ಪ್ರತಿಭೆ ಹೊರ ಬರಲು ಅವಕಾಶ ಕಲ್ಪಿಸಬೇಕು: ಕೆ.ವಿ.ಪ್ರಭಾಕರ್
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಹಾವೇರಿ : ರಾಗಿ ಕಾಳಿಗೆ ಭೂಮಿಯನ್ನೇ ಸೀಳಿಕೊಂಡು ಮೇಲೆ ಬರುವ ಶಕ್ತಿ ಇರಬಹುದು. ಆದರೆ, ರಾಗಿ ಮೊಳಕೆಯೊಡೆಯಲು ಹದವಾದ ಭೂಮಿ ಸಿಗಬೇಕು. ನೀರು, ಗೊಬ್ಬರ ಬೇಕು. ಪ್ರತಿಭೆಯೂ ಹಾಗೆಯೇ. ಹದವಾದ ಅವಕಾಶ ಸಿಕ್ಕಾಗ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಹಾವೇರಿಯಲ್ಲಿ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ಯಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದು ಹೊರಗೆ ಬರಲು ಅವಕಾಶ ಬೇಕು. ಸಮಾಜ ಆ ಅವಕಾಶವನ್ನು ಒದಗಿಸುತ್ತದೆ. ಸಮಾಜವೇ ಪ್ರತಿಭೆ ಹೊರಗೆ ಬರಲು ಹದವಾದ ಭೂಮಿಯ ಹಾಗೆ ಕೆಲಸ ಮಾಡುತ್ತದೆ. ಆದ್ದರಿಂದ ಸಮಾಜದ ಋಣ ನಮ್ಮ ಮೇಲಿರುತ್ತದೆ. ನಾವು ಸಮಾಜಮುಖಿಗಳಾಗುವ ಮೂಲಕ ಸಮಾಜದ ಈ ಋಣವನ್ನು ತೀರಿಸಬೇಕಿದೆ ಎಂದರು.
ನಿಮ್ಮ ಹಾಗೆಯೇ ಪ್ರತಿಭೆ ಇರುವ ಹಾಗೂ ಅವಕಾಶ ಇಲ್ಲದ ಮಕ್ಕಳು ಸಮಾಜದಲ್ಲಿ ಲಕ್ಷಾಂತರ ಇದ್ದಾರೆ. ಶಾಲೆಗೆ ಹೋಗಲು ಸಾಧ್ಯವಿಲ್ಲದೆ ಬೆಳಗ್ಗೆ ಹಾಲು ಮಾರುತ್ತಾ, ಹೂ-ತರಕಾರಿ-ಹಣ್ಣು ಮಾರುತ್ತಾ, ಗ್ಯಾರೇಜ್ ಗಳಲ್ಲಿ, ಕಾರ್ಖಾನೆಗಳಲ್ಲಿ ದಿನಗೂಲಿಗಳಾಗಿ ದುಡಿಯುತ್ತಿರುವ ಮಕ್ಕಳು ಇದ್ದಾರೆ. ಈ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದಾರೆ ಎಂದರೆ, ದೇಶದ-ರಾಜ್ಯದ ಆರ್ಥಿಕ ಉತ್ಪತ್ತಿಯಲ್ಲಿ ತೊಡಗಿದ್ದಾರೆ ಅಂತಲೇ ಅರ್ಥ ಎಂದರು.
ಪ್ರತಿನಿತ್ಯ ಬೆಳಗ್ಗೆ ಎದ್ದು ಕೊಟ್ಟಿಗೆಯಲ್ಲಿ ಸೆಗಣಿ ಬಾಚಿ, ಹಾಲು ಕರೆದು, ಮನೆಗಳಿಗೆ ಹಾಲು ಹಾಕಿ ಶಾಲೆಗೆ ಬರುವ ಮಕ್ಕಳು ಏಕ ಕಾಲಕ್ಕೆ ಮನೆಯ ಮತ್ತು ದೇಶದ ಆರ್ಥಿಕ ಅಗತ್ಯಗಳನ್ನು ಈಡೇರಿಸಿ ಬರುತ್ತಾರೆ. ಬೆಳಗ್ಗೆ ಎದ್ದು ನೇರವಾಗಿ ತಿಂಡಿ ತಿಂದು, ಬಸ್ಸು-ಕಾರುಗಳಲ್ಲಿ ಶಾಲೆಗೆ ಬರುವ ಮಕ್ಕಳಿಗಿಂತ ಸೆಗಣಿ ಬಾಚಿ ಶಾಲೆಗೆ ಬರುವ ಮಕ್ಕಳು ಶೇ.50ರಷ್ಟು ಅಂಕ ಗಳಿಸಿದರೂ ಇವರ ಸಾಮಾಜಿಕ ಕೊಡುಗೆ ದೊಡ್ಡದಾಗಿರುತ್ತದೆ. ಆದ್ದರಿಂದ ಪ್ರತಿಭೆ ಅಂದ ಕೂಡಲೇ ಅಂಕಪಟ್ಟಿ ಮಾತ್ರವೇ ಅಲ್ಲ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಹಾಗೆಯೇ, ಇಂದು ಪುರಸ್ಕಾರಗೊಳ್ಳುತ್ತಿರುವ ಮಕ್ಕಳು ಒಂದು ಮಾತು ನೆನಪಿಡಬೇಕು. ಕಲಿಕೆಯ ಕುತೂಹಲ ಮತ್ತು ಅಧ್ಯಯನಶೀಲತೆ ಇಲ್ಲದಿದ್ದರೆ ನಿಮ್ಮೊಳಗಿನ ಪ್ರತಿಭೆ ಬಾಡುತ್ತದೆ. ಮೊಬೈಲ್, ಟ್ಯಾಬ್‍ಗಳ ಗೀಳು ನಿಮ್ಮೊಳಗಿನ ಸೃಜನಶೀಲತೆಯನ್ನು ಕೊಂದು ಪ್ರತಿಭಾಶೂನ್ಯರನ್ನಾಗಿಸುತ್ತದೆ ಎಂದು ಅವರು ತಿಳಿಸಿದರು.
ಲಂಕೇಶ್ ಮಾದರಿ: ಇಲ್ಲಿರುವವರೆಲ್ಲಾ ಪತ್ರಕರ್ತರ ಮಕ್ಕಳೇ ಆಗಿರುವುದರಿಂದ ಪತ್ರಕರ್ತ ಲಂಕೇಶ್ ಅವರ ಉದಾಹರಣೆಯನ್ನೇ ಕೊಡುತ್ತೇನೆ. ಲಂಕೇಶ್ ನಿಧನರಾಗಿ ಅವರ ಮೃತದೇಹವನ್ನು ಹಾಸಿಗೆಯಿಂದ ಮೇಲೆತ್ತಿದಾಗ ಕೆಳಗೆ ಭಾಷಾ ವಿಜ್ಞಾನಿ ಡಿ.ಎನ್.ಶಂಕರಭಗಟ್ಟರ ‘ಕನ್ನಡ ಶಬ್ದ ರಚನೆ’ ಪುಸ್ತಕವಿತ್ತು. ಲಂಕೇಶ್‍ರ ಕೊನೆಯ ದಿನಗಳಲ್ಲಿ ಒಂದು ಕಣ್ಣು ಪೂರ್ತಿ ಹೋಗಿತ್ತು. ಮತ್ತೊಂದು ತೊಂದರೆ ಕೊಡುತ್ತಿತ್ತು. ಆದರೂ ಸಾವಿನ ಕೊನೆ ಕ್ಷಣದವರೆಗೂ ನೆಪ ಹೇಳದೆ ಓದುತ್ತಿದ್ದರು. ನಿಧನರಾಗುವ ಕೊನೆ ಕ್ಷಣದರೆಗೂ ಎರಡು ಲೇಖನಗಳನ್ನು ಬರೆದು ಕಣ್ಣು ಮುಚ್ಚಿದರು ಎಂದು ಅವರು ಸ್ಮರಿಸಿದರು.
ನಾವೆಲ್ಲಾ ಶಾಲೆಯಲ್ಲಿ ಓದುವ ವೇಳೆ ಬೆಲೆ ಏರಿಕೆ, ಬಸ್ ದರ ಏರಿಕೆ ವಿರುದ್ಧ ಪ್ರತಿಭಟನೆಗಳು ನಡೆದಾಗ ಆ ಬಗ್ಗೆ ತಿಳಿದುಕೊಳ್ಳುತ್ತಿದ್ದೆವು. ನಮ್ಮ ಅಪ್ಪ-ಅಮ್ಮ ದುಡಿದ ಹಣ ಎಲ್ಲಿ, ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದೆವು. ಆ ಮೂಲಕ ನಮ್ಮ ಸಾಮಾಜಿಕ ಪ್ರಜ್ಞೆ ಬೆಳೆಯುತ್ತಿತ್ತು. ಈಗ ಯಾವುದಾದರೂ ಪ್ರತಿಭಟನೆ ನಡೆದು ಶಾಲೆ-ಕಾಲೇಜಿಗೆ ರಜೆ ಕೊಟ್ಟರೆ ಸೀದಾ ಮೊಬೈಲ್ ಹಿಡಿದು ಕೂರುವ, ಮಾಲ್‍ಗಳಿಗೆ ಓಡುವವರೇ ಹೆಚ್ಚು. ಈ ಮಕ್ಕಳ ಸಾಮಾಜಿಕ ತಿಳುವಳಿಕೆ ಬೆಳೆಯುವುದೇ ಇಲ್ಲ. ಇವರಿಗೆ ಮುಖ್ಯಮಂತ್ರಿ ಯಾರು, ರಾಷ್ಟ್ರಪತಿ, ಪ್ರಧಾನಮಂತ್ರಿ ಯಾರು ಎನ್ನುವುದೇ ಗೊತ್ತಿರುವುದಿಲ್ಲ ಎಂದು ಅವರು ಹೇಳಿದರು.