ಇಸ್ರೇಲ್ ದಾಳಿ ಗಾಝಾ ಮಾತುಕತೆ ಹಳಿತಪ್ಪಿಸುವ ಗುರಿ ಹೊಂದಿತ್ತು: ಶೃಂಗಸಭೆಯಲ್ಲಿ ಖತರ್ ಅಮೀರ್

ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ | Photo : Reuters
ದೋಹಾ, ಸೆ.15: ಕಳೆದ ವಾರ ಖತರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಗಾಝಾ ಮಾತುಕತೆಯನ್ನು ಹಳಿ ತಪ್ಪಿಸುವ ಗುರಿ ಹೊಂದಿತ್ತು ಮತ್ತು ಅರಬ್ ಜಗತ್ತು ಇಸ್ರೇಲಿ ಪ್ರಭಾವದಡಿ ಇರಬೇಕು ಎಂದು ಇಸ್ರೇಲ್ ಪ್ರಧಾನಿ ಕನಸು ಕಂಡಿದ್ದಾರೆ ಎಂದು ಖತರ್ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಸೋಮವಾರ ಹೇಳಿದ್ದಾರೆ.
`ತಾನು ಮಾತುಕತೆ ನಡೆಸುತ್ತಿರುವ ಪಕ್ಷವನ್ನೇ ವ್ಯವಸ್ಥಿತವಾಗಿ ಹತ್ಯೆ ಮಾಡಲು ಕೆಲಸ ಮಾಡುವವರು ಮಾತುಕತೆಯನ್ನು ತಡೆಯಲು ಉದ್ದೇಶಿಸಿದ್ದಾರೆ. ಅವರಿಗೆ ಮಾತುಕತೆಯು ಕೇವಲ ಯುದ್ಧದ ಒಂದು ಭಾಗವಾಗಿದೆ' ಎಂದು ದಾಳಿಯ ಬಗ್ಗೆ ಚರ್ಚೆ ನಡೆಸಲು ಸೇರಿದ್ದ ಅರಬ್ ಮತ್ತು ಮುಸ್ಲಿಮ್ ನಾಯಕರ ಶೃಂಗ ಸಭೆಯನ್ನು ಉದ್ದೇಶಿಸಿ ಅಲ್-ಥಾನಿ ಹೇಳಿದರು.
ಅರಬ್ ಪ್ರದೇಶವನ್ನು ಇಸ್ರೇಲಿ ಪ್ರಭಾವದ ಕ್ಷೇತ್ರವನ್ನಾಗಿ ಪರಿವರ್ತಿಸುವ ಕನಸನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೊಂದಿದ್ದು ಇದು ಅಪಾಯಕಾರಿ ಭ್ರಮೆಯಾಗಿದೆ. ವಸಾಹತನ್ನು ವಿಸ್ತರಿಸಲು ಮತ್ತು ಯಥಾಸ್ಥಿತಿಯನ್ನು ಬದಲಾಯಿಸಲು ಗಾಝಾದಲ್ಲಿನ ಯುದ್ಧವನ್ನು ಇಸ್ರೇಲ್ ಸರಕಾರ ಬಳಸಿಕೊಳ್ಳುತ್ತಿದೆ. ಒಂದು ವೇಳೆ ಹಮಾಸ್ ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ ಉದ್ದೇಶಿಸಿದ್ದರೆ ಅವರೊಂದಿಗೆ ಮಾತುಕತೆ ಯಾಕೆ ನಡೆಸಬೇಕು? ಎಂದು ಪ್ರಶ್ನಿಸಿದ ಅವರು ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ಬಗ್ಗೆ ಇಸ್ರೇಲ್ ಗೆ ಕಾಳಜಿಯಿಲ್ಲ. ಗಾಝಾ ಇನ್ನು ಮುಂದೆ ವಾಸಯೋಗ್ಯವಲ್ಲ ಎಂದು ಖಚಿತಪಡಿಸಿಕೊಳ್ಳುವುದು ಮಾತ್ರ ಅವರ ಉದ್ದೇಶವಾಗಿದೆ' ಎಂದು ಖತರ್ ಅಮೀರ್ ಆರೋಪಿಸಿದ್ದಾರೆ.
ಹೇಡಿತನದ ಮತ್ತು ವಿಶ್ವಾಸಘಾತುಕ ಪಕ್ಷದೊಂದಿಗೆ ಮಾತುಕತೆಗೆ ಅವಕಾಶವೇ ಇಲ್ಲ. ತಾನು ಮಾತುಕತೆ ನಡೆಸುತ್ತಿರುವ ಪಕ್ಷವನ್ನೇ ವ್ಯವಸ್ಥಿತವಾಗಿ ಹತ್ಯೆ ಮಾಡಲು ಕೆಲಸ ಮಾಡುವವರು ಮಾತುಕತೆ ವಿಫಲಗೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದರಲ್ಲಿ ಅನುಮಾನವಿಲ್ಲ ಎಂದ ಶೇಖ್ ತಮೀಮ್, ಗಾಝಾದಲ್ಲಿ `ನರಮೇಧ' ನಡೆಸುತ್ತಿರುವ ಇಸ್ರೇಲನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಇಸ್ರೇಲ್ ನ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಖತರ್ ನಲ್ಲಿ ಅರಬ್ ಲೀಗ್ ಮತ್ತು ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್'ನ ಶೃಂಗಸಭೆ ಆಯೋಜಿಸಲಾಗಿದೆ.
`ಇಸ್ರೇಲ್ನ ಕ್ರೂರ ಆಕ್ರಮಣವು ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಮಾನ್ಯೀಕರಿಸುವ ಪ್ರಯತ್ನಗಳನ್ನು ಅಪಾಯಕ್ಕೆ ದೂಡಿದೆ' ಎಂದು ಶೃಂಗಸಭೆಯಲ್ಲಿ ಮಂಡಿಸಲಾದ ಕರಡು ಹೇಳಿಕೆಯಲ್ಲಿ ಎಚ್ಚರಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.