆಯೇ ಆಗಿತ್ತು. ಅವಕಾಶ ಸಿಕ್ಕವರು ಚಿತ್ರರಂಗದಲ್ಲಿ ಬೆಳೆದರು ಮತ್ತು ಹೆಸರು ಮಾಡಿದರು. ಆಗ ರಂಗಭೂಮಿಯ ಬಹುತೇಕ ಕಲಾವಿದರನ್ನು ಕನ್ನಡ ಚಿತ್ರರಂಗ ಬಳಸಿಕೊಂಡಿತ್ತು. ಕೆಲವರು ಹೊಟ್ಟೆಪಾಡಿಗಾಗಿ ಚಿತ್ರರಂಗ ಮತ್ತು ರಂಗಭೂಮಿ ಎರಡೂ ಕಡೆಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು. ಸುಂದರ ಕೃಷ್ಣ ರಾಜ್ ಅರಸ್, ಧೀರೇಂದ್ರ ಗೋಪಾಲ್, ವಜ್ರಮುನಿ, ಸುಧೀರ್ ಮುಂತಾದವರು ಮೂಲತಃ ರಂಗಭೂಮಿಯ ಕಲಾವಿದರು. ಚಿಂದೋಡಿ ಲೀಲಾ, ಉಮಾಶ್ರೀ, ಸುಧೀರ್, ಮಾಲತಿ ಸುಧೀರ್ ಮುಂತಾದವರು ಉತ್ತರ ಕರ್ನಾಟಕದ ವೃತ್ತಿ ಕಂಪೆನಿಗಳಲ್ಲಿ ಬೇಡಿಕೆಯ ನಟರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರರಂಗದ ನಡುವೆ ಅವಿನಾಭಾವ ಸಂಬಂಧ ಇತ್ತು. ಇದು ಕನ್ನಡ ಚಿತ್ರರಂಗಕ್ಕೆ ಸೀಮಿತವಾದ ವಿದ್ಯಮಾನವಲ್ಲ. ದಕ್ಷಿಣ ಭಾರತದ ಬಹುಪಾಲು ನಟರು ತಮ್ಮ ನಟನಾ ಪ್ರತಿಭೆಯನ್ನು ಮೊದಲು ಪ್ರದರ್ಶನ ಮಾಡಿದ್ದೇ ರಂಗಭೂಮಿಯಲ್ಲಿ. ಹಿಂದಿಯ ಪ್ರತಿಭಾವಂತ ನಟರಾದ ಶಬಾನಾ ಆಝ್ಮಿ, ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಶಾ, ಶ್ರೀರಾಮ್ ಲಾಗೂ, ಓಂ ಪುರಿ, ಉತ್ಪಲ್ ದತ್ತ, ಇರ್ಫಾನ್ ಖಾನ್, ಅಮೋಲ್ ಪಾಲೇಕರ್ ಸೇರಿ ಹಲವರು ರಂಗಭೂಮಿಯ ಮೂಲಕ ಚಿತ್ರರಂಗದಲ್ಲಿ ನೆಲೆ ನಿಂತವರು. ಆಗ ಕನ್ನಡ, ಬೆಂಗಾಲಿ, ಮರಾಠಿ ರಂಗಭೂಮಿ ಜನಪ್ರಿಯ ತುತ್ತತುದಿಯಲ್ಲಿ ಇದ್ದ ಕಾಲ. ಮೈಸೂರು ರಂಗಾಯಣದ ಸ್ಥಾಪಕ ನಿರ್ದೇಶಕ ಬಿ. ವಿ. ಕಾರಂತರು ರಂಗಭೂಮಿ ಮತ್ತು ಚಲನಚಿತ್ರರಂಗದ ಕೊಂಡಿಯಂತಿದ್ದರು. ಅವರು ಅತ್ಯುತ್ತಮ ನಾಟಕಗಳನ್ನು ನಿರ್ದೇಶಿಸಿದಂತೆ ನೆನಪಿನಲ್ಲಿಡುವ ಚಲನಚಿತ್ರಗಳನ್ನು ಕೊಟ್ಟಿದ್ದಾರೆ. ಪ್ರಯೋಗ ಶೀಲರಾಗಿದ್ದ ಬಿ.ವಿ. ಕಾರಂತರು ಕಲಾತ್ಮಕ ಸಿನೆಮಾ ಹೆಸರಿನಲ್ಲಿ ಯಾರೂ ನೋಡದ ಚಿತ್ರಗಳನ್ನು ಕೊಡುವವರ ಪರವಾಗಿರಲಿಲ್ಲ. ಒಂದು ಅತ್ಯುತ್ತಮ ಚಲನಚಿತ್ರ ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ ಸಮಾಜದಲ್ಲಿ ಸೂಕ್ಷ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತದೆ ಎಂಬುದರಲ್ಲಿ ಆಗಿನ ಚಿತ್ರರಂಗದ ಎಲ್ಲರಿಗೂ ನಂಬಿಕೆ ಇತ್ತು.
ಡಾ. ರಾಜ್‌ಕುಮಾರ್ ಕನ್ನಡ ರಂಗಭೂಮಿಯ ಮೂಸೆಯಲ್ಲಿ ರೂಪುಗೊಂಡ ಶ್ರೇಷ್ಠ ನಟ. ಅತ್ಯಂತ ಜನಪ್ರಿಯ ಮತ್ತು ಸ್ಟಾರ್‌ಗಿರಿಯ ಉತ್ತುಂಗದಲ್ಲಿ ಇದ್ದಾಗಲೂ ಅವರು ಕಲೆಯ ಸೂಕ್ಷ್ಮಗಳನ್ನು ಮರೆತಿರಲಿಲ್ಲ. ಕಲಾವಿದ ಮೊದಲು, ಸ್ಟಾರ್‌ಗಿರಿ ನಂತರ ಎಂಬ ಘನವಾದ ತತ್ವದಲ್ಲಿ ಅಚಲ ನಂಬಿಕೆ ಇರಿಸಿದ್ದರಿಂದಲೇ ಡಾ. ರಾಜ್‌ಕುಮಾರ್ ಬದುಕಿನ ಕೊನೆಯ ದಿನಗಳಲ್ಲೂ ಮಹತ್ವ ಉಳಿಸಿಕೊಂಡಿದ್ದರು.
ಡಾ. ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಶಂಕರ್‌ನಾಗ್, ಅನಂತ್‌ನಾಗ್ ಮುಂತಾದವರ ಯಶಸ್ಸಿನ ಗುಟ್ಟೇ ಕಲೆಯ ಬಗೆಗಿನ ಅವರ ಶ್ರದ್ಧೆ ಮತ್ತು ನಿಷ್ಠೆಯಲ್ಲಿ ಅಡಗಿತ್ತು.
ಡಾ. ರಾಜ್‌ಕುಮಾರ್ ಮತ್ತವರ ಚಿತ್ರತಂಡ ನೂರಾರು ವೈವಿಧ್ಯಮಯ ಚಲನಚಿತ್ರಗಳನ್ನು ಸಿದ್ಧಪಡಿಸಿದ್ದರು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಹಾಗೂ ಪತ್ತೇದಾರಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಸಿನೆಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ ಡಾ. ರಾಜ್‌ಕುಮಾರ್ ಸ್ಟಾರ್‌ಗಿರಿ ಮರೆಸುವಷ್ಟು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಶ್ರೀಕೃಷ್ಣ ದೇವರಾಯ, ಮಯೂರ, ಬಭ್ರುವಾಹನ, ಮೂರುವರೆ ವಜ್ರಗಳು, ಎರಡು ಕನಸು, ಬಂಗಾರದ ಮನುಷ್ಯ, ಕವಿರತ್ನ ಕಾಳಿದಾಸ, ನಾನೊಬ್ಬ ಕಳ್ಳ, ತಾಯಿಗೆ ತಕ್ಕ ಮಗ, ಶಂಕರ್ ಗುರು, ಹುಲಿಯ ಹಾಲಿನ ಮೇವು.. ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದರೂ ಕಲಾವಿದ ಡಾ. ರಾಜ್‌ಕುಮಾರ್ ಕತೆಗೆ, ಪಾತ್ರಕ್ಕೆ, ಸನ್ನಿವೇಶಕ್ಕೆ ಜೀವ ತುಂಬುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.
ಹಾಗೆ ನೋಡಿದರೆ ಡಾ. ರಾಜ್ ಕುಮಾರ್ ಅವರನ್ನು ಹೀರೋ ಆಗಿ ರೂಪಿಸಿದ್ದೇ ಅತ್ಯುತ್ತಮ ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳು. ಹಾಗಾಗಿಯೇ ಡಾ. ರಾಜ್ ಕುಮಾರ್, ಅವರ ಸಹೋದರ ವರದಪ್ಪ, ನಿರ್ದೇಶಕ ದೊರೆ ಭಗವಾನ್, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಕತೆಗೆ ಮೊದಲ ಆದ್ಯತೆ ನೀಡುತ್ತಿದ್ದರು. ಬಂಗಾರದ ಮನುಷ್ಯ ಸಿನೆಮಾ ಕತೆಯ ಕಾರಣಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಯಶಸ್ಸು ಗಳಿಸಿತ್ತು. ಡಾ. ರಾಜ್‌ಕುಮಾರ್ ಅವರ ಅಭಿನಯ ಕತೆಗೆ ಮತ್ತಷ್ಟು ಬಲ ನೀಡುವಂತಿತ್ತು.
ಡಾ. ರಾಜ್‌ಕುಮಾರ್ ಅಭಿನಯಿಸಿದ ಎಲ್ಲ ಸಿನೆಮಾಗಳು ಹಣ ಗಳಿಕೆಯಲ್ಲಿ ಸೂಪರ್ ಹಿಟ್ ಎಂದು ಹೇಳಲಾಗದು. ಆದರೆ ಅವರ ಯಾವ ಸಿನೆಮಾವೂ ಒಂದು ಸಿದ್ಧ ಸೂತ್ರಕ್ಕೆ ಕಟ್ಟು ಬಿದ್ದು ಅತ್ಯಂತ ಕಳಪೆ ಎನಿಸಿಕೊಂಡು ತಿರಸ್ಕಾರಕ್ಕೆ ಗುರಿಯಾಗಿಲ್ಲ. ಡಾ. ರಾಜ್‌ಕುಮಾರ್ ಅತ್ಯುತ್ತಮ ನಟರು ಮಾತ್ರವಲ್ಲ ಅತ್ಯುತ್ತಮ ಗಾಯಕರಾಗಿದ್ದರು. ಚಿ. ಉದಯಶಂಕರ್ ಅವರ ಅತ್ಯುತ್ತಮ ಗೀತೆಗಳಿಗೆ ಜೀವ ತುಂಬಿ ಈ ಹೊತ್ತಿಗೂ ಕೇಳಬೇಕು ಎನ್ನಿಸುವ ಶ್ರೇಷ್ಠ ಹಾಡುಗಳನ್ನು ಕೊಟ್ಟ ಕೀರ್ತಿ ಅವರದು. ಡಾ. ರಾಜ್‌ಕುಮಾರ್ ಅವರಿಗೆ ಕಲೆಯ ಮೇಲೆ ಅದೆಷ್ಟು ಪ್ರೀತಿ ಮತ್ತು ಶ್ರದ್ದೆ ಇತ್ತೆಂದರೆ, ಕವಿರತ್ನ ಕಾಳಿದಾಸ ಚಿತ್ರದ ‘ಮಾಣಿಕ್ಯ..’ಹಾಡು ಸಾಕ್ಷಿ. ಅವರ ಬದಲಿಗೆ ಬೇರೆ ಯಾರೇ ಹಾಡಿದ್ದರೂ ಆ ಹಾಡಿಗೆ ಈ ಮಟ್ಟದ ಭಾವಪೂರ್ಣತೆ ದಕ್ಕುತ್ತಿರಲಿಲ್ಲ.
ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಿನೆಮಾಗಳು ಜನಮನ ಸೂರೆಗೊಳ್ಳಲು ಪ್ರಮುಖ ಕಾರಣ ವಿಶಿಷ್ಟವಾದ ಕತೆ, ಚಿತ್ರ ಕತೆ, ಸಂಭಾಷಣೆ, ಹಾಡುಗಳು. ಜೊತೆಗೆ ಪ್ರತಿಭಾವಂತ ನಂತರ ಅಭಿನಯ ಸಾಮರ್ಥ್ಯ. ಮೇಯರ್ ಮುತ್ತಣ್ಣ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಸಿನೆಮಾಗಳು ಚರಿತ್ರೆ ನಿರ್ಮಿಸಿದ್ದು ಅತ್ಯುತ್ತಮ ಕತೆ, ಅಭಿನಯ ಮತ್ತು ನವರಸಗಳ ಸಮಯೋಚಿತ ಮಿಶ್ರಣದಿಂದ.
ಪುಟ್ಟಣ್ಣ ಕಣಗಾಲ್ ಅವರ ಸಿನೆಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಪಡೆದಿರಲಿಕ್ಕಿಲ್ಲ. ಆದರೆ ಹಾಕಿದ ಬಂಡವಾಳಕ್ಕೆ ಮೋಸವಂತೂ ಆಗುತ್ತಿರಲಿಲ್ಲ. ಪುಟ್ಟಣ್ಣ ಕಣಗಾಲ್ ಅವರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ರಿಸ್ಕ್ ತೆಗೆದುಕೊಳ್ಳುತ್ತಿದ್ದರು. ಕತೆಯನ್ನು ಸಿನೆಮಾದ ಆತ್ಮ ಎಂದು ಭಾವಿಸಿದ್ದರು. ಸಾಧ್ಯವಾದರೆ ಕಾದಂಬರಿಗಳನ್ನು ಆಧರಿಸಿ ಚಲನಚಿತ್ರಗಳನ್ನು ರೂಪಿಸುತ್ತಿದ್ದರು. ಹೊಸ ನಟ ನಟಿಯರು ಮಾತ್ರವಲ್ಲ, ಹೊಸ ಗೀತ ರಚನೆಕಾರರನ್ನು, ಸಂಭಾಷಣೆ ಬರೆಯುವವರನ್ನು ಹುಡುಕುತ್ತಿದ್ದರು. ಹಾಗೆ ನೋಡಿದರೆ ಪುಟ್ಟಣ್ಣ ಕಣಗಾಲ್ ಅವರ ಸಿನೆಮಾಗಳ ಯಶಸ್ಸಿನ ಗುಟ್ಟೇ ಪ್ರತಿಭಾನ್ವೇಷಣೆಯಲ್ಲಿ ಇತ್ತು. ತ.ರಾ.ಸು. ಕಾದಂಬರಿ ಆಧಾರಿತ ನಾಗರ ಹಾವು ಸಿನೆಮಾ ಹೊಸಬರ ಸಂಗಮದಂತಿತ್ತು. ಕೆ.ಎಸ್. ಅಶ್ವಥ್, ಲೀಲಾವತಿಯವರನ್ನು ಹೊರತು ಪಡಿಸಿದರೆ ಆ ಸಿನೆಮಾದ ಎಲ್ಲ ಪಾತ್ರಧಾರಿಗಳು ಹೊಸಬರೇ. ವಿಷ್ಣುವರ್ಧನ್, ಆರತಿ, ಅಂಬರೀಷ್ ಆಗ ಖ್ಯಾತಿ ಪಡೆದ ಕಲಾವಿದರು ಎನಿಸಿಕೊಂಡಿರಲಿಲ್ಲ. ಕತೆ, ಚಿತ್ರಕತೆ, ಸಂಭಾಷಣೆ, ಹಾಡು, ಅಭಿನಯ ಅಷ್ಟು ಮಾತ್ರವಲ್ಲ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಕೂಡಾ ಹೊಸದಾಗಿತ್ತು. ಪ್ರೇಕ್ಷಕರು ಅದರಲ್ಲೂ ಕನ್ನಡ ಪ್ರೇಕ್ಷಕರು ಹೊಸ ಪ್ರಯೋಗಗಳಿಗೆ, ಹೊಸ ನಟ ನಟಿಯರಿಗೆ, ಗಾಯಕ ಗಾಯಕಿಯರಿಗೆ, ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಾರೆ ಎಂಬುದಕ್ಕೆ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳೇ ಸಾಕ್ಷಿ. ಕವಿ ಡಾ. ಸಿದ್ದಲಿಂಗಯ್ಯ ಅವರು ಮೊದಲು ಬರೆದ ‘ಗೆಳತಿ ಓ ಗೆಳತಿ’ ಹಾಡು ಪಟ್ಟಣ್ಣ ಕಣಗಾಲ್ ಅವರ ಸಿನೆಮಾಕ್ಕೆ ರಚನೆಯಾಗಿದ್ದು. ಪುಟ್ಟಣ್ಣ ಕಣಗಾಲ್ ಅವರ ಮಾನಸ ಸರೋವರ ಸಿನೆಮಾಕ್ಕೆ ಸಂಭಾಷಣೆ ಬರೆದವರು ಆಗಿನ ಹೊಸ ಪ್ರತಿಭೆ ಟಿ. ಎನ್. ಸೀತಾರಾಮ್ ಅವರು.
ನಾಗರ ಹಾವು, ರಂಗನಾಯಕಿ, ಅಮೃತ ಘಳಿಗೆ, ಮಾನಸ ಸರೋವರ ಮುಂತಾದ ಸಿನೆಮಾಗಳು ಹೊಸತನದ ಕಾರಣಕ್ಕೆ ಯಶಸ್ಸು ಪಡೆದಿದ್ದವು. ವಿಷ್ಣುವರ್ಧನ್, ರಾಮಕೃಷ್ಣ, ಶ್ರೀಧರ್, ಪದ್ಮಾ ವಾಸಂತಿ, ಅಂಬರೀಶ್ ಮುಂತಾದ ನಟ ನಟಿಯರು ಮೊದಲ ಪ್ರಯತ್ನದಲ್ಲೇ ಜನಪ್ರಿಯತೆ ಗಳಿಸಲು ಸಾಧ್ಯವಾದದ್ದು ಪುಟ್ಟಣ್ಣ ಕಣಗಾಲ್ ಅವರ ಪ್ರಯೋಗಶೀಲತೆಯಿಂದ.
ಕನ್ನಡದಲ್ಲಿ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್‌ನಾಗ್, ಅನಂತ್‌ನಾಗ್, ಲೋಕೇಶ್ ಮುಂತಾದವರು ಅಭಿನಯದ ಹೊಸತನದ ಕಾರಣಕ್ಕೆ ಜನಮಾನಸಕ್ಕೆ ಹತ್ತಿರವಾಗಿದ್ದು. ‘ನಂಜುಂಡಿ ಕಲ್ಯಾಣ’ ಸಿನೆಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಮಾಲಾಶ್ರೀ ಹೊಸಬರೇ. ಕತೆ, ಚಿತ್ರಕತೆ, ಸಂಭಾಷಣೆ, ಹಾಡುಗಳು ಭಿನ್ನವಾಗಿದ್ದರಿಂದಲೇ ಆ ಸಿನೆಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಸೃಷ್ಟಿಸಿತು. ‘ಮುಂಗಾರು ಮಳೆ’ಯ ಕತೆ, ನಿರೂಪಣೆ, ಸಂಭಾಷಣೆ ಮಾತ್ರವಲ್ಲ ನಟ ಗಣೇಶ್, ನಟಿ ಪೂಜಾ ಗಾಂಧಿ ಹೊಸಬರು. ಯೋಗರಾಜ್ ಭಟ್ಟರು ಅದಕ್ಕಿಂತಲೂ ಮುಂಚೆ ಸಿನೆಮಾ ನಿರ್ದೇಶಿಸಿದ್ದರೂ ಮುಂಗಾರು ಮಳೆಯ ಯಶಸ್ಸು ದೊರಕಿರಲಿಲ್ಲ. ಹೊಸತನ ಯೋಗರಾಜ್ ಭಟ್ಟರನ್ನು ಗೆಲ್ಲಿಸಿತ್ತು.
ಪ್ರೇಮ್ ಅವರ ‘ಜೋಗಿ’ ಹೊಸತನದ ಕಾರಣಕ್ಕೆ ದಾಖಲೆ ನಿರ್ಮಿಸಿತ್ತು. ಆದರೆ ಅದೇ ತರಹದ ಹತ್ತಾರು ಚಿತ್ರಗಳನ್ನು ಜನ ತಿರಸ್ಕರಿಸಿದ್ದರು. ಸೂರಿಯವರ ‘ದುನಿಯಾ’ ಹೊಸತನದ ಕಾರಣಕ್ಕೆ ಹಿಟ್ ಆಯಿತು. ಸಿದ್ದ ಸೂತ್ರಗಳಿಗೆ ಕಟ್ಟು ಬಿದ್ದು ಸಿನೆಮಾ ನಿರ್ಮಿಸಿದಾಗಲೆಲ್ಲ ಸೋಲು ನಿಶ್ಚಿತ ಎನ್ನುವಂತಾಗಿದೆ. ‘ಮೊಗ್ಗಿನ ಮನಸು’, ‘ಅಮೆರಿಕಾ ಅಮೆರಿಕಾ’, ‘ಅಮೃತ ಧಾರೆ’, ‘ಫಸ್ಟ್ ರಾಂಕ್ ರಾಜು’, ‘ಕಿರಿಕ್ ಪಾರ್ಟಿ’, ‘ಚಾರ್ಲಿ 777’, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸೇರಿದಂತೆ ಹೊಸಬರ ಪ್ರಯತ್ನಗಳನ್ನು ಕನ್ನಡದ ಪ್ರೇಕ್ಷಕರು ಗೆಲ್ಲಿಸಿದ್ದಾರೆ.
ಕನ್ನಡದಲ್ಲಿ ಅತ್ಯುತ್ತಮ ಕತೆ ಮತ್ತು ಕತೆಗಾರರಿಗೆ ಕೊರತೆಯಿಲ್ಲ. ಬರಹಗಾರರಿಗೆ, ನಟನಟಿಯರಿಗೂ ಬರವಿಲ್ಲ. ಅತ್ಯುತ್ತಮ ಗಾಯಕ ಗಾಯಕಿಯರು ನಮ್ಮಲ್ಲಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ್ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ, ಪುಟ್ಟರಾಜ ಗವಾಯಿಗಳು ರಾಜ ಮಾರ್ಗವನ್ನೇ ಸೃಷ್ಟಿಸಿದ್ದಾರೆ. ಕನ್ನಡ ರಂಗಭೂಮಿ ಸದಾ ಜೀವಂತವಾಗಿದೆ. ನಟ ನಟಿಯರನ್ನು ತಯಾರು ಮಾಡಲು ಪ್ರತ್ಯೇಕ ತರಬೇತಿ ಶಾಲೆಯ ಅಗತ್ಯವೇ ಇಲ್ಲ. ಕನ್ನಡ ಚಿತ್ರರಂಗ ದುಸ್ಥಿತಿಗೆ ತಲುಪಲು ನೆಲದ ಮರೆಯ ನಿಧಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಇರುವುದರಿಂದ. ಅತ್ಯುತ್ತಮ ಕತೆಗಳನ್ನು ಬರೆಯುವವರು ಸಾಕಷ್ಟಿದ್ದಾರೆ. ಪ್ರತಿಭಾವಂತ ಗಾಯಕ ಗಾಯಕಿಯರಿಗೆ ಅವಕಾಶ ನೀಡದೇ ಮುಂಬೈಯಿಂದ ಹಾಡುಗಾರರನ್ನು ಕರೆಸಿದ್ದರಿಂದಲೇ ದುರ್ಗತಿ ಎದುರಾಗಿದೆ. ಸಿದ್ಧ ಸೂತ್ರಗಳನ್ನು ತೊರೆದು ಹೊಸ ಕತೆ, ಹೊಸ ಬರಹಗಾರರು, ಹೊಸ ನಟರನ್ನು ಬಳಸಿಕೊಂಡು ಸಿನೆಮಾ ತಯಾರಿಸಿದರೆ ಪ್ರೇಕ್ಷಕರು ಕೈಬಿಡುವುದಿಲ್ಲ ಎಂಬುದಕ್ಕೆ ‘ಸು ಫ್ರಮ್ ಸೋ’ ಚಿತ್ರವೇ ಜ್ವಲಂತ ನಿದರ್ಶನ. ಸ್ವಂತಿಕೆಯ ಹುಡುಕಾಟದಲ್ಲಿ ಮಲಯಾಳಂ ಚಿತ್ರರಂಗ ಬಿಕ್ಕಟ್ಟಿನ ಸಂದರ್ಭದಲ್ಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಭಾರತೀಯ ಭಾಷೆಗಳಲ್ಲಿ ಕನ್ನಡ ಸಾಹಿತ್ಯ ಅಗ್ರಗಣ್ಯ ಸ್ಥಾನ ಪಡೆದಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡಿಗರದು. ಕನ್ನಡ ಚಿತ್ರರಂಗದ ಮಂದಿಗೆ ‘ಸು ಫ್ರಮ್ ಸೋ’ ಚಿತ್ರ ತಂಡಕ್ಕಿರುವ ಪ್ರತಿಭೆ ಮತ್ತು ಕೌಶಲ್ಯ ಇದ್ದರೆ ಸಾಕು. ರಾಜ್ ಬಿ. ಶೆಟ್ಟಿಯಷ್ಟು ಕನ್ನಡ ಸಾಹಿತ್ಯ, ಸಂಸ್ಕೃತಿಯ ಅರಿವು ಇದ್ದರೆ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಪ್ರೇಕ್ಷಕರ ಮನ ಗೆಲ್ಲಬಹುದು. ಕನ್ನಡ ಚಿತ್ರ ರಂಗ ಬೆಂಗಳೂರು ಚಿತ್ರರಂಗವಾಗದೆ ಸಮಸ್ತ ಕನ್ನಡದ ಪ್ರತಿಭೆಗಳ ಸಂಗಮವಾದರೆ ಅದರ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಪ್ರತಿಭಾನ್ವೇಷಣೆಯ ಕೊರತೆಯಿಂದ ಬಳಲುತ್ತಿದೆ. ಆ ಕೊರತೆ ನೀಗಿಸಿಕೊಂಡರೆ ಅದು ತನ್ನ ಮೊದಲಿನ ವೈಭವವನ್ನು ಮರು ಸಂಪಾದಿಸಬಹುದು. ‘ಸು ಫ್ರಮ್ ಸೋ’ ಚಿತ್ರ ತಂಡದ ಯಶಸ್ಸು ಕನ್ನಡ ಪ್ರತಿಭೆಗಳ ಯಶಸ್ಸು. ತಂಡವನ್ನು ಮನದುಂಬಿ ಅಭಿನಂದಿಸೋಣ.