ಸಾರ್ಥಕ ಬದುಕಿನ ಸಾತ್ವಿಕ ಎಲ್.ಎಸ್.ಎನ್. ಆಚಾರ್

ರಾಷ್ಟ್ರಪತಿ ಪ್ರಸಾದ್ ಭಾವಚಿತ್ರ ಬಿಡಿಸಿದ ಆಚಾರ್
1961ರಲ್ಲಿ ಆಗಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಮೈಸೂರಿಗೆ ಆಗಮಿಸಿದ್ದಾಗ ಲಲಿತ್‌ಮಹಲಿನಲ್ಲಿ ವಾಸ್ತವ್ಯ ಹೂಡಿದ್ದರು. ಆಗಷ್ಟೇ ಬಿ.ಎ. ಪಾಸಾಗಿದ್ದ ಆಚಾರರು ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರನ್ನು ಪರಿಚಯಿಸಿಕೊಂಡು ರಾಷ್ಟ್ರಪತಿ ಪ್ರಸಾದ್ ಅವರನ್ನು ಕಂಡರು. ಆಗ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪ್ರಸಾದ್ ಅವರ ಫೋಟೊ ನೋಡಿ ಚಿತ್ರ ಬಿಡಿಸಿದ್ದನ್ನು ಕಾಣಿಕೆಯಾಗಿ ನೀಡಿದರು. ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ, ಆಟೋಗ್ರಾಫ್ ನೀಡಿದರು. ಅಲ್ಲದೆ ‘ಫೋಟೊ ಕಳಿಸಿದರೆ ಚಿತ್ರ ಬರೆದು ಕಳಿಸುವೆಯಾ?’ ಎಂದು ಕೇಳಿದಾಗ ಕೂಡಲೇ ಆಚಾರ್ ಒಪ್ಪಿಕೊಂಡರು. ಆಮೇಲೆ 15 ದಿನಗಳಲ್ಲಿ ಬಂದ ಅವರ ಫೋಟೊ ನೋಡಿ ಚಿತ್ರ ಬಿಡಿಸಿ ಕಳಿಸಿದಾಗ ರಾಷ್ಟ್ರಪತಿಗಳಿಂದ ಉತ್ತಮ ಕಲಾವಿದನಾಗುವೆನೆಂಬ ಮೆಚ್ಚುಗೆಯ ಪತ್ರ ಬಂತು ಎಂದು ಆಚಾರ್ ಅವರು ಮೆಲುಕು ಹಾಕುತ್ತಿದ್ದರು.
‘ದೃಶ್ಯಕಲಾ ಕ್ಷೇತ್ರದ ಘನತೆ, ಗೌರವಗಳನ್ನು ಹೆಚ್ಚಿಸುವಂತೆ ಅಧಿಕೃತವಾಗಿ ಕಲಾಭ್ಯಾಸ ಮಾಡಿದ, ತಮ್ಮ ದೃಶ್ಯಕಲಾ ಕ್ಷೇತ್ರದ ಘನತೆ, ಗೌರವಗಳನ್ನು ಉಳಿಸಿ, ಬೆಳೆಸುವಂತೆ ಬದ್ಧತೆಯಿಂದ ಬದುಕಿದ ಪೂರ್ಣಾವಧಿ ಕಲಾವಿದರು ಇಂದಿನ ಸಾಮಾಜಿಕ ಸಂದರ್ಭದಲ್ಲಿ ಅತಿ ವಿರಳ. ಕಲೆಯ ನಡುಮನೆಯ ವಾರಸುದಾರರು ತಮ್ಮ ‘ಕಲಾಸೇವೆ’ಗಾಗಿ ತಮಗೆ ಸಲ್ಲಬೇಕಾದ ಸವಲತ್ತು, ಗೌರವ, ಸನ್ಮಾನಗಳ ಹಕ್ಕುಗಳಿಗೆ ಊಳಿಡುವ ಈ ಕಾಲದಲ್ಲೂ ‘ನಡುಮನೆ’ಯನ್ನೇ ಪ್ರವೇಶಿಸದ, ಪಡಸಾಲೆಯಲ್ಲೇ ಕುಳಿತ ಕಲಾವಿದರೂ ಇದ್ದಾರೆ. ತಾವಾಯಿತು, ತಮ್ಮ ಬದುಕು, ಕೃತಿಯಾಯಿತು ಎಂದು ಪಡಸಾಲೆಯಲ್ಲೇ ಕುಳಿತು ‘ಕಲೆ’ಯ ಕುಟುಂಬದ ಶ್ರೇಯಸ್ಸನ್ನು, ಒಳಿತನ್ನು ಬಯಸುತ್ತ ನಡೆ, ನುಡಿಯ ಸಾತ್ವಿಕತೆಯನ್ನು ಉಳಿಸಿಕೊಂಡು ಕಲಾಮೌಲ್ಯವನ್ನು ಎತ್ತಿ ಹಿಡಿದವರು, ಸದ್ದಿಲ್ಲದೆ ತಮ್ಮ ಬದುಕಿನೊಂದಿಗೆ ಕಲಾಸಾಧನೆಯನ್ನು ಮಾಡಿದವರೂ ಈ ಕಲಾಕ್ಷೇತ್ರದಲ್ಲಿ ಇನ್ನೂ ಇದ್ದಾರೆ. ಬಹುಶಃ ಇಂಥವರೇ ಈ ಕಲಾಕ್ಷೇತ್ರದ ನಿಜವಾದ ಪೋಷಕರು. ಸಾತಂತ್ರ್ಯಪೂರ್ವದ ತಲೆಮಾರಿನ, ಆದರ್ಶ ಬದುಕಿನ ರೂಪಕದಂತೆ ಬದುಕಿದವರು ಎಲ್.ಎಸ್.ಎನ್. ಆಚಾರ್’.
ಹೀಗೆ ಮೈಸೂರಿನ ಎಲ್.ಎಸ್.ಎನ್. ಆಚಾರ್ ಕುರಿತು ಖ್ಯಾತ ಕಲಾವಿದ ಎಂ.ಎಸ್. ಮೂರ್ತಿ ಅವರು ಹೇಳಿದ್ದು ಗಮನಾರ್ಹ. ಇದನ್ನು ಆಚಾರ್ ಅವರ ಬದುಕು-ಕಲಾಯಾನ ಕುರಿತು ರಚಿಸಿದ ‘ರೇಖಾವರ್ಣ’ ಕೃತಿಗೆ ಮುನ್ನುಡಿಯಲ್ಲಿ ಎಂ.ಎಸ್. ಮೂರ್ತಿ ಉಲ್ಲೇಖಿಸಿದ್ದಾರೆ. ಅಲ್ಲದೆ ‘ಇಂದಿನ ಯುವಕಲಾವಿದರು ಅನುಸರಿಸಲೇಬೇಕಾದ ಕೆಲವೇ ಕಲಾರಚನೆಯ ಮಾದರಿಗಳೊಂದಿಗೆ ನಮ್ಮ ಅರ್ಥಪೂರ್ಣ ಬದುಕಿನ ವ್ಯಕ್ತಿತ್ವದ, ದರ್ಶನದ, ಸರಳ ಬದುಕಿನ ಮಾದರಿಗಳನ್ನು ಆಚಾರ್ ಅವರ ಬದುಕಿನ ವಿನ್ಯಾಸಗಳ ಮೂಲಕ ನಮಗೆ ಕಾಣಸಿಗುತ್ತದೆ’ ಎಂದಿರುವ ಮೂರ್ತಿ ಮಾತು ಮನಗಾಣಬೇಕು.
ಇಂಥ ಆಚಾರ್ ಅವರು (27-9-1939) ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿ ಸಂಗೀತ ಅಭ್ಯಾಸ ಮಾಡಿದರು. ಆಮೇಲೆ ಅವರ ತಂದೆ ಲಕ್ಷ್ಮೀನಾರಾಯಣ ಅವರ ಬಳಿ ಚಿನ್ನಾಭರಣ ಮಾಡುವುದನ್ನು ಕಲಿತರು. ಆದರೆ ಬದುಕಿನುದ್ದಕ್ಕೂ ಚಿತ್ರಕಲೆಯ ನಂಟು. ಈ ನಂಟಿಗೊಂದು ಗಂಟು ಹಾಕಿ ಅವರ ಮನೆಯೊಳಗೇ ಗ್ಯಾಲರಿ ನಿರ್ಮಿಸಿದರು. ಇದರಲ್ಲಿ ಅವರದೇ ಚಿತ್ರಗಳ ಪ್ರದರ್ಶನವಿದೆ. ಕೊನೆಯವರೆಗೂ ಅವರ ಬತ್ತದ ಉತ್ಸಾಹ ಮೆಚ್ಚಬೇಕು. ಕುಂಚ ಹಿಡಿದರೆ ಕೈಗಳು ನಡುಗುತ್ತಿರಲಿಲ್ಲ.
ಚಿಕ್ಕವಯಸ್ಸಿನಲ್ಲಿ ಪೆನ್ಸಿಲ್ ಮೂಲಕ ರಚಿಸಿದ ಕಪ್ಪು ಹಾಗೂ ಬಿಳಿರೇಖೆಗಳ ಹಾಗೆ ಅವರ ಬದುಕಿತ್ತು. ಸರಳ ಹಾಗೂ ಸುಂದರ. ಆಮೇಲೆ ವರ್ಣದಲ್ಲಿ ಚಿತ್ರಗಳನ್ನು ಅರಳಿಸಿದರು. ಅದರಲ್ಲಿ ಸೊಗಸಿತ್ತು, ಸೊಬಗಿತ್ತು. ಅವರ ಬದುಕು ಕೂಡಾ ಕಪ್ಪು ಹಾಗೂ ಬಿಳಿಯಿಂದ ವರ್ಣದ ಹಾಗೆ. ಅವರು ಸರಕಾರಿ ಉದ್ಯೋಗಿಯಾದ ಮೇಲೆ ಅವರ ಇಬ್ಬರು ಪುತ್ರರಾದ ಸುನೀಲ್ ಹಾಗೂ ಸುಧೀರ್ ಅವರು ಓದಿ ವಿದ್ಯಾವಂತರಾದರೂ ಸ್ವಾವಲಂಬಿಯಾಗಿ ಸ್ವ ಉದ್ಯೋಗಿಗಳಾದರು.
ರೇಖಾಚಿತ್ರಗಳನ್ನು ಬಿಡಿಸುತ್ತಿರುವ ಕಲಾವಿದರು ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ಆಚಾರ್ ಅವರು ರೇಖಾಚಿತ್ರಗಳ ನಂಟು ಬಿಡಲಿಲ್ಲ. ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪಿ, ಮೇಲುಕೋಟೆ... ಹೀಗೆ ನಾಡಿನಾದ್ಯಂತ ಸಂಚರಿಸಿ ಶಿಲ್ಪಕಲೆಯನ್ನು ರೇಖೆಗಳಲ್ಲಿ ಕಂಡಿರಿಸಿದರು. 75ಕ್ಕೂ ಅಧಿಕ ವರ್ಷಗಳಿಂದ ಚಿತ್ರಕಲೆಯಲ್ಲಿ ಅವರು ತೊಡಗಿಸಿಕೊಂಡವರು. ಆದರೆ ಶಾಸ್ತ್ರೀಯವಾಗಿ ಚಿತ್ರಕಲೆ ಅಭ್ಯಾಸ ಮಾಡದ ಅವರು, ಬಾಲ್ಯದಲ್ಲಿ ನರಸಿಂಹಾಚಾರ್ ಅವರ ಬಳಿ ಶಿಲ್ಪಕಲೆಯಲ್ಲಿ ತರಬೇತಿ ಪಡೆದರು. ನಂತರ ಶಿಲ್ಪಿ ಸಿದ್ಧಾಂತಿ ಸಿದ್ಧಲಿಂಗಸ್ವಾಮಿ ಅವರ ಪುತ್ರ ನಾಗೇಂದ್ರ ಸ್ಥಪತಿ ಅವರ ಬಳಿ ವಿಗ್ರಹ ಕೆತ್ತುವುದನ್ನು ಕಲಿತರು. ಜೊತೆಗೆ ರೇಖೆಗಳಲ್ಲಿ ಚಿತ್ರಗಳನ್ನು ಅರಳಿಸುವುದನ್ನು ಬಿಡಲಿಲ್ಲ. ಅದೊಂದು ದಿನ ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ (ಕಾವಾ) ಶಿಕ್ಷಕರಾಗಿದ್ದ ಎಫ್.ಎಂ. ಸೂಫಿ ಅವರಿಗೆ ತಮ್ಮ ಚಿತ್ರಗಳನ್ನು ಆಚಾರ್ ತೋರಿಸಿದಾಗ ಚಿತ್ರಕಲೆಯಲ್ಲಿ ಮುಂದುವರಿಯಲು ಸಲಹೆ ನೀಡಿದರು. ಆದರೆ ಚಿನ್ನಾಭರಣದ ಕೆಲಸ ಮಾಡುತ್ತಿದ್ದ ಅವರ ತಂದೆ ನಾರಾಯಣಾಚಾರ್ ಅವರಿಗೆ ಹೆಚ್ಚು ವಿದ್ಯಾಭ್ಯಾಸ ಮಾಡಲಿ ಎನ್ನುವ ಹಂಬಲ. ಇದರ ಪರಿಣಾಮ ನಗರದ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಓದಿದರೂ ಪೂರ್ಣಗೊಳಿಸಲಿಲ್ಲ. ಮುಂದೆ ಬೆಂಗಳೂರಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಆದರೆ ವಕೀಲರಾಗದೆ ಭೂದಾಖಲೆಗಳ ಇಲಾಖೆಯಲ್ಲಿ ಉದ್ಯೋಗಿಯಾಗಿ, ಉಪನಿರ್ದೇಶಕರಾಗಿ ನಿವೃತ್ತಿಯಾದರು.
ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿ ಬಿಡಲಿಲ್ಲ. ಹಲವಾರು ಪತ್ರಿಕೆಗಳ ಕಥೆ, ಕವಿತೆ, ಕಾದಂಬರಿಗಳಿಗೆ ಚಿತ್ರ ರಚಿಸಿದರು. ಅನೇಕ ಪುಸ್ತಕಗಳಿಗೆ ಮುಖಪುಟ ರಚಿಸಿದರು. ಜೊತೆಗೆ ವನ್ಯಜೀವಿ, ನಿಸರ್ಗ, ಭಾವಚಿತ್ರ, ಜಲವರ್ಣ, ನವ್ಯಕಲಾಕೃತಿಗಳನ್ನು ಲಾಗಾಯ್ತಿನಿಂದಲೂ ರಚಿಸಿದರು. ಆಗಾಗ ನಾಡಿನಾದ್ಯಂತ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿದರು.
ಇಂಥ ಆಚಾರ್ ಮೈಸೂರಿನ ವಿಜಯನಗರ ನಾಲ್ಕನೇ ಹಂತದ ನಿವಾಸಿಯಾಗಿದ್ದವರು. ಅವರು ಆಗಸ್ಟ್ 13ರಂದು ಅನಾರೋಗ್ಯದಿಂದ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯರಾಗಿದ್ದ ಅವರು, ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದರು.