ಕೆನಡಾ ಪ್ರಧಾನಿ ಪದತ್ಯಾಗ ಬಳಿಕ ಹಾರ್ವರ್ಡ್ ಆಡಳಿತ ಮಂಡಳಿಗೆ ಭಾರತ ಮೂಲದ ಸಿಇಓ

ಅಂಜಲಿ ಸೂದ್ PC: x.com/anjsud
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದ ಪರಿಣತರು ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿದ್ದು, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಎರಡು ಪ್ರತಿಷ್ಠಿತ ಹುದ್ದೆಗಳಿಗೆ ಭಾರತ ಮೂಲದವರು ಚುನಾಯಿತರಾಗಿದ್ದಾರೆ.
ಸ್ಟ್ರೀಮಿಂಗ್ ಪ್ಲಾಟ್ ಫಾರಂ ಟೂಬಿ ಸಿಇಓ ಆಗಿರುವ ಅಂಜಲಿ ಸೂದ್ ಅವರು ಹಾರ್ವಡ್ ವಿವಿಯ ಅಡಳಿತ ಮಂಡಳಿಗಳಲ್ಲೊಂದಾದ ಸಾಗರೋತ್ತರ ಮಂಡಳಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಬ್ಯಾಂಕ್ ಆಫ್ ಕೆನಡಾ ಗವರ್ನರ್ ಆಗಿದ್ದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮಾರ್ಚ್ 9ರಂದು ಆಡಳಿತ ಮಂಡಳಿ ಸದಸ್ಯತ್ವ ತ್ಯಜಿಸಿದ್ದರಿಂದ ಅವರ ಅಧಿಕಾರಾವಧಿಯ ಉಳಿಕೆ ಅವಧಿಗೆ ಅಂಜಲಿ ಚುನಾಯಿತರಾಗಿದ್ದಾರೆ.
ಅಂಜಲಿ ಪೋಷಕರು ಪಂಜಾಬ್ ನಿಂದ ಡೆಟ್ರಾಯಿಟ್ ಗೆ 1983ರಲ್ಲಿ ವಲಸೆ ಬಂದಿದ್ದು, ಅಂಜಲಿ ತಮ್ಮ ವೃತ್ತಿಪರ ಹಾಗೂ ನಾಯಕತ್ವ ಕೌಶಲದಿಂದ ಈ ಉನ್ನತ ಸ್ಥಾನಕ್ಕೇರಿದ್ದಾರೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ 2011ರಲ್ಲಿ ಎಂಬಿಎ ಪದವಿ ಪಡೆದ ಸೂದ್ ಅಮೆಜಾನ್, ಟೈಮ್ ವಾನರ್ಘರ್, ವಿಮಿಯೊ ಸೇರಿದಂತೆ ಹಲವು ಕಡೆಗಳಲ್ಲಿ ನಾಯಕತ್ವ ಪಾತ್ರವನ್ನು ನಿಭಾಯಿಸಿದ್ದರು.
ಅಂತೆಯೇ ಹವಾಗುಣ ಮತ್ತು ಸುಸ್ಥಿರತೆ ತಜ್ಞ ಸಂಜಯ್ ಸೇಥ್ ಅವರು ಹಾರ್ವರ್ಡ್ ಹಳೆವಿದ್ಯಾರ್ಥಿ ಸಂಘದ ಹೊಸ ನಿರ್ದೇಶಕರಾಗಿಯೂ ಆಯ್ಕೆಯಾಗಿದ್ದಾರೆ. ಜುಲೈ 1ರಿಂದ ಅವರ ಮೂರು ವರ್ಷಗಳ ಅಧಿಕಾರಾವಧಿ ಆರಂಭವಾಗಲಿದೆ.