ವಿಶ್ವಸಂಸ್ಥೆಯ ಗಮನಸೆಳೆದ ‘ಬೀಬಿ ಫಾತಿಮಾ ಮಹಿಳಾ ಸಂಘ’

‘ನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ’ ಎಂಬ ವಿಷಯ ಆಧರಿಸಿ ನಡೆದ ಈ ವರ್ಷದ ‘ಈಕ್ವೆಟರ್ ಇನಿಷಿಯೇಟಿವ್’ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ, ಅರ್ಜೆಂಟೀನಾ, ಬ್ರೆಝಿಲ್, ಪೆರು, ಇಂಡೋನೇಶ್ಯ, ಕೆನ್ಯಾ, ತಾಂಜಾನಿಯಾ, ಈಕ್ವೆಡಾರ್ ಸೇರಿದಂತೆ 103 ದೇಶಗಳ ಸುಮಾರು 700ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ಜಾಗತಿಕವಾಗಿ ಹತ್ತು ಸಂಸ್ಥೆಗಳು ಆಯ್ಕೆಗೆ ಬಂದವು. ಇದರಲ್ಲಿ ಭಾರತದ, ಅದರಲ್ಲೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘ ಇಂತಹ ಗೌರವಕ್ಕೆ ಪಾತ್ರವಾಯಿತು.
ಚಾರಿತ್ರಿಕ ಮಹಿಳೆಯಾದ ಬೀಬಿ ಫಾತಿಮಾರ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದಲ್ಲಿ ‘ಬೀಬಿ ಫಾತಿಮಾ ಮಹಿಳಾ ಸಂಘ’ ಹುಟ್ಟಿಕೊಂಡಿದೆ. ಬೀಬಿಜಾನ್ ಹಳೆಮನೆ ಅವರು ಸಂಘಟನೆಯ ನಾಯಕತ್ವ ವಹಿಸಿದ್ದಾರೆ. ಹೀಗೆ ಎಲ್ಲಾ ಜಾತಿ, ಧರ್ಮದ ಮಹಿಳೆಯರು ದೋಸ್ತರಿಕೆಯ ಪ್ರಯೋಗಕ್ಕೆ ಇದೀಗ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುಎನ್‌ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ) ನೀಡುವ ಜೀವ ವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೊಬೆಲ್ ಎಂದೇ ಪ್ರಸಿದ್ಧಿ ಪಡೆದಿರುವ ‘ಈಕ್ವೆಟರ್ ಇನಿಷಿಯೇಟಿವ್’ ಪ್ರಶಸ್ತಿ ದೊರೆತಿದೆ. ಹೀಗೆ ಚರಿತ್ರೆಯ ಬೀಬಿ ಫಾತಿಮಾ ಆಧುನಿಕ ಮಹಿಳೆಯರ ಸಂಘಟನೆಯ ಪ್ರೇರಕಶಕ್ತಿಯಾಗಿರುವುದು ‘ಗತ-ವರ್ತಮಾನ’ ಬೆಸೆದಂತಾಗಿದೆ.
ತೀರ್ಥ ಗ್ರಾಮದ ಬಾಷಾಸಾಬ್ ಸವಣೂರು ಮೂಲತಃ ಬಯಲಾಟ ಕಲಾವಿದರು. ತನ್ನ ಐದು ಜನ ಹೆಣ್ಣುಮಕ್ಕಳನ್ನೂ ಓದಿಸಿದ್ದಾರೆ. ನಾಲ್ಕು ಮಕ್ಕಳು ಹತ್ತನೇ ತರಗತಿ ತನಕ ಓದಿದರೆ ಬೀಬಿಜಾನ್ ಪದವಿ ಮುಗಿಸಿದ್ದಾರೆ. ಮುಂದೆ ತೀರ್ಥ ಗ್ರಾಮದಲ್ಲಿಯೇ ಮೌಲಾಸಾಬ್ ಎಂಬವರಿಗೆ ಬೀಬಿಜಾನ್‌ರನ್ನು ಮದುವೆ ಮಾಡಿಕೊಡುತ್ತಾರೆ. ಆರಂಭದಲ್ಲಿ ಕೃಷಿಯಲ್ಲಿ ತೊಡಗಿಕೊಂಡ ಬೇಬಿಜಾನ್ ನಿಧಾನಕ್ಕೆ ಮಹಿಳಾ ಸಂಘಟನೆಗಳತ್ತ ಗಮನಹರಿಸುತ್ತಾರೆ. ಹೀಗೆ 2019ರಲ್ಲಿ ‘ಬೀಬಿ ಫಾತಿಮಾ ಮಹಿಳಾ ಸಂಘ’ವು ಹುಟ್ಟಿತು. ತಾವು ತೊಡಗಿಕೊಂಡ ಕೃಷಿಯನ್ನೇ ಅವಲಂಬಿಸಿ ಅದನ್ನೇ ಉದ್ಯಮವಾಗಿಸಲು ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯು ನೆರವಾಗುತ್ತದೆ. ಹೀಗಾಗಿ ಹಿಂದೆ ಕೃಷಿ ಕಾರ್ಮಿಕರಾಗಿದ್ದ ಅನೇಕ ಮಹಿಳೆಯರು ಈಗ ಕೃಷಿ ಉದ್ಯಮಿಗಳಾಗಿದ್ದಾರೆ. ಸ್ವಸಹಾಯ ಗುಂಪು ನಡೆಸುವ ರಾಗಿ ಸಂಸ್ಕರಣಾ ಘಟಕವು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೈತರಿಗೆ ಜೀವನೋಪಾಯ ಕಲ್ಪಿಸಿದೆ. ಮೊದಲಬಾರಿಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು 2023ರಲ್ಲಿ ಬೀಬಿಜಾನ್ ಅವರ ಈ ಸಾಧನೆ ಗಮನಿಸಿ ‘ಚೇಂಜ್ ಮೇಕರ್’ ಎಂದು ಗುರುತಿಸಿತು. ಅವರ ಬಗೆಗೊಂದು ಕಿರುಚಿತ್ರ ನಿರ್ಮಿಸಿತು. ವಿಶ್ವಸಂಸ್ಥೆಯ ಗಮನಸೆಳೆಯಲು ಈ ಕಿರುಚಿತ್ರ ಸಹಾಯಕವಾಗಿದೆ ಎಂದು ಬೀಬಿಜಾನ್ ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗವನ್ನು ನೆನೆಯುತ್ತಾರೆ.
‘ಸಹಜ ಸಮೃದ್ಧ’ ಮಾರ್ಗದರ್ಶನದಲ್ಲಿ ಹೈದರಾಬಾದ್‌ನ ‘ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ’ (ಐಐಎಂಆರ್) ನೆರವಿನೊಂದಿಗೆ ತೀರ್ಥ ಗ್ರಾಮದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಯಿತು. ಈ ಘಟಕವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷ. ಜತೆಗೆ ಈ ಘಟಕವು ಸಂಪೂರ್ಣವಾಗಿ ಸೌರಶಕ್ತಿ ಆಧಾರಿತವಾಗಿರುವುದು ಮತ್ತೊಂದು ವಿಶೇಷ. ‘ದೇವಧಾನ್ಯ ಬೀಜ ಉತ್ಪಾದಕರ ಸಂಘ’ದಲ್ಲಿ 52 ಸಂಘಗಳು ಇದರ ಜತೆ ಕೆಲಸ ಮಾಡುತ್ತಿವೆ. ಅಳಿವಿನಂಚಿನ ಬೆಳೆಗಳ ಬೀಜಗಳನ್ನು ಸಂಗ್ರಹಿಸಿ ಉಳಿಸುವ ಕೆಲಸ ಮಾಡುತ್ತಿವೆ. ಶಿಗ್ಗಾಂವ ತಾಲೂಕಿನ 10, ಕುಂದಗೋಳ ತಾಲೂಕಿನ 12 ಹಳ್ಳಿಗಳನ್ನು ಒಳಗೊಂಡಂತೆ ಬೀಬಿ ಫಾತಿಮಾ ಸಂಘಟನೆಯು ಸುತ್ತಮುತ್ತಲ 22 ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದೆ. ಐದು ಜಿಲ್ಲೆಗಳಿಗೆ ಈಗ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ.
ಈ ಸ್ವಸಹಾಯ ಗುಂಪು ಆರು ಯಂತ್ರಗಳನ್ನು ಹೊಂದಿರುವ ರಾಗಿ ಸಂಸ್ಕರಣಾ ಘಟಕದ ಪರಿಣಾಮವಾಗಿ ಇದೀಗ ಸಾವಿರಕ್ಕೂ ಹೆಚ್ಚು ರೈತರು ರಾಗಿ ಕೃಷಿಗೆ ಬದಲಾಗಿದ್ದಾರೆ. ಈಗ ತಮ್ಮ ಉತ್ಪನ್ನಗಳನ್ನು ಈ ಸಂಸ್ಕರಣಾ ಘಟಕಕ್ಕೆ ಮಾರಾಟ ಮಾಡುತ್ತಿದ್ದಾರೆ. ‘‘ಇತರ ಉತ್ಪನ್ನಗಳಿಗೆ ಹೋಲಿಸಿದರೆ, ರಾಗಿಗಳಿಗೆ ಹೆಚ್ಚು ಬೇಡಿಕೆ ಇದೆ’’ ಎನ್ನುವುದು ಬೀಬಿಜಾನ್ ಅಭಿಪ್ರಾಯವಾಗಿದೆ. ಈ ಘಟಕವು ಬಹುತೇಕ ಸಂಪೂರ್ಣವಾಗಿ ನವೀಕರಿಸಬಹುದಾದ ಶಕ್ತಿಯಿಂದ ನಡೆಸಲ್ಪಡುತ್ತಿದೆ. ಮೂರು ಸೌರಶಕ್ತಿ ಚಾಲಿತ ಮಿಲ್ಲಿಂಗ್ ಯಂತ್ರಗಳು, ಹಾಗೆಯೇ ಸೌರ ದೀಪಗಳು ಮತ್ತು ಫ್ಯಾನ್‌ಗಳನ್ನು ಸೆಲ್ಕೋ ಕಂಪೆನಿ ಒದಗಿಸಿದೆ. ‘‘ನಾವು (ರೈತರು) ಒಂದು ಕಾಲದಲ್ಲಿ ಜೋಳ, ಹತ್ತಿ ಮತ್ತು ಮೆಣಸಿನಕಾಯಿಯಂತಹ ವಾಣಿಜ್ಯ ಬೆಳೆಗಳಿಗೆ ಸೀಮಿತವಾಗಿದ್ದೆವು, ಈಗ ಸಾವಯವ ಬೆಳೆಗಳನ್ನು ಬೆಳೆಯುತ್ತಿದ್ದೇವೆ’’ ಎಂದು ಸ್ಥಳೀಯ ರೈತ ಈಶ್ವರಗೌಡ ಪಾಟೀಲ್ ಹೇಳುತ್ತಾರೆ.
ಒಂದು ಕಾಲದಲ್ಲಿ ಕೃಷಿಯಲ್ಲಿ ತೊಡಗಿದ್ದ ನೂರಾರು ಮಹಿಳೆಯರು ಅದರಲ್ಲಿ ನಷ್ಟ ಅನುಭವಿಸಿ ಸಿದ್ಧ ಉಡುಪು ಉದ್ಯಮದಲ್ಲಿ ಕೂಲಿಗಳಾಗಿದ್ದರು. ಅಂತಹವರು ಬೀಬಿ ಫಾತಿಮಾ ಸ್ವ-ಸಹಾಯ ಗುಂಪಿನ ಕೆಲಸದ ಮೂಲಕ ಮರಳಿ ಹೊಲಗಳಿಗೆ ಬರಲು ಸಾಧ್ಯವಾಗಿದೆ. ಸ್ವಸಹಾಯ ಸಂಘದ 27 ವರ್ಷದ ಸದಸ್ಯೆ ಆಯಿಷಾ, ‘‘ಬೀಬಿ ಜಾನ್ ಅವರ ಜತೆ ಸೇರಿ ಕೆಲಸ ಮಾಡುವುದರಿಂದ ನಾಲ್ಕು ಜನರ ಕುಟುಂಬವನ್ನು ನಿಭಾಯಿಸುತ್ತಿದ್ದೇನೆ’’ ಎನ್ನುತ್ತಾರೆ. ರಾಗಿ ಕೃಷಿಯ ಜೊತೆಗೆ, ಬೀಬಿ ಜಾನ್ ಅಳಿವಿನ ಅಂಚಿನಲ್ಲಿದ್ದ 120ಕ್ಕೂ ಹೆಚ್ಚು ಪ್ರಭೇದಗಳನ್ನು ಸಂಗ್ರಹಿಸುವ ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮಹಿಳಾ ಸಂಘವು ಸುಸ್ಥಿರ ಕೃಷಿಯ ಮೂಲಕ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರಬೆಳೆ ವಿಧಾನ ಅಳವಡಿಸಿದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ. ಹವಾಮಾನ ಸಹಿಷ್ಣು ಬೇಸಾಯ ಪದ್ಧತಿಗಳ ಪಾಲನೆ, ಪಶು ಸಂಗೋಪನೆ, ತೋಟಗಾರಿಕೆ ಜತೆಗೆ ಪ್ರಮುಖವಾಗಿ ಸಿರಿಧಾನ್ಯಗಳನ್ನು ಹಳ್ಳಿಮಟ್ಟದಲ್ಲಿ ಜನಪ್ರಿಯಗೊಳಿಸುವ ಕೆಲಸಗಳನ್ನು ಕೈಗೊಂಡಿದೆ. ಈ ಎಲ್ಲಾ ಸಾಧನೆಗಳು ಪ್ರಶಸ್ತಿಗೆ ಕಾರಣವಾಗಿವೆ.
ಇಷ್ಟಾಗಿಯೂ ಬೀಬಿ ಫಾತಿಮಾ ಸಂಘಕ್ಕೆ ಇಂತಹ ಉನ್ನತ ಪ್ರಶಸ್ತಿಯ ಹಾದಿ ಸರಳವಾಗಿರಲಿಲ್ಲ. ‘ನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ’ ಎಂಬ ವಿಷಯ ಆಧರಿಸಿ ನಡೆದ ಈ ವರ್ಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ, ಅರ್ಜೆಂಟೀನಾ, ಬ್ರೆಝಿಲ್, ಪೆರು, ಇಂಡೋನೇಶ್ಯ, ಕೆನ್ಯಾ, ತಾಂಜಾನಿಯಾ, ಈಕ್ವೆಡಾರ್ ಸೇರಿದಂತೆ 103 ದೇಶಗಳ ಸುಮಾರು 700ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ಜಾಗತಿಕವಾಗಿ ಹತ್ತು ಸಂಸ್ಥೆಗಳು ಆಯ್ಕೆಗೆ ಬಂದವು. ಇದರಲ್ಲಿ ಭಾರತದ, ಅದರಲ್ಲೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘ ಇಂತಹ ಗೌರವಕ್ಕೆ ಪಾತ್ರವಾಯಿತು.
ಈ ಪ್ರಶಸ್ತಿಗೆ ಮಾನದಂಡವಾಗಿ 2019 ರಿಂದಲೂ ಈ ಸಂಘಟನೆ ಮಾಡಿದ ಕೆಲಸಗಳನ್ನು ಪರಿಶೀಲಿಸಲಾಗಿದೆ. ಸಹಜ ಸಮೃದ್ಧ ಬಳಗದ ಸಹಯೋಗದಲ್ಲಿ ಹಲವು ಪ್ರಯೋಗಗಳನ್ನು ಮಾಡಲಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಕೆ, ಸಮುದಾಯ ಬೀಜ ಬ್ಯಾಂಕ್, ಆಹಾರ- ಪೋಷಕಾಂಶ ಭದ್ರತೆ, ಸಿರಿಧಾನ್ಯ ಬೇಸಾಯ, ಸಂಸ್ಕರಣಾ ಘಟಕ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಬದಲಾವಣೆಗಳನ್ನು ಗಮನಿಸಲಾಗಿದೆ. ಜತೆಗೆ ಸುಮಾರು 30 ಗ್ರಾಮಗಳಲ್ಲಿ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಬೇಸಾಯವನ್ನು ಮರಳಿ ಚಾಲ್ತಿಗೆ ತಂದಿರುವುದು ಸಂಘದ ಮಹತ್ವದ ಬೆಳವಣಿಗೆ ಎಂದು ಗುರುತಿಸಲಾಗಿದೆ.
‘ಸಹಜ ಸಮೃದ್ಧ’ ಸಂಸ್ಥೆಯು ಬೀಬಿ ಫಾತಿಮಾ ಸಂಘಟನೆಯಂತಹ ಹಲವು ಸಂಘಟನೆಗಳ ಮೂಲಕ ವಿವಿಧ ಸಿರಿಧಾನ್ಯಗಳ ನೂರಾರು ತಳಿಗಳನ್ನು ಸಂರಕ್ಷಿಸಿದೆ. ಇಂತಹ ದೇಸಿ ತಳಿಗಳ ಬೀಜಗಳನ್ನು ಆಸಕ್ತ ರೈತರಿಗೆ ಉಚಿತವಾಗಿ ವಿತರಿಸಲು ‘ಸಮುದಾಯ ಬೀಜ ಬ್ಯಾಂಕ್’ ಸ್ಥಾಪಿಸಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರತೀ ವರ್ಷವೂ ‘ಸಹಜ ಸಮೃದ್ಧ’ ಏರ್ಪಡಿಸುವ ‘ಬೀಜ ಮೇಳ’ಗಳಲ್ಲಿ ಕ್ವಿಂಟಾಲ್‌ಗಟ್ಟಲೇ ದೇಸಿ ಬೀಜಗಳನ್ನು ಸಾವಯವ ಕೃಷಿಕರಿಗೆ ಈ ಸಂಘವು ನೀಡುತ್ತಿದೆ. ಇದರ ಜತೆಗೆ, ಸೌರಶಕ್ತಿ ಆಧಾರಿತ ಯಂತ್ರಗಳ ಮೂಲಕ ರೊಟ್ಟಿ, ಶಾವಿಗೆ ತಯಾರಿಕೆ ಮತ್ತು ಇತರ ಮೌಲ್ಯವರ್ಧನೆ ಪದಾರ್ಥಗಳನ್ನು ಉತ್ಪಾದಿಸಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.
‘ಈಕ್ಟೇಟರ್ ಇನಿಷಿಯೇಟಿವ್’ ಪ್ರಶಸ್ತಿಯನ್ನು ಅಕ್ಟೋಬರ್ 9ರಂದು ಬ್ರೆಝಿಲ್‌ನಲ್ಲಿ ಆನ್‌ಲೈನ್ ಮೂಲಕ ಸಾಂಕೇತಿಕವಾಗಿ ಪ್ರದಾನ ಮಾಡಲಾಗುತ್ತದೆ. ದಿಲ್ಲಿಯಲ್ಲಿರುವ ಯುಎನ್‌ಡಿಪಿ ಸಂಸ್ಥೆಯು ದಿಲ್ಲಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡುತ್ತದೆ. ಈ ಪ್ರಶಸ್ತಿ ಕುರಿತಂತೆ ‘ಸಹಜ ಸಮೃದ್ಧ’ ಬಳಗದ ಬೀಬಿ ಫಾತಿಮಾ ಸಂಘವು ಮಾಡಿದ ಸಾಧನೆಯನ್ನು ಗುರುತಿಸಿ ಯುಎನ್‌ಡಿಪಿ ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಭಾರತದಲ್ಲಿ ಇಷ್ಟೊಂದು ಮೊತ್ತದ ಪ್ರಶಸ್ತಿ ಪಡೆದ ಮಹಿಳಾ ಸಂಘ ಬೇರೆಲ್ಲೂ ಇಲ್ಲ ಎಂಬುದು ಖುಷಿ ತಂದಿದೆ ಎಂದು ಸಹಜ ಸಮೃದ್ಧದ ಮುಖ್ಯಸ್ಥ ಜಿ. ಕೃಷ್ಣಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘‘ಗ್ರಾಮೀಣ ಭಾಗದಲ್ಲಿರುವ ಸಣ್ಣ ಮಹಿಳಾ ಸಂಘದ ಕಾರ್ಯ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆ ಕೈಗೊಳ್ಳಲು ಈ ಪ್ರಶಸ್ತಿಯು ಉತ್ತೇಜನ ನೀಡಿದೆ. ಇದಕ್ಕೆಲ್ಲ ರೈತರ, ಸಹಜ ಸಮೃದ್ಧ ಬಳಗದ ಸಹಕಾರ ಕಾರಣ’’ ಎನ್ನುತ್ತಾರೆ ಬೀಬಿ ಫಾತಿಮಾ ಮಹಿಳಾ ಸಂಘದ ಅಧ್ಯಕ್ಷೆ ಬೀಬಿಜಾನ್ ಹಳೆಮನೆ.
ಪ್ರಶಸ್ತಿ ಮೊತ್ತವಾಗಿ ಬಂದ ಹಣದಲ್ಲಿ ಕೋಆಪರೇಟಿವ್ ಸೊಸೈಟಿಯನ್ನು ಕಟ್ಟುವ ಕನಸು ಕಾಣುತ್ತಿದ್ದಾರೆ. ತಮ್ಮ ಬೀಜಬ್ಯಾಂಕಿನ ವ್ಯಾಪಾರವನ್ನು ಹೆಚ್ಚುಗೊಳಿಸುವ ಉದ್ದೇಶವಿದೆ. ಬೀಬಿಜಾನ್ ಮಗ ಎಲ್‌ಎಲ್‌ಬಿ ಓದುತ್ತಿದ್ದು ಮಗಳು ಪ್ಯಾರಾಮೆಡಿಕಲ್ ಓದುವ ಸಿದ್ಧತೆಯಲ್ಲಿದ್ದಾರೆ. ಗಂಡ ಮೌಲಾಸಾಬ್ ಹಳೆಮನೆ ಅವರು ಪುಟ್ಟದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ತೀರ್ಥ ಗ್ರಾಮದಲ್ಲಿ ಐವತ್ತು ಮನೆಯಷ್ಟು ಮುಸ್ಲಿಮರಿದ್ದಾರೆ. ಉಳಿದಂತೆ ಹಿಂದೂ ಜಾತಿಗಳಿವೆ. ಮುಹರ‌್ರಂನಲ್ಲಿ ಎಲ್ಲಾ ಹಿಂದೂಗಳೂ ಸಂಭ್ರಮಿಸುತ್ತಾರೆ, ಅಂತೆಯೇ ಹಿಂದೂಗಳ ಎಲ್ಲಾ ಹಬ್ಬಗಳಲ್ಲೂ ಮುಸ್ಲಿಮರೂ ಸಂಭ್ರಮಿಸುತ್ತಾರೆ. ಬೀಬಿ ಫಾತಿಮಾ ಸಂಘಟನೆಯ ಯಶಸ್ಸಿನ ಹಿಂದೆ ಇಂತಹ ಧಾರ್ಮಿಕ ಸಾಮರಸ್ಯದ ಕೊಡುಗೆಯೂ ಇದೆ.