Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಜಗದೇಕವೀರನ ತಲೆದಿಂಬಿನಡಿಯಲ್ಲಿ

ಜಗದೇಕವೀರನ ತಲೆದಿಂಬಿನಡಿಯಲ್ಲಿ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್18 Aug 2025 12:22 PM IST
share
ಜಗದೇಕವೀರನ ತಲೆದಿಂಬಿನಡಿಯಲ್ಲಿ

‘ಈಚೆಗೆ ರಾತ್ರಿ ಯಾವ ಪುಸ್ತಕ ಓದುತ್ತಿದ್ದೀರಿ? ಎಂದು ಕವಿ-ಪತ್ರಕರ್ತ ಗೆಳೆಯರೊಬ್ಬರನ್ನು ಕೇಳಿದೆ. ‘ಪುಸ್ತಕ...?’ ಎಂದು ರಾಗ ಎಳೆದ ಅವರು, ‘ಇಡೀ ದಿನ ಪತ್ರಿಕೆಯ ಕೆಲಸ ಮಾಡಿ ಮನೆಗೆ ಬಂದು ರಾತ್ರಿ ಒಂದೆರಡು ತಾಸು ಒಳ್ಳೆಯ ಕೊರಿಯನ್ ಸಿನೆಮಾ ಇತ್ಯಾದಿ ನೋಡುತ್ತಿರುತ್ತೇನೆ’ ಎಂದರು.

‘ಇಡೀ ದಿನ ಪತ್ರಿಕೆಯ ಆಫೀಸಿನಲ್ಲೂ ಸ್ಕ್ರೀನ್ ಜೊತೆ; ಮನೆಗೆ ಬಂದಾಗಲೂ ಸ್ಕ್ರೀನ್ ಜೊತೆ?ಕಣ್ಣು, ತಲೆ ತೋಪಾದಂತೆಯೇ’ ಎಂದೆ.

ಸ್ಮಾರ್ಟ್ ಫೋನ್ ಬಂದು ಪುಸ್ತಕದ ಸ್ಥಾನವನ್ನು ಕಸಿದುಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಅದನ್ನು ಅತಿ ಮಾಡಿ ಲೋಕಕ್ಕೆ ಹಬ್ಬಿಸಿದ ಪಶ್ಚಿಮದಲ್ಲೇ ಈಗ ಜಾಣರು ಪುಸ್ತಕಗಳಿಗೆ ಮರಳುತ್ತಿದ್ದಾರೆ. ಹಾಗೆ ಅವರು ಮರಳಲು ಯುರೋಪ್‌ನ ಸುದೀರ್ಘ ಓದು ಸಂಸ್ಕೃತಿಯೂ ಕಾರಣ, ಉಳಿದ ಸಂಸ್ಕೃತಿಗಳು ಮೌಖಿಕ ಸಂಸ್ಕೃತಿಯಲ್ಲೇ ಇದ್ದಾಗ ಗ್ರೀಕ್ ಸಂಸ್ಕೃತಿ ಎರಡು ಸಾವಿರ ವರ್ಷಗಳ ಹಿಂದೆಯೇ ‘ಓದುಸಂಸ್ಕೃತಿ’ಯನ್ನು ಬೆಳೆಸುತ್ತಿತ್ತು. ಅಲ್ಲಿ ಕೂಡ ಶ್ರೀಮಂತರು ಮಾತ್ರ ಓದು ಬಲ್ಲವರಾಗಿದ್ದರು. ‘ಸ್ಕ್ರೋಲ್’ ಎನ್ನಲಾಗುವ ಲಿಖಿತ ಪುಸ್ತಕಗಳು ಅಲ್ಲಿದ್ದವು.

ಇಂಥ ಗ್ರೀಕ್ ಸಂಸ್ಕೃತಿಯಲ್ಲಿ ಹುಟ್ಟಿದ ಅಲೆಕ್ಸಾಂಡರ್‌ಗೆ ಹೋಮರ್‌ನ ವೀರ ಕಾವ್ಯ ಇಲಿಯಡ್ ಪ್ರಿಯವಾದ ಕಾವ್ಯವಾಗಿದ್ದುದು ಸಹಜವಾಗಿತ್ತು.

ಆದರೆ ಇಡೀ ಲೋಕವನ್ನೇ ಗೆಲ್ಲಲು ಹೊರಟ ತರುಣ ಅಲೆಕ್ಸಾಂಡರ್ ‘‘ತನ್ನ ತಲೆದಿಂಬಿನಡಿ ಹೋಮರ್‌ನ ‘ಇಲಿಯಡ್’ ಮಹಾಕಾವ್ಯ ಇಟ್ಟುಕೊಂಡು ಮಲಗುತ್ತಿದ್ದ...’ ಎಂದು ಹಿಂದೊಮ್ಮೆ ಸ್ಕೂಲ್ ಹುಡುಗನೊಬ್ಬ ಹೇಳಿದಾಗ ಅಚ್ಚರಿಯಾಗಿತ್ತು.

ಅಲೆಕ್ಸಾಂಡರ್ ಹೋಮರ್‌ನ ‘ಇಲಿಯಡ್’ ಮಹಾಕಾವ್ಯವನ್ನು ತಲೆದಿಂಬಿನಡಿ ಇಟ್ಟುಕೊಂಡು ಮಲಗುತ್ತಿದ್ದುದಕ್ಕೆ ಕಾರಣಗಳಿದ್ದವು: ಅವನ ತಾಯಿ ‘‘ನೀನು ‘ಇಲಿಯಡ್’ ಮಹಾಕಾವ್ಯದ ಮಹಾವೀರ ಅಖಿಲೀಸನ ವಂಶಸ್ಥ’’ ಎಂದು ಹೇಳಿದ್ದಳು; ‘ಇಲಿಯಡ್’ ಯುರೋಪ್‌ನ ವೀರಯುಗದ ಗಾಥೆಯಾಗಿತ್ತು; ಜೊತೆಗೆ, ಗ್ರೀಕ್ ಫಿಲಾಸಫರ್ ಅರಿಸ್ಟಾಟಲ್ ಅಲೆಕ್ಸಾಂಡರ್‌ನ ಗುರುವಾಗಿದ್ದ. ತಾನು ಹೇಳಿಕೊಟ್ಟ ಪಾಠವನ್ನು ಅಲೆಕ್ಸಾಂಡರ್ ಸರಿಯಾಗಿ ಕಲಿಯದಿದ್ದರೆ ಅರಿಸ್ಟಾಟಲ್ ಚರ್ಮದ ಚಾಟಿಯಲ್ಲಿ ಬಾರಿಸುತ್ತಿದ್ದ!

ಅಷ್ಟೊತ್ತಿಗಾಗಲೇ ಮಹಾಕಾವ್ಯಗಳು, ಮಹಾನ್ ಟ್ರ್ಯಾಜಿಡಿಗಳು, ಕಾಮಿಡಿಗಳನ್ನು ಬರೆದ ಯುಗ ಪ್ರವರ್ತಕ ಗ್ರೀಕ್ ಕ್ಲಾಸಿಕಲ್ ಲೇಖಕರು ತೀರಿಕೊಂಡಿದ್ದರು; ಗ್ರೀಕ್ ಸಂಸ್ಕೃತಿಯ ಸೃಜನಶೀಲ ಲೋಕದಲ್ಲಿ ಒಂಥರದ ಶೂನ್ಯ ಆವರಿಸಿತ್ತು. ಅದು ಗ್ರೀಕ್ ಸಂಸ್ಕೃತಿಯ ಇಳಿಮುಖದ ಕಾಲ ಎನ್ನುವವರಿದ್ದರು. ಸಾಹಿತ್ಯ ರಚನೆ ಇಳಿಮುಖವಾದ ಈ ಕಾಲದಲ್ಲಿ ಸಾಕ್ರೆಟಿಸ್, ಪ್ಲೇಟೋ ಥರದ ಫಿಲಾಸಫರ್ಸ್‌ ಮೇಲೆದ್ದರು. ಆದರೆ ಬಹುಶಿಸ್ತೀಯ ಫಿಲಾಸಫರ್ ಆಗಿಯೂ ‘ಸಾಹಿತ್ಯವಾದಿ’ಯಾಗಿದ್ದ ಅರಿಸ್ಟಾಟಲ್‌ಗೆ ತನ್ನ ಕಾಲದಲ್ಲಿ ಮತ್ತೆ ದೊಡ್ಡ ದೊಡ್ಡ ಗ್ರೀಕ್ ಸಾಹಿತ್ಯ ಕೃತಿಗಳು ಹುಟ್ಟಲಿ ಎಂಬ ಹಂಬಲ ಹುಟ್ಟಿತು.

ಅರಿಸ್ಟಾಟಲ್ ಗ್ರೀಕ್ ಭಾಷೆಯ ದೊಡ್ಡ ದೊಡ್ಡ ಲೇಖಕರ ಎಲ್ಲ ಕೃತಿಗಳನ್ನೂ ಆಳವಾಗಿ ಅಧ್ಯಯನ ಮಾಡತೊಡಗಿದ. ಕೃತಿಗಳ ನಡೆ, ಓಟ, ವಸ್ತು, ವಸ್ತುವಿನ್ಯಾಸ, ಪಾತ್ರ, ಭಾಷೆ, ಅಂತಿಮ ಪರಿಣಾಮ... ಎಲ್ಲವನ್ನೂ ಸ್ಪಷ್ಟವಾಗಿ ಕಂಡುಕೊಂಡ. ತನ್ನ ಕಾಲದ ಲೇಖಕರು ಮಹಾಕಾವ್ಯ, ಟ್ರ್ಯಾಜಿಡಿ, ಕಾಮಿಡಿಗಳನ್ನು ಬರೆಯಲು ಬೇಕಾದ ದಾರಿ, ಸೂತ್ರಗಳನ್ನು ಈ ಸಾಹಿತ್ಯ ಕೃತಿಗಳ ಅಧ್ಯಯನದ ಆಧಾರದಿಂದಲೇ ತೋರಿಸಿದ. ಕೃತಿಗಳ ಮೂಲಕವೇ ಮಹಾಕಾವ್ಯ ಹೀಗಿರಬೇಕು; ಟ್ರ್ಯಾಜಿಡಿ ಹೀಗಿರಬೇಕು...ಮುಂತಾದ ಸರಳ, ಸ್ಥೂಲ ನಿಯಮಗಳನ್ನು ರೂಪಿಸಿದ. ಈ ಪ್ರಕಾರಗಳಲ್ಲಿ ಬರೆಯಲು ಹೊಸ ತಲೆಮಾರಿಗೆ ದಾರಿ ತೋರಿಸಿದ.

ಹೀಗೆ ತನ್ನ ಭಾಷೆಯ ಎಲ್ಲ ಶ್ರೇಷ್ಠ ಕೃತಿಗಳನ್ನೂ ಓದಿ ಹೊಸ ತಲೆಮಾರುಗಳಿಗೆ ಬರೆಯುವ ಮಾರ್ಗಗಳನ್ನು ರೂಪಿಸಿಕೊಟ್ಟ ಮತ್ತೊಬ್ಬ ವಿದ್ವಾಂಸನ ಉದಾಹರಣೆ ಜಗತ್ತಿನಲ್ಲಿಲ್ಲವೇನೋ! ಅರಿಸ್ಟಾಟಲ್ ವಿದ್ವಾಂಸ-ಫಿಲಾಸಫರ್-ಮೀಮಾಂಸಕ ಎಲ್ಲವೂ ಆಗಿದ್ದ.

ರಾಜಕಾರಣ, ಸಸ್ಯವಿಜ್ಞಾನ, ಖಗೋಳವಿಜ್ಞಾನ, ಇಕನಾಮಿಕ್ಸ್, ಭಾಷಾವಿಜ್ಞಾನ... ಹೀಗೆ ಹಲವು ಜ್ಞಾನಮಾರ್ಗಗಳಿಗೆ ಚಾಚಿಕೊಳ್ಳುತ್ತಿದ್ದ. ಅರಿಸ್ಟಾಟಲ್ ಅಲೆಕ್ಸಾಂಡರ್‌ನ ರಾಜಕೀಯ ಗುರುವೂ ಆದ ಮೇಲೆ ಅಲೆಕ್ಸಾಂಡರ್ ಜಗದೇಕವೀರ ಆಗದಿರುತ್ತಾನೆಯೆ!

ಅಲೆಕ್ಸಾಂಡರ್‌ನ ತಲೆದಿಂಬಿನಡಿ ‘ಇಲಿಯಡ್’ ಇತ್ತು; ಆದರೆ ಅರಿಸ್ಟಾಟಲ್ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷ ಕಾಲ ತನ್ನ ಕಾವ್ಯಮೀಮಾಂಸೆಯ ಮೂಲಕ ಲೋಕದ ಅಕಾಡಮಿಕ್ ವಲಯಗಳನ್ನೇ ಆಳಿದ; ಈಗಲೂ ಆಳುತ್ತಿದ್ದಾನೆ! ಈಗಲೂ ಜಗತ್ತಿನ ವಿಶ್ವವಿದ್ಯಾನಿಲಯಗಳಲ್ಲಿ ಸಾಹಿತ್ಯವನ್ನೇ ಪಟ್ಟಾಗಿ ಹಿಡಿದ ಅರಿಸ್ಟಾಟಲ್‌ವಾದಿಗಳಿದ್ದಾರೆ. ಇಂಥ ಅರಿಸ್ಟಾಟಲ್‌ನ ತಲೆದಿಂಬಿನಡಿ, ತಲೆದಿಂಬಿನ ಪಕ್ಕ ಎಂಥೆಂಥ ಪುಸ್ತಕಗಳಿದ್ದವು ಎಂದು ಊಹಿಸುವ ಕೆಲಸವೇ ಇವತ್ತು ನಮ್ಮಲ್ಲಿ ರೋಮಾಂಚನ, ಸ್ಫೂರ್ತಿ, ಪ್ರೇರಣೆಗಳನ್ನು ಹುಟ್ಟಿಸಬಲ್ಲದು!

ಲೋಕ ಗೆಲ್ಲಲು ಹೊರಟ ಅಲೆಕ್ಸಾಂಡರ್ ತನ್ನ ತಲೆದಿಂಬಿನಡಿ ‘ಇಲಿಯಡ್’ ಇಟ್ಟುಕೊಳ್ಳುತ್ತಿದ್ದ ಕತೆ ಹೇಳಿದ ಹುಡುಗ ಕೂಡ ಒಂದು ಕಾಲಕ್ಕೆ ‘ಇಲಿಯಡ್’, ‘ಒಡಿಸ್ಸಿ’ ಮಹಾಕಾವ್ಯಗಳ ಇಂಗ್ಲಿಷ್, ಕನ್ನಡಾನುವಾದಗಳನ್ನು, ಓದುತ್ತಾ, ನಿದ್ದೆಗೆ ಜಾರಿದಾಗ ಅವನ್ನು ತಲೆದಿಂಬಿನ ಬದಿಗೆ ಸರಿಸುತ್ತಾ ಮಲಗುತ್ತಿದ್ದ; ಬರಬರುತ್ತಾ ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಅಂಬೇಡ್ಕರ್, ಪೆರಿಯಾರ್... ಎಲ್ಲ ಅವನ ಬೆಡ್‌ಸೈಡಿಗೆ ಬಂದರು. ಅವನಿಗೆ ಇಪ್ಪತ್ತು ವರ್ಷವಾಗುವವರೆಗೂ ಒಂದಲ್ಲ ಒಂದು ಪುಸ್ತಕ ಅಲ್ಲಿರುತ್ತಿದ್ದ ಆ ದೃಶ್ಯ ಮನೋಹರವಾಗಿತ್ತು! ಹೀಗೆ ಬೆಡ್‌ಸೈಡ್ ಪುಸ್ತಕಗಳಿಂದ ತನ್ನೊಳಗಿಳಿದ ವಿವರಗಳನ್ನು ಆ ಹುಡುಗ ಇವತ್ತಿಗೂ ನನ್ನ ಕ್ಲಾಸುಗಳಿಗೆ, ಬರವಣಿಗೆಗೆ ಹೆಕ್ಕಿ ಕೊಡುವ ಸುಂದರ ಕೆಲಸ ಸದಾ ನಡೆಯುತ್ತಿರುತ್ತದೆ.

ಸ್ವತಃ ಈ ಅಂಕಣಕಾರನ ಬರಹಗಳ ವಿವರಗಳು, ಉಲ್ಲೇಖಗಳು, ಅಷ್ಟಿಷ್ಟು ಜ್ಞಾನ ಇವೆಲ್ಲ ಹೀಗೆಯೇ ಸಾವಿರಾರು ಬೆಡ್‌ಸೈಡ್ ಪುಸ್ತಕಗಳಿಂದ ಬಂದಿವೆ. ನನ್ನ ಅನುಭವದಲ್ಲಿ ಈ ಬೆಡ್‌ಸೈಡ್ ಪುಸ್ತಕಗಳ ವಿವರಗಳು ಇಷ್ಟು ಗಾಢವಾಗಿ ನಮ್ಮ ಮನಸ್ಸಿನಲ್ಲಿ ಉಳಿಯಲು ರಾತ್ರಿಯ ನಿರ್ಜನತೆ, ಏಕಾಂತ, ನೀರವತೆ, ಪ್ರಶಾಂತತೆ ಹಾಗೂ ತಕ್ಷಣದ ಸೀಮಿತ ಉದ್ದೇಶಗಳಿಲ್ಲದ ಆರಾಮಿನ ಓದು... ಇವೆಲ್ಲವೂ ಕಾರಣವಿರಬಹುದು.‘ಕಾವ್ಯವೆನ್ನುವುದು ಶಕ್ತ ಭಾವನೆಗಳ (ಫೀಲಿಂಗ್ಸ್) ಸಹಜ ಉಕ್ಕುವಿಕೆ: ಅದು ಹುಟ್ಟುವುದು ಪ್ರಶಾಂತ ಸನ್ನಿವೇಶದಲ್ಲಿ ಮರಳಿ ಮನಕ್ಕೆ ಕರೆದುಕೊಂಡ ಭಾವ (ಎಮೋಶನ್)ದಿಂದ ಎಂಬ ಕವಿ ವರ್ಡ್ಸ್‌ವರ್ತ್ ಮಾತು ನಿಮಗೆ ನೆನಪಿರಬಹುದು. ಬೆಡ್‌ಸೈಡ್ ಪುಸ್ತಕಗಳ ಅನನ್ಯ ಲೋಕ ನಮ್ಮೊಳಗೆ ಗಾಢವಾಗಿ ಉಳಿಯುವುದಕ್ಕೆ ಅವು ಪ್ರಶಾಂತ ಸನ್ನಿವೇಶದಲ್ಲಿ ನಮ್ಮ ಮನ ಹೊಕ್ಕ ಭಾವಗಳಾಗಿರುವುದೂ ಕಾರಣವಿರಬಹುದು! ಈ ಕಾಲದಲ್ಲಿ ಬೆಡ್‌ಸೈಡ್ ಪುಸ್ತಕಗಳ ಜಾಗವನ್ನು ಓದಿನ ನವಸಂಗಾತಿಯಾದ ‘ಕಿಂಡಲ್’ ಒತ್ತರಿಸಿಕೊಂಡು ಬರುತ್ತಿದೆ. ಈ ‘ಕಿಂಡಲ್’ ಒಳಗೂ ನಾನು ತೆರೆತೆರೆದಾಗ ಮರಳಿ ನನ್ನೆದೆಗೆ ಬರುವ ನೂರಾರು ಪ್ರಿಯ ಪುಸ್ತಕಗಳಿವೆ. ಈ ಕಿಂಡಲ್ ಕಣ್ಣಿಗೆ ತೊಂದರೆ ಕೊಡದ ಪುಟ್ಟ ಡಿವೈಸ್. ಪಶ್ಚಿಮದ ಓದುಸಂಸ್ಕೃತಿ ರೂಪಿಸಿಕೊಂಡ ಅಂಗೈ ಅಗಲದ ಇಲೆಕ್ಟ್ರಾನಿಕ್ ಉಪಕರಣ.

ದುರದೃಷ್ಟವೆಂದರೆ, ನೀವು ಬೇಡಿಕೊಂಡರೂ ಕಿಂಡಲ್‌ನಲ್ಲಿ ಕನ್ನಡ ಪುಸ್ತಕಗಳು ಬರುವುದಿಲ್ಲ. ಇಂಗ್ಲಿಷ್, ಫ್ರೆಂಚ್, ತಮಿಳು, ತೆಲುಗು, ಹಿಂದಿ ಭಾಷೆಯ ಪುಸ್ತಕಗಳು ಅಲ್ಲಿವೆ. ಯಾವ ಸಾಹಿತ್ಯ ಸಮ್ಮೇಳನದಲ್ಲಿ ಎಷ್ಟು ಕೋಟಿ ನುಂಗಲಿ ಎಂದು ಹಾತೊರೆಯುವ ಕನ್ನಡಭಕ್ಷಕರ ಈ ನಾಡಿನಲ್ಲಿ ನಮಗಾಗಲೀ, ಕನ್ನಡದ ಹೊಸ ಕಂದಮ್ಮಗಳಿಗಾಗಲೀ ಕಿಂಡಲ್‌ನಲ್ಲಿ ಕನ್ನಡ ಪುಸ್ತಕಗಳು ಸಿಗುವ ಕಾಲ ಸದ್ಯಕ್ಕಂತೂ ಕಾಣುತ್ತಿಲ್ಲ. ಈ ಕಿಂಡಲ್ ಪ್ರಶ್ನೆಯನ್ನು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಗಮನಕ್ಕೂ ಒಮ್ಮೆ ತಂದೆ. ಅವರಾದರೂ ಈ ನಿಟ್ಟಿನಲ್ಲಿ ಏನಾದರೂ ಮಾಡುತ್ತಾರೋ ನೋಡೋಣ. ಇಂಗ್ಲಿಷ್ ಸ್ಪೆಲ್ ಚೆಕ್ ವ್ಯವಸ್ಥೆಯಂತೆ ಕನ್ನಡ ಸ್ಪೆಲ್ ಚೆಕ್ ಹಾಗೂ ಕಿಂಡಲ್ ಎರಡನ್ನು ಕನ್ನಡ ಪ್ರಾಧಿಕಾರ ಮಾಡಿದರೂ ಕನ್ನಡ ಅಭಿವೃದ್ಧಿಯಲ್ಲಿ ಬಹು ದೊಡ್ಡ ಹೆಜ್ಜೆ ಇಟ್ಟಂತೆ.

ನನ್ನ ಸಾವಿರಾರು ಬೆಡ್‌ಸೈಡ್ ಪುಸ್ತಕಗಳಲ್ಲಿ ಬಹುಕಾಲ ಯೇಟ್ಸ್ ಕವಿಯ ಸಮಗ್ರ ಕಾವ್ಯದ ಸಂಪುಟವೂ ಕಾಣಿಸಿಕೊಳ್ಳುತ್ತಿತ್ತು. ಅದರಲ್ಲಿ ನನಗೆ ಪ್ರಿಯವಾದ, ಮುದಗೊಳಿಸುವ ಹತ್ತಾರು ಕವಿತೆಗಳು, ನೂರಾರು ಸಾಲುಗಳಿವೆ. ಹೀಗೇ ಒಂದು ರಾತ್ರಿ ಯೇಟ್ಸ್ ಕಾವ್ಯಲೋಕದಲ್ಲಿ ಬೆಚ್ಚಗೆ ಬದುಕುತ್ತಾ, ಹಾಗೇ ಕನ್ನಡಿಸಿಕೊಂಡ ‘ವೆನ್ ಯು ಆರ್ ಓಲ್ಡ್’ ಕವಿತೆಯ ಕನ್ನಡಾನುವಾದ ಈ ಅಂಕಣದ ರಮ್ಯ ಓದುಗಿಯರಿಗೆ, ಓದುಗರಿಗೆ ಪ್ರಿಯವಾಗಬಹುದೆಂದು ಇಲ್ಲಿ ಕೊಟ್ಟಿರುವೆ.

ನೀ ಮಾಗಿದ ಕಾಲಕ್ಕೆ...

ನೀ ಇನ್ನಷ್ಟು ಮಾಗಿ ತಲೆತುಂಬ ಬಿಳಿಗೂದಲಾಗಿ ನಿದ್ದೆ ಕಣ್ಣಿಗೆ ಕವಿದು

ಬೆಂಕಿ ಕಾಯಿಸುತ್ತಾ ತೂಕಡಿಸುತಿರುವಾಗ, ಈ ಪುಸ್ತಕವ ಕೈಗೆತ್ತಿಕೋ;

ಮೆಲ್ಲಮೆಲ್ಲಗೆ ಪುಟ ತೆರೆದು ಓದುತ್ತಾ ಹೋಗು;

ಒಂದಾನೊಂದು ಕಾಲಕ್ಕೆ

ನಿನ್ನ ಕಣ್ಣೊಳಗಿದ್ದ ಕೋಮಲ ನೋಟದ ಬಗ್ಗೆ, ಆ ಕಣ್ಣೊಳಗಿದ್ದ

ಗಾಢ ನೆರಳುಗಳ ಬಗ್ಗೆ ಕನಸುತ್ತ ಕೂರು.

ಅದೆಷ್ಟು ಜನ ನಿನ್ನ ಖುಷಿಯ ಸಂಪನ್ನ ಚಣಗಳನ್ನು ಪ್ರೀತಿಸಿದರೋ,

ಮತ್ತಿನ್ನೆಷ್ಟು ಜನ ಹುಸಿ ಒಲವಿನಲ್ಲೋ, ನಿಜ ಒಲವಿನಲ್ಲೋ,

ನಿನ್ನ ಚೆಲುವನ್ನು ಪ್ರೀತಿಸಿದರೋ!

ಒಬ್ಬನು ಮಾತ್ರ ನಿನ್ನ ಯಾತ್ರಾರ್ಥಿ ಆತ್ಮವನ್ನು ಪ್ರೀತಿಸಿದನು;

ನಿನ್ನ ಮೊಗದಲ್ಲಿ ಮಾರ್ಪಡುವ ದುಗುಡದ ಎಳೆಗಳನ್ನು ಪ್ರೀತಿಸಿದನು.

ಬೆಂಕಿಗೆ ಹೊಳೆವ ಕಂಬಿಗಳ ಬಳಿ ನಿಂತು ತುಸು ಬಾಗಿ,

ಒಂಚೂರು ಖಿನ್ನವಾಗಿ, ಗೊಣಗಿಕೋ:

‘ಅದು ಹೇಗೆ ಒಲವು ಕೈ ಕೊಟ್ಟು ಹಾರಿ

ಗಿರಿಶಿಖರಗಳ ತುದಿಯೇರಿ ನಾಗಾಲೋಟದಲ್ಲಿ ಓಡೋಡಿ

‘ಅಗಣಿತ ತಾರಾಗಣಗಳ ನಡುವೆ’ ಮುಖ ಮರೆಸಿಕೊಂಡಿತೋ!’

ಪುಸ್ತಕಗಳ ಸಖ್ಯ ತೆರೆಯುವ ಲೋಕ ಕುರಿತ ಈ ಟಿಪ್ಪಣಿ ಈ ಅಂಕಣದ ಓದುಗರಲ್ಲಿ ಅಷ್ಟಿಷ್ಟು ಸ್ಫೂರ್ತಿ ಉಕ್ಕಿಸಲೆಂದು ಕೊಂಚ ಪರ್ಸನಲ್ಲಾಗಿ ಬರೆದೆ, ಅಷ್ಟೆ.

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X