ದೇಶದಲ್ಲಿ ಕುಸಿಯುತ್ತಿರುವ ಮುಸ್ಲಿಮ್ ರಾಜಕೀಯ ಪ್ರಾತಿನಿಧ್ಯ

ವಿಧಾನಸಭೆ ಮತ್ತು ಲೋಕಸಭೆಯ ಅಂಕೆಸಂಖ್ಯೆಗಳನ್ನು ಗಮನಿಸಿದರೆ, ಬಿಜೆಪಿಯನ್ನು ಒಳಗೊಂಡಂತೆ ಭಾರತದ ಮುಖ್ಯ ಧಾರೆಯ ಎಲ್ಲಾ ಪಕ್ಷಗಳೂ ಮುಸ್ಲಿಮ್ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತಿವೆ. 1992ರ ನಂತರದಲ್ಲಿ ಹಿಂದುತ್ವವಾದಿ ಬಲಪಂಥೀಯ ಸಂಘಟನೆಗಳು ಹುಟ್ಟುಹಾಕಿದ ಕೋಮುಧ್ರುವೀಕರಣ, ಮುಸ್ಲಿಮರ ಬಗೆಗೆ ಹುಟ್ಟಿಸಿದ ಭಯ ಇಂದು ಫಲಕೊಡುತ್ತಿದೆ.
ಕಳೆದ ಲೋಕಸಭಾ ಅಧಿವೇಶನದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಮಾತನಾಡುತ್ತಾ, ‘‘ಮೇಲ್ಮನೆ ಮತ್ತು ಕೆಳಮನೆಯಲ್ಲಿ ಬಿಜೆಪಿಯ ಒಬ್ಬರೇ ಒಬ್ಬರು ಮುಸ್ಲಿಮ್ ಸದಸ್ಯರಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷದ ಅಪಾಯಕಾರಿ ನಡೆ’’ ಎಂದು ಕಳವಳ ವ್ಯಕ್ತ ಪಡಿಸಿದ್ದರು. ಇದು ಕೇವಲ ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ದೇಶದೆಲ್ಲೆಡೆ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಕುಸಿಯುತ್ತಿದೆ. ಎರಡು ದಶಕಗಳಿಂದ ಹೆಚ್ಚಾಗುತ್ತಿರುವ ಇಸ್ಲಾಮೋಫೋಬಿಯಾ ಭಾರತದ ರಾಜಕಾರಣದಲ್ಲಿ ಪಕ್ಷಾತೀತವಾಗಿ ಗಣನೀಯ ಪರಿಣಾಮ ಬೀರುತ್ತಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ ದಿಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ 4 ಜನ ಮುಸ್ಲಿಮರು ಚುನಾಯಿತರಾಗಿದ್ದರು. ಈ ಸಂಖ್ಯೆ 2020ರ ಚುನಾವಣೆಯಲ್ಲಿ 5ರಷ್ಟಿತ್ತು. ಹರ್ಯಾಣದ ಚುನಾವಣೆಯಲ್ಲಿ 90 ಸದಸ್ಯಬಲದಲ್ಲಿ 5 ಜನ ಮುಸ್ಲಿಮರಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ 420 ಜನ ಮುಸ್ಲಿಮ್ ಸದಸ್ಯರು ಸ್ಪರ್ಧಿಸಿದ್ದರೆ ಕೇವಲ ಹತ್ತು ಜನರು ಚುನಾಯಿತರಾಗಿದ್ದಾರೆ. ಇದೀಗ ಲೋಕಸಭೆಯ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಬಿಜೆಪಿಯ ಒಬ್ಬರೂ ಮುಸ್ಲಿಮ್ ಸದಸ್ಯರಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪಕ್ಷವೊಂದರ ಅಪಾಯಕಾರಿ ನಡೆ ಎಂಬ ಕಳವಳ ವ್ಯಕ್ತವಾಗಿದೆ.
ಧರ್ಮದ ಆಧಾರದಲ್ಲಿ ಮುಸ್ಲಿಮ್ ಸಮುದಾಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 18ನೇ ಲೋಕಸಭಾ ಚುನಾವಣೆಯಲ್ಲಿ 24 ಜನ ಮುಸ್ಲಿಮ್ ಚುನಾಯಿತ ಪ್ರತಿನಿಧಿಗಳಿದ್ದಾರೆ. ಒಟ್ಟು 78 ಮುಸ್ಲಿಮ್ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ 9, ತೃಣಮೂಲ ಕಾಂಗ್ರೆಸ್ 5, ಸಮಾಜವಾದಿ ಪಾರ್ಟಿ 4, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ 2, ನ್ಯಾಷನಲ್ ಕಾನ್ಫರೆನ್ಸ್ 1, ಒಟ್ಟಾರೆ ‘ಇಂಡಿಯಾ’ ಒಕ್ಕೂಟದಿಂದ 21 ಸದಸ್ಯರಿದ್ದರೆ, ಎ.ಐ.ಎಂ.ಐ.ಎಂ. (ಆಲ್ ಇಂಡಿಯಾ ಮಸ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್)ನ ಒಬ್ಬರನ್ನು ಒಳಗೊಂಡಂತೆ, ಇಬ್ಬರು ಪ್ರತಿನಿಧಿಗಳು ಅಭ್ಯರ್ಥಿಗಳಾಗಿ ಗೆದ್ದಿದ್ದಾರೆ. ಎನ್‌ಡಿಎ ಮೈತ್ರಿಕೂಟದಿಂದ ಒಬ್ಬರೇ ಒಬ್ಬರು ಮುಸ್ಲಿಮ್ ಸದಸ್ಯರಿಲ್ಲ. 2019ರಲ್ಲಿ 26 ಜನರು ಗೆದ್ದಿದ್ದರು. ಈಗ ಒಟ್ಟು ಲೋಕಸಭೆಯಲ್ಲಿ ಶೇ 4.42ರಷ್ಟು ಪ್ರಾತಿನಿಧ್ಯವಿದೆ.
2014ರಲ್ಲಿ 61 ಜನ ಮುಸ್ಲಿಮರನ್ನು ಕಣಕ್ಕಿಳಿಸಿದ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 2024 ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು, ಅಂದರೆ 35 ಸದಸ್ಯರನ್ನು ಕಣಕ್ಕೆ ಇಳಿಸಿತ್ತು. ಅಂದರೆ 2014ರ ಸುಮಾರು ಅರ್ಧದಷ್ಟು ಕಡಿಮೆ. ಮುಸ್ಲಿಮ್ ಸದಸ್ಯರನ್ನು ಕಣಕ್ಕಿಳಿಸಿದ್ದೇ ಬಿಎಸ್‌ಪಿ ಸೋಲಿಗೆ ಕಾರಣ ಎನ್ನುವ ಚರ್ಚೆಗಳ ಹಿನ್ನೆಲೆಯಲ್ಲಿ ಸ್ವತಃ ಮಾಯಾವತಿ ‘‘ಮುಂದೆ ಮುಸ್ಲಿಮ್ ಸದಸ್ಯರನ್ನು ಕಣಕ್ಕಿಳಿಸುವ ಬಗ್ಗೆ ಎಚ್ಚರವಹಿಸಬೇಕಾಗಿದೆ’’ ಎಂದಿದ್ದಾರೆ. ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನ್ಯಾಷನಲ್ ಕಾಂಗ್ರೆಸ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಸಿಪಿಐ-ಎಂ) ಒಳಗೊಂಡ ‘ಇಂಡಿಯಾ ಒಕ್ಕೂಟ 2024ರಲ್ಲಿ 78 ಜನ ಮುಸ್ಲಿಮ್ ಉಮೇದುವಾರರನ್ನು ಕಣಕ್ಕಿಳಿಸಿತ್ತು. 2019ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಈ ಸಂಖ್ಯೆ 119ರಷ್ಟಿತ್ತು.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 1952 ಲೋಕಸಭಾ ಚುನಾವಣೆಯಲ್ಲಿ 25 ಸದಸ್ಯರು ಗೆಲ್ಲುವ ಮೂಲಕ ಶೇ. 5.11ರಷ್ಟು ಮುಸ್ಲಿಮ್ ಪ್ರಾತಿನಿಧ್ಯ ಆರಂಭವಾಯಿತು. 1980ರಲ್ಲಿ 49 ಜನ ಮುಸ್ಲಿಮರು ಗೆಲ್ಲುವ ಮೂಲಕ ಶೇ. 9.04 ಗರಿಷ್ಠ ಪ್ರಾತಿನಿಧ್ಯವಾದರೆ, 2014ರಲ್ಲಿ 23 ಜನ ಗೆಲ್ಲುವ ಮೂಲಕ ಶೇ 4.24ರಷ್ಟು ಕನಿಷ್ಠ ಪ್ರಾತಿನಿಧ್ಯವಾಗಿತ್ತು. 2024ರ ಹೊತ್ತಿಗೆ ಅದೀಗ ಶೇ. 4.42ರಷ್ಟಕ್ಕೆ ಬಂದಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 14ರಷ್ಟಿರುವ ಮುಸ್ಲಿಮರು ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಶೇ. 5ಕ್ಕಿಂತ ಕಡಿಮೆ ಪ್ರಾತಿನಿಧ್ಯದಲ್ಲಿ ಚುನಾಯಿತರಾಗುತ್ತಿದ್ದಾರೆ.
ಸದ್ಯಕ್ಕೆ ಬಿಜೆಪಿಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಶೂನ್ಯವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಳು ಮುಸ್ಲಿಮ್ ಸದಸ್ಯರನ್ನು, 2019ರಲ್ಲಿ ಆರು ಜನರನ್ನು ಕಣಕ್ಕಿಳಿಸಿತ್ತು. ಗೆಲುವು ಶೂನ್ಯವಾಗಿತ್ತು. 2019ರ ಚುನಾವಣೆಯಲ್ಲಿ 545 ಸದಸ್ಯರಲ್ಲಿ ಕೇವಲ 26 ಜನ ಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿಯ ಒಬ್ಬ ಸದಸ್ಯರೂ ಇರಲಿಲ್ಲ. ಅಮಿತ್ ಶಾ ಅವರು 2024ರ ಸೀಟು ಹಂಚಿಕೆಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯವಿಲ್ಲದ್ದರ ಬಗ್ಗೆ ಪ್ರತಿಕ್ರಿಯಿಸಿ ‘‘ನಮ್ಮ ಪಕ್ಷದಲ್ಲಿ ಗೆಲ್ಲುವ ಸಾಮರ್ಥ್ಯವಿದ್ದವರಿಗೆ ಮಾತ್ರ ಟಿಕೆಟ್ ಕೊಡಲಾಗುತ್ತದೆ’’ ಎಂದಿದ್ದರು. ಮುಸ್ಲಿಮ್ ಉಮೇದುವಾರರಿಗೆ ಗೆಲ್ಲುವ ಸಾಮರ್ಥ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಗಿತ್ತು. 2009ರ ತನಕ ಬಿಜೆಪಿ ಕನಿಷ್ಠ ಮುಸ್ಲಿಮ್ ಪ್ರಾತಿನಿಧ್ಯ ಪಾಲಿಸುತ್ತಾ ಬಂದಿದೆ. ಇದು ಶೇ. 0 ಯಿಂದ ಶೇ. 3ರ ತನಕ ಏರು ಇಳಿವುಗಳಲ್ಲಿತ್ತು.
ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಶೇ. 9ರಷ್ಟು ಮುಸ್ಲಿಮ್ ಮತಗಳು ಬಿಜೆಪಿಗೆ ಹಾಕಲ್ಪಡುತ್ತವೆ. ಮೋದಿಯುಗದಲ್ಲಿ ಮುಸ್ಲಿಮ್ ಮತದಾನದ ಪ್ರಮಾಣ ಹೆಚ್ಚಾಗಿದೆ. 2014ರಲ್ಲಿ ಮುಸ್ಲಿಮರ ಮತದಾನ ಶೇ. 59ರಷ್ಟಿದ್ದರೆ, 2019ರಲ್ಲಿ ಅದು ಶೇ. 60ಕ್ಕೆ ಏರಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರ ವೋಟು ಶೇ. 33ರಿಂದ ಶೇ. 38ಕ್ಕೆ ಹೆಚ್ಚಳವಾಗಿದೆ. ಈ ಬಾರಿ ಇಂಡಿಯಾ ಒಕ್ಕೂಟವು ಶೇ. 28ರಷ್ಟು ಮುಸ್ಲಿಮ್ ಮತಗಳನ್ನು ಹೆಚ್ಚುವರಿ ಪಡೆದಿದೆ. ಬಿಜೆಪಿಗೆ ಮೊದಲಿದ್ದ ಶೇ. 4 ಮತಹಂಚಿಕೆಯಿಂದ ಶೇ. 3ಕ್ಕೆ ಇಳಿದಿದೆ. ಇಲ್ಲಿ ಕ್ರಿಶ್ಚಿಯನ್ನರ ಪ್ರಾತಿನಿಧ್ಯ ಮುಸ್ಲಿಮರಿಗಿಂತ ಉತ್ತಮವಾಗಿದೆ. ದೇಶದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆ ಪ್ರಮಾಣ 2.3ರಷ್ಟಿದೆ, ಆದರೆ 2024ರ ಚುನಾವಣೆಯಲ್ಲಿ 10 ಜನ ಕ್ರಿಶ್ಚಿಯನ್ ಸಂಸದರನ್ನು ಒಳಗೊಂಡಿದೆ.
ಆರಂಭಕ್ಕೆ ಚರ್ಚಿಸಿದಂತೆ, ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿಯೂ ಮುಸ್ಲಿಮ್ ಪ್ರಾತಿನಿಧ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ‘ಇಸ್ಲಾಮೋಫೋಬಿಯಾ’ ಉತ್ತರ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಿದೆ. ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಚೂರು ಭಿನ್ನವಾಗಿದೆ. ಉತ್ತರ ಪ್ರದೇಶದಲ್ಲಿ 2012-2017ರ ಚುನಾವಣೆಯಲ್ಲಿ 69 ಜನ ಮುಸ್ಲಿಮರು ಗೆದ್ದಿದ್ದರೆ, 2022ರಲ್ಲಿ 34ಕ್ಕೆ ಇಳಿದಿದೆ. ಮಧ್ಯಪ್ರದೇಶದಲ್ಲಿ 230 ಸದಸ್ಯರಲ್ಲಿ ಕೇವಲ ಇಬ್ಬರು ಮುಸ್ಲಿಮ್ ಶಾಸಕರಿದ್ದಾರೆ. ಶೇ. 7ರಷ್ಟಿರುವ ಜನಸಂಖ್ಯೆಗೆ ಕನಿಷ್ಠ 16 ಮುಸ್ಲಿಮ್ ಸದಸ್ಯರಿರಬೇಕು. ಬಿಜೆಪಿಯಿಂದ ಗೆದ್ದಿರುವ 163 ಶಾಸಕರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಶೇ. 10ರಷ್ಟು ಮುಸ್ಲಿಮರಿರುವ ರಾಜಸ್ಥಾನದ 200 ಸದಸ್ಯರಲ್ಲಿ 6 ಜನ ಮುಸ್ಲಿಮರಿದ್ದಾರೆ. ಬಿಜೆಪಿಯ 115 ಜನರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಅಲ್ಲಿಯ ಜನಸಂಖ್ಯೆಯ ಪ್ರಕಾರ 20 ಮುಸ್ಲಿಮ್ ಶಾಸಕರು ಇರಬೇಕು. ಆದರೆ ಕೇವಲ 6 ಜನರಿದ್ದಾರೆ. 2011ರ ಜನಗಣತಿ ಪ್ರಕಾರ ಶೇ. 2.2ರಷ್ಟು ಮುಸ್ಲಿಮರಿರುವ ಛತ್ತೀಸ್‌ಗಡದಲ್ಲಿ 90 ಜನರಲ್ಲಿ ಮುಸ್ಲಿಮ್ ಪ್ರಾತಿನಿಧ್ಯವೇ ಇಲ್ಲ.
ಆಂಧ್ರದ 2019ರ ಚುನಾವಣೆಯಲ್ಲಿ 4 ಜನ ಗೆದ್ದಿದ್ದರೆ, 2024ರಲ್ಲಿ ತೆಲುಗುದೇಶಂ ಪಕ್ಷದ ಮೂವರು ಗೆದ್ದಿದ್ದಾರೆ. ತೆಲಂಗಾಣದಲ್ಲಿ 119 ಸದಸ್ಯರಲ್ಲಿ 7 ಜನ ಮುಸ್ಲಿಮರಿದ್ದಾರೆ. ಒಟ್ಟು 173 ಜನ ಸ್ಪರ್ಧಿಸಿದ್ದರೂ ಗೆದ್ದದ್ದು 7 ಜನ ಮಾತ್ರ. ಅವರೆಲ್ಲಾ ಎಐಎಂಐಎಂಗೆ ಸೇರಿದವರು. ಕಾಂಗ್ರೆಸ್‌ನ 64 ಶಾಸಕರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ತೆಲಂಗಾಣದಲ್ಲಿ ಶೇ. 13 ರಷ್ಟು ಮುಸ್ಲಿಮರಿದ್ದಾರೆ. ಈ ಪ್ರಕಾರ 15 ಜನ ಸದಸ್ಯರಿರಬೇಕು, ಆದರೆ 119 ಸದಸ್ಯರಲ್ಲಿ 8 ಸದಸ್ಯರು ಚುನಾಯಿತರಾಗಿದ್ದಾರೆ.
2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಶೇ. 12.7ರಷ್ಟು ಮುಸ್ಲಿಮರಿದ್ದಾರೆ. ಆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಿದರೆ 26-28 ಮುಸ್ಲಿಮ್ ಸದಸ್ಯರು ಇರಬೇಕು. 2018ರಲ್ಲಿ ಏಳು ಜನ ಮುಸ್ಲಿಮ್ ಶಾಸಕರು ಚುನಾಯಿತರಾಗಿದ್ದರೆ, 2023ರಲ್ಲಿ ಒಂಭತ್ತು ಜನ ಆಯ್ಕೆಯಾಗಿದ್ದಾರೆ. ಕರ್ನಾಟಕದಲ್ಲಿ 1952ರಿಂದ ಮುಸ್ಲಿಮ್ ಶಾಸಕರ ಸರಾಸರಿ ಸಂಖ್ಯೆ 8.5ರಷ್ಟಿದೆ. ಕರ್ನಾಟಕದ ಸಂದರ್ಭದಲ್ಲಿ ಇದು ಸಮಾಧಾನಕರ ಸಂಗತಿ.
Adam Michael auerbach ಮತ್ತು Tariq Thachill ಅವರ ಸಂಪಾದಕತ್ವದ ‘Migrants and Machine Politics: How India’s Urban Poor Seek Representation and Responsiveness (2023)’ ಕೃತಿಯು ತಳಮಟ್ಟದ ರಾಜಕಾರಣದಲ್ಲಿ ಮುಸ್ಲಿಮ್ ಭಾಗವಹಿಸುವಿಕೆಯ ಕ್ರಮ ವಿಧಾನಸಭೆ ಮತ್ತು ಲೋಕಸಭೆಗಿಂತ ಭಿನ್ನವಾಗಿದೆ ಎಂದು ಚರ್ಚಿಸುತ್ತದೆ. ಬಿಜೆಪಿ ಕೂಡ ಮುಸ್ಲಿಮರನ್ನು ಓಲೈಸುವ ಮತ್ತು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ. ಬಹುತೇಕ ಕಡೆಗಳಲ್ಲಿ ಮಧ್ಯಮವರ್ಗದ ಮುಸ್ಲಿಮ್ ವ್ಯಾಪಾರಿಗಳು ಬಿಜೆಪಿ ಸೇರಿದ್ದಾರೆ. ಈ ನೆಲೆಯಲ್ಲಿ 46 ಮುಸ್ಲಿಮ್ ವ್ಯಾಪಾರಿಗಳು ಬಿಜೆಪಿ ಸೇರಿರುವುದನ್ನು (ಶೇ. 27) ಕೃತಿಯು ಗುರುತಿಸಿದೆ.
ಮೇಲಿನ ವಿಧಾನಸಭೆ ಮತ್ತು ಲೋಕಸಭೆಯ ಅಂಕೆಸಂಖ್ಯೆಗಳನ್ನು ಗಮನಿಸಿದರೆ, ಬಿಜೆಪಿಯನ್ನು ಒಳಗೊಂಡಂತೆ ಭಾರತದ ಮುಖ್ಯ ಧಾರೆಯ ಎಲ್ಲಾ ಪಕ್ಷಗಳೂ ಮುಸ್ಲಿಮ್ ರಾಜಕೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತಿವೆ. 1992ರ ನಂತರದಲ್ಲಿ ಹಿಂದುತ್ವವಾದಿ ಬಲಪಂಥೀಯ ಸಂಘಟನೆಗಳು ಹುಟ್ಟುಹಾಕಿದ ಕೋಮುಧ್ರುವೀಕರಣ, ಮುಸ್ಲಿಮರ ಬಗೆಗೆ ಹುಟ್ಟಿಸಿದ ಭಯ ಇಂದು ಫಲಕೊಡುತ್ತಿದೆ.