ಮಂತ್ರಿಗೂ ಮಣಿಯದ ಜನಪದ ಕವಿ ಯಳವರ ಬಾಬಣ್ಣ

ಜನಪದ ಕವಿಗಳು ಮತ್ತು ಹಾಡಿಕೆ ಪರಂಪರೆ ಕುರಿತ ಅನೇಕ ವಿದ್ಯಮಾನಗಳು ಹೆಚ್ಚು ಸಾರ್ವಜನಿಕ ಚರ್ಚೆಗೆ ಒಳಗಾಗುವುದಿಲ್ಲ. ಹಾಡಿಕೆ ಕಾರಣಕ್ಕೆ, ಕವಿರಚನೆಯ ಕಾರಣಕ್ಕೆ ಕೋರ್ಟು-ಕಚೇರಿ ಹತ್ತಿದ್ದೂ ಇದೆ. ಬ್ರಿಟಿಷರ ವಿರುದ್ಧ ಲಾವಣಿ ಕಟ್ಟಿದ ಕಾರಣಕ್ಕೆ ಜೈಲುಪಾಲಾದ ಲಾವಣಿಕಾರರೂ ಇದ್ದಾರೆ. ಅಂತೆಯೇ ವಾದಿ-ಪ್ರತಿವಾದಿ ಭಜನೆಯಲ್ಲಿ ಅನೇಕ ಕವಿಗಳ ಮೇಲೆ ಕೇಸ್‌ಗಳು ದಾಖಲಾಗಿವೆ. ಈ ಕೇಸುಗಳ ಬಗ್ಗೆಯೇ ಕುತೂಹಲಕಾರಿ ಅಧ್ಯಯನ ಮಾಡಲು ಸಾಧ್ಯವಿದೆ. ಪದ ಕಟ್ಟಿದ ಕಾರಣಕ್ಕೆ ಸಂಬಂಧ ಪಟ್ಟವರಿಂದ ಬೆದರಿಕೆಗೆ ಒಳಗಾದದ್ದೂ ಇದೆ. ಹೀಗೆ ರಾಜಕಾರಣ ಭ್ರಷ್ಟಾಚಾರದ ಬಗ್ಗೆ ಪದ ಕಟ್ಟಿ, ಮಂತ್ರಿಯೊಬ್ಬರೊಂದಿಗೆ ಮಾತಿನ ಚಕಮಕಿಗೆ ಒಳಗಾದ ಒಂದು ಪದ ಮತ್ತು ಆ ಪದ ಕಟ್ಟಿದ ಕವಿಯ ಕುತೂಹಲಕಾರಿ ಕಥನವಿದು.
ಬಸವನ ಬಾಗೇವಾಡಿ ತಾಲೂಕು ಯಳವಾರದ ಬಾಬಣ್ಣ ಉತ್ತರ ಕರ್ನಾಟಕದ ಬಹಳ ದೊಡ್ಡ ಜನಪದ ಕವಿ. ದೇವರ ಹಿಪ್ಪರಗಿಯಿಂದ ತಾಳಿಕೋಟೆ ರಸ್ತೆಯ ಮಧ್ಯೆ ಬರುವ ಗ್ರಾಮ ಯಳವಾರ. ಇದೀಗ ಬಾಬಣ್ಣ ಸಿಂಧಗಿ ತಾಲೂಕಿನ ಯಂಕಂಚಿ ಎಂಬ ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷದಿಂದ ನೆಲೆಗೊಂಡಿದ್ದಾರೆ. ಯಂಕಂಚಿಯ ದಾವಲ ಮಲ್ಲಿಕ ದೇವರ ಗುಡಿ ಕಟ್ಟಲು ಹೋದವರು, ಆನಂತರ ಯಂಕಂಚಿಯಲ್ಲೇ ಉಳಿದರು. ಇದೀಗ ದೇವಸ್ಥಾನ ಕಮಿಟಿಯ ಮುಖ್ಯಸ್ಥರಾಗಿದ್ದಾರೆ. ಬಾಬಣ್ಣ ಬಾಲ್ಯದಲ್ಲಿ ಹಳ್ಳಿಗಳ ಭಜನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬೇರೆಯವರು ಬರೆದಿದ್ದನ್ನು ಕಲಿತು ಹಾಡುತ್ತಾ ರಾತ್ರಿಯೆಲ್ಲಾ ಕಾರ್ಯಕ್ರಮ ಕೊಡುತ್ತಿದ್ದರು. ಭಜನೆ ಸಂಘ ಕಟ್ಟಿಕೊಂಡು ಬೇರೆ ಬೇರೆ ಹಳ್ಳಿಗಳಿಗೆ ಹೋಗುತ್ತಿದ್ದರು. ಹೀಗೆ ಹಾಡಿಕೆ ಪಯಣದಲ್ಲಿ ಚರಣ ಪಲ್ಲವಿ ದಾಟಿಗಳು ಕರಗತವಾಗಿ ಸ್ವತಃ ಕವಿಯಾಗಿ ಪದ ಕಟ್ಟುತ್ತಾರೆ. ಭಜನಾ ಸಂಘದ ಹಾಡಿಕೆಯಲ್ಲಿ ತನ್ನೂರಲ್ಲಿ ನಡೆದ ಕಹಿ ಘಟನೆ ಬಾಬಣ್ಣನ ಹಾಡಿಕೆಯನ್ನೆ ನಿಲ್ಲಿಸುತ್ತದೆ. ಮುಂದೆ ಹಾಡಿಕೆ ಮಾಡದೆ ಪದಕಟ್ಟುವುದನ್ನು ಕಸುಬಾಗಿಸಿಕೊಂಡರು.
ಬಾಬಣ್ಣ ತೊಂಭತ್ತರ ದಶಕದಲ್ಲಿ ಐವತ್ತಕ್ಕಿಂತ ಹೆಚ್ಚು ಕ್ಯಾಸೆಟ್‌ಗಳಿಗೆ ಸಾವಿರಕ್ಕಿಂತ ಹೆಚ್ಚು ಪದಗಳನ್ನು ಬರೆದಿದ್ದಾರೆ. ಉತ್ತರ ಕರ್ನಾಟಕದ ಭಜನಾ ಮಂಡಳಿಗಳವರು ಬಾಬಣ್ಣನ ಪದಗಳನ್ನು ಹಾಡುತ್ತಾರೆ. ‘‘ನಾನು ಬರೆದ ಹಾಡುಗಳು ನನಗೆ ಗುರುತಾಗಲ್ಲ, ನನ್ನ ಪದಗಳನ್ನು ಹಾಡಿ ಕೊನೆಗೆ ಪದಕಟ್ಟಿದವರ ಹೆಸರು ಬದಲಿಸಿದರೆ ಜನರೇ ಗುರುತಿಸಿ, ‘ಇದು ಬಾಬಣ್ಣನ ಪದ ನೀವ್ಯಾಕೆ ನಿಮ್ಮ ಹೆಸರ ಕಟ್ಟೀರಿ’ ಎಂದು ಕೇಳಿ ಜಗಳ ತೆಗೆದಿದ್ದಾರೆ, ಜನರಾ ನನಗೆ ಫೋನ್ ಹಚ್ಚಿ ಬಾಬಣ್ಣರಾ ಈ ಪದ ನಿಮ್ದು ಹೌದೋ ಅಲ್ಲೋ ಅಂತ ಕೇಳುತ್ತಾರೆ’’ ಎನ್ನುತ್ತಾರೆ.
ಮುಂದೆ ಬಾಬಣ್ಣ ಕಟ್ಟಿದ ‘ತಾಲೂಕು ಪಂಚಾಯ್ತಿ ಕಚೇರಿ ತುಂಬಾ ಹೆಗ್ಗಣ ತುಂಬ್ಯಾವೋ’ ಪದ ಭಜನಾ ತಂಡಗಳಿಗೆ ಹಾಟ್ ಫೇವರಿಟ್ ಆಯಿತು. ಆ ಪದ ಮಂತ್ರಿಯೊಬ್ಬರ ಕಂಗೆಣ್ಣಿಗೆ ಗುರಿಯಾಗಿ ವಿವಾದಕ್ಕೂ ಕಾರಣವಾಯಿತು. ಬಾಬಣ್ಣ ಇದ್ಯಾವುದಕ್ಕೂ ಜಗ್ಗದೆ ತಾನು ಕಟ್ಟಿದ ಪದದ ಜತೆ ಗಟ್ಟಿಯಾಗಿ ನಿಂತದ್ದು ಸೋಜಿಗದ ಸಂಗತಿಯಾಗಿದೆ. ಈ ಪದ ಹೀಗಿದೆ..
ತಾಲೂಕ ಪಂಚಾಯ್ತಿ ಕಛೇರಿ ತುಂಬಾ ಹೆಗ್ಗಣ ತುಂಬ್ಯಾವೋ..ಓ ತಮ್ಮಾ ॥2॥
ಗ್ರಾಮ ಪಂಚಾಯ್ತಿ ಗ್ವಾಡಿಯನೆಲ್ಲಾ ತಗಣಿ ತಿಂದಾವೋ ತಮ್ಮಾ.. ॥2॥
ಮೂರು ತಾಸಿನ್ಯಾಗ ಆರುನೂರು ಚೀಲ ಅಕ್ಕಿಯ ತಿಂದಾವೋ
ಇಷ್ಟು ತಿಂದು ರೈತನ ಮನಿಯಾಗ ಹೋಗಿ ಕುಂತಾವೋ॥ತಾಲೂಕು॥
ತಾಲೂಕಿನೊಳಗಾ ತಗಣಿ ಎಲ್ಲಾ ಎಲ್ಲಿ ಕುಂತಾವೋ..ಕೇಳರೀ..
ದಿಲ್ಲಿಯೊಳಗಾ ಬೆಲ್ಲಾದ ಪೆಂಡೀಗೆ ಇರುವಿ ಹತ್ಯಾವೋ.. ॥ತಾಲೂಕು॥
ಹೆಗ್ಗಣ ತಿಂದ ಬೀಜಗಳ ಕಾಲಿ ಚೀಲಗಳ ಕಾಯಾಕ ಕುಂತಾವೋ॥
ಮೂರು ದಿವಸಕ ಮೂವತ್ತಾರು ಕೋಟಿ ಹಾಳ ಮಾಡ್ಯಾವೋ.. ॥ತಾಲೂಕು॥
ಎಂಟು ಹೆಗ್ಗಣ ಕೂಡಿ ಕಡಿದಾಡಿ ಕುರ್ಚಿಯ ಕೆಡಿವ್ಯಾವೋ..
ತಮ್ಮಾ ಕುರ್ಚಿಯ ಕೆಡಿವ್ಯಾವೋ..
ಒಂಭತ್ತು ತಗಣಿ ಕೂಡಿ ಕುರ್ಚಿಯ ಕಾಲ ತಿಂದಾವೋ..ತಮ್ಮಾ ॥ತಾಲೂಕು॥
ಹೆಗ್ಗಣ ತಗಣಿ ಕೂಡಿ ಈಗ ಹಂಚಿಕೆ ಹೂಡ್ಯಾವೋ..
ಕೇಳರೀ ಹಂಚಿಕೆ ಹೂಡ್ಯಾವೋ..
ಐನೂರು ಚೀಲ ಸಕ್ರೀ ಗೋಡಮಕ ಬಂದು ನಿಂತಾವೋ.. ॥ತಾಲೂಕು॥
ಸಕ್ಕರಿ ಕಾಯಾಕ ಸೋದರ ಮಾವ ಬೆಕ್ಕು ಕುಂತಾದೋ..
ಹೆಗ್ಗಣಕ ಮೂಲ ಆಗ್ಯಾದೋ..॥
ಯಳವರ ಬಾಬಾಣ್ಣಗ ಕವಿಯ ಬರಿಲಾಕ ನಗೆಯು ಬರುತಾದೋ ॥ತಾಲೂಕು॥
ಆಕಾಶ ಮನಗೊಳಿ ಹಾಡಿದ ಹಾಡಿಕಿ:
https://youtu.be/l20jfzSeF18?si= FtmxFvEduyv9zGCX
ಬಾಬಣ್ಣನ ಬಳಿ ಈ ಹಾಡಿನ ಬಗ್ಗೆ ಮಾತನಾಡಿದರೆ, ‘‘ನಾನು ಮಾಡಿದ ಕ್ಯಾಸೆಟ್‌ದಾಗ ಆರಂಭದ ದಿನಗಳಲ್ಲಿ ಬಾಂಬೆ ಕ್ಯಾಸೆಟ್ ಕಂಪೆನಿಯಿಂದ ಮಾಡಿದ ‘ಇದು ನಮ್ಮೂರ ಪಂಚಾಯ್ತಿ’ ಕ್ಯಾಸೆಟ್ ಬಾಳ ಸುದ್ದಿ ಮಾಡಿತ್ತು. ಇದರದ್ದ ಒಂದ ದೊಡ್ಡ ಕತಿ ಐತಿ’’ ಎಂದು ಇದರ ಹಿಂದಿನ ಕತೆ ಹೇಳುತ್ತಾರೆ. ‘‘ನಮ್ದು ಬಸವನ ಬಾಗೇವಾಡಿ ಕ್ಷೇತ್ರ. ಆ ಸಂದರ್ಭದಲ್ಲಿ ಈ ಕ್ಷೇತ್ರದಿಂದ ಗೆದ್ದವರು ಮಂತ್ರಿಯಾಗಿದ್ದರು. ಮಂತ್ರಿಗಳ ಮನೆಯಲ್ಲಿ ಹಿರೇರ ಕಾರ್ಯಕ್ರಮಕ್ಕೆ ಹಾಡೋದಕ್ಕೆ ಹಾಡಿಕೀಲಿ ಫೇಮಸ್ ಆಗಿದ್ದ ಆಕಾಶ ಮನಗೋಳಿ ಹೋಗಿದ್ದರು. ನಾ ಬರೆದ ‘ತಾಲೂಕು ಪಂಚಾಯ್ತಿ’ ಹಾಡ ಹಾಡಿದರಂತ. ಈ ಹಾಡ ಕೇಳಿದ ಮಂತ್ರಿಗಳು ಆಕಾಶನನ್ನು ಕರೆದು ‘ಈಗೇನು ಈ ಹಾಡ ಹಾಡಿದ್ಯಲ್ಲ, ಈ ಪದಾನ ಇನ್ಮುಂದೆ ಎಲ್ಲೂ ಹಾಡಬೇಡ, ಇದು ಡೈರೆಕ್ಟಾಗಿ ರಾಜಕೀಯದವರಿಗೆ ಪರಿಣಾಮ ಆಗತ್ತ, ರಾಜಕಾರಣಿಗಳನ್ನು ಹೆಗ್ಗಣ, ತಗಣಿಗೆ ಹೋಲಿಸಿದ್ರೆ ಎಫೆಕ್ಟ್ ಆಗತ್ತ’ ಅಂದರಂತೆ.
ಆಗ ಆಕಾಶ ‘ಸರಾ, ನನಗೆ ನೀವು ಆರ್ಡರ್ ಮಾಡೀರಿ ನಾ ಇನ್ಮುಂದೆ ಹಾಡಲ್ಲ, ಆದರ ಈ ಹಾಡ ಕ್ಯಾಸೆಟ್ ರೆಕಾರ್ಡಿಂಗ್ ಆಗ್ಯಾದ, ಅದು ರಿಲೀಸ್ ಆದರ ಕರ್ನಾಟಕದ ತುಂಬಾ ಪದ ಹೊಕ್ಕಾತಿ ಅದನ್ಯಂಗ ನೀವು ನಿಲ್ಲಿಸೋರು’ ಎಂದನಂತೆ. ಆವಾಗ ಬಾಂಬೆ ಕ್ಯಾಸೆಟ್ ಕಂಪೆನಿ ನಂಬರ್ ತಗಂಡು ಕಂಪೆನಿಗೆ ಫೋನ್ ಹಚ್ಚಿ, ‘ನೀವು ಕ್ಯಾಸೆಟಿಗೆ ಎಷ್ಟು ಖರ್ಚು ಮಾಡೀರಿ ಅಷ್ಟು ಕೊಡತೀನಿ, ನೀವು ಕ್ಯಾಸೆಟ್ ರಿಲೀಸ್ ಮಾಡಬೇಡರಿ’ ಅಂದಿದ್ದಾರ. ಆಗ ಕಂಪೆನಿಯವರು ನನಿಗೆ ಫೋನ್ ಹಚ್ಚಿ ‘ಏನರೀ ಬಾಬಣ್ಣಾರ ಕ್ಯಾಸೆಟ್ ರೆಡಿ ಮಾಡೇವಿ, ಇನ್ನೇನು ರಿಲೀಸ್ ಮಾಡಬೇಕು, ಯಾರೋ ನಿಮ್ಮ ಕಡೆ ಮಿನಿಸ್ಟರ್ ಅಂತ, ಕ್ಯಾಸೆಟ್ ರಿಲೀಸ್ ಮಾಡಬೇಡರಿ ಅಂತ ಫೋನ್ ಮಾಡಿದ್ರು ಏನ್ ಮಾಡಣರೀ’ ಎಂದರು. ಆಗ ನಾನು ‘ಆಯ್ತರಿ ನಿಮಗೆ ರಿಕಾರ್ಡಿಂಗ್ ಮಾಡಿ ಕೊಟ್ಟೀನಿ, ನಿಮುದು ಲೈಸೈನ್ಸ್ ಐತೋ ಇಲ್ಲೋ..ನೀವು ಟ್ಯಾಕ್ಸ್ ತುಂಬತೀರೋ ಇಲ್ಲೋ..ಎಲ್ಲಾ ಸರಿ ಇದ್ರ ನೀವ್ಯಾಕ ಅಂಜತೀರಿ, ನೀವು ರಿಲೀಸ್ ಮಾಡರಿ, ಇಲ್ಲಾ ಹೀಂಗ್ ಮಾಡರಿ ಕ್ಯಾಸೆಟಿನ ಖರ್ಚು ಕೊಡ್ತೀನಿ ಅಂದ್ರ ನೀವು ನಮಗೆ ಕೊಟ್ಟಿದ್ದು ಐವತ್ ಸಾವ್ರ, ಅಷ್ಟ ತಗಂಡ್ ಬಂದ್ ಮಾಡ ಬ್ಯಾಡರಿ, ಸುಮನ ಹತ್ ಲಕ್ಷ ಕ್ಯಾಸೆಟ್ ಪ್ರಿಂಟ್ ಆಗ್ಯಾದ, 17 ಲಕ್ಷ ರೂ. ಖರ್ಚು ಆಗ್ಯಾದ ಅಷ್ಟ ಕೊಟ್ಟರ ಬಂದ್ ಮಾಡತೀವಿ ಅನ್ನರಿ ನೋಡೂಣು’ ಎಂದು ಕ್ಯಾಸೆಟ್ ಕಂಪೆನಿಯವರಿಗೆ ಐಡಿಯಾ ಕೊಟ್ಟೆ.
ಇದೇ ರೀತಿಯಾಗಿ ಬಾಂಬೆ ಕಂಪೆನಿಯವರು ಮಂತ್ರಿಗಳಿಗೆ ಹೇಳಿದ್ದಾರ. ಆಗ ಇದು ಬಾಳ ದುಬಾರಿ ಆದ ಕಾರಣ ಮಂತ್ರಿಗಳು ಈ ಕವಿ ಬರದವರು ಯಾರು ಅವರ ನಂಬರ್ ಕೊಡರಿ ಅಂತ ನನ್ನ ನಂಬರ್ ತಗೊಂಡು, ನನಿಗೆ ಫೋನ್ ಹಚ್ಚಿದರು, ‘ನೀ ನಮ್ಮ ಕ್ಷೇತ್ರದವ ಇದ್ದೀ, ನಿನ್ನ ಪದ ರಾಜಕೀಯ ಪರಿಣಾಮ ಅಕ್ಕಾತಿ, ಹೀಂಗ ಡೈರೆಕ್ಟ್ ಆಗಿ ನೀ ಹ್ಯಾಂಗ್ ಬರದೀಯ’ ಅಂತ ಕೇಳಿದರು.. ಅಗ ನಾನು ‘ಏನು ನಡಿಲಾಕತ್ಯಾದೋ ಅದನ್ನ ಬರದೀನಿ. ಇವತ್ತು ನೀವು ಶಾಸಕರು, ಮಿನಿಸ್ಟ್ರ್ ನಿಮಗೂ ಒಂದೇ ಅದ ವೋಟು, ನನಗೂ ಒಂದೇ ಅದ ವೋಟು, ನಾನು ರಾಜಕೀಯ ಮಾಡವನೆ, ನೀವು ಬಿಲ್ಡಿಂಗ್‌ದಾಗ ಕೂತು ನಮ್ಮಂತಹವರಿಗೆ ಜಗಳ ಹಚ್ಚಿ ಮಿನಿಸ್ಟರ್ ಆಗೀರಿ, ನಾವು ಬೆಳತನ ಕಾದಾಡಿ ನಮ್ಮ ಪಕ್ಷ ಗೆಲಸಬೇಕು ಅಂತ ರಾಜಕೀಯ ಮಾಡವರು.’ ಅಂತಂದೆ. ನನ್ನ ಮಾತಿಗೆ ಮಂತ್ರಿಗಳು ತುಸು ಕೋಪಗೊಂಡು ‘ಏಯ್ ಹೀಂಗ ರಾಂಗ್ ಮಾತಾಡಿದ್ರ ಪರಿಣಾಮ ನೆಟ್ಟಗಿರಲ್ಲಪಾ.. ಸಾಹಿತ್ಯ ಅಕಾಡಮಿಯಿಂದ ಕೇಸ್ ಮಾಡಸ್ತೀವಿ, ತೊಂದರೆ ಆಗತ್ತ ನೋಡು’ ಎಂದರು.
ನಾನು ಹೆದರಿಕೆ ಇಲ್ದೇ ‘ರೀ. ಸರ್ ನನಗೂ ಕೇಸ್ ಮಾಡಲಿಕ್ಕ ಬರತದ, ನಾನು ಶಿಕ್ಷಣ ಕಲಿತು ಕವಿ ಆದವನಲ್ಲ, ದೊಡ್ಡ ಕವಿ ಆಗಬೇಕು ಅಂದ್ಕೊಂಡವನಲ್ಲ, ನನಗೂ ಸಾಕಾಗ್ಯಾದ, ಸಾಹಿತ್ಯ ಅಕಾಡಮಿಯವರ ಮುಂದ ನಾನು ಬರದ ಪದದ ಅರ್ಥ ಹೇಳಿದ್ರ ಹತ್ತು ಸಾವಿರ ಬಹುಮಾನ, ಪ್ರಶಸ್ತಿ ಪತ್ರ ಬರತ್ತ, ಇಲ್ಲಾಂದ್ರ ಹತ್ ಸಾವ್ರ ದಂಡ ಕಟ್ಟಿ ಹತ್-ಹದಿನೈದ್ ದಿನ ಜೈಲಿಗೆ ಹೋಗಿ ಬರಬಹುದು, ಇಷ್ಟೇ ಅಲ್ಲಾ, ಕೇಸ್ ಮಾಡರಿ ನೋಡಣ’ ಎಂದೆ.
ನನ್ನ ಈ ಮಾತು ಕೇಳಿ ಮಂತ್ರಿಗಳು ‘ಆಯ್ತಪಾ ನೀನು ಇಷ್ಟರ ತನಕ ಹೋಗತಿ ಅಂದರ ಇರಲಿ, ಈಗ ನಾನೇ ಸಾಹಿತ್ಯ ಅಕಾಡಮಿ ಅಧ್ಯಕ್ಷ ಅಂತ ತಿಳಕೋ, ನಾನು ನಿನ್ನ ಪದಕ್ಕೆ ಪ್ರಶ್ನೆ ಕೇಳತೀನಿ, ಅದಕ್ಕ ಉತ್ತರ ಹೇಳಬೇಕು’ ಎಂದರು. ನಾನು ‘ಆಯ್ತು ಕೇಳರಿ, ನಾನು ಉತ್ತರ ಹೇಳತೀನಿ’ ಎಂದೆ, ಆಗ ಬೆಳ್ಳುಬ್ಬಿಯವರು ‘ಎಂಟು ಹೆಗ್ಗಣ ಕೂಡಿ ಕಡದಾಡಿ ಕುರ್ಚಿ ಕೆಡಿವ್ಯಾವೋ..ಒಂಭತ್ತು ತಗಣಿ ಕೂಡಿ ಕುರ್ಚಿಯ ಕಾಲ ತಿಂದಾವೋ.. ಅಂತ ಬರದಿದಿಯಲಾ ಇದಕ್ಕ ಉತ್ತರ ಏನದ ಹೇಳು?’ ಅಂದರು.
ನಾನು, ‘ಆಯ್ತ ಸರಾ ನೀವು ಹೇಳಿದ್ದು ಕರೆಕ್ಟ್ ಅದ, ನಾನು ಬರೆದದ್ದು ಕರೆಕ್ಟ್ ಅದಾ, ನಾನು ಏನು ಅರ್ಥ ಹಚ್ಚಿ ಹಾಡೀನಿ ಆ ಆರ್ಥನ ಹೇಳತೀನಿ, ನೀವ ಒಪ್ಪಿದರ ಒಪ್ಪರಿ ಇಲ್ಲಾಂದ್ರ ಬಿಡರಿ..ಎಂದು ಹೇಳಿ, ಎಂಟು ಹೆಗ್ಗಣ ಕೂಡಿ ಕಡಿದಾಡ್ಯಾವ ಅಂದ್ರ, ನಿಮ್ಮ ಕುರ್ಚಿನೂ ಅಲ್ಲ, ರಾಜಕಾರಣನೂ ಅಲ್ಲ, ಎಂಟು ಹೆಗ್ಗಣಗಳೂ ನನ್ನ ಶರೀರದೊಳಗಾ ಇದಾವ. ನನ್ನ ದೇಹನೇ ಒಂದು ಕುರ್ಚಿ, ದೇಹ ಅನ್ನೋ ಕುರ್ಚಿ ಗಟ್ಟಿ ಇರಬೇಕಂದರ, ದೇಹದ ಒಳಾಗಿನ ಅವಯವಗಳಾದ ಹೆಗ್ಗಣಗಳು ಚಲೋ ಇರಬೇಕಲ್ಲ. ದೇಹದೊಳಗಿನ ಅಂಗಾಂಗಳು ಸರಿ ಇಲ್ಲಾಂದ್ರ ದೇಹ ಅನ್ನೋ ಕುರ್ಚಿ ಉಳಿಯೋದ ಹ್ಯಾಂಗ? ಗ್ರಾಮ ಪಂಚಾಯ್ತಿ ಅಂದ್ರ ನನ್ನ ಶರೀರ, ದೇಹದ ಒಳಗಿನ ಅವಯವಗಳೇ ಹೆಗ್ಗಣಗಳು, ನನ್ನೊಳಗಿನ ದುರ್ಗುಣಗಳೇ ತಗಣಿಗಳು ನೋಡರೀ.. ಇದರಾಗ ಏನೈತಿ ರಾಜಕಾರಣ? ಇದಕ್ಕಿಂತ ಉತ್ತರ ಮತ್ತೇನ್ ಬೇಕರಿ’ ಎಂದು ಕೇಳಿದೆ. ಮಂತ್ರಿಗಳು, ‘ಆಯ್ತು ಬಿಡಪಾ ಏನಾರ ಮಾಡು ಉತ್ರ ಹೇಳಿದ್ದಲ್ಲ ಸಾಕು’ ಎಂದು ಫೋನ್ ಕಟ್ ಮಾಡಿದರು. ಮುಂದ ಕ್ಯಾಸೆಟ್ ರಿಲೀಸ್ ಆಗಿ ಬಾಳ ಫೇಮಸ್ ಆಯ್ತು’’ ಎನ್ನುತ್ತಾರೆ.
ಈ ಘಟನೆ ಬಗ್ಗೆ ನೆನೆಯುವ ಬಾಬಣ್ಣ ‘‘ಮಂತ್ರಿಗಳೂ ಶಾಸಕರಾಗೋ ಮೊದಲು ಕವಿಗಾರರಾಗಿದ್ದರು. ಎರಡು ಕ್ಯಾಸೆಟ್ ಬಂದಿದ್ದವು. ಹಳ್ಳಿಗಳಲ್ಲಿ ಭಜನೆ ಏನು ಪರಿಣಾಮ ಬೀರುತ್ತ್ತೆ ಅಂತ ಗೊತ್ತಿದ್ರಿಂದ ಈ ಹಾಡ ನಿಲ್ಲಿಸೋಕೆ ಪ್ರಯತ್ನ ಪಟ್ರು. ಹಾಡಿನ ಅರ್ಥ ಹೇಳಿದ್ ಮ್ಯಾಲ ಸುಮ್ಮನಾದರು’’ ಎನ್ನುತ್ತಾರೆ.
ಬಾಬಣ್ಣ ತಾಲೂಕು ಪಂಚಾಯತ್‌ನ ಭ್ರಷ್ಟಾಚಾರವನ್ನು ನೋಡಿಯೇ ಈ ಪದ ಬರೆದರೂ, ಹಾಡಿಗೆ ಅಧ್ಯಾತ್ಮದ ಒಳಾರ್ಥವನ್ನು ಕೊಟ್ಟು ತನ್ನನ್ನು ಸಮರ್ಥಿಸಿಕೊಂಡರು. ಈ ಪದ ಕೇಳಿದ ತಕ್ಷಣ ಜನರ ಎದುರು ತಮ್ಮ ತಮ್ಮ ಊರಿನ ಪಂಚಾಯತ್‌ನ ಭ್ರಷ್ಟಾಚಾರವೇ ಕಣ್ಣೆದುರು ಬರುತ್ತಿದ್ದ ಕಾರಣ ಜನರ ಮನದಲ್ಲಿದ್ದ ಗ್ರಾಮಪಂಚಾಯತ್, ತಾಲೂಕು ಪಂಚಾಯತ್‌ನ ವಿರೋಧಕ್ಕೆ ಈ ಪದ ಸಾಥ್ ಕೊಟ್ಟಿರಬೇಕು. ಹೀಗಾಗಿಯೇ ಭಜನಾ ತಂಡಗಳು ಈ ಪದವನ್ನು ಮೈದುಂಬಿ ಹಾಡುತ್ತಿದ್ದರು. ಹೀಗೆ ಈ ಪದ ಜನಪ್ರಿಯವಾದರೆ ರಾಜಕಾರಣಿಗಳ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂದು ಮಂತ್ರಿಗಳಿಗೆ ಅನ್ನಿಸಿರಬೇಕು.
ವಾಸ್ತವದಲ್ಲಿ ನಮ್ಮ ಸಾಹಿತ್ಯವಲಯದ ಶಿಷ್ಟ ಕವಿಗಳಿಗೆ ಹೀಗೆ ಮಂತ್ರಿಯೊಬ್ಬರು ನಿಮ್ಮ ಪದ್ಯನ ಹಿಂದಕ್ಕ ಪಡೀರಿ ಎಂದಿದ್ದರೆ ನಮ್ಮ ಕವಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಎನ್ನುವ ಕುತೂಹಲವಿದೆ. ಕವಿಯಾಗಿ ನನಗೇ ಹೀಗೆ ಮಂತ್ರಿಯೊಬ್ಬರು ಕೇಳಿದ್ದರೆ ಬಾಬಣ್ಣನಂತೆ ಧೈರ್ಯವಾಗಿ ಎದುರಿಸುತ್ತಿದ್ದೆನೋ ಇಲ್ಲವೋ ಎನ್ನುವ ಗೊಂದಲವಿದೆ. ಇಂತಹ ಪದಗಳ ಜನಪ್ರಿಯತೆ ಜನರಲ್ಲಿ ಒಂದು ಬಗೆಯ ಜಾಗೃತಿಯನ್ನೂ ಮೂಡಿಸುತ್ತವೆ. ಬಾಬಣ್ಣನ ಈ ಪದ ಜನಪ್ರಿಯವಾದ ಕಾರಣ ಮುಂದೆ ರಾಜಕಾರಣ, ಎಲೆಕ್ಷನ್, ಮುಂತಾದ ವಿಷಯಗಳ ಬಗ್ಗೆ ನೂರಾರು ಭಜನ ಪದಗಳು ಹುಟ್ಟಿವೆ. ಈ ಅರ್ಥದಲ್ಲಿ ಬಾಬಣ್ಣನ ಈ ಪದ ಜನಪದ ಹಾಡಿಕೆಯಲ್ಲಿ ಒಂದು ಟ್ರೆಂಡ್ ಸೆಟ್ ಮಾಡಿದ್ದಂತೂ ನಿಜ.