ಅಲೆಮಾರಿ ಸಮುದಾಯಗಳ ಲೋಕದ ಹುಟ್ಟಿನ ಕಥೆಗಳು

ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಅಲೆಮಾರಿ ಸಮುದಾಯಗಳು ತಮ್ಮ ಸಮುದಾಯದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿವೆ. ಅವರು ತಮ್ಮ ಸಮುದಾಯದ ಮೂಲ ಪುರುಷನಿಂದ ಈ ಜಗತ್ತು ಸೃಷ್ಟಿಯಾಯಿತೆಂದು ಭಾವಿಸುತ್ತಾರೆ. ಆ ಮೂಲಕ ಅವರದೇ ನೆನಪಿನಲೋಕದ ಒಂದು ವಿಶ್ವವನ್ನೇ ಕಟ್ಟಿಕೊಂಡಿದ್ದಾರೆ. ಅಂದರೆ ನಾವಿಂದು ಗ್ರಹಿಸುವ ಒಂದು ಜಗತ್ತಿನ ಗ್ರಹಿಕೆಯನ್ನು ಒಡೆದು, ಸಮುದಾಯಗಳು ತಮ್ಮ ಕಲ್ಪನಾ ಲೋಕದಲ್ಲಿ ಹಲವು ವಿಶ್ವಗಳನ್ನು ಕಟ್ಟಿಕೊಂಡಿರುವುದು ಬೆರಗು ಮೂಡಿಸುತ್ತದೆ.
ಒಳಮೀಸಲಾತಿಯ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳು ಧರಣಿ ಕೂತಿವೆ. ಹಾಗೆ ನೋಡಿದರೆ ಅಲೆಮಾರಿಗಳು ಪರಿಶಿಷ್ಟ ಪಂಗಡಗಳಲ್ಲಿಯೂ, ಹಿಂದುಳಿದ ವರ್ಗಗಳಲ್ಲಿಯೂ, ಸಾಮಾನ್ಯ ವರ್ಗದಲ್ಲಿಯೂ ಹಂಚಿ ಹೋಗಿವೆ. ಈ ನೆಲೆಯಲ್ಲಿ ಸಮಗ್ರ ಅಲೆಮಾರಿಗಳ ಒಳಮೀಸಲಾತಿ ದನಿ ಈಗ ಎದ್ದ ದನಿಗಿಂತಲೂ ದೊಡ್ಡದಾಗಿದೆ. ಹಾಗಾಗಿ ಸಮಗ್ರ ಅಲೆಮಾರಿಗಳ ಒಳ ಮೀಸಲಾತಿಗಾಗಿ ಸಂವಿಧಾನದಲ್ಲಿ ನಂಬಿಕೆ ಇಟ್ಟ ಎಲ್ಲರೂ ಹೋರಾಟ ಮಾಡಬೇಕಿದೆ. ಲೋಕವು ಅಲೆಮಾರಿಗಳನ್ನು ಹೊರಗಿಟ್ಟರೆ, ಅದೇ ಅಲೆಮಾರಿಗಳು ತಮ್ಮ ಸಮುದಾಯದ ಹುಟ್ಟಿನ ಕಥೆಗಳಲ್ಲಿ ನಮ್ಮ ಸಮುದಾಯದಿಂದಲೇ ಲೋಕ ಹುಟ್ಟಿತು ಎಂದು ಹೇಳುತ್ತಿದ್ದಾರೆ. ಲೋಕ ಅವರನ್ನು ಹೊರ ದಬ್ಬಿದರೆ, ಅಲೆಮಾರಿಗಳು ಇಡೀ ಲೋಕವನ್ನೆ ತಬ್ಬಿ ಹಿಡಿದಿದ್ದಾರೆ.
ಲೋಕ ಹೇಗೆ ಹುಟ್ಟಿತು ಎನ್ನುವುದೊಂದು ತುದಿ-ಮೊದಲಿಲ್ಲದ ವಾಗ್ವಾದ. ಕಾಲ ಕಾಲಕ್ಕೆ ನಡೆಯುತ್ತಲೇ ಬಂದಂತಹ ಚರ್ಚೆ ಸಂವಾದ. ಲೋಕ ಹೇಗೆ ಹುಟ್ಟಿತು ಎಂದು ಯಾರು ಯಾವ ನೆಲೆಯಲ್ಲಿ ನಿಂತು ನಿರೂಪಿಸುತ್ತಾರೋ, ಆ ಹಿನ್ನೆಲೆಯಲ್ಲಿ ಲೋಕವನ್ನು ಪರಿಭಾವಿಸುವ ಕ್ರಮ ನಡೆದುಕೊಂಡು ಬಂದಿದೆ. ಇದು ಲೋಕವನ್ನು ನೋಡುವ ನೋಟಕ್ರಮವನ್ನೂ ನಿಯಂತ್ರಿಸಿದೆ. ಹಾಗಾಗಿ ಲೋಕದ ಹುಟ್ಟಿನ ಕಥೆಗಳು, ಲೋಕವನ್ನು ನೋಡುವ ನೋಟಕ್ರಮದ ಜತೆ ಬೆರೆತಿವೆ. ಇದೊಂದು ಬಹುದೊಡ್ಡ ಪಯಣ.
ಹೀಗಾಗಿ ಲೋಕದ ಹುಟ್ಟಿನ ಕಥನಗಳು ಜಾಗತಿಕ ಅರಿವಿನ ಚರಿತ್ರೆಯ ಉದ್ದಕ್ಕೂ ನಿರೂಪಿಸಲ್ಪಟ್ಟಿವೆ. ಸಾಂಸ್ಥಿಕ ಧರ್ಮಗಳು ಲೋಕದ ಸೃಷ್ಟಿಯ ಕತೆಗಳನ್ನು ಕಟ್ಟಿರುವಂತೆ, ಜಗತ್ತಿನಾದ್ಯಂತ ಜನಸಮುದಾಯಗಳು ಹೇರಳವಾಗಿ ಲೋಕದ ಹುಟ್ಟಿನ ಕಥನಗಳನ್ನು ಕಟ್ಟಿಕೊಂಡಿವೆ. ಅಂತೆಯೇ ಅಂತಿಮವಾಗಿ ವಿಜ್ಞಾನವೂ ಲೋಕದ ಸೃಷ್ಟಿಯ ವಾಸ್ತವ ಸಂಗತಿಗಳನ್ನು ಶೋಧಿಸಿದೆ. ಇಂತಹ ಲೋಕದ ಹುಟ್ಟಿನ ಕಥನಗಳು ಈಗಲೂ ದೊಡ್ಡಮಟ್ಟದಲ್ಲಿ ಉಳಿದಿರುವುದು ಮೌಖಿಕ ರೂಪದಲ್ಲಿಯೇ.
ಧರ್ಮಗಳು ಕಟ್ಟಿದ ಕಥನಗಳಿಗೆ ‘ಲೋಕದ ಎಲ್ಲರನ್ನೂ ತಮ್ಮ ಧರ್ಮಕ್ಕೆ ಕರೆತರುವ ಆಶಯವಿದ್ದರೆ, ಜನಸಮುದಾಯಗಳು ಕಟ್ಟಿದ ಲೋಕದ ಹುಟ್ಟಿನ ಕಥನಗಳಿಗೆ ನಮ್ಮದೇ ಪುಟ್ಟ ಲೋಕವಿದೆ. ನಾವು ಯಾರ ಲೋಕಗಳಿಗೂ ಸೇರಿದವರಲ್ಲ, ಆದರೆ ಲೋಕ ಹುಟ್ಟಿರುವುದು ನಮ್ಮ ಸಮುದಾಯದ ಮೂಲ ಪುರುಷರಿಂದ’ ಎಂದು ಹೇಳುತ್ತವೆ. ವಿಜ್ಞಾನ ಮಾತ್ರ ಈ ಯಾವ ಉದ್ದೇಶಗಳೂ ಇಲ್ಲದೆ, ಲೋಕ ಹೇಗೆ ನಿರಂತರವಾಗಿ ವಿಕಾಸಗೊಂಡಿತು ಎನ್ನುವುದನ್ನು ತರ್ಕ ಮತ್ತು ಪ್ರಯೋಗದ ಬಲದಿಂದ ಹೇಳುತ್ತದೆ.
ಯಾವುದೇ ಒಂದು ಅಲೆಮಾರಿ ಸಮುದಾಯ ಅಥವಾ ಬುಡಕಟ್ಟು ತನ್ನ ಸಮುದಾಯದ ಹುಟ್ಟಿನ ಮೂಲಕವೇ ಈ ಜಗತ್ತು ಸೃಷ್ಟಿಯಾಯಿತು, ತಾವು ಆದಿ ಮನುಜರು ತಮ್ಮ ನಂತರ ಈ ಜಗತ್ತು ಬೆಳೆದಿದೆ ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿದ್ದಾರೆ. ಈ ಕಥೆಗಳು ಜಗತ್ತು ಸೃಷ್ಟಿಯಾದ ಬಗ್ಗೆ ಡಾರ್ವಿನ್ ವಿಕಾಸವಾದಕ್ಕಿಂತ ಬೇರೆಯೇ ತೆರನಾದವು ಅಥವಾ ಈ ಸಮುದಾಯಗಳು ಕಟ್ಟಿಕೊಂಡ ಲೋಕದ ಕಲ್ಪನೆ ಡಾರ್ವಿನ್ ವಿಕಾಸವಾದಕ್ಕಿಂತ ಮುಂಚೆಯೇ ಕಟ್ಟಲ್ಪಟ್ಟವುಗಳು.
ದೊಂಬಿದಾಸರ ಸಮುದಾಯ ಹೇಳುವಂತೆ, ‘ಭೂಮಿ, ಆಕಾಶ, ಗಾಳಿ, ಬೆಳಕುಗಳಿಲ್ಲದ ಓಂಕಾರದೊಂದಿಗೆ ಒಂದು ಶಂಖ ಹುಟ್ಟಿತು. ಆ ಶಂಖದಿಂದಲೇ ತಾತ ಆದಿ ಜಾಂಬು ಲಿಂಗಯ್ಯ ಹುಟ್ಟಿ ಬಂದರು. ಇವರು ತಾವರೆ ಎಲೆಯ ಮೇಲೆ ಕುಳಿತು ತಪಸ್ಸನ್ನು ಆಚರಿಸಿದ ಆರು ಗಳಿಗೆಯಲ್ಲಿಯೇ ಅದೇ ಶಂಖದಿಂದ ಆದಿಶಕ್ತಿಯು ಹುಟ್ಟಿ ಬಂದಳು. ಆಕೆ ತಾತನ ಬಳಿ ಬಂದು ನನ್ನ ಕಾಮವನ್ನು ತೀರಿಸು ಎಂದು ಕೇಳಿದಳು. ಆಗ ತಾತ ಈ ರೂಪದಲ್ಲಿ ಸಾಧ್ಯವಿಲ್ಲ ಇಬ್ಬರೂ ನವಿಲುಗಳಾಗಿ ರೂಪ ಬದಲಾಯಿಸಿಕೊಳ್ಳೋಣ ಎಂದು ರೂಪ ಬದಲಾಯಿಸಿ ಕೂಡಿದರು. ಕೂಡಿದ ಪರಿಣಾಮದಿಂದ ಹೆಣ್ಣು ನವಿಲು ನಾಲ್ಕು ಮೊಟ್ಟೆಗಳನ್ನು ಇಟ್ಟಿತು. ಎಷ್ಟು ಕಾವು ಕೊಟ್ಟರೂ ಮೊಟ್ಟೆಗಳು ಒಡೆದು ಮರಿಯಾಗಲಿಲ್ಲ. ಆಗ ತಾತ ಒಂದು ಮೊಟ್ಟೆಯನ್ನು ಒಡೆದು ಅದರ ಮೇಲಿನ ಭಾಗವನ್ನು ಆಕಾಶ ಮಾಡಿದ, ಕೆಳಗಿನ ಭಾಗವನ್ನು ಭೂಮಿ ಮಾಡಿದ. ಇನ್ನೊಂದು ಮೊಟ್ಟೆಯನ್ನು ಒಡೆದು ಒಂದು ಭಾಗವನ್ನು ಸೂರ್ಯನನ್ನಾಗಿ ಮಾಡಿದ, ಇನ್ನೊಂದು ಭಾಗವನ್ನು ಚಂದ್ರನನ್ನಾಗಿ ಮಾಡಿದ. ಮೂರನೆಯ ಮೊಟ್ಟೆಯಿಂದ ನಕ್ಷತ್ರಲೋಕ ಸೃಷ್ಟಿಸಿದ. ನಾಲ್ಕನೆಯ ಮೊಟ್ಟೆಯಿಂದ ಬ್ರಹ್ಮ, ವಿಷ್ಣು, ಈಶ್ವರ ತ್ರಿಮೂರ್ತಿಗಳು ಹುಟ್ಟಿದರು. ಇವರು ಬೆಳೆದು ದೊಡ್ಡವರಾದ ಮೇಲೆ ಇವರನ್ನು ಕಂಡು ಆದಿಶಕ್ತಿಗೆ ಮತ್ತೆ ಕಾಮಾತುರವಾಯಿತು. ಮದುವೆಯಾಗಲು ಒತ್ತಾಯಿಸಿದಳು. ವಿಷ್ಣು, ಬ್ರಹ್ಮ ಒಪ್ಪಲಿಲ್ಲ. ಶಿವ ತಾತ ಹೇಳಿಕೊಟ್ಟ ಉಪಾಯದಂತೆ ಹಣೆಯಲ್ಲಿನ ಉರಿಗಣ್ಣು ಮತ್ತು ಕೈಯಲ್ಲಿನ ಉರಿಅಸ್ತ್ರ ಕೊಡುವುದಾದರೆ ಮದುವೆಯಾಗುತ್ತೇನೆ ಅಂದ. ಆದಿಶಕ್ತಿ ಆನಂದದಿಂದ ಕೊಟ್ಟಳು. ಶಿವ ಉರಿಗಣ್ಣನ್ನು ನೆತ್ತಿಯಲ್ಲಿಟ್ಟುಕೊಂಡು ಅವಳನ್ನು ದಿಟ್ಟಿಸಿದ. ಅವಳು ಉರಿದು ಬೂದಿಯಾದಳು. ಆ ಬೂದಿ ಗುಡ್ಡೆಯಾಕಾರದ ಮೂರು ಭಾಗವಾಗಿ ಮಾಡಿ ಮೂರು ಜನ ಸುಂದರಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಜನಿಸಿದರು. ಇವರನ್ನು ತ್ರಿಮೂರ್ತಿಗಳು ಮದುವೆಯಾಗಿ ಜಗತ್ತಿನ ಸೃಷ್ಟಿಗೆ ಕಾರಣರಾದರು. ನಂತರ ವಿಷ್ಣು ಶಕ್ತಿಯಿಂದ ಅಂಡದಿಂದ 21 ಲಕ್ಷ ಜೀವರಾಶಿಯನ್ನು, ಪಿಂಡದಿಂದ 21 ಲಕ್ಷ ಜೀವರಾಶಿಯನ್ನು, ರೂಜ್ ಬೀಜದಿಂದ 21 ಲಕ್ಷ ಜೀವರಾಶಿಯೂ ಮತ್ತು ಜರಾಯುಜ ಬೀಜದಿಂದ 21 ಲಕ್ಷ ಜೀವರಾಶಿ ಹೀಗೆ ಒಟ್ಟು 84 ಲಕ್ಷ ಜೀವರಾಶಿ ಸೃಷ್ಟಿಯಾಯಿತೆಂದು ಪ್ರತೀತಿ.’ (ಕುಪ್ಪೆ ನಾಗರಾಜ: 2008/20)
ಗೋಸಂಗಿಗಳ ಸಮುದಾಯವು ಹೇಳುವಂತೆ, ‘ಭೂಮಿಯ ಪೂರ್ವದಲ್ಲಿ ದೇವ ಲೋಕ ಮಾತ್ರ ಇದ್ದಿತು. ದೇವಲೋಕದೊಳಗಿರುವ ಬ್ರಹ್ಮನು ಒಮ್ಮೆ ಭೂಲೋಕ ಹೇಗಿದೆ ಎಂದು ನೋಡಲು ಬಂದನು. ಭೂಲೋಕವು ನೀರಿನಿಂದ ತುಂಬಿತ್ತು. ಈ ಭೂಮಿಗೆ ಒಡೆಯನೊಬ್ಬನನ್ನು ಸೃಷ್ಟಿಸಬೇಕೆಂದು ಋಷಿಯೊಬ್ಬನನ್ನು ಭೂಲೋಕಕ್ಕೆ ಕಳುಹಿಸಿದ. ಆಗ ಋಷಿಮುನಿಯು ನೀರಾಕಾರದ ಭೂಲೋಕ ನೋಡಿ ಹೆದರಿ ಹಿಂದಿರುಗಿದ. ಆಗ ಬ್ರಹ್ಮನು ಜಾಂಬಮುನಿ ಎಂಬ ಮಗನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿದ. ಆಗ ಜಾಂಬಮುನಿಯು ಮೊದಲಿಗೆ ಭೂಮಿಯ ಮೇಲಿದ್ದ ನೀರನ್ನು ಸ್ವಲ್ಪ ಆಚೀಚೆ ಸರಿಸಿದ, ಭೂಮಿ ಸ್ವಲ್ಪ ಕಂಡಿತು, ಆ ಭೂಮಿಯ ಮೇಲೆ ಮೊದಲಿಗೆ ನೂರು ಮಕ್ಕಳನ್ನು ಸೃಷ್ಟಿಗೊಳಿಸಿದ. ಅಂತಹ ನೂರು ಮಕ್ಕಳಲ್ಲಿ ಮೊದಲನೆಯವ ಗೋಸಂಗಿ, ಭೂಮಿಯ ಮೇಲೆ ಜೀವರಾಶಿ ಹುಟ್ಟುವ ಮೊದಲು, ಸೂರ್ಯ ಚಂದ್ರರು ಹುಟ್ಟುವ ಮೊದಲು ಹುಟ್ಟಿದವನು ಗೋಸಂಗಿ. ಗೋಸಂಗಿ ಹುಟ್ಟಿದ ಮೇಲೆ ಸಹಸ್ರಾರು ಜೀವಿಗಳು, ಕುಲ ಹದಿನೆಂಟು ಜಾತಿಗಳು ಭೂಮಿಯ ಮೇಲೆ ಹುಟ್ಟಿದವಂತೆ, ಗೋಸಂಗಿಗಳ ಮೂಲ ಪುರುಷ ಜಾಂಬಮುನಿ’ ಎಂದು ಗೋಸಂಗಿಗಳು ಹೇಳುತ್ತಾರೆ.
ಹಕ್ಕಿಪಿಕ್ಕಿಯರ ಸಮುದಾಯ ಹೇಳುವಂತೆ, ‘ಬ್ರಹ್ಮಾಂಡವು ಸೃಷ್ಟಿಯಾದಾಗ ಲೋಕ ಸಂಚಾರಕ್ಕಾಗಿ ಶಿವ ಪಾರ್ವತಿಯರು ಹೊರಟಾಗ ಲೋಕವೆಲ್ಲಾ ನಿಶ್ಯಬ್ದವಾಗಿ ಇರುವುದನ್ನು ಕಂಡು ಭೂಮಿಯ ಮೇಲೆ ಅವರು ಇಳಿದು ಬಂದರು. ಭೂಮಿಯ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಎರಡು ಮಣ್ಣಿನ ಮೂರ್ತಿಗಳನ್ನು ಮಾಡಿ ಅದರಲ್ಲಿ ಒಂದು ಹೆಣ್ಣು ಒಂದು ಗಂಡು ಮೂರ್ತಿಗಳನ್ನು ಬಿಟ್ಟು, ಲೋಕ ಸಂಚಾರಕ್ಕೆ ಹೊರಟು ಹೋದರು. ಜೊತೆಗಾರರಾಗಿ ಒಂದು ನಾಯಿ ಮತ್ತು ಕೋಳಿಯನ್ನು ಮಾಡಿ ಜೀವಕೊಟ್ಟರು. ಈ ಮಣ್ಣಿನ ಮೂರ್ತಿಗಳು ಅಣ್ಣ ತಂಗಿಯಾಗಿ ಬಾಳ ತೊಡಗಿದರು. ಹೀಗೆ ದಿನ ಕಳೆದಂತೆ ಶಿವಪಾರ್ವತಿಯರು ಅದೇ ಮಾರ್ಗವಾಗಿ ಬರುವಾಗ ತಾವು ಮಾಡಿದ ಮಣ್ಣಿನ ಮೂರ್ತಿಗಳನ್ನು ನೋಡಿದರು. ಮೂರ್ತಿಗಳು ಕಾಡಿನಲ್ಲಿ ಅಣ್ಣತಂಗಿಯಾಗಿ ಬಾಳುವುದನ್ನು ಕಂಡು ಶಿವ ಪಾರ್ವತಿಯರು ಅವರಿಬ್ಬರನ್ನು ಹತ್ತಿರ ಕರೆಯಿಸಿ ನೀವು ಈ ತರ ಜೀವನ ನಡೆಸಿದರೆ ಮುಂದೆ ಲೋಕ ಬೆಳೆಯುವುದಾದರೂ ಹೇಗೆ? ಆದ್ದರಿಂದ ನಿಮ್ಮ ಇಬ್ಬರ ಸಂಬಂಧವು ಇಂದಿನಿಂದ ಅಣ್ಣತಂಗಿ ಅಲ್ಲ. ನೀವಿಬ್ಬರು ಇಂದಿನಿಂದ ಗಂಡ ಹೆಂಡತಿಯಾಗಿ ಜೀವನ ನಡೆಸಿ ಎಂದು ಪಕ್ಕದಲ್ಲಿ ಬೆಳೆದಿದ್ದ ಹಣ್ಣನ್ನು ತಿನ್ನಲು ಕೊಟ್ಟಾಗ, ಮಾನವ ಸದೃಶ ಪ್ರಕೃತಿಯಲ್ಲಿನ ಆಸೆ ಆಕಾಂಕ್ಷೆಗಳ ಪರಿಚಯವಾಯಿತು.
ಕಾಲ ಕಳೆದಂತೆ ಅವರ ಹೊಟ್ಟೆಯಿಂದ ಆರು ಗಂಡು, ಆರು ಹೆಣ್ಣು ಮಕ್ಕಳು ಜನಿಸಿದರು. ಇವರು ಬೆಳೆದಂತೆ ಇವರ ತಂದೆ ತಾಯಿ ತಮಗೆ ಶಿವ ಪಾರ್ವತಿಯರು ಮಾಡಿದ ಮದುವೆ ಮಾರ್ಗವನ್ನೇ ಇವರು ತಮ್ಮ ಮಕ್ಕಳಿಗೂ ಮಾಡಿದರು. ಆರು ಗಂಡು ಮಕ್ಕಳಿಗೆ ಆರು ಹೆಣ್ಣು ಮಕ್ಕಳ ಕೈ ಕೈ ಜೋಡಿಸಿ ಇಂದಿನಿಂದ ನೀವು ಗಂಡ ಹೆಂಡತಿ ಎಂದು ಹೇಳಿ ಮದುವೆ ಮಾಡಿಸಿದರು. ಅವರ ವಂಶಜರೇ ನಾವು’ ಎನ್ನುತ್ತಾರೆ. (ಕುಮುದು ಬಿ.ಸುಶೀಲಪ್ಪ: 2008:8)
ಹೀಗೆ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಅಲೆಮಾರಿ ಸಮುದಾಯಗಳು ತಮ್ಮ ಸಮುದಾಯದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿವೆ. ಅವರು ತಮ್ಮ ಸಮುದಾಯದ ಮೂಲ ಪುರುಷನಿಂದ ಈ ಜಗತ್ತು ಸೃಷ್ಟಿಯಾಯಿತೆಂದು ಭಾವಿಸುತ್ತಾರೆ. ಆ ಮೂಲಕ ಅವರದೇ ನೆನಪಿನಲೋಕದ ಒಂದು ವಿಶ್ವವನ್ನೇ ಕಟ್ಟಿಕೊಂಡಿದ್ದಾರೆ. ಅಂದರೆ ನಾವಿಂದು ಗ್ರಹಿಸುವ ಒಂದು ಜಗತ್ತಿನ ಗ್ರಹಿಕೆಯನ್ನು ಒಡೆದು, ಸಮುದಾಯಗಳು ತಮ್ಮ ಕಲ್ಪನಾ ಲೋಕದಲ್ಲಿ ಹಲವು ವಿಶ್ವಗಳನ್ನು ಕಟ್ಟಿಕೊಂಡಿರುವುದು ಬೆರಗು ಮೂಡಿಸುತ್ತದೆ.
ಅಲೆಮಾರಿಗಳ ಲೋಕ ಹುಟ್ಟಿನ ಕಥನಗಳು ಸಮುದಾಯ ವರ್ತಮಾನದಲ್ಲಿ ಕೈಗೊಂಡ ವೃತ್ತಿಗೆ ಪೂರಕವಾಗಿವೆ. ಅಂತೆಯೇ ಪ್ರತೀ ಸಮುದಾಯವು ಆರಂಭದಲ್ಲಿ ಜಲಾವೃತವಾದ ಭೂಮಿಯ ಕಲ್ಪನೆ ಕೊಡುತ್ತಾರೆ. ಇಲ್ಲಿ ಮೊದಲಿಗೆ ಹುಟ್ಟುವ ಹೆಣ್ಣು ಗಂಡು ಅಣ್ಣ ತಂಗಿಯಾಗಿರುವುದು, ತಾತ ಮೊಮ್ಮಗಳಾಗಿರುವುದು, ತಾಯಿ ಮಗ ಆಗಿರುವುದು ಮತ್ತವರು ಕೂಡುವ ಸೃಷ್ಟಿ ಕಥೆಗಳಿವೆ. ನಾವು ಬದುಕುತ್ತಿರುವ ಕಾಲದಲ್ಲಿ ಕಟ್ಟಿಕೊಂಡ ಸಂಬಂಧಗಳ ಕಣ್ಣಿಂದ ಈ ಕಥೆಗಳನ್ನು ನೋಡಿದರೆ ಇವು ಅಶ್ಲೀಲವಾಗಿ ಕಾಣುತ್ತವೆ. ಆದರೆ ಇಂತಹ ಸಂಬಂಧಗಳ ಗೋಜಿಲ್ಲದ ಕೇವಲ ಗಂಡು ಹೆಣ್ಣು ಎನ್ನುವ ದೃಷ್ಟಿಕೋನದಲ್ಲಿ ಈ ಕಥೆಗಳು ಹುಟ್ಟಿದಂತಿದೆ. ಇದನ್ನು ನೋಡಿದರೆ ಸಿಗ್ಮಂಡ್ ಪ್ರಾಯ್ಡ್‌ನ ಸಂಬಂಧಗಳ ವಿಶ್ಲೇಷಣೆಗಳ ಆಚೆಯೂ ವಿರುದ್ಧ ಲಿಂಗಗಳ ಮಧ್ಯೆ ಇರುವ ಆಕರ್ಷಣೆಯ ಥಿಯರಿಯನ್ನು ಈ ಅಲೆಮಾರಿ ಬುಡಕಟ್ಟುಗಳು ತುಂಬಾ ಹಿಂದೆಯೇ ತಮ್ಮ ಕಥೆ ಹಾಡುಗಳಲ್ಲಿ ಕಟ್ಟಿಕೊಂಡಿದ್ದನ್ನು ಗಮನಿಸಬಹುದು.
ಒಂದು ಸಮುದಾಯ ತನ್ನ ಚರಿತ್ರೆಯನ್ನು ಓರಿಯಂಟಲಿಷ್ಟರ ಹಾಗೆ ಇಸವಿ, ಶಾಸನ, ತಾಳೆಗರಿಯಲ್ಲಿ ತನ್ನ ಮೂಲ ಚರಿತ್ರೆಯನ್ನು ಬರೆದಿಟ್ಟಿಲ್ಲ. ತನ್ನ ಸಮುದಾಯದ ಚರಿತ್ರೆಯನ್ನು ಆಚರಣೆಗಳಲ್ಲಿ, ನೆನಪಿನ ಪುರಾಣಗಳಲ್ಲಿ, ಕಥೆ, ಗೀತೆಗಳಲ್ಲಿ, ವೃತ್ತಿ, ಹುಟ್ಟು ಸಾವಿನ ಮಧ್ಯೆಯ ಆಚರಣಾ ಲೋಕದಲ್ಲಿ ಚರಿತ್ರೆಯ ಕುರುಹುಗಳನ್ನು ದಾಟಿಸಿಕೊಂಡು ಹೋಗುತ್ತದೆ. ಇಂತಹ ಸಮುದಾಯಗಳನ್ನು ಅಧ್ಯಯನ ಮಾಡುವ ವಿದ್ವಾಂಸರಿಗೆ ಈ ಬಗೆಯ ಸೂಕ್ಷ್ಮತೆಗಳು ಬೇಕಾಗುತ್ತದೆ. ಸಮುದಾಯಗಳ ಆತ್ಮಕಥನಗಳ ಮಾದರಿಯಲ್ಲಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನಗಳು ನಡೆಯಬೇಕಾಗಿದೆ.