ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧವಿಲ್ಲ?

ಡೊನಾಲ್ಡ್ ಟ್ರಂಪ್ | PC :NDTV
ವಾಷಿಂಗ್ಟನ್, ಸೆ.15: ಅಮೆರಿಕಾದ ಮಾರುಕಟ್ಟೆಗಳಲ್ಲಿ ಟಿಕ್ ಟಾಕ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಚೀನಾದೊಂದಿಗೆ ಒಪ್ಪಂದಕ್ಕೆ ಬಂದಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸುಳಿವು ನೀಡಿದ್ದಾರೆ.
` ನಮ್ಮ ದೇಶದ ಯುವಕರು ಉಳಿಸಲು ಬಯಸಿದ ನಿರ್ದಿಷ್ಟ ಕಂಪೆನಿಯೊಂದರಲ್ಲಿ ಒಪ್ಪಂದಕ್ಕೆ ಬರಲಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದು ಹೆಚ್ಚಿನ ವಿವರ ಉಲ್ಲೇಖಿಸಿಲ್ಲ.
ಈ ಮಧ್ಯೆ, ಅಮೆರಿಕ ಮತ್ತು ಚೀನಾ ಟಿಕ್ ಟಾಕ್ ಕುರಿತಂತೆ ತಮ್ಮ ವಿವಾದವನ್ನು ಬಗೆಹರಿಸಲು ರೂಪರೇಖೆಯ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸೋಮವಾರ ಘೋಷಿಸಿದ್ದಾರೆ.
ಮ್ಯಾಡ್ರಿಡ್ನಲ್ಲಿ ಎರಡೂ ದೇಶಗಳ ಉನ್ನತ ನಿಯೋಗದ ನಡುವಿನ ಮಾತುಕತೆ ಯಶಸ್ವಿಯಾಗಿದೆ. ಟಿಕ್ ಟಾಕ್ ಒಪ್ಪಂದಕ್ಕೆ ರೂಪರೇಖೆ ಸಿದ್ಧಗೊಂಡಿದೆ. ಸೆಪ್ಟಂಬರ್ 19ರಂದು ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮಾತುಕತೆ ನಡೆಸಲಿದ್ದಾರೆ ಎಂದವರು ಹೇಳಿದ್ದಾರೆ.