ತಬ್ಬಲಿ ಸಮುದಾಯಗಳಿಗೆ ಮತ್ತೆ ಅನ್ಯಾಯ

ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿರುವ ಕೊರವ, ಕೊರಮ, ಲಂಬಾಣಿ ಮತ್ತು ಭೋವಿ ಗುಂಪಿನಲ್ಲಿ ಅಲೆಮಾರಿಗಳನ್ನು ಸೇರಿಸಿ ಅದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಎಂದು ಹೆಸರಿಟ್ಟರೆ ಅದು ಜನತಂತ್ರವನ್ನೇ ಅಣಕಿಸಿದಂತಾಗುತ್ತದೆ. ನೆಲೆ ನಿಂತ ಸ್ಪಶ್ಯ ಜಾತಿಗಳೊಂದಿಗೆ ನೆಲೆ ದಕ್ಕಿಸಿಕೊಳ್ಳಲಾಗದ ಅಲೆಮಾರಿಗಳನ್ನು ಸೇರಿಸಿ ಪ್ರತಿಶತ ಐದರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದೇವೆ. ಅದರ ಲಾಭ ಪಡೆದು ಮುಂದುವರಿಯಿರಿ ಎಂದರೆ; ಓಟಗಾರ ಮತ್ತು ಕಾಲಿಲ್ಲದವನ ನಡುವೆ ಸ್ಪರ್ಧೆ ಏರ್ಪಡಿಸಿದಂತೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟರ 101 ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿಯನ್ನು ಒಪ್ಪಿಕೊಂಡಿರುವುದಾಗಿ ಸದನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ದಿ. 19.8.2025ರಂದು ನಡೆದ ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಿ 6,6,5 ಹಂಚಿಕೆ ಸೂತ್ರ ಸಿದ್ಧಪಡಿಸಿದ್ದರು. ಸಚಿವ ಸಂಪುಟದ ನಿರ್ಣಯವನ್ನೇ ಸದನದಲ್ಲಿ ಮಂಡಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರ ಹೊರಬೀಳುತ್ತಿದ್ದಂತೆ ಬಲಗೈ ಮತ್ತು ಎಡಗೈ ಸಮುದಾಯದ ಗುಂಪಿನ ಹೋರಾಟಗಾರರು ಹರ್ಷ ವ್ಯಕ್ತಪಡಿಸಿ ಹೋರಾಟ ನಿಲ್ಲಿಸಿದ್ದಾರೆ. ಎಡಗೈ ಸಮುದಾಯದ ಗುಂಪಿನ ಕೆಲವು ಹೋರಾಟಗಾರರು ಮಾತ್ರ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಆ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಕರ್ನಾಟಕ ಸರಕಾರ ಮುಂದಾಗಬೇಕೆಂದು ಸಲಹೆ ನೀಡಿದ್ದಾರೆ.
ಮಾಜಿ ಸಚಿವ ಎಚ್. ಆಂಜನೇಯ ಅವರೂ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆ ನೋಡಿದರೆ, 2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಅಲೆಮಾರಿ ಸಮುದಾಯಗಳ ಪರ ಕೆಲಸ ಮಾಡಿದ್ದು ನಿಜ. ಹಾಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸೌಜನ್ಯಕ್ಕಾದರೂ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಹೇಳಲಿಲ್ಲ. ಅನಿವಾರ್ಯವಾಗಿ ಅಲೆಮಾರಿ ಸಮುದಾಯಗಳ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿನ ಮೀಸಲಾತಿ ಕಥಾನಕವೇ ಅತ್ಯಂತ ರೋಚಕವಾಗಿದೆ. ಅಷ್ಟು ಮಾತ್ರವಲ್ಲ ಸ್ವಾರ್ಥದಿಂದ ಕೂಡಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ ಮೌನ ವಹಿಸುತ್ತಾ ಬಂದಿದ್ದಾರೆ. ಕಟ್ಟಕಡೆಯ ಮನುಷ್ಯರ ಏಳಿಗೆಯೇ ಭಾರತದ ಸಂವಿಧಾನದ ಮೂಲ ಆಶಯ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 79ವರ್ಷ ಕಳೆದರೂ ಅಂಚಿನಲ್ಲಿರುವ ಸಮುದಾಯಗಳಿಗೆ ಅಕ್ಷರ, ಅನ್ನ ಮತ್ತು ಇನ್ನಿತರ ಸರಕಾರಿ ಸವಲತ್ತುಗಳು ದೊರೆತಿಲ್ಲ. ಆದರೆ ಮೀಸಲಾತಿಗಾಗಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಹೋರಾಟಗಳು ನಡೆಯುತ್ತಲೇ ಇವೆ.
ಒಂದು ಕಾಲದಲ್ಲಿ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಕರ್ನಾಟಕದ ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ಇರಲಿಲ್ಲ. ತಮಿಳುನಾಡಿನ ಅಯ್ಯಂಗಾರಿ ಬ್ರಾಹ್ಮಣರು ಆಯಕಟ್ಟಿನ ಸ್ಥಾನದಲ್ಲಿ ರಾರಾಜಿಸುತ್ತಿದ್ದರು. ಕರ್ನಾಟಕದ ಬ್ರಾಹ್ಮಣರಿಗೆ ಮೀಸಲಾತಿ ಸಿಗಬೇಕೆಂದು ಹಕ್ಕೊತ್ತಾಯಗಳು ಕೇಳಿ ಬಂದವು. ಆ ಹೋರಾಟದ ಫಲವಾಗಿ ಎಂ. ವಿಶ್ವೇಶ್ವರಯ್ಯ ಅವರಿಗೆ ಮೈಸೂರು ಸಂಸ್ಥಾನದಲ್ಲಿ ದಿವಾನಗಿರಿ ಪ್ರಾಪ್ತವಾಯಿತು. ನಂತರ ಕರ್ನಾಟಕದ ಬ್ರಾಹ್ಮಣರಿಗೆ ಆಯಕಟ್ಟಿನ ಜಾಗದಲ್ಲಿ ಸ್ಥಾನ ಮಾನ ಲಭಿಸತೊಡಗಿದವು. ವಿಶ್ವೇಶ್ವರಯ್ಯ ದಿವಾನರ ಹುದ್ದೆ ಅಲಂಕರಿಸುವವರೆಗೂ ಮೈಸೂರು ಸಂಸ್ಥಾನದ ಕಲಾವಿದರಲ್ಲಿ ತಮಿಳು ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಗಿತ್ತು.
ನಂತರ ಮೈಸೂರು ಸಂಸ್ಥಾನದಲ್ಲಿ ಶೂದ್ರ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂಬ ಹಕ್ಕೊತ್ತಾಯಗಳು ಕೇಳಿ ಬರತೊಡಗಿದವು. ಶೂದ್ರರ ಲೆಕ್ಕದಲ್ಲಿ ಲಿಂಗಾಯತರು ಮತ್ತು ಗೌಡರನ್ನು ಮಾತ್ರ ಪರಿಗಣಿಸಲಾಗಿತ್ತು. ದುರಂತವೆಂದರೆ ಮೀಸಲಾತಿ ಸವಲತ್ತನ್ನು ವಿಸ್ತಾರಗೊಳಿಸುವ ಆಶಯದ ಮಿಲ್ಲರ್ ಕಮಿಷನ್ ವರದಿಯನ್ನು ಮೀಸಲಾತಿ ಫಲಾನುಭವಿ ಸ್ವಯಂ ಎಂ. ವಿಶ್ವೇಶ್ವರಯ್ಯ ಅವರೇ ಬಲವಾಗಿ ವಿರೋಧಿಸಿದರು. ಅಷ್ಟು ಮಾತ್ರವಲ್ಲ ಪ್ರತಿರೋಧವಾಗಿ ದಿವಾನರ ಹುದ್ದೆಗೆ ರಾಜೀನಾಮೆ ನೀಡಿದರು. ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬಲವಾದ ನಂಬಿಕೆ ಇದ್ದುದರಿಂದ ಎಂ. ವಿಶ್ವೇಶ್ವರಯ್ಯ ಅವರ ರಾಜೀನಾಮೆ ಬೆದರಿಕೆಗೆ ಸೊಪ್ಪು ಹಾಕದೆ ಮಿಲ್ಲರ್ ಕಮಿಷನ್ ವರದಿಯನ್ನು ಜಾರಿಗೊಳಿಸಿದರು.
ಮೈಸೂರು ಸಂಸ್ಥಾನದಲ್ಲಿ ಕಾಡಿ ಬೇಡಿ ಮೀಸಲಾತಿ ಪಡೆದ ಲಿಂಗಾಯತರು ಮತ್ತು ಗೌಡರು ದೇವರಾಜ ಅರಸು ಕಾಲದ ಹಾವನೂರು ಆಯೋಗದ ವರದಿಯನ್ನು ತುಂಬು ಹೃದಯದಿಂದ ಸ್ವಾಗತಿಸಲಿಲ್ಲ. ದೇವರಾಜ ಅರಸು ಅವರಿಗೆ ಪ್ರಬಲ ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರಿಂದ ವಿರೋಧದ ನಡುವೆಯೂ ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸಿದರು. ಹಾವನೂರು ಆಯೋಗದ ವರದಿಯನ್ನು ದೇವರಾಜ ಅರಸು ಅವರು ಪಟ್ಟು ಬಿಡದೆ ಜಾರಿಗೊಳಿಸಿದ್ದರಿಂದ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಯಿತು.ಹಾವನೂರು ಆಯೋಗದ ವರದಿಯಿಂದಾಗಿ ಸಾಕಷ್ಟು ಅನುಕೂಲಗಳನ್ನು ಪಡೆದ ಹಿಂದುಳಿದ ವರ್ಗಗಳಲ್ಲಿನ ಪ್ರಬಲ ಸಮುದಾಯಗಳು ಅತಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಅಡ್ಡಿ ಮಾಡುತ್ತವೆ. ಹಿಂದುಳಿದ ವರ್ಗಗಳಲ್ಲಿನ ಒಳಮೀಸಲಾತಿಗೆ ಯಾರೊಬ್ಬರೂ ಮನಸ್ಸು ಮಾಡುವುದಿಲ್ಲ. ಪ್ರವರ್ಗ 2 ಎ ಮೀಸಲಾತಿ ಸೌಲಭ್ಯ, ಕುರುಬರು, ಈಡಿಗರು, ಗಾಣಿಗರು ಸೇರಿದಂತೆ ಮೂರುನಾಲ್ಕು ಸಮುದಾಯಗಳಿಗೆ ಮಾತ್ರ ಸೀಮಿತವಾಗಿದೆ. ಅದರಾಚೆ ಮಡಿವಾಳರು, ಹಡಪದರು ಮತ್ತು ಇನ್ನಿತರ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ದೊರಕಲೇ ಇಲ್ಲ. ಹಿಂದುಳಿದ ವರ್ಗಗಳಲ್ಲಿನ ಅಸಂಖ್ಯಾತ ಅತಿ ಹಿಂದುಳಿದ ವರ್ಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಲು ಸಾಧ್ಯವಾಗಿಲ್ಲ. ಇದು ಜನತಂತ್ರದ ಬಹುದೊಡ್ಡ ವ್ಯಂಗ್ಯ. ಮುಂದುವರಿದವರ ಗುಂಪಿನಲ್ಲಿ ಅವಕಾಶ ವಂಚಿತ ಸಮುದಾಯಗಳನ್ನು ಸೇರಿಸಿ ಮೀಸಲಾತಿ ನೀಡುವುದೇ ಅತ್ಯಂತ ಅಮಾನವೀಯ ಮತ್ತು ಅವೈಜ್ಞಾನಿಕ ಧೋರಣೆ. ಸುಪ್ರೀಂ ಕೋರ್ಟ್ ಈ ಧೋರಣೆಯನ್ನು ಸ್ಪಷ್ಟವಾಗಿ ವಿರೋಧಿಸಿದೆ.
ಒಳಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪ್ರಬಲರ ಪರ ವಾಲಿದ್ದಾರೆ. ಒಳಮೀಸಲಾತಿ ಅಧ್ಯಯನಕ್ಕೆಂದು ನೇಮಿಸಿದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗ ತನ್ನ ವರದಿಯಲ್ಲಿ ಅಲೆಮಾರಿಗಳಿಗಾಗಿ ಪ್ರತ್ಯೇಕ ಮೀಸಲಾತಿ ಅವಕಾಶ ಕಲ್ಪಿಸಿತ್ತು. ಆದರೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಅಂಧ್ರ ಸ್ಥಳ ವಾಚಕಗಳನ್ನು ಜಾತಿಗಳೆಂದು ಪರಿಗಣಿಸಿ ಗೊಂದಲ ಸೃಷ್ಟಿಸಿತ್ತು. ಮಾದಿಗ ಮತ್ತು ಇತರರು ಹಾಗೂ ಹೊಲೆಯರು ಮತ್ತು ಇತರರು ಗುಂಪುಗಳಲ್ಲಿನ ‘ಇತರರು’ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಸಮುದಾಯಗಳಾಗಿವೆ. ಆ ಸಮುದಾಯಗಳಿಗೆ ಇಲ್ಲಿಯವರೆಗೆ ಮೀಸಲಾತಿಯ ಸವಲತ್ತುಗಳು ದೊರೆತಿಲ್ಲ. ಈ ಅವೈಜ್ಞಾನಿಕ ವರ್ಗೀಕರಣದಿಂದ ಇನ್ನು ಮುಂದೆಯೂ ಆ ಸಮುದಾಯಗಳು ಅವಕಾಶ ವಂಚಿತರಾಗಿಯೇ ಉಳಿಯುತ್ತವೆ. ಚೆನ್ನದಾಸರು, ದಕ್ಕಲಿಗರು, ಅಸಾದಿಗಳು ಅಸ್ಪಶ್ಯರಲ್ಲಿನ ಅಸ್ಪಶ್ಯರು. ಎಷ್ಟೋ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಗ್ರಾಮ ಪಂಚಾಯತ್ ಸದಸ್ಯ, ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆ ಸೇರಿದಂತೆ ಮುಖ್ಯವಾಹಿನಿಯ ಅವಕಾಶಗಳ ಹತ್ತಿರ ನಿಲ್ಲಲೂ ಸಾಧ್ಯವಾಗಿಲ್ಲ. ಆ ಅವಕಾಶ ವಂಚಿತ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ನೀಡಿದಾಗ ಮಾತ್ರ ಒಂದಷ್ಟು ಅನುಕೂಲವಾಗುತ್ತಿತ್ತು. ಪರಿಶಿಷ್ಟರಲ್ಲಿನ 101 ಉಪಜಾತಿಗಳಿಗೆ ಅವರ ಸಂಖ್ಯಾ ಬಲದ ಅನುಪಾತಕ್ಕೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ನೀಡಿದ್ದರೆ ಒಳಮೀಸಲಾತಿಗೆ ಮಾನವೀಯ ಸ್ಪರ್ಶ ನೀಡಿದಂತಾಗುತ್ತಿತ್ತು.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬಲಗೈ ಸಮುದಾಯವೂ ಅವಕಾಶ ವಂಚಿತವಾಗಿತ್ತು. ಸಾಹು ಮಹಾರಾಜರ ಬೆಂಬಲ ದೊರಕಿದ್ದರಿಂದಲೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಲು ಸಾಧ್ಯವಾಯಿತು. ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಬದ್ಧತೆಯ ಕಾರಣಕ್ಕೆ ಕನ್ನಡ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು ಮತ್ತು ಪರಿಶಿಷ್ಟರಲ್ಲಿನ ಬಲಗೈ ಸಮುದಾಯ ಮೀಸಲಾತಿಯ ಸವಲತ್ತು ಪಡೆದು ಆರ್ಥಿಕವಾಗಿ ಮೇಲೆ ಬರಲು ಅವಕಾಶವಾಯಿತು. ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ಪರಿಶಿಷ್ಟರಲ್ಲಿನ ಎಡಗೈ ಸಮುದಾಯ ನಾನಾ ಕಾರಣಗಳಿಂದ ಸಮಪಾಲು ಪಡೆಯಲು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ಆಂಧ್ರ ಸೇರಿದಂತೆ ಇನ್ನಿತರ ರಾಜ್ಯಗಳಲ್ಲೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬರುತ್ತಿದ್ದವು. ಆಂಧ್ರದಲ್ಲಿ ಮಂದಾ ಕೃಷ್ಣ ಅವರು ಒಳಮೀಸಲಾತಿಯ ಅಗತ್ಯವನ್ನು ಪ್ರತಿಪಾದಿಸಿದರು. ಮೂವತ್ತು ವರ್ಷಗಳ ಹಿಂದೆ ಒಳಮೀಸಲಾತಿಯ ಅಗತ್ಯವನ್ನು ಪ್ರತಿಪಾದಿಸಿದಾಗ ಇದು ಮೇಲು ಜಾತಿಗಳ ಹುನ್ನಾರ ಎಂದು ಅನುಮಾನಿಸಿದ್ದು ಉಂಟು. ಸುದೀರ್ಘ ಮೂವತ್ತು ವರ್ಷಗಳ ಹೋರಾಟದ ನಂತರ ಒಳಮೀಸಲಾತಿಗೆ ಪರಿಶಿಷ್ಟರಲ್ಲಿನ ಕೆಲವರು ತಾತ್ವಿಕ ಒಪ್ಪಿಗೆ ನೀಡಿದರು. ಒಳಮೀಸಲಾತಿಗೆ ಅಧಿಕೃತ ಮನ್ನಣೆ ದೊರಕಿದ್ದು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಮೇಲೆಯೇ. ಸುಪ್ರೀಂ ಕೋರ್ಟ್ ತೀರ್ಪು ನೀಡದೇ ಹೋಗಿದ್ದರೆ ಒಳಮೀಸಲಾತಿಗೆ ಸಾರ್ವತ್ರಿಕ ಮನ್ನಣೆ ಸಿಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಒಳಮೀಸಲಾತಿಯ ಒಟ್ಟಾಶಯವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಪರಿಶಿಷ್ಟರಲ್ಲಿನ ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿಯ ಸವಲತ್ತು ದೊರೆಯುವಂತಾಗಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ವಿಸ್ತರಣೆಯಾಗಬೇಕು ಎಂಬುದು ನ್ಯಾಯಾಲಯದ ಆಳದ ಕಾಳಜಿಯಾಗಿತ್ತು.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಕೈಗೊಂಡ ತೀರ್ಮಾನ ಪರಿಶಿಷ್ಟರಲ್ಲಿನ ಪ್ರಬಲರಿಗೆ ಖುಷಿ ಪಡಿಸುವಂತಿದೆಯೇ ಹೊರತು ಅವಕಾಶ ವಂಚಿತರನ್ನು ಮೇಲೆತ್ತುವ ಇರಾದೆ ಹೊಂದಿಲ್ಲ. ಅಸ್ಪಶ್ಯರಲ್ಲಿನ ಬೆರಳೆಣಿಕೆಯ ಸಮುದಾಯಗಳು ಮೀಸಲಾತಿ ಸೌಲಭ್ಯ ಪಡೆದು ತಕ್ಕ ಮಟ್ಟಿಗೆ ಮುಂದುವರಿದಿವೆ. ಆದರೆ ಅಸ್ಪಶ್ಯರಲ್ಲಿನ ಹಲವು ಸಮುದಾಯಗಳು ಒಳ ಮೀಸಲಾತಿ ಸೌಲಭ್ಯ ಪಡೆಯುವುದು ಒತ್ತಟ್ಟಿಗಿರಲಿ ಮೀಸಲಾತಿಯ ಅರ್ಥವೇ ಗೊತ್ತಿಲ್ಲದಂತೆ ಬದುಕು ಸಾಗಿಸುತ್ತಿವೆ. ಒಳಮೀಸಲಾತಿ ಆ ಸಮುದಾಯಗಳ ಬಳಿ ಸಾಗಬೇಕಿತ್ತು.
ಸಿದ್ದರಾಮಯ್ಯ ಅವರ ಸರಕಾರ ಒಳಮೀಸಲಾತಿಯನ್ನು ಮೂರು ವರ್ಗಗಳಲ್ಲಿ ಹಂಚಿಕೆ ಮಾಡಿದೆ. ಎಡಗೈ ಮತ್ತು ಇತರರನ್ನು ಒಳಗೊಂಡ ಗುಂಪಿಗೆ ಪ್ರತಿಶತ ಆರರಷ್ಟು ಮೀಸಲಾತಿ ನೀಡಿದೆ. ಬಲಗೈ ಮತ್ತು ಇತರರ ಗುಂಪಿಗೂ ಪ್ರತಿಶತ ಆರರಷ್ಟು ಮೀಸಲಾತಿ ಕಲ್ಪಿಸಿದೆ. ಎರಡೂ ಗುಂಪಿನ ಇತರರ ಹಿತ ಯಾರು ಕಾಪಾಡುತ್ತಾರೋ ಎಂಬುದು ಸ್ಪಷ್ಟವಿಲ್ಲ. ಮೂರನೆಯ ಗುಂಪಿನಲ್ಲಿ ಕೊರವ, ಕೊರಮ, ಲಂಬಾಣಿ, ಭೋವಿಯಂಥ ಸ್ಪಶ್ಯ ಜಾತಿಗಳು ಸೇರಿವೆ. ಅವುಗಳ ಜೊತೆಗೆ ನೆಲೆಯೇ ಇಲ್ಲದ ಅಲೆಮಾರಿ ಸಮುದಾಯಗಳನ್ನು ಸೇರಿಸಿ ಒಳಮೀಸಲಾತಿಯ ಮೂಲ ಆಶಯವನ್ನೇ ವಿರೂಪಗೊಳಿಸಲಾಗಿದೆ.
ಕೊರವ, ಕೊರಮ, ಲಂಬಾಣಿ ಮತ್ತು ಭೋವಿ ಸಮುದಾಯಗಳು ಒಂದೆಡೆ ನೆಲೆ ನಿಂತಿವೆ. ಅಷ್ಟು ಮಾತ್ರವಲ್ಲ ಮೇಲು ಜಾತಿಗಳಿಂದ ಮುಟ್ಟಿಸಿಕೊಳ್ಳುವ ಅವಕಾಶ ಪಡೆದಿವೆ. ಮೀಸಲಾತಿಯ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಜಕೀಯ, ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಂಡಿವೆ. ಲಂಬಾಣಿ ಸಮುದಾಯ ಒಂದು ಕಾಲದಲ್ಲಿ ಅಲೆಮಾರಿ ಮತ್ತು ಕ್ರಿಮಿನಲ್ ಗುಂಪಿನಲ್ಲಿ ಗುರುತಿಸಿಕೊಂಡಿತ್ತು. ಕರ್ನಾಟಕದಲ್ಲಿ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಿದ್ದರಿಂದ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಪಡೆದುಕೊಂಡಿತು. ರಾಜಕಾರಣದಲ್ಲೂ ತಕ್ಕ ಮಟ್ಟಿಗೆ ನೆಲೆ ಕಂಡುಕೊಂಡು ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗಿದೆ. ಮುಖ್ಯವಾಗಿ ಅಸ್ಪಶ್ಯತೆಯ ಭೀಕರ ನೋವಿನಿಂದ ಹೊರತಾಗಿದೆ. ಪರಿಶಿಷ್ಟರಲ್ಲಿಯೇ ಅತಿ ಬುದ್ಧಿವಂತ ಸಮುದಾಯ ಎನಿಸಿಕೊಂಡಿದ್ದರಿಂದ ಸಹೋದರ ಸಮುದಾಯಗಳು ಈ ಸಮುದಾಯವನ್ನು ಗುಮಾನಿಯಿಂದ ನೋಡಿದ್ದು ಉಂಟು. ತಾಂಡಾಗಳು ಕಂದಾಯ ಗ್ರಾಮಗಳಾಗಿದ್ದರೂ ಊರುಗಳಂತೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಕೊರವ, ಕೊರಮ, ಭೋವಿ ಸಮುದಾಯಗಳಿಗೆ ಹೋಲಿಸಿದರೆ ಹೆಚ್ಚು ಶಿಕ್ಷಣ ಪಡೆದ ಮತ್ತು ಆಧುನಿಕತೆಗೆ ತೆರೆದುಕೊಂಡ ಸಮುದಾಯವಾಗಿದೆ. ಕೊರವ ಮತ್ತು ಕೊರಮ ಸಮುದಾಯಗಳು ಒಂದೆಡೆ ನೆಲೆ ನಿಂತಿದ್ದರಿಂದ ಅವುಗಳ ಸ್ಥಿತಿಗತಿ ತುಸು ಉತ್ತಮಗೊಂಡಿದೆ. ಉತ್ತರ ಕರ್ನಾಟಕದ ಕೊರವ ಸಮುದಾಯಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಕೊರಮ ಸಮುದಾಯ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಭೋವಿ ಸಮುದಾಯ ಶೈಕ್ಷಣಿಕವಾಗಿ ಹೆಚ್ಚು ಮುಂದುವರಿದಿಲ್ಲವಾದರೂ ಆರ್ಥಿಕವಾಗಿ-ರಾಜಕೀಯವಾಗಿ ಶಕ್ತಿ ಪಡೆದಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿರುವ ಕೊರವ, ಕೊರಮ, ಲಂಬಾಣಿ ಮತ್ತು ಭೋವಿ ಗುಂಪಿನಲ್ಲಿ ಅಲೆಮಾರಿಗಳನ್ನು ಸೇರಿಸಿ ಅದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಎಂದು ಹೆಸರಿಟ್ಟರೆ ಅದು ಜನತಂತ್ರವನ್ನೇ ಅಣಕಿಸಿದಂತಾಗುತ್ತದೆ. ನೆಲೆ ನಿಂತ ಸ್ಪಶ್ಯ ಜಾತಿಗಳೊಂದಿಗೆ ನೆಲೆ ದಕ್ಕಿಸಿಕೊಳ್ಳಲಾಗದ ಅಲೆಮಾರಿಗಳನ್ನು ಸೇರಿಸಿ ಪ್ರತಿಶತ ಐದರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದೇವೆ. ಅದರ ಲಾಭ ಪಡೆದು ಮುಂದುವರಿಯಿರಿ ಎಂದರೆ; ಓಟಗಾರ ಮತ್ತು ಕಾಲಿಲ್ಲದವನ ನಡುವೆ ಸ್ಪರ್ಧೆ ಏರ್ಪಡಿಸಿದಂತೆ.
ಅಲೆಮಾರಿ ಸಮುದಾಯಗಳಲ್ಲಿ ಕೆಲವರು ಶಾಲೆಯ ಮುಖವೇ ನೋಡಿಲ್ಲ. ಮುಟ್ಟಿಸಿಕೊಳ್ಳದ, ನೋಡಿಸಿಕೊಳ್ಳದ ಗಂಟಿಚೋರರು, ಗಿಸಾಡೆ, ಸುಡುಗಾಡ ಸಿದ್ದರು, ವೇಷಗಾರರು ಸೇರಿದಂತೆ ಹಲವು ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರವನ್ನೇ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವರು ಮುಂದುವರಿದ ಪರಿಶಿಷ್ಟರೊಂದಿಗೆ ಸ್ಪರ್ಧಿಸಲು ಹೇಗೆ ಸಾಧ್ಯವಾಗುತ್ತದೆ.?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಕೊರಮ ಸಮುದಾಯದ ಪಲ್ಲವಿಯವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದಾಗಲೇ ಅಲೆಮಾರಿ ಸಮುದಾಯ ಕುಗ್ಗಿ ಹೋಗಿತ್ತು. ಅಲೆಮಾರಿ ಸಮುದಾಯ ಒಂದೆಡೆ ನೆಲೆ ನಿಂತಿಲ್ಲವಾದ್ದರಿಂದ ಆಧುನಿಕ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಆ ಸಮುದಾಯದ ಪ್ರತಿಭಾ ಮತ್ತು ಸೃಜನಶೀಲ ಸಾಮರ್ಥ್ಯ ಬೆರಗು ಮೂಡಿಸುತ್ತದೆ.
ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಅಲೆಮಾರಿ ಸಮುದಾಯಗಳಿಗೆ ಸಲ್ಲುತ್ತದೆ. ಬುರ‌್ರ ಕಥಾ ಈರಮ್ಮ, ಬೆಳಗಲ್ಲು ವೀರಣ್ಣ ಸೇರಿದಂತೆ ಹಲವು ಸಾಂಸ್ಕೃತಿಕ ಲೋಕದ ಸಾಧಕರು ಪ್ರತಿಭೆ ಮತ್ತು ಸೃಜನಶೀಲತೆಯ ಮಾದರಿಯಾಗಿದ್ದರು. ಕೊಂಡಮಾಮ, ಬುಡಬುಡಿಕೆಯವರು ಮತ್ತು ಹೆಳವರ ಸಮುದಾಯಗಳ ಕಲ್ಪನಾ ಸಾಮರ್ಥ್ಯ ಆಗಾಧವಾದದ್ದು. ಇಷ್ಟೊಂದು ಪ್ರತಿಭೆ, ಸೃಜನಶೀಲ ಸಾಮರ್ಥ್ಯ ಪಡೆದಿರುವ ಅಲೆಮಾರಿ ಸಮುದಾಯದ ಒಬ್ಬರೂ ವಿಶ್ವವಿದ್ಯಾನಿಲಯದ ಕುಲಪತಿಯಾಗುವ ಅವಕಾಶ ಪಡೆದಿಲ್ಲ. ಅಲೆಮಾರಿ ಸಮುದಾಯದ ಅದೆಷ್ಟೋ ಜನ ನಾಗರಿಕತೆಯ ಮುಖವೇ ನೋಡಿಲ್ಲ. ಅಲೆಮಾರಿ ಸಮುದಾಯಗಳಲ್ಲಿ ಶಿಕ್ಷಣ ಪಡೆದು ಉದ್ಯೋಗ ಹಿಡಿದವರ ಸಂಖ್ಯೆ ಕಡಿಮೆ. ಎಲ್ಲಕ್ಕೂ ಮಿಗಿಲಾಗಿ ಅಸಂಘಟಿತರಾಗಿರುವ ಅಲೆಮಾರಿ ಸಮುದಾಯ ವೋಟ್ ಬ್ಯಾಂಕ್ ರಾಜಕಾರಣದ ಭಾಗವಾಗುವಷ್ಟು ಸಂಖ್ಯಾಬಲ ಹೊಂದಿಲ್ಲ. ಹಾಗಾಗಿಯೇ ಅವರನ್ನು ಕಡೆಗಣಿಸಲಾಗುತ್ತಿದೆ.
ಮೀಸಲಾತಿ ಮತ್ತು ಒಳಮೀಸಲಾತಿ ನೀಡಿದರೆ ಭುವನದ ಭಾಗ್ಯ ಬರುತ್ತದೆಯೆಂದೇನಲ್ಲ. ಮೀಸಲಾತಿ ಸೌಲಭ್ಯ ಪಡೆದು ಸಮಾನತೆಯ ದಾರಿಯಲ್ಲಿ ಒಂದಷ್ಟು ದೂರ ಸಾಗಬಹುದಾಗಿದೆ. ಪರಿಶಿಷ್ಟರಲ್ಲಿ ಮಧ್ಯಮ, ಮೇಲು ಮಧ್ಯಮ ಮತ್ತು ಶ್ರೀಮಂತ ವರ್ಗಗಳು ರೂಪುಗೊಳ್ಳಲು ಈ ಮೀಸಲಾತಿಯ ಸದಾವಕಾಶ ದಾರಿ ಮಾಡಿಕೊಟ್ಟಿದೆ. ಬಹುಜನ ಸಮಾಜ ಪಕ್ಷದ ಕಾನ್ಶೀರಾಮ್ ಅವರು ಮೀಸಲಾತಿ ಸೌಲಭ್ಯ ಪಡೆದ ವರ್ಗದ ನೆರವು ಪಡೆದೇ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ರಾಜಕೀಯ ಅಧಿಕಾರ ಸ್ಥಾಪಿಸಿದ್ದರು.
ಇನ್ಫೋಸಿಸ್ ನಾರಾಯಣ ಮೂರ್ತಿ ಸೇರಿದಂತೆ ಹಲವರು ಮಧ್ಯಮ ವರ್ಗದಿಂದ ಬಂದ ಮೇಲುಜಾತಿಯ ಜನರು ಕಾರ್ಪೊರೇಟ್ ವಲಯದ ನೇತೃತ್ವ ವಹಿಸಲು ಸಾಧ್ಯವಾಗಿದೆ. ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ, ರಾಜಕೀಯವಾಗಿ ಮೇಲೆ ಬಂದ ಪರಿಶಿಷ್ಟರಲ್ಲಿನ ಪ್ರಬಲರು ಲಕ್ಷ ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ಯಮಶೀಲರಾಗಬೇಕಿತ್ತು. ಮೀಸಲಾತಿ, ಒಳಮೀಸಲಾತಿ ಕೇವಲ ಸರಕಾರಿ ನೌಕರಿಗಳಿಗೆ ಸೀಮಿತವಾಗಿರುವುದರಿಂದ ಇದೊಂದೇ ಸಾಧನದಿಂದ ಸಂಪತ್ತಿನ ಪಾಲುದಾರರಾಗಲು ಎಲ್ಲರಿಗೂ ಸಾಧ್ಯವಿಲ್ಲ. ಸಂಪತ್ತಿನ ಪಾಲುದಾರರಾಗಲು ಅನಂತ ಅವಕಾಶಗಳಿವೆ. ಪರಿಶಿಷ್ಟರಲ್ಲಿನ ಮುಂದುವರಿದವರು ಸಂಪತ್ತಿನ ಅನಂತ ಸಾಧ್ಯತೆಯತ್ತ ಮುಖ ಮಾಡಿದರೆ ಅವಕಾಶ ವಂಚಿತ ಪರಿಶಿಷ್ಟ ಸಮುದಾಯಗಳು ಉಸಿರಾಡಲು ಸಾಧ್ಯವಾಗುತ್ತದೆ.
ಒಳಮೀಸಲಾತಿ ನಿರ್ಧಾರ ಕೈಗೊಂಡಿದ್ದು ತಾತ್ವಿಕವಾಗಿ ಸರಿ. ಆದರೆ ಒಳಮೀಸಲಾತಿ ಹಂಚಿಕೆಯಲ್ಲಿ ಅವಕಾಶ ವಂಚಿತ ಅಲೆಮಾರಿಗಳಿಗೆ ಸಮರ್ಪಕ ಪಾಲು ನೀಡದಿರುವುದು ಸಾಮಾಜಿಕ ನ್ಯಾಯದ ವಿಸ್ತರಣೆ ಎನಿಸಿಕೊಳ್ಳುವುದಿಲ್ಲ. ಸಮಾಜದ ಕಟ್ಟಕಡೆಯ ಮನುಷ್ಯರಿಗೂ ನಾಗರಿಕ ಸೌಲಭ್ಯಗಳು ದೊರೆತಾಗಲೇ ಸಾಮಾಜಿಕ ನ್ಯಾಯದ ಮಾತಿಗೆ ಅರ್ಥ ಮೂಡುತ್ತದೆ. ತಬ್ಬಲಿ ಸಮುದಾಯಗಳನ್ನು ಹೊರಗಿಟ್ಟು ರೂಪಿಸುವ ಒಳಮೀಸಲಾತಿ ಸೂತ್ರ ಮೀಸಲಾತಿಯ ಮೂಲ ಆಶಯಕ್ಕೆ ವಿರುದ್ಧ ಎನಿಸಿಕೊಳ್ಳುತ್ತದೆ. ಅಲೆಮಾರಿ ಸಮುದಾಯಗಳ ಆತ್ಮ ಬಲ ಹೆಚ್ಚಿಸುವ ನಿರ್ಧಾರ ಈ ಸರಕಾರ ಕೈಗೊಳ್ಳಬೇಕಿದೆ.