ನಮ್ಮ ಆಸ್ತಿಯನ್ನು ಆಕ್ರಮಿಸುವ ರಾಷ್ಟ್ರವನ್ನು ಸುಮ್ಮನೆ ಬಿಡುವುದಿಲ್ಲ: ಯುರೋಪ್ ಗೆ ರಶ್ಯ ಎಚ್ಚರಿಕೆ

PC : Reuters
ಮಾಸ್ಕೋ, ಸೆ.15: ತನ್ನ ಆಸ್ತಿಗಳನ್ನು ಆಕ್ರಮಿಸಲು ಬಯಸುವ ಯಾವುದೇ ರಾಷ್ಟ್ರವನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಯುರೋಪಿಯನ್ ದೇಶಗಳಿಗೆ ಸೋಮವಾರ ರಶ್ಯ ಎಚ್ಚರಿಕೆ ನೀಡಿದೆ.
ಫ್ರೀಝ್ (ನಿರ್ಬಂಧಿಸಿರುವ) ಮಾಡಿಕೊಳ್ಳಲಾದ ರಶ್ಯದ ಆಸ್ತಿಗಳನ್ನು ಉಕ್ರೇನ್ ಗೆ ನೆರವು ನೀಡಲು ಬಳಸಿಕೊಳ್ಳಲು ಯುರೋಪಿಯನ್ ಯೂನಿಯನ್ ಯೋಜಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ರಶ್ಯ ಖಾರವಾಗಿ ಪ್ರತಿಕ್ರಿಯಿಸಿದೆ.
2022ರಲ್ಲಿ ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದ ಬಳಿಕ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ರಶ್ಯದ ಸೆಂಟ್ರಲ್ ಬ್ಯಾಂಕ್ ಮತ್ತು ವಿತ್ತ ಇಲಾಖೆಯೊಂದಿಗೆ ವಹಿವಾಟುಗಳನ್ನು ನಿಷೇಧಿಸಿವೆ. ಅಲ್ಲದೆ ಯುರೋಪಿಯನ್ ಭದ್ರತಾ ಠೇವಣಿಗಳಲ್ಲಿ ರಶ್ಯ ಇರಿಸಿರುವ ಸುಮಾರು 350 ಶತಕೋಟಿ ಡಾಲರ್ ಮೌಲ್ಯದ ಬಾಂಡ್ ಗಳನ್ನು ತಡೆಹಿಡಿದಿವೆ. ಯುರೋಪ್ನಲ್ಲಿ ನಿರ್ಬಂಧಿಸಲಾಗಿರುವ ರಶ್ಯದ ಆಸ್ತಿಗಳಲ್ಲಿ ನಗದು ಮೊತ್ತವನ್ನು ಉಕ್ರೇನ್ ನ ರಕ್ಷಣಾ ವೆಚ್ಚಕ್ಕೆ ವಿನಿಯೋಗಿಸಲು ಯುರೋಪಿಯನ್ ಯೂನಿಯನ್ ಯೋಜನೆ ರೂಪಿಸಬೇಕೆಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡೆರ್ ಲಿಯೆನ್ ಒತ್ತಾಯಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿತ್ತು.
ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ನಲ್ಲಿರುವ (ಮೆಚ್ಚುರಿಟಿ ದಿನಾಂಕ ಮೀರಿದ) ರಶ್ಯದ ಬಾಂಡ್ಗಳ ನಗದು ಮೊತ್ತವನ್ನು ಉಕ್ರೇನ್ಗೆ `ಮರುಪಾವತಿ ಸಾಲ'ವಾಗಿ ನೀಡುವ ಬಗ್ಗೆ ಯುರೋಪಿಯನ್ ಕಮಿಷನ್ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.
ನಮ್ಮ ಆಸ್ತಿಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸುವವರ ವಿರುದ್ಧ ಸಾಧ್ಯವಿರುವ ಎಲ್ಲಾ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಲಯದ ಹೊರಗಡೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ರಶ್ಯದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವಡೇವ್ ಎಚ್ಚರಿಕೆ ನೀಡಿರುವುದಾಗು ವರದಿಯಾಗಿದೆ.
ನಮ್ಮ ಆಸ್ತಿಗಳನ್ನು ವಶಕ್ಕೆ ಪಡೆದರೆ ಪಾಶ್ಚಿಮಾತ್ಯರು ಕಳ್ಳತನ ನಡೆಸಿದಂತಾಗುತ್ತದೆ ಮತ್ತು ಇದು ಅಮೆರಿಕ ಮತ್ತು ಯುರೋಪ್ನ ಬಾಂಡ್ಗಳು ಮತ್ತು ಕರೆನ್ಸಿಗಳಲ್ಲಿನ ವಿಶ್ವಾಸವನ್ನು ಹಾಳು ಮಾಡುತ್ತದೆ ಎಂದವರು ಹೇಳಿದ್ದಾರೆ.