ಅತ್ಯಾಚಾರಿ ಸ್ವಾಮಿಯನ್ನು ಕೊಂದ ಹೆಣ್ಣಿನ ಪದವನ್ನು ಮುಂದೆ ಹಾಡಲಿಲ್ಲವೇಕೆ?

‘ಜಾನಪದ’ ಎಂದರೆ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದ ಮೌಖಿಕ ಪರಂಪರೆ ಎನ್ನುತ್ತೇವೆ. ಜಾನಪದ ಅಧ್ಯಯನ ಮಾಡುವ ವಿದ್ಯಾರ್ಥಿಯಾಗಿ ನನಗೊಂದು ಪ್ರಶ್ನೆ ಹುಟ್ಟಿತು. ಅದೇನೆಂದರೆ ಜಾನಪದದಲ್ಲಿ ಎಲ್ಲವೂ ತಲೆಮಾರಿನಿಂದ ತಲೆಮಾರಿಗೆ ಬರುತ್ತವಾ ಅಥವಾ ಕೆಲವು ಮಾತ್ರವಾ ಎನ್ನುವುದು. ಈ ಪ್ರಶ್ನೆಯ ಬೆನ್ನು ಹತ್ತಿ ಕಂಡುಕೊಂಡ ಸತ್ಯವೆಂದರೆ, ಯಾವುದು ಸಮಾಜದ ಯಥಾಸ್ಥಿತಿಯನ್ನು ಕಾಪಾಡುತ್ತದೆಯೋ ಅದು ಮುಂದುವರಿಯುತ್ತದೆ, ಯಾವುದು ಯಥಾಸ್ಥಿತಿಗೆ ವಿರುದ್ಧವಾಗಿರುತ್ತದೆಯೋ, ಬಂಡಾಯ ಹೂಡಿರುತ್ತದೆಯೋ ಅವುಗಳು ಒಂದೇ ತಲೆಮಾರಿಗೆ ಸೀಮಿತವಾಗುತ್ತವೆ ಎನ್ನುವುದು. ಇಲ್ಲಿ ನಿಮ್ಮೆದುರು ಹೇಳುತ್ತಿರುವ ‘ಅಯ್ಯನ ಪದ’ ಎನ್ನುವ ಲಾವಣಿಯ ಕಥೆ ಅಂತಹದ್ದೊಂದು ಉದಾಹರಣೆ.
ಸರಳವಾಗಿ ಜನರು ನೆನಪಿಟ್ಟುಕೊಂಡು ಬಂದ ಅಥವಾ ಹಿಂದಿನದನ್ನು ಬರೆದಿಟ್ಟುಕೊಂಡು /ಆಚರಣೆಯಲ್ಲಿ ಉಳಿಸಿಕೊಂಡು ಬಂದ ಕತೆ, ಗೀತೆ, ಲಾವಣಿ, ಗಾದೆ, ಒಗಟು, ನುಡಿಗಟ್ಟು, ಐತಿಹ್ಯ, ಭಾಷೆ, ತಂತ್ರಜ್ಞಾನ, ಅನನ್ಯವಾದ ತಿಳಿವು, ಅಧಿಕಾರ ರಹಿತ ಅಂಚಿನ ಜನರು ತಮ್ಮ ಅನುಭವದಿಂದ ಕಟ್ಟಿಕೊಂಡ ನಡೆ-ನುಡಿ-ಅರಿವು ಮುಂತಾದವುಗಳನ್ನು ಜನಪಠ್ಯಗಳೆಂದು ಕರೆಯಬಹುದು. ಅಂತಿಮವಾಗಿ ಜನರು ನೆನಪಿಟ್ಟುಕೊಂಡದ್ದೆಲ್ಲಾ ಜನಪಠ್ಯವೇ ಎನ್ನುವ ಆಕ್ಷೇಪವೂ ಇದೆ. ಇಲ್ಲ, ಜನರನ್ನು ಹಲವು ಬಗೆಯಲ್ಲಿ ನಿಯಂತ್ರಿಸಲು ಜನಪದ ಮಾಧ್ಯಮದಲ್ಲಿಯೇ ಆಳುವ ಏಜೆನ್ಸಿಗಳು ಸೇರಿಸಿದ ಕುತಂತ್ರದ ಮೌಢ್ಯದ ಸುಳ್ಳು ಪಠ್ಯಗಳೂ ಕಾಲಾನಂತರ ಜನರೇ ಕಟ್ಟಿದ ಪಠ್ಯಗಳಂತಾದದ್ದೂ ಇದೆ. ಅಂತಹವುಗಳನ್ನು ಗುರುತಿಸಿ ಸೋಸಬೇಕಿದೆ. ಹಾಗಾಗಿ ಜನಪಠ್ಯ ಎಂದಾಗಲೂ ಜನರೇ ಕಟ್ಟಿದ ಪಠ್ಯಗಳೂ, ಕುತಂತ್ರಿಗಳು ಮಾರುವೇಷದಲ್ಲಿ ಕಟ್ಟಿ ಬೆರೆಸಿದ ಪಠ್ಯಗಳೂ ಇಲ್ಲಿ ವಿಶ್ಲೇಷಣೆಗೆ ಒಳಗಾಗುತ್ತವೆ. ಜನಪದ ಕುರಿತು ಮಾತನಾಡುವ ಈಗಾಗಲೇ ಸವೆದ ಮಾತು, ಆಲೋಚನೆಗಳು ಪರೀಕ್ಷೆಗೆ ಒಳಗಾಗಬೇಕು. ಅಂತೆಯೇ ಜನಪದದ ಬಗೆಗೆ ಮಾತನಾಡಲು ಹೊಸ ಬಗೆಯ ಪಠ್ಯ ಮತ್ತು ವಿಶ್ಲೇಷಣೆಯ ಆಕರಗಳನ್ನು ಜನರಿಗೆ ಒದಗಿಸಬೇಕು. ಜನಪದ ಪಠ್ಯಗಳನ್ನು ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಸಮತೆಯ ಜರಡಿಯಲ್ಲಿ ಸೋಸಬೇಕಿದೆ.
‘ಅಯ್ಯನ ಪದ’ ಎನ್ನುವ ಈ ಲಾವಣಿಯನ್ನು ಡಾ.ವೈ.ಎಫ್. ಸೈದಾಪುರ ಅವರು ಬಿಜಾಪುರದ ಹರಿಜನಕೇರಿಯ ಸಿದ್ದಮ್ಮ ಎನ್ನುವವರಿಂದ ಸಂಗ್ರಹಿಸಿದ್ದಾರೆ. ಈ ಲಾವಣಿಯನ್ನು ಬಿಜಾಪುರ ಭಾಗದ ಯಲ್ಲಪ್ಪ ಎನ್ನುವ ಜನಪದ ಕವಿ ಕಟ್ಟಿದ್ದಾನೆ. ನರಸಿಂಗ ಪರಶುರಾಮ ಎನ್ನುವ ಇಬ್ಬರು ಜೋಡಿ ಹಾಡುಗಾರರು ಈ ಪದವನ್ನು ಹಾಡಿ ಲೋಕಕ್ಕೆ ಪರಿಚಯಿಸಿದ್ದಾರೆ. ಇದೊಂದು ಸತ್ಯ ಘಟನೆಯನ್ನು ಆಧರಿಸಿದ್ದು ಎಂದು ಲಾವಣಿ ಕಟ್ಟಿದ ಕವಿ ದಾಖಲಿಸಿದ್ದಾನೆ. ಹಾಗಾಗಿ ಈ ಪದ ಬಿಜಾಪುರದ ಸುತ್ತಮುತ್ತಲ ಯಾವುದೋ ಗ್ರಾಮದಲ್ಲಿ ನಡೆದ ನೈಜ ಪ್ರಕರಣವಿದ್ದಂತಿದೆ. ಈ ಪದದ ಸಾರಾಂಶ ಹೀಗಿದೆ.
ಒಂದು ಊರು. ಶಿವಭಕ್ತ ಕುಟುಂಬ. ಗಂಡ ಹೆಂಡತಿ, ಮುದ್ದಾದ ಗಂಡು ಮಗುವಿದೆ. ಗಂಡ ವ್ಯಾಪಾರಕ್ಕೆ ಹೋಗಿದ್ದಾನೆ. ಒಂದು ಸೋಮವಾರ ಊರಿನ ಮಠದ ಅಯ್ಯನನ್ನು ಕರೆದು ಭಿನ್ನ ಮಾಡಿಸುವ ಪದ್ಧತಿಯಂತೆ, ಹೆಂಡತಿ ಆ ಊರಿನ ಮಠದ ಅಯ್ಯನನ್ನು ಪೂಜೆಗೆ ಆಹ್ವಾನಿಸಿ, ಪೂಜೆ ಸಲ್ಲಿಸಿ ಪಂಚಾಮೃತ ಊಟ ಬಡಿಸಿದಳು. ಮೇಲೆ ಎಲೆ ಅಡಿಕೆ ಕೊಟ್ಟಳು. ಮಠದ ಅಯ್ಯ ಭಕ್ತೆಯನ್ನು ಮನಸಾ ಇಚ್ಛೆ ನೋಡಿ ಏನೋ ಮಸಲತ್ತು ಮಾಡಿಕೊಂಡು ಮಠಕ್ಕೆ ಮರಳುತ್ತಾನೆ. ಮನಸ್ಸು ತಡೆಯದೆ ಮತ್ತೆ ಸಂಜೆಗೆ ಮನೆಗೆ ಮರಳುತ್ತಾನೆ. ‘‘ನಿನ್ನ ಗಂಡ ಊರಾಗಿಲ್ಲಾ?’’ ಎಂದು ಕೇಳುತ್ತಾನೆ. ಆಗ ಆಕೆ ‘‘ನನ್ನ ಗಂಡ ವ್ಯಾಪಾರಕ್ಕೆ ಹೋಗಿದ್ದಾನೆ’’ ಎಂದು ಹೇಳುತ್ತಾಳೆ. ಖುಷಿಯಿಂದ ಅಯ್ಯ ಹೀಗೆ ಹೇಳುತ್ತಾನೆ..
‘‘ಮನಸ್ಸಾಗೇಯ್ತಾನಂದ
ಹೇಳ ಮುಂದ ಇದಿಕ ಹ್ಯಾಂಗ
ನಾ ಸೈರಿಸಲಾರೆನು
ಕರಕೋ ಬೇಕ ನನಗ |
ಜೀವ ನಿಲ್ಲದೋ ಬೀಳುವಾಂಗಾಗೆಯ್ತಿ
ನಿನ್ನ ಮೈಮ್ಯಾಗ
ಒಳ್ಳೆ ಸುಂದರ ಹೆಣ್ಣು ನಟ್ಟಿದಿ ನನ್ನ ಕಾಣ್ಣಾಗ
ತೀರಿ ಹೋಗಲಿ ವಾರ ಒಂದು ದಿವಸದೊಳಗ
ಏನಂತಿದಿ ಹೇಳಂದಾನ ಗಟ್ಟಿಮಾತಯೇನು ॥’’
ಅಯ್ಯನ ಈ ಮಾತು ಕೇಳಿ ಭಕ್ತೆ, ‘‘ಸ್ವಾಮಿಗಳಾ ನೀವು ದೊಡ್ಡೋರು, ನಾವು ನಿಮ್ಮ ಭಕ್ತರು. ಹಾಗೆಲ್ಲಾ ಮಾತಾಡಬಾರದು, ಹೀಗೆ ಪರ ನಾರಿಯರ ಕಂಡು ಆಸೆ ಪಡಬಾರದು. ನೀವು ನನಗೆ ತಂದೆಯ ಸಮಾನ, ನಾನು ನಿಮಗೆ ಮಗಳಿದ್ದಂತೆ. ನೀವು ಗುರುಗಳು, ನಾವು ಶಿಷ್ಯರು. ಹೀಗೆಲ್ಲಾ ಕಾಮದ ಆಸೆ ತಾಳುವುದು ಸರಿಯಲ್ಲ’’ ಎಂದು ಸ್ವಾಮೀಜಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾಳೆ. ಕಾಮಾತುರದಿಂದ ಸ್ವಾಮಿ, ‘‘ನೀ ಎಷ್ಟು ಹೇಳಿದರೂ ನಾ ಬಿಡುವವನಲ್ಲ, ನಿನ್ನ ಸಲುವಾಗಿ ಏನೇ ಹಾಳಾದರೂ ಪರವಾಗಿಲ್ಲ, ನೀನು ನನಗೆ ಬೇಕೇ ಬೇಕು’’ ಎಂದು ಅವಳ ಮೇಲೆ ಎರಗಲು ಬರುತ್ತಾನೆ. ಈ ಸಂದರ್ಭವನ್ನು ಅರಿತ ಆಕೆ..
‘‘ಕರಕೊಂತೀನಿ ತಡ್ರಿ ಯಾಕ| ಬರ್ತಿರಿ ಮೈಮ್ಯಾಗ|
ಇನ್ನೇನು ಐತಿ ನಾ | ಸಿಕ್ಕೆ ನಿಮ್ಮ ಕೈಯಾಗ
ತಲಾಬಾಗಿಲ ಮುಚ್ಚರಿ ಯಾರರ ಬಂದಾರ ಒಳಗ
ಕದ ಮುಚ್ಚಾಕ ಹೋದಾನೋ ಕುಶಲಾಗಿ ಮನದಾಗ
ನಾರಿ ಓಡಿ ಹೋದಾಳೋ ಅಡಗಿ ಮನಿಯ್ಯಾಗ
ಕದ ಬಂದ ಮಾಡ್ಯಾಳೊ ಅಯ್ಯ ಒಳಗ ಬರದಂಗ’’
ಹೀಗೆ ಆಕೆ ತಕ್ಷಣದ ಉಪಾಯ ಹೂಡಿ ಅಡಿಗೆ ಮನೆಯ ಒಳಗೆ ಹೋಗಿ ಕದ ಬಂದ್ ಮಾಡಿಕೊಳ್ಳುತ್ತಾಳೆ. ಇದನ್ನು ನೋಡಿ ಸ್ವಾಮಿ ಉಗ್ರ ಕೋಪ ತಾಳುತ್ತಾನೆ. ಮೋಸ ಮಾಡಿದೆಯಾ ನನಗೆ ಎಂದು, ‘‘ನೀನು ಕದ ತೆಗೆದು ಬರದಿದ್ದರೆ ಜೋಕಾಲಿಯಲ್ಲಿ ಮಲಗಿದ ನಿನ್ನ ಮಗುವನ್ನು ಕೊಂದೇನು’’ ಎಂದು ಅಬ್ಬರಿಸುತ್ತಾನೆ. ಆದರೂ ಅವಳು ಮಗುವನ್ನೇನು ಮಾಡಬೇಡ, ನಿನಗೆ ಒಳ್ಳೇದಾಗಲ್ಲ ಎಂದು ಒಳಗಿನಿಂದಲೇ ಮನವಿ ಮಾಡುತ್ತಾಳೆ. ಕಾಮಾತುರನಾದ ಸ್ವಾಮಿ, ಜೋಕಾಲಿಯಲ್ಲಿ ಮಲಗಿದ್ದ ಮಗುವನ್ನು ಒದೆಯುತ್ತಾನೆ. ಮಗು ಭಯದಿಂದ ಕಿಟಾರನೆ ಕಿರಚುತ್ತದೆ. ಅಳಲು ಶುರುಮಾಡುತ್ತದೆ. ಅಡಿಗೆ ಮನೆಯಲ್ಲಿದ್ದ ತಾಯಿಯ ಕರುಳು ಚುರುಕ್ ಎನ್ನುತ್ತದೆ. ಒಳಗಿಂದಲೇ ‘‘ಸ್ವಾಮೀ..ನನ್ನ ಮಗುವನ್ನು ಏನು ಮಾಡಬ್ಯಾಡ’’ ಎಂದು ಗೋಗರೆಯುತ್ತಾಳೆ.
‘‘ಕೂಸು ತೊಗೊಂಡಾ ಕೈಯ ಮಟ
ಆ ಕೂಸಿಗೆ ಹೊಡೆದಾನೊ ಒಳ್ಳೆ ಪೆಟ್ಟಾ
ಆ ಕೂಸು ದುಃಖಿಸಿ ಮಾಡಿತೋ ಒಳ್ಳೆ ಆರ್ಭಟ॥
ಆದರೂ ಆಕೆ..
ಕೊಂದರೆ ಕೊಲ್ಲೋ ನಾ ನಿನ್ನವಳಾಗೋದಿಲ್ಲ
ನಾ ಇಟ್ಟೇನಿ ದೇಹ ಶಿವನ ದೆಸಯಿಂದ ಮೀಸಲಾ |
ಪತಿವೃತಾ ಇದ್ದೇನೋ ನನ್ನ ಗಂಡನ ಮೇಲ
ನನ್ನ ಕೂಸನ್ನ ಕೊಂದರೆ ಒಳ್ಳೆಯದಾಗಾಕಿಲ್ಲ ॥’’
ಆದರೂ ಸ್ವಾಮಿ ಕೇಳದೆ.. ಇಷ್ಟಾದರೂ ನೀನು ಹಠ ಮಾಡುವೆಯಾ ಎಂದು ನಿಜಕ್ಕೂ ಮಗುವನ್ನು ಕೊಲ್ಲುತ್ತಾನೆ.
‘‘ಕುತಿಗಿ ಹಿಚಿಕಿದಾನೊ ಕಾಲು ಎದೆಗೆ ಮೆಟ್ಟುತ್ತಾ
ಅದು ಬಿತ್ತೊ ನೆಲಕಾ ನಿರ್ಜನನಾಗಿ ಒದರುತ್ತಾ
ಕಾಲಿಲ್ಲೆ ಮೆಟ್ಟಿ ಸೀಳಿ ಒಗದಾ ಬಾಗಿಲಿಗೆ ನಿಂತಾ ॥’’
ಮಗು ಚೀರುತ್ತಾ ಪ್ರಾಣ ಬಿಡುವುದನ್ನು ಕೇಳಿಸಿಕೊಂಡ ತಾಯಿ, ಶಿವ ಶಿವಾ ಎಂದು ಕಣ್ಣೀರು ಹಾಕುತ್ತಾಳೆ. ಗೋಳಾಡುತ್ತಾಳೆ. ಅಯ್ಯೋ ಶಿವನೆ ನನ್ನ ಕಣ್ಣೆದುರೇ ಮಗುವಿನ ಮರಣವನ್ನು ನೋಡುವಂತಾಯಿತೇ ಎಂದು ಅಡುಗೆ ಮನೆಯಲ್ಲಿ ಗೋಳಾಡಿ ಅಳುತ್ತಾಳೆ. ಇಷ್ಟಾದರೂ ಮನ ಕರಗದ ಕಾಮುಕ ಸ್ವಾಮಿಯು ಅಡುಗೆ ಮನೆ ಬಾಗಿಲು ಮುರಿಯಲು ಪ್ರಯತ್ನಿಸುತ್ತಾನೆ. ಆದರೆ ಬಾಗಿಲು ಅಲುಗಾಡುವುದಿಲ್ಲ. ಆದರೂ ಅಡುಗೆ ಮನೆಯ ಗೋಡೆ ಹೊಡೆದಾದರೂ ಸರಿ ಇವಳನ್ನು ಅನುಭವಿಸಲೇಬೇಕು ಎಂದು ಕಾಮಾತುರನಾಗಿ ಗೋಡೆ ಹೊಡೆದು ಕಿಂಡಿ ಮಾಡುತ್ತಾನೆ. ಈ ಘಟನೆಯನ್ನು ಜನಪದ ಕವಿ ಹೀಗೆ ಕಟ್ಟುತ್ತಾನೆ:
‘‘ಆ ಕಿಂಡಿ ಒಳಗ ತಲಿ ಇಟ್ಟು ಹೋಗುತ್ತಿದ್ದ
ಒನಕಿಯ ತಗೊಂಡು ನಿಂತಾಳೋ ಬಾರಿಮದ್ದಾ
ತಲೆ ಒಡೆದು ಕೊಲ್ಲಬೇಕೆಂಬ ಆಕಿ ಬೇತ
ಯುಕ್ತಿ ಮಾಡಿದಳೊ ಮನಸ್ಸಿನೊಳಗೆ ಇಂಥದಾ
ತಗದಿದ್ದಾನೋ ಕಿಂಡಿ ಒಳಗ ಕುತ್ತಿಗೆಯ ಶ್ರೀರಕ್ಷೆ
ಪೆಟ್ಟಿನ ಮೇಲೆ ಪೆಟ್ಟು ಹಾಕಿದಾಳೋ ಮೂರಾರ
ಪ್ರಾಣ ಹಾರಿಹೋಯಿತೋ ಅಯ್ಯ ಆದಾನೋ ಠಾರಾ
ಕಾವಲಿ ಹರಿದು ಬಂದಿತೋ ನೆತ್ತರಾ
ಬಹು ಕಶಲಾಗಿ ಕುಂತಾಳೋ ಅಂಜದೆ ಒಳಗೆ ॥’’
ಹೀಗೆ ಗೋಡೆ ಕೊರೆದು ಕಿಂಡಿ ಮಾಡಿ ತಲೆ ತೂರಿಸುವ ಹೊತ್ತಿಗೆ ಒಳಗಿನಿಂದ ಒಣಕೆ ತೆಗೆದುಕೊಂಡು ಸ್ವಾಮಿಯ ತಲೆಗೆ ಬಲವಾಗಿ ಹೊಡೆಯುತ್ತಾಳೆ. ಸ್ವಾಮಿಯ ತಲೆಬುರುಡೆ ಒಡೆದು ರಕ್ತಕಾರಿ ಕೊನೆಯುಸಿರೆಳೆಯುತ್ತಾನೆ. ರಕ್ತದ ಕೋಡಿ ಹರಿಯುತ್ತದೆ. ಅವಳು ವೀರಾವೇಶದಿಂದ ಹೂಂಕರಿಸುತ್ತಾಳೆ. ಆಗ ವ್ಯಾಪಾರಕ್ಕೆ ಹೋಗಿದ್ದ ಗಂಡ ಬಂದು ಬಾಗಿಲು ತಟ್ಟುತ್ತಾನೆ. ಅವಳು ಬಾಗಿಲು ತೆಗೆದು ಗಂಡನ ಬಳಿ ನಡೆದ ಸಂಗತಿಯನ್ನೆಲ್ಲಾ ಹೇಳುತ್ತಾಳೆ. ಸತ್ತ ಮಗುವನ್ನು ತಬ್ಬಿಕೊಂಡು ಗೋಳಾಡುತ್ತಾಳೆ. ರಕ್ತದ ಮಡುವಲ್ಲಿನ ಸ್ವಾಮಿಯ ದೇಹ ಕಂಡು ಗಂಡನೂ ಬೆಚ್ಚಿ ಬೀಳುತ್ತಾನೆ. ವಿಷಯ ಪೊಲೀಸರಿಗೂ ಮುಟ್ಟುತ್ತದೆ. ಊರಿನ ಜನರೆಲ್ಲಾ ಸೇರುತ್ತಾರೆ. ಕೊನೆಗೆ ಶಹಬ್ಬಾಸ್ ಹೆಣ್ಣೇ ಎಂದು ಹೊಗಳುತ್ತಾರೆ. ಸುತ್ತಮುತ್ತಲ ಹಳ್ಳಿಯ ಜನರೆಲ್ಲಾ ಈಕೆಯ ಧೈರ್ಯವನ್ನು ಕೊಂಡಾಡುತ್ತಾರೆ. ಈ ಜನಪ್ರಿಯತೆಯೇ ಈ ಲಾವಣಿ ಕಟ್ಟಲೂ ಕಾರಣವಾಗಿರಬಹುದು.
ಈ ಲಾವಣಿಯನ್ನು ಪ್ರೊ. ಯಲ್ಲಪ್ಪ ಫಕ್ಕೀರಪ್ಪ ಸೈದಾಪೂರ ಅವರ ಸಂಶೋಧನ ಪ್ರಬಂಧ ‘ಉತ್ತರ ಕರ್ನಾಟಕದ ಜನಪದ ವೀರಗೀತೆಗಳು’ (2003) ಕೃತಿಯಿಂದ ಆಯ್ದುಕೊಂಡಿದ್ದೇನೆ. ಈ ಲಾವಣಿ ನನ್ನ ಅಧ್ಯಯನದ ಮಿತಿಯಲ್ಲಿ ಹೇಳುವುದಾದರೆ ಹೆಚ್ಚು ಚರ್ಚೆಗೆ ಒಳಗಾದಂತಿಲ್ಲ. ಅಂತೆಯೇ ಈ ಅಯ್ಯನ ಪದ ಬಹುಪಠ್ಯಗಳಲ್ಲಿಯೂ ಬೇರೆ ಸಂಗ್ರಹಗಳಲ್ಲಿ ಕಾಣುವುದಿಲ್ಲ. ಅಂದರೆ ಈ ಪದ ಏಕ ಪಠ್ಯವಾಗಿರಬೇಕು. ನಾವು ಜನಪದವನ್ನು ತಲೆಮಾರಿನಿಂದ ತಲೆಮಾರಿಗೆ ಎಲ್ಲವೂ ಬರುತ್ತದೆ ಎನ್ನುವಂತೆ ಭಾವಿಸುತ್ತೇವೆ. ಆದರೆ ಹಾಗೆ ಆಗುವುದಿಲ್ಲ. ತಲೆಮಾರಿನಿಂದ ತಲೆಮಾರಿಗೆ ವ್ಯವಸ್ಥೆಯನ್ನು ವಿರೋಧಿಸಿದ ದಂಗೆಕೋರ ಕಥನಗಳು ಬರುವುದು ಕಡಿಮೆ. ಹಾಗೆಯೇ ‘ಅಯ್ಯನ ಪದ’ ವೂ ಒಂದೇ ತಲೆಮಾರಿನಲ್ಲೇ ಮುಗಿದು ಹೋದಂತೆ ಕಾಣುತ್ತದೆ.
ಈ ಲಾವಣಿ ‘ಕಡಿಮೆ ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್’ ಲಾವಣಿಯನ್ನು ಹೋಲುತ್ತಿದ್ದರೂ, ಇದು ಸ್ಟೇಷನ್ ಮಾಸ್ಟರ್ ಕಥನ ಕಾವ್ಯದಂತೆ ಹೆಚ್ಚು ಜನಪ್ರಿಯವಾಗಲಿಲ್ಲ. ಕಾರಣ ಇಲ್ಲಿ ಮಠಾಧೀಶನನ್ನು ಹೆಣ್ಣು ಕೊಲೆ ಮಾಡುವ ಪ್ರಸಂಗ ಇರುವ ಕಾರಣವೂ ಇರಬಹುದು. ಈ ಪದ ಜನಪ್ರಿಯವಾದರೆ ಈಗ ಇರುವ ಮಠದ ಸ್ವಾಮಿಗಳಿಗೆ ಮುಜುಗರದ ಸಂಗತಿಯಲ್ಲವೇ? ಅಂತೆಯೇ ಇಲ್ಲಿ ಹೆಣ್ಣು ಗಂಡಿನ ದಮನ ಮಾಡಿರುವುದು ಕೂಡ ಪುರುಷ ಪ್ರಧಾನ ವ್ಯವಸ್ಥೆ ಸಹಿಸದ ಒಂದು ವಿದ್ಯಮಾನ. ಅಂತೆಯೇ ಸ್ಟೇಷನ್ ಮಾಸ್ಟರ್ ಅಷ್ಟು ಪ್ರಭಾವಿ ವ್ಯಕ್ತಿಯಲ್ಲ, ಆತ ಪುರುಷನನ್ನು ಪ್ರತಿನಿಧಿಸುತ್ತಾನೆಯೇ ಹೊರತು ಯಾವುದೆ ಜಾತಿ-ಧರ್ಮ-ಅಧಿಕಾರವನ್ನು ಪ್ರತಿನಿಧಿಸುವುದಿಲ್ಲ. ಈ ಕಥನದಲ್ಲಿ ಹೆಣ್ಣು ಗಂಡಿನ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ, ಬದಲಾಗಿ ಪೊಲೀಸ್ ವ್ಯವಸ್ಥೆ ಶಿಕ್ಷೆ ವಿಧಿಸುತ್ತದೆ. ಇಂತಹ ಸೂಕ್ಷ್ಮ ಸಂಗತಿಗಳು ಒಂದು ಜನಪಠ್ಯದ ಜನಪ್ರಿಯತೆಯನ್ನು ನಿರ್ಧರಿಸುತ್ತವೆ. ಕೊನೆಗೂ ಮಗುವಿನ ಪ್ರಾಣ ಹೆಚ್ಚೋ? ಹೆಣ್ಣಿನ ಶೀಲ ಹೆಚ್ಚೋ? ಯಾವುದೇ ತಾಯಿ ಕಣ್ಣೆದುರೇ ತನ್ನದೇ ಮಗು ಪ್ರಾಣ ಕಳೆದುಕೊಳ್ಳುವಾಗ ಶೀಲ ಉಳಿಸಿಕೊಂಡು ಮಗುವಿನ ಬಲಿ ಕೊಡುವಳೇ? ಎನ್ನುವ ಪ್ರಶ್ನೆಯೊಂದು ಎದುರು ನಿಲ್ಲುತ್ತದೆ. ಈ ‘ಅಯ್ಯನ ಪದ’ವನ್ನು ಕಟ್ಟಿದ ಕವಿ ಯಲ್ಲಪ್ಪನಿಗೂ, ಈ ಪದವನ್ನು ಲಾವಣಿಯಾಗಿ ಹಾಡಿದ ನರಸಿಂಗ ಪರಶುರಾಮ ಎಂಬ ಹಾಡುಗಾರ, ಈ ಪದವನ್ನು ನೆನಪಿನಲ್ಲಿ ಕಾಪಿಟ್ಟುಕೊಂಡ ಬಿಜಾಪುರದ ಹರಿಜನ ಸಿದ್ದಮ್ಮ ಹಾಗೂ ಈ ಪದವನ್ನು ಸಂಗ್ರಹಿಸಿದ ಪ್ರೊ. ವೈ.ಎಫ್. ಸೈದಾಪುರ ಎಲ್ಲರನ್ನೂ ನೆನೆಯೋಣ.