ಚೀನಾದಿಂದ ಅತಿ ಉತ್ಪಾದನೆ: ಅಮೆರಿಕದ ಹೇಳಿಕೆ ತಿರಸ್ಕರಿಸಿದ ಬೀಜಿಂಗ್

PC | Reuters
ಬೀಜಿಂಗ್, ಸೆ.15: ಜಾಗತಿಕ ಮಾರುಕಟ್ಟೆಯ ಸಾಮಥ್ರ್ಯಕ್ಕಿಂತ ಹೆಚ್ಚಿನ ಸರಕುಗಳನ್ನು ಚೀನಾ ಉತ್ಪಾದಿಸುತ್ತಿದ್ದು ಇದು ವ್ಯಾಪಾರ ಹರಿವನ್ನು ವಿರೂಪಗೊಳಿಸುತ್ತದೆ ಎಂಬ ಅಮೆರಿಕದ ಡೆಮಾಕ್ರಟಿಕ್ ನಾಯಕರ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಚೀನಾ ಸೋಮವಾರ ಹೇಳಿದೆ.
`ರಚನಾತ್ಮಕ ಅತಿ ಉತ್ಪಾದನೆಯನ್ನು' ಕಡಿಮೆಗೊಳಿಸುವಂತೆ ಚೀನಾದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರಬೇಕು. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಚೀನಾದಿಂದ `ರಚನಾತ್ಮಕ ಅಧಿಕ ಉತ್ಪಾದನೆಯ' ನೀತಿಯ ಐತಿಹಾಸಿಕ ಮತ್ತು ವಿನಾಶಕಾರಿ ಬಳಕೆಯು ಅಮೆರಿಕದ ಉದ್ಯಮ, ಉದ್ಯೋಗ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ಸ್ಥಿರತೆಯ ಮೇಲೆ ಮಾರಕ ಹೊಡೆತ ನೀಡುತ್ತಿದೆ. ಆದ್ದರಿಂದ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಚೀನಾದ ಕೈಗಾರಿಕಾ ನೀತಿಗಳಿಗೆ ಪ್ರತಿಯಾಗಿ ಅಂತರಾಷ್ಟ್ರೀಯ ಪ್ರತಿಕ್ರಿಯೆಯನ್ನು ಸಂಘಟಿಸಬೇಕು ಎಂದು ಡೆಮಾಕ್ರಟಿಕ್ ನಾಯಕರು ಪತ್ರದಲ್ಲಿ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಈ ಹೇಳಿಕೆ ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಖಂಡಿಸಿದ್ದಾರೆ.
`ಚೀನಾದಿಂದ ಅತಿ ಉತ್ಪಾದನೆ' ಎಂಬ ಉತ್ಪ್ರೇಕ್ಷಿತ ಹೇಳಿಕೆಯು ವಸ್ತುನಿಷ್ಠ ಸಂಗತಿ ಮತ್ತು ಆರ್ಥಿಕ ಕಾನೂನುಗಳಿಗೆ ವಿರುದ್ಧವಾಗಿದೆ. ಚೀನಾದ ಅತ್ಯುನ್ನತ ಗುಣಮಟ್ಟದ ಅಭಿವೃದ್ಧಿಯನ್ನು ನಿಗ್ರಹಿಸುವುದು ಇದರ ನಿಜವಾದ ಉದ್ದೇಶವಾಗಿದ್ದು ಇದನ್ನು ದೃಢವಾಗಿ ವಿರೋಧಿಸುತ್ತೇವೆ' ಎಂದವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.