ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ವೇಳೆ ಭಾರತದ ಯುದ್ಧ ವಿಮಾನಗಳು ಪತನವಾಗಿದ್ದನ್ನು ಒಪ್ಪಿಕೊಂಡ ಸಿಡಿಎಸ್ ಜನರಲ್ ಚೌಹಾಣ್

ಚೀಫ್ ಡಿಫೆನ್ಸ್ ಸ್ಟ್ಯಾಫ್ ಜನರಲ್ ಅನಿಲ್ ಚೌಹಾಣ್| Photo: Indiatoday.in
ಸಿಂಗಾಪುರ: ಇತ್ತೀಚೆಗೆ ಪಾಕಿಸ್ತಾನದೊಂದಿಗೆ ನಡೆದ ಸೇನಾ ಸಂಘರ್ಷದಲ್ಲಿ ಭಾರತದ ಯುದ್ಧ ವಿಮಾನಗಳು ಪತನವಾಗಿದೆ ಎಂಬುದನ್ನು ಚೀಫ್ ಡಿಫೆನ್ಸ್ ಸ್ಟ್ಯಾಫ್ ಜನರಲ್ ಅನಿಲ್ ಚೌಹಾಣ್ ಅವರು ಶನಿವಾರ ಒಪ್ಪಿಕೊಂಡಿದ್ದಾರೆ. ಆದರೆ, ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆಯನ್ನು ಸಂಪೂರ್ಣ ಸುಳ್ಳು ಎಂದೂ ಅಲ್ಲಗಳೆದಿದ್ದಾರೆ.
“ಯುದ್ಧ ವಿಮಾನಗಳನ್ನು ಏಕೆ ಕಳೆದುಕೊಂಡೆವು ಎಂಬುದನ್ನು ಪತ್ತೆ ಹಚ್ಚುವುದು ತುಂಬಾ ಮುಖ್ಯವಾಗಿದೆ. ಅದರಿಂದ, ಸೇನೆಯು ತನ್ನ ತಂತ್ರಗಾರಿಕೆಯನ್ನು ಮತ್ತಷ್ಟು ಸುಧಾರಿಸಿಕೊಂಡು ತಿರುಗೇಟು ನೀಡಲು ಸಾಧ್ಯವಾಗಲಿದೆ” ಎಂದು Bloomberg TVಗೆ ನೀಡಿದ ಸಂದರ್ಶನದಲ್ಲಿ ಜನರಲ್ ಅನಿಲ್ ಚೌಹಾಣ್ ಅಭಿಪ್ರಾಯ ಪಟ್ಟಿದ್ದಾರೆ.
“ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದು ಮುಖ್ಯವಲ್ಲ; ಅವು ಯಾಕೆ ನೆಲಕ್ಕುರುಳಿದವು ಎಂಬುದು ಮುಖ್ಯ” ಎಂದೂ ಅವರು ಹೇಳಿದ್ದಾರೆ.
ಈ ವೇಳೆ, ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದೊಂದಿಗೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ಭಾರತವೇನಾದರೂ ಯುದ್ಧ ವಿಮಾನಗಳ ನಷ್ಟ ಅನುಭವಿಸಿತ್ತೆ ಎಂಬ ಪ್ರಶ್ನೆಗೆ, “ಒಳ್ಳೆಯ ಸಂಗತಿಯೆಂದರೆ, ನಮಗೆ ನಮ್ಮ ತಂತ್ರಗಾರಿಕೆಯ ಲೋಪ ಅರ್ಥವಾಗಿದೆ ಹಾಗೂ ಅದಕ್ಕೆ ಪರಿಹಾರ ಕಂಡುಕೊಂಡು, ಸರಿಪಡಿಸಿಕೊಂಡು, ಎರಡೇ ದಿನಗಳಲ್ಲಿ ಅದನ್ನು ಅನುಷ್ಠಾನಗೊಳಿಸಿದ್ದೇವೆ. ನಾವು ಮತ್ತೆ ದೂರದ ಗುರಿಗಳತ್ತ ನಮ್ಮ ವಿಮಾನಗಳನ್ನು ಚಲಾಯಿಸಿದ್ದೇವೆ” ಎಂದು ಭಾರತೀಯ ಸೇನೆ ಯುದ್ಧ ವಿಮಾನಗಳ ನಷ್ಟ ಅನುಭವಿಸಿರುವುದನ್ನು ಜನರಲ್ ಅನಿಲ್ ಚೌಹಾಣ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಆದರೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತದ ಆರು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಪ್ರತಿಪಾದನೆ ಕುರಿತು ಕೇಳಲಾದ ಪ್ರಶ್ನೆಗೆ, “ಸಂಪೂರ್ಣ ಸುಳ್ಳು” ಎಂದು ಅವರು ಅಲ್ಲಗಳೆದಿದ್ದಾರೆ.
ಇದಕ್ಕೂ ಮುನ್ನ, “ನಷ್ಟಗಳು ಯುದ್ಧದ ಭಾಗವಾಗಿವೆ” ಎಂದು ಹೇಳುವ ಮೂಲಕ, ಭಾರತೀಯ ಸೇನಾ ಪಡೆಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಯುದ್ಧ ವಿಮಾನಗಳ ನಷ್ಟ ಅನುಭವಿಸಿರುವುದನ್ನು ಭಾರತೀಯ ವಾಯು ಪಡೆಯ ವಾಯು ಕಾರ್ಯಾಚರಣೆಯ ಪ್ರಧಾನ ನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಕೂಡಾ ಒಪ್ಪಿಕೊಂಡಿದ್ದರು. ಆದರೆ, ನಮ್ಮ ಎಲ್ಲ ಪೈಲಟ್ ಗಳೂ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ ಎಂದೂ ಅವರು ಸ್ಪಷ್ಟಪಡಿಸಿದ್ದರು.
ಮೇ 11ರಂದು ನಡೆದಿದ್ದ ಮಾಧ್ಯಮ ವಿವರಣೆಗೋಷ್ಠಿಯಲ್ಲಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತದ ಯುದ್ಧ ವಿಮಾನಗಳೇನಾದರೂ ನಷ್ಟಗೊಂಡಿವೆಯೆ ಎಂದು ಕೇಳಲಾಗಿದ್ದ ಪ್ರಶ್ನೆಗೆ ಏರ್ ಮಾರ್ಷಲ್ ಭಾರ್ತಿ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದರು.
ಈ ನಡುವೆ, ಶಾಂಗ್ರಿಲಾ ಮಾತುಕತೆಯ ಭಾಗವಾಗಿ ಜನರಲ್ ಅನಿಲ್ ಚೌಹಾಣ್ ಸಿಂಗಾಪುರಕ್ಕೆ ತೆರಳಿದ್ದಾರೆ.