ವಿಶ್ವಸಂಸ್ಥೆಯ ನೆರವು ಟ್ರಕ್ ನಿಂದ ಆಹಾರ ಕಸಿದುಕೊಂಡ ಹಸಿದ ಫೆಲೆಸ್ತೀನ್ ನಾಗರೀಕರು
ಗಾಝಾದ ನೆರವಿನ ಮಾರ್ಗಗಳನ್ನು ಮುಚ್ಚಿದ ಇಸ್ರೇಲ್ ವಿರುದ್ಧ ಆಕ್ರೋಶ

PC ; NDTV
ಟೆಲ್ ಅವೀವ್: ಇಸ್ರೇಲ್ ಸೇನಾಪಡೆಗಳು ಗಾಝಾ ಪಟ್ಟಿಯ ಎಲ್ಲ ಮಾರ್ಗಗಳನ್ನು ಮುಚ್ಚಿರುವುದರಿಂದ, ಯುದ್ಧಪೀಡಿತ ಫೆಲೆಸ್ತೀನಿಯನ್ನರಿಗಾಗಿ ಟ್ರಕ್ ಒಂದರಲ್ಲಿ ಸಾಗಿಸುತ್ತಿದ್ದ ಹತ್ತಾರು ಆಹಾರ ಸಾಮಗ್ರಿಗಳನ್ನು ಹಸಿವು ಪೀಡಿತ ಫೆಲೆಸ್ತೀನಿಯನ್ನರು ಮಾರ್ಗಮಧ್ಯದಲ್ಲೇ ಕೆಳಗಿಳಿಸಿದ್ದಾರೆ ಎಂದು ಶನಿವಾರ ವಿಶ್ವ ಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆ ಹೇಳಿದೆ.
ಫೆಲೆಸ್ತೀನ್ ಹಾಗೂ ಇಸ್ರೇಲ್ ನಡುವಿನ ಕದನ ವಿರಾಮ ಮಾತುಕತೆಗಳು ತೆವಳುತ್ತಾ ಸಾಗಿರುವಾಗಲೇ, ಇಸ್ರೇಲ್ ಸೇನಾಪಡೆಗಳು ಗಾಝಾ ಪಟ್ಟಿ ಮಾರ್ಗಗಳನ್ನು ತಿಂಗಳಾನುಗಟ್ಟಲೆಯಿಂದ ಮುಚ್ಚಿರುವುದರಿಂದ, ಫೆಲೆಸ್ತೀನಿಯನ್ನರಲ್ಲಿ ಹತಾಶೆ ಹೆಚ್ಚಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಬಹುತೇಕ ಗೋಧಿ ಹಿಟ್ಟು ಸೇರಿದಂತೆ ನೆರವಿನ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ 77 ಟ್ರಕ್ ಗಳನ್ನು ಹಸಿವು ಪೀಡಿತ ಫೆಲೆಸ್ತೀನಿಯನ್ನರು ಮಾರ್ಗಮಧ್ಯದಲ್ಲೇ ತಡೆದಿದ್ದು, ಟ್ರಕ್ ಗಳು ತಮ್ಮ ಗಮ್ಯ ಸ್ಥಾನ ತಲುಪುದಕ್ಕೂ ಮುನ್ನವೇ ಅವುಗಳಿಂದ ಆಹಾರ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ ಎಂದು ವಿಶ್ವ ಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆ ತಿಳಿಸಿದೆ.
ಸುಮಾರು ಮೂರು ತಿಂಗಳಿನಿಂದ ಇಸ್ರೇಲ್ ಸೇನಾಪಡೆಗಳು ಗಾಝಾ ಪಟ್ಟಿಯ ಮಾರ್ಗಗಳನ್ನು ಮುಚ್ಚಿರುವುದರಿಂದ, ಫೆಲೆಸ್ತೀನಿನ ಜನರು ಹಸಿವಿನಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಕೆಲವು ನೆರವು ಸಾಮಗ್ರಿಗಳು ಗಾಝಾ ಪಟ್ಟಿಯನ್ನು ಪ್ರವೇಶಿಸಲು ಇಸ್ರೇಲ್ ಸೇನಾ ಪಡೆ ಅನುಮತಿ ನೀಡಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಕೊಂಚ ಮಟ್ಟಿಗೆ ಒತ್ತಡ ಕಡಿಮೆಯಾಗಿದೆ. ಹೀಗಿದ್ದೂ, ಸಾಕಷ್ಟು ಆಹಾರ ಸಾಮಗ್ರಿಗಳು ಗಾಝಾ ಪಟ್ಟಿಯನ್ನು ಪ್ರವೇಶಿಸುತ್ತಿಲ್ಲ ಎಂದು ವಿಶ್ವ ಆಹಾರ ಕಾರ್ಯಕ್ರಮ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಈ ನಡುವೆ, ಅಮೆರಿಕದ ತಾತ್ಕಾಲಿಕ ಕದನ ವಿರಾಮ ಪ್ರಸ್ತಾವನೆಯನ್ನು ಪರಾಮರ್ಶಿಸಲಾಗುತ್ತಿದೆ ಎಂದು ಶುಕ್ರವಾರ ಹಮಾಸ್ ಹೇಳಿದೆ. ಈ ಸಂಬಂಧ, ಸಂಧಾನಕಾರರು ಒಪ್ಪಂದವೊಂದರ ಹತ್ತಿರದಲ್ಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮವೇನಾದರೂ ಏರ್ಪಟ್ಟರೆ, 60 ದಿನಗಳ ಕಾಲ ಯುದ್ಧ ನಿಲುಗಡೆಯಾಗಲಿದ್ದು, ಇಸ್ರೇಲ್ ನಿಂದ 60 ಮಂದಿ ಫೆಲೆಸ್ತೀನ್ ಕೈದಿಗಳು ಬಿಡುಗಡೆಯಾಗಿ, ಅತ್ಯವಶ್ಯಕ ಆಹಾರ ಮತ್ತಿತರ ನೆರವುಗಳಿಗೆ ದೊರೆಯುವ ಅವಕಾಶಗಳಿಗೆ ಪ್ರತಿಯಾಗಿ ಈಗಲೂ ಗಾಝಾದಲ್ಲಿರುವ 58 ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಹೆಸರೇಳಲಿಚ್ಛಿಸದ ಹಮಾಸ್ ಹಾಗೂ ಈಜಿಪ್ಟ್ ಅಧಿಕಾರಿಗಳು ತಿಳಿಸಿದ್ದಾರೆ.