‘ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರ’ಕ್ಕೆ ಭಾರತ ಬೆಂಬಲ : ವಿಶ್ವಸಂಸ್ಥೆಯ ‘ನ್ಯೂಯಾರ್ಕ್ ಘೋಷಣೆ’ ನಿರ್ಣಯದ ಪರ ಭಾರತ ಸೇರಿದಂತೆ 142 ರಾಷ್ಟ್ರಗಳಿಂದ ಮತದಾನ

Photo Credit : Reuters
ನ್ಯೂಯಾರ್ಕ್,ಸೆ.13: ಫೆಲೆಸ್ತೀನ್ ಬಿಕ್ಕಟ್ಟಿಗೆ ಶಾಂತಿಯುತ ವಿಧಾನಗಳಿಂದ ಹಾಗೂ ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡುವ ವಿಶ್ವಸಂಸ್ಥೆ ಸಾಮಾನ್ಯಸಭೆಯ ‘ನ್ಯೂಯಾರ್ಕ್ ಘೋಷಣೆ’ಯನ್ನು ಭಾರತ ಬೆಂಬಲಿಸಿದ್ದು, ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಪರವಾಗಿ ಮತದಾನ ಮಾಡಿದೆ.
‘ನ್ಯೂಯಾರ್ಕ್ ಘೋಷಣೆ’ಯನ್ನು ಬೆಂಬಲಿಸಿ, ಫ್ರಾನ್ಸ್ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಸೇರಿದಂತೆ 142 ದೇಶಗಳು ಮತಚಲಾಯಿಸಿದವು. 10 ರಾಷ್ಟ್ರಗಳು ನಿರ್ಣಯದ ವಿರುದ್ಧವಾಗಿ ಮತದಾನ ಮಾಡಿದ್ದರೆ, 12 ದೇಶಗಳು ಗೈರುಹಾಜರಾಗಿದ್ದವು. ಅಮೆರಿಕ, ಇಸ್ರೇಲ್, ಅರ್ಜೆಂಟೀನಾ ಹಾಗೂ ಹಂಗರಿ ನಿರ್ಣಯವನ್ನು ವಿರೋಧಿಸಿದ ದೇಶಗಳಲ್ಲಿ ಸೇರಿವೆ.
‘‘ಗಾಝಾ ಯುದ್ಧವನ್ನು ಕೊನೆಗಾಣಿಸಲು, ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಶಾಶ್ವತ ವಾಗಿ ಪರಿಹರಿಸಲು, ಫೆಲೆಸ್ತೀನಿಯರು, ಇಸ್ರೇಲಿಗಳು ಮತ್ತು ಪ್ರದೇಶದಲ್ಲಿರುವ ಎಲ್ಲಾ ಜನರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ನಾಯಕರು ಸಾಮೂಹಿಕವಾದ ಕ್ರಮವೊಂದನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ’’ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.
‘ಫೆಲೆಸ್ತೀನ್ ಸಮಸ್ಯೆಗೆ ಶಾಂತಿಯುತ ಪರಿಹಾರ ಹಾಗೂ ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ಪರಿಹಾರದ ಅನುಷ್ಠಾನ ಕುರಿತಾದ ನ್ಯೂಯಾರ್ಕ್ ಘೋಷಣೆಯ ಅನುಮೋದನೆ’ ಶೀರ್ಷಿಕೆಯ ಈ ಪಠ್ಯವನ್ನು ಜುಲೈನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸದಸ್ಯ ರಾಷ್ಟ್ರಗಳಿಗೆ ವಿತರಿಸಲಾಗಿತ್ತು. ಫ್ರಾನ್ಸ್ ಹಾಗೂ ಸೌದಿ ಆರೇಬಿಯ ಈ ಸಮಾವೇಶದ ಜಂಟಿ ಅಧ್ಯಕ್ಷತೆ ವಹಿಸಿದ್ದವು.
ಈ ಘೋಷಣೆಗೆ ಬೆಂಬಲ ಕೋರುವ ನಿರ್ಣಯವನ್ನು ಶುಕ್ರವಾರ ಮತಕ್ಕೆ ಹಾಕಲಾಗಿತ್ತು. ಫೆಲೆಸ್ತೀನಿಯರ ಸ್ವಯಂ ನಿರ್ಧಾರದ ಹಕ್ಕನ್ನು ಬೆಂಬಲಿಸುವುದಾಗಿಯೂ ಘೋಷಣೆಯು ಪುನರುಚ್ಚರಿಸಿದೆ.
ಫೆಲೆಸ್ತೀನ್ ಬಿಕ್ಕಟ್ಟಿಗೆ ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ಪರಿಹರಿಸುವ ಕುರಿತಾಗಿ ಸ್ಪಷ್ಟವಾಗಿ ಹಾಗೂ ಬಹಿರಂಗವಾಗಿ ಬದ್ಧತೆಯನ್ನು ಪ್ರಕಟಿಸುವಂತೆ ಇಸ್ರೇಲ್ನ ನಾಯಕತ್ವಕ್ಕೆ ಘೋಷಣೆಯು ಕರೆ ನೀಡಿದೆ.
ನ್ಯೂಯಾರ್ಕ್ ಘೋಷಣೆಯಲ್ಲೇನಿದೆ?
*ಫೆಲೆಸ್ತೀನಿಯರ ವಿರುದ್ಧ ಹಿಂಸಾಚಾರ ಹಾಗೂ ಪ್ರಚೋದನೆಯನ್ನು ತಕ್ಷಣವೇ ಕೊನೆಗೊಳಿಸಬೇಕು. ತಕ್ಷಣವೇ ಎಲ್ಲಾ ವಸಾಹತು, ಭೂಕಬಳಿಕೆ ಹಾಗೂ ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಪ್ರಾಂತದಲ್ಲಿ ಅತಿಕ್ರಮಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು.
*ಯಾವುದೇ ಅತಿಕ್ರಮಣ ಯೋಜನೆ ಅಥವಾ ವಸಾಹತು ನೀತಿಯನ್ನು ಬಹಿರಂಗವಾಗಿ ಖಂಡಿಸುವುದು ಮತ್ತು ವಸಾಹತುಗಾರರ ಹಿಂಸಾಚಾರವನ್ನು ಕೊನೆಗೊಳಿಸುವುದು.
*ಫೆಲೆಸ್ತೀನ್ ಬಿಕ್ಕಟ್ಟನ್ನು ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಗಳು ಹಾಗೂ ಬಲವಾದ ಅಂತಾರಾಷ್ಟ್ರೀಯ ಖಾತರಿಗಳ ಕೊರತೆಯಿಂದಾಗಿ, ಈ ಸಂಘರ್ಷವು ಇನ್ನಷ್ಟು ಗಾಢವಾಗಲಿದೆ ಹಾಗೂ ಪ್ರಾದೇಶಿಕ ಶಾಂತಿಯು ಮರೀಚಿಕೆಯಾಗಲಿದೆ.
*ಗಾಝಾವು ಫೆಲೆಸ್ತೀನ್ ಆಡಳಿತದ ಅವಿಭಾಜ್ಯ ಭಾಗವಾಗಿದೆ ಹಾಗೂ ಅದನ್ನು ಪಶ್ಚಿಮದಂಡೆಯೊಂದಿಗೆ ಏಕೀಕರಿಸಬೇಕಾಗಿದೆ ಅಲ್ಲಿ ಯಾವುದೇ ಅತಿಕ್ರಮಣ, ದಿಗ್ಬಂಧನ ಅಥವಾ ಪ್ರಾದೇಶಿಕ ವಿಸ್ತೀರ್ಣವನ್ನು ಕಡಿಮೆಗೊಳಿಸುವುದಾಗಲಿ ಅಥವಾ ಬಲವಂತದ ಸ್ಥಳಾಂತರವಾಗಲಿ ನಡೆಯಕೂಡದು.