ಗೃಹಬಂಧನದ ಬೆನ್ನಲ್ಲೇ ಬ್ರೆಝಿಲ್ ಮಾಜಿ ಅಧ್ಯಕ್ಷ ಅಸ್ವಸ್ಥ; ಆಸ್ಪತ್ರೆಗೆ ದಾಖಲು

PC: x.com/FRANCE24
ಬ್ರೆಝಿಲಿಯಾ: ನ್ಯಾಯಾಲಯದ ಆದೇಶದಂತೆ ಗೃಹಬಂಧನಕ್ಕೆ ಒಳಗಾಗಿರುವ ಬ್ರೆಝಿಲ್ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬಿಗಿಭದ್ರತೆ ನಡುವೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪುತ್ರ ಫ್ಲಾವಿಯೊ ಹೇಳಿದ್ದಾರೆ.
ತೀವ್ರ ,ವಾಂತಿ ಮತ್ತು ರಕ್ತದ ಒತ್ತಡ ಕುಸಿತ ಮುಂತಾದ ತುರ್ತು ಆರೋಗ್ಯಸ್ಥಿತಿ ನಿರ್ಮಾಣವಾಗಿದ್ದು, "ದೇಶದ ಪ್ರತಿಯೊಬ್ಬರೂ ಇದು ಗಂಭೀರವಾಗಿರದಿರಲಿ ಎಂದು ಪ್ರಾರ್ಥಿಸಿ" ಎಂದು ಕೋರಿದ್ದಾರೆ.
2022ರ ಚುನಾವಣೆಯಲ್ಲಿ ಲೂಯಿಸ್ ಇನಾಸಿಯೊ ಲೂಲಾ ಡಸಿಲ್ವಾ ವಿರುದ್ಧ ಸೋತ ಬಳಿಕ ಕ್ಷಿಪ್ರಕ್ರಾಂತಿಯ ಸಂಚು ಹೂಡಿದ ಆರೋಪದಲ್ಲಿ ಕಳೆದ ವಾರ ಬೊಲ್ಸೊನಾರೊಗೆ 27 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರ ವಕೀಲರು ಹೇಳಿದ್ದಾರೆ.
ಭಾನುವಾರ ಅವರ ಎಂಟು ಚರ್ಮದ ಅಂಗಾಂಶಗಳನ್ನು ಬಯಾಪ್ಸಿಗಳಿಗಾಗಿ ಪಡೆಯಲಾಗಿದೆ. ಬೊಲ್ಸನಾರೊ ತೀರಾ ದುರ್ಬಲರಾಗಿದ್ದಾರೆ ಎಂದು ಅವರ ವೈದ್ಯ ಕ್ಲಾಡಿಯೊ ಬಿರೊಲಿನಿ ಹೇಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದು, ರಕ್ತಹೀನತೆಯ ಸಮಸ್ಯೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.