Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಹೋರಾಟಗಾರ-ಲೇಖಕ ಗೂಗಿಯ ನಿರ್ಗಮನ

ಹೋರಾಟಗಾರ-ಲೇಖಕ ಗೂಗಿಯ ನಿರ್ಗಮನ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್1 Jun 2025 2:42 PM IST
share
ಹೋರಾಟಗಾರ-ಲೇಖಕ ಗೂಗಿಯ ನಿರ್ಗಮನ

ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋನ ನಿರ್ಗಮನದೊಂದಿಗೆ ಆಧುನಿಕ ಆಫ್ರಿಕನ್ ಸಾಹಿತ್ಯದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿಕೊಂಡಿತು.

1938ರಲ್ಲಿ ಬ್ರಿಟಿಷ್ ಆಡಳಿತದ ಕೀನ್ಯಾದಲ್ಲಿ ಹುಟ್ಟಿದ ಜೇಮ್ಸ್ ಗೂಗಿ (5 ಜನವರಿ 1938- 28 ಮೇ 2025) ತಾರುಣ್ಯದಲ್ಲಿ ತನ್ನ ಮೊದಲ ಕಾದಂಬರಿ ‘ವೀಪ್ ನಾಟ್, ಚೈಲ್ಡ್’ ಬರೆದ. ಅಷ್ಟೊತ್ತಿಗಾಗಲೇ ಖ್ಯಾತನಾಗಿದ್ದ ಆಫ್ರಿಕನ್ ಲೇಖಕ ಚಿನುವ ಅಚೀಬೆ ಅದನ್ನು ಪ್ರಕಾಶಕರಿಗೆ ಕಳಿಸಿಕೊಟ್ಟ. ಗೂಗಿಯ ಮೊದಲ ಕಾದಂಬರಿಯೇ ಆಫ್ರಿಕನ್ ಕಾದಂಬರಿಗಳ ಲೋಕದಲ್ಲಿ ಅವನಿಗೆ ಮಹತ್ವದ ಸ್ಥಾನ ದಕ್ಕಿಸಿತು.

ಎಪ್ಪ ತ್ತರ ದಶಕದಲ್ಲಿ ಜೇಮ್ಸ್ ಗೂಗಿ ತನ್ನ ಹೆಸರಿನಲ್ಲಿದ್ದ ಜೇಮ್ಸ್ ಎಂಬ ಕ್ರಿಶ್ಚಿಯನ್ ಭಾಗವನ್ನು ಕೈಬಿಟ್ಟು, ಗೂಗಿ ವಾ ಥಿಯಾಂಗೋ ಎಂಬ ಆಫ್ರಿಕನ್ ಹೆಸರಿಟ್ಟುಕೊಂಡ. ಇಂಗ್ಲಿಷ್‌ನಲ್ಲಿ ಬರೆಯುವುದನ್ನು ಬಿಟ್ಟು ತನ್ನ ಬುಡಕಟ್ಟಿನ ಗಿಕುಯು ಭಾಷೆಯಲ್ಲಿ ಬರೆಯಲು ತೀರ್ಮಾನಿಸಿದ. ಇಂಗ್ಲಿಷ್ ಶಿಕ್ಷಣ ಪಡೆದಿದ್ದ ಗೂಗಿ ‘ಹೋಮ್ ಕಮಿಂಗ್ ಆ್ಯಂಡ್ ಅದರ್ ಎಸ್ಸೇಸ್’ ಎಂಬ ಪುಸ್ತಕ ಪ್ರಕಟಿಸಿದ. ‘ಡಿಕಾಲನೈಸಿಂಗ್ ದ ಮೈಂಡ್’ ಪುಸ್ತಕ ಬರೆದು, ಆಫ್ರಿಕಾದ ಬೇರುಗಳಿಗೆ ಮರಳಲೆತ್ನಿಸಿದ. ಇವೆಲ್ಲ ಆಫ್ರಿಕನ್ ಪ್ರಜ್ಞೆಯ ನಿರ್ವಸಾಹತೀಕರಣದ ಪ್ರಯತ್ನಗಳಾಗಿದ್ದವು.

ಆ ಸರಿಸುಮಾರಿನಲ್ಲಿ ಕೀನ್ಯಾದ ಜೊಮೊ ಕೆನ್ಯಾಟ್ಟ ಸರಕಾರ ನೇರ ನಡೆನುಡಿಯ ಗೂಗಿಯನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಟ್ಟಿತು. ಗೂಗಿಯ ತಮ್ಮ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಸೆರೆಮನೆಯಲ್ಲೂ ಗೂಗಿಯ ಲೇಖಕ ಚೈತನ್ಯ ಉಡುಗಿರಲಿಲ್ಲ. ಜೈಲಿನ ಟಾಯ್ಲೆಟ್ ಪೇಪರಿನ ಮೇಲೆ ತನ್ನ ಬುಡಕಟ್ಟು ಭಾಷೆಯಾದ ಗಿಕುಯುವಿನಲ್ಲಿ ಬರೆಯತೊಡಗಿದ.

ಅದು ‘ಕೈತಾನಿ ಮುತರಾಬಾಇನಿ’ ಎಂಬ ಕಾದಂಬರಿಯಾಯಿತು. ಕಾದಂಬರಿ ಪ್ರಕಾರವನ್ನು ಆಫ್ರಿಕೀಕರಣಗೊಳಿಸತೊಡಗಿದ್ದ ಗೂಗಿ ಆಫ್ರಿಕಾದ ಜನಪದರು ಕತೆ ಹೇಳುವ ರೀತಿ ಬಳಸಿ ಕಾದಂಬರಿ ಬರೆಯಹೊರಟಿದ್ದ. ನಾವು ಕತೆ ಹೇಳುವ ಕ್ರಮಕ್ಕೂ ನಮ್ಮ ತಾಯ್ನುಡಿಯ ಓಟಕ್ಕೂ ಬೆಸುಗೆಯರಿಯದ ಸಂಬಂಧವಿರುತ್ತದೆ. ಗೂಗಿ ಗಿಕುಯುನಲ್ಲಿ ಕಾದಂಬರಿ ಬರೆದು, ಹದಿನೆಂಟನೆಯ ಶತಮಾನದಿಂದಲೂ ಜಗತ್ತಿಗೆ ಪರಿಚಿತವಿದ್ದ ‘ಓದು ಕಾದಂಬರಿ’ಯ ಬದಲಿಗೆ ‘ಕೇಳು ಕಾದಂಬರಿ’ ಬರೆದ. ಪಬ್‌ಗಳಲ್ಲಿ ಆಫ್ರಿಕನ್ ತರುಣ, ತರುಣಿಯರು ಅವನ ಕಾದಂಬರಿಗಳನ್ನು ಓದಿ ಹೇಳತೊಡಗಿದರು.

ಹಿಂದೊಮ್ಮೆ ಕೇಶವ ಮಳಗಿಯವರ ಜೊತೆಗೂಡಿ ನಾನು ಕುವೆಂಪು ಭಾಷಾಭಾರತಿಗಾಗಿ ಸಂಪಾದಿಸಿದ ‘ಲೋಕ ಸಾಹಿತ್ಯ ಮಾಲಿಕೆ’ಗೆ ಬಂಜಗೆರೆ ಜಯಪ್ರಕಾಶ್ ‘ಕೈತಾನಿ ಮುತರಾ ಬಾಇನಿ’ಯ ಇಂಗ್ಲಿಷ್ ರೂಪವಾದ ‘ಡೆವಿಲ್ ಆನ್ ದ ಕ್ರಾಸ್’ ಕಾದಂಬರಿಯನ್ನು ಅನುವಾದಿಸಿದರು. ಗೂಗಿ ಈ ಕಾದಂಬರಿ ಬರೆದ ದಿನಗಳನ್ನು ಬಂಜಗೆರೆ ತಮ್ಮ ಮುನ್ನುಡಿಯಲ್ಲಿ ನೆನೆಯುತ್ತಾರೆ:

‘1977ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಕಾದಂಬರಿಯನ್ನು 1978ರ ಸೆಪ್ಟಂಬರ್‌ವರೆಗೆ ಟಾಯ್ಲೆಟ್ ಪೇಪರ್ ಮೇಲೆ ಬರೆಯುತ್ತಿದ್ದ ಗೂಗಿಗೆ ಈ ಕಾದಂಬರಿ ಪೂರ್ಣಗೊಳಿಸಿದರೆ ತನ್ನ ಬಿಡುಗಡೆಯಾಗುತ್ತದೆಂಬ ಹುಚ್ಚು ನಂಬಿಕೆ ಹುಟ್ಟಿತ್ತು. ಕೀನ್ಯಾದ ಅಧ್ಯಕ್ಷ ಜೋಮೋ ಕೆನ್ಯಾಟ್ಟ ತೀರಿಕೊಂಡಾಗ ಜೈಲಿನಲ್ಲಿದ್ದ ಎಲ್ಲರಿಗೂ ತಾವು ಬಿಡುಗಡೆಯಾಗುತ್ತೇವೆಂಬ ಆಶಾವಾದ ಹುಟ್ಟಿತು. ಸೆಪ್ಟಂಬರ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಈ ಸೆರೆಮನೆವಾಸಿಗಳ ಸೆಲ್‌ಗಳಲ್ಲಿ ‘ಸರ್ಚ್’ ನಡೆಸುತ್ತಿದ್ದ ಸಾರ್ಜೆಂಟ್, ಅಲ್ಲಿ ರಾಶಿ ಬಿದ್ದಿದ್ದ ಟಾಯ್ಲೆಟ್ ಪೇಪರ್‌ಗಳನ್ನು ನೋಡಿ ಅದರ ಮೇಲೆ ಮುಗಿಬಿದ್ದ. ಗೆದ್ದವನಂತೆ ಅಧಿಕಾರಿಯೆಡೆಗೆ ತಿರುಗಿ ಕೂಗಿಕೊಂಡ: ‘ನೋಡಿ ಸಾರ್! ಇವನು ಟಾಯ್ಲೆಟ್ ಪೇಪರ್ ಮೇಲೆ ಪುಸ್ತಕ ಬರೆದಿದಾನೆ!’

‘ವಶಪಡಿಸಿಕೋ!’ ಎಂದ ಅಧಿಕಾರಿ. ‘ಇದೆಲ್ಲಾ ಪೂರ್ತಿ ಅದೇನಾ? ಜೈಲ್‌ನಲ್ಲಿ ಪುಸ್ತಕ ಬರಿ ಅಂತ ಯಾರು ನಿನಗೆ ಹೇಳಿದ್ದು?’ ಎಂದು ಅಧಿಕಾರಿ ಕೂಗಿದ. ಈತನಿಗಿಂತ ಮೊದಲು ಅಲ್ಲಿದ್ದ ಒಬ್ಬ ಕ್ರೂರಿ ಜೈಲು ಸೂಪರಿಂಟೆಂಡೆಂಟ್, ‘ಜೈಲಿನಲ್ಲಿ ಕವಿತೆ ಬರೆಯಬೇಡ, ನನ್ನ ಅನುಮತಿಯಿಲ್ಲದೆ ಏನನ್ನೂ ಬರೆಯಬೇಡ’ ಎಂದು ಮೊದಲೇ ಗೂಗಿಯನ್ನು ಎಚ್ಚರಿಸಿದ್ದ. ‘ಬರೆದೇ ಬರೆಯುತ್ತೇನೆ’ ಎಂದು ಗೂಗಿ ತೀರ್ಮಾನಿಸಿದ!

ಆದರೆ ಟಾಯ್ಲೆಟ್ ಪೇಪರ್ ಮೇಲೆ ಗೂಗಿ ಶ್ರಮಪಟ್ಟು ಬರೆದ ಕಾದಂಬರಿ ಅಧಿಕಾರಿಗಳ ದುರಾಕ್ರಮಣಕ್ಕೆ ಗುರಿಯಾಗಿತ್ತು. ಜೈಲಿಗೆ ಬಂದು ಹೋಗುತ್ತಿದ್ದ ಕ್ರೈಸ್ತ ಧರ್ಮಗುರು ಕೊಟ್ಟಿದ್ದ ಬೈಬಲ್‌ನ ಖಾಲಿ ಹಾಳೆಗಳಲ್ಲಿ ಬರೆದಿದ್ದ ಎರಡು ಅಧ್ಯಾಯಗಳು ಮಾತ್ರ ಅವರ ದೃಷ್ಟಿಗೆ ಬೀಳಲಿಲ್ಲ; ಹೀಗಾಗಿ ಅವು ಉಳಿದುಕೊಂಡಿದ್ದವು. ಈ ಕಾದಂಬರಿ ಬರೆಯುವಾಗ ಗೂಗಿ ಭಾಷೆ, ಸಂಕೇತಗಳ ಜೊತೆ ಸೆಣಸಾಡಿದ್ದ. ಜೈಲಿನ ಕಹಿ ನೆನಪುಗಳು, ನಿರಾಶೆಯ ಕ್ಷಣಗಳು ಸೆರೆಮನೆವಾಸದಲ್ಲಿ ಮಾನಸಿಕವಾಗಿ, ಭಾವನಾತ್ಮಕವಾಗಿ, ಅನಿವಾರ್ಯವಾಗಿ ಅನುಭವಿಸಬೇಕಾದ ಪ್ರತಿಕೂಲ ಪರಿಸ್ಥಿತಿ... ಇವೆಲ್ಲವುಗಳೊಂದಿಗೆ ಹೋರಾಡಿದ್ದ. ಈಗ ಅದೆಲ್ಲ ವ್ಯರ್ಥವಾಯಿತು. ಹೀಗೇ ಮೂರು ವಾರಗಳು ಕಳೆದವು. ಗೂಗಿ ರಕ್ತ ಬಸಿದುಹೋಗಿ ನಿಸ್ಸಾರಗೊಂಡ ಮನುಷ್ಯನಂತಾಗಿಬಿಟ್ಟಿದ್ದ. ಆದರೂ ಕಾದಂಬರಿಯನ್ನು ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ. ಈ ಸಲ ಚೆಖಾಫ್, ಗಾರ್ಕಿ, ಥಾಮಸ್‌ಮನ್ ಮೊದಲಾದವರ ಕಾದಂಬರಿಗಳ ನಡುವೆ, ಬೈಬಲ್‌ನ ಪಂಕ್ತಿಗಳ ನಡುವೆ, ಕಾದಂಬರಿಯನ್ನು ಮತ್ತೆ ಬರೆಯಬೇಕೆಂದುಕೊಂಡ. ಧರ್ಮದಲ್ಲಿ ಹೊಸದಾಗಿ ಭಕ್ತಿ ಹುಟ್ಟಿದವನಂತೆ ಧರ್ಮಗುರುವಿನಿಂದ ಬೇರೆ ಬೇರೆ ಗಾತ್ರಗಳ ಮೂರ್ನಾಲ್ಕು ಬೈಬಲ್ ಪ್ರತಿಗಳನ್ನು ಕೇಳಿ ತರಿಸಿಕೊಂಡು, ಅದರಲ್ಲಿ ಬರೆಯಬೇಕೆಂದುಕೊಂಡ. ಕಾದಂಬರಿಯನ್ನು ತಾನು ಪೂರ್ತಿಯಾಗಿ ಕಳೆದುಕೊಂಡಿಲ್ಲ, ಸೋಲೊಪ್ಪಿಕೊಳ್ಳಬಾರದು ಎಂದುಕೊಂಡ.

ಮತ್ತೆ ಕಥಾಹಂದರವನ್ನು, ಕತೆಯ ಘಟ್ಟಗಳನ್ನು ನೆನಪು ಮಾಡಿಕೊಂಡು ಚೆಕಾಫನ ಕಥಾಸಂಪುಟದೊಳಗೆ ಬರೆಯತೊಡಗಿದ. ಆಗ ಹೊಸ ಪೊಲೀಸ್ ಅಧಿಕಾರಿ ಬಂದಿದ್ದ. ಆತ ಇದನ್ನೆಲ್ಲ ಓದಿ ಗೂಗಿಗೆ ವಾಪಸ್ ಕೊಡುತ್ತಾ, ಇದರಲ್ಲಿ ನನಗೆ ತಪ್ಪೇನೂ ಕಾಣಿಸುತ್ತಿಲ್ಲ. ಆದರೆ ನೀವು ಬಹಳ ಕ್ಲಿಷ್ಟವಾದ ಗಿಕುಯುನಲ್ಲಿ ಬರೆಯುತ್ತೀರಿ’ ಅಂದ.

‘ಥ್ಯಾಂಕ್ಯೂ’ ಅಂದ ಗೂಗಿ.

‘ನೀವು ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿರಲಿಲ್ಲ. ಬಿಳಿ ಹಾಳೆಗಳನ್ನು ಕೊಡಲು ಚೀಫ್ ವಾರ್ಡರ್‌ಗೆ ಹೇಳುತ್ತೇನೆ. ನನ್ನ ಆಫೀಸಿನಲ್ಲಿ ಬೇಕಾದಷ್ಟಿದೆ. ಟಾಯ್ಲೆಟ್ ಪೇಪರ್ ಮೇಲಿರುವುದೆಲ್ಲವನ್ನೂ ಕಾಗದದ ಮೇಲೆ ಬರೆಯಿರಿ’ ಎಂದ.

ಗೂಗಿ ಬರೆಯುತ್ತಾನೆ: ‘ರಾತ್ರಿ ಮಾತ್ರವಲ್ಲದೆ, ಹಗಲು ಕೂಡ ಬರೆಯಲಾರಂಭಿಸಿದೆ. ಜೊತೆಗೆ, ಈ ಕಾದಂಬರಿಯ ಮುಕ್ತಾಯದೊಂದಿಗೆ ನನ್ನ ಬಿಡುಗಡೆಯ ಗಡುವು ಬೇರೆ ಮನಸ್ಸಿನಲ್ಲಿ ಗಂಟು ಹಾಕಿಕೊಂಡಿದೆ. ಚೀಫ್ ವಾರ್ಡರ್ ಕೊಟ್ಟ ಕಾಗದ ಸಾಕಾಗಲಿಲ್ಲ. ಜೊತೆಯ ಜೈಲುವಾಸಿಗಳು ಕೂಡ ತಮ್ಮ ಹಾಳೆಗಳನ್ನು ಕೊಟ್ಟರು. ಬಹಳ ಜನ ತಾವು ಉಳಿಸಿಟ್ಟುಕೊಂಡಿದ್ದ ಎಲ್ಲ ಪೇಪರನ್ನೂ ಕೊಟ್ಟರು.’

ಡಿಸೆಂಬರ್ 12, 1978ರ ರಾತ್ರಿ. ಕಾದಂಬರಿ ಪೂರ್ಣಗೊಳ್ಳುವುದ ರಲ್ಲಿತ್ತು... ಗೂಗಿಯ ಕಲ್ಪನೆಯ ಸಮಕ್ಕೆ ಓಡಲು ಅವನ ಕೈಗಳಿಗೆ ಕಷ್ಟವಾಗುತ್ತಿದೆ. ದೂರದಿಂದ ತನ್ನನ್ನು ಯಾರೋ ನೋಡುತ್ತಿದ್ದಾರೆ. ಕಾಗದ ಸಾಕಾಗದೆ ಟಾಯ್ಲೆಟ್ ಪೇಪರ್ ಮೇಲೆ ಬರೆಯಬೇಕಾಗಿ ಬಂದಿದೆ. ಗೂಗಿ ತಲೆಯೆತ್ತಿ ನೋಡಿದ: ಸೂಪರಿಂಟೆಂಡೆಂಟ್ ಆಫ್ ಪೊಲೀಸನ ಕಣ್ಣೋಟ ಗೂಗಿಯ ನೋಟದೊಡನೆ ಬೆರೆಯಿತು.

‘ಗೂಗಿ, ನೀವಿನ್ನು ಸ್ವತಂತ್ರ ಜೀವಿ’ಎಂದ ಎಸ್.ಪಿ.

ಗೂಗಿಗೆ ಕೊಟ್ಟಿದ್ದ 6.77 ಎಂಬ ನಂಬರಿಗೆ ಬದಲಾಗಿ ಮತ್ತೆ ಗೂಗಿ ಥಿಯಾಂಗೋ ಎಂಬ ಹೆಸರು ವಾಪಸ್ ಬಂತು.

ಗೂಗಿಯ ಕಾದಂಬರಿಯನ್ನು ಇಷ್ಟಪಟ್ಟು ಅನುವಾದಿಸಿದ್ದ ಬಂಜಗೆರೆ ಜಯಪ್ರಕಾಶರ ತಾತ್ವಿಕತೆಗೂ ಈ ಕೃತಿ ಹತ್ತಿರವಾಗಿತ್ತು. ಮಾರ್ಕ್ಸಿಸ್ಟ್ ಗೂಗಿ ಈ ಕಾದಂಬರಿಯಲ್ಲಿ ಆಫ್ರಿಕಾದ ನೆಲದಲ್ಲೇ ಅರಳಿದ ವಿಶಿಷ್ಟ ಕಮ್ಯುನಿಸ್ಟ್ ಮಾರ್ಗದ ಹೋರಾಟದ ಸಾಧ್ಯತೆಯನ್ನು ಶೋಧಿಸಿದ್ದ.

ಜೈಲಿನಿಂದ ಬಿಡುಗಡೆಯಾದ ಗೂಗಿಯ ನಿಷ್ಠುರ ಹೋರಾಟಗಾರ-ಬುದ್ಧಿಜೀವಿ ವ್ಯಕ್ತಿತ್ವವನ್ನು ಮುಂದಿನ ಕೀನ್ಯಾ ಸರಕಾರಗಳೂ ಸಹಿಸಿಕೊಳ್ಳಲಿಲ್ಲ. ಬಂಧನ-ಬಿಡುಗಡೆಗಳ ಚಕ್ರದಲ್ಲಿ ನರಳಿದ ಗೂಗಿ ಬರೆಯುತ್ತಲೇ ಹೋದ. ಒಮ್ಮೆ ಗೂಗಿಯ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ಮಾಡಿತು. ಗೂಗಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಲಾಯಿತು. ಇದೆಲ್ಲ ತನ್ನನ್ನು ಉಡುಗಿಸುವ ರಾಜಕೀಯ ಸಂಚು ಎಂದು ಗೂಗಿಗೆ ಖಾತ್ರಿಯಾಗಿತ್ತು.

‘ವಿಝರ್ಡ್ ಆಫ್ ದ ಕ್ರೋ’ (ಕಾಗೆ ಮಂತ್ರವಾದಿ) ಥರದ ಕ್ರಾಂತಿಕಾರಿ ಕಾದಂಬರಿ ಬರೆದ ಗೂಗಿ ಅದರಲ್ಲಿ ಕೂಡ ಆಫ್ರಿಕಾದ ನೆಲದಲ್ಲಿದ್ದ ಹೋರಾಟದ ಮಾದರಿಗಳನ್ನು ಕಮ್ಯುನಿಸ್ಟ್ ನೆಲೆಯಲ್ಲಿ ಮರುಸೃಷ್ಟಿಸಲೆತ್ನಿಸಿದ. ತನ್ನದೇ ಸಂಸ್ಕೃತಿಯ ಕಾಮಿರುತು ರಂಗಭೂಮಿಯನ್ನು ಮರು ಸೃಷ್ಟಿಸಿ ಆಫ್ರಿಕಾದ ಲಯಕ್ಕೆ ಹತ್ತಿರವಿರುವ ‘ಐ ವಿಲ್ ಮ್ಯಾರಿ ವೆನ್ ಐ ವಾಂಟ್’ ನಾಟಕ ಬರೆದ. ಆಫ್ರಿಕನ್ ಬೇರುಗಳಿಗೆ ಮರಳುತ್ತಿದ್ದ ಗೂಗಿ ಆಫ್ರಿಕಾದ ದೇಶಿ ಸರಕಾರಗಳ ಕಾಟ ತಾಳಲಾರದೆ ಕೊನೆಗೆ ನೈಜೀರಿಯಾದ ಪ್ರಸಿದ್ಧ ಲೇಖಕ ವೋಲೆ ಶೋಯಿಂಕಾನಂತೆ ಅಮೆರಿಕದಲ್ಲಿ ನೆಲೆಸಿದ. ಗೂಗಿಯ ಮಗಳು, ಮಗ ಕೂಡ ಬರವಣಿಗೆಯಲ್ಲಿ ತೊಡಗಿದ್ದರು. ‘ಮನೆಯಲ್ಲೇ ಬಹಳ ಕಾಂಪಿಟೀಶನ್ ಇದೆ’ ಎಂದು ನಗುತ್ತಿದ್ದ ಗೂಗಿ, ತನ್ನ 88ನೆಯ ವಯಸ್ಸಿನಲ್ಲಿ ತೀರಿಕೊಂಡ.

ವಸಾಹತು ಆಡಳಿತ ಕಾಲದ ದಾಸ್ಯ, ಹೋರಾಟಗಳನ್ನು ಕಂಡಿದ್ದ ಗೂಗಿ, ವಸಾಹತೋತ್ತರ ಕಾಲದ ಆಫ್ರಿಕನ್ ಆಡಳಿತದ ಭ್ರಷ್ಟಾಚಾರವನ್ನು ಪ್ರತಿಭಟಿಸಿ ಸಂಕಷ್ಟಕ್ಕೊಳಗಾದ; ಗೂಗಿ ಕೂಡ ಇತರ ಆಫ್ರಿಕನ್ ಲೇಖಕರಂತೆ ಲಕ್ಷಾಂತರ ಆಫ್ರಿಕನ್ನರ ಹೊಸ ಪ್ರಜ್ಞೆಯನ್ನು ರೂಪಿಸಿದ್ದಾನೆ. ಗೂಗಿಯ ಪ್ರಜ್ಞೆಯ ನಿರ್ವಸಾಹತೀಕರಣದ ಥಿಯರಿ ಆಫ್ರಿಕಾದಾಚೆಗೆ ಭಾರತದಂಥ ದೇಶಗಳಿಗೂ ಕೈಪಿಡಿಯಂತಿದೆ. ಅದನ್ನು ರಹಮತ್ ತರೀಕೆರೆ ಕನ್ನಡದಲ್ಲೂ ನಿರೂಪಿಸಿದ್ದಾರೆ.

ಈಚಿನ ದಶಕಗಳಲ್ಲಿ ಇಂಗ್ಲಿಷ್ ಲಿಪಿ ಬಳಸಿ ಗಿಕುಯು ಭಾಷೆಯಲ್ಲಿ ಬರೆದರೂ ಮತ್ತೆ ಇಂಗ್ಲಿಷ್ ಮೂಲಕ ಲೋಕದ ತುಂಬ ಹಬ್ಬಿದ ಗೂಗಿ ವಾ ಥಿಯಾಂಗೋ ಬದುಕು, ಬರಹಗಳು ಚಿಂತನೆ, ಬರವಣಿಗೆಯಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು.

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X