ಮೌಂಟ್ ಎವರೆಸ್ಟ್ ಏರಿದ ಕೇರಳ ಮೂಲದ ಖತರ್ ನಿವಾಸಿ ಸಫ್ರೀನಾ ಲತೀಫ್

ಮೌಂಟ್ ಎವರೆಸ್ಟ್ ಏರಿದ ಸಫ್ರೀನಾ ಲತೀಫ್ | Photo : gulfnews.com
ದೋಹಾ: ಹಲವು ವರ್ಷಗಳಿಂದ ಖತರ್ ನಿವಾಸಿಯಾಗಿರುವ ಕೇರಳ ಮೂಲದ ಸಫ್ರೀನಾ ಲತೀಫ್ ಅವರು ತಮ್ಮ ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ವಿಶ್ವದ ಅತೀ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ.
ಮೇ.18ರಂದು ನೇಪಾಳದ ಸ್ಥಳೀಯ ಸಮಯ ಬೆಳಿಗ್ಗೆ 10.25ಕ್ಕೆ ಸಫ್ರೀನಾ ಅವರು 20 ಗಂಟೆಗಳಿಗೂ ಹೆಚ್ಚು ಕಾಲ ಶೀತಲೀಕರಣ ತಾಪಾಮಾನ ಮತ್ತು ಬಿರುಸಾದ ಗಾಳಿಯನ್ನು ದಾಟಿ 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತದ ಮೇಲೆ ಏರಿದರು. ಈ ಅಪರೂಪದ ಸಾಧನೆಯೊಂದಿಗೆ ಅವರು ಖತರ್ ನಲ್ಲಿ ನೆಲೆಸಿರುವ ಕೇರಳಿಗರ ಪೈಕಿ ಮೌಂಟ್ ಎವರೆಸ್ಟ್ ಏರಿದ ಮೊದಲಿಗರು ಎನಿಸಿಕೊಂಡಿದ್ದಾರೆ.
ಸಫ್ರೀನಾ ಅವರು 2001 ರಿಂದ ಖತರ್ ನಲ್ಲಿದ್ದಾರೆ. ಅವರ ಪತಿ ಡಾ.ಶಮೀಲ್ ಮುಸ್ತಫಾ, ಮಗಳು ಮಿನ್ಹಾ ಜೊತೆಗೆ ಪ್ರಸಕ್ತ ದೋಹಾದಲ್ಲಿ ವಾಸವಾಗಿದ್ದಾರೆ, ಅವರ ಪತಿ, ಹಮದ್ ಮೆಡಿಕಲ್ ಕಾರ್ಪೊರೇಷನ್ನಲ್ಲಿ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದಾರೆ.
ಮೌಂಟ್ ಎವರೆಸ್ಟ್ ಏರಲು ಸಫ್ರೀನಾ ಅವರು ಹಲವು ವರ್ಷಗಳ ಕಠಿಣ ತರಬೇತಿ ಪಡೆದಿದ್ದಾರೆ. ಅವರ ಉತ್ಸಾಹ, ಪರಿಶ್ರಮಕ್ಕೆ ಎವರೆಸ್ಟ್ ಪರ್ವತ ಏರಿದ ಸಾಧನೆಯ ಮುಕುಟ ಸೇರಿದೆ. ಎವರೆಸ್ಟ್ ಏರುವ ಮೊದಲು, ಸಫ್ರೀನಾ ಅವರು ತಮ್ಮ ಪತಿಯೊಂದಿಗೆ ತಾಂಝಾನಿಯಾದ ಮೌಂಟ್ ಕಿಲಿಮಂಜಾರೊ (5,895 ಮೀ), ಅರ್ಜೆಂಟೀನಾದ ಅಕಾನ್ಕಾಗುವಾ (6,961 ಮೀ), ಮತ್ತು ರಷ್ಯಾದ ಮೌಂಟ್ ಎಲ್ಬ್ರಸ್ (5,642 ಮೀ) ಸೇರಿದಂತೆ ವಿಶ್ವದ ಇತರ ಪ್ರಮುಖ ಶಿಖರಗಳನ್ನು ಏರಿದ್ದರು.
ಮೌಂಟ್ ಎವರೆಸ್ಟ್ ಏರುವ ಕನಸು ನನಸಾಗಿಸಲು ಅವರು ಕಝಾಕಿಸ್ತಾನ್ ನಲ್ಲಿ ಹೈಯ್ಯರ್ ಆಲ್ಟಿಟ್ಯೂಡ್ ನಲ್ಲಿ ಐಸ್ ಟ್ರೈನಿಂಗ್ ಕೂಡ ಪಡೆದಿದ್ದಾರೆ.
ಮೌಂಟ್ ಎವರೆಸ್ಟ್ ಏರಿ ಇಳಿದ ಬಳಿಕ ಕ್ಯಾಂಪ್ 2 ಗೆ ಮರಳಿದ ಸಫ್ರೀನಾ, ತನ್ನ ಕುಟುಂಬ, ಸ್ನೇಹಿತರು ಮತ್ತು ಎವರೆಸ್ಟ್ ಏರಲು ಬೆಂಬಲಿಸಿದ ಎಲೈಟ್ ಎಕ್ಸ್ಪೆಡ್ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಸಫ್ರೀನಾ ಅವರ ಸ್ಪೂರ್ತಿದಾಯಕ ಪ್ರಯಾಣವು ಖತರ್ ಮತ್ತು ಅದರಾಚೆಗೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿರುವ ಮಹಿಳೆಯರಿಗೆ ಹಾರಲು ರೆಕ್ಕೆ ಪುಕ್ಕಗಳನ್ನು ನೀಡಿದೆ.