23 ಲಕ್ಷ ರೂ.ಗೆ ಗೋಲ್ಡನ್ ವೀಸಾ ವರದಿಗಳು ಸುಳ್ಳು: ಯುಎಇ

golden visa | PC : x \ @Indianinfoguide
ದುಬೈ: ಭಾರತೀಯರು ಸೇರಿದಂತೆ ಆಯ್ದ ದೇಶಗಳ ಪ್ರಜೆಗಳು ಒಂದು ಸಲಕ್ಕೆ 23 ಲಕ್ಷ ರೂ.ಗಳ ಶುಲ್ಕವನ್ನು ಪಾವತಿಸಿ ತನ್ನ ಗೋಲ್ಡನ್ ವೀಸಾಗಳನ್ನು ಖರೀದಿಸಬಹುದು ಎಂಬ ವರದಿಗಳನ್ನು ಯುಎಇ ನಿರಾಕರಿಸಿದೆ ಎಂದು ಎಮಿರೇಟ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಭಾರತೀಯ ನಾಗರಿಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾದ ಯುಎಇ ವೀಸಾ ಯೋಜನೆಯ ಕುರಿತು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ. ದುಬೈನಲ್ಲಿ ದೀರ್ಘಾವಧಿ ವಾಸಕ್ಕೆ ಅವಕಾಶವನ್ನು ನೀಡುವ ಈ ವೀಸಾವನ್ನು ನಾಮನಿರ್ದೇಶನ ಪ್ರಕ್ರಿಯೆಯ ಮೂಲಕ 23.3 ಲಕ್ಷ ರೂ.ಗೆ ಖರೀದಿಸಬಹುದು ಎಂದು ಭಾರತೀಯ ವರದಿಗಳು ಹೇಳಿಕೊಂಡಿದ್ದವು.
ಪ್ರಸ್ತುತ ವಿದೇಶಿ ಪ್ರಜೆಗಳು 10 ವರ್ಷಗಳ ವೀಸಾಕ್ಕೆ ಅರ್ಹತೆ ಪಡೆಯಲು ಯುಎಇಯಲ್ಲಿ, ಸಾಮಾನ್ಯವಾಗಿ ರಿಯಲ್ ಎಸ್ಟೇಟ್ನಲ್ಲಿ ಕನಿಷ್ಠ 4.6 ಕೋಟಿ ರೂ.ಗಳ ಹೂಡಿಕೆಯನ್ನು ಮಾಡುವುದು ಅಥವಾ ಕಂಪನಿಯನ್ನು ಸ್ಥಾಪಿಸುವುದು ಅಗತ್ಯವಾಗಿದೆ. ವೈದ್ಯರು ಮತ್ತು ವಿಜ್ಞಾನಿಗಳಂತಹ ನುರಿತ ವೃತ್ತಿಪರರು ಆಯ್ದ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದರೆ ಅವರು ಯಾವುದೇ ಹಣಕಾಸು ಹೂಡಿಕೆಯನ್ನು ಮಾಡದೇ ಗೋಲ್ಡನ್ ವೀಸಾಕ್ಕೆ ಅರ್ಹರಾಗಿರುತ್ತಾರೆ.
ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಗೋಲ್ಡನ್ ವೀಸಾ ಕುರಿತು ವರದಿಗಳು ಸುಳ್ಳು ವದಂತಿಗಳಾಗಿವೆ ಎಂದು ಯುಎಇ ಗುರುತು, ಪೌರತ್ವ,ಕಸ್ಟಮ್ಸ್ ಮತ್ತು ಬಂದರು ಭದ್ರತೆ ಪ್ರಾಧಿಕಾರದ ಹೇಳಿಕೆಯನ್ನು ಉಲ್ಲೇಖಿಸಿ ಅಬುಧಾಬಿ ಮೂಲದ ‘ದಿ ನ್ಯಾಷನಲ್’ ವರದಿ ಮಾಡಿದೆ.
ಈ ಹೇಳಿಕೆಗಳಿಗೆ ಕಾನೂನು ಆಧಾರವಿಲ್ಲ ಮತ್ತು ಯುಎಇಯಲ್ಲಿನ ಸಕ್ಷಮ ಅಧಿಕಾರಿಗಳನ್ನು ಉಲ್ಲೇಖಿಸದೆ ಮಾಡಲಾಗಿದೆ ಎಂದು ವಲಸೆ ಇಲಾಖೆಯು ತಿಳಿಸಿದೆ.
‘ಸುಭದ್ರ ಮತ್ತು ಸುರಕ್ಷಿತ ದೇಶದಲ್ಲಿ ಉತ್ತಮ ಜೀವನದ ಕನಸು ಮತ್ತು ಆಕಾಂಕ್ಷೆಗಳೊಂದಿಗೆ ಯುಎಇಯಲ್ಲಿ ವಾಸಿಸಲು ಬಯಸುವ ವ್ಯಕ್ತಿಗಳಿಂದ ಕಾನೂನುಬಾಹಿರವಾಗಿ ಹಣವನ್ನು ಪಡೆದುಕೊಳ್ಳಲು ಈ ವದಂತಿಗಳನ್ನು ಪ್ರಕಟಿಸಿದ ವ್ಯಕ್ತಿಗಳು, ವೆಬ್ಸೈಟ್ಗಳು, ಸಂಸ್ಥೆಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.
ವದಂತಿಗಳು, ಸುಳ್ಳುಸುದ್ದಿಗಳಿಗೆ ಸ್ಪಂದಿಸದಂತೆ ಮತ್ತು ಗೋಲ್ಡನ್ ವೀಸಾ ಕೊಡಿಸುವುದಾಗಿ ಹೇಳಿಕೊಳ್ಳುವ ಯಾವುದೇ ವ್ಯಕ್ತಿ, ಕಚೇರಿ ಅಥವಾ ಏಜೆನ್ಸಿಗೆ ಎಂದಿಗೂ ಹಣವನ್ನು ಪಾವತಿಸದಂತೆ ಅಥವಾ ವೈಯಕ್ತಿಕ ದಾಖಲೆಗಳನ್ನು ನೀಡದಂತೆ ಪ್ರಾಧಿಕಾರವು ಯುಎಒಗೆ ಭೇಟಿ ನೀಡಲು ಮತ್ತು ವಾಸಿಸಲು ಬಯಸಿರುವ ಜನರನ್ನು ಆಗ್ರಹಿಸಿದೆ.