ದೇಶಭಕ್ತಿಯ ಕಿಚ್ಚನ್ನು ಪ್ರತಿಯೊಬ್ಬರೂ ಜೀವಂತವಾಗಿರಿಸಿಕೊಳ್ಳಬೇಕು : ಸ್ಪೀಕರ್ ಯು.ಟಿ.ಖಾದರ್

ರಾಣೆಬೆನ್ನೂರು, ಆ.15 : ಐತಿಹಾಸಿಕ, ಸೇನಾ ಪರಾಕ್ರಮದ ಟಿ-55 ಯುದ್ಧ ಟ್ಯಾಂಕರ್‌ಅನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ತಾಲೂಕು ಕಚೇರಿಯ ಬಳಿ ಪ್ರತಿಷ್ಠಾಪಿಸಲಾಗಿದೆ.
ರಾಣೆಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರ ನೇತೃತ್ವದಲ್ಲಿ 79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಈ ಟ್ಯಾಂಕರ್ ಅನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಯು.ಟಿ.ಖಾದರ್, ರಾಣೆಬೆನ್ನೂರಿನಲ್ಲಿ ಟಿ-55 ಟ್ಯಾಂಕರ್‌ಅನ್ನು ಪ್ರದರ್ಶನಕ್ಕೆ ಇಟ್ಟಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಇದು ನಮ್ಮ ಯುವಪೀಳಿಗೆಯು ದೇಶದ ಸೇನಾ ಇತಿಹಾಸವನ್ನು ಅರಿಯಲು ಮತ್ತು ಗೌರವಿಸಲು ಸ್ಫೂರ್ತಿ ನೀಡುತ್ತದೆ. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಮ್ಮ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಧೈರ್ಯ ಮತ್ತು ಹುರುಪನ್ನು ಯುವಕರು ಅರ್ಥಮಾಡಿಕೊಳ್ಳಬೇಕು. ಈ ವಿಶೇಷ ಸಂದರ್ಭದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಅತೀವ ಸಂತಸವಿದೆ. ನಮ್ಮ ಇತಿಹಾಸವನ್ನು ಅರಿತು, ದೇಶಭಕ್ತಿಯ ಕಿಚ್ಚನ್ನು ಪ್ರತಿಯೊಬ್ಬರೂ ಜೀವಂತವಾಗಿರಿಸಿಕೊಳ್ಳಬೇಕೆಂದು ಯುವಜನತೆಗೆ ಕರೆ ನೀಡಿದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, 1965 ಮತ್ತು 1971ರ ಯುದ್ಧಗಳಲ್ಲಿ ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿದ್ದ ಟಿ-55 ಟ್ಯಾಂಕರ್, ಇಂದು ನಮ್ಮ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಪ್ರತಿಷ್ಠಾಪನೆಗೊಂಡಿದೆ. ಇದು ಕೇವಲ ಉಕ್ಕಿನ ತುಣುಕಲ್ಲ. ಬದಲಾಗಿ ನಮ್ಮ ಸೈನಿಕರ ಅಚಲ ಧೈರ್ಯದ ಜೀವಂತ ಸಂಕೇತ. ಈ ಶಾಶ್ವತ ಪರಂಪರೆಯು ಪ್ರತಿಯೊಬ್ಬ ನಾಗರಿಕರಲ್ಲಿ, ವಿಶೇಷವಾಗಿ ನಮ್ಮ ಯುವಜನರಲ್ಲಿ, ದೇಶಭಕ್ತಿ ಮತ್ತು ನಿಸ್ವಾರ್ಥ ರಾಷ್ಟ್ರಸೇವೆಯ ಜ್ವಾಲೆಯನ್ನು ಸದಾ ಬೆಳಗಿಸುತ್ತಿರಲಿ ಎಂದು ಹಾರೈಸುತ್ತೇನೆ. ಈ ಉಪಕ್ರಮವು ಭಾರತೀಯ ಸೈನಿಕರ ಶೌರ್ಯವನ್ನು ಸ್ಮರಿಸುವುದರ ಜೊತೆಗೆ, ಕರ್ನಾಟಕದ ಶ್ರೀಮಂತ ಸೇನಾ ಪರಂಪರೆಯನ್ನು ಸಂರಕ್ಷಿಸಿ, ಪ್ರೋತ್ಸಾಹಿಸುವ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದರು.
ಟಿ-55 ಟ್ಯಾಂಕರ್ ಅನ್ನು ಮಹಾರಾಷ್ಟ್ರದ ಪುಣೆಯ ಕಿರ್ಕಿ ಸೆಂಟ್ರಲ್ ಆರ್ಮಿ ಫೈಟಿಂಗ್ ವೆಹಿಕಲ್ ಡಿಪೋದಿಂದ ಆ.6 ರಂದು ತರಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ತಲುಪಲು ಅನುಕೂಲಕರವಾದ ತಾಲೂಕು ಕಚೇರಿ ಬಳಿ ಇದನ್ನು ಶಾಶ್ವತವಾಗಿ ಸ್ಥಾಪಿಸಲಾಗಿದೆ.
ʼಶಿವಶಕ್ತಿʼ ಟ್ಯಾಂಕರ್ :
ಭಾರತ ಸರಕಾರವು 1966-77ರ ಅವಧಿಯಲ್ಲಿ ಟಿ-55 ಮಾದರಿಯ ಯುದ್ಧ ಟ್ಯಾಂಕರ್ಗಳನ್ನು ಖರೀದಿಸಿತ್ತು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ, 1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಟಿ-55 ಟ್ಯಾಂಕ್ ಅನ್ನು ರಶ್ಯದಿಂದ ಖರೀದಿಸಿ ಅದಕ್ಕೆ ‘ಶಿವಶಕ್ತಿ’ ಎಂದು ಹೆಸರಿಡಲಾಗಿತ್ತು.