Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಹೋರಾಟದ ಸಾಗರದಿ ಸಾವಿರದ ಹಾಡುಗಳು

ಹೋರಾಟದ ಸಾಗರದಿ ಸಾವಿರದ ಹಾಡುಗಳು

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ12 Aug 2025 11:54 AM IST
share
ಹೋರಾಟದ ಸಾಗರದಿ ಸಾವಿರದ ಹಾಡುಗಳು

ಈ ಹಾಡುಗಳಲ್ಲಿ ಸಮಾಜವನ್ನು ‘ಎಚ್ಚರಿಸುವ’ ದನಿ ಗಟ್ಟಿಯಾಗಿದೆ. ನಡೆಯುತ್ತಿರುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ತಿಳಿಸಿ ಇದರ ವಿರುದ್ಧ ಜನರನ್ನು ಎಚ್ಚರಿಸುವುದು, ದೌರ್ಜನ್ಯ ಎಸಗುವವರಿಗೆ ಮುನ್ನೆಚ್ಚರಿಕೆ ಕೊಡುವುದು, ಹೀಗೆ ರಾಜಕಾರಣಿಗಳು, ಅಧಿಕಾರಿಗಳನ್ನು ಒಳಗೊಂಡಂತೆ ಶೋಷಿಸುವ ಎಲ್ಲರನ್ನೂ ಈ ಹಾಡುಗಳು ಎಚ್ಚರಿಸುತ್ತವೆ. ಬಹಳ ಮುಖ್ಯವಾಗಿ ಈ ಹಾಡುಗಳು ಪ್ರಜಾಪ್ರಭುತ್ವದ ಒಳಗಿನ ದುರ್ಬಲ ಸಂಗತಿಗಳನ್ನು ಸಾರ್ವಜನಿಕಗೊಳಿಸುತ್ತವೆ. ಅಸಾಂವಿಧಾನಿಕ ನಡೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತವೆ.

ಕರ್ನಾಟಕದ ದಲಿತ ಹೋರಾಟಕ್ಕೆ 50 ವರ್ಷ ತುಂಬಿದೆ. ಈ ಹೊತ್ತಿನಲ್ಲಿ ಕನ್ನಡ ವಿಶ್ವವಿದ್ಯಾಉಇಲಯದ ಪ್ರಾಧ್ಯಾಪಕ ಡಾ. ಬಿ.ಎಂ. ಪುಟ್ಟಯ್ಯ ಅವರು ಹೋರಾಟದ ಹಾಡುಗಳ ಪ್ರಾತಿನಿಧಿಕ ಸಮಗ್ರ ಸಂಕಲನ ‘ಬೆಂಕಿಯ ಮಳೆ’ ಕೃತಿಯನ್ನು ಸಂಪಾದಿಸಿರುವುದು ಚಾರಿತ್ರಿಕ ಸಂಗತಿ. ಹಾಡುಗಳನ್ನು ಕಟ್ಟಿದ ಕವಿಗಳು ಬಿಡಿಬಿಡಿಯಾಗಿ ಸಂಕಲನಗಳನ್ನು ಪ್ರಕಟಿಸಿದ್ದರೂ, 305 ಹಾಡುಗಳ ಈ ಪ್ರಾತಿನಿಧಿಕ ಸಂಕಲನವು ಕರ್ನಾಟಕದ ಸಂದರ್ಭದಲ್ಲಿ ಹಲವು ಸಂಗತಿಗಳನ್ನು ಮುನ್ನೆಲೆಗೆ ತರುತ್ತಿದೆ. ಹಲವು ಪ್ರಶ್ನೆಗಳನ್ನು ಎತ್ತುತ್ತಿದೆ. ಕನ್ನಡದ ಸಾಂಸ್ಕೃತಿಕ ವಲಯವು ಈ ಕೃತಿಯನ್ನು ಹಲವು ಮಗ್ಗುಲುಗಳಿಂದ ಚರ್ಚಿಸಿ ಸಂವಾದಿಸುವ ಒತ್ತಡವನ್ನು ಸೃಷ್ಟಿಸಿದೆ.

ಈ ಸಂಕಲನದಲ್ಲಿ ದಾನಪ್ಪ ನಿಲೋಗಲ್, ಆರ್. ಮಾನಸಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಕೆ.ಬಿ. ಸಿದ್ದಯ್ಯ, ಸಿದ್ದಲಿಂಗಯ್ಯ, ಬಿ.ಎಂ. ಪುಟ್ಟಯ್ಯ, ಅಂಬಣ್ಣ ಅರೋಲಿಕರ್, ಜಂಬಣ್ಣ ಅಮರಚಿಂತ, ಚೆನ್ನಣ್ಣ ವಾಲೀಕಾರ, ಎಲ್. ಹನುಮಂತಯ್ಯ, ಇಂದೂಧರ ಹೊನ್ನಾಪುರ, ಸಿದ್ದನಗೌಡ ಪಾಟೀಲ್, ಪ್ರಶಾಂತ್ ದಾನಪ್ಪ ಮಸ್ಕಿ, ಮದ್ದಯ್ಯನಹುಂಡಿ ನಾಗರಾಜು, ಮೂಡಿಗೆರೆಯ ತ್ರಿಪುರ ಮಂಜುನಾಥ, ಜ.ಹೊ. ನಾರಾಯಣಸ್ವಾಮಿ, ಕರ್ನಲ್ ನಾರಾಯಣಸ್ವಾಮಿ, ವೆಂಕಟಾಪು ಸತ್ಯಂ, ಹನಸೋಗೆ ಸೋಮಶೇಖರ್, ಬುದ್ಧಘೋಷ ದೇವೇಂದ್ರ ಹೆಗ್ಗಡೆ, ಹುರುಗಲವಾಡಿ ರಾಮಯ್ಯ, ಕೆ.ವೈ. ನಾರಾಯಣಸ್ವಾಮಿ, ಸತೀಶ್ ಕುಲಕರ್ಣಿ, ತೆಲುಗಿನ ಗದ್ದರ್, ಗೋರಂಟಿ ವೆಂಕನ್ನ, ನ.ಮುನಿಸ್ವಾಮಿ ಅವರುಗಳ ಪದಗಳಿವೆ. ಮಲ್ಲಿಕಾ ಘಂಟಿ ಅವರ ಒಂದು ಹಾಡು ಬಿಟ್ಟರೆ ಮಹಿಳೆಯರ ರಚನೆಗಳಿಲ್ಲ. ‘ಚಳವಳಿಯ ಹಾಡುಗಳು’ ಎಂತಲೇ ಸಂಕಲನ ಪ್ರಕಟಿಸಿದ ಬರಗೂರು ರಾಮಚಂದ್ರ ಅವರನ್ನು ಒಳಗೊಂಡಂತೆ ಬಹಳ ಮುಖ್ಯವಾದವರೂ ಈ ಸಂಕಲನದಿಂದ ಹೊರಗೆ ಉಳಿದಿದ್ದಾರೆ.

ಬಿ.ಎಂ. ಪುಟ್ಟಯ್ಯ ಅವರು ಸ್ವತಃ ಹೋರಾಟಗಳಲ್ಲಿ ಭಾಗಿಯಾದ ಹಾಡುಗಾರರು, ಪದಕಟ್ಟಿದ ಕವಿಗಳೂ, ವಿಶ್ವವಿದ್ಯಾನಿಲಯದ ಅಧ್ಯಾಪಕರೂ ಆದ ಕಾರಣ ಈ ಸಂಕಲನಕ್ಕೆ ಸಂಶೋಧನಾ ಶಿಸ್ತಿನ ಅಕಾಡಮಿಕ್ ಆಯಾಮಗಳೂ ದೊರೆತಿವೆ. ಹೋರಾಟದ ಹಾಡುಗಳ ಬಗ್ಗೆ ಹುಟ್ಟಬಹುದಾಗಿದ್ದ ಹಲವು ಪ್ರಶ್ನೆಗಳನ್ನು ಸಂಪಾದಕರೇ ಕೇಳಿಕೊಂಡು ಉತ್ತರಿಸುತ್ತಾ ಹೋಗಿದ್ದಾರೆ. ಈ ಹಾಡುಗಳಿಗೆ ಬರೆದ ಪ್ರಸ್ತಾವನೆಯು ಹೋರಾಟದ ಹಾಡುಗಳ ಮೀಮಾಂಸೆಯ ಬಹುತ್ವವನ್ನು ಕಟ್ಟಿಕೊಟ್ಟಿದೆ. ಈ ಮೀಮಾಂಸೆಯ ಕಣ್ಣೋಟದಿಂದ ಒಟ್ಟಾರೆ ಕನ್ನಡ ಕಾವ್ಯ ಮೀಮಾಂಸೆಯನ್ನು ಹೊಸದಾಗಿ ಪರಿಶೀಲಿಸುವ ಅಗತ್ಯವಿದೆ.

ಈ ಹಾಡುಗಳು ಶಾಸ್ತ್ರೀಯ ಎನ್ನಬಹುದಾದ ಸಂಗೀತದ ಮೂಲಭೂತ ರಚನೆಯನ್ನೆ ಪ್ರಶ್ನಿಸುತ್ತಿವೆ. ‘ಏಳು ಸ್ವರ ಸಾಲದು ನೊಂದ ಜನರ ಗೋಳದು/ಕೋಟಿ ಜನರ ಕೂಗಲಿ ಹುಟ್ಟಿಬರುವ ಗದ್ದರು/ವೀಣೆಗೀಣೆ ಇಲ್ಲಯ್ಯ ಸಂಗೀತಶಾಸ್ತ್ರ ಅಲ್ಲಯ್ಯ/ ನೀ ಹಾಡಲು ನಿಂತರೆ ತಮಟೆ ಏಕೆ ಬೇಕಯ್ಯ’ ಎನ್ನುವ ಪ್ರಶಾಂತ್ ದಾನಪ್ಪ ಮಸ್ಕಿ ಗದ್ದರ್ ಬಗ್ಗೆ ಬರೆದ ಪದದಲ್ಲಿ ಶಾಸ್ತ್ರೀಯ ಸಂಗೀತವನ್ನು ಎದುರುಗೊಂಡಿದ್ದಾರೆ. ಇದು ದಲಿತ ಹಾಡುಗಳ ಕಾವ್ಯಮೀಮಾಂಸೆ ಎತ್ತುತ್ತಿರುವ ಪ್ರಶ್ನೆಯೂ ಆಗಿದೆ. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಸಾವಿತ್ರಿಬಾಯಿ, ಮಾರ್ಕ್ಸ್, ಲೆನಿನ್ ಮೊದಲಾದ ಸಮತೆಯ ಕನಸಿನ ಹೋರಾಟಗಾರರು ಸಾಮಾನ್ಯ ಜನರ ಮನಸ್ಸಲ್ಲಿ ನೆಲೆಗೊಂಡದ್ದು ಈ ಹೋರಾಟದ ಹಾಡುಗಳ ಮೂಲಕವೇ ಹೊರತು ಯಾವುದೇ ಸಂಶೋಧನೆ, ವೈಚಾರಿಕ ಬರಹಗಳಿಂದಲ್ಲ. ಕಾರಣ ಹೋರಾಟದ ಹಾಡುಗಳು ಮೌಖಿಕ ಪರಂಪರೆಯ ಮೂಲಕ ಎಲ್ಲಾ ತರತಮಗಳನ್ನು ದಾಟಿ ಜನರನ್ನು ತಲುಪಿವೆ. ಸಾವಿರಾರು ಬಾರಿ ಮತ್ತೆ ಮತ್ತೆ ಹಾಡಿದ ಈ ಹಾಡುಗಳಿಗೆ ಸಾವಿಲ್ಲ. ಹಾಗಾಗಿ ಇವು ಹೋರಾಟದ ಸಾಗರದಿ ಸಾವಿರದ ಹಾಡುಗಳು.

ಸಂಪಾದಕರು ಈ ಹಾಡಿನ ಕಟ್ಟಿಗೆ ಸಮಗ್ರ ಹೋರಾಟದ ಹಾಡುಗಳು ಎಂದಿದ್ದಾರೆ. ಇದು ಹೋರಾಟದ ಹಾಡುಗಳನ್ನು ಸೀಮಿತಗೊಳಿಸಿದಂತಾಗಿದೆ. ಕಾರಣ ಹೋರಾಟದ ಹಾಡುಗಳು ಆಯಾ ಹೋರಾಟದ ವಿಷಯಗಳಿಗೆ ಸಂಬಂಧಿಸಿದಂತೆ ತಕ್ಷಣಕ್ಕೆ ಕಟ್ಟಿದ ಹಾಡುಗಳಿರುತ್ತವೆ. ಅಂತಹ ಅಸಂಖ್ಯಾತ ಹಾಡುಗಳು ಬರಹ ರೂಪದಲ್ಲಿ ದಾಖಲಾಗಿಲ್ಲ. ಪ್ರಭಾವಿ ಅಲ್ಲದ ಚಳವಳಿಯ ಕಾರ್ಯಕರ್ತರ ಹಾಡುಗಳನ್ನು ಮತ್ತೆ ಮತ್ತೆ ಹಾಡದೆ ಒಂದೆರಡು ಬಾರಿ ಹಾಡಿ ಮರೆತಿರುತ್ತಾರೆ. ಹೀಗೆ ಅಸಂಖ್ಯ ಹೋರಾಟದ ಹಾಡುಗಳು ಎಲ್ಲೂ ದಾಖಲಾಗದಿರುವ ಸಾಧ್ಯತೆ ಇದೆ. ಹೀಗಿರುವಾಗ ಸಮಗ್ರ ಹೋರಾಟದ ಹಾಡುಗಳು ಎನ್ನುವುದಕ್ಕಿಂತ ಪ್ರಾತಿನಿಧಿಕ ಆಯ್ದ ಹೋರಾಟದ ಹಾಡುಗಳು ಎಂದಿದ್ದರೆ ಸಂಕಲನಕ್ಕೆ ಸರಿ ಹೊಂದುತ್ತಿತ್ತು.

ಸಮಗ್ರ ಹೋರಾಟದ ಹಾಡುಗಳು ಎನ್ನುವಲ್ಲಿ ದಲಿತ ಹೋರಾಟ ಮಾತ್ರವಲ್ಲ ಎಲ್ಲಾ ಹೋರಾಟಗಳ ಹಾಡುಗಳು ಎನ್ನುವ ನೆಲೆಯಲ್ಲಿ ಸರಿಯಾಗಿದೆ. ಕಾರಣ ದಲಿತ ಹೋರಾಟದ ತಾಯ್ತನವೆಂದರೆ ಎಲ್ಲಾ ಹೋರಾಟಗಳನ್ನು ಪೊರೆಯುವ ಗುಣ. ಇಲ್ಲಿನ ಹಾಡುಗಳಲ್ಲಿ ಎಲ್ಲಾ ತರಹದ ಹೋರಾಟಗಳ ಸಮ್ಮಿಲನವಿದೆ. ದಲಿತ ಹೋರಾಟದ ಜತೆಜತೆಗೆ ರೈತ ಹೋರಾಟ, ಬಂಡಾಯ ಸಂಘಟನೆಯ ಹೋರಾಟಗಳು, ಎಡಪಂಥೀಯ ಹೋರಾಟ, ಮಹಿಳಾ ಹೋರಾಟ, ಪರಿಸರ ಹೋರಾಟ, ಕಾರ್ಪೊರೇಟ್ ಶಕ್ತಿಗಳ ವಿರುದ್ಧದ ಹೋರಾಟ, ಕಾರ್ಮಿಕ ಹೋರಾಟ, ಕೋಮು ಸೌಹಾರ್ದಕ್ಕಾಗಿನ ಹೋರಾಟ ಹೀಗೆ ಎಲ್ಲ ಬಗೆಯ ಅಸಮಾನತೆ, ಅನ್ಯಾಯ, ದೌರ್ಜನ್ಯಗಳನ್ನು ಎದುರುಗೊಂಡಿವೆ. ಹೊರಗಡೆ ಹೋರಾಟಗಳು ಬೇರೆ ಬೇರೆ ಕವಲುಗಳಾಗಿ ಪಯಣಿಸಿದರೆ ಈ ಹಾಡುಗಳು ಎಲ್ಲರನ್ನೂ ಒಟ್ಟಾಗಿ ಬೆಸೆಯುವಂತಿವೆ.

ಈ ಹಾಡುಗಳು ಕನ್ನಡದ್ದೇ ಸ್ತ್ರೀವಾದ ಕಟ್ಟಲು ಸಶಕ್ತ ಆಕರವಾಗಿದೆ. ಇಲ್ಲಿನ ಅರ್ಧಕ್ಕಿಂತ ಹೆಚ್ಚಿನ ಹಾಡುಗಳು ಹೆಣ್ಣಿನ ಶೋಷಣೆಗೆ ದನಿಯಾಗಿವೆ. ಹೆಣ್ಣಿನ ಮೇಲಿನ ದಮನದ ಹಲವು ನೆಲೆಗಳನ್ನು ಪದರ ಪದರವಾಗಿ ಈ ಹಾಡುಗಳು ಬಿಚ್ಚಿಟ್ಟಿವೆ. ಆದರೆ ಈ ಯಾವ ಹಾಡುಗಳು ಕನ್ನಡದ ಸ್ತ್ರೀವಾದಿ ಚಿಂತನೆಗೆ ಆಕರವಾಗಿಲ್ಲದಿರುವುದು ದುರಂತ. ಇಲ್ಲಿನ ಹಾಡುಗಳನ್ನು ಕಟ್ಟಿದವರೆಲ್ಲಾ ದಮನಿತ ಸಮುದಾಯಗಳ ಪುರುಷರು. ಇದನ್ನು ಗಮನಿಸಿದರೆ ಇಡೀ ದಲಿತ ಹೋರಾಟ ಪಿತೃಪ್ರಧಾನ ವ್ಯವಸ್ಥೆಯ ಪುರುಷ ಯಜಮಾನಿಕೆ ವಿರುದ್ಧ ದಮನಿತ ಪುರುಷರೇ ಬಹಳ ದೊಡ್ಡದಾಗಿ ದನಿ ಎತ್ತಿರುವುದಕ್ಕೆ ಇಲ್ಲಿನ ಹಾಡುಗಳು ಸಾಕ್ಷಿ ಹೇಳುತ್ತಿವೆ. ಇದೊಂದು ಬಹಳ ವಿಶಿಷ್ಟವಾದ ಸಂಗತಿ. ಆಫ್ರೋ ಅಮೆರಿಕನ್ ಸ್ತ್ರೀವಾದಿ ಚಿಂತಕಿ ಬೆಲ್ ಹುಕ್ಸ್ ಹೇಳುವಂತೆ ಪಿತೃಪ್ರಧಾನ ವ್ಯವಸ್ಥೆಯ ಅಪಾಯಗಳ ವಿರುದ್ಧ ಗಂಡು ಹೆಣ್ಣು ಸೇರಿಯೇ ಹೋರಾಡಬೇಕು ಎನ್ನುವ ತಿಳಿವು ಕರ್ನಾಟಕದ ದಲಿತ ಹೋರಾಟದಲ್ಲಿ ಬಹಳ ಹಿಂದಿನಿಂದಲೂ ಜಾರಿಯಲ್ಲಿರುವುದು ಅಚ್ಚರಿಯಾಗುತ್ತದೆ. ‘ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯವ್ವ ನನ ತಂಗಿ ಅನಸೂಯ’ (ರ: ಕೋಟಿಗಾನಹಳ್ಳಿ ರಾಮಯ್ಯ) ತರಹದ ಹಾಡುಗಳಲ್ಲಿ ಅನುಸೂಯಳ ಬದಲಿಗೆ ಸೌಜನ್ಯಾಳನ್ನು ಸೇರಿಸಿದರೆ ಈಗ ನಡೆಯುತ್ತಿರುವ ಧರ್ಮಸ್ಥಳ ವಿರುದ್ಧದ ಹೋರಾಟದ ಹಾಡಾಗಿಯೂ ಬದಲಾಗುತ್ತದೆ. ಅಷ್ಟರಮಟ್ಟಿಗೆ ಈ ಹಾಡುಗಳು ಸಮಕಾಲೀನವಾಗಿವೆ.

ದಲಿತ ಹೋರಾಟದ ಚರಿತ್ರೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇದೆ. ಆದರೂ ದಲಿತ ಚಳವಳಿಯಲ್ಲಿ ಪಾಲ್ಗೊಂಡ ಮಹಿಳೆಯರ ಕಥನಗಳು ಈ ಸಂಕಲನದಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯ ಧರಗುಣಿ ಗ್ರಾಮದ ಹೋರಾಟಗಾರ್ತಿ ಲಲಿತ ಅವರ ಬಗ್ಗೆ ‘ಅಕ್ಕ ಲಲಿತಕ್ಕ’ (ರ:ಬಿ.ಎಂ.ಪುಟ್ಟಯ್ಯ) ತರಹದ ಹಲವು ಪದಗಳಿವೆ. ದೊಡ್ಡ ದೊಡ್ಡ ನಾಯಕರನ್ನು ಹಾಡುಗಳಲ್ಲಿ ಬರಮಾಡಿಕೊಂಡು ಅವರಿಗೆ ಇರುವ ಸಮಾಜವನ್ನು ಪರಿಚಯಿಸುವ ಮಾದರಿಯೊಂದು ಇಲ್ಲಿದೆ. ಬಿ.ಎಂ. ಪುಟ್ಟಯ್ಯ ಅವರ ರಚನೆಯ ‘ಅಣ್ಣ ಬಂದಾನೋ ಬಸವಣ್ಣ ಬಂದಾನೋ’ ಇಂತಹದ್ದೊಂದು ಮಾದರಿ ರಚನೆಯಾಗಿದೆ.

ಇಲ್ಲಿನ ಹಾಡುಗಳಲ್ಲಿ ದಮನಕ್ಕೆ ಒಳಗಾದ ಸಮುದಾಯಗಳನ್ನು ನಿಸರ್ಗದ ಜತೆ ಸಮೀಕರಿಸಿಕೊಳ್ಳಲಾಗಿದೆ. ಹಾಗಾಗಿ ನಿಸರ್ಗದ ಮೇಲಿನ ದಾಳಿಯನ್ನು ವಿರೋಧಿಸುವ ಹಾಡುಗಳಿವೆ. ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಎಚ್ಚರಿಸುವ ನೆಲೆ ಇದೆ, ಕೈಗಾ ಅಣುಸ್ಥಾವರವನ್ನು ಒಳಗೊಂಡಂತೆ ರಾಯಚೂರಿನ ಅಣುವಿದ್ಯುತ್ ಘಟಕಗಳನ್ನು ವಿರೋಧಿಸಿದ್ದಿದೆ. ಮಲದ ಗುಂಡಿಯಲ್ಲಿ ಜೀವ ತೆತ್ತವರಿಗೆ ಮರುಗುವುದರಿಂದ ಮೊದಲುಗೊಂಡು ಭ್ರೂಣಹತ್ಯೆಗಳಿಂದ ಹೆಣ್ಣು ಸಂಕುಲ ಎದುರಿಸುತ್ತಿರುವ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕೆಲವು ಸಾಮಾಜಿಕ ನಂಬಿಕೆಗಳನ್ನು ಈ ಹಾಡುಗಳು ಮುರಿಯುತ್ತವೆ. ಸನಾತನ ಮೌಲ್ಯಗಳ ಜಾಗದಲ್ಲಿ ಎಚ್ಚೆತ್ತ ಪ್ರಜ್ಞೆಯ ಹೊಸ ಮೌಲ್ಯಗಳನ್ನು ಈ ಪದಗಳು ಛಾಪಿಸುತ್ತಿವೆ.

ಆಗಸ್ಟ್ 15 ಸಮೀಪಿಸುತ್ತಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಬಂದ ತಿಂಗಳು. ದೊಡ್ಡ ದೊಡ್ಡ ಭಾಷಣಗಳು ರಂಗೇರುತ್ತವೆ. ಈ ಸಂಕಲನದಲ್ಲಿ ಭಾರತದ ಸ್ವಾತಂತ್ರ್ಯದ ನಿಜದ ನೆಲೆಯನ್ನು ಕಾಣಿಸುವ ಹಲವು ಪದಗಳಿವೆ. ಈ ಪದಗಳು ಆಂತರ್ಯದಲ್ಲಿ ಸಿದ್ದಲಿಂಗಯ್ಯ ಎತ್ತಿದ ‘ಯಾರಿಗೆ ಬಂತು? ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎನ್ನುವ ಪ್ರಶ್ನೆಯನ್ನು ಹಲವು ನೆಲೆಗಳಲ್ಲಿ ಎತ್ತಿವೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎತ್ತಿದ ಸಮಾನತೆಯ ಪ್ರಶ್ನೆಯನ್ನು ಈ ಹಾಡುಗಳು ಮುಂದುವರಿಸಿವೆ. ಹಾಗಾಗಿ ಈ ಹಾಡುಗಳು ಮಂಡಿಸುವ ಸ್ಯಾತಂತ್ರ್ಯದ ಮೀಮಾಂಸೆಯು ಈ ನೆಲದ ಶೋಷಣೆ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ದಮನಿತರ ನೋವಿನಿಂದ ಬಂದದ್ದು. ಇಲ್ಲಿನ ಕೆಲವಾದರೂ ಹಾಡುಗಳು ಶಾಲಾ-ಕಾಲೇಜುಗಳ ಪಠ್ಯಗಳಾಗಬೇಕು.

ಇಲ್ಲಿನ ಹಾಡುಗಳಲ್ಲಿ ಧಾರ್ಮಿಕ ಕೊಡುಕೊಳೆಯೂ ಬೆರೆತಿದೆ. ಧಾರ್ಮಿಕ ಅಲ್ಪಸಂಖ್ಯಾತರ ನೋವೂ ದಲಿತ ಹೋರಾಟದಲ್ಲಿ ಮಿಳಿತಗೊಂಡಿದೆ. ಆಯನೂರಿದ ಹಾಜಿಮಾಳ ಹತ್ಯೆಯ ಬಗೆಗಿನ ಪದ, ಟಿಪ್ಪುವಿನ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳುವ ಪದಗಳು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹೋರಾಟಗಾರ ಡೇವಿಡಣ್ಣನ ಬಗೆಗಿನ ಹಾಡು (ದಾನಪ್ಪ ನಿಲೋಗಲ್) ಹೀಗೆ ಇಲ್ಲಿನ ಹಾಡುಗಳು ಪ್ರಜಾಪ್ರಭುತ್ವದ ಆಳುವ ರಾಜಕೀಯ ಪಕ್ಷಗಳ ವಿರೋಧ ಪಕ್ಷಗಳಂತೆ ಕೆಲಸ ಮಾಡಿವೆ. ಈ ಹಾಡುಗಳು ಹುಟ್ಟಿದ ಸಂದರ್ಭದಲ್ಲಿದ್ದ ಪ್ರತೀ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಪ್ರಗತಿರಂಗದ ಲಂಕೇಶರನ್ನು ಹಾಡುಗಳಲ್ಲಿ ಜಾಡಿಸಿದ್ದಾರೆ. ಇಂದಿರಾಗಾಂಧಿಯನ್ನು ‘ಇಸ ನಾಗರ ದೇವಿ ಇಂದ್ರವ್ವೋ’ ಎಂದಿವೆ. ಅಹಿಂದದ ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ ಎಲ್ಲಾ ರಾಜಕಾರಣಿಗಳನ್ನೂ, ಅಧಿಕಾರಶಾಹಿಗಳನ್ನೂ ಪ್ರಶ್ನಿಸಿವೆ.

ಕನ್ನಡ ಏಕೀಕರಣ ಸಂದರ್ಭದಲ್ಲಿ ಕನ್ನಡ ನಾಡನ್ನು ಕನ್ನಡಾಂಬೆೆಯನ್ನು ಕನ್ನಡದ ಕವಿಗಳು ಮೈದುಂಬಿ ವರ್ಣಿಸಿದ್ದಾರೆ. ಆದರೆ ಹೋರಾಟದ ಹಾಡುಗಳಲ್ಲಿ ಈ ಕನ್ನಡಾಂಬೆಗೆ ಕರ್ನಾಟಕದಲ್ಲಿರುವ ಅಸಮಾನತೆಯನ್ನು ಪರಿಚಯಿಸಿದ್ದಾರೆ. ಕನ್ನಡಾಂಬೆಗೆ ಈ ನಾಡಿನ ಒಳಗೇ ನಡೆಯುತ್ತಿರುವ ಮೋಸಗಳನ್ನು ಹೇಳುತ್ತಾರೆ. ಹೋರಾಟದ ಹಾಡುಗಳಲ್ಲಿನ ಭುವನೇಶ್ವರಿಗೆ ಈ ನಾಡಿನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಚಿಂತಿಸುವಂತೆ ಮಾಡುತ್ತವೆ. ಶಿಷ್ಟ ಕವಿಗಳು ಕಟ್ಟಿಕೊಟ್ಟ ಕನ್ನಡ ಮತ್ತು ಕನ್ನಡಾಂಬೆೆಯ ಕಲ್ಪನೆಗೂ ಹೋರಾಟದ ಹಾಡುಗಳು ಕಟ್ಟಿದ ಕನ್ನಡ ಮತ್ತು ಕನ್ನಡಾಂಬೆಯ ಹಾಡುಗಳಿಗೂ ಹೋಲಿಕೆ ಮಾಡಿ ಅಧ್ಯಯನ ಮಾಡಬೇಕಿದೆ. ಇಲ್ಲಿನ ಹಾಡುಗಳಲ್ಲಿ ಶೋಷಣೆಯ ಕರ್ನಾಟಕವನ್ನೂ, ದಮನಿತರನ್ನು ಸುಲಿಯುತ್ತಿರುವ ಸುಲುಗೆಕೋರ ಕರ್ನಾಟಕವನ್ನು ಪರಿಚಯಿಸುತ್ತಿವೆ. ‘ಓ ಕನ್ನಡ ತಾಯೆ ನೀನಾದೆ ಮಲತಾಯೆ/ ಓ ಭುವನೇಶ್ವರಿ ತಾಯೆ ನಮಗಾದೆ ಬರಿಗೈಯೆ’ (ಅಂಬಣ್ಣ ಅರೋಲಿಕರ್) ಈ ತರಹದ ರಚನೆಗಳು ಕನ್ನಡಾಂಬೆಯ ರಮ್ಯ ಕಲ್ಪನೆಯನ್ನು ಒಡೆಯುತ್ತವೆ.

ಅಂಚಿನ ಸಮುದಾಯಗಳ ಬದುಕೇ ಹಾಡುಗಳಾಗಿವೆ. ನಮ್ಮ ಅಕಾಡಮಿಕ್ ಸಮುದಾಯದ ಅಧ್ಯಯನಗಳು ಇಂತಹ ಹಾಡುಗಳನ್ನು ಪರಿಗಣಿಸಿಯೇ ಇಲ್ಲ. ‘ಕಳ್ಳು ಬುಳ್ಡೆ ನಮ್ಮವ್ವ ನಿನ್ನ ಮರೆಯಲಾರೆನೆ’ ತರಹದ ಈಡಿಗ ಸಮುದಾಯದ ಕಥನ ಹೇಳುವಂತೆ, ‘ಕೊರಮಣ್ಣ ಓ ಕೊರಮಣ್ಣ ಹಂದಿಗೂಡಿನಲ್ಲಿ ಚಿಂದಿಯಾದೆಯಣ್ಣ’ (ದಾನಪ್ಪ ನಿಲೋಗಲ್) ಮೊದಲಾದ ಹಾಡುಗಳು ಸಮುದಾಯಗಳ ನೋವಿನ ಚರಿತ್ರೆಗಳೇ ಆಗಿವೆ. ಕೊಡಗಿನ ಕಾಫಿತೋಟಕ್ಕೆ ಕೂಲಿಗೆ ಹೋದ ಹೆಣ್ಣಿನ ಕಡುದುಃಖವನ್ನು ಮೊದಲುಗೊಂಡು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತಿರುವ ಶೋಷಣೆಯ ಪ್ರದೇಶಿಕ ವೈವಿಧ್ಯಗಳನ್ನೂ ಈ ಹಾಡುಗಳು ದಾಖಲಿಸುತ್ತಿವೆ.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತಂತೆ ಭಾರತದಾದ್ಯಂತ ಹಾಡುಗಳು ಹುಟ್ಟಿವೆ. ಹೋರಾಟದ ಹಾಡುಗಳ ಜತೆಗೆ ಜನಪದ ಹಾಡಿಕೆಯಲ್ಲಿಯೂ ಅಂಬೇಡ್ಕರ್ ಮರುಸೃಷ್ಟಿಗೊಂಡಿದ್ದಾರೆ. ಹೀಗಾಗಿ ‘ಅಂಬೇಡ್ಕರ್ ಜಾನಪದ’ವೇ ಹುಟ್ಟಿದೆ. ದಲಿತ ಸಂಘರ್ಷ ಸಮಿತಿ ಕಟ್ಟಿದ ಬಿ.ಕೃಷ್ಣಪ್ಪನವರನ್ನು ಮೊದಲುಗೊಂಡು ಹತ್ತಾರು ಹೋರಾಟಗಾರರ ಚರಿತ್ರೆ ಹಾಡುಗಳಲ್ಲಿ ಬಿಚ್ಚಿಕೊಳ್ಳುತ್ತದೆ. ಇಲ್ಲಿನ ಹಾಡುಗಳು ಹೋರಾಟದ ಚರಿತ್ರೆಯ ಅಕರಗಳಾಗಿ ನಾವು ಗ್ರಹಿಸಿದ ಹೋರಾಟದ ಸೀಮಿತ ನೆಲೆಗಳನ್ನು ಛಿದ್ರಗೊಳಿಸುತ್ತವೆ. ಮತ್ತೊಂದೆಡೆ ಹೋರಾಟದ ಹಾಡುಗಳಿಗೆ ಬಳಕೆಯಾದ ಜನಪದ ಲಯಗಳು ಒಟ್ಟಾರೆ ಜನಪದ ಕಾವ್ಯಮೀಮಾಂಸೆಯ ಚರ್ಚೆಯನ್ನು ಬದಲಿಸುವಂತಿವೆ. ಆರಾಧನೆ, ಮೆಚ್ಚುಗೆ, ಸಂಭ್ರಮ, ಖುಷಿ, ಮೌಢ್ಯವನ್ನು ವಿಸ್ತರಿಸಲು ಬಳಕೆಯಾದ ಜನಪದ ಲಯಗಳು ಪ್ರತಿರೋಧ, ಸಿಟ್ಟು, ಆಕ್ರೋಶ, ದೌರ್ಜನ್ಯವನ್ನು ವಿರೋಧಿಸಲು ಬಳಸಿರುವುದು ವಿಶಿಷ್ಟ ಪ್ರಯೋಗವಾಗಿದೆ.

ಈ ಹಾಡುಗಳಲ್ಲಿ ಸಮಾಜವನ್ನು ‘ಎಚ್ಚರಿಸುವ’ ದನಿ ಗಟ್ಟಿಯಾಗಿದೆ. ನಡೆಯುತ್ತಿರುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ತಿಳಿಸಿ ಇದರ ವಿರುದ್ಧ ಜನರನ್ನು ಎಚ್ಚರಿಸುವುದು, ದೌರ್ಜನ್ಯ ಎಸಗುವವರಿಗೆ ಮುನ್ನೆಚ್ಚರಿಕೆ ಕೊಡುವುದು, ಹೀಗೆ ರಾಜಕಾರಣಿಗಳು, ಅಧಿಕಾರಿಗಳನ್ನು ಒಳಗೊಂಡಂತೆ ಶೋಷಿಸುವ ಎಲ್ಲರನ್ನೂ ಈ ಹಾಡುಗಳು ಎಚ್ಚರಿಸುತ್ತವೆ. ಬಹಳ ಮುಖ್ಯವಾಗಿ ಈ ಹಾಡುಗಳು ಪ್ರಜಾಪ್ರಭುತ್ವದ ಒಳಗಿನ ದುರ್ಬಲ ಸಂಗತಿಗಳನ್ನು ಸಾರ್ವಜನಿಕಗೊಳಿಸುತ್ತವೆ. ಅಸಾಂವಿಧಾನಿಕ ನಡೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತವೆ. ಚುನಾವಣೆಗಳಲ್ಲಿ ಪ್ರಜೆಗಳು ವಹಿಸಬೇಕಾದ ಪ್ರಜ್ಞಾವಂತಿಕೆಯನ್ನು ಮತ್ತೆ ಮತ್ತೆ ನೆನಪಿಸಿವೆ. ನಿಜಕ್ಕೂ ಚುನಾವಣಾ ಆಯೋಗವು ಈ ಹಾಡುಗಳನ್ನು ಚುನಾವಣಾ ಪ್ರಚಾರದ ರಾಯಭಾರಿಗಳನ್ನಾಗಿಸಬೇಕಿದೆ. ಕನ್ನಡ ಸಾಹಿತ್ಯದ ಯಾವ ಪ್ರಕಾರವೂ ಮಾಡದಷ್ಟು ಜನಸಾಮಾನ್ಯರ ಜಾಗೃತಿಯನ್ನು ಈ ಹೋರಾಟದ ಹಾಡುಗಳು ಮಾಡಿವೆ ಎನ್ನುವುದು ಅರಗಿಸಿಕೊಳ್ಳಬೇಕಾದ ಸತ್ಯ. ಇಂತಹ ಚಾರಿತ್ರಿಕ ಸಂಪುಟದ ಸಂಪಾದನೆಗಾಗಿ ಡಾ.ಬಿ.ಎಂ.ಪುಟ್ಟಯ್ಯ ಅವರು ಅಭಿನಂದನಾರ್ಹರು.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X