ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ಇಸ್ರೇಲ್ ಘೋಷಣೆ

ಸಾಂದರ್ಭಿಕ ಚಿತ್ರ | PC : NDTV
ಗಾಝಾ,ಸೆ.16: ಹಮಾಸ್ ನ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಪಡಿಸಲು ಗಾಝಾ ನಗರದಲ್ಲಿ ತಾನು ನಡೆಸುತ್ತಿರುವ ಕಾರ್ಯಾಚರಣೆಯನ್ನು ವಿಸ್ತರಿಸಿರುವುದಾಗಿ ಇಸ್ರೇಲ್ ಸೇನೆ ಮಂಗಳವಾರ ಘೋಷಿಸಿದೆ.
ಸೋಮವಾರ ರಾತ್ರಿ ಗಾಝಾ ನಗರದ ವಿವಿಧೆಡೆ ಭಾರೀ ವಾಯುದಾಳಿಗಳನ್ನು ನಡೆಸಿದ ಬಳಿಕ ಇಸ್ರೇಲ್ ಈ ಹೇಳಿಕೆ ನೀಡಿದೆ.
‘ಗಾಝಾ ಹೊತ್ತಿ ಉರಿಯುತ್ತಿದೆ’ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರಾಯೇಲ್ ಕಾಟ್ಜ್ ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಮಿಲಿಟರಿ ವಕ್ತಾರ ಅೃಚಾರ್ ಆದ್ರಾಯಿ ಅವರು ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಯನ್ನು ವಿಸ್ತರಿಸುವ ಘೋಷಣೆ ಮಾಡಿದ್ದಾರೆ.
ಇಸ್ರಾಯೇಲ್ ಕಾಟ್ಝ್ ಅವರು ಮಂಗಳವಾರ ಬೆಳಗ್ಗೆ ಹೇಳಿಕೆಯೊಂದನ್ನು ನೀಡಿ, ‘‘ಇಸ್ರೇಲ್ ಸೇನೆಯು ಹಮಾಸ್ ನೆಲೆಗಳ ಮೇಲೆ ಕಬ್ಬಿಣದ ಮುಷ್ಟಿಯೊಂದಿಗೆ ಪ್ರಹಾರವನ್ನು ನಡೆಸುತ್ತಿದೆ. ಒತ್ತೆಯಾಳುಗಳ ಬಿಡುಗಡೆಗೆ ಪೂರಕವಾಗುವಂತಹ ಸನ್ನಿವೇಶವನ್ನು ಸೃಷ್ಟಿಸಲು ಸೈನಿಕರು ಧೀರೋದಾತ್ತವಾಗಿ ಹೋರಾಡುತ್ತಿದ್ದಾರೆ. ನಮ್ಮ ದೌತ್ಯ ಪೂರ್ಣಗೊಳ್ಳುವವರೆಗೆ ನಾವು ಪಟ್ಟುಬಿಡೆವು ಹಾಗೂ ಹಿಮ್ಮೆಟ್ಟಲಾರೆವು’’ ಎಂದು ಘೋಷಿಸಿದ್ದರು.
ಮಂಗಳವಾರ ಮುಂಜಾನೆ ಗಾಝಾ ನಗರದ ವಿವಿಎಧೆಡೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 20 ಫೆಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.