ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ

ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಹೆಸರಿನಲ್ಲಿ ಕರ್ನಾಟಕ ಸರಕಾರ ಕಾಯ್ದೆಯೊಂದನ್ನು ರೂಪಿಸಿದೆ. ಪಿಎಚ್. ಡಿ. ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಜಾತಿ ತಾರತಮ್ಯ ಮತ್ತು ಕಿರುಕುಳದಿಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವೇಮುಲಾ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವೇಮುಲಾ ಆತ್ಮಹತ್ಯೆ ಪ್ರಕರಣದ ವಿರುದ್ಧ ಹೋರಾಟ ರೂಪಿಸಿದ್ದರು.
ವಿಶ್ವವಿದ್ಯಾನಿಲಯಗಳಲ್ಲಿನ ಜಾತಿ ತಾರತಮ್ಯ ಮತ್ತು ವಿದ್ಯಾರ್ಥಿಗಳಿಗೆ ನೀಡುವ ನಿರಂತರ ಕಿರುಕುಳ ತಪ್ಪಿಸಲು ರೂಪಿಸಿರುವ ವೇಮುಲಾ ಕಾಯ್ದೆ ಅತ್ಯಂತ ಮಹತ್ವದ್ದು. ಅಷ್ಟುಮಾತ್ರವಲ್ಲ ಸಂವೇದನಾಶೀಲ ಸ್ವರೂಪದ್ದು. ಕರ್ನಾಟಕದಲ್ಲಿ ಸುಮಾರು ಮೂವತ್ತೆರಡು ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಒಂದು ಕೇಂದ್ರೀಯ ವಿಶ್ವವಿದ್ಯಾನಿಲಯ, ಒಂದು ಐಐಟಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಕಾನೂನು ಪದವಿ ನೀಡುವ ಸಂಸ್ಥೆ ಇದೆ. ಹಲವಾರು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿವೆ. ನೂರಾರು ಸರಕಾರಿ ಪದವಿ ಕಾಲೇಜುಗಳಿವೆ.
ಉನ್ನತ ಶಿಕ್ಷಣಕ್ಕೆಂದು ಬರುವ ಬಹುಪಾಲು ವಿದ್ಯಾರ್ಥಿ (ವಿದ್ಯಾರ್ಥಿನಿಯರು)ಗಳು ಒಂದಲ್ಲ ಒಂದು ಬಗೆಯ ಕಿರುಕುಳ ಅನುಭವಿಸುತ್ತಾರೆ. ಒಂದೆರಡು ದಶಕಗಳ ಹಿಂದೆ, ವಿದ್ಯಾರ್ಥಿ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಅಷ್ಟೇಯಲ್ಲ ಉನ್ನತ ಶಿಕ್ಷಣದ ಆಡಳಿತ ಮಂಡಳಿಗಳನ್ನು ನಿಯಂತ್ರಿಸುವಷ್ಟು ಪ್ರಬಲವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿ ಸಮುದಾಯದ ಹಿತ ಕಾಪಾಡುವುದಕ್ಕಿಂತ ರಾಜಕೀಯ ಪಕ್ಷಗಳ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಎಡ ಪಕ್ಷ ಮತ್ತು ಚಳವಳಿಗಳು ಪ್ರಬಲವಾಗಿದ್ದವು. ದಲಿತ ಮತ್ತು ರೈತ ಚಳವಳಿಗಳು ಕ್ರಿಯಾಶೀಲವಾಗಿದ್ದವು. ಈ ಎಲ್ಲ ಚಳವಳಿಗಳ ಪ್ರಭಾವ, ಪ್ರೇರಣೆಯಿಂದ ವಿದ್ಯಾರ್ಥಿ ಸಮುದಾಯ ವಿಶ್ವವಿದ್ಯಾನಿಲಯಗಳಲ್ಲಿನ ಅನ್ಯಾಯ, ಜಾತಿ ತಾರತಮ್ಯದ ವಿರುದ್ಧ ದನಿ ಎತ್ತುತ್ತಿದ್ದವು. ಸರಕಾರಗಳು ಎಚ್ಚೆತ್ತುಕೊಂಡು ಅನ್ಯಾಯ ಸದೆಬಡಿಯಲು ಕಾರ್ಯ ಪ್ರವೃತ್ತರಾಗುತ್ತಿದ್ದರು. ಖಾಸಗಿ ವಿಶ್ವವಿದ್ಯಾನಿಲಯಗಳ ಪ್ರವೇಶದಿಂದ ಬಡ ಮತ್ತು ಶ್ರೀಮಂತ ವಿದ್ಯಾರ್ಥಿಗಳ ನಡುವೆ ಸ್ಪಷ್ಟವಾದ ಗೆರೆ ಮೂಡಿದೆ. ಶ್ರೀಮಂತರ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದು ರೂಢಿಯಾಗಿದೆ. ಮೇಲ್ ಮಧ್ಯಮವರ್ಗದವರು ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಮೇಲು ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಐಐಟಿಯಂಥ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದುಕೊಂಡು ಗುರಿ ತಲುಪುತ್ತಾರೆ.
ಕಿರುಕುಳಕ್ಕೆ ಗುರಿಯಾಗುವವರು ಬಡವರ ಮಕ್ಕಳು ಮಾತ್ರ. ಅದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಅಥವಾ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಓದುವ ಬಡ ವಿದ್ಯಾರ್ಥಿಗಳು ಶಿಕ್ಷಣ ಪೂರೈಸುವವರೆಗೂ ಒಂದಲ್ಲ ಒಂದು ಬಗೆಯ ಕಿರುಕುಳ ಅನುಭವಿಸಲೇಬೇಕು.
ಕಿರುಕುಳ ನೀಡುವವರು ಯಾರು? ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ್ದು, ಶಿಕ್ಷಣ ಪಡೆದುಕೊಂಡು ಪ್ರಾಧ್ಯಾಪಕ ಹುದ್ದೆ ಅಲಂಕರಿಸಿದ ಮಹಾನುಭಾವರೇ ರಾಕ್ಷಸ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಪ್ರಾಧ್ಯಾಪಕ ವೃತ್ತಿಯಲ್ಲಿ ಇರುವ ಎಲ್ಲರೂ ದುಷ್ಟರು ಎಂದು ಹೇಳಲಾಗದು. ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕರು ಇದ್ದಾರೆ. ಅವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ಒಂದೆರಡು ದಶಕಗಳ ಹಿಂದೆ ಪ್ರಾಧ್ಯಾಪಕರು ಜಾತಿ ತಾರತಮ್ಯ ಮಾಡುವ ದುಷ್ಟರಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಪ್ರಾಧ್ಯಾಪಕರು ದುಷ್ಟರು, ಭ್ರಷ್ಟರು ಆಗಿದ್ದಾರೆ. ಕಳೆದ ಒಂದೆರಡು ದಶಕಗಳಲ್ಲಿ ಹಣ ಕೊಟ್ಟು ಕುಲಪತಿ ಹುದ್ದೆ ಗಿಟ್ಟಿಸುವ ಪ್ರವೃತ್ತಿ ಹೆಚ್ಚಾಗಿದ್ದರಿಂದ ಪ್ರಾಧ್ಯಾಪಕ ಹುದ್ದೆಗಳು ಮಾರಾಟವಾಗುತ್ತಿವೆ. ಹಣ ಕೊಟ್ಟು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ ಗಿಟ್ಟಿಸುವ ಅಭ್ಯರ್ಥಿಗಳು ನಿರ್ಲಜ್ಜವಾಗಿ ದುಡ್ಡು ಮಾಡಲು ನಿಲ್ಲುತ್ತಾರೆ. ದುಷ್ಟ ಮತ್ತು ಭ್ರಷ್ಟ ಪ್ರವೃತ್ತಿಯ ಪ್ರಾಧ್ಯಾಪಕರು ಎಲ್ಲ ಸಮುದಾಯಗಳಲ್ಲಿ ಇದ್ದಾರೆ. ಮಹಿಳೆಯರಲ್ಲೂ. ಒಳ್ಳೆಯವರು ಎಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಹಿಳೆಯರಲ್ಲಿ ಕೆಲವರು ಒಳ್ಳೆಯವರು ಮತ್ತು ಸಂವೇದನಾಶೀಲರು ನೋಡಲು ಸಿಗುತ್ತಾರೆ. ಆದರೆ ಒಳ್ಳೆಯ ಪ್ರಾಧ್ಯಾಪಕರ ಸಂಖ್ಯೆ ಅತಿ ಕಡಿಮೆ ಇದೆ.
ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬೇಕೆಂದರೆ ಹಣ ಕೊಡಲೇಬೇಕು. ಸುಂದರ ಮತ್ತು ಬಡ ವಿದ್ಯಾರ್ಥಿನಿಯಾಗಿದ್ದು ಅವರ ಕುಟುಂಬದಲ್ಲಿ ಬಲ ಇದ್ದವರು ಇರದೇ ಹೋದರೆ ಲೈಂಗಿಕ ಕಿರುಕುಳ ಅನುಭವಿಸಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ಷ್ಮ ಸಂವೇದನಾಶೀಲ ವಿದ್ಯಾರ್ಥಿನಿಯಾಗಿದ್ದರಂತೂ ಕಿರುಕುಳ ನೀಡಿ ಸಾಯಿಸಿ ಬಿಡುತ್ತಾರೆ. ಸಾಮಾನ್ಯವಾಗಿ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಕಿರುಕುಳ ಪ್ರಕರಣಗಳು ವಿರಳ. ಖಾಸಗಿ ವಿದ್ಯಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿರುವುದೇ ಹಣ ಮಾಡಲು. ಸಿಕ್ಕಾಪಟ್ಟೆ ಹಣ ಪೀಕುತ್ತಾರೆ. ಉತ್ತಮ ಫಲಿತಾಂಶ ನೀಡಿ ಕಳುಹಿಸುತ್ತಾರೆ. ವ್ಯಾಪಾರ ವಹಿವಾಟಿಗೆ ಧಕ್ಕೆ ಬರಬಾರದೆಂದು ಆಡಳಿತ ಮಂಡಳಿಯವರು ನಿಗಾ ವಹಿಸುತ್ತಾರೆ. ಆದರೆ ದುಷ್ಟ ಪ್ರಾಧ್ಯಾಪಕರು ಖಾಸಗಿ ವಿದ್ಯಾಸಂಸ್ಥೆಗಳಲ್ಲೂ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ ನಿದರ್ಶನಗಳು ಸಾಕಷ್ಟು ಇವೆ. ಖಾಸಗಿಯಲ್ಲಾದರೆ, ಪ್ರಕರಣ ಆಡಳಿತ ಮಂಡಳಿಯವರ ಗಮನಕ್ಕೆ ಬಂದು, ಸಂಸ್ಥೆಯ ಹೆಸರಿಗೆ ಕಳಂಕ ತಗಲುತ್ತದೆ ಎಂದಾದರೆ ದುಷ್ಟ ಪ್ರಾಧ್ಯಾಪಕರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡುತ್ತಾರೆ.
ಆದರೆ ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಬಡ ವಿದ್ಯಾರ್ಥಿ/ವಿದ್ಯಾರ್ಥಿನಿಯರು ನಿರಂತರ ಕಿರುಕುಳಕ್ಕೆ ಒಳಗಾಗಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾದ ಮೇಲೂ ಕ್ರಮ ಜರುಗಿಸುವುದಿಲ್ಲ. ದೂರು ನೀಡುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಶ್ಚಾತಾಪ ಪಡುವಷ್ಟು ಹಿಂಸೆ ನೀಡುತ್ತಾರೆ. ವಿಚಾರಣಾ ಸಮಿತಿಗಳು ಕಾನೂನಿನ ಹೆಸರಲ್ಲಿ ವಿಳಂಬ ಧೋರಣೆ ಅನುಸರಿಸುತ್ತವೆ ಹೊರತು ನ್ಯಾಯ ಕಲ್ಪಿಸುವುದಿಲ್ಲ. ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ ಖಾಯಂ ಆಗಿರುತ್ತದೆ. ಅಷ್ಟು ಮಾತ್ರವಲ್ಲ, ಪ್ರಾಂಶುಪಾಲ ಅಥವಾ ಕುಲಪತಿ ದುಷ್ಟರ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಾರೆ. ರಾಜಕೀಯ ಒತ್ತಡ ಬರುವ ಸಾಧ್ಯತೆ ಇರುತ್ತದೆ. ರೋಹಿತ್ ವೇಮುಲಾ ಪ್ರಕರಣವೇ ಸರಕಾರಿ ವ್ಯವಸ್ಥೆಯ ಮಿತಿಗಳನ್ನು ಢಾಳಾಗಿ ಅನಾವರಣಗೊಳಿಸಿದೆ.
ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಯ ದೊರೆಯುವುದು ದೂರದ ಮಾತು, ಮಹಿಳಾ ಪ್ರಾಧ್ಯಾಪಕರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲೂ ನ್ಯಾಯ ಸಿಗುವುದಿಲ್ಲ.
ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಯಾಕೆ ಕಿರುಕುಳ ನೀಡುತ್ತಾರೆ? ಕಿರುಕುಳ ನೀಡುವ ಅವಕಾಶ ಪ್ರಾಧ್ಯಾಪಕರಿಗೆ ಹೇಗೆ ಸಿಗುತ್ತದೆ? ಎಲ್ಲದಕ್ಕೂ ಕಾರಣ ಅಂಕಗಳು. ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆದ ಮೇಲೆ ಮೌಲ್ಯಮಾಪನಕ್ಕಾಗಿ ಉತ್ತರ ಪತ್ರಿಕೆಗಳು ವಿಶ್ವವಿದ್ಯಾನಿಲಯಗಳಿಗೆ ಹೋಗುತ್ತವೆ. ಅಲ್ಲೆಲ್ಲ ವಿದ್ಯಾರ್ಥಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಆಂತರಿಕ ಅಂಕಗಳು ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಆಟ ಆಡಿಸಬಹುದು. ಪ್ರತಿಭಾವಂತ ವಿದ್ಯಾರ್ಥಿಗಳು ತುಸು ಧೈರ್ಯದಿಂದ ಧಿಕ್ಕರಿಸಿ ನಿಲ್ಲಬಹುದು. ಆದರೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಅಂಕಗಳ ಕೀಲಿ ಕೈ ಪ್ರಾಧ್ಯಾಪಕರ ಕೈಯಲ್ಲಿ ಇರುತ್ತದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಎಲ್ಲ ಅಧಿಕಾರ ಪ್ರಾಧ್ಯಾಪಕರ ಹಿಡಿತದಲ್ಲಿ ಇರುತ್ತದೆ. ಪ್ರಾಧ್ಯಾಪಕ ಮನಸ್ಸು ಮಾಡಿದರೆ ಕತ್ತೆಯನ್ನು ಕುದುರೆ ಮಾಡಬಹುದು, ಕುದುರೆಯನ್ನು ಕತ್ತೆ ಮಾಡಬಹುದು. ಪಾಸು-ಫೇಲು, ಫಸ್ಟ್ ಕ್ಲಾಸು, ಗೋಲ್ಡ್ ಮೆಡಲ್, ಪಿಎಚ್.ಡಿ. ಸೀಟು ಎಲ್ಲ ಅವರ ನಿಯಂತ್ರಣದಲ್ಲೇ.
ಒಂದೆರಡು ದಶಕಗಳ ಹಿಂದೆಯೂ ಈ ಜಾತಿ ತಾರತಮ್ಯ, ಲೈಂಗಿಕ ಕಿರುಕುಳ ಇತ್ತು. ಆದರೆ ಹಣದ ವಹಿವಾಟು ನಡೆಯುತ್ತಿರಲಿಲ್ಲ. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಪ್ರಭಾವಿಯಾಗಿದ್ದರೆ, ಪ್ರಬಲವಾಗಿದ್ದರೆ ದುಷ್ಟ ಪ್ರಾಧ್ಯಾಪಕರಿಂದ ಬಚಾವ್ ಆಗುತ್ತಿದ್ದರು. ಆಗ ಒಳ್ಳೆಯವರು ಮತ್ತು ಮಾನವಂತರ ಸಂಖ್ಯೆ ಜಾಸ್ತಿ ಇತ್ತು. ಆಗ ವಿದ್ಯಾರ್ಥಿ/ವಿದ್ಯಾರ್ಥಿನಿಯ ಜಾತಿ ಮತ್ತು ವಿಧೇಯತೆ ಹೆಚ್ಚು ಅಂಕ ಪಡೆದುಕೊಳ್ಳಲು ನೆರವಿಗೆ ಬರುತ್ತಿದ್ದವು. ವಿದ್ಯಾರ್ಥಿ ಎಷ್ಟೇ ಪ್ರತಿಭಾವಂತನಾಗಿದ್ದರೂ, ವಿಧೇಯತೆ ತೋರದಿದ್ದರೆ ಅಥವಾ ಜಾತಿ ಬಲ ಇಲ್ಲದಿದ್ದರೆ ಉತ್ತಮ ಅಂಕ ಗಳಿಸುವುದು ಒತ್ತಟ್ಟಿಗಿರಲಿ ಪಾಸು ಮಾಡುವುದು ಕಷ್ಟದ ಮಾತಾಗಿತ್ತು. ವಿದ್ಯಾರ್ಥಿನಿ ಸುಂದರವಾಗಿದ್ದು ಪ್ರಾಧ್ಯಾಪಕ ನೀಚನಾಗಿದ್ದರೆ ಲೈಂಗಿಕ ಕಿರುಕುಳ ಅನುಭವಿಸಬೇಕಿತ್ತು. ಆತನೊಂದಿಗೆ ಸಹಕರಿಸದಿದ್ದರೆ ಉತ್ತಮ ಫಲಿತಾಂಶ ಕಾಣುವಂತಿರಲಿಲ್ಲ. ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದಿಂದ ವಂಚಿತರಾಗಿದ್ದಾರೆ.
ಕಳೆದ ಒಂದು ದಶಕದಿಂದ ಈಚೆಗೆ ಜಾತಿಬಲ, ವಿಧೇಯತೆ ಜೊತೆಗೆ ಹಣಬಲವು ಸೇರಿಕೊಂಡಿದೆ. ಸೌಂದರ್ಯ ಮೊದಲಿಂದಲೂ ಶಾಪವಾಗಿಯೇ ಪರಿಣಮಿಸಿದೆ.
ವಿಧೇಯತೆ ಎಂದರೆ, ಯಾರೂ ಊಹಿಸಲಾಗದ ವಿಧೇಯತೆ ತೋರಬೇಕಿತ್ತು. ಪ್ರತಿಭಾವಂತ ಮತ್ತು ಸ್ವಾಭಿಮಾನಿ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಆ ವಿಧೇಯತೆ ಕನಸಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿರ ಲಿಲ್ಲ. ಓದುವುದಕ್ಕಿಂತ ಹೆಚ್ಚಾಗಿ ಪ್ರಾಧ್ಯಾಪಕ ಹೇಳಿದ ಕೆಲಸಗಳನ್ನು ಮಾಡಬೇಕಿತ್ತು. ಗ್ರಂಥಾಲಯಕ್ಕಿಂತ ಪ್ರಾಧ್ಯಾಪಕರ ಮನೆಯಲ್ಲೇ ಹೆಚ್ಚು ಇರಬೇಕಿತ್ತು. ವಿಧೇಯತೆಯಲ್ಲಿ ತುಸು ಏರುಪೇರಾದರೂ ಪರೀಕ್ಷೆ ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿತ್ತು. ಅನೇಕ ದಡ್ಡ ಮತ್ತು ಮಧ್ಯಮ ಪ್ರತಿಭೆಯ ವಿದ್ಯಾರ್ಥಿಗಳು ಅತಿ ವಿಧೇಯತೆ ತೋರಿಯೇ ಗೋಲ್ಡ್ ಮೆಡಲ್ ತಮ್ಮದಾಗಿಸಿಕೊಳ್ಳುತ್ತಿದ್ದರು. ವಿಧೇಯತೆ ಎದುರು ಜಾತಿಯೂ ಗೌಣವಾಗುತ್ತಿತ್ತು.
ಈಗ ಬದಲಾದ ಕಾಲದಲ್ಲಿ ಹಣ ಮತ್ತು ವಿಧೇಯತೆ ಹೆಚ್ಚು ನಿರ್ಣಾಯಕವಾಗಿದೆ. ಜಾತಿ ಮತ್ತು ಪ್ರತಿಭೆಗಳು ಲೆಕ್ಕಕ್ಕೆ ಬರುವುದಿಲ್ಲ. ಒಬ್ಬ ವಿದ್ಯಾರ್ಥಿ ಅತ್ಯಂತ ಪ್ರತಿಭಾವಂತನಾಗಿದ್ದು ಜಾತಿಬಲ ಇದ್ದೂ, ಹಣಬಲ ಮತ್ತು ವಿಧೇಯತೆ ಇಲ್ಲದಿದ್ದರೆ ಆತ ಪ್ರಾಧ್ಯಾಪಕರ ಪ್ರೀತಿಯ ವಿದ್ಯಾರ್ಥಿಯಾಗಲು ಸಾಧ್ಯವಿಲ್ಲ. ಈಗಿನ ದಿನಮಾನಗಳಲ್ಲಿ ವಿದ್ಯಾರ್ಥಿಯಾಗಿದ್ದರೆ ಹಣ ಕೊಟ್ಟು ವಿಧೇಯತೆ ತೋರಬೇಕು, ವಿದ್ಯಾರ್ಥಿನಿಯಾಗಿದ್ದರೆ ಅದೂ ಸುಂದರ ವಿದ್ಯಾರ್ಥಿನಿಯಾಗಿದ್ದರೆ ಹಣ ಅಥವಾ ಸೌಂದರ್ಯ ಪ್ರಾಧ್ಯಾಪಕನಿಗೆ ಸಮರ್ಪಿಸಬೇಕು. ಇಲ್ಲದಿದ್ದರೆ ಸಂಘರ್ಷಕ್ಕೆ ಸಿದ್ಧರಿರಬೇಕು. ಪಾಲಿಗೆ ಬಂದ ಫಲಿತಾಂಶ ಸ್ವೀಕರಿಸಬೇಕು. ಈ ಬಗೆಯ ಕಿರುಕುಳ, ಹಿಂಸೆ ವಿಶ್ವವಿದ್ಯಾನಿಲಯಗಳು ಜನ್ಮ ತಾಳಿದಾಗಿಂದ ಅಸ್ತಿತ್ವದಲ್ಲಿವೆ. ಆದರೆ ಅಂಕ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಯಾರಿಗೂ ಅನಿಸಲೇ ಇಲ್ಲ. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ಮೌಲ್ಯಮಾಪನ ಮತ್ತು ಅಂಕ ನೀಡುವ ಅಧಿಕಾರ ಎಲ್ಲಿಯವರೆಗೂ ನೇರವಾಗಿ ಪ್ರಾಧ್ಯಾಪಕರ ನಿಯಂತ್ರಣದಲ್ಲಿ ಇರುತ್ತದೆಯೋ ಈ ಬಗೆಯ ಕಿರುಕುಳ ಹಿಂಸೆ ತಪ್ಪಿದ್ದಲ್ಲ. ಜಾತಿ ತಾರತಮ್ಯ, ಲಿಂಗ ತಾರತಮ್ಯ ಮತ್ತು ಹಣದ ಹಾವಳಿ ಜಾರಿಯಲ್ಲಿ ಇರುತ್ತದೆ.
ಇಷ್ಟೆಲ್ಲ ಕಥೆ-ವ್ಯಥೆ ಸ್ನಾತಕೋತ್ತರ ಪದವಿ ಪಡೆಯಲು ಎದುರಿಸಬೇಕು. ಇನ್ನೂ ಪಿಎಚ್.ಡಿ. ಸೀಟು ಪಡೆಯುವುದು ಮತ್ತು ಪದವಿಗೆ ಅರ್ಹನಾಗುವುದರ ಸಾಹಸ ಗಾಥೆಯೇ ಇದೆ. ಪ್ರತೀ ವಿದ್ಯಾರ್ಥಿ ಪಿಎಚ್.ಡಿ. ಪಡೆಯುವಾಗಿನ ಅನುಭವ ದಾಖಲಿಸಿದರೆ ವಿಶ್ವವಿದ್ಯಾನಿಲಯಗಳ ಒಟ್ಟು ಶೈಕ್ಷಣಿಕ ವ್ಯವಸ್ಥೆಯ ವಿರಾಟ್ ಸ್ವರೂಪ ಮನವರಿಕೆಯಾಗುತ್ತದೆ. ಅಷ್ಟು ಮಾತ್ರವಲ್ಲ ವಿಶ್ವವಿದ್ಯಾನಿಲಯಗಳ ಸಂಶೋಧನಾ ಗುಣಮಟ್ಟದ ಸ್ವರೂಪವು ಅರ್ಥ ಮಾಡಿಕೊಳ್ಳಬಹುದು. ಅತ್ಯುತ್ತಮ ಗುರು ಮತ್ತು ಪ್ರತಿಭಾವಂತ ಶಿಷ್ಯರು ಇಲ್ಲವೇ ಇಲ್ಲ ಎಂದು ಹೇಳಲಾಗದು. ಆದರೆ ಆ ಅಪರೂಪದ ಜೋಡಿ ವಿರಳವಾಗುತ್ತಿದೆ. ಎರಡು ದಶಕಗಳ ಹಿಂದೆ, ಪಿಎಚ್.ಡಿ. ಸೀಟು ಸ್ನಾತಕೋತ್ತರ ಪದವಿಗೆ ಸೇರಿ ಪ್ರಾಧ್ಯಾಪಕರಿಗೆ ಅತಿ ವಿಧೇಯತೆ ತೋರಿದ ದಿನವೇ ನಿಗದಿಯಾಗಿರುತ್ತಿತ್ತು. ಸ್ನಾತಕೋತ್ತರ ಪದವಿ ಫಲಿತಾಂಶ ಕೂಡಾ. ಸ್ನಾತಕೋತ್ತರ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದವರು ಮತ್ತು ನಂತರದ ಸ್ಥಾನದಲ್ಲಿದ್ದ ಒಬ್ಬಿಬ್ಬರಿಗೆ ಮಾತ್ರ ಪಿಎಚ್.ಡಿ. ಸೀಟು ಸಿಗುತ್ತಿದ್ದವು. ಆಗ ಪಿಎಚ್.ಡಿ. ಸೀಟುಗಳು ಕಡಿಮೆ ಇದ್ದವು. ಯುಜಿಸಿ ನಿಯಮದ ಪ್ರಕಾರ ಈಗ ಸೀಟುಗಳು ಹೆಚ್ಚಾಗಿವೆ. ಗುರುಕುಲ ಮಾದರಿಯಲ್ಲಿ ಪಿಎಚ್.ಡಿ. ಸೀಟು ಹಂಚುವ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಪ್ರವೇಶ ಪರೀಕ್ಷೆ ಮೂಲಕ ಪಿಎಚ್.ಡಿ. ಸೀಟು ಹಂಚುವ ಕ್ರಮ ಮೇಲ್ನೋಟಕ್ಕೆ ಕ್ರಾಂತಿಕಾರಿ ಹೆಜ್ಜೆ ಎನಿಸುತ್ತದೆ. ಆದರೆ, ಪ್ರವೇಶ ಪರೀಕ್ಷೆಯಲ್ಲಿ ಪ್ರಾಧ್ಯಾಪಕರು ಭಾಗಿಯಾಗುವುದರಿಂದ ಸ್ವಜನ ಪಕ್ಷಪಾತ, ಜಾತಿ ತಾರತಮ್ಯ, ಕಿರುಕುಳ ಮುಂದುವರಿದಿವೆ. ಪಿಎಚ್.ಡಿ. ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಒಎಂಆರ್ ಶೀಟ್ ಪರಿಚಯಿಸಲಾಯಿತು. ವಿಚಿತ್ರವೆಂದರೆ ಒಎಂಆರ್ ಶೀಟ್ ಕೂಡ ಇವರ ಕೈಯಲ್ಲಿ ಭ್ರಷ್ಟಗೊಂಡಿದೆ. ಒಎಂಆರ್ ಶೀಟ್ ಬಂದಾಗಿನಿಂದ ಇಲ್ಲಿಯವರೆಗಿನ ಪಿಎಚ್.ಡಿ. ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅಕ್ರಮ ನಡೆದಿರುವುದು ಸ್ಪಷ್ಟವಾಗುತ್ತದೆ.
ಒಂದು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರೈಸುವ ವಿದ್ಯಾರ್ಥಿ ಪ್ರತಿ ಶತ ಎಂಭತ್ತು ಅಂಕ ಗಳಿಸಿರುತ್ತಾನೆ. ಅದೇ ವಿಭಾಗದ ಇನ್ನೊಬ್ಬ ವಿದ್ಯಾರ್ಥಿ ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ 55 ಅಂಕಗಳನ್ನು ಪಡೆದಿರುತ್ತಾನೆ. ಆ ಇಬ್ಬರೂ ವಿದ್ಯಾರ್ಥಿಗಳು ಒಎಂಆರ್ ಶೀಟ್‌ನಲ್ಲಿ ಪಿಎಚ್.ಡಿ. ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಅಚ್ಚರಿ ಮೂಡಿಸುವ ಫಲಿತಾಂಶ ಹೊರ ಬೀಳುತ್ತದೆ. ಸ್ನಾತಕೋತ್ತರ ಪದವಿಯಲ್ಲಿ ಪ್ರತಿ ಶತ ಎಂಭತ್ತು ಅಂಕ ಗಳಿಸಿದ ವಿದ್ಯಾರ್ಥಿ ಒಎಂಆರ್ ಶೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುತ್ತಾನೆ. ಆದರೆ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕೇವಲ ಪ್ರತಿಶತ 55 ಅಂಕ ಗಳಿಸಿದ ವಿದ್ಯಾರ್ಥಿ ಒಎಂಆರ್ ಶೀಟ್‌ನ ಪ್ರವೇಶ ಪರೀಕ್ಷೆಯಲ್ಲಿ ಪ್ರತಿ ಶತ 85 ಅಂಕ ಪಡೆದುಕೊಂಡು ಪಿಎಚ್.ಡಿ. ಸೀಟು ತನ್ನದಾಗಿಸಿಕೊಳ್ಳುತ್ತಾನೆ. ಹಣದ ಮಹಿಮೆ ಏನೆಲ್ಲಾ ಚಮತ್ಕಾರ ಮಾಡಿ ಬಿಡುತ್ತದೆ.
ಇತ್ತೀಚಿನ ದಿನಮಾನಗಳಲ್ಲಿ ಪಿಎಚ್.ಡಿ. ಸೀಟು ಪಡೆಯುವುದನ್ನು ಒಎಂಆರ್ ಶೀಟ್ ನಿರ್ಧರಿಸುತ್ತಿರುವುದರಿಂದ ಪ್ರತಿಶತ 55ರ ಮೇಲೆ ಅಂಕ ಹೊಂದಿರುವ ಯಾರೂ ಬೇಕಾದರೂ ಪಿಎಚ್. ಡಿ.ಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಒಮ್ಮೆ ಪಿಎಚ್. ಡಿ. ನೋಂದಾಯಿಸಿಕೊಂಡು ಮಾರ್ಗದರ್ಶಕರಿಗೆ ಹಣ ಮತ್ತು ವಿಧೇಯತೆಯಿಂದ ಸಂತೃಪ್ತಿ ಪಡಿಸುತ್ತಾ ಹೋದರೆ ಮೂರು ವರ್ಷ ಕಳೆದದ್ದೇ ಗೊತ್ತಾಗುವುದಿಲ್ಲ. ಪಿಎಚ್.ಡಿ. ಮಾರ್ಗದರ್ಶಕರಿಗೆ ಹಣ ಮತ್ತು ವಿಧೇಯತೆ ಸಂದಾಯವಾಗದಿದ್ದರೆ ಸಂಘರ್ಷ ಶುರುವಾಗುತ್ತದೆ.ಮೂರು ವರ್ಷದ ಪಿಎಚ್.ಡಿ. ಕೋರ್ಸ್ ಆರು ವರ್ಷ ಕಳೆದರೂ ಮುಗಿಯುವುದಿಲ್ಲ. ಅದರಲ್ಲೂ ಸುಂದರ ವಿದ್ಯಾರ್ಥಿನಿ, ಕೀಚಕ ಪ್ರಾಧ್ಯಾಪಕ ಜೋಡಿ ಪಿಎಚ್. ಡಿ. ಕೈಂಕರ್ಯದಲ್ಲಿ ತೊಡಗಿದರೆ ಸಂಘರ್ಷ ಉತ್ತುಂಗಕ್ಕೆ ಹೋಗುತ್ತದೆ. ಚಪ್ಪಲಿ ಏಟು, ಮಾಧ್ಯಮ ಸುದ್ದಿ, ಕುಲಪತಿಗೆ ದೂರು, ಮಾರ್ಗದರ್ಶಕರ ಬದಲಾವಣೆ ಹಂತಕ್ಕೆ ತಲುಪುತ್ತದೆ. ವಿದ್ಯಾರ್ಥಿನಿ ಸ್ವಾಭಿಮಾನಿಯಾಗಿದ್ದು ಗಟ್ಟಿಗಿತ್ತಿಯಾಗಿದ್ದಾಗ ಮಾತ್ರ ವಿವಾದವಾಗಿ ಒಂದು ಹಂತದಲ್ಲಿ ಪರ್ಯಾವಸಾನಗೊಳ್ಳುತ್ತದೆ. ವಿದ್ಯಾರ್ಥಿನಿ ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿಯಾಗಿದ್ದು ಹಣಬಲ, ಜಾತಿಬಲ ಇಲ್ಲದೆ ಹೋದರೆ ಒಂದೋ ವೇಮುಲಾ ತರಹ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲ ಪಿಎಚ್.ಡಿ. ಪದವಿಯ ಕನಸು ಬಿಡಬೇಕು. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಎಲ್ಲ ವಿಭಾಗಗಳಲ್ಲಿ ಕಿರುಕುಳ ಮತ್ತು ಲೈಂಗಿಕ ಕಿರುಕುಳ ನಿತ್ಯದ ಗೋಳಿನ ಕಥೆಯಾಗಿದೆ. ಬಲ ಇದ್ದವರು, ರಾಜಿ ಸ್ವಭಾವದವರು ಹೇಗೋ ಪಾರಾಗುತ್ತಾರೆ. ರೋಹಿತ್ ವೇಮುಲಾ ಹೆಸರಿನ ಕಾನೂನು ಪರಿಣಾಮಕಾರಿಯಾಗಿ ಫಲ ನೀಡಬೇಕೆಂದರೆ ಪಿಎಚ್. ಡಿ. ಪ್ರವೇಶ ಮತ್ತು ಅಧ್ಯಯನ ಸಂದರ್ಭದಲ್ಲಿ ನೀಚ ಪ್ರಾಧ್ಯಾಪಕರ ಪ್ರಾಬಲ್ಯವನ್ನು ನಿಯಂತ್ರಿಸಬೇಕಿದೆ. ವಿಶೇಷವಾಗಿ ಪಿಎಚ್.ಡಿ. ಪ್ರವೇಶದಲ್ಲಿ ಪ್ರಾಧ್ಯಾಪಕರ ಪಾತ್ರ ಸಂಪೂರ್ಣ ತಡೆಯಬೇಕು. ನೆಟ್ ಅಥವಾ ಸೆಟ್ ಪಾಸು ಮಾಡಿದವರಿಗೆ ನೇರ ಪಿಎಚ್.ಡಿ. ಪ್ರವೇಶ ದೊರೆಯಬೇಕು. ಮಾರ್ಗದರ್ಶಕನ ಪಾತ್ರ ಮಾರ್ಗದರ್ಶನ ಮಾಡಲು ಮಾತ್ರ ಸೀಮಿತವಾಗಿರಬೇಕು. ಸಂಶೋಧನೆಯ ಗುಣಮಟ್ಟದ ಮೌಲ್ಯ ಮಾಪನ ಮಾಡಲು ಮಾರ್ಗದರ್ಶಕನ ಹೊರತು ಪಡಿಸಿದ ಪ್ರತ್ಯೇಕ ತಜ್ಞರ ಸಮಿತಿ ರಚಿಸಬೇಕು. ಮಾರ್ಗದರ್ಶಕ ರಾಕ್ಷಸನಾದಾಗ ಆತನನ್ನು ಸಂಪೂರ್ಣ ಕಡೆಗಣಿಸಿ ಈ ತಜ್ಞರ ಸಮಿತಿಯೇ ಸಂಶೋಧನಾ ವಿದ್ಯಾರ್ಥಿಯ ಅಧ್ಯಯನಕ್ಕೆ ಸಲಹೆ, ಮಾರ್ಗದರ್ಶನ ಮಾಡುವಂತಿರಬೇಕು. ರೋಹಿತ್ ವೇಮುಲಾ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಸಂಶೋಧನಾ ವಿದ್ಯಾರ್ಥಿಗಳ ಕಿರುಕುಳಕ್ಕೆ ಬ್ರೇಕ್ ಹಾಕಬೇಕು. ಹಾಲಿ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರಬೇಕು. ಜಾತಿ ತಾರತಮ್ಯ, ಲಿಂಗ ತಾರತಮ್ಯ ಮತ್ತು ಹಣದ ಹಾವಳಿಯನ್ನು ಸಂಪೂರ್ಣ ನಿಯಂತ್ರಿಸಬಹುದು.