ಅಮೆರಿಕಾದಲ್ಲಿ ಕನ್ನಡಿಗನ ಹತ್ಯೆ; ಬೈಡನ್ ವಲಸೆ ನೀತಿಯನ್ನು ಟೀಕಿಸಿದ ಟ್ರಂಪ್

ಡಲ್ಲಾಸ್: ಅಮೆರಿಕದ ಟೆಕ್ಸಾಸ್ ನ ಡಲ್ಲಾಸ್‌ನಲ್ಲಿ ಮೋಟೆಲೊಂದರಲ್ಲಿ ವ್ಯವಸ್ಥಾಪಕರಾಗಿದ್ದ ಕನ್ನಡಿಗ ಚಂದ್ರಮೌಳಿ ನಾಗಮಲ್ಲಯ್ಯ (50) ಅವರನ್ನು ಕ್ರೂರವಾಗಿ ಶಿರಚ್ಛೇದ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸೆಪ್ಟೆಂಬರ್ 10ರಂದು ಡಲ್ಲಾಸ್ ನ ಮೋಟೆಲ್ ನಲ್ಲಿ ನಡೆದ ಈ ಘಟನೆಯಲ್ಲಿ, ಅಲ್ಲೇ ಕೆಲಸ ಮಾಡುತ್ತಿದ್ದ ಕ್ಯೂಬನ್ ಮೂಲದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ (37) ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಥಮ ದರ್ಜೆಯ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಆರೋಪಿಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಗ್ರ್ಯಾಂಡ್ ಥೆಫ್ಟ್ ಆಟೋ ಮತ್ತು ಫಾಲ್ಸ್ ಇಂಪ್ರಿಝನ್ ಮೆಂಟ್ ಸೇರಿದಂತೆ ಗಂಭೀರ ಅಪರಾಧಗಳ ಹಿನ್ನೆಲೆಯಿದೆ. ಅಮೆರಿಕದ ವಲಸೆ ಅಧಿಕಾರಿಗಳ ಪ್ರಕಾರ, ಆರೋಪಿಯನ್ನು ಮೊದಲು ಬಂಧಿಸಲಾಗಿದ್ದರೂ, ಕ್ಯೂಬಾ ದೇಶವು ಆತನನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಟ್ರೂತ್ ಸೋಶಿಯಲ್ ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, “ಗೌರವಾನ್ವಿತ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಮುಂದೆ ಅಕ್ರಮ ವಲಸಿಗನಿಂದ ಕ್ರೂರವಾಗಿ ಶಿರಚ್ಛೇದ ಮಾಡಲಾಗಿದೆ. ನಮ್ಮ ದೇಶದಲ್ಲಿ ಎಂದಿಗೂ ಇರಬಾರದ ವಲಸಿಗರಿಂದ ಇಂತಹ ದುರಂತ ಸಂಭವಿಸಿದ್ದು, ಇದಕ್ಕೆ ಕಾರಣ ಬೈಡೆನ್ ಅವರ ಮೃದು ವಲಸೆ ನೀತಿಗಳೇ” ಎಂದು ಹೇಳಿದ್ದಾರೆ.
"ಅಕ್ರಮ ವಲಸಿಗ ಅಪರಾಧಿಗಳಿಗೆ ಮೃದುವಾಗಿ ವರ್ತಿಸುವ ಸಮಯ ಮುಗಿದಿದೆ. ನನ್ನ ಆಡಳಿತದಲ್ಲಿ ಗೃಹ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್, ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಮತ್ತು ಗಡಿ ಜಾರ್ ಟಾಮ್ ಹೋಮನ್ ಸೇರಿ ಅನೇಕರು ಅಮೆರಿಕವನ್ನು ಮತ್ತೆ ಸುರಕ್ಷಿತಗೊಳಿಸಲು ಶ್ರಮಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ನಾಗಮಲ್ಲಯ್ಯ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 13ರಂದು ಟೆಕ್ಸಾಸ್‌ನ ಫ್ಲವರ್ ಮೌಂಡ್‌ನಲ್ಲಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿತು.