ಕಲ್ಯಾಣ ಕರ್ನಾಟಕ ‘ಅಭಿವೃದ್ಧಿ’ ಯಾವಾಗ?

ಕಲ್ಯಾಣ ಕರ್ನಾಟಕವನ್ನು ಬೇರೆ ಯಾರೋ ಬಂದು ಉದ್ಧಾರ ಮಾಡುತ್ತಾರೆ ಎಂಬ ನಿರೀಕ್ಷೆಯೇ ತಪ್ಪು. ಕಲ್ಯಾಣ ಕರ್ನಾಟಕ ಭಾಗದ ಮಂತ್ರಿಗಳು, ಜನಪ್ರತಿನಿಧಿಗಳು ಈ ಭಾಗವನ್ನು ಅಭಿವೃದ್ಧಿ ಪಡಿಸಬೇಕು. ಪ್ರತೀ ವರ್ಷ ಐದು ಸಾವಿರ ಕೋಟಿ ಅನುದಾನ ಸಿಗುತ್ತಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೊಂದುತ್ತಿಲ್ಲವೆಂದರೆ ಆ ಭಾಗದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು, ಮಂತ್ರಿಗಳು ಹಣದ ವ್ಯಾಮೋಹ ತೊರೆದು ಅಭಿವೃದ್ಧಿ ಮಂತ್ರ ಜಪಿಸುವುದಿಲ್ಲವೋ ಅಲ್ಲಿಯವರೆಗೆ ಹಿಂದುಳಿದ ಹಣೆಪಟ್ಟಿಯಿಂದ ಬಿಡುಗಡೆಯಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳನ್ನು ಕಬಳಿಸಲು ಬಕ ಪಕ್ಷಿಯಂತೆ ಕಾದು ಕುಳಿತಿರುವಾಗ ನೈಜ ಅಭಿವೃದ್ಧಿ ಸಾಧ್ಯವೇ ಇಲ್ಲ. ಉತ್ತರದಾಯಿತ್ವ ಇರುವುದು ಕಲ್ಯಾಣ ಕರ್ನಾಟಕದ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ. ಅವರು ಮೊದಲು ಬಲವಾದ ಸಂಕಲ್ಪ ಮಾಡಿ ಮುಂದಡಿಯಿಡಬೇಕು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು ಹನ್ನೊಂದು ವರ್ಷಗಳು ಕಳೆದಿವೆ. ಅಭಿವೃದ್ಧಿ ಮಂಡಳಿ ಮೂಲಕ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗಿನಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತೀ ವರ್ಷಕ್ಕೆ ಐದು ಸಾವಿರ ಕೋಟಿ ಅನುದಾನ ನೀಡುತ್ತಿದ್ದಾರೆ. ಇಷ್ಟೆಲ್ಲ ಹಣ ಖರ್ಚಾಗಿಯೂ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳು ರಾಜ್ಯದ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಗೆ ಹೋಲಿಸಿದರೆ ಇನ್ನೂ ಹಿಂದುಳಿದಿವೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ ಸಿಂಗ್ ಪ್ರತಿನಿಧಿಸುವ ಜೇವರ್ಗಿ ವಿಧಾನಸಭಾ ಕ್ಷೇತ್ರ ಈಗಲೂ ಅತಿ ಹಿಂದುಳಿದ ತಾಲೂಕು ಎಂದೇ ಪರಿಗಣಿಸಲ್ಪಡುತ್ತಿದೆ. ಅತಿ ಹಿಂದುಳಿದ ವಿಧಾನಸಭಾ ಕ್ಷೇತ್ರಗಳು ಆ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಹೆಚ್ಚು ಅನುದಾನ ತಂದು ಕೊಡುವ ಕಾಮಧೇನುವಾಗಿ ಪರಿಣಮಿಸಿವೆ.
ಈ ಹಿಂದಿನ ಹೈದರಾಬಾದ್ ಕರ್ನಾಟಕ ಪ್ರದೇಶದ ಹಿಂದುಳಿಯುವಿಕೆ ಯನ್ನು ಪತ್ತೆ ಹಚ್ಚಲು ಮತ್ತು ಪ್ರಾದೇಶಿಕ ಆಸಮಾನತೆಯ ನಿವಾರಣೆಗೆ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅಂದಿನ ಸಿಎಂ ಎಸ್.ಎಂ. ಕೃಷ್ಣ ಅವರೇ ಸಮಿತಿ ರಚಿಸಿ ವರದಿಯನ್ನು ತರಿಸಿಕೊಂಡು ಸಚಿವ ಸಂಪುಟದಲ್ಲಿ ಮಂಡಿಸಿ ತಾತ್ವಿಕ ಅನುಮೋದನೆ ಪಡೆದುಕೊಂಡಿದ್ದರು. ಅತಿ ಹಿಂದುಳಿದ ತಾಲೂಕುಗಳು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ್ದವು. ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆಂದು ಎಂಟು ವರ್ಷಗಳ ಕಾಲ ಪ್ರತೀ ವರ್ಷ ಎರಡು ಸಾವಿರ ಕೋಟಿ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಒಟ್ಟು ಹದಿನಾರು ಸಾವಿರ ಕೋಟಿ ರೂ. ಅನುದಾನದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಯೋಜನೆ ಅದಾಗಿತ್ತು. ಸಂಪುಟ ದರ್ಜೆಯ ಸಚಿವ ಸ್ಥಾನಮಾನದ ಅಧ್ಯಕ್ಷರ ನೇತೃತ್ವದಲ್ಲಿ ಅನುಷ್ಠಾನ ಸಮಿತಿಯೊಂದನ್ನು ರಚಿಸಲಾಗಿತ್ತು. ಅಗತ್ಯದ ಅನುದಾನ ಒದಗಿಸಲಿಲ್ಲ ಮತ್ತು ಅನುದಾನವನ್ನು ಸಮರ್ಪಕವಾಗಿ ಬಳಕೆಯಾಗದಿರುವುದರಿಂದ ಎಸ್.ಎಂ. ಕೃಷ್ಣ ಅವರ ಕನಸಿನ ಕಾಲ ಮಿತಿ ಯೋಜನೆ ಸಾಕಾರಗೊಳ್ಳಲೇ ಇಲ್ಲ.
ಆಷ್ಟೊತ್ತಿಗೆ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕಾಗಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹೆಚ್ಚಾಯಿತು. ವೈಜನಾಥ್ ಪಾಟೀಲ್ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿತು. ಅದೇ ಸಮಯದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್ ನೇತೃತ್ವದ ಕೇಂದ್ರ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರ ಪ್ರಯತ್ನದ ಫಲವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಸಂವಿಧಾನದ 371ನೇ ಕಲಂ ತಿದ್ದುಪಡಿಯ ಮೂಲಕ ವಿಶೇಷ ಸ್ಥಾನಮಾನ ದೊರೆಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ದೊರೆಯತೊಡಗಿತು. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಹೈದರಾಬಾದ್ ಕರ್ನಾಟಕ ಪ್ರದೇಶದ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳಲ್ಲಿ ಪ್ರತಿಶತ 80ರಷ್ಟು, ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಪ್ರತಿಶತ 8ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರತಿಶತ 8ರಷ್ಟು ಮೀಸಲಾತಿ ಪಡೆಯಲಾಗುತ್ತಿಲ್ಲ.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತ ಮೇಲೆ ಅಭಿವೃದ್ಧಿ ಮಂಡಳಿಯೂ ಅಸ್ತಿತ್ವಕ್ಕೆ ಬಂತು. ಅಭಿವೃದ್ಧಿ ಮಂಡಳಿಯ ಅನುದಾನ ಪ್ರತೀ ವರ್ಷ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಿಜೆಪಿ ಸರಕಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಸರನ್ನು ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ಯೆಂದು ಮರು ನಾಮಕರಣ ಮಾಡಿತು. ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತೀ ವರ್ಷ ಸಾಕಷ್ಟು ಹಣ ಅನುದಾನ ನೀಡುತ್ತಿದ್ದಾರೆ.
ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಆದರೆ ನಿರೀಕ್ಷಿತ ಅಭಿವೃದ್ಧಿ ಸಾಧಿಸಲಾಗಿಲ್ಲ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದಿರುವಿಕೆಯನ್ನು ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ಗುರುತಿಸಲಾಗಿದೆ. ಅಭಿವೃದ್ಧಿ ಯೋಜನೆಗಳು ಆ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದರೆ ಇಷ್ಟೊತ್ತಿಗೆ ಅಭಿವೃದ್ಧಿಯ ಫಲಗಳು ಕಣ್ಣಿಗೆ ಗೋಚರಿಸುತ್ತಿದ್ದವು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಇಲ್ಲಿಯವರೆಗಿನ ಕಾರ್ಯ ವೈಖರಿಯ ಸಮರ್ಪಕ ಮೌಲ್ಯ ಮಾಪನ ನಡೆದರೆ ಸ್ಪಷ್ಟ ಮುನ್ನೋಟ ದೊರೆಯುತ್ತದೆ. ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳ ನಿಜ ಬಣ್ಣ ಬಯಲಾಗುತ್ತದೆ. ಸದ್ಯ ಲಭ್ಯ ಇರುವ ಲೆಕ್ಕ ಪತ್ರ ಪರಿಶೀಲಕರ ವರದಿಯೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕರ್ಮಕಾಂಡ ಪರಿಚಯಿಸುತ್ತದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಯೋಜನೆಗಳು ಒತ್ತಟ್ಟಿಗಿರಲಿ. ಅದು ಬಿಟ್ಟು ಕರ್ನಾಟಕ ಸರಕಾರದಲ್ಲಿ ಪ್ರಭಾವಿ ಖಾತೆಗಳ ಮಂತ್ರಿಯಾಗಿರುವ ಕಲ್ಯಾಣ ಕರ್ನಾಟಕದ ಸಚಿವರು ಕಳೆದ ಎರಡು ವರ್ಷಗಳಲ್ಲಿ ಆ ಭಾಗಕ್ಕೆ ತಮ್ಮ ಇಲಾಖೆಯ ಮೂಲಕ ನೀಡಿದ ಕೊಡುಗೆಯಾದರು ಏನು? ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂ ಸಿಂಗ್ ಅವರು ಮಂತ್ರಿಯಾಗಿದ್ದಾಗ ತಾವು ಹೊಂದಿರುವ ಇಲಾಖೆಗಳ ಹೆಚ್ಚು ಮತ್ತು ಮಹತ್ವದ ಯೋಜನೆಗಳು ಕಲ್ಯಾಣ ಕರ್ನಾಟಕದ ಭಾಗಕ್ಕೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ, ಪೊಲೀಸ್ ಅಕಾಡಮಿ, ಕರ್ನಾಟಕ ಹೈಕೋರ್ಟ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಮಹತ್ವದ ಯೋಜನೆಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ದೊರೆಯುವಂತೆ ಮಾಡಿದ್ದರು. ಪ್ರಲ್ಹಾದ ಜೋಶಿಯವರು ಕೇಂದ್ರದಲ್ಲಿ ಮಂತ್ರಿಯಾಗಿರುವ ಕಾರಣಕ್ಕೆ ರಾಯಚೂರಿಗೆ ಸಿಗಬೇಕಾಗಿದ್ದ ಐಐಟಿ ಧಾರವಾಡದ ಪಾಲಾಯಿತು. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗ ಕಲಬುರಗಿಗೆ ರೈಲ್ವೆ ವಿಭಾಗ ಬರುವಂತೆ ಮಾಡಿದ್ದರು. ಅವರೆಲ್ಲ ದೇಶಕ್ಕೆ, ರಾಜ್ಯಕ್ಕೆ ಮಂತ್ರಿಗಳಾಗಿದ್ದರೂ ತಮ್ಮ ಪ್ರದೇಶದ ಅಭಿವೃದ್ಧಿಗೆ ಏನಾದರೂ ಮಾಡಬೇಕೆಂಬ ತುಡಿತ ಇದ್ದೇ ಇರುತ್ತದೆ. ಇರಲೇಬೇಕು. ಹಾಗೆ ನೋಡಿದರೆ ಹಾಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದವರಿಗೆ ಮಹತ್ವದ ಮತ್ತು ಜನೋಪಯೋಗಿ ಖಾತೆಗಳು ದೊರೆತಿವೆ. ಪ್ರಿಯಾಂಕ್ ಖರ್ಗೆಯವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ -ಬಿಟಿಯಂಥ ಅತ್ಯಂತ ಮಹತ್ವದ ಖಾತೆಗಳಿಗೆ ಮಂತ್ರಿಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ಎಲ್ಲ ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ ಗ್ರಾಮಗಳನ್ನಾಗಿ ಮಾಡಬಹುದಿತ್ತು. ಈ ಹೊತ್ತಿಗೂ ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಬಯಲು ಶೌಚಾಲಯ ಅನಿವಾರ್ಯವಾಗಿದೆ. ವಿಶೇಷವಾಗಿ ಮಹಿಳೆಯರು ಕತ್ತಲೆಯಾಗುವವರೆಗೆ ತಡೆ ಹಿಡಿದುಕೊಂಡು ಸಂಜೆ ಮೇಲೆ ಬಯಲು ಶೌಚಾಲಯಕ್ಕೆ ಹೋಗು ತ್ತಾರೆ. ಅದೊಂದು ನರಕದ ಸ್ಥಿತಿ. ಎರಡು ವರ್ಷ ಗಳಲ್ಲಿ ವಿಶೇಷ ಕಾಳಜಿ ವಹಿಸಿದ್ದರೆ ಕಲ್ಯಾಣ ಕರ್ನಾಟಕದ ಹಳ್ಳಿಗಳ ಸ್ವರೂಪವೇ ಬದಲಿಸಬಹುದಿತ್ತು. ಕಲ್ಯಾಣ ಕರ್ನಾಟಕದ ಬಹುಪಾಲು ಕೃಷಿ ಕಾರ್ಮಿಕರು ಕೃಷಿ ಚಟುವಟಿಕೆ ಇಲ್ಲದಾಗ ಅಥವಾ ಉಪವಾಸ ಬೀಳುವ ಸಂದರ್ಭ ಒದಗಿದಾಗ ಉದ್ಯೋಗ ಅರಸಿ ಬೆಂಗಳೂರು, ಗೋವಾ, ಮುಂಬೈಯತ್ತ ಗುಳೆ ಹೋಗುತ್ತಾರೆ. ಯುವಕರು ಉದ್ಯೋಗ ಅರಸಿ ನಗರಗಳಿಗೆ ಹೋಗಿ ಒಂದೋ ಕಟ್ಟಡ ಕಾರ್ಮಿಕರಾಗುತ್ತಾರೆ, ಇಲ್ಲಾ ವಾಹನ ಚಾಲನೆ ಗೊತ್ತಿದ್ದರೆ ಕಡಿಮೆ ಸಂಬಳಕ್ಕೆ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಆ ಸಂಬಳದ ಹೆಚ್ಚಿನ ಪಾಲು ಮನೆ ಬಾಡಿಗೆಗೆ ಖರ್ಚು ಆಗುತ್ತದೆ. ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಹತ್ತು -ಹದಿನೈದು ಸಾವಿರ ಸಂಬಳ ಕಲ್ಯಾಣ ಕರ್ನಾಟಕದ ನಗರಗಳಲ್ಲೇ ದೊರೆತರೆ ನೆಮ್ಮದಿಯ ಬದುಕು ನಡೆಸುತ್ತಾರೆ. ಪ್ರತೀ ವರ್ಷ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಂದ ಹತ್ತಾರು ಸಾವಿರ ಇಂಜಿನಿಯರ್‌ಗಳು ಪದವಿ ಪಡೆದುಕೊಂಡು ಹೊರಬೀಳುತ್ತಾರೆ. ಅನಿವಾರ್ಯವಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಾರೆ. ಕೆಲವರಿಗೆ ಮಾತ್ರ ಉತ್ತಮ ಸಂಬಳದ ಉದ್ಯೋಗ ದೊರೆಯುತ್ತದೆ. ಉಳಿದವರಿಗೆ ಅತಿ ಕಡಿಮೆ ಸಂಬಳದ ಉದ್ಯೋಗ ಅನಿವಾರ್ಯವಾಗುತ್ತದೆ. ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ಕೌಶಲ್ಯ ಹೊಂದಿದವರಿಗೆ ಕಲಬುರಗಿ ಅಥವಾ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಉದ್ಯೋಗ ದೊರೆತರೆ ಅವರ ಕ್ರಿಯಾಶೀಲತೆಗೆ ಬಲ ನೀಡಿದಂತಾಗುತ್ತದೆ. ಪ್ರಿಯಾಂಕ್ ಖರ್ಗೆಯವರು ಐಟಿ-ಬಿಟಿ ಮಂತ್ರಿ, ಡಾ. ಶರಣಪ್ರಕಾಶ್ ಪಾಟೀಲ್ ಕೌಶಲ್ಯ ಅಭಿವೃದ್ಧಿ ಖಾತೆ ಹೊಂದಿದ್ದಾರೆ. ಕಲ್ಯಾಣ ಕರ್ನಾಟಕದ ನಿರುದ್ಯೋಗಿ ಯುವಕರಿಗೆ ವಿಶೇಷ ಯೋಜನೆ ರೂಪಿಸಿದರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಾರೆ. ಮಹಾತ್ಮಾ ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಪರಿಕಲ್ಪನೆ ಗ್ರಾಮ ಸ್ವರಾಜ್ಯವೇ ಆಗಿತ್ತು. ಪ್ರತಿಯೊಂದು ಗ್ರಾಮ ಘಟಕ ಸ್ವಾವಲಂಬಿಯಾಗಬೇಕೆಂದು ವಿಜ್ಞಾನ-ತಂತ್ರಜ್ಞಾನ ಬೆಳೆಯದ ಕಾಲದಲ್ಲಿ ಗಾಂಧೀಜಿಯವರು ಕನಸು ಕಂಡಿದ್ದರು.
ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿ ಡಾ. ಶರಣಪ್ರಕಾಶ್ ಪಾಟೀಲ್ ಅತ್ಯುತ್ತಮ ಗುಣಮಟ್ಟದ ಸರಕಾರಿ ಆಸ್ಪತ್ರೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತಿದ್ದಾರೆ. ಆದರೆ ಅತ್ಯುತ್ತಮ ಕಟ್ಟಡಗಳ ಜೊತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನಿಗಾ ವಹಿಸಬೇಕಿದೆ. ಕಲ್ಯಾಣ ಕರ್ನಾಟಕದ ಜನತೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಹುಡುಕಿ ಸೊಲ್ಲಾಪುರ, ಹೈದರಾಬಾದ್, ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ. ಕಲ್ಯಾಣ ಕರ್ನಾಟಕವು ಸೇರಿದಂತೆ, ದಲಿತ ಹಿಂದುಳಿದ ಸಮುದಾಯದ ಪ್ರತಿಭಾವಂತ ಮೆಡಿಕಲ್ ವಿದ್ಯಾರ್ಥಿಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತವೆ. ಡಾ. ಶರಣಪ್ರಕಾಶ್ ಪಾಟೀಲರು ಒಮ್ಮೆ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ ಮೆರಿಟ್ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿಯತ್ತ ಗಮನ ಹರಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಮಂತ್ರಿಯಾಗಿ ಮತ್ತಷ್ಟು ಅಪರೂಪದ ಯೋಜನೆಗಳನ್ನು ರೂಪಿಸಿದರೆ ನಿರುದ್ಯೋಗದ ಪ್ರಮಾಣ ಕಡಿಮೆಯಾಗುತ್ತದೆ.
ಬೀದರ್‌ನ ಈಶ್ವರ್ ಖಂಡ್ರೆಯವರು ಅರಣ್ಯ ಮತ್ತು ಪರಿಸರ ಖಾತೆಯ ಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ಮಂತ್ರಿಯಾದ ಮೊದಲ ದಿನದಿಂದಲೇ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹಸಿರು ಹೆಚ್ಚಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಆರಗ ಜ್ಞಾನೇಂದ್ರ ಅವರ ವಿಕೃತ ಟೀಕೆಗಳಿಗೆ ಸಮರ್ಪಕ ಉತ್ತರ ನೀಡಿದಂತಾಗುತ್ತಿತ್ತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಪರಿಸರ ಮಾಲಿನ್ಯದ ಸಮಸ್ಯೆ ಇದೆ. ಒಂದು ಕಾಲದಲ್ಲಿ ಬೀದರ್‌ನ ಕೊಳಾರ ಕೈಗಾರಿಕಾ ಪ್ರದೇಶ ಮಲಿನ ತ್ಯಾಜ್ಯಕ್ಕೆ ಹೆಸರು ವಾಸಿಯಾಗಿತ್ತು. ಸಿಮೆಂಟ್ ಕಾರ್ಖಾನೆಗಳು ಉಗುಳುವ ಹೊಗೆ ಸುತ್ತಲಿನ ಪ್ರದೇಶದ ಜನರ ಆರೋಗ್ಯ ನಾಶ ಮಾಡಿದೆ. ತಡವಾಗಿಯಾದರೂ ಈಶ್ವರ್ ಖಂಡ್ರೆಯವರು ಕಲಬುರಗಿಯಿಂದ ಹಸಿರು ಹಬ್ಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಇತರ ಸಹಜ ಕಾಡು ಪ್ರದೇಶ ಹೊರತು ಪಡಿಸಿದರೆ ಉಳಿದೆಡೆ ಹಸಿರು ಕಾಣಲು ಅರಣ್ಯ ಇಲಾಖೆ ಶಕ್ತಿ ಮೀರಿ ಶ್ರಮಿಸಿದೆ. ಈ ಹಿಂದೆ ಗುರುಪಾದಪ್ಪ ನಾಗಮಾರಪಲ್ಲಿ ಅರಣ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲ ಆಗಿರಲಿಲ್ಲ.
ಈಶ್ವರ್ ಖಂಡ್ರೆ ಅಪಾರ ತಿಳುವಳಿಕೆ ಉಳ್ಳವರು. ಇಂಜಿನಿಯರ್ ಪದವೀಧರರು. ಮನಸ್ಸು ಮಾಡಿದರೆ ಕಲ್ಯಾಣ ಕರ್ನಾಟಕದ ಚಿತ್ರಣವೇ ಬದಲಿಸಬಲ್ಲ ಸಾಮರ್ಥ್ಯ ಉಳ್ಳವರು. ಅರಣ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎನಿಸುವ ಕೆಲಸ ಮಾಡಿ ತೋರಿಸಲಿ. ಪೌರಾಡಳಿತ ಮತ್ತು ಹಜ್ ಖಾತೆಯ ಸಚಿವ ರಹೀಮ್ ಖಾನ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. ಕಲ್ಯಾಣ ಕರ್ನಾಟಕದ ಪುರಸಭೆ, ನಗರಸಭೆಗಳು ಅಕ್ಷರಶಃ ಭ್ರಷ್ಟಾಚಾರದ ಕೂಪ ಮತ್ತು ಅವ್ಯವಸ್ಥೆಯ ಆಗರಗಳಾಗಿವೆ. ರಹೀಮ್ ಖಾನ್ ಅವರು ಶ್ರದ್ಧೆ ವಹಿಸಿ ಕಾರ್ಯ ನಿರ್ವಹಿಸಿದರೆ ಕಲ್ಯಾಣ ಕರ್ನಾಟಕದ ಪೌರ ಸಂಸ್ಥೆಗಳ ಸ್ವರೂಪವೇ ಬದಲಿಸಬಹುದು.
ಯಾದಗಿರಿಯ ಶರಣಬಸಪ್ಪ ಪಾಟೀಲ್ ದರ್ಶನಾಪುರ ಸಣ್ಣ ಕೈಗಾರಿಕಾ ಮಂತ್ರಿಯಾಗಿದ್ದಾರೆ. ಈ ಹಿಂದೆ ಜೆ.ಎಚ್. ಪಟೇಲರ ಸಂಪುಟದಲ್ಲಿ ಇಂಧನ ಖಾತೆಯ ಮಂತ್ರಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದರು. ಸಣ್ಣ ಕೈಗಾರಿಕಾ ಸಚಿವರಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾದ ಕೆಲಸ ಮಾಡಬಹುದಾಗಿದೆ. ಇನ್ನು ಮುಂದೆ ದೇಶದ ಭವಿಷ್ಯ ರೂಪಿಸುವಲ್ಲಿ, ನಿರುದ್ಯೋಗ ನಿವಾರಣೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದು ಆಗಲಿದೆ. ಶರಣಬಸಪ್ಪ ದರ್ಶನಾಪುರ ಅವರು ಕಲ್ಯಾಣ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂಬುದು ಅವರೇ ಹೇಳಿಕೊಳ್ಳಬೇಕಿದೆ.
ರಾಯಚೂರಿನ ಎನ್.ಎಸ್. ಬೋಸರಾಜು ಸಣ್ಣ ನೀರಾವರಿ, ವಿಜ್ಞಾನ -ತಂತ್ರಜ್ಞಾನ ಸಚಿವರಾಗಿದ್ದಾರೆ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಳೆದ ಎರಡು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಸಣ್ಣ ನೀರಾವರಿ ಇಲಾಖೆಯ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಕ್ರಾಂತಿ ಮಾಡಬಹುದಾಗಿದೆ. ನಿಜಾಮರ ಕಾಲದಲ್ಲಿ ಅದೆಷ್ಟೋ ಕೆರೆ ಕಟ್ಟೆಗಳು ನಿರ್ಮಾಣವಾಗಿದ್ದವು. ಈಗ ಅವು ಹೂಳು ತುಂಬಿ ಹಾಳಾಗಿವೆ. ಬೃಹತ್ ನೀರಾವರಿಗಿಂತಲೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಣ್ಣ ನೀರಾವರಿಗೆ ಹೆಚ್ಚು ಅವಕಾಶಗಳಿವೆ. ಆಂಧ್ರ ಪ್ರದೇಶ ಈ ಹೊತ್ತು ಸಮೃದ್ಧ ರಾಜ್ಯವಾಗಿದ್ದು ಸಣ್ಣ ನೀರಾವರಿಯ ಸದ್ಬಳಕೆಯ ಕಾರಣಕ್ಕೆ. ವಿಜ್ಞಾನ-ತಂತ್ರಜ್ಞಾನ ಸಚಿವರೂ ಆಗಿರುವ ಬೋಸರಾಜು ಅವರು ತಾಲೂಕು ಮಟ್ಟದಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಬಹುದಾಗಿದೆ. ಹಳೆ ಮೈಸೂರು ಭಾಗಕ್ಕಿಂತಲೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಜ್ಞಾನ-ತಂತ್ರಜ್ಞಾನದ ಹೆಚ್ಚು ಕೆಲಸಗಳು ಆಗಬೇಕಿದೆ. ಸಮರ್ಪಕ ಕಾರ್ಯ ಯೋಜನೆ ರೂಪಿಸಿ ಕೆಲಸ ಶುರು ಮಾಡಿದ್ದರೆ ಅಭಿವೃದ್ಧಿಯ ಫಲಗಳು ಜನಸಾಮಾನ್ಯರಿಗೆ ಸಿಗುತ್ತಿದ್ದವು.
ಕೊಪ್ಪಳದ ಉಸ್ತುವಾರಿ ಮಂತ್ರಿಯೂ ಆಗಿರುವ ಶಿವರಾಜ್ ತಂಗಡಗಿ ಅವರಿಗೆ ಕಲ್ಯಾಣ ಕರ್ನಾಟಕದ ಅಭಿಮಾನವೇ ಇಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿಯಾಗಿರುವ ಶಿವರಾಜ್ ತಂಗಡಗಿ ಕಲ್ಯಾಣ ಕರ್ನಾಟಕಕ್ಕಿಂತಲೂ ಇಲಕಲ್ ಮೇಲಿನ ಅಭಿಮಾನ ತೋರಿಸಿದ್ದೇ ಹೆಚ್ಚು. ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಒಬ್ಬರನ್ನೂ ಪರಿಗಣಿಸಲಿಲ್ಲ. ಒಂದಷ್ಟು ಇಲಕಲ್ ಮಂದಿಗೆ ಅವಕಾಶ ಕೊಡಿಸಿದ್ದೇ ತಂಗಡಗಿ ಸಾಧನೆಯಾಯಿತು. ಹಳೆ ಮೈಸೂರು ಮತ್ತು ಮುಂಬೈ ಕರ್ನಾಟಕದಲ್ಲಿ ಹತ್ತಾರು ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿವೆ. ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳು ಸೇರಿ ಒಂದೇ ಒಂದು ಟ್ರಸ್ಟ್ ಪ್ರತಿಷ್ಠಾನ ಸ್ಥಾಪಿಸಿಲ್ಲ. ಹಿರಿಯ ಸಾಹಿತಿ ಡಾ. ಸಿದ್ದಯ್ಯ ಪುರಾಣಿಕರ ಹೆಸರಲ್ಲಿ ಸಾಹಿತ್ಯ ಟ್ರಸ್ಟ್ ಮಾಡುವುದಾಗಿ ಹೇಳಿ ಎರಡು ವರ್ಷ ಕಳೆಯಿತು. ಪೂರ್ಣ ಪ್ರಮಾಣದಲ್ಲಿ ಸಿದ್ದಯ್ಯ ಪುರಾಣಿಕ ಟ್ರಸ್ಟ್ ಅಸ್ತಿತ್ವಕ್ಕೆ ಬರಲೇ ಇಲ್ಲ. ಹಾಗೆ ನೋಡಿದರೆ ಕಲ್ಯಾಣ ಕರ್ನಾಟಕದಲ್ಲಿ ಹಿರಿಯ ಸಾಧಕರಿಗೇನು ಕೊರತೆಯಿಲ್ಲ. ನಾಡೋಜ ಡಾ. ಶಾಂತರಸರು, ನಾಡೋಜ ಡಾ. ಗೀತಾ ನಾಗಭೂಷಣರು ಮತ್ತು ಡಾ. ಚೆನ್ನಣ್ಣ ವಾಲೀಕಾರರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಲಾವಿದರಾದ ಪಂ. ಸಿದ್ದರಾಮ ಜಂಬಲದಿನ್ನಿ, ಎಸ್.ಎಂ. ಪಂಡಿತ್, ಶಂಕರಗೌಡ ಬೆಟ್ಟದೂರು, ಸಾತಲಿಂಗಪ್ಪ ದುಧನಿ ಮುಂತಾದವರು ಸಂಗೀತ ಮತ್ತು ಕಲಾಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಜೋಳದ ರಾಶಿ ದೊಡ್ಡನಗೌಡರು, ಸುಭದ್ರಮ್ಮ ಮನ್ಸೂರ್, ಮೂದೇನೂರು ಸಂಗಣ್ಣ, ಡಾ. ಷ. ಶೆಟ್ಟರ್ ಮುಂತಾದವರು ಕಲ್ಯಾಣ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಂಥವರ ಹೆಸರಲ್ಲಿ ಟ್ರಸ್ಟ್, ಪ್ರತಿಷ್ಠಾನ ಎಂದೋ ಸ್ಥಾಪಿಸಬೇಕಿತ್ತು. ಆದರೆ ಇಂತಹವರು ಈಗ ಗಣನೆಗೆ ಇಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿಯಾಗಿರುವ ತಂಗಡಗಿ ಒಮ್ಮೆಯೂ ಒಬಿಸಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದಂತಿಲ್ಲ.
ಕಲ್ಯಾಣ ಕರ್ನಾಟಕವನ್ನು ಬೇರೆ ಯಾರೋ ಬಂದು ಉದ್ಧಾರ ಮಾಡುತ್ತಾರೆ ಎಂಬ ನಿರೀಕ್ಷೆಯೇ ತಪ್ಪು. ಕಲ್ಯಾಣ ಕರ್ನಾಟಕ ಭಾಗದ ಮಂತ್ರಿಗಳು, ಜನಪ್ರತಿನಿಧಿಗಳು ಈ ಭಾಗವನ್ನು ಅಭಿವೃದ್ಧಿ ಪಡಿಸಬೇಕು. ಪ್ರತೀ ವರ್ಷ ಐದು ಸಾವಿರ ಕೋಟಿ ಅನುದಾನ ಸಿಗುತ್ತಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೊಂದುತ್ತಿಲ್ಲವೆಂದರೆ ಆ ಭಾಗದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು, ಮಂತ್ರಿಗಳು ಹಣದ ವ್ಯಾಮೋಹ ತೊರೆದು ಅಭಿವೃದ್ಧಿ ಮಂತ್ರ ಜಪಿಸುವುದಿಲ್ಲವೋ ಅಲ್ಲಿಯವರೆಗೆ ಹಿಂದುಳಿದ ಹಣೆಪಟ್ಟಿಯಿಂದ ಬಿಡುಗಡೆಯಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳನ್ನು ಕಬಳಿಸಲು ಬಕ ಪಕ್ಷಿಯಂತೆ ಕಾದು ಕುಳಿತಿರುವಾಗ ನೈಜ ಅಭಿವೃದ್ಧಿ ಸಾಧ್ಯವೇ ಇಲ್ಲ. ಉತ್ತರದಾಯಿತ್ವ ಇರುವುದು ಕಲ್ಯಾಣ ಕರ್ನಾಟಕದ ಎಲ್ಲ ಪಕ್ಷದ ಜನಪ್ರತಿನಿಧಿಗಳಿಗೆ. ಅವರು ಮೊದಲು ಬಲವಾದ ಸಂಕಲ್ಪ ಮಾಡಿ ಮುಂದಡಿಯಿಡಬೇಕು.