ದುಬೈ : ಬ್ಯಾರೀಸ್ ಗ್ಲೋಬಲ್‌ನ ಚೊಚ್ಚಲ ಯೋಜನೆ ’ಬ್ಯಾರೀಸ್ ವಫಿರಾ'ಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ

ದುಬೈ: ಬ್ಯಾರೀಸ್ ಗ್ಲೋಬಲ್ ಸಂಸ್ಥೆಯು ದುಬೈನಲ್ಲಿ ತನ್ನ ಚೊಚ್ಚಲ ಯೋಜನೆಯೊಂದಿಗೇ ಮಹತ್ವದ ಸಾಧನೆ ಮಾಡಿದೆ. ಸಂಸ್ಥೆಯ 'ಬ್ಯಾರೀಸ್ ವಫಿರಾ ಅಬಂಡೆನ್ಸ್ ಆಫ್ ನೇಚರ್ & ಲಕ್ಸುರಿಯಸ್ ಲಿವಿಂಗ್' (ಹೇರಳವಾದ ಪ್ರಕೃತಿ ಮತ್ತು ಐಷಾರಾಮಿ ಜೀವನ) ಎಂಬ ವಸತಿ ಯೋಜನೆಯು ’ಪರಿಸರ ಸ್ನೇಹಿ ವಸತಿ ಯೋಜನೆ ಅಭಿವೃದ್ಧಿ' (Sustainable Residential Development) ವಿಭಾಗದಲ್ಲಿ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಪ್ರಾಪರ್ಟಿ ಅವಾರ್ಡ್ (International Property Award) ಗೆ ಭಾಜನವಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 11, 2025 ರಂದು ದುಬೈ ಮರೀನಾದಲ್ಲಿರುವ ಅಲ್ ಹಬತೂರ್ ಗ್ರ್ಯಾಂಡ್ ರಿಸಾರ್ಟ್‌ನಲ್ಲಿ ಅದ್ದೂರಿಯಾಗಿ ಜರುಗಿತು.
ವಿಶೇಷವೆಂದರೆ, ಯೋಜನೆಯ ಅಧಿಕೃತ ಆರಂಭಕ್ಕೂ ಮುನ್ನವೇ ಈ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಈ ಮೂಲಕ 'ಬ್ಯಾರೀಸ್ ವಫಿರಾ' ಯೋಜನೆ ಪರಿಸರ ಸ್ನೇಹಿ ಮತ್ತು ಐಷಾರಾಮಿ ಜೀವನದ ಒಂದು ಸುಸ್ಥಿರ ಯೋಜನೆ ಯೆಂದು ಸಾಬೀತುಪಡಿಸಿದೆ. ಈ ಪ್ರಶಸ್ತಿಯ ಮೂಲಕ ಜಾಗತಿಕ ರಿಯಲ್ ಎಸ್ಟೇಟ್ ರಂಗಕ್ಕೆ ಬ್ಯಾರೀಸ್ ಗ್ಲೋಬಲ್ ಸಂಸ್ಥೆ ಭರ್ಜರಿಯಾಗಿ ಪ್ರವೇಶಿಸಿದ ಹಾಗಾಗಿದೆ.
ದುಬೈನ ಹೃದಯ ಭಾಗದಲ್ಲಿರುವ ಪ್ರಸಿದ್ಧ ವಾಫಿ ಮಾಲ್‌ನ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು, ಇಡೀ ಗಲ್ಫ್ ಪ್ರದೇಶದಲ್ಲೇ ಪರಿಸರ ಸ್ನೇಹಿ ಜೀವನಶೈಲಿಯನ್ನು ಪುನರ್ ವ್ಯಾಖ್ಯಾನಿಸುವ ಗುರಿ ಹೊಂದಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ಯಾರೀಸ್ ಗ್ಲೋಬಲ್ ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಯ್ಯದ್ ಮೊಹಮ್ಮದ್ ಬ್ಯಾರಿ, "ಬ್ಯಾರೀಸ್ ವಫಿರಾ'ದ ಮೂಲಕ, ದುಬೈನಲ್ಲಿ ಶಾಶ್ವತವಾದ ಛಾಪು ಮೂಡಿಸುವಂತಹ ಅತ್ಯಂತ ವಿಶಿಷ್ಟ, ಆಕರ್ಷಕ ಹಾಗೂ ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸಲು ನಾವು ನಮ್ಮನ್ನು ಪುನರ್ ಸಮರ್ಪಿಸಿಕೊಳ್ಳುತ್ತೇವೆ. ಇಲ್ಲಿ ಸುಸ್ಥಿರತೆ ಎಂಬುದು ಕೇವಲ ಒಂದು ಆಯ್ಕೆಯಲ್ಲ, ಅದೊಂದು ಜೀವನ ವಿಧಾನ," ಎಂದು ತಮ್ಮ ಸಂತಸ ಹಂಚಿಕೊಂಡರು.
ಸಯ್ಯದ್ ಮೊಹಮ್ಮದ್ ಬ್ಯಾರಿ ಅವರೊಂದಿಗೆ ಮಝರ್ ಬ್ಯಾರಿ, ಅಶ್ರಫ್ ಬ್ಯಾರಿ ಮತ್ತು ಸಂಸ್ಥೆಯ ನಾಯಕತ್ವ ತಂಡದ ಇತರ ಪ್ರಮುಖ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು.