2,300 ಕೋಟಿ ರೂ. ಬೆಟ್ಟಿಂಗ್ ಪ್ರಕರಣ: ದೇಶಭ್ರಷ್ಟ ಹರ್ಷಿತ್ ಬಾಬುಲಾಲ್ ಜೈನ್ ನನ್ನು ಗಡಿಪಾರು ಮಾಡಿದ ಯುಎಇ

ಸಾಂದರ್ಭಿಕ ಚಿತ್ರ
ಅಬುಧಾಬಿ: ತೆರಿಗೆ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬೇಕಿದ್ದ ವ್ಯಕ್ತಿಯೊಬ್ಬನನ್ನು ಯುಎಇ ಭಾರತಕ್ಕೆ ಗಡೀಪಾರು ಮಾಡಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹೇಳಿದೆ.
ಆರೋಪಿಯನ್ನು ಹರ್ಷಿತ್ ಬಾಬುಲಾಲ್ ಜೈನ್ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್ 5ರಂದು ಆತನನ್ನು ಅಹಮದಾಬಾದ್ ಗೆ ವಾಪಸು ಕಳಿಸಲಾಗಿದ್ದು, ಗುಜರಾತ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಗುಜರಾತ್ ಪೊಲೀಸರ ಮನವಿಯ ಮೇರೆಗೆ ಆಗಸ್ಟ್ 2023ರಲ್ಲಿ ಹರ್ಷಿತ್ ಬಾಬುಲಾಲ್ ಜೈನ್ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಆತನನ್ನು ಯುಎಇಯಿಂದ ಗಡೀಪಾರು ಮಾಡಲು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಹಾಗೂ ಯುಎಇ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.
ಹಲವಾರು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆಗೊಂಡಿದ್ದ ಅಂದಾಜು 2,300 ಕೋಟಿ ರೂ. ಮೊತ್ತದ ಬೆಟ್ಟಿಂಗ್ ಜಾಲದಲ್ಲಿ ಹರ್ಷಿತ್ ಬಾಬುಲಾಲ್ ಜೈನ್ ಪ್ರಮುಖ ಆರೋಪಿಯಾಗಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ.
481 ಬ್ಯಾಂಕ್ ಖಾತೆಗಳಲ್ಲಿ ಹಂಚಿ ಹೋಗಿದ್ದ 9.62 ಕೋಟಿ ರೂ. ಹಾಗೂ ಅಕ್ರಮ ಕಾರ್ಯಾಚರಣೆಯೊಂದಿಗೆ ಸಂಪರ್ಕ ಹೊಂದಿದ್ದ 1,500ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಗುಜರಾತ್ ರಾಜ್ಯ ನಿಗಾವಣೆ ಘಟಕದ ಉಪ ಪೊಲೀಸ್ ಮಹಾ ನಿರೀಕ್ಷಕ ನಿರ್ಲಿಪ್ತ ರಾಯ್ ತಿಳಿಸಿದ್ದಾರೆ.
ಹರ್ಷಿತ್ ಬಾಬುಲಾಲ್ ಜೈನ್ ನನ್ನು ದುಬೈನಲ್ಲಿ ಪತ್ತೆ ಹಚ್ಚಲಾಗಿತ್ತು. ಡಿಸೆಂಬರ್ 2023ರಲ್ಲಿ ಆತನ ಗಡೀಪಾರಿಗೆ ಯುಎಇ ಪ್ರಾಧಿಕಾರಗಳಿಗೆ ಅಧಿಕೃತ ಪ್ರಸ್ತಾವನೆಯನ್ನು ರವಾನಿಸಿದ ನಂತರ, ಇಂಟರ್ ಪೋಲ್ ಗೆ ಮಾಹಿತಿ ನೀಡಲಾಗಿತ್ತು. ಇದಾದ ಬಳಿಕ ಆತನನ್ನು ಗಡಿಪಾರು ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.