ಇಡ್ಲಿ ಮಾದಮ್ಮ-ಕರೀಂ ಸಾಬರ ಪ್ರೇಮ ಮತ್ತು ಮರ್ಯಾದೆಗೇಡು ಹತ್ಯೆ

ಜನಪದ ಕಥನಗಳಲ್ಲಿ ಕೆಲವು ಅಪರೂಪದ ಪಠ್ಯಗಳು ಸಿಗುತ್ತವೆ. ಕೆಲವು ಯಥಾಸ್ಥಿತಿಯನ್ನು ಮುಂದುವರಿಸುವಂತಿದ್ದರೆ, ಮತ್ತೆ ಕೆಲವು ಯಥಾಸ್ಥಿತಿಗೆ ವಿರೋಧ ವ್ಯಕ್ತಪಡಿಸುತ್ತವೆ. ಮತ್ತೆ ಕೆಲವು ಯಥಾಸ್ಥಿತಿಯ ಜತೆ ಸಂಘರ್ಷ ಮಾಡುತ್ತವೆ. ಅಂತಹ ಪಠ್ಯಗಳಲ್ಲಿ ಇಡ್ಲಿ ಮಾದಮ್ಮ ಮತ್ತು ಕರೀಂ ಸಾಬರ ಪ್ರೇಮ ಪ್ರಕರಣದ ಕಥನಗೀತೆಯೂ ಒಂದಾಗಿದೆ. ಈ ಕಾಲದ ಕನ್ನಡಿಯಲ್ಲಿ ಈ ಕಥನ ಗೀತೆಯನ್ನು ವಿಶ್ಲೇಷಣೆ ಮಾಡಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ.
ಜನಪದ ಪಠ್ಯಗಳು ಒಂದಿರುವುದಿಲ್ಲ ಹಲವಿರುತ್ತವೆ. ಇಲ್ಲಿಯೂ ಇಡ್ಲಿಮಾದಮ್ಮ ಮತ್ತು ಮಾತುಗಾರ ಮಲ್ಲಣ್ಣ ಎಂಬ ಒಂದು ತಂಬೂರಿ ಹಾಡಿದೆ. ಅಂತೆಯೇ ‘ಕಡುಬಿನ ಮಾದಮ್ಮ’ ಎಂತಲೂ ಭಿನ್ನ ಪಠ್ಯಗಳಿವೆ. ಈ ಕಥನ ಗೀತೆ ಹೆಚ್ಚು ಚರ್ಚೆಯಾಗಿಲ್ಲ. ಇದೊಂದು ತುಂಬಾ ವಿಶಿಷ್ಟವಾದ ಕಥನ. ಸಮುದಾಯ ಈ ಕಥನವನ್ನು ಯಾಕೆ ಕಟ್ಟಿರಬಹುದು? ಈ ಕಟ್ಟುವಿಕೆಯ ಹಿಂದೆ ಸಮಾಜಕ್ಕೆ ನೀಡುವ ಸಂದೇಶವಾದರೂ ಏನು? ಎನ್ನುವ ಹಲವು ಪ್ರಶ್ನೆಗಳು ಮೂಡಿದವು. ಮೊದಲಿಗೆ ಸಂಕ್ಷಿಪ್ತವಾಗಿ ಈ ಕಥೆಯನ್ನು ಹೇಳುವೆ.
ಇಡ್ಲಿ ಮಾದಮ್ಮ ಕೊಲ್ಲಂಪುರ ಪಟ್ಟಣದಲ್ಲಿ ಒಂದು ಪುಟ್ಟ ಹೋಟೆಲ್ ಇಟ್ಟುಕೊಂಡಿದ್ದಾಳೆ. ಇಡ್ಲಿ, ಚಾ, ಕಾಫಿ ಮಾಡುತ್ತಾಳೆ. ಇದೇ ಊರಿನ ಜಾತ್ಯಸ್ತನಾದ ಮಲ್ಲಣ್ಣ ಎತ್ತು, ಎಮ್ಮೆ ದಲ್ಲಾಳಿ ವ್ಯಾಪಾರಿ. ಕರೀಂ ಸಾಬರದು ಫುಟ್‌ಪಾತ್ ವ್ಯಾಪಾರ. ಕರೀಂ ಸಾಬರಿಗೂ ಮಾದಮ್ಮನಿಗೂ ಬಾಲ್ಯದಿಂದಲೂ ಸ್ನೇಹ. ವಯಸ್ಸಿಗೆ ಬಂದಾಗ ಈ ಸ್ನೇಹ ಇಬ್ಬರ ಪ್ರೇಮವಾಗಿರುತ್ತೆ. ಇಬ್ಬರೂ ಗಾಢವಾಗಿ ಪ್ರೇಮಿಸುತ್ತಾರೆ. ನಮ್ಮ ಜಾತಿಯವರನ್ನು ಬಿಟ್ಟು ಸಾಬರ ಜತೆ ಸಂಬಂಧ ಇಟ್ಕೊಂಡವಳೆ ಅಂತ ಮಲ್ಲಣ್ಣನಿಗೆ ಕುದಿಯುವ ಸಿಟ್ಟು.
ಒಂದು ದಿನ ವ್ಯಾಪಾರ ಮುಗಿಸಿ ಮಲ್ಲಣ್ಣ ಬೇಗ ಬಂದು ಮಾದಮ್ಮನ ಮನೆ ಅಟ್ಟದ ಮೇಲೆ ಮಲಗಿರುತ್ತಾನೆ. ಇತ್ತ ಸ್ವಲ್ಪ ತಡವಾಗಿ ಕರೀಂ ಸಾಬರು ರಾತ್ರಿ ಮಾದಮ್ಮನ ಮನೆಗೆ ಬರುತ್ತಾರೆ. ಮಾದಮ್ಮ ಖುಷಿಗೊಂಡು ಆತನಿಗಾಗಿ ತೆಗೆದಿಟ್ಟಿದ್ದ ಇಡ್ಲಿಯನ್ನು ಕೊಡುತ್ತಾಳೆ. ಅಟ್ಟದ ಮೇಲೆ ಮಲಗಿದ್ದ ಮಲ್ಲಣ್ಣ ಇದನ್ನು ಗಮನಿಸುತ್ತಾನೆ. ತಾನು ಕೇಳಿದರೆ ಇಡ್ಲಿ ಖಾಲಿಯಾಗಿದೆ ಎಂದು ಹೇಳಿದ ಮಾದಮ್ಮ ಕರೀಂ ಸಾಬರಿಗೆ ಕೊಟ್ಟದ್ದು ಸಿಟ್ಟು ತರಿಸುತ್ತದೆ. ಮಲ್ಲಣ್ಣ ಮೆಲ್ಲಗೆ ಅಟ್ಟ ಇಳಿದು ಹೊರನಡೆದು ಕಿಟಕಿಯಿಂದ ಕೈಚಾಚಿ ಕರೀಂ ಸಾಬರ ಕೊರಳಿಗೆ ಕೈಹಾಕಿ ಶಕ್ತಿಹಾಕಿ ಎಳೆಯುತ್ತಾನೆ. ಕರೀಂ ಸಾಬರು ಹಠಾತ್ ದಾಳಿಗೆ ವಿಲ ವಿಲ ಒದ್ದಾಡಿ ಉಸಿರುಕಟ್ಟಿ ಸಾಯುತ್ತಾರೆ. ಇತ್ತ ಏನೂ ಗೊತ್ತಿಲ್ಲದಂತೆ ಮಲ್ಲಣ್ಣ ಮೆಲ್ಲಗೆ ಅಟ್ಟ ಏರಿ ಮಲಗುತ್ತಾನೆ.
ಒಳಗಿನಿಂದ ನೀರು ತಂದ ಮಾದಮ್ಮ ಕರೀಂ ಸಾಬರನ್ನು ಮುಟ್ಟಿ ನೋಡಿ ದಂಗಾಗುತ್ತಾಳೆ. ಆಯ್ಯೋ ಸಾಹೇಬರು ಸತ್ತು ಹೋಗಿದ್ದಾರೆಂದು ದುಃಖ ಅದುಮಿಟ್ಟು ಬಿಕ್ಕಳಿಸುತ್ತಾಳೆ. ‘‘ಅಯ್ಯೋ ಸಾಬೂ ನನ್ನ ಮನೆಗೆ ಬಂದೇ ಜೀವಬಿಡಬೇಕಿತ್ತಾ’’ ಎಂದು ಮೆಲ್ಲಗೆ ಗೋಳಾಡುತ್ತಾಳೆ. ಒಳಗೊಳಗೆ ಕಡುದುಃಖದಲ್ಲಿ ಕುಸಿದು ಹೋಗುತ್ತಾಳೆ. ಕೊನೆಗೆ ದಾರಿ ಕಾಣದೆ ಮಲ್ಲಣ್ಣನನ್ನು ಎಬ್ಬಿಸಿ ಕರೀಂಸಾಬರು ಸತ್ತಿರುವುದಾಗಿಯೂ, ಈ ಹೆಣವನ್ನು ದೂರ ಒಯ್ದು ಹೂತು ಬಾ ಎಂದು ಹೇಳುತ್ತಾಳೆ. ಅದಕ್ಕಾಗಿ ನೂರು ರೂಪಾಯಿ ಕೊಡುವುದಾಗಿ ಹೇಳುತ್ತಾಳೆ.
ಮಲ್ಲಣ್ಣ ಸರಿ ಎಂದು ಕರೀಂಸಾಬು ಅವರ ದೇಹವನ್ನು ಚೀಲದಲ್ಲಿ ತುಂಬಿಕೊಂಡು ಪಟೇಲನ ಮನೆಬಳಿ ಇಟ್ಟುಬರುತ್ತಾನೆ. ಪಟೇಲನ ಮನೆಯ ಕಾವಲುಗಾರರು ಈ ಮೂಟೆ ನೋಡಿದರೆ ಕರೀಂ ಸಾಬರ ಹೆಣ. ಭಯಗೊಳ್ಳುತ್ತಾರೆ. ಕೊಲೆ ಆಪಾದನೆ ತಮ್ಮ ಮೇಲೆ ಬರುತ್ತೆಂದು, ಹೇಗೋ ಇಡ್ಲಿ ಮಾದಮ್ಮನಿಗೆ ಸಂಬಂಧವಿದೆಯೆಂದು, ಆ ಮೂಟೆಯನ್ನು ಗುಟ್ಟಾಗಿ ಮಾದಮ್ಮನ ಮನೆ ಮುಂದೆ ಇಟ್ಟು ಬರುತ್ತಾರೆ. ಮತ್ತೆ ಮಾದಮ್ಮ ಮೂಟೆ ನೋಡಿ, ಅಯ್ಯೋ ಕರೀಂ ಸಾಬರು ಮತ್ತೆ ಬಂದಾರೆ ಎಂದು ಮಲ್ಲಣ್ಣನನ್ನು ಎಬ್ಬಿಸುತ್ತಾಳೆ. ಆತ ‘‘ಸಾಬರಿಗೆ ನಿನ್ನ ಮೇಲೆ ಬಾಳ ಪ್ರೀತಿ ಹಾಗಾಗಿ ಮತ್ತೆ ಬಂದಿದ್ದಾರೆ’’ ಎಂದು ಕುಟುಕುತ್ತಾನೆ.
ಆಗ ಮಾದಮ್ಮ ಅಯ್ಯೋ ಮಲ್ಲಣ್ಣಾ ಹೇಗಾದರೂ ಸರಿ ಸಾಬರ ಹೆಣವನ್ನು ಸಾಗ ಹಾಕು ಎಂದು ಮತ್ತೆ ನೂರು ರೂಪಾಯಿ ಕೊಡುತ್ತಾಳೆ. ಈ ಬಾರಿ ಮಲ್ಲಣ್ಣ ಸಾಬರ ಮೂಟೆ ಹೊತ್ತು ಶಾನುಭೋಗರ ಮೆಣಸಿನ ಹೊಲದಲ್ಲಿ ಇಳಿಸಿ ಬರುತ್ತಾನೆ. ಯಥಾಪ್ರಕಾರ ಹೊಲ ಕಾಯುವ ಕೂಲಿಯಾಳುಗಳು ಈ ಮೂಟೆಯಲ್ಲಿ ಕರೀಂ ಸಾಬರ ಹೆಣ ನೋಡಿ ಕೊಲೆ ಆಪಾದನೆ ಶಾನುಭೋಗರ ಮೇಲೆ ಬರುತ್ತೆ ಎಂದೂ, ಹೇಗೂ ಇಡ್ಲಿ ಮಾದಮ್ಮನಿಗೆ ಸಂಬಂಧವಿದೆಯೆಂದು, ಆ ಮೂಟೆಯನ್ನು ಗುಟ್ಟಾಗಿ ಮತ್ತೆ ಮಾದಮ್ಮನ ಮನೆ ಮುಂದೆ ತಂದು ಹಾಕುತ್ತಾರೆ. ಮತ್ತೆ ಮಾದಮ್ಮ ನೋಡಿ, ಅಯ್ಯೋ ಕರೀಂ ಸಾಬರು ಮತ್ತೆ ಬಂದಾರೆ ಎಂದು ಮಲ್ಲಣ್ಣನನ್ನು ಎಬ್ಬಿಸುತ್ತಾಳೆ. ಈ ಬಾರಿ ದೂರ ಹಾಕಪ್ಪಾ ಅಂತ ಮತ್ತೆ ನೂರು ರೂಪಾಯಿ ಕೊಡುತ್ತಾಳೆ.
ಇನ್ನೇನು ಬೆಳಗಾಗಬೇಕು ಮಲ್ಲಣ್ಣ ಸಾಬರ ಮೂಟೆ ಹೊತ್ತು ಕೆರೆ ಏರಿ ಮೇಲೆ ನಡೆಯುತ್ತಾನೆ. ಎದುರಿಗೆ ಬೆಳ್ಳುಳ್ಳಿ ವ್ಯಾಪಾರಿ ಬರುತ್ತಾನೆ. ತನ್ನದು ಗೆಣಸಿನ ಮೂಟೆ ಎಂದು ಹೇಳುತ್ತಾನೆ. ಒಂದು ಕಡೆ ಮೂಟೆಗಳ ಇಳಿಸಿ ಇಬ್ಬರೂ ಕೆರೆ ನೀರು ಕುಡಿಯುತ್ತಾರೆ. ಮಲ್ಲಣ್ಣ ಅವಸರದಲ್ಲಿ ಸಾಬರ ಮೂಟೆ ಇಳಿಸಿ, ಬೆಳ್ಳುಳ್ಳಿ ಮೂಟೆ ಹೊತ್ತೊಯ್ಯುತ್ತಾನೆ.
ಇತ್ತ ಬೆಳ್ಳುಳ್ಳಿ ವ್ಯಾಪಾರಿ ಮೂಟೆ ಅದಲು ಬದಲಾದುದು ನೋಡಿ ಅಯ್ಯೋ ಮೂಟೆ ಬದಲಾಗಿದೆ. ಸರಿಬಿಡು ಗೆಣಸಿನ ಮೂಟೆ ಹೊಸ ವ್ಯಾಪಾರ ಮಾಡೋಣ ಎಂದು ಮೂಟೆ ಹೊತ್ತು ಮತ್ತೆ ಮಾದಮ್ಮನ ಅಂಗಡಿಗೆ ತರುತ್ತಾನೆ. ಮಾದಮ್ಮನಿಗೆ ‘‘ಇದು ಗೆಣಸಿನ ಮೂಟೆ ನೀನೇ ಮಾರಿ ನನಗೆ ಐವತ್ತು ರೂಪಾಯಿ ಕೊಟ್ಬಿಡಮ್ಮಾ’’ ಎನ್ನುತ್ತಾನೆ. ರಾತ್ರಿಪೂರ ಭಯ ಆತಂಕದಲ್ಲಿ ನಿದ್ದೆ ಇರದ ಮಾದಮ್ಮ ಮೂರುನೂರು ಹಣ ಬೇರೆ ಕಳೆದುಕೊಂಡಿರುತ್ತಾಳೆ. ಹೀಗಿರುವಾಗ ಹೇಗೋ ಹೊಸ ವ್ಯಾಪಾರ ಗಿಟ್ಟಬಹುದೆಂದು ‘‘ಗೆಣಸೋ, ಗೆಣಸೋ’’ ಎಂದು ಕೂಗುತ್ತಾಳೆ. ಜನ ಬರುತ್ತಾರೆ. ಚೀಲ ಬಿಚ್ಚಿ ನೋಡಿದರೆ, ಕರೀಂ ಸಾಬರ ಹೆಣ..ಎಲ್ಲರೂ ಬೆಚ್ಚಿ ಬೀಳುತ್ತಾರೆ. ಕೊನೆಗೆ ಆ ವ್ಯಾಪಾರಿಯೇ ಕೊಲೆ ಮಾಡಿರಬೇಕೆಂದು ಕಟ್ಟಿಹಾಕುತ್ತಾರೆ. ಗೆಣಸೆಂದು ಮಾರಲು ಬಂದ ಮಾದಮ್ಮಳನ್ನೂ ಕಟ್ಟಿಹಾಕಿ ಪಂಚಾಯ್ತಿ ಮಾಡುತ್ತಾರೆ.
ಇದೇ ಹೊತ್ತಿಗೆ ಮಲ್ಲಣ್ಣ ಬೆಳ್ಳುಳ್ಳಿ ಬೆಳ್ಳುಳ್ಳಿ ಎಂದು ಕೂಗುತ್ತಾ ಬರುತ್ತಾನೆ. ವ್ಯಾಪಾರಿ ನೋಡಿ ‘‘ಅದೋ ಈ ಮಲ್ಲಣ್ಣನೇ ನೋಡಿ ಈ ಮೂಟೆ ಬಿಟ್ಟು ಹೋಗಿದ್ದು’’ ಎಂದು ಪಂಚಾಯ್ತಿಯವರಿಗೆ ಹೇಳುತ್ತಾನೆ. ಈ ಮಲ್ಲಣ್ಣನನ್ನು ಎಳೆದು ತರುತ್ತಾರೆ. ‘‘ಇಲ್ಲ ನಾನು ಕೊಲೆ ಮಾಡಿಲ್ಲ ಬೇಕಾದರೆ ಪಟೇಲರ ಮನೆಯ ಆಳುಗಳನ್ನು ಕೇಳಿ’’ ಎನ್ನುತ್ತಾನೆ. ಪಟೇಲರು ಇದ್ಯಾಕೋ ತನ್ನ ಮೇಲೆ ಬರುವ ಹಾಗಿದೆ ಎಂದು ಮೆಲ್ಲಗೆ ಕಾಲು ಕೀಳುತ್ತಾರೆ.
ನಂತರ ಮಲ್ಲಣ್ಣ ‘‘ನಾನಂತೂ ಕೊಲೆ ಮಾಡಿಲ್ಲ, ಬೇಕಾದರೆ ಶಾನುಭೋಗರ ಆಳುಗಳ ಕೇಳಿ’’ ಎನ್ನುತ್ತಾನೆ. ಶಾನುಭೋಗರೂ ಕೂಡ ಇದೇಕೋ ತನ್ನ ಮೇಲೆ ಬರುವ ಹಾಗಿದೆ ಎಂದು ಮೆಲ್ಲಗೆ ಕಾಲು ಕೀಳುತ್ತಾರೆ. ಉಳಿದ ದೈವಸ್ಥರು ಮುಂದೇನಾಯಿತು ಎಂದು ಕೇಳುತ್ತಾರೆ. ಆಗ ಮಲ್ಲಣ್ಣ ನಡೆದದ್ದನ್ನೆಲ್ಲಾ ಹೇಳುತ್ತಾನೆ. ಇದರಲ್ಲಿ ಮಾದಮ್ಮ ಇಡ್ಲಿ ತಂದು ಕೊಟ್ಟಳು. ಕರೀಂಸಾಬರು ಇಡ್ಲಿ ತಿಂದು ನೀರಿಲ್ಲದೆ ಬಿಕ್ಕಳಿಸಿ ನೆತ್ತಿಗೇರಿ ಸತ್ತರು ಎಂದು ಕತೆಕಟ್ಟಿ ಸುಳ್ಳು ಹೇಳುತ್ತಾನೆ. ಹಾಗಾಗಿ ಪಂಚಾಯ್ತಿ ಇಡ್ಲಿ ಮಾದಮ್ಮನಿಗೆ ಮೂರು ನೂರು ಹಣ ದಂಡ, ಮೂರು ವರ್ಷ ಜೈಲುವಾಸದ ಶಿಕ್ಷೆ ಕೊಡುತ್ತದೆ. ಸಾಬರ ಹೆಣ ಹೊತ್ತು ಓಡಾಡಿದ ಮಲ್ಲಣ್ಣ ಸುಖವಾಗಿದ್ದ ಎನ್ನುವಲ್ಲಿಗೆ ಕಥೆ ಮುಗಿಯುತ್ತದೆ.
ಇದೊಂದು ಕಥನ ಗೀತೆ. ಹಾಡಲಿಕ್ಕೂ ಅನುವಾಗುವಂತೆ ನಾಟಕೀಯವಾಗಿ ಸರಳವಾದ ಪದ್ಯಗಳಲ್ಲಿದೆ. ಇದು ಜನಪದರು ಆಧುನಿಕ ಬದುಕನ್ನು ಕಥನ ವಸ್ತುವಾಗಿಸಿಕೊಂಡಿದ್ದಾರೆ. ಹೆಣ್ಣುಮಗಳೊಬ್ಬಳು ಸ್ವತಂತ್ರವಾಗಿ ವ್ಯಾಪಾರ ಮಾಡುವ ಬಗ್ಗೆ ಈ ಕಥನಗೀತೆ ಗಮನಸೆಳೆಯುತ್ತದೆ. ಇದರಲ್ಲಿ ಮಾದಮ್ಮ ಬಾಲ್ಯದ ಗೆಳೆಯ ಕರೀಂ ಸಾಬರನ್ನು ಗುಟ್ಟಾಗಿ ಪ್ರೇಮಿಸುತ್ತಾಳೆ. ನಿಧಾನಕ್ಕೆ ಊರಿಗೆಲ್ಲಾ ಇಡ್ಲಿ ಮಾದಮ್ಮ ಮತ್ತು ಕರೀಂಸಾಬರ ಪ್ರೇಮಪ್ರಸಂಗ ತಿಳಿಯುತ್ತದೆ. ಆದರೆ ಮಾದಮ್ಮ ಧರ್ಮದ ಕಾರಣಕ್ಕೆ ಮದುವೆಯೇ ಆಗದೆ ಕರೀಂ ಸಾಬರನ್ನೆ ಪ್ರೇಮಿಸುತ್ತಲೇ ಒಂಟಿಯಾಗಿ ಪುಟ್ಟ ಹೋಟೆಲ್ ಇಟ್ಟುಕೊಂಡು ಊರವರ ಎದುರು ಹಾಕಿಕೊಂಡು ಜೀವಿಸುತ್ತಾಳೆ.
ಊರವರು ಹೇಗೋ ಇರಲಿ ಬಿಡಿ ಎಂದು ಸುಮ್ಮನಾಗುತ್ತಾರೆ. ಆದರೆ ಮಾದಮ್ಮನ ಜಾತಿಯ ಮಲ್ಲಣ್ಣನಿಗೆ ಮಾತ್ರ ಮಾದಮ್ಮ ಕರೀಂ ಸಾಬರನ್ನು ಪ್ರೀತಿಸುವ ವಿಷಯ ಇಷ್ಟವಾಗಿರುವುದಿಲ್ಲ. ಹೇಗಾದರೂ ಈ ಪ್ರೀತಿ ಮುರಿಯಬೇಕೆಂದು ಸಮಯ ಕಾಯುತ್ತಿರುತ್ತಾನೆ. ಅಕಸ್ಮಾತ್ ಒದಗಿ ಬಂದ ಸಂದರ್ಭದಲ್ಲಿ ಕರೀಂಸಾಬರನ್ನು ಸಾಯಿಸುತ್ತಾನೆ. ಇಡೀ ಕತೆಯಲ್ಲಿ ಸಾಬರ ಹೆಣದ ಮೂಟೆಯೂ ಒಂದು ಪಾತ್ರವಾಗಿರುತ್ತದೆ. ಪ್ರತಿಯೊಬ್ಬರೂ ಸಾಬರ ಕೊಲೆಯ ಆರೋಪವನ್ನು ಮಾದಮ್ಮನ ತಲೆಗೆ ಕಟ್ಟಲು ಹೆಣಗುತ್ತಾರೆ. ಕೊನೆಗೆ ಪಂಚಾಯ್ತಿಯಲ್ಲಿಯೂ ಮಾದಮ್ಮಳೇ ಕರೀಂಸಾಬರ ಕೊಲೆ ಮಾಡಿದ್ದಾಳೆಂದು ಶಿಕ್ಷೆ ಕೊಡುತ್ತಾರೆ. ಇದರಲ್ಲಿ ನಿಜಕ್ಕೂ ಕೊಲೆ ಮಾಡಿದ ಮಲ್ಲಣ್ಣ ಬಚಾವಾಗುತ್ತಾನೆ. ಈ ಕಥನಗೀತೆ ರಚನೆಗೆ ಬಹುಶಃ ನಡೆದ ಘಟನೆ ಕಾರಣವಾಗಿರಬಹುದು. ಕೊಲ್ಲಂಪುರ ಎಂದಿರುವ ಕಾರಣ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಹಳ್ಳಿಯೊಂದರಲ್ಲಿ ನಡೆದ ಘಟನೆ ಇರಬೇಕು. ಮಾದಮ್ಮ ಹೆಸರನ್ನು ನೋಡಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಈ ಕಥೆಗೆ ನಿಜ ಘಟನೆ ಪ್ರೇರಣೆ ಆಗಿರಬಹುದು.
ಸ್ವತಂತ್ರವಾಗಿ ವ್ಯಾಪಾರ ಮಾಡುವ ಮಾದಮ್ಮನ ಬಗ್ಗೆ ಗಂಡಿನ ಅಸಹನೆಯೂ ಈ ಕಥೆಯ ಹಿಂದೆ ಇದ್ದಂತಿದೆ. ಅಂತೆಯೇ ತನ್ನ ಜಾತಿಯವರಲ್ಲದ ಅನ್ಯ ಜಾತಿಯ (ಅನ್ಯ ಧರ್ಮ ಎಂದು ಕಥನಗೀತೆಯಲ್ಲಿ ಬಳಸಿಲ್ಲ) ಕರೀಂ ಸಾಬರನ್ನು ಪ್ರೀತಿಸಿದ ಕಾರಣಕ್ಕೆ ಮಾದಮ್ಮ ಇಂತಹ ಸಂಕಷ್ಟ ಅನುಭವಿಸಿದಳು ಎಂದು ಹೇಳುವ ಮೂಲಕ ಈ ಕತೆ ಹಳ್ಳಿ ಹೆಣ್ಣುಮಕ್ಕಳಲ್ಲಿ ಒಂದು ಬಗೆಯ ಭಯವನ್ನು ಬಿತ್ತುವ ಉದ್ದೇಶವನ್ನೂ ಅಡಗಿಸಿಕೊಂಡಂತಿದೆ. ಇದೇ ರೀತಿ ಒಂದು ಜಾತಿಯ ಹುಡುಗಿಯನ್ನು ಬೇರೆ ಜಾತಿಯ ಗಂಡು ಪ್ರೇಮಿಸಬಾರದು ಎನ್ನುವ ಕಟ್ಟುಪಾಡನ್ನೂ ಈ ಕಥನಗೀತೆ ಸೂಚ್ಯವಾಗಿ ಹೇಳುತ್ತಿದೆ.
ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ತನ್ನದೇ ಜಾತಿಯ ಹೆಣ್ಣು ಅನ್ಯ ಜಾತಿಯವನನ್ನು ಪ್ರೇಮಿಸಿದರೆ ಅದೇ ಜಾತಿಯ ಗಂಡು ಅನ್ಯ ಜಾತಿಯ ಗಂಡನ್ನು ಸಾಯಿಸುವುದನ್ನೂ ಈ ಕಥನಗೀತೆ ಮಾನ್ಯ ಮಾಡುವಂತಿದೆ. ಇಂದು ಅಂತರ್ಜಾತಿ ವಿವಾಹದ ಕಾರಣಕ್ಕೆ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆಗಳ ಸಂಚನ್ನೂ ಸೂಚ್ಯವಾಗಿ ಕಾಣಿಸುತ್ತಿದೆ. ಈ ಕತೆ ಕಟ್ಟಿದ ಜನಪದ ಕವಿಯ ಮನಸ್ಸಲ್ಲಿ ಏನಿರಬಹುದು ಎನ್ನುವುದು ಇಲ್ಲಿ ಗುಟ್ಟಾಗಿಯೇನು ಉಳಿಯುವುದಿಲ್ಲ. ಜಾನಪದ ರಚನೆಗಳಲ್ಲಿ ಸಾಮರಸ್ಯ ಇರುವಂತೆ ಹೆಚ್ಚಿನ ಭಾಗ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಂಪ್ರದಾಯಿಕ ರಚನೆಗಳಿವೆ. ಇಂತಹ ರಚನೆಗಳನ್ನು ಆಯ್ದು ವಿಶ್ಲೇಷಿಸಬೇಕಿದೆ. ಜಾನಪದವೆಲ್ಲ ಅನುಸರಣೆಗೆ ಯೋಗ್ಯ ಎನ್ನುವ ದುಂಡು ಹೇಳಿಕೆಗಳನ್ನು ಒಡೆಯಬೇಕಿದೆ. ವರ್ತಮಾನದ ಸಾಂವಿಧಾನಿಕ ಸಮತೆಯ ಜರಡಿಯಲ್ಲಿ ಸೋಸಬೇಕಿದೆ. ವರ್ತಮಾನದ ಎಷ್ಟೋ ಕೇಡುಗಳ ಬೇರು ಜಾನಪದ ಲೋಕದಲ್ಲಿರುವುದು ಅಚ್ಚರಿಯ ಸಂಗತಿಯೇನಲ್ಲ.
ಆಕರ: ಇಡ್ಲಿ ಮಾದಮ್ಮ, ಡಿ.ಲಿಂಗಯ್ಯ ಸಂಪಾದಿಸಿದ ‘ಕರ್ನಾಟಕದ ಜನಪದ ಕಾವ್ಯಗಳು’ ಕೃತಿ, ದಿನಕರ ಪ್ರಕಾಶನ, 1976, ಬೆಂಗಳೂರು.