ಕುಲಪತಿಗಳ ನೇಮಕಾತಿ ಮತ್ತು ಸಾಮಾಜಿಕ ನ್ಯಾಯ

✍️ ಡಾ. ರಾಜಶೇಖರ ಹತಗುಂದಿ
ಕಾಂಗ್ರೆಸ್, ಬಿಜೆಪಿ ಮತ್ತು ಇನ್ನಿತರ ರಾಜಕೀಯ ಪಕ್ಷಗಳು ಅವಕಾಶ ಸಿಕ್ಕಾಗೆಲ್ಲ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಕುಟ್ಟುತ್ತಲೇ ಇರುತ್ತವೆ. ಆದರೆ ಅವಕಾಶ ಕಲ್ಪಿಸುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುವುದಿಲ್ಲ. ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ತಬ್ಬಲಿ ಸಮುದಾಯಗಳು ಕಣ್ಣಿಗೆ ಕಾಣುವುದೇ ಇಲ್ಲ. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಅಸಾದಿ, ಗೊಸಂಗಿ, ಅಲೆಮಾರಿ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಎಂಬುದು ಅಕ್ಷರಶಃ ಮರೀಚಿಕೆಯಾಗಿ ಪರಿಣಮಿಸಿದೆ.
ನಿರ್ಲಕ್ಷಿತ ಸಮುದಾಯಗಳ ಮಾತು ಒತ್ತಟ್ಟಿಗಿರಲಿ, ಅಷ್ಟೋ ಇಷ್ಟೋ ವಿದ್ಯೆ ಕಲಿತು ಒಂದು ಸರಕಾರಿ ನೌಕರಿ ಗಿಟ್ಟಿಸಿದ ಹಡಪದ, ಮಡಿವಾಳ, ಕಂಬಾರ, ಕುಂಬಾರ, ಬಣಗಾರ, ನೇಕಾರದಂತಹ ಅತಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ದಿವ್ಯ ನಿರ್ಲಕ್ಷ್ಯ ತೋರಿವೆ. ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದೆಂದರೆ, ಅಲ್ಲಿಯ ಬಲಿಷ್ಠರಿಗೆ ಮಣೆ ಹಾಕುವುದೆಂದೇ ಭಾವಿಸಲಾಗಿದೆ. ಕುರುಬ, ಈಡಿಗ, ಬಲಿಜ ಸಮುದಾಯಗಳು ಹಿಂದುಳಿದ ಕೋಟಾದಲ್ಲಿ ಮತ್ತೆ ಅವಕಾಶ ಪಡೆಯುತ್ತಲೇ ಇರುತ್ತವೆ. ಆದರೆ ತಬ್ಬಲಿ ಸಮುದಾಯಗಳಲ್ಲಿ ಜನ್ಮ ತಾಳಿದ ವ್ಯಕ್ತಿ ಎಷ್ಟೇ ಪ್ರತಿಭಾವಂತ, ಕ್ರಿಯಾಶೀಲ ಮತ್ತು ದಕ್ಷನಾಗಿದ್ದರೂ ನಿರಂತರವಾಗಿ ಅವಕಾಶ ವಂಚಿತನಾಗುತ್ತಲೇ ಇರುತ್ತಾನೆ.
ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳು ಮತ್ತೆ ಮತ್ತೆ ಕೆಲವೇ ಸಮುದಾಯಗಳ ಪಾಲಾಗುತ್ತಲೇ ಇರುತ್ತವೆ. ಈ ರೂಢಿಗತ ಮತ್ತು ಅತ್ಯಂತ ಅಮಾನವೀಯ ಪದ್ಧತಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಿ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಜೀವ ತುಂಬಿದವರು ದಿ. ದೇವರಾಜ ಅರಸು ಅವರು. ಅದೆಷ್ಟೋ ತಬ್ಬಲಿ ಸಮುದಾಯಗಳಿಗೆ ಮೊದಲ ಬಾರಿಗೆ ರಾಜಕೀಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿನ ಉನ್ನತ ಹುದ್ದೆಗಳಿಗೆ ಅವಕಾಶ ನೀಡಿದ್ದರು. ದೇವರಾಜ ಅರಸು ಅವರ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ ವಾಸ್ತವದಲ್ಲಿ ಜಾರಿಗೆ ತರುವುದಿಲ್ಲ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಚುಕ್ಕಾಣಿ ಹಿಡಿದಾಗ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ತಬ್ಬಲಿ ಸಮುದಾಯಗಳಿಗೆ ನೀಡಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯವನ್ನು ವಿಭಜಿಸಿ ಜ್ಞಾನ ಭಾರತಿ ಸೇರಿದಂತೆ ಮೂರು ವಿಶ್ವವಿದ್ಯಾನಿಲಯಗಳನ್ನು ಸೃಷ್ಟಿಸಲಾಗಿತ್ತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಕ್ರೈಸ್ತ ಸಮುದಾಯದ ಪ್ರೊ. ಜಾಫೆಟ್ ಅವರನ್ನು ಒಂದೇ ಒಂದು ನಯಾ ಪೈಸೆ ಇಲ್ಲದೆ ಕುಲಪತಿಯನ್ನಾಗಿ ನೇಮಕ ಮಾಡಿದ್ದರು. ಹಾಗೆಯೇ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಕ್ಕೆ ಮಡಿವಾಳ ಸಮುದಾಯದ ಕೆಂಪರಾಜು ಅವರನ್ನು ಕುಲಪತಿ ಹುದ್ದೆಯಲ್ಲಿ ಕೂರಿಸಿದ್ದರು. ಹೊಸದಾಗಿ ಸೃಷ್ಟಿಯಾದ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸುವ ಅಧಿಕಾರ ಮುಖ್ಯಮಂತ್ರಿಯವರಿಗೆ ಇರುತ್ತದೆ. ತಮಗೆ ದತ್ತವಾದ ಪರಮಾಧಿಕಾರವನ್ನು ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಕಾಶ ವಂಚಿತ ಸಮುದಾಯಗಳಿಗೆ ಮೊದಲ ಬಾರಿಗೆ ಅವಕಾಶ ನೀಡುವ ಬದ್ಧತೆ ತೋರಿದ್ದರು.
ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದಾಗಲೂ ಸಿದ್ದರಾಮಯ್ಯ ಅವರ ಕಣ್ಣಿಗೆ ಕೆಲವು ಸಮುದಾಯಗಳು ಕಾಣಿಸಿರಲಿಲ್ಲ. ಕೋಲಿ, ಅಂಬಿಗ, ಬೆಸ್ತ, ಸುಣಗಾರ ಎಂಬ ಪರ್ಯಾಯ ಹೆಸರುಗಳಲ್ಲಿ ಕರೆಯಲ್ಪಡುವ ಕಬ್ಬಲಿಗ ಸಮುದಾಯದ ಒಬ್ಬರನ್ನೂ ಕುಲಪತಿ ಹುದ್ದೆಗೆ ಪರಿಗಣಿಸಿರಲಿಲ್ಲ. ಹಾಗೆ ನೋಡಿದರೆ ಸಿ. ಪಿ. ಸಿದ್ದಾಶ್ರಮರಂಥ ಪ್ರತಿಭಾವಂತ ಪ್ರಾಧ್ಯಾಪಕರು ಕುಲಪತಿ ಹುದ್ದೆಗೆ ಅರ್ಹರಾಗಿದ್ದರು. ಈ ಹಿಂದೆ ಕಬ್ಬಲಿಗ ಸಮುದಾಯಕ್ಕೆ ಸೇರಿದ ಡಾ. ಚೆನ್ನಣ್ಣ ವಾಲಿಕಾರ್ ಅವರಂತಹ ಹಿರಿಯ ಸಾಹಿತಿ, ಪ್ರಾಧ್ಯಾಪಕ ಕುಲಪತಿ ಹುದ್ದೆಯಿಂದ ವಂಚಿತರಾಗಿದ್ದರು. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕಬ್ಬಲಿಗ ಸಮುದಾಯದ ಸಂಖ್ಯಾಬಲ ಗಣನೀಯ ಪ್ರಮಾಣದಲ್ಲಿದೆ. ಆ ಸಮುದಾಯದಲ್ಲಿ ಪ್ರಬಲ ರಾಜಕೀಯ ನಾಯಕತ್ವ ಇಲ್ಲದಿರುವುದರಿಂದ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳಿಂದ ವಂಚಿತವಾಗಿದೆ.
ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಮೂವತ್ತೆರಡು ವಿಶ್ವವಿದ್ಯಾನಿಲಯಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಒಂದು ವಿಶ್ವವಿದ್ಯಾನಿಲಯ ಇದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕಾರ್ಯ ನಿರ್ವಹಿಸುತ್ತಿದೆ. ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆಯ ವ್ಯಾಪ್ತಿಯಲ್ಲಿ ಕೆಲವು ವಿಶ್ವವಿದ್ಯಾನಿಲಯಗಳಿವೆ.
ಹೊಸದಾಗಿ ಸೃಷ್ಟಿಸಲಾದ ಕ್ಲಸ್ಟರ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು ನಲವತ್ತಕ್ಕೂ ಹೆಚ್ಚು ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಸಾಮಾಜಿಕ ನ್ಯಾಯ ಪಾಲಿಸುವ ಮತ್ತು ಅವಕಾಶವಂಚಿತ ಸಮುದಾಯಗಳ ಪ್ರತಿಭಾವಂತ ಅಭ್ಯರ್ಥಿಗಳಿಗೆ ಕುಲಪತಿ ಹುದ್ದೆ ನೀಡಬಹುದಾಗಿದೆ. ಖಾಸಗಿ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಪ್ರಬಲ ಸಮುದಾಯಗಳ ಸೊತ್ತಾಗಿವೆ. ಅವುಗಳ ಮೇಲೆ ಕರ್ನಾಟಕ ಸರಕಾರಕ್ಕೆ ನಿಯಂತ್ರಣ ಇಲ್ಲ. ಅಲ್ಲೆಲ್ಲ ತಮಗೆ ಬೇಕಾದವರನ್ನು ಕುಲಪತಿ ಹುದ್ದೆಯಲ್ಲಿ ಕೂರಿಸಲಾಗುತ್ತದೆ.
ನಲವತ್ತಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಕರ್ನಾಟಕ ಸರಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷ ಕಳೆದ ಮೇಲೂ ಕಬ್ಬಲಿಗ ಸಮುದಾಯದ ಒಬ್ಬ ಪ್ರಾಧ್ಯಾಪಕ ಕುಲಪತಿ ಹುದ್ದೆಗೆ ನೇಮಕಗೊಂಡಿಲ್ಲವೆಂದರೆ ಸೋಜಿಗವೆನಿಸುತ್ತದೆ. ಇದೊಂದು ಐತಿಹಾಸಿಕ ಲೋಪ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದರೆ ಅವರು ಮೊದಲ ಬಾರಿಗೆ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿದಾಗಲೇ ಸರಿಪಡಿಸುತ್ತಿದ್ದರು. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯ ಕುರಿತ ಬದ್ಧತೆ ಮತ್ತು ಕಾಳಜಿ ಅಪಾರವಾಗಿದೆ.
ಈ ಹಿಂದಿನ ಬಿಜೆಪಿ ಸರಕಾರ ಅತಿ ಹಿಂದುಳಿದ ಸಮುದಾಯಗಳಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ಕಲ್ಪಿಸಲು ಉತ್ಸುಕವಾಗಿತ್ತು. ಆದರೆ ಪರಿಶಿಷ್ಟ ಜಾತಿಗಳಲ್ಲಿನ ಎಡಗೈ ಸಮುದಾಯಕ್ಕೆ ಕುಲಪತಿ ಹುದ್ದೆ ನೀಡುವಾಗ ಸಂಪೂರ್ಣ ಕಡೆಗಣಿಸಿತ್ತು. ಅದು ಆಕಸ್ಮಿಕವೋ ಕಾಕತಾಳೀಯವೋ ಒಂದಂತೂ ಸತ್ಯ, ಬಿಜೆಪಿಯ ನಾಲ್ಕು ವರ್ಷದ ಅಧಿಕಾರವದಿಯಲ್ಲಿ ಎಡಗೈ ಸಮುದಾಯದ ಒಬ್ಬರನ್ನೂ ಕುಲಪತಿ ಹುದ್ದೆಗೆ ಪರಿಗಣಿಸಲಿಲ್ಲ. ಎಡಗೈ ಸಮುದಾಯ ಮಾತ್ರವಲ್ಲ, ಭೋವಿ, ಲಂಬಾಣಿ, ಕೊರಮ ಸೇರಿದಂತೆ ಇನ್ನಿತರ ಪರಿಶಿಷ್ಟರನ್ನು ಬಿಜೆಪಿ ಲೆಕ್ಕಕ್ಕೆ ಹಿಡಿಯಲಿಲ್ಲ.
ಆಶ್ಚರ್ಯದ ಸಂಗತಿಯೆಂದರೆ, ಪರಿಶಿಷ್ಟ ಜಾತಿಗಳಲ್ಲಿನ ಎಡಗೈ ಸಮುದಾಯ ಸೇರಿದಂತೆ ಭೋವಿ, ಲಂಬಾಣಿ, ಕೊರಮ ಮುಂತಾದ ಸಮುದಾಯಗಳು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ವೋಟ್ ಬ್ಯಾಂಕ್ ಎಂದೇ ಆ ಪಕ್ಷದ ನಾಯಕರು ಭಾವಿಸಿದ್ದಾರೆ. ತನ್ನನ್ನು ಬೆಂಬಲಿಸುವ ಸಮುದಾಯಗಳನ್ನು ಬಿಜೆಪಿ ಯಾವ ಕಾರಣಕ್ಕೆ ನಿರ್ಲಕ್ಷಿಸಿತ್ತೋ..? ಆದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಲೆಲ್ಲ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳನ್ನು ಅತಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಪ್ರತಿಭಾವಂತರಿಗೆ ನೀಡಿದೆ. ಮಡಿವಾಳ ಸುಮುದಾಯದ ಡಾ. ದಯಾನಂದ ಅಗಸರ, ವಿಶ್ವಕರ್ಮ ಸಮುದಾಯದ ಡಾ. ತುಳಸಿಮಾಲಾ, ಹಡಪದ ಸಮುದಾಯದ ವಿಷ್ಣುಕಾಂತ ಚಟಪಲ್ಲಿ, ದೇವಾಂಗ ಸಮುದಾಯದ ಶ್ರೀನಿವಾಸ್ ಬಳ್ಳಿ ಮುಂತಾದವರನ್ನು ಕುಲಪತಿ ಹುದ್ದೆಯಲ್ಲಿ ಕೂರಿಸಿದ್ದು ಬಿಜೆಪಿ ಸರಕಾರ. ಡಾ.ನರಸಿಂಹಲು ವಡವಾಟಿ ಸೇರಿದಂತೆ ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ ಹಲವು ಸಾಹಿತಿ ಕಲಾವಿದರನ್ನು ಸಾಂಸ್ಕೃತಿಕ ಸಂಸ್ಥೆಗಳಿಗೆ ಅಧ್ಯಕ್ಷರನ್ನಾಗಿಸಿದ್ದು, ಪದ್ಮಶ್ರೀ, ಪದ್ಮಭೂಷಣ ಗೌರವಕ್ಕೆ ಪರಿಗಣಿಸಿದ್ದು ಬಿಜೆಪಿ.
ಸದ್ಯ ಕರ್ನಾಟಕದಲ್ಲಿನ ನಲವತ್ತಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಕುಲಪತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಾಹ್ಮಣ ಮತ್ತು ಪರಿಶಿಷ್ಟರಲ್ಲಿನ ಬಲಗೈ ಸಮುದಾಯಕ್ಕೆ ಸೇರಿದ ಕುಲಪತಿಗಳು ವಿಶ್ವವಿದ್ಯಾನಿಲಯಗಳ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಕುರುಬ, ವೈಶ್ಯ ಮತ್ತು ಬಲಿಜ ಸಮುದಾಯಕ್ಕೆ ಸೇರಿದವರು ಕುಲಪತಿ ಹುದ್ದೆಯ ಅವಕಾಶ ಪಡೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ನಿರಂಜನ್ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು. ಅದೇ ಸಮುದಾಯದ ಡಾ. ಗೋಮತಿದೇವಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು. ಅದು ಸಾಲದು ಎಂಬಂತೆ ಡಾ. ನಿರಂಜನ್ ಅವರನ್ನು ಸಿದ್ದರಾಮಯ್ಯ ಸರಕಾರ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದೆ.
ಸಾಮಾಜಿಕ ನ್ಯಾಯವೆಂದರೆ, ಎಲ್ಲ ಸಮುದಾಯಗಳಿಗೆ ಅವರವರ ಸಂಖ್ಯಾಬಲದ ಅನುಪಾತದಲ್ಲಿ ಅವಕಾಶಗಳನ್ನು ಹಂಚುವುದು. ಪುರ್ವಾಗ್ರಹಪೀಡಿತರಾಗಿ ಯಾವ ಸಮುದಾಯವನ್ನೂ ಅವಕಾಶ ವಂಚಿತ ಮಾಡಬಾರದು. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ ಎಂಬುದು ಕಾಂತರಾಜು ಆಯೋಗದ ವರದಿಯೇ ಖಚಿತಪಡಿಸಿದೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮ್ ಸಮುದಾಯದ ಇಬ್ಬರನ್ನು ಕುಲಪತಿ ಹುದ್ದೆಯಲ್ಲಿ ಕೂರಿಸಿದ್ದರು. ಡಾ. ಎಚ್. ರಾಜಾಸಾಬ್ ಅವರನ್ನು ತುಮಕೂರು ವಿಶ್ವವಿದ್ಯಾನಿಲಯಕ್ಕೆ, ಡಾ. ಸಬಿಹಾ ಭೂಮಿಗೌಡ ಅವರನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನಾಗಿಸಿದ್ದರು.
ಸದ್ಯ ನಲವತ್ತು ವಿಶ್ವವಿದ್ಯಾನಿಲಯಗಳಲ್ಲಿ ಒಂದೇ ಒಂದು ವಿಶ್ವವಿದ್ಯಾನಿಲಯಕ್ಕೆ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರಾಧ್ಯಾಪಕ ಕುಲಪತಿ ಹುದ್ದೆಯಲ್ಲಿ ಇಲ್ಲ. ಪ್ರತಿಭಾವಂತ ಚಿಂತಕ ಮುಜಾಫರ್ ಅಸ್ಸಾದಿ ಅವರನ್ನು ರಾಯಚೂರು ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿಯನ್ನಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇಮಿಸಿದ್ದರು. ಕಾಂಗ್ರೆಸ್ ಸರಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡಾಗ ಮುಜಾಫರ್ ಅಸ್ಸಾದಿಯವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಮುಜಾಫರ್ ಅಸ್ಸಾದಿಯವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿಸಲು ಪ್ರಯತ್ನಿಸಿದ್ದರು. ಆದರೆ ಮಂಗಳೂರಿನ ಕೋಮುವಾದಿ ಮನಸ್ಥಿತಿಯವರ ಹಠಕ್ಕೆ ಅಸ್ಸಾದಿ ಕುಲಪತಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲೇ ಇಲ್ಲ. ಅಷ್ಟರಲ್ಲಿ ಅವರು ನಿಧನರಾದರು.
ಕರ್ನಾಟಕದ ಒಂದೇ ಒಂದು ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಮುದಾಯದ ಪ್ರಾಧ್ಯಾಪಕ ಇಲ್ಲ ಎಂಬುದೇ ಜನತಂತ್ರಕ್ಕೆ ಬಹು ದೊಡ್ಡ ಕಳಂಕ. ದುರಂತವೆಂದರೆ, ಪರಿಶಿಷ್ಟರಲ್ಲಿನ ಎಡಗೈ ಸಮುದಾಯದ ಒಬ್ಬರೂ ಕುಲಪತಿ ಹುದ್ದೆಯಲ್ಲಿ ಇಲ್ಲ. ಕೊರಮ ಸಮುದಾಯಕ್ಕೆ ಸೇರಿದ ಪ್ರಾಧ್ಯಾಪಕ ಪ್ರೊ. ಮುನಿರಾಜು ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆಗೆ ಹಿಡಿದ ಕನ್ನಡಿಯಂತಿದೆ. ಅತ್ಯಲ್ಪ ಕೊರಮ ಸಮುದಾಯಕ್ಕೆ ಸೇರಿದ ಒಬ್ಬ ಪ್ರಾಧ್ಯಾಪಕ ಕುಲಪತಿ ಹುದ್ದೆ ಅಲಂಕರಿಸುವುದೆಂದರೆ ಜನತಂತ್ರದ ಸಾಧ್ಯತೆ ವಿಸ್ತಾರವಾದಂತೆ.
ಸೋಜಿಗದ ಸಂಗತಿಯೆಂದರೆ, ಪರಿಶಿಷ್ಟರಲ್ಲಿನ ಎಡಗೈ ಸಮುದಾಯಕ್ಕೆ ಸೇರಿದ ಒಬ್ಬ ಪ್ರಾಧ್ಯಾಪಕನೂ ಕುಲಪತಿ ಹುದ್ದೆಯಲ್ಲಿ ಇಲ್ಲದಿರುವುದು. ಎಡಗೈ ಸಮುದಾಯ ಸಂಖ್ಯಾಬಲ ಮತ್ತು ರಾಜಕೀಯ ಪ್ರಾಬಲ್ಯ ಪಡೆದುಕೊಂಡಿದೆ. ಆ ಸಮುದಾಯದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೋ ಅಥವಾ ಆ ಸಮುದಾಯದ ಅರ್ಹ ಪ್ರಾಧ್ಯಾಪಕರ ಅಭಾವವೋ? ಒಟ್ಟಿನಲ್ಲಿ ಎಡಗೈ ಸಮುದಾಯದ ಒಬ್ಬ ಪ್ರಾಧ್ಯಾಪಕನೂ ಒಂದೇ ಒಂದು ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಲ್ಲಿ ಇಲ್ಲ ಎನ್ನುವುದು ಕಹಿ ಸತ್ಯ. ಲಂಬಾಣಿ, ಭೋವಿ ಸಮುದಾಯದ ಪ್ರಾಧ್ಯಾಪಕರು ಕೂಡಾ ಕುಲಪತಿ ಹುದ್ದೆಯಲ್ಲಿ ಇಲ್ಲ ಎನ್ನುವುದು ಕಟು ಸತ್ಯ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಅತ್ಯಲ್ಪ ಸಮುದಾಯಗಳಾದ ಮಡಿವಾಳ, ಹಡಪದ, ದೇವಾಂಗ, ಕಂಬಾರ, ಕುಂಬಾರ ಸಮುದಾಯಗಳಿಗೆ ಸೇರಿದವರು ಕುಲಪತಿ ಹುದ್ದೆಯ ಅವಕಾಶ ಪಡೆದುಕೊಂಡಿದ್ದಾರೆ. ಗೊಲ್ಲ ಸಮುದಾಯಕ್ಕೆ ಸೇರಿದ ಕರಿಸಿದ್ದಪ್ಪ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು. ದುರಂತವೆಂದರೆ: ಕಬ್ಬಲಿಗ ಸಮುದಾಯದ ಒಬ್ಬನೇ ಒಬ್ಬ ಪ್ರಾಧ್ಯಾಪಕ ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳು ಕಳೆದ ಮೇಲೂ ಒಂದೇ ಒಂದು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆದಿಲ್ಲವೆಂದರೆ ಆ ಸಮುದಾಯದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗಂತ ಆ ಸಮುದಾಯದಲ್ಲಿ ಪ್ರತಿಭಾವಂತ ಪ್ರಾಧ್ಯಾಪಕರು ಇರಲಿಲ್ಲ ಎಂದು ಭಾವಿಸಬೇಕಾಗಿಲ್ಲ. ಬಿ.ಟಿ. ಸಾಸನೂರು ಅವರಂಥ ಪ್ರತಿಭಾವಂತರು ಅಪಾರ ಕೊಡುಗೆ ನೀಡಿದ್ದಾರೆ. ನಾಡೋಜ ಡಾ. ಗೀತಾ ನಾಗಭೂಷಣ ಅವರಂಥ ಪ್ರತಿಭಾವಂತ ಸಾಹಿತಿಗಳನ್ನು ನೀಡಿದ ಕಬ್ಬಲಿಗ ಸಮುದಾಯ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಪಾಲಿನ ಹಕ್ಕನ್ನು ಪಡೆಯುವಲ್ಲಿ ವಿಫಲವಾಗಿದೆ.
ಸದ್ಯ ಕರ್ನಾಟಕದಲ್ಲಿ, ನೃಪತುಂಗ ವಿಶ್ವವಿದ್ಯಾನಿಲಯ, ರಾಯಚೂರಿನ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ, ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯ, ಬೆಂಗಳೂರು, ಗದುಗಿನ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಮಂಡ್ಯ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ ಹುದ್ದೆಗಳು ಖಾಲಿ ಇವೆ. ಕರ್ನಾಟಕ ವಿಶ್ವವಿದ್ಯಾನಿಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿಶ್ವವಿದ್ಯಾನಿಲಯ, ರಾಯಚೂರು ವಿಶ್ವವಿದ್ಯಾನಿಲಯ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾನಿಲಯಗಳಿಗೆ ಶೋಧನಾ ಸಮಿತಿ ರಚನೆಯಾಗಿ ಅರ್ಹ ಅಭ್ಯರ್ಥಿಗಳ ಹೆಸರುಗಳು ಶಿಫಾರಸು ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ರಾಜ್ಯಪಾಲರು ಕುಲಪತಿ ಹುದ್ದೆಯ ಆಯ್ಕೆಯನ್ನು ಅಂತಿಮಗೊಳಿಸಬೇಕಿದೆ.
ಇಲ್ಲಿಯವರೆಗೆ ಅವಕಾಶವೇ ಪಡೆಯದ ತಬ್ಬಲಿ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಬೇಕು. ಅದು ನಿಜವಾದ ಸಾಮಾಜಿಕ ನ್ಯಾಯದ ಪರಿಪಾಲನೆ ಎನಿಸಿಕೊಳ್ಳುತ್ತದೆ. ಅವಕಾಶವಂಚಿತ ಎಲ್ಲ ಸಮುದಾಯಗಳು ಮುಖ್ಯವಾಹಿನಿಯಲ್ಲಿ ಬೆರೆತು ಒಂದಾಗಬೇಕೆಂದರೆ ಸ್ಥಾನಮಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕಬ್ಬಲಿಗ ಸಮುದಾಯವೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಪಾಲಿನ ಅವಕಾಶ ಪಡೆಯುವ ಹಕ್ಕು ಹೊಂದಿದೆ. ಭರ್ತಿ ಮಾಡಲಿರುವ ಕುಲಪತಿ ಹುದ್ದೆಗಳಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಮೊದಲ ಆದ್ಯತೆ ಸಿಗಬೇಕು.
ಮುಸ್ಲಿಮ್ ಸಮುದಾಯದ ಪ್ರತಿಭಾವಂತರನ್ನು ಪುರ್ವಾಗ್ರಹಪೀಡಿತ ಮನಸ್ಸುಗಳು ಕುಲಪತಿ ಹುದ್ದೆಯಿಂದ ವಂಚಿಸಿವೆ. ನಾನಾ ಕಾರಣಗಳಿಂದ ಪರಿಶಿಷ್ಟರಲ್ಲಿನ ಎಡಗೈ ಸಮುದಾಯದ ಪ್ರತಿಭಾವಂತ ಪ್ರಾಧ್ಯಾಪಕರು ಕುಲಪತಿ ಹುದ್ದೆಯಿಂದ ವಂಚಿತರಾಗಿದ್ದಾರೆ. ಲಂಬಾಣಿ, ಭೋವಿ ಹಾಗೂ ಇನ್ನಿತರ ಅವಕಾಶ ವಂಚಿತ ಸಮುದಾಯಗಳಿಗೆ ಆದ್ಯತೆಯ ಮೇರೆಗೆ ಅವಕಾಶ ಕಲ್ಪಿಸಬೇಕು. ಸಾಮಾಜಿಕ ನ್ಯಾಯದ ಮಹತ್ವವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು. ಸಾಮಾಜಿಕ ನ್ಯಾಯದ ಮಹತ್ವವನ್ನು ಬೇರೆಯವರಿಗೆ ಮನವರಿಕೆ ಮಾಡಲು ಆಗುವುದಿಲ್ಲ. ಸಾಮಾಜಿಕ ನ್ಯಾಯದ ಪರಿಪಾಲನೆಯಲ್ಲಿ ಕಾಂಗ್ರೆಸ್, ಬಿಜೆಪಿ ಒಂದಾಗಿ ನಿರ್ಣಯ ಕೈಗೊಳ್ಳಬೇಕು. ಅಂತಿಮವಾಗಿ ಎಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಮತ್ತು ಗೌರವಿಸಬೇಕು.
ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೇಂದ್ರದಲ್ಲಿ ಏಳು ವರ್ಷಗಳ ಕಾಲ ಸೋಶಿಯಲ್ ಜಸ್ಟಿಸ್ ಖಾತೆಯ ಸಂಪುಟ ದರ್ಜೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಮಾಡಿಕೊಡದೆ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕು.
ಇದೊಂದು ಬಾರಿ ಅವಕಾಶವಂಚಿತ ಸಮುದಾಯಗಳಿಗೆ ಕುಲಪತಿ ಹುದ್ದೆಯ ನೇಮಕಾತಿಯಲ್ಲಿ ಪ್ರಾಧಾನ್ಯತೆ ನೀಡಿ ಕರ್ತವ್ಯ ಮುಗಿಯಿತು ಎಂದು ಭಾವಿಸುವಂತಿಲ್ಲ. ಸಾಮಾಜಿಕ ನ್ಯಾಯ ಪರಿಪಾಲನೆ ಎಂಬುದು ನಿರಂತರ ಪ್ರಕ್ರಿಯೆ. ಅವಕಾಶವಂಚಿತ ಎಲ್ಲ ಸಮುದಾಯಗಳನ್ನು ಮುಖ್ಯವಾಹಿನಿಯಲ್ಲಿ ತರಲು ನಿರಂತರ ಶ್ರಮಿಸಬೇಕಾಗುತ್ತದೆ. ಸ್ವಾತಂತ್ರ್ಯ ಲಭಿಸಿ ಹಲವು ದಶಕಗಳೇ ಕಳೆದರೂ ಅಂಚಿನಲ್ಲಿರುವ ಹಲವು ಸಮುದಾಯಗಳು ಅಧಿಕಾರ ಸ್ಥಾನಕ್ಕೆ ಹತ್ತಿರವಾಗಿಲ್ಲ. ಪ್ರಾಧ್ಯಾಪಕ, ಕುಲಪತಿ ಹುದ್ದೆಗಳನ್ನು ಅವಕಾಶ ವಂಚಿತ ಸಮುದಾಯಗಳ ಪ್ರತಿಭಾವಂತರಿಗೆ ನೀಡುವ ಮೂಲಕ ಎಲ್ಲರನ್ನೂ ಒಳಗೊಳ್ಳಬೇಕೆಂಬ ಸಂವಿಧಾನದ ಆಶಯಕ್ಕೆ ಬಲ ನೀಡಿದಂತಾಗುತ್ತದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಮುಸ್ಲಿಮ್ ಸಮುದಾಯ ಸೇರಿದಂತೆ ಎಲ್ಲರೂ ಪ್ರಧಾನ ಧಾರೆಯಲ್ಲಿ ಬೆರೆತು ಕಾರ್ಯ ನಿರ್ವಹಿಸಿದಾಗಲೇ ಸರ್ವ ಜನಾಂಗದ ಶಾಂತಿಯ ತೋಟ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ.