ದೋಹಾದಲ್ಲಿ ಹಮಾಸ್ ನಾಯಕರ ಮೇಲೆ ಇಸ್ರೇಲ್ ನಿಂದ ವಾಯುದಾಳಿ: ಖತರ್ ಸರ್ಕಾರದಿಂದ ತೀವ್ರ ಖಂಡನೆ

PC | X.com
ದೋಹಾ, ಸೆ. 9:ಖತರ್ ರಾಜಧಾನಿ ದೋಹಾದಲ್ಲಿ ಹಮಾಸ್ ನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯಲ್ಲಿ ಹಮಾಸ್ ನ ಮುಖ್ಯ ಸಮಾಲೋಚಕ ಖಲೀಲ್ ಅಲ್-ಹಯಾ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ಇಸ್ರೇಲ್ ಸೇನೆ ಅಧಿಕೃತವಾಗಿ ದಾಳಿಯನ್ನು ದೃಢಪಡಿಸಿದ್ದು, ದೇಶೀಯ ಭದ್ರತಾ ಸಂಸ್ಥೆ ಶಿನ್ ಬೆಟ್ನ ಸಹಕಾರದೊಂದಿಗೆ ವಾಯುಪಡೆಯು ದಾಳಿ ನಡೆಸಿದೆ ಎಂದು ಪ್ರಕಟಿಸಿದೆ.
ಸೇನೆಯ ಪ್ರಕಾರ, ದಾಳಿಗೊಳಗಾದ ಹಮಾಸ್ ನಾಯಕರ ಹೆಸರುಗಳನ್ನು ಬಹಿರಂಗಪಡಿಸದಿದ್ದರೂ, ಅವರು ಹಲವು ವರ್ಷಗಳಿಂದ ಸಂಘಟನೆಯ ಪ್ರಮುಖ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದರೆಂದು ತಿಳಿಸಿದೆ. "ಹಮಾಸ್ ಬಂಡುಕೋರ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವವರೆಗೆ ಇಸ್ರೇಲ್ ತನ್ನ ಕಾರ್ಯಾಚರಣೆಗಳನ್ನು ಮುಂದುವರಿಸುತ್ತದೆ," ಎಂದು ಸೇನೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ದಾಳಿ ನಡೆದ ಕೆಲವೇ ಗಂಟೆಗಳ ಹಿಂದೆ, ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ವಿದೇಶದಲ್ಲಿ ವಾಸಿಸುವ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೂ ಮುನ್ನ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಇಸ್ರೇಲ್ ಒಪ್ಪಿಕೊಂಡಿರುವುದಾಗಿ ಅವರು ಘೋಷಿಸಿದ್ದರು.
Aljazeera ಗೆ ಹಮಾಸ್ ನ ಹಿರಿಯ ಮೂಲವೊಂದು ನೀಡಿದ ಮಾಹಿತಿಯ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಝಾ ಕದನ ವಿರಾಮ ಪ್ರಸ್ತಾವನೆಯ ಕುರಿತು ಚರ್ಚಿಸುತ್ತಿದ್ದ ವೇಳೆ, ದೋಹಾದಲ್ಲಿ ಹಮಾಸ್ ನಾಯಕರ ಸಭೆಯನ್ನು ನಿಖರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆದಿದೆ.
ಹಮಾಸ್ ರಾಜಕೀಯ ಬ್ಯೂರೋದ ಹಲವಾರು ಸದಸ್ಯರು ವಾಸಿಸುತ್ತಿದ್ದ ಕಟ್ಟಡಗಳ ಸಮೀಪ ದಾಳಿ ನಡೆದಿರುವುದನ್ನು ಖತರ್ ಸರ್ಕಾರ ತೀವ್ರವಾಗಿ ಖಂಡಿಸಿದೆ.
"ಈ ಕ್ರಿಮಿನಲ್ ದಾಳಿ ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಖತರ್ ನಾಗರಿಕರು ಹಾಗೂ ವಿದೇಶಿ ನಿವಾಸಿಗಳ ಭದ್ರತೆಗೆ ನೇರ ಬೆದರಿಕೆ ಸೃಷ್ಟಿಸುತ್ತದೆ," ಎಂದು ಖತರ್ ವಿದೇಶಾಂಗ ವ್ಯವಹಾರಗಳ ವಕ್ತಾರ ಮಜೀದ್ ಅಲ್ ಅನ್ಸಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಪ್ರಾದೇಶಿಕ ಭದ್ರತೆಯನ್ನು ಹಾಳುಮಾಡುವ ಇಸ್ರೇಲ್ ನ ಅಜಾಗರೂಕ ನಡವಳಿಕೆಯನ್ನು ಖತರ್ ಯಾವುದೇ ರೀತಿಯಲ್ಲೂ ಸಹಿಸುವುದಿಲ್ಲ. ದಾಳಿಯ ಹಿನ್ನೆಲೆಯ ಬಗ್ಗೆ ಉನ್ನತ ಮಟ್ಟದ ತನಿಖೆಗಳು ಪ್ರಾರಂಭಗೊಂಡಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೋಹಾದಲ್ಲಿ ಇಸ್ರೇಲ್ ಗುರಿಯಾಗಿಸಲ್ಪಟ್ಟ ಸ್ಥಳವು ವಸತಿ ಪ್ರದೇಶಗಳ ಹತ್ತಿರದಲ್ಲಿತ್ತು ಎಂದು ತಿಳಿದು ಬಂದಿದೆ.
ದೋಹಾದಲ್ಲಿ ನಡೆದ ಈ ದಾಳಿ ಗಾಝಾ ಕದನ ವಿರಾಮ ಚರ್ಚೆಗಳ ನಡುವೆ ಸಂಭವಿಸಿರುವುದರಿಂದ, ಮಧ್ಯಪ್ರಾಚ್ಯದ ರಾಜತಾಂತ್ರಿಕ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.