ಹಾಸನ | ಗಣೇಶ ಮೆರವಣಿಗೆ ವೇಳೆ ರಸ್ತೆ ಅಪಘಾತ; ಮೃತರ ಗುರುತು ಪತ್ತೆ

ಹಾಸನ: ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣಪತಿ ಮೆರವಣಿಗೆ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, ಮೃತರ ಗುರುತು ಪತ್ತೆಹಚ್ಚಲಾಗಿದೆ. ಘಟನೆಯಲ್ಲಿ ಸುಮಾರು 23ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಐವರು ಹೊಸಹಳ್ಳಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಚಿಕ್ಕಮಗಳೂರು ಮಣೆನಹಳ್ಳಿ ಮರ್ಲೆ ಗ್ರಾಮದ ಸುರೇಶ (ಬಿಇ ವಿದ್ಯಾರ್ಥಿ), ಹೊಳೆನರಸೀಪುರ ತಾಲ್ಲೂಕಿನ ರಾಜೇಶ (17), ಕೆ.ಬಿ.ಪಾಳ್ಯ, ಡನಾಯಕನಹಳ್ಳಿ ಕೊಪ್ಪಲು ಗ್ರಾಮದ ಈಶ್ವರ (17), ಮುತ್ತಿಗೆಹೀರಳ್ಳಿ ಗ್ರಾಮದ ಗೋಕುಲ (17), ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ (25), ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್ (23) ಹಾಸನ ತಾಲ್ಲೂಕು ಬಂಟರಹಳ್ಳಿ ಗ್ರಾಮದ ಪ್ರಭಾಕರ್ (55) ಬಳ್ಳಾರಿ ಮೂಲದ ಪ್ರವೀಣ್ ಕುಮಾರ್ (ಅಂತಿಮ ಬಿಇ ವಿದ್ಯಾರ್ಥಿ, ಚಿಕಿತ್ಸೆ ಫಲಕಾರಿಯಾಗದೇ ಸೆ. 13ರ ಬೆಳಗ್ಗೆ ನಿಧನರಾಗಿದ್ದಾರೆ.) ಎಂದು ಗುರುತಿಸಲಾಗಿದೆ.
ಹಾಸನದಿಂದ ಮೈಸೂರಿನ ಕಡೆಗೆ ಸಂಚರಿಸುತ್ತಿದ್ದ ಟ್ರಕ್ ವೊಂದು ಓವರ್‌ಟೇಕ್ ಮಾಡುವ ರಭಸದಲ್ಲಿ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಯಂತ್ರಣವನ್ನು ಕಳೆದುಕೊಂಡಿದೆ. ನಂತರ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಗುಂಪಿನ ಮೇಲೆ ನೇರವಾಗಿ ಹರಿದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಮೃತದೇಹಗಳನ್ನು ಹಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.