Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಒಳಮೀಸಲಾತಿ: ಸಾಮಾಜಿಕ ನ್ಯಾಯದ ವಿಸ್ತರಣೆ

ಒಳಮೀಸಲಾತಿ: ಸಾಮಾಜಿಕ ನ್ಯಾಯದ ವಿಸ್ತರಣೆ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ16 Aug 2025 11:27 AM IST
share
ಒಳಮೀಸಲಾತಿ: ಸಾಮಾಜಿಕ ನ್ಯಾಯದ ವಿಸ್ತರಣೆ

ಮೀಸಲಾತಿ-ಒಳಮೀಸಲಾತಿ, ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವ ಒಂದು ಆಯಾಮವಷ್ಟೇ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ ಬೆಳಕಿನ ಭಾವ ಮೂಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮಗೊಳ್ಳಬೇಕು. ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಗುವಂತಾಗಬೇಕು. ಉದ್ಯಮಶೀಲತೆ ಹೆಚ್ಚಾಗಬೇಕು. ಕಾರ್ಪೊರೇಟ್ ವಲಯದಲ್ಲೂ ಮೀಸಲಾತಿ ಪಡೆದುಕೊಳ್ಳುವಂತಾಗಬೇಕು. ಪರಿಶಿಷ್ಟ ಜಾತಿಗಳಲ್ಲಿನ ಎಲ್ಲ ಪ್ರಜ್ಞಾವಂತರು ಅವಕಾಶ ವಂಚಿತ ಸಮುದಾಯಗಳ ಪರ ನಿಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢ ಸಂಕಲ್ಪದೊಂದಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿಯನ್ನು ಒಪ್ಪಿಕೊಳ್ಳಬೇಕು.

ಸಾಮಾಜಿಕ ನ್ಯಾಯ ಪರಿಕಲ್ಪನೆ ಸ್ವಾತಂತ್ರ್ಯ ಪೂರ್ವ ಕಾಲದ್ದು. ಸಾಮಾಜಿಕ ನ್ಯಾಯ ಪರಿಕಲ್ಪನೆಯ ಭಾಗವಾಗಿಯೇ ಮೀಸಲಾತಿ ಕಲ್ಪಿಸುವ ವಿಚಾರ ಹುಟ್ಟಿಕೊಂಡಿದ್ದು. ಜಾತೀಯತೆ ಭಾರತೀಯ ಮನಸ್ಸುಗಳಿಗೆ ಅಂಟಿದ ಬಹು ದೊಡ್ಡ ರೋಗ. ಅಸ್ಪಶ್ಯತೆಯಂತೂ ಭಾರತೀಯ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ ಕಳಂಕ. ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾನತೆಯ ಕನಸುಗಳನ್ನು ಬಿತ್ತುತ್ತಾ ಬೆಳಕಿನ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ದಾರ್ಶನಿಕರು.

ವಸಾಹತೋತ್ತರ ಭಾರತದಲ್ಲಿನ ಜಡ್ಡುಗಟ್ಟಿದ ಜಾತೀಯತೆ ಮತ್ತು ಮಾನವೀಯ ನೆಲೆಯ ಪ್ರತಿರೋಧ ಶೋಷಿತ ಸಮುದಾಯಗಳಿಗೆ ಸಂಘರ್ಷದ ಪಾಠವೇನೋ ಕಲಿಸಿದ್ದವು. ಆದರೆ ತುಳಿತಕ್ಕೊಳಗಾದ ಸಮುದಾಯಗಳ ಬದುಕನ್ನೇನು ಹಸನು ಮಾಡಿರಲಿಲ್ಲ. ಬ್ರಿಟಿಷ್ ಭಾರತದ ಸಾಮಾಜಿಕ ನ್ಯಾಯ ಪರಿಕಲ್ಪನೆಯು ಬಿಡುಗಡೆಯ ಹಳವಂಡದಂತಿದ್ದವು. ಶೋಷಿತ ಸಮುದಾಯಗಳ ಅದರಲ್ಲೂ ಅಸ್ಪಶ್ಯತೆಯ ಆಚರಣೆಯಿಂದಾಗಿ ಸಂಪೂರ್ಣ ಕುಗ್ಗಿ ಹೋದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನ ಸುಮುದಾಯಗಳಿಗೆ ಅಕ್ಷರ ಅರಿವಿನೊಂದಿಗೆ ಮುಖಾಮುಖಿ ಮಾಡಿಸಿದ ಕಾಲವದು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿನ ಗುರುಕುಲ ಶಿಕ್ಷಣ ಪದ್ಧತಿ ಅಸಂಖ್ಯಾತ ಏಕಲವ್ಯರ ಪಾಲಿಗೆ ಮರಣ ಶಾಸನದಂತಿತ್ತು. ಗುರುಕುಲ ಶಿಕ್ಷಣ ಪದ್ಧತಿ ಅಸ್ಪಶ್ಯ ಸಮುದಾಯಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿತ್ತು. ಒಂದು ವೇಳೆ ಏಕಲವ್ಯ ಪ್ರತಿಭೆ ಸ್ವಪ್ರಯತ್ನದಿಂದ ಶಿಕ್ಷಣವನ್ನು ತನ್ನದಾಗಿಸಿಕೊಂಡಿದ್ದರೆ ಅತ್ಯಂತ ಅಮಾನವೀಯ ರೀತಿಯಲ್ಲಿ ಕಸಿದುಕೊಳ್ಳಲು ಹೇಸುತ್ತಿರಲಿಲ್ಲ. ಏಕಲವ್ಯ ಮತ್ತು ಆತನ ಪ್ರತಿಭೆ ಭಾರತೀಯ ಸಮಾಜಕ್ಕೆ ಒಡ್ಡಿದ ಬಹುದೊಡ್ಡ ಪ್ರತಿರೋಧದ ಸಂಕೇತ. ಬುದ್ಧ, ಬಸವ, ಅಂಬೇಡ್ಕರ್ ಅವರು ಪ್ರತಿರೋಧದ ನೆಲೆಗಳನ್ನು ವಿಸ್ತರಿಸಿದವರು. ಕಬೀರ್, ಸಂತ ತುಕಾರಾಂ, ಸಂತ ನಾಮದೇವ ಸೇರಿದಂತೆ ಭಾರತೀಯ ಭಕ್ತಿ ಪರಂಪರೆಯ ಬಂಡುಕೋರರು ಜಾತೀಯತೆ ಮತ್ತು ಅಸ್ಪಶ್ಯತೆಯ ಬಂಡೆಗಲ್ಲಿಗೆ ಡೈನಾಮೈಟ್ ಇಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರು.

ಸ್ವಾತಂತ್ರ್ಯ ಸಿಕ್ಕ ಮೇಲೆ ಅಸ್ಪಶ್ಯ ಸಮುದಾಯಗಳಿಗೆ ಒದಗಿಸಿದ ಮೀಸಲಾತಿ ಸೌಲಭ್ಯ ತುಸು ಉಸಿರಾಡುವಂತೆ ಮಾಡಿದೆ. ಆದರೆ ಜಾತೀಯತೆ ಮತ್ತು ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕಲು ಈ ಹೊತ್ತಿನ ಭಾರತಕ್ಕೂ ಸಾಧ್ಯವಾಗಿಲ್ಲ. ಸಾಮಾಜಿಕ ನ್ಯಾಯ ಪರಿಕಲ್ಪನೆಯ ಸಂಪೂರ್ಣ ಫಲಗಳು ಈ ದೇಶದ ಕಟ್ಟಕಡೆಯ ಮನುಷ್ಯನಿಗೆ ಈ ಹೊತ್ತಿಗೂ ಲಭ್ಯವಾಗಿಲ್ಲ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬೆರಳೆಣಿಕೆಯ ರಾಜರು ಸಾಮಾಜಿಕ ನ್ಯಾಯದ ಪರವಾಗಿದ್ದರು. ಅಸ್ಪಶ್ಯ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸಲು ಪ್ರಯತ್ನಿಸಿದ್ದರು. ಕಾಲದ ಒತ್ತಡ ಅಸ್ಪಶ್ಯತೆ ನಿವಾರಣೆಯ ಅವರ ಕನಸುಗಳಿಗೆ ಅವಕಾಶವೇ ನೀಡಲಿಲ್ಲ. ಪುರೋಹಿತಶಾಹಿಯ ಲಕ್ಷ್ಮಣ ರೇಖೆ ದಾಟಿ ಅಸ್ಪಶ್ಯತಾ ನಿವಾರಣೆಗೆ ಯಾವ ರಾಜ, ಮಹಾರಾಜರು ಗಂಭೀರ ಪ್ರಯತ್ನ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸುಧಾರಣೆಯ ಹಂತಕ್ಕೆ ತಮ್ಮ ಕಾಳಜಿಗಳನ್ನು ಸೀಮಿತಗೊಳಿಸಿಕೊಂಡಿದ್ದರು.

ಹಾಗೆ ನೋಡಿದರೆ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಕನಸುಗಳನ್ನು ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಬಿತ್ತಿದ್ದರು. ಸ್ವಾತಂತ್ರ್ಯ ಪೂರ್ವ ಕರ್ನಾಟಕದಲ್ಲಿ ಮೈಸೂರು ಸಂಸ್ಥಾನದ ರಾಜರು ಅದರಲ್ಲೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ನ್ಯಾಯದ ಕನಸುಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಎಂ. ವಿಶ್ವೇಶ್ವರಯ್ಯ ಅವರಂತಹ ದಿವಾನರ ವಿರೋಧದ ನಡುವೆಯೂ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಮಿಲ್ಲರ್ ಆಯೋಗ ರಚಿಸಿದರು. ಅಷ್ಟು ಮಾತ್ರವಲ್ಲದೆ ಮೀಸಲಾತಿ ಸೌಲಭ್ಯ ನೀಡಿದರು. ಮಿಲ್ಲರ್ ಕಮಿಷನ್ ವರದಿ ಮತ್ತು ಮೀಸಲಾತಿ ನೀಡುವ ಪ್ರಯತ್ನಗಳು ಇಡೀ ಭಾರತಕ್ಕೆ ಮಾದರಿ ಪ್ರಯತ್ನಗಳಾಗಿದ್ದವು.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಗಣರಾಜ್ಯ ಸ್ಥಾಪನೆಯ ಕನಸು ಸಾಕಾರಗೊಂಡ ಮೇಲೆ ಭಾರತದ ಸಂವಿಧಾನ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಜೀವ ತುಂಬಿತು. ಸಾಮಾಜಿಕ ನ್ಯಾಯದ ಭಾಗವಾಗಿ ಅಸ್ಪಶ್ಯ ಸಮುದಾಯಗಳಿಗೆ ಜೀವಾಮೃತದಂತೆ ಮೀಸಲಾತಿ ಸೌಲಭ್ಯ ಒದಗಿ ಬಂತು. ಮೀಸಲಾತಿ ಪರಿಕಲ್ಪನೆ ಸಾಪೇಕ್ಷವಾದುದು. ಅವಕಾಶ ವಂಚಿತ ಸಮುದಾಯಗಳಿಗೆ ಮುಖ್ಯವಾಹಿನಿಯ ಭಾಗವಾಗಲು ವಿಶೇಷ ಸವಲತ್ತುಗಳನ್ನು ಕಲ್ಪಿಸುವುದು ಮೀಸಲಾತಿಯ ಮೂಲ ಕಾಳಜಿ. ಮೀಸಲಾತಿ ಸೌಲಭ್ಯ ಪಡೆದುಕೊಂಡು ಕೆಲವರು ಉದ್ಧಾರವಾದರೆ, ಬಹುಪಾಲು ಸಮುದಾಯಗಳು ಅವಕಾಶ ವಂಚಿತ ಪಟ್ಟಿಯಲ್ಲಿ ಖಾಯಂ ಆಗಿ ನೆಲೆ ನಿಂತಿವೆ. ಮೀಸಲಾತಿಯ ಸಾರ್ಥಕತೆ ಇರುವುದೇ ನಿರಂತರವಾಗಿ ಅವಕಾಶ ವಂಚಿತ ಸಮುದಾಯಗಳಿಗೆ ಸವಲತ್ತುಗಳನ್ನು ವಿಸ್ತರಿಸುತ್ತಾ ಹೋಗುವುದರಲ್ಲಿ. ಅವಕಾಶಗಳನ್ನು ಪಡೆದವರೇ ಮತ್ತೆ ಮತ್ತೆ ಫಲಾನುಭವಿಗಳಾಗುವುದನ್ನು ನಿಯಂತ್ರಿಸಲು ಕೆನೆಪದರು ಪರಿಕಲ್ಪನೆ ಹುಟ್ಟಿಕೊಂಡಿದ್ದು. ಒಳಮೀಸಲಾತಿಯ ಬೇಡಿಕೆಯೂ ಅಂಚಿಗೆ ತಳ್ಳಲ್ಪಟ್ಟ ಶೋಷಿತ ಸಮುದಾಯಗಳ ಹಕ್ಕೊತ್ತಾಯವಾಗಿದೆ. ಕರ್ನಾಟಕದಲ್ಲಿ ಒಳಮೀಸಲಾತಿ ಬೇಡಿಕೆಯನ್ನು ಆರಂಭದ ದಿನಗಳಲ್ಲಿ ಒಡಕಿನ ಧ್ವನಿ ಎಂದೇ ಭಾವಿಸಲಾಗಿತ್ತು. ಕರ್ನಾಟಕದಲ್ಲಿ ಒಳಮೀಸಲಾತಿ ಹಕ್ಕೊತ್ತಾಯಕ್ಕೆ ಮೂರು ದಶಕಗಳ ಇತಿಹಾಸವಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಸಮುದಾಯಗಳಿವೆ. ಮೀಸಲಾತಿ ಸೌಲಭ್ಯ ಎಲ್ಲರಿಗೂ ಸಮಾನವಾಗಿ ದಕ್ಕಲಿಲ್ಲ ಎಂಬ ಅಸಮಾಧಾನದ ಅಭಿಪ್ರಾಯವೇ ಒಳಮೀಸಲಾತಿ ಪರಿಕಲ್ಪನೆ ಹುಟ್ಟಿಕೊಳ್ಳಲು ಕಾರಣವಾಯಿತು. ಹಾಗೆ ನೋಡಿದರೆ ಒಳಮೀಸಲಾತಿ ಪರಿಕಲ್ಪನೆ ಪರಿಶಿಷ್ಟ ಜಾತಿಗಳಲ್ಲಿನ ಒಂದೆರಡು ಸಮುದಾಯಗಳಿಗೆ ಸೀಮಿತಗೊಳಿಸಿ ಪರಿಭಾವಿಸುವುದೇ ತಪ್ಪು. ಒಳಮೀಸಲಾತಿ ನಿರಂತರ ವಿಸ್ತರಣೆಗೊಳ್ಳಬಹುದಾದ ಪ್ರಕ್ರಿಯೆ. ಕಳೆದ 78 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿನ ಕೆಲವರಿಗೆ ಮೀಸಲಾತಿ ಸೌಲಭ್ಯ ಹೆಚ್ಚು ದೊರಕಿದೆ, ಇನ್ನು ಕೆಲವರು ಅವಕಾಶ ವಂಚಿತರಾಗಿದ್ದಾರೆ ಎಂಬ ಭಾವನೆ ಒಳಮೀಸಲಾತಿ ಬೇಡಿಕೆಗೆ ಆಸ್ಪದ ಮಾಡಿಕೊಟ್ಟಿದೆ. ಹಾಗೆ ನೋಡಿದರೆ, ಮೀಸಲಾತಿ ಸವಲತ್ತು ಪಡೆದುಕೊಂಡು ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಲ ಪಡೆದವರು ಅವಕಾಶ ವಂಚಿತ ಸಹೋದರ ಸಮುದಾಯಗಳ ಕೈ ಹಿಡಿದು ಮೇಲೆತ್ತಲು ಪ್ರಯತ್ನಿಸಬೇಕಿತ್ತು. ಆದರ್ಶದ ಮಾತುಗಳು ಕಠೋರ ವಾಸ್ತವದ ಎದುರು ಸೋಲುತ್ತವೆ. ಜಾತೀಯತೆ ಮತ್ತು ಅಸ್ಪಶ್ಯತೆಯಂಥ ಸಾಮಾಜಿಕ ಪಿಡುಗು ತೊಲಗಬೇಕು ಎಂಬುದು ಬಹು ದೊಡ್ಡ ಆದರ್ಶದ ಮಾತು. ಆದರೆ ಅದು ವಾಸ್ತವದಲ್ಲಿ ಸಾಕಾರಗೊಂಡಿಲ್ಲ. ಜಾತಿಯ ಬೇರುಗಳು ಮತ್ತಷ್ಟು ಗಟ್ಟಿಗೊಳ್ಳುತ್ತಲಿವೆ. ಆಚರಣೆಯ ಮಟ್ಟದಲ್ಲಿದ್ದ ಅಸ್ಪಶ್ಯತೆ ಈಗ ಭಾವಕೋಶದಲ್ಲಿ ಬಲವಾಗಿ ನೆಲೆ ನಿಂತಿದೆ. ಮೇಲ್ನೋಟದ ಸಮಾನತೆ ಸಾಧಿಸಲಾದರೂ ಕಾನೂನಿನ ಬಲ ಅನಿವಾರ್ಯವಾಗುತ್ತದೆ. ಅಸ್ಪಶ್ಯ ಸಮುದಾಯಗಳಿಗೆ ಸಂವಿಧಾನ ಬದ್ಧ ಮೀಸಲಾತಿ ಸೌಲಭ್ಯ ದೊರೆತಿದ್ದರಿಂದಲೇ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಖ್ಯ ವಾಹಿನಿಯ ಭಾಗವಾಗಲು ಸಾಧ್ಯವಾಗಿದೆ. ಪರಿಶಿಷ್ಟ ಜಾತಿಗಳಲ್ಲಿನ ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ದೊರೆಯಬೇಕೆಂದರೆ ಕಾನೂನು ಮಾತನಾಡುವುದು ಅನಿವಾರ್ಯವಾಗಿದೆ. ಒಳಮೀಸಲಾತಿ ಬೇಡಿಕೆಯನ್ನು ಪರಿಶಿಷ್ಟ ಜಾತಿಗಳಲ್ಲಿನ ಒಂದೆರಡು ಸಮುದಾಯಗಳ ಪಾಲು ಪಡೆಯುವ ಹುನ್ನಾರ ಎಂಬ ಅಭಿಪ್ರಾಯ ಮೂಡಿದ್ದರಿಂದಲೇ ಅದು ಸಾರ್ವತ್ರಿಕ ಮನ್ನಣೆ ಗಳಿಸಲು ಸಾಧ್ಯವಾಗಿರಲಿಲ್ಲ. ಒಳಮೀಸಲಾತಿ ಬೇಡಿಕೆಯನ್ನು ಪರಿಶಿಷ್ಟ ಜಾತಿಗಳಲ್ಲಿ ಒಡಕು ಮೂಡಿಸುವ ಮೇಲು ಜಾತಿಗಳ ಕುತಂತ್ರ ಎಂದು ಭಾವಿಸಲಾಗಿತ್ತು. ಆಂಧ್ರದಲ್ಲಿ ಮಂದಾ ಕೃಷ್ಣ ಮುಂತಾದವರು ಒಳಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ರೂಪಿಸುತ್ತಿರುವಾಗ ಇದು ಒಡಕು ಮೂಡಿಸುವ ಪರಿಕಲ್ಪನೆ ಎಂದು ಕೆಲವರು ಬಲವಾಗಿ ನಂಬಿದ್ದರು. ಹಾಗಾಗಿಯೇ ಕರ್ನಾಟಕದಲ್ಲಿ ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿ ದಶಕಗಳ ಕಾಲ ಧೂಳು ತಿನ್ನಬೇಕಾಯಿತು. ಕೆಲವು ಸಣ್ಣಪುಟ್ಟ ಲೋಪಗಳ ನಡುವೆಯೂ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಒಳಮೀಸಲಾತಿ ಪರಿಕಲ್ಪನೆಯನ್ನು ಸಮರ್ಪಕವಾಗಿ ಮನಗಾಣಿಸಲು ಪ್ರಯತ್ನಿಸಿತ್ತು. ನ್ಯಾಯಮೂರ್ತಿ ಸದಾಶಿವ ಅವರ ವರದಿ ಆಧರಿಸಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಎಷ್ಟೇ ಹೋರಾಟಗಳು ನಡೆದರೂ ಆಳುವ ಸರಕಾರಗಳು ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನ್ಯಾಯಮೂರ್ತಿ ಸದಾಶಿವ ಆಯೋಗ ಅಸ್ಪಶ್ಯ ಸಮುದಾಯಗಳ ಚಾರಿತ್ರಿಕ ಅಪಮಾನಗಳನ್ನು ಗಮನದಲ್ಲಿಟ್ಟುಕೊಂಡು ಸ್ಪಶ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಅಗತ್ಯ ಇಲ್ಲವೆಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು ವಿವಾದಕ್ಕೆ ಹಾದಿ ಮಾಡಿಕೊಟ್ಟಿತು. ಎಲ್ಲಕ್ಕೂ ಮಿಗಿಲಾಗಿ ಸದಾಶಿವ ಆಯೋಗದ ಪರ ಒಮ್ಮತದ ಅಭಿಪ್ರಾಯ ಮೂಡಲೇ ಇಲ್ಲ. ಒಳಮೀಸಲಾತಿ ಪರ ಒಮ್ಮತದ ಅಭಿಪ್ರಾಯ ಮೂಡಿದ್ದು ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆಯೇ. ಕರ್ನಾಟಕದಲ್ಲಿ ಸಾಮಾಜಿಕ ಕಾಳಜಿ ಹೊಂದಿರುವ ಕೆಲವು ಖ್ಯಾತನಾಮರು ಕೂಡಾ ಒಳಮೀಸಲಾತಿ ಪರ ನಿಲ್ಲಲು ಹಿಂದೇಟು ಹಾಕುತ್ತಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಒಳಮೀಸಲಾತಿ ಕಾಲದ ಅನಿವಾರ್ಯತೆ ಎಂಬುದನ್ನು ಮನಗಾಣಿಸಿತು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಒಳಮೀಸಲಾತಿ ಜಾರಿಗೊಳಿಸಲು ಅವಕಾಶಗಳಿದ್ದವು. ಬಸವರಾಜ ಬೊಮ್ಮಾಯಿಯವರು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಷ್ಕರಣೆಯೊಂದಿಗೆ ಅನುಷ್ಠಾನಗೊಳಿಸಿದ್ದರೂ ಸಾಮಾಜಿಕ ನ್ಯಾಯದ ವಿಸ್ತರಣೆಗೆ ಬಲ ನೀಡಿದಂತಾಗುತ್ತಿತ್ತು. ಅತಿಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಬೊಮ್ಮಾಯಿ ಸರಕಾರ ಸದಾಶಿವ ಆಯೋಗದ ವರದಿಯನ್ನೇ ಮೂಲೆಗೆ ತಳ್ಳಿತು. ಜೆ.ಸಿ. ಮಾಧುಸ್ವಾಮಿ ವರದಿ ಜಾರಿಗೊಳಿಸಲು ಬಸವರಾಜ ಬೊಮ್ಮಾಯಿ ಚುನಾವಣಾ ಸಮಯದಲ್ಲಿ ವ್ಯರ್ಥ ಕಸರತ್ತು ಮಾಡಿದರು. ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ ಪರಿಶಿಷ್ಟ ಜಾತಿಗಳಲ್ಲಿನ ಸ್ಪಶ್ಯ ಸಮುದಾಯಗಳು ಬಿಜೆಪಿ ವಿರುದ್ಧ ತಿರುಗಿ ಬೀಳುವಂತಾಯಿತು.

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಎರಡು ವರ್ಷಗಳೇ ಕಳೆದವು. ಸುಪ್ರೀಂ ಕೋರ್ಟ್ ಆದೇಶದ ಬಲ ಬೆನ್ನಿಗಿರುವಾಗ ಒಳಮೀಸಲಾತಿ ಅನುಷ್ಠಾನಕ್ಕೆ ಮೀನಾಮೇಷ ಎಣಿಸಲೇ ಬಾರದಿತ್ತು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವರ ಮುಂದಿತ್ತು. ಆದರೆ ಒಳಮೀಸಲಾತಿ ಜಾರಿಗೊಳಿಸಲು ಅವರು ಆಗ ಗಂಭೀರ ಪ್ರಯತ್ನ ಮಾಡಲಿಲ್ಲ. ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿ ಇರುವುದರಿಂದ ಹಿಂದೇಟು ಹಾಕಿರಬಹುದು.

ಆದರೆ ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ತಕ್ಷಣ ಒಳಮೀಸಲಾತಿ ಅನುಷ್ಠಾನಕ್ಕೆ ಪ್ರಕ್ರಿಯೆ ಶುರು ಮಾಡಿದ್ದರೆ ಇಷ್ಟೊತ್ತಿಗೆ ಅದು ಫಲ ನೀಡುತ್ತಿತ್ತು. ತಡವಾಗಿಯಾದರೂ ಒಳಮೀಸಲಾತಿ ಜಾರಿಗೆ ಪ್ರಕ್ರಿಯೆ ಶುರು ಮಾಡಿದ್ದಾರೆ. ವೈಜ್ಞಾನಿಕ ಸಮೀಕ್ಷೆ ನಡೆಸಿ, ತಾಜಾ ದತ್ತಾಂಶಗಳೊಂದಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದರು. ಅದಕ್ಕೆ ಸಾಕಷ್ಟು ಸಮಯಾವಕಾಶ ಕೂಡಾ ನೀಡಿದ್ದರು. ಜನಪರ ಕಾಳಜಿಯುಳ್ಳ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರೂ ಹೆಚ್ಚು ಶ್ರಮ ಹಾಕಿ ವರದಿಯನ್ನು 1-8-2025ರಂದು ಸರಕಾರಕ್ಕೆ ಸಲ್ಲಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಒಂದು ಬಾರಿ ಚರ್ಚೆ ಕೂಡಾ ನಡೆದಿದೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಸಾರಾಂಶವನ್ನು ಕೆಲವು ಪತ್ರಿಕೆಗಳು ದೊಡ್ಡ ಸುದ್ದಿ ಮಾಡಿದವು. ವರದಿಯ ಸೋರಿಕೆ ಎಂದೂ ಭಾವಿಸುವಂತಿಲ್ಲ. ಯಾಕೆಂದರೆ, ನಾಗಮೋಹನ್ ದಾಸ್ ವರದಿಯ ಪಿಡಿಎಫ್ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆ ವೈರಲ್ ಆದ ವರದಿ ಅಧಿಕೃತವಾದುದು ಅಲ್ಲ ಎಂದು ಯಾರೂ ಅಲ್ಲಗಳೆದಿಲ್ಲ. ವೈರಲ್ ಆದ ವರದಿಯನ್ನೇ ಆದರಿಸಿ ಅಭಿಪ್ರಾಯಗಳು ರೂಪುಗೊಳ್ಳುತ್ತಿವೆ. ಅಷ್ಟು ಮಾತ್ರವಲ್ಲ ಪ್ರಬಲ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ನಾಗಮೋಹನ್ ದಾಸ್ ವರದಿಯನ್ನು ವಿರೋಧಿಸುವವರ ವಾದ ಗಮನಿಸಿದರೆ ಕಾಂತರಾಜ ಮತ್ತು ಜಯಪ್ರಕಾಶ್ ಅವರ ವರದಿಗೆ ವ್ಯಕ್ತವಾದ ಅಭಿಪ್ರಾಯಗಳಂತೆ ತೋರುತ್ತಿದೆ. ನಾಗಮೋಹನ್ ದಾಸ್ ವರದಿಯ ಮುಖ್ಯ ಕಾಳಜಿ ಗಮನಿಸದೆ ಜನಸಂಖ್ಯಾ ಬಲವನ್ನು ಇಟ್ಟುಕೊಂಡು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಮೂಲ ಆಶಯ ಗಮನಿಸದೆ ಹೋದಾಗ ಇಂಥ ಪರ ವಿರೋಧದ ವಿವಾದಗಳು ಹುಟ್ಟಿಕೊಳ್ಳಲು ಸಾಧ್ಯ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಪರಿಶಿಷ್ಟ ಜಾತಿಗಳಲ್ಲಿರುವ 101 ಸಮುದಾಯಗಳ ಹಿಂದುಳಿದಿರುವಿಕೆಯನ್ನು ಐದು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಹಾಗೆ ಮಾಡಲು ಆಯೋಗ ಒಟ್ಟು 1,07,01,982 ಪರಿಶಿಷ್ಟ ಜನಸಮುದಾಯವನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿದೆ. ಇದರಲ್ಲಿ 1,77,662 ಜನ ಬುಡ್ಗ-ಬೇಡ ಜಂಗಮರಿದ್ದಾರೆ. ಅಂತರ್ಜಾತಿ ವಿವಾಹವಾದ 14,449 ಜನರಿದ್ದಾರೆ. ಈ ಎರಡು ವಿಭಾಗದಲ್ಲಿನ ಜನಸಂಖ್ಯೆಯನ್ನು ಹೊರತು ಪಡಿಸಿ ಒಟ್ಟು 1,05,09,871 ಪರಿಶಿಷ್ಟ ಜನರನ್ನು ಐದು ಪ್ರವರ್ಗಗಳಲ್ಲಿ ವಿಂಗಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನೂ ಗಮನದಲ್ಲಿ ಇಟ್ಟುಕೊಂಡು ಆಯೋಗ ಅತ್ಯಂತ ವೈಜ್ಞಾನಿಕ ವರದಿ ಸಿದ್ಧಪಡಿಸಿದೆ.

ಎ ಪ್ರವರ್ಗದಲ್ಲಿ ಒಟ್ಟು 59 ಜಾತಿಗಳಿವೆ, ಅವರಿಗೆ ಪ್ರತಿಶತ ಒಂದರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದಾರೆ. ಬಿ ಪ್ರವರ್ಗದಲ್ಲಿ ಒಟ್ಟು 18ಜಾತಿಗಳನ್ನು ಸೇರಿಸಿದ್ದಾರೆ. ಈ ಪ್ರವರ್ಗಕ್ಕೆ ಪ್ರತಿಶತ ಆರರಷ್ಟು ಮೀಸಲಾತಿ ನೀಡಬಹುದೆಂದು ಸೂಚಿಸಿದ್ದಾರೆ. ಸಿ ಪ್ರವರ್ಗದಲ್ಲಿ ಒಟ್ಟು ಹದಿನೇಳು ಜಾತಿಗಳನ್ನು ಸೇರಿಸಿದ್ದಾರೆ. ಆ ಪ್ರವರ್ಗಕ್ಕೆ ಪ್ರತಿಶತ ಐದರಷ್ಟು ಮೀಸಲಾತಿ ನಿಗದಿಪಡಿಸಲು ಶಿಫಾರಸು ಮಾಡಿದ್ದಾರೆ. ಡಿ ಪ್ರವರ್ಗದಲ್ಲಿ ನಾಲ್ಕು ಸ್ಪಶ್ಯ ಜಾತಿಗಳನ್ನು ಸೇರಿಸಿದ್ದಾರೆ. ಈ ಪ್ರವರ್ಗಕ್ಕೆ ಪ್ರತಿಶತ ನಾಲ್ಕರಷ್ಟು ಮೀಸಲಾತಿ ನಿಗದಿಪಡಿಸಿದ್ದಾರೆ. ಈ ಪ್ರವರ್ಗದಲ್ಲಿ ಮೂರು ಜಾತಿಗಳನ್ನು ಸೇರಿಸಿದ್ದಾರೆ. ಈ ಪ್ರವರ್ಗಕ್ಕೆ ಪ್ರತಿಶತ ಒಂದರಷ್ಟು ಮೀಸಲಾತಿ ನಿಗದಿಪಡಿಸಿದ್ದಾರೆ. ಒಟ್ಟು 101 ಪರಿಶಿಷ್ಟ ಜಾತಿಗಳಿಗೆ ಅವುಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿ ಜನಸಂಖ್ಯೆಯ ಅನುಪಾತದಲ್ಲಿ ಒಳಮೀಸಲಾತಿ ನಿಗದಿಪಡಿಸಿದ್ದಾರೆ.

ಪ್ರವರ್ಗ ಎ ವಿಭಾಗದ ಜಾತಿಗಳನ್ನು ಅತ್ಯಂತ ಹಿಂದುಳಿದ ಸಮುದಾಯಗಳೆಂದು, ಪ್ರವರ್ಗ ಬಿ ವಿಭಾಗದ ಪರಿಶಿಷ್ಟ ಜಾತಿಗಳನ್ನು ಹೆಚ್ಚು ಹಿಂದುಳಿದ ಸಮುದಾಯಗಳೆಂದು ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ನಿರ್ಧರಿಸಿದ್ದಾರೆ. ಸಿ ಪ್ರವರ್ಗದ ಜಾತಿಗಳನ್ನು ಹಿಂದುಳಿದ ಸಮುದಾಯಗಳೆಂದು, ಡಿ ಪ್ರವರ್ಗದ ಜಾತಿಗಳನ್ನು ಕಡಿಮೆ ಹಿಂದುಳಿದ ಸಮುದಾಯಗಳೆಂದು ಗುರುತಿಸಿದ್ದಾರೆ. ಇನ್ನು ಈ ಪ್ರವರ್ಗದಲ್ಲಿ ತಮ್ಮ ಮೂಲ ಜಾತಿಯ ಹೆಸರನ್ನು ತಿಳಿಯಪಡಿಸದಿರುವ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಸೇರಿಸಿದ್ದಾರೆ. ಆಯಾ ಜಾತಿಗಳ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿದ್ದಾರೆ. ಕಳೆದ 78 ವರ್ಷಗಳಲ್ಲಿ ಆಯಾ ಜಾತಿಗಳು ಪಡೆದ ರಾಜಕೀಯ ಅವಕಾಶ ಮತ್ತು ಮೀಸಲಾತಿ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈಗಾಗಲೇ ಲಭ್ಯವಿರುವ ಎಲ್ಲ ದತ್ತಾಂಶಗಳನ್ನು ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ಒರೆಗೆ ಹಚ್ಚಿ ನಿರ್ಧಾರಕ್ಕೆ ಬಂದಿದ್ದಾರೆ. ಯಾವುದೋ ಒಂದು ಜಾತಿ, ಸಮುದಾಯಕ್ಕೆ ಪರ ವಿರೋಧ ಮಾಡಿದ್ದಾರೆ ಅನಿಸುವುದಿಲ್ಲ. ಇಷ್ಟಾಗಿಯೂ ವರದಿಯನ್ನು ಇದಮಿತ್ಥಂ ಎಂಬ ಭ್ರಮೆಯಲ್ಲಿ ಸಿದ್ಧಪಡಿಸಿಲ್ಲ. ವರದಿಯ ಮಿತಿ ಮತ್ತು ಸಾಧ್ಯತೆಯ ಅರಿವು ಅವರಿಗೆ ಇದೆ ಎಂಬುದನ್ನು ಈ ಕೆಳಗಿನ ಮಾತುಗಳು ಖಚಿತಪಡಿಸುತ್ತವೆ.

‘ಈ ಮೇಲಿನಂತೆ ನೀಡಿರುವ ಒಳಮೀಸಲಾತಿ ವರದಿ ಶಾಶ್ವತವೂ ಅಲ್ಲ ಅಥವಾ ಅಂತಿಮವೂ ಅಲ್ಲ. ಜನಸಂಖ್ಯೆ ಮತ್ತು ಜಾತಿಯ ಗಣತಿ ಅಥವಾ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶವು ನಿಂತ ನೀರಲ್ಲ. ಬದಲಾಗಿ ಅದು ಚಲನಾತ್ಮಕವಾದದ್ದು. ಜನನ, ಮರಣ, ವಲಸೆ, ಆಹಾರ, ಆರೋಗ್ಯ ಇತ್ಯಾದಿಗಳು ಬದಲಾದಂತೆ ಕಾಲಕಾಲಕ್ಕೆ ದತ್ತಾಂಶವು ಬದಲಾಗುತ್ತಾ ಹೋಗುತ್ತದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಒಳಮೀಸಲಾತಿಯನ್ನು ಪರಿಷ್ಕರಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮೀಸಲಾತಿ-ಒಳಮೀಸಲಾತಿ, ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವ ಒಂದು ಆಯಾಮವಷ್ಟೇ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕರೆ ಬೆಳಕಿನ ಭಾವ ಮೂಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮಗೊಳ್ಳಬೇಕು. ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಗುವಂತಾಗಬೇಕು. ಉದ್ಯಮಶೀಲತೆ ಹೆಚ್ಚಾಗಬೇಕು. ಕಾರ್ಪೊರೇಟ್ ವಲಯದಲ್ಲೂ ಮೀಸಲಾತಿ ಪಡೆದುಕೊಳ್ಳುವಂತಾಗಬೇಕು. ಪರಿಶಿಷ್ಟ ಜಾತಿಗಳಲ್ಲಿನ ಎಲ್ಲ ಪ್ರಜ್ಞಾವಂತರು ಅವಕಾಶ ವಂಚಿತ ಸಮುದಾಯಗಳ ಪರ ನಿಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢ ಸಂಕಲ್ಪದೊಂದಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿಯನ್ನು ಒಪ್ಪಿಕೊಳ್ಳಬೇಕು. ಅಸಮಾನತೆ ನಿವಾರಿಸಲು ಒಳಮೀಸಲಾತಿ ಅಗತ್ಯ ಎಂದು ಒಪ್ಪಿಕೊಂಡಿರುವಾಗ ತಾಂತ್ರಿಕ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು. ತುದಿ ಮೊದಲಿಲ್ಲದ ನಾ ಹೆಚ್ಚು-ನೀ ಹೆಚ್ಚು ತರ್ಕಗಳು ಇಲ್ಲಿಗೆ ನಿಂತರೆ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಮಾನವೀಯ ಸ್ಪರ್ಶ ನೀಡಿದಂತಾಗುತ್ತದೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X