ಗಾಝಾದಲ್ಲಿಯ ಕ್ರಮಗಳಿಗಾಗಿ ಇಸ್ರೇಲಿಗಳಿಗೆ ಬ್ರಿಟನ್ ಮಿಲಿಟರಿ ಅಕಾಡೆಮಿ ನಿಷೇಧ

Photo : Reuters
ಲಂಡನ್,ಸೆ.15: ಬ್ರಿಟನ್ನ ಅತ್ಯಂತ ಪ್ರತಿಷ್ಠಿತ ರಕ್ಷಣಾ ಅಕಾಡೆಮಿಗಳಲ್ಲಿ ಒಂದಾಗಿರುವ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ಕ್ರಮಗಳನ್ನು ವಿರೋಧಿಸಿ ಇಸ್ರೇಲಿಗಳು ತನ್ನ ಕೋರ್ಸ್ಗಳಿಗೆ ದಾಖಲಾಗುವುದನ್ನು ನಿಷೇಧಿಸಿದೆ.
ಐರೋಪ್ಯ ಒಕ್ಕೂಟದ ಕೆಲವು ಅಧಿಕಾರಿಗಳು ಇಸ್ರೇಲ್ನ ಕ್ರಮಗಳನ್ನು ಜನಾಂಗೀಯ ಹತ್ಯೆ ಕೃತ್ಯಗಳು ಎಂದು ಇತ್ತೀಚಿಗೆ ಬಣ್ಣಿಸಿದ್ದರು.
ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ ಮುಂದಿನ ವರ್ಷದಿಂದ ಇಸ್ರೇಲಿ ವಿದ್ಯಾರ್ಥಿಗಳನ್ನು ಸ್ವೀಕರಿಸುವುದಿಲ್ಲ ಎಂದು ಬ್ರಿಟನ್ ಸರಕಾರವು ದೃಢಪಡಿಸಿದೆ.
ಪ್ರತಿ ವರ್ಷ ಬ್ರಿಟನ್ ಮತ್ತು ವಿದೇಶಗಳ ಸುಮಾರು 110 ವಿದ್ಯಾರ್ಥಿಗಳು ಕಾಲೇಜಿನ ಕೋರ್ಸ್ಗಳಿಗೆ ಸೇರುತ್ತಾರೆ. ಗಮನಾರ್ಹ ಹಳೆಯ ವಿದ್ಯಾರ್ಥಿಗಳಲ್ಲಿ ಫೀಲ್ಡ್ ಮಾರ್ಷಲ್ ಅಲನ್ ಫ್ರಾನ್ಸಿಸ್ ಬ್ರೂಕ್ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೂ ಸೇರಿದ್ದಾರೆ.
1927ರಲ್ಲಿ ಸ್ಥಾಪನೆಯಾದಾಗಿನಿಂದ ಕಾಲೇಜು ಇದೇ ಮೊದಲ ಬಾರಿಗೆ ಇಸ್ರೇಲಿಗಳನ್ನು ನಿಷೇಧಿಸಿದೆ. ಗಾಜಾದಲ್ಲಿ ನರಮೇಧಗಳಿಗೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ಧ ಬ್ರಿಟನ್ ಸರಕಾರದ ಇತ್ತೀಚಿನ ದಂಡನಾತ್ಮಕ ಕ್ರಮಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಬ್ರಿಟಿಷ್ ಮಿಲಿಟರಿ ಶೈಕ್ಷಣಿಕ ಕೋರ್ಸ್ಗಳು ವಿವಿಧ ದೇಶಗಳ ಸಿಬ್ಬಂದಿಗಳಿಗೆ ಮುಕ್ತವಾಗಿವೆ ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಅನುಸರಿಸಲು ಒತ್ತು ನೀಡುತ್ತವೆ ಎಂದು ಹೇಳಿದ ರಕ್ಷಣಾ ಸಚಿವಾಲಯದ ವಕ್ತಾರರು, ಆದಾಗ್ಯೂ ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸುವ ಇಸ್ರೇಲ್ ಸರಕಾರದ ನಿರ್ಧಾರ ತಪ್ಪಿನಿಂದ ಕೂಡಿದೆ. ಈ ಯುದ್ಧವನ್ನು ಈಗಲೇ ಅಂತ್ಯಗೊಳಿಸಲು ತಕ್ಷಣದ ಕದನ ವಿರಾಮ, ಒತ್ತೆಯಾಳುಗಳ ವಾಪಸಾತಿ ಮತ್ತು ಗಾಝಾದ ಜನರಿಗೆ ಹೆಚ್ಚಿನ ಮಾನವೀಯ ನೆರವಿನೊಂದಿಗೆ ರಾಜತಾಂತ್ರಿಕ ಪರಿಹಾರದ ಅಗತ್ಯವಿದೆ ಎಂದರು.
ಬ್ರಿಟನ್ ಸರಕಾರವು ಕಳೆದ ವಾರ ನಡೆದಿದ್ದ ದೇಶದ ಅತ್ಯಂತ ದೊಡ್ಡ ಶಸ್ತ್ರಾಸ್ತ್ರಗಳ ಪ್ರದರ್ಶನದಲ್ಲಿ ಇಸ್ರೇಲಿ ಅಧಿಕಾರಿಗಳು ಭಾಗವಹಿಸುವುದನ್ನು ನಿಷೇಧಿಸಿತ್ತು. ಇಸ್ರೇಲ್ ಗಾಝಾದ ಕರಾವಳಿ ಪ್ರದೇಶದಲ್ಲಿ ಕದನ ವಿರಾಮಕ್ಕೆ ಒಪ್ಪದಿದ್ದರೆ ಮತ್ತು ಪಶ್ಚಿಮ ದಂಡೆಯನ್ನು ವಶಪಡಿಸಿಕೊಳ್ಳುವ ತನ್ನ ಹಟವನ್ನು ಬಿಡದಿದ್ದರೆ ಈ ತಿಂಗಳ ಉತ್ತರಾರ್ಧದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಫೆಲೆಸ್ತೀನ್ ಅನ್ನು ಸಾರ್ವಭೌಮ ದೇಶವಾಗಿ ಮಾನ್ಯತೆ ನೀಡುವುದಾಗಿಯೂ ಅದು ಸ್ಪಷ್ಟಪಡಿಸಿದೆ.