ಹಾವೇರಿ | ಉದ್ಯಮಿ ಝಕರಿಯಾ ಜೋಕಟ್ಟೆಗೆ ‘ಜೈ ಮಾನವ ಪ್ರಶಸ್ತಿʼ ಪ್ರದಾನ

ಹಾವೇರಿ, ಆ.30 : ಮೇಕ್ ಫೌಂಡೇಶನ್ ವತಿಯಿಂದ ಪಟ್ಟಣದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ರವಿವಾರ ಜೈ ಮಾನವ ಸಮಾವೇಶ ನಡೆಯಿತು.
ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸವಣೂರು ದೊಡ್ಡಹುಣಸಿ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ ಅವರು ಉದ್ಘಾಟಿಸಿದರು.
ಸಮಾವೇಶದಲ್ಲಿ ‘ಜೈ ಮಾನವ ಕಲ್ಯಾಣ ಸಂಘ’ಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ಅವರಿಗೆ ‘ಜೈ ಮಾನವ’ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿದರು.
ಮೇಕ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ರಝಾ ನಈಮಿ ಮಾತನಾಡಿ, ಝಕರಿಯಾ ಜೋಕಟ್ಟೆ ಅವರು ಮಾಡಿದ ನಿಸ್ವಾರ್ಥ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಇದೇ ಸಮಯದಲ್ಲಿ ತಿಮ್ಮನಕಟ್ಟಿಯ ಸ್ವಾಮಿ ವಿವೇಕಾನಂದ ಶಾಲೆಯ ಶಿಕ್ಷಕಿಯರಾದ ತಾರಾಕ್ಷಮ್ಮ ಪಿ., ಮಾಯಾಚಾರ ಅವರಿಗೆ ʼಅಕ್ಷರ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.
"ಈ ಪ್ರಶಸ್ತಿಯು ಹಾವೇರಿಯ ಜನತೆಗೆ ಸಲ್ಲುತ್ತದೆ. ನಾನು ಕಷ್ಟದ ದಿನಗಳಿಂದ ಮೇಲೆ ಬಂದವನು. ಇಂದು ಸೌದಿಯಲ್ಲಿ ಅಂತರ್‌ರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಿದ್ದೇವೆ. ನಾವೆಲ್ಲರೂ ಸೌಹಾರ್ದದಿಂದ ಬಾಳಲು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಅವಶ್ಯವಿದೆ. ಉತ್ತರ ಕರ್ನಾಟಕದ ಜನರು ಕೃಷಿ ಮೇಲೆ ಜಾಸ್ತಿ ಅವಲಂಬಿತರಾಗಿದ್ದಾರೆ. ಈ ಭಾಗದ ಜನರು ಅನ್ನದಾತರು. ಅವರ ಋಣವನ್ನು ತೀರಿಸುವ ಕೆಲಸ ಮಾಡುತ್ತೇನೆ"
ಝಕರಿಯಾ ಜೋಕಟ್ಟೆ, ಅನಿವಾಸಿ ಉದ್ಯಮಿ
ಕಾರ್ಯಕ್ರಮದಲ್ಲಿ ಗುರುಲಿಂಗ ಮಹಾಸ್ವಾಮಿ ಅಕ್ಕಿಮಠ, ಕೆ.ಎಂ.ಸಿದ್ದೀಕ್ ಮೋಂಟುಗೋಳಿ, ಹಸನ್ ಹಾಜಿ, ಸಾಹಿತಿ ಸತೀಶ್ ಕುಲಕರ್ಣಿ, ನಸೀರ್ ಪಠಾಣ್ ಹಾಗೂ ಇತರರು ಉಪಸ್ಥಿತರಿದ್ದರು.