Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ದೇವನಹಳ್ಳಿ ರೈತರ ಬೆನ್ನಿಗೆ ಭೂ ಹೋರಾಟಗಳ...

ದೇವನಹಳ್ಳಿ ರೈತರ ಬೆನ್ನಿಗೆ ಭೂ ಹೋರಾಟಗಳ ಚರಿತ್ರೆಯೇ ಇದೆ

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ8 July 2025 2:41 PM IST
share
ದೇವನಹಳ್ಳಿ ರೈತರ ಬೆನ್ನಿಗೆ ಭೂ ಹೋರಾಟಗಳ ಚರಿತ್ರೆಯೇ ಇದೆ
ಕರ್ನಾಟಕದ ಸಂದರ್ಭದಲ್ಲಿ ರೈತ ಹೋರಾಟಗಳ ಅಧ್ಯಯನ, ಸಂಶೋಧನೆಗಳು ನಡೆದದ್ದು ವಿರಳ. ಅಂತೆಯೇ ಹೋರಾಟ ರೂಪಿಸುವವರಿಗೆ, ಹೋರಾಟದಲ್ಲಿ ಪಾಲ್ಗೊಂಡ ರೈತ ಪರಿವಾರಕ್ಕೆ ಈ ಹೋರಾಟವನ್ನು ದಾಖಲಿಸಬೇಕು ಎನ್ನುವ ದರ್ದು ಕಡಿಮೆ. ಇದೊಂದು ಅಕಾಡಮಿಕ್ ಕೆಲಸ. ಇದನ್ನು ನುರಿತ ತಜ್ಞರು ವ್ಯವಧಾನದಿಂದ ಕೂತು ರೈತರ ನರನಾಡಿಗಳ ಧ್ವನಿಯನ್ನು ಗ್ರಹಿಸಿ ದಾಖಲಿಸಬೇಕು. ಹಾಗಾಗಿ ಭಾರತ ಮತ್ತು ಕರ್ನಾಟಕದಲ್ಲಿ ರೈತ ಹೋರಾಟಗಳು ನಡೆದಷ್ಟು ಅವುಗಳ ಬಗೆಗಿನ ಅಧ್ಯಯನಗಳು ನಡೆದದ್ದು ಕಡಿಮೆಯೇ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1,777 ಎಕರೆ ಭೂಮಿಯ ಉಳಿವಿಗಾಗಿ ಇದೀಗ ಭೂ ಸ್ವಾಧೀನ ವಿರೋಧಿ ಹೋರಾಟ ನಡೆಯುತ್ತಿದೆ. ಕೆಲವು ಸಾಹಿತಿಗಳು, ಚಿಂತಕರು, ಕಲಾವಿದರು ಭೂ ಹೋರಾಟವನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿಗಳ ಜತೆಗೆ ಒಂದು ಸುತ್ತಿನ ಮಾತುಕತೆ ಆಗಿದೆ. ಈ ಸಂದರ್ಭದಲ್ಲಿ ಇಡಿಯಾದ ಹೋರಾಟವನ್ನು ಚಳವಳಿಯ ಸಂಗಾತಿಗಳು ಬೇರೆ ಬೇರೆ ನೆಲೆಗಳಲ್ಲಿ ದಾಖಲಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಂಡೂರು ಭೂ ಹೋರಾಟಕ್ಕೆ 50 ವರ್ಷ ತುಂಬಿದೆ. ಅರ್ದಶತಮಾನದಲ್ಲಿ ರೈತರ ಭೂ ಹೋರಾಟಗಳ ದೊಡ್ಡ ಪರಂಪರೆಯೇ ನಮ್ಮ ಕಣ್ಣೆದುರು ನಿಲ್ಲುತ್ತದೆ.

ಕೇಂದ್ರ ಸರಕಾರವನ್ನು ಮಣಿಸಿದ 700ಕ್ಕಿಂತ ಹೆಚ್ಚು ರೈತರು ಬಲಿದಾನಗೈದ ದಿಲ್ಲಿಯ ರೈತ ಹೋರಾಟ ಈ ದಶಕದ ಒಂದು ಚಾರಿತ್ರಿಕ ಸ್ಫೂರ್ತಿಯ ಹೋರಾಟವಾಗಿದೆ. ಹಾಸನದ ಎಚ್.ಆರ್. ನವೀನ್ ಕುಮಾರ್ ಅವರ ‘ಕದನ ಕಣ’ ಕೃತಿ ಈ ಹೋರಾಟದ ಸಾಕ್ಷ್ಯವಾಗಿದೆ. ಹಾಗೆ ನೋಡಿದರೆ ಭೂಮಿಗಾಗಿ ರೈತರು ಮಾಡಿದ ಹೋರಾಟಗಳಿಗೆ ಕರ್ನಾಟಕದಲ್ಲಿ ದೊಡ್ಡ ಪರಂಪರೆಯೇ ಇದೆ. 1683ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ್ ಎದುರು ಭೂ ತೆರಿಗೆಯ ಹೇರಿಕೆ ವಿರೋಧಿಸಿ ನಡೆದ ಹೋರಾಟದಿಂದ, ಈಗಿನ ದೇವನಹಳ್ಳಿ ಭೂ ಆಕ್ರಮಣ ವಿರೋಧಿ ಹೋರಾಟದ ತನಕ ಅದರ ಹರವು ದೊಡ್ಡದು.

ಕರ್ನಾಟಕದಲ್ಲಿ ನಡೆದ ಭೂಹೋರಾಟಗಳ ಸಂಖ್ಯೆಗೆ ಹೋಲಿಸಿದರೆ ಆ ಕುರಿತು ನಡೆದ ಅಧ್ಯಯನಗಳು ತುಂಬ ಕಡಿಮೆ. ಕನ್ನಡದಲ್ಲಿ ಜಿ.ರಾಜಶೇಖರ ಅವರು ‘ಕಾಗೋಡು ಸತ್ಯಾಗ್ರಹ’ ಎಂಬ ತಮ್ಮ ಕೃತಿಯಲ್ಲಿ ರೈತ ಹೋರಾಟವನ್ನು ಒಂದು ರಾಜಕೀಯ ಕಥನವನ್ನಾಗಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಬದುಕಿನ ಭಾಗವಾಗಿ ಭೂಹೋರಾಟ ಸಂಘಟಿಸಿದ್ದ ಗೋದಾವರಿ ಪರುಳೇಕರ್ ಅವರ ‘ಮಾನವ ಎಚ್ಚೆತ್ತಾಗ’ ಕೃತಿ ಹೋರಾಟದ ಆತ್ಮಕಥಾನಕ ಮಾದರಿಯಾಗಿ ಗಮನಸೆಳೆಯುತ್ತದೆ. ಉಳಿದಂತೆ 1834-37ರಲ್ಲಿ ಸುಳ್ಯ ಭಾಗದ ರೈತರು ಬ್ರಿಟಿಷರ ವಿರುದ್ಧವೂ ಹೋರಾಟ ಮಾಡಿದ್ದರು. ಇದನ್ನು ಪುರುಷೋತ್ತಮ ಬಿಳಿಮಲೆ ಅವರು ‘ಅಮರ ಸುಳ್ಯದ ರೈತ ಹೋರಾಟ’ ಎನ್ನುವ ಕೃತಿಯಲ್ಲಿ ದಾಖಲಿಸಿದ್ದಾರೆ. 1980ರಲ್ಲಿ ನರಗುಂದ-ನವಲಗುಂದದಲ್ಲಿ ನಡೆದ ರೈತ ಹೋರಾಟದ ಕಥನವನ್ನು ಬಿ.ಎಸ್.ಸೊಪ್ಪಿನ ಅವರು ‘ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ’ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಬಿ.ಗಂಗಾಧರ ಅವರು ‘ನಾಗಸಂದ್ರ ಭೂ ಆಕ್ರಮಣ ಚಳವಳಿ’ಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. 1950ರ ದಶಕದಲ್ಲಿ ನಡೆದ ಹೆಬ್ಬಳ್ಳಿ ಭೂ ಹೋರಾಟವನ್ನು ಡಾ.ಸತೀಶ ಪಾಟೀಲ ದಾಖಲಿಸಿದ್ದಾರೆ. ನಾನು 1973ರಲ್ಲಿ ನಡೆದ ಸಂಡೂರು ಭೂ ಹೋರಾಟವನ್ನು ದಾಖಲಿಸಿರುವೆ. ಹೀಗೆ ಹಲವು ಅಧ್ಯಯನಗಳು, ದಾಖಲೆಗಳು ಇವೆ.

ಕರ್ನಾಟಕದ ಸಂದರ್ಭದಲ್ಲಿ ರೈತ ಹೋರಾಟಗಳ ಅಧ್ಯಯನ, ಸಂಶೋಧನೆಗಳು ನಡೆದದ್ದು ವಿರಳ. ಅಂತೆಯೇ ಹೋರಾಟ ರೂಪಿಸುವವರಿಗೆ, ಹೋರಾಟದಲ್ಲಿ ಪಾಲ್ಗೊಂಡ ರೈತ ಪರಿವಾರಕ್ಕೆ ಈ ಹೋರಾಟವನ್ನು ದಾಖಲಿಸಬೇಕು ಎನ್ನುವ ದರ್ದು ಕಡಿಮೆ. ಇದೊಂದು ಅಕಾಡಮಿಕ್ ಕೆಲಸ. ಇದನ್ನು ನುರಿತ ತಜ್ಞರು ವ್ಯವಧಾನದಿಂದ ಕೂತು ರೈತರ ನರನಾಡಿಗಳ ಧ್ವನಿಯನ್ನು ಗ್ರಹಿಸಿ ದಾಖಲಿಸಬೇಕು. ಹಾಗಾಗಿ ಭಾರತ ಮತ್ತು ಕರ್ನಾಟಕದಲ್ಲಿ ರೈತ ಹೋರಾಟಗಳು ನಡೆದಷ್ಟು ಅವುಗಳ ಬಗೆಗಿನ ಅಧ್ಯಯನಗಳು ನಡೆದದ್ದು ಕಡಿಮೆಯೇ. ಕರ್ನಾಟಕ ಸರಕಾರದ ವಿಧಾನಮಂಡಲದ ಗ್ರಂಥಾಲಯ ಸಮಿತಿ ಪ್ರಕಟಿಸಿರುವ, ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಜಿ. ನಾಗರಾಜ್ ಅವರು ಬರೆದ ಕರ್ನಾಟಕದ ರೈತ ಹೋರಾಟ ಮತ್ತು ಸತ್ಯಾಗ್ರಹಗಳ ಆರು ಸಂಪುಟಗಳು ಚಾರಿತ್ರಿಕವಾಗಿ ಮಹತ್ವದವುಗಳು. 2006ರಲ್ಲಿ ಒಟ್ಟು 972 ಪುಟಗಳನ್ನೊಳಗೊಂಡ ಮೊದಲ ಮೂರು ಸಂಪುಟಗಳು ಪ್ರಕಟವಾಗಿವೆ. ನಂತರ ನಾಲ್ಕು ವರ್ಷದ ನಂತರ 1,422 ಪುಟದ ಮೂರು ಸಂಪುಟಗಳು ಪ್ರಕಟವಾಗಿವೆ. ಒಟ್ಟು 2,400 ಪುಟಗಳ ಆರು ಸಂಪುಟಗಳಲ್ಲಿ ಕರ್ನಾಟಕದ ರೈತ ಹೋರಾಟ ಮತ್ತು ಸತ್ಯಾಗ್ರಹಗಳು ದಾಖಲಾಗಿವೆ. ಈ ಸಂಪುಟಗಳನ್ನು ಡಾ. ಎಂ.ಜಿ. ನಾಗರಾಜ ಅವರು ಅಪಾರ ಶ್ರಮವಹಿಸಿ ಸಂಪಾದಿಸಿದ್ದಾರೆ.

ರೈತ ಚಳವಳಿಯ ಕಥನ ಶುರುವಾಗಬೇಕಿರುವುದು ಮಹಿಳೆಯೇ ಮೊದಲ ಬೇಸಾಯಗಾರಳು ಎನ್ನುವ ಚಾರಿತ್ರಿಕ ಸತ್ಯದಿಂದ. ಸಿಂಧೂ ನದಿಬಯಲಿನಲ್ಲಿ ಕೃಷಿಯು ಒಂದು ವ್ಯವಸ್ಥಿತ ಸ್ಥಿತಿಗೆ ತಲುಪಿದ ಆಕರಗಳು ಲಭ್ಯವಿವೆ. ಕ್ರಿಸ್ತ ಪೂರ್ವ 5000ದಿಂದ 2000ದ ಕಾಲಘಟ್ಟದಲ್ಲಿ ಹೆಣ್ಣಿನ ಕೃಷಿ ಆವಿಷ್ಕಾರ ಫಲದ ಒಡೆತನ ಗಂಡಿಗೆ ಬದಲಾದದ್ದನ್ನು ಗುರುತಿಸಬಹುದು. ಕ್ರಿ.ಶ.1220ರಲ್ಲಿ ಚಿತ್ರದುರ್ಗ ಜಿಲ್ಲೆಯ ಶಾಸನವೊಂದರ ಉಲ್ಲೇಖದಂತೆ ಹೊಯ್ಸಳ ವೀರನರಸಿಂಹನ ಕಾಲದಲ್ಲಿ ಬದನಹಾಳು, ಮೊಲಹಾಳು, ಕಲ್ಲುಕೆರೆ ಜಮೀನು ಗಡಿಸಂಬಂಧದ ವಿವಾದ, ಅದನ್ನು ಸ್ವತಃ ರಾಜನೇ ಬಗೆಹರಿಸಿದ ಘಟನೆ ಸಿಗುತ್ತದೆ. 12ನೇ ಶತಮಾನದ ವಕ್ಕಲಿಗ ಮುದ್ದಣನ ಪ್ರತಿಭಟನೆಯನ್ನು ಗಮನಿಸಬಹುದು. ಕರ್ನಾಟಕದ ದೃಷ್ಟಿಯಿಂದ ಶಾಸನೋಕ್ತವಾಗಿ ಕ್ರಿ.ಶ. ಎಂಟನೇ ಶತಮಾನದ ಮಾವಳಿ ಶಾಸನದಲ್ಲಿ ಮೊದಲ ರೈತ ಪ್ರತಿಭಟನೆಯ ಸೂಚನೆ ಸಿಗುತ್ತದೆ. ಬೆಳೆದ ಬೆಳೆಗೆ ಹೆಚ್ಚಿನ ಕರವನ್ನು ನಿರಾಕರಿಸಿದ 12ನೇ ಶತಮಾನದ ಮೊದಲ ರೈತ ವಕ್ಕಲಿಗ ಮುದ್ದಣ್ಣ. ಮುದ್ದಣ್ಣನ ವಚನಗಳಲ್ಲಿ ಇದರ ಉಲ್ಲೇಖಗಳು ದೊರೆಯುತ್ತವೆ.

ಭಾರತದ ಸಂದರ್ಭದಲ್ಲಿ ಜಮೀನ್ದಾರರ ನೇತೃತ್ವದಲ್ಲಿ ಆಗ್ರಾ ಮತ್ತು ಹರ್ಯಾಣ ಪ್ರದೇಶದ ಹಿಂದೂ ಜಾಟ ಸಮುದಾಯವು 1669-1707 ಆಡಳಿತದ ದಬ್ಬಾಳಿಕೆ ವಿರುದ್ಧ ಬಂಡಾಯ ಹೂಡಿತು. ಮಥುರಾ ಬಳಿಯ ತಲಪಥ್‌ನ ಜಮೀನುದಾರ ಗೋಕುಲ ಈ ಬಂಡಾಯದ ನೇತೃತ್ವ ವಹಿಸಿ 5,000 ರೈತರೊಡನೆ ವೀರ ಹೋರಾಟ ಮಾಡಿ ಮಡಿದ. ಆನಂತರ ಚುರಾಮನ ನೇತೃತ್ವದಲ್ಲಿ ರೈತರು ಕರ ನಿರಾಕರಣೆ ಮಾಡಿದರು. ಸೈನ್ಯ ಕಟ್ಟಿ ಆಗ್ರಾ ಹಾಗೂ ದಿಲ್ಲಿ ಆಡಳಿತಕ್ಕಿದ್ದ ಎಲ್ಲಾ ಪರಗಣಗಳನ್ನು ಸೂರೆ ಹೊಡೆದರು, ಹೆದ್ದಾರಿಗಳನ್ನು ಅಡ್ಡಗಟ್ಟಿದರು. 1683ರ ತನಕ ಮುಂದುವರಿದ ಜಾಟರ ಈ ಬಂಡಾಯವು ಚಾರಿತ್ರಿಕವಾಗಿ ಮುಖ್ಯವಾದುದು. 1672ರಲ್ಲಿ ಬಂಡಾಯ ಕೃಷಿ ಹಾಗೂ ವಾಣಿಜ್ಯ ವ್ಯವಹಾರ ಗಳಲ್ಲಿ ತೊಡಗಿದ್ದ ಸತ್ನಾಮಿಗಳು ದುಡಿದ ಸಂಪತ್ತಿನಿಂದ ವಂಚಿತರನ್ನಾಗಿಸುತ್ತಿದ್ದ ಆಡಳಿತದ ವಿರುದ್ಧ ಬಂಡಾಯವೆದ್ದರು. ಈ ಚಳವಳಿಗಳಲ್ಲಿ ಸತ್ನಾಮಿಗಳ ಪೈಕಿ ಕೃಷಿಕಾರರು, ಸಣ್ಣ ಅಂಗಡಿ ವ್ಯಾಪಾರಿಗಳು, ಬಡಗಿಗಳು, ಅಕ್ಕಸಾಲಿಗರು, ಜಲಗಾರರು, ಚರ್ಮ ಹದಕಾರರು ಸೇರಿದ್ದರು.

1765ರಿಂದ 1887ರ ನಡುವೆ ಬಂಗಾಲ, ಬಿಹಾರ, ಅಸ್ಸಾಂ, ಮಧ್ಯಭಾರತ ಹಾಗೂ ದಕ್ಷಿಣ ಭಾರತದಲ್ಲಿ ನಡೆದ 16 ರೈತ ಹೋರಾಟಗಳಲ್ಲಿ ಆದಿವಾಸಿ ಮುಖಂಡರು ಹಾಗೂ ದಿವಾಳಿಗೊಂಡ ರೈತರು ಭಾಗವಹಿಸಿದರು. ಬಂಗಾಳದ ಕೆಲವು ಜಿಲ್ಲೆಗಳಲ್ಲಿ 18ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಸನ್ಯಾಸಿ ಫಕೀರರ ದಂಗೆಗಳು (1772) ಪ್ರಮುಖವಾದವು. ಈ ಹೋರಾಟಗಳು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದಿದ್ದವು. ಈ ರೈತ ಹೋರಾಟಗಳು ನಿಧಾನಕ್ಕೆ ಸ್ವಾಂತಂತ್ರ್ಯ ಹೋರಾಟಕ್ಕೂ ಚಾಚಿಕೊಂಡವು. ಬ್ರಿಟಿಷ್ ಸರಕಾರವು ನೀಲಿಯನ್ನು ಮಾತ್ರ ಬೆಳೆಯಬೇಕು ಎಂದಾಗಲೂ ದೊಡ್ಡಮಟ್ಟದಲ್ಲಿ ರೈತ ಹೋರಾಟ ನಡೆದಿದೆ. ಇದು 1860ರ ನೀಲಿ ಬೆಳೆಗಾರರ ಮುಷ್ಕರ ಅಂತಲೇ ಜನಪ್ರಿಯವಾಯಿತು.

1857ರಲ್ಲಿ ಬ್ರಿಟಿಷ್ ವಿಚಾರಣ ಆಯೋಗದ ಎದುರು ‘ನಾವು ನೀಲಿ ಬೆಳೆಯುವುದಿಲ್ಲ’ ಎಂದು ಗಟ್ಟಿಯಾಗಿ ಪಟ್ಟು ಹಿಡಿದು ವಿರೋಧಿಸಿದರು. ಹಾಗಾಗಿ ಬ್ರಿಟಿಷ್ ಸರಕಾರವು ಹಟದಿಂದ ಹಿಂದಕ್ಕೆ ಪಡೆಯಿತು. ಇದು ಭಾರತದ ಯಶಸ್ವಿ ರೈತ ಮುಷ್ಕರ ಎಂದು ಹೆಸರಾಯಿತು. 1835ರಲ್ಲಿ ಕುಣಬಿ ದಂಗೆ ನಡೆಯಿತು. ಸಾವಿರಾರು ರೈತರು ಲೇವಾದೇವಿಗಳ ಮೇಲೆ ಹರಿಹಾಯ್ದರು. ಇದರಿಂದಾಗಿ ಒಂದು ಸಾವಿರ ಜನ ರೈತರನ್ನು ಸೆರೆಹಿಡಿದು ಪುಂಡುಕಂದಾಯ ಕಟ್ಟಿಸಿದರು. ಇದರ ಪರಿಣಾಮ 1879ರಲ್ಲಿ ಕೃಷಿ ಪರಿಹಾರ ಕಾಯ್ದೆ ಜಾರಿಯಾಯಿತು. 1836 ರಿಂದ 1921ರ ತನಕ ನಿರಂತರವಾಗಿ ನಡೆದ ಮಾಪಿಳ್ಳೆ ದಂಗೆಗಳು ರೈತ ಹೋರಾಟಕ್ಕೆ ಕ್ರಾಂತಿಕಾರಿ ಆಯಾಮವನ್ನು ನೀಡಿದವು. 1928ರಲ್ಲಿ ನಡೆದ ಸೂರತ್ ಜಿಲ್ಲೆಯ ಬಾರ್ದೋಲಿಯಲ್ಲಿ ನಡೆದ ಸತ್ಯಾಗ್ರಹ ಕೃಷಿ ಕರನಿರಾಕರಣೆಯ ದೊಡ್ಡ ಚಳವಳಿಯಾಗಿ ರೂಪುಗೊಂಡಿತ್ತು.

1946ರಿಂದ 1951ರ ತನಕ ನಡೆದ ತೆಲಂಗಾಣ ರೈತ ಹೋರಾಟವು ಇಡೀ ಭಾರತದಲ್ಲಿ ಬಹುದೊಡ್ಡ ಹೋರಾಟವಾಗಿ ಪರಿಣಮಿಸಿತು. ನಿಜಾಮ್ ಸಂಸ್ಥಾನದ ಪಾಳೆಗಾರಿಕೆಯ ಭೂಮಾಲಕ ಹಿಡಿತದ ಭೂ ಹಿಡುವಳಿಗಳ ವ್ಯವಸ್ಥೆ ಇತ್ತು. ಇದರ ವಿರುದ್ಧ ರೈತರು ದೊಡ್ಡ ಹೋರಾಟ ಮಾಡಿ ನೂರಾರು ಜನರು ಬಲಿದಾನ ಮಾಡಿದರು. 1967-1970 ರತನಕ ನಡೆದ ನಕ್ಸಲ್ ಬಾರಿ ರೈತ ಹೋರಾಟಗಳು ಆರ್ಥಿಕ ಶೋಷಣೆಯ ವಿರುದ್ಧ, ಭೂ ಒಡೆತನವನ್ನು ಮರಳಿ ಪಡೆಯಲು ನಡೆಸಿದ ಹೋರಾಟಗಳಾಗಿದ್ದವು. 1968-70ರಲ್ಲಿ ನಡೆದ ಶ್ರೀಕಾಕುಳಂ ರೈತ ಹೋರಾಟವು ರೈತರು ಎಲ್ಲೆಡೆ ಜಾಗೃತವಾಗಿರಬೇಕೆಂಬ ವಾದವನ್ನು ಮುಂದಿಟ್ಟಿತು.

ಏಕೀಕರಣೋತ್ತರ ರೈತ ಹೋರಾಟಗಳು ಸ್ವಾತಂತ್ರ್ಯಾನಂತರವೂ ರೈತರ ಸಮಸ್ಯೆ ಬಗೆಹರಿಯದೆ ಮುಂದುವರಿದಿರುವ ದಾಖಲೆಗಳನ್ನು ಒದಗಿಸುತ್ತವೆ. ಕರ್ನಾಟಕದ ರೈತ ಹೋರಾಟಕ್ಕೆ ಒಂದು ಬಗೆಯ ಗಟ್ಟಿಯಾದ ನೆಲೆಯನ್ನು ಒದಗಿಸಿಕೊಟ್ಟ ಮಧುಗಿರಿ ಕಬ್ಬು ಬೆಳೆಗಾರರ ಪ್ರತಿಭಟನೆ, ಕೋಲಾರ ಜಿಲ್ಲೆಯ ಭೂ ಆಕ್ರಮಣ ಚಳವಳಿ (1970-73), ಸಂಡೂರು ರೈತ ಚಳವಳಿ (1973), ವರುಣಾ ನಾಲಾ ಚಳವಳಿ (1977), ನರಗುಂದ-ನವಲಗುಂದ ಘಟಪ್ರಭ ರೈತ ಚಳವಳಿ, ವರಲಕ್ಷ್ಮೀ ಹತ್ತಿ, ನಿಪ್ಪಾಣಿ ಹೊಗೆಸೊಪ್ಪು ಸಂಬಂಧದ ಹಾಗೂ ಗೆಜ್ಜೆಲೆಗೆರೆ ರೈತರ ಸತ್ಯಾಗ್ರಹ ಹಾಗೂ ಗೋಲಿಬಾರ್, ಗ್ಯಾಟ್ ಒಪ್ಪಂದ, ಡೆಂಕೆಲ್ ಪ್ರಸ್ತಾವ, ದಲಿತ ರೈತ ಹೋರಾಟ, ದಕ್ಷಿಣ ಕನ್ನಡ ಜಿಲ್ಲೆಯ ರೈತ ಚಳವಳಿ ಹೀಗೆ ರೈತರ ಭೂ ಹೋರಾಟಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಭೂ ಹೋರಾಟಗಳಲ್ಲಿ ದಲಿತರ ಭೂ ಹೋರಾಟಗಳೂ ದಾಖಲಾಗಬೇಕಿವೆ. ಬಿಜಾಪುರ ಜಿಲ್ಲೆ ಬಾಗಲಕೋಟೆ ಸಮೀಪದ ಮಹಕಂಡಿಕೆರೆ ಜಮೀನು ಸಾಗುವಳಿದಾರ ಹರಿಜನ ರೈತರ ಉಪವಾಸ ಸತ್ಯಾಗ್ರಹ (1979) ತಾತಗುಣಿ ಎಸ್ಟೇಟ್‌ನ ದಲಿತ ಕೂಲಿಗಳ ಹೋರಾಟ, ಗಂಗಾವತಿ, ಬಳ್ಳಾರಿ, ನಾಗನಾಯಕನಕೋಟೆ ದಲಿತರ ಭೂ ಹೋರಾಟಗಳನ್ನು (1981-82) ಗಮನಿಸಬಹುದು.

ಪ್ರಭುತ್ವವು ರೈತ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಮಾಡಿದ ಲಾಟಿ ಚಾರ್ಜ್, ಗೋಲಿಬಾರ್ ಒಳಗೊಂಡ ಹಿಂಸೆಯ ರೂಪಗಳನ್ನು ದಾಖಲಿಸಬೇಕಾಗಿದೆ. ಬಾಗೂರು ನವಿಲೆ ಪ್ರದೇಶದ ರೈತರ ಸಮಸ್ಯೆಗಳು, ಬೆಳೆಯ ಬೆಲೆ ಕುಸಿತದ ವಿರುದ್ಧದ ಹೋರಾಟಗಳು, ರೈತರ ಕಾಲ್ನಡಿಗೆ ಜಾಥಾಗಳು, ವಿಶೇಷವಾಗಿ ರೈತರ ಸರಣಿ ಆತ್ಮಹತ್ಯೆಗಳು, ಆ ಆತ್ಮಹತ್ಯೆಗೆ ಕಾರಣವಾದ ಸರಕಾರದ ನಡೆಗಳು, ಪರಿಹಾರವೆಂಬ ಕಣ್ಣೊರೆಸುವ ನಾಟಕೀಯ ನಡೆಗಳು, ಈ ವಿಷಯದಲ್ಲಿ ಮಾಧ್ಯಮಗಳು ನಡೆದುಕೊಂಡ ಬಗೆ ಇತ್ಯಾದಿಗಳನ್ನು ವಿಶ್ಲೇಷಿಸಬೇಕಿದೆ.

ಕೈಗಾರಿಕೀರಣವೂ ರೈತ ಹೋರಾಟಗಳನ್ನು ಹುಟ್ಟುಹಾಕಿದೆ. ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಬರದೇ ಇರುವುದಕ್ಕೆ ರೈತರು ಸಂಕಟದಿಂದ ಹೋರಾಟಕ್ಕೆ ಇಳಿದಿದ್ದಾರೆ. ಮಳೆ ಇಲ್ಲದೆ ಬರ ಬಿದ್ದ ಕಾರಣಕ್ಕೆ ಕೈ ಬರಿದಾಗಿ ಸರಕಾರದ ಮುಂದೆ ಪರಿಹಾರಕ್ಕಾಗಿ ರೈತರು ಸಿಟ್ಟಿಗೆದ್ದಿದ್ದಾರೆ. ವಿದ್ಯುತ್ ಅಭಾವ ಬೆಳೆಗಳನ್ನು ನಾಶ ಮಾಡಿದ ರೀತಿಗೆ ರೈತರು ಸಿಟ್ಟಾಗಿ ವಿದ್ಯುತ್ ನಿಗಮಗಳ ಎದುರು ಧರಣಿ ಮಾಡಿದ್ದಾರೆ. ಬೆಳೆ ವಿಮೆಯ ಪೊಳ್ಳುತನವನ್ನು ಬಯಲು ಮಾಡಲು ಬೀದಿಗಿಳಿದಿದ್ದಾರೆ. ಹೀಗೆ ಸ್ಥಳೀಯ ಹೋರಾಟಗಳ ಜತೆ ಈ ವಿಶ್ವವ್ಯಾಪಾರ ಸಂಘಟನೆ ರೈತರ ವಿಷಯದಲ್ಲಿ ಹೇಗೆ ಅನ್ಯಾಯ ಮಾಡುತ್ತಿದೆ ಎನ್ನುವುದರ ವಿರುದ್ಧವಾಗಿಯೂ ಹೋರಾಟಗಳು ನಡೆದಿವೆ. ಜಾಗತಿಕ ತಾಪಮಾನ, ಕುಲಾಂತರಿ ಬೆಳೆಗಳು, ಬಿಟಿ ಹತ್ತಿ ಬದನೆಯ ವಿರುದ್ಧದ ಪ್ರತಿಭಟನೆಗಳು, ನೀರಾ ಚಳವಳಿಗಳು ಈ ಎಲ್ಲವೂ ದಾಖಲಾಗಬೇಕಿದೆ.

ನೀರಾವರಿ ಪ್ರಮಾಣ ಹೆಚ್ಚಾದಂತೆಲ್ಲಾ ವಿದ್ಯುತ್ ಅಭಾವವೂ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರೈತರ ಬೀಜ ಸ್ವಾವಲಂಬನೆ ನಿಂತ ಮೇಲೆ ಸಕಾಲಕ್ಕೆ ಸರಕಾರವು ಬಿತ್ತನೆ ಬೀಜಗಳನ್ನು ವಿತರಣೆ ಮಾಡದ ವಿರುದ್ಧವೂ ರೈತ ಪ್ರತಿಭಟನೆಗಳು ನಡೆದಿವೆ. ವಿಶ್ವವಾಣಿಜ್ಯ ಸಂಘಟನೆಯ ಮೇಳದಲ್ಲಿ ಜಾಗತಿನ ನೆಲೆಯ ಹೋರಾಟಗಳಲ್ಲಿ ಕರ್ನಾಟಕದ ರೈತ ನಾಯಕ-ನಾಯಕಿಯರು ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಜಿ-8 ಶೃಂಗಸಭೆ, ವಾಣಿಜ್ಯ ಹಾಗೂ ವ್ಯವಸಾಯೋತ್ಪನ್ನಗಳ ಬೆಲೆ ಕುಸಿತ, ಕಾಡು ಪ್ರಾಣಿಗಳಿಂದಾಗಿ ಬೆಳೆ ಹಾನಿ, ರೈತರ ಹೆದ್ದಾರಿ ರಸ್ತೆ ತಡೆ, ನಾಲಾ ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಸ್ವಾಭಿಮಾನದ ಪಾದಯಾತ್ರೆ, ವಿಧಾನ ಸೌಧಕ್ಕೆ ಮುತ್ತಿಗೆ, ಏಕಾಂಗಿಯಾಗಿ ಆಡಳಿತ ಕಚೆೇರಿಯ ಆವರಣದಲ್ಲಿ ವಿಷಸೇವನೆಯ ಪ್ರತಿರೋಧ ಈ ಎಲ್ಲವನ್ನೂ ದಾಖಲಿಸಬೇಕಿದೆ.

ರೈತರ ಭೂ ಹೋರಾಟ, ಪ್ರತಿಭಟನೆ, ಚಳವಳಿ, ಸತ್ಯಾಗ್ರಹಕ್ಕೆ ಪೂರಕವಾಗಿ ದೊರಕಿದ್ದೇನೆಂದು ಚಾರಿತ್ರಿಕವಾಗಿ ಪರಿಶೀಲಿಸಬೇಕಿದೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾ, ರೈತ ಸಂಪರ್ಕ ಕೇಂದ್ರಗಳ ಹೆಚ್ಚುವರಿ ಸ್ಥಾಪನೆ, ಅವುಗಳ ಕಾರ್ಯವೈಖರಿಯನ್ನು ಚುರುಕುಗೊಳಿಸಿದ್ದು, ಜಲ ಸಂವರ್ಧಿನಿ ಯೋಜನೆಗಳು, ಕೃಷಿ ನೀತಿಗಳ ಪ್ರಕಟಣೆ, ಸರಕಾರ ಸರಕಾರೇತರ ಸಂಸ್ಥೆಗಳಿಂದ ಕೃಷಿಮೇಳಗಳ ಆಯೋಜನೆ, ವಿಚಾರ ಸಂಕಿರಣಗಳ ಆಯೋಜನೆ, ಕೃಷಿ ಋಷಿ ಪರಿಹಾರ ಯೋಜನೆಗಳು, ಸೌರಶಕ್ತಿ ಬಳಕೆಯ ಸೌರ ವಿದ್ಯುತ್ ಯೋಜನೆಗಳು, ಅಮೃತಭೂಮಿ ಅಂತರ್‌ರಾಷ್ಟ್ರೀಯ ಬೀಜ ಯಾತ್ರೆ, ಕುವೆಂಪು ಅವರ ನೇಗಿಲಯೋಗಿ ರೈತ ಗೀತೆಯ ಹಾಡಿಕೆಯ ಅಧಿಕೃತ ಜಾರಿ, ಸಾಮರಸ್ಯ ಗ್ರಾಮಯೋಜನೆ, ಕೈತೋಟ ಬೀಜದ ಹಬ್ಬ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರೈತ ಪರಿವಾರದ ಕೆಲಸಕ್ಕೆ ಅನ್ವಯಿಸಿದ್ದು, ಅರುಣೋದಯ, ರೈತತೀರ್ಪು ಮುಂತಾದ ಯೋಜನೆಗಳ ಮೂಲಕ ರೈತ ಪರಿವಾರವನ್ನು ಸರಕಾರ ಸಂತೈಸಲು ಪ್ರಯತ್ನಿಸಿರುವುದು ಹೋರಾಟದ ಫಲಗಳಾಗಿವೆ.

ಹೀಗೆ ದೇವನಹಳ್ಳಿಯ ರೈತ ಹೋರಾಟದ ಬೆನ್ನಿಗೆ, ರಾಜ್ಯದ, ದೇಶದ ಭೂ ಹೋರಾಟಗಳ ದೊಡ್ಡ ಪರಂಪರೆಯೇ ಇದೆ. ಕರ್ನಾಟಕ ಸರಕಾರ ಈ ರೈತರ ಅಳಲನ್ನು ತಾಯ್ತನದಿಂದ ನೋಡುವಂತಾಗಲಿ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X