Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ತಾವರೆ ತಿನ್ನುವವರ ನಾಡಿನಲ್ಲಿ!

ತಾವರೆ ತಿನ್ನುವವರ ನಾಡಿನಲ್ಲಿ!

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್15 Sept 2025 3:14 PM IST
share
ತಾವರೆ ತಿನ್ನುವವರ ನಾಡಿನಲ್ಲಿ!

ಕತೆಯೊಂದರ ಬಗೆಬಗೆಯ ಅರ್ಥವಿಸ್ತಾರಗಳನ್ನು ನೋಡನೋಡುತ್ತಾ, ‘ವಾಚ್ಯಕ್ಕಳಿವುಂಟು; ರೂಪಕಕ್ಕಳಿವಿಲ್ಲ’ ಅನ್ನಿಸತೊಡಗುತ್ತದೆ!

ಈ ಅನ್ನಿಸಿಕೆಗೆ ಪ್ರೇರಣೆಯಾದ ಬಸವಣ್ಣನವರ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಮಾಣಿಕದಲ್ಲಿ ವಾಚ್ಯ ಸ್ಥಾವರ, ರೂಪಕ ಜಂಗಮ ಎಂಬ ಅರ್ಥವೂ ಹೊರಡುತ್ತದೆ.

‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂಬ ಡೆರಿಡಾನ ಮಾತಿನ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿರುತ್ತದೆ!

ಆದ್ವೀಪದಲ್ಲಿರುವ ಜನರ ಕೆಲಸ ಇಷ್ಟೇ: ತಾವರೆ ತಿನ್ನುವುದು, ಸುಮ್ಮನೆ ಇರುವುದು, ಹಾಗೇ ಒರಗುವುದು, ಮಲಗುವುದು! ತಾವರೆ ತಿಂದರೆ ಸಾಕು, ಅವರಿಗೆ ಬೇರೇನೂ ಬೇಕೆನ್ನಿಸುವುದಿಲ್ಲ!

ಮೇಲುನೋಟಕ್ಕೆ ‘ಮಹಾ ಸೋಮಾರಿತನ’ ಎನ್ನಿಸುವ ಈ ಸ್ಥಿತಿಯನ್ನು ಸಾಂಕೇತಿಕವಾಗಿ ಎಲ್ಲರಿಗೂ ಅನ್ವಯಿಸಿ ನೋಡಿ: ಮನುಷ್ಯರಷ್ಟೇ ಅಲ್ಲ, ಎಲ್ಲ ಜೀವಿಗಳೂ ಒಂದಲ್ಲ ನೂರಾರು ಸಲ ಈ ಸ್ಥಿತಿಯಲ್ಲಿರಬೇಕೆಂದು ಬಯಸುತ್ತಲೇ ಇರಬಹುದು ಎಂಬುದು ನನ್ನ ಊಹೆ.

ಈ ‘ಲೋಟಸ್ ಈಟರ್ಸ್‌’ಅಥವಾ ‘ತಾವರೆ ಭಕ್ಷಕರು’ಕತೆ ಗ್ರೀಕ್ ಕವಿ ಹೋಮರನ ಮಹಾಕಾವ್ಯ ‘ಒಡಿಸ್ಸಿ’ಯ ಮೋಹಕ ಭಾಗಗಳಲ್ಲಿ ಒಂದು. ಹೋಮರನ ಮೊದಲ ಮಹಾಕಾವ್ಯ ‘ಇಲಿಯಡ್’ನಲ್ಲಿ ಗ್ರೀಕ್ ಹಾಗೂ ಟ್ರೋಜನ್ನರ ನಡುವೆ ಯುದ್ಧ ನಡೆಯುತ್ತದೆ. ಗ್ರೀಕರು ಯುದ್ಧ ಗೆಲ್ಲಲಾಗದೆ ವಾಪಸ್ ಹೊರಟ ನಂತರ ಗ್ರೀಕ್ ವೀರ, ಚತುರ ಒಡಿಸ್ಯೂಸ್ ಮರದ ಕುದುರೆಯಲ್ಲಿ ಯೋಧರನ್ನು ಹುದುಗಿಸಿ ಟ್ರಾಯ್ ಕೋಟೆಯೊಳಕ್ಕೆ ಕಳಿಸಿ ಟ್ರೋಜನ್ನರನ್ನು ಮುಗಿಸಿದ ಎಂಬ ಕತೆ ‘ಇಲಿಯಡ್’ಮಹಾಕಾವ್ಯದೊಳಗೆ ನಂತರ ಸೇರಿಕೊಂಡಿದೆ. ಈ ಪ್ರಸಂಗದಲ್ಲಿ ಬರುವ ‘ಟ್ರೋಜನ್ ಹಾರ್ಸ್’ ಎಂಬುದು ಯುರೋಪಿಯನ್ ಭಾಷೆಗಳಲ್ಲಿ ಕುಟಿಲೋಪಾಯವನ್ನು ಸೂಚಿಸುವ ನುಡಿಗಟ್ಟಾಗಿ ಬಳಕೆಯಾಗುತ್ತಿದೆ.

ಟ್ರೋಜನ್ ಯುದ್ಧದಲ್ಲಿ ಮಡಿಯದೆ ಉಳಿದ ಕೆಲವೇ ವೀರರಲ್ಲೊಬ್ಬನಾದ ಚತುರನಾಯಕ ಒಡಿಸ್ಯೂಸ್‌ಗೆ ಯೂಲಿಸಿಸ್ ಎಂಬ ಹೆಸರು ಕೂಡ ಇದೆ. ಒಡಿಸ್ಯೂಸನ ಯಾನ ಅಥವಾ ಪಯಣವೇ ‘ಒಡಿಸ್ಸಿ’. ಯುದ್ಧದಲ್ಲಿ ಅಳಿದುಳಿದ ಯೋಧರನ್ನು ಕರೆದುಕೊಂಡು ತನ್ನೂರು ಇಥಕಕ್ಕೆ ಹೊರಟ ಒಡಿಸ್ಯೂಸ್ ಹಲಬಗೆಯ ಕಷ್ಟ ಎದುರಿಸಿ, ಸಾಹಸ ನಡೆಸಿ ಮುಂದೆ ಸಾಗುತ್ತಿದ್ದಾನೆ. ಒಂದು ಘಟ್ಟದಲ್ಲಿ ಅವನಿದ್ದ ದೋಣಿ ಫೀಶಿಯಾ ಪಟ್ಟಣದ ಬಳಿ ಕಡಲ ದಂಡೆಗೆ ಬಡಿದು ಚೂರಾಗುತ್ತದೆ; ಒಡಿಸ್ಯೂಸ್ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಮೈ ಮೇಲೆ ನೂಲಿನೆಳೆಯೂ ಇಲ್ಲದೆ ಎಲೆಗಳಲ್ಲಿ ಸೊಂಟ ಮುಚ್ಚಿಕೊಂಡು ಮೇಲೆದ್ದು ಬರುತ್ತಿದ್ದ ಒಡಿಸ್ಯೂಸನ ಮೈಕಟ್ಟು ಕಂಡ ಫೀಶಿಯಾದ ದೊರೆ ಆಲ್ಸಿನೌಸ್‌ನ ಮಗಳು ರಾಜಕುಮಾರಿ ನೌಸಿಕಾಗೆ ಇವನು ಯಾರೋ ವೀರಾಧಿವೀರನೇ ಇರಬೇಕು; ಮದುವೆಯಾದರೆ ಇಂಥವನನ್ನೇ ಮದುವೆಯಾಗಬೇಕು ಎನ್ನಿಸುತ್ತದೆ! ಸಖಿಯರಿಗೆ ಹೇಳಿ ಅವನನ್ನು ಸಜ್ಜು ಗೊಳಿಸಿ ಅರಮನೆ ತಲುಪುವ ಹಾದಿ ತೋರಿಸುತ್ತಾಳೆ. ದೊರೆ ಆಲ್ಸಿನೌಸ್ ಅವನನ್ನು ಎದುರುಗೊಂಡು ಆದರಿಸುತ್ತಾನೆ.

ಒಂದು ಸಂಜೆ ಆಲ್ಸಿನೌಸ್‌ನ ಆಸ್ಥಾನದಲ್ಲಿ ಗಾಯಕನೊಬ್ಬ ಟ್ರೋಜನ್ ಯುದ್ಧಕಾಲದ ಒಡಿಸ್ಯೂಸ್-ಅಖಿಲೀಸರ ಕತೆಯನ್ನು ಹಾಡುತ್ತಾನೆ. ಈ ಹಾಡು ಕೇಳುತ್ತಾ ಒಡಿಸ್ಯೂಸ್‌ಗೆ ಕಣ್ಣೀರು ಉಕ್ಕುತ್ತದೆ. ‘ಯಾಕಪ್ಪಾ ಅಳುತ್ತಿದ್ದೀಯ?’ ಎಂದು ಆಲ್ಸಿನೌಸ್ ವಿಚಾರಿಸಿದಾಗ, ಒಡಿಸ್ಯೂಸ್ ‘ಆ ಹಾಡುಗಾರ ಬಣ್ಣಿಸುತ್ತಿರುವ ಓಡಿಸ್ಯೂಸ್ ನಾನೇ’ಎನ್ನುತ್ತಾನೆ. ಅಲ್ಲಿಯತನಕ ತನ್ನ ಗುರುತು ಮುಚ್ಚಿಟ್ಟಿದ್ದ ಒಡಿಸ್ಯೂಸ್ ತನ್ನ ಆವರೆಗಿನ ಸಾಹಸದ ಕತೆಗಳನ್ನು, ಟ್ರೋಜನ್ ಯುದ್ಧ ಮುಗಿದ ನಂತರ ಇಲ್ಲಿಯವರೆಗೆ ಪಟ್ಟ ಪಾಡನ್ನು, ಹೇಳುತ್ತಾನೆ. ಆಧುನಿಕ ಕಾಲದಲ್ಲಿ ನಾವು ‘ಫ್ಲ್ಯಾಶ್‌ಬ್ಯಾಕ್’ಎನ್ನುವ ಕಥಾನಿರೂಪಣಾ ತಂತ್ರವನ್ನು ಹೋಮರ್ 2800 ವರ್ಷಗಳ ಕೆಳಗೇ ಬಳಸಿದ್ದ! ಸಾವಿರ ವರ್ಷಗಳ ಕೆಳಗೆ ಕನ್ನಡ ಕವಿ ರನ್ನ ತನ್ನ ‘ಗದಾಯುದ್ಧ’ದಲ್ಲಿ ‘ಸಿಂಹಾವಲೋಕನ ತಂತ್ರ’ಬಳಸಿ ಹಿಂದೆ ನಡೆದ ಕತೆ ಹೇಳಿದ್ದ. ನನ್ನ ಕಲ್ಪನೆಯಲ್ಲಿ ಸಿಂಹಾವಲೋಕನ ಫ್ಲ್ಯಾಶ್‌ಬ್ಯಾಕ್‌ಗಿಂತ ಭಿನ್ನವಾದ, ವಿರಾಮದ ಕಥನತಂತ್ರದಂತೆ ಕಾಣುತ್ತಿರುತ್ತದೆ.

ಒಡಿಸ್ಯೂಸ್ ಆಲ್ಸಿನೌಸಿನ ಆಸ್ಥಾನದಲ್ಲಿ ತನ್ನ ಆವರೆಗಿನ ಯಾನದ ಕತೆ ಹೇಳುತ್ತಾ ಈ ಅಂಕಣದ ಆರಂಭದಲ್ಲಿ ಹೇಳಿದ ತಾವರೆ ತಿನ್ನುವವರ ನಾಡಿನ ಪ್ರಸಂಗಕ್ಕೆ ಬರುತ್ತಾನೆ. ಆ ಭಾಗದ ಸರಳ ಗದ್ಯಾನುವಾದ:

‘...ಅದಾದ ಮೇಲೆ ಒಂಭತ್ತು ದಿನ ಭೀಕರ ಬಿರುಗಾಳಿ ನಮ್ಮನ್ನು ಎಲ್ಲೆಲ್ಲೋ ಒಯ್ದಿತು. ಹತ್ತನೆ ದಿನಕ್ಕೆ ನಾವು ತಾವರೆ ತಿನ್ನುವವರ ನಾಡಿಗೆ ಕಾಲಿಟ್ಟೆವು. ಅಲ್ಲಿರುವ ಜನ ತೊಡಗಿರುವ ಒಂದೇ ಕೆಲಸವೆಂದರೆ ತಾವರೆ ತಿನ್ನುವುದು. ಸರಿ, ನಮ್ಮ ಪಾಡಿಗೆ ನಾವು ಕಡಲ ದಂಡೆಗೆ ಹೋಗಿ ಉಂಡೆವು, ಕುಡಿದೆವು. ಎಲ್ಲರೂ ಉಂಡಾದ ಮೇಲೆ, ‘ಈ ನಾಡಿನಲ್ಲಿರೋ ಆ ತಾವರೆ ತಿನ್ನೋ ಜನ ಯಾರು, ಎತ್ತ, ವಿಚಾರಿಸಿಕೊಂಡು ಬನ್ನಿ’ ಎಂದು ನನ್ನಿಬ್ಬರು ಸಹಚರರನ್ನು ಕಳಿಸಿದೆ. ಈ ಇಬ್ಬರ ಉಸ್ತುವಾರಿಗೆ ಮತ್ತೊಬ್ಬನನ್ನು ಕಳಿಸಿದೆ. ನಾನು ಕಳಿಸಿದ ಮೂವರೂ ತಾವರೆ ಭಕ್ಷಕರ ತಾಣಕ್ಕೆ ಹೋದರು. ಆದರೆ ಎಷ್ಟೊತ್ತಾದರೂ ಅವರು ಮರಳಿ ಬರಲೇ ಇಲ್ಲ!

ಆ ತಾವರೆ ಭಕ್ಷಕರು ನಮ್ಮವರಿಗೆ ಕೇಡನ್ನೇನೂ ಮಾಡಿರಲಿಲ್ಲ; ನಮ್ಮವರನ್ನೂ ‘ಬನ್ನಿ, ತಾವರೆ ರುಚಿ ನೋಡಿ’ಎಂದು ಕರೆದಿದ್ದರು. ಆ ಜೇನುಸವಿಯ ತಾವರೆ ತಿಂದವರಿಗೆ ಅಲ್ಲಿಂದ ಎದ್ದು ಹೊರಡುವ ಬಯಕೆಯೇ ಮೂಡುತ್ತಿರಲಿಲ್ಲ. ಹೀಗಾಗಿ ನಮ್ಮವರು, ನಮ್ಮೂರು, ಊರ ದಾರಿ, ಮನೆ... ಎಲ್ಲ ಮರೆತು ಅಲ್ಲಿಯೇ ಇದ್ದುಬಿಟ್ಟಿದ್ದರು. ನಾನು ಅಲ್ಲಿಗೆ ಹೋಗಿ ಅವರನ್ನು ಕಾಡಿ ಬೇಡಿ, ಅತ್ತು ಕರೆದು, ಅವರನ್ನು ಹಡಗಿನತ್ತ ಎಳೆದುಕೊಂಡು ಬಂದು ಕಟ್ಟಿ ಹಾಕಿದೆ. ‘ಸರಸರ ಹಡಗು ಮುನ್ನಡೆಸಿ’ ಎಂದು ಉಳಿದ ನಾವಿಕರಿಗೆ ಹೇಳಿದೆ. ಯಾಕೆಂದರೆ ಉಳಿದವರು ಕೂಡ ಆ ತಾವರೆ ತಿಂದು ಮನೆಯ ಹಾದಿ ಮರೆತಾರೆಂದು ನನ್ನ ಭಯ. ನನ್ನ ಮಾತಿಗೆ ಕಿವಿಗೊಟ್ಟ ನಾವಿಕರು ಹಡಗು ನಡೆಸತೊಡಗಿದರು.

ಇಂಥ ಮಹಾಕಾವ್ಯ ಕತೆಗಳೆಲ್ಲ ಓಬೀರಾಯನ ಕಾಲದ ಕತೆಗಳು, ಊಳಿಗಮಾನ್ಯ ಕಾಲದ ಕತೆಗಳು ಇತ್ಯಾದಿ ವಾದಗಳೆಲ್ಲ ಒಂದು ಮಟ್ಟದವರೆಗೆ ಸರಿಯಿರಬಹುದು. ಆದರೆ ಈ ಮಹಾಕಾವ್ಯ ಕತೆಗಳನ್ನು ಜನಸಮುದಾಯದ ಸಾಮೂಹಿಕ ಮಹಾಜ್ಞಾನ-ಕಲೆಕ್ಟೀವ್ ವಿಸ್ಡಂ- ಅಥವಾ ಕಾರ್ಲ್ ಯೂಂಗ್ ಹೇಳುವ ಸಾಮೂಹಿಕ ಅಪ್ರಜ್ಞೆ- ‘ಕಲೆಕ್ಟಿವ್ ಅನ್‌ಕಾನ್ಷಿಯಸ್’-ಕೂಡ ಸೃಷ್ಟಿಸಿದೆ ಎಂಬುದನ್ನು ಮರೆಯಬಾರದು. ಅವು ಜನಮಾನಸದ ಕತೆಗಳಾಗಿ ಸಾವಿರಾರು ತಲೆಮಾರುಗಳು ಮೆಚ್ಚಿ, ಮೆಲುಕು ಹಾಕಿರುವ ಕತೆಗಳೂ ಆಗಿರುತ್ತವೆ; ಅವುಗಳಲ್ಲಿರುವ ರೂಪಕಗಳು ಹೊಸ ಹೊಸ ತಲೆಮಾರುಗಳಿಗೆ ಆಕರ್ಷಕವೂ ಆಗಿರುತ್ತವೆ; ಎಲ್ಲ ಕಾಲಕ್ಕೂ ಹೊಸ ಅರ್ಥ ಕೊಡುವ ಕತೆಗಳೂ ಆಗುತ್ತವೆ. ಹೋಮರನ ‘ಒಡಿಸ್ಸಿ’ಯಲ್ಲಿರುವ ತಾವರೆ ತಿನ್ನುವವರ ಕತೆಯನ್ನು ಮೂವತ್ತೈದು ವರ್ಷಗಳ ಕೆಳಗೆ ಓದಿದಾಗಿನಿಂದಲೂ ಈ ಕತೆಯ ಹಾಗೂ ಒಟ್ಟಾರೆಯಾಗಿ ಮಹಾಕಾವ್ಯ ರೂಪಕಗಳ ಕಾಲಾತೀತತೆ ಅಚ್ಚರಿ ಹುಟ್ಟಿಸುತ್ತಲೇ ಇರುತ್ತದೆ.

ಇಂಗ್ಲಿಷ್ ಕವಿ ಆಲ್‌ಫ್ರೆಡ್ ಟೆನ್ನಿಸನ್ ಈ ಕತೆ ಓದಿ ಚಕಿತಗೊಂಡು ‘ಲೋಟಸ್ ಈಟರ್ಸ್’ಎಂಬ ಸುಂದರ ಪದ್ಯ ಬರೆದು ತಾವರೆ ತಿಂದವರ ಸ್ಥಿತಿ-ಮನಸ್ಥಿತಿಗಳನ್ನು ಇನ್ನಷ್ಟು ಚಿತ್ರಕವಾಗಿ ವಿಸ್ತರಿಸಿ ತೋರಿಸಿದ. ಟೆನ್ನಿಸನ್ ಪದ್ಯದ ಶುರುವಿನಲ್ಲಿ ಒಡಿಸ್ಯೂಸ್ ತಾವರೆ ತಿಂದು ಆರಾಮಾಗಿ ಕೂತಿದ್ದ ತನ್ನ ಸೈನಿಕರಿಗೆ ‘ಕರೇಜ್!’ ಎಂದು ಹುರಿದುಂಬಿಸುತ್ತಾನೆ. ಸೈನಿಕರು ಹೊರಡಲು ಸಿದ್ಧರಿಲ್ಲ! ಸುಂದರ ಮಧ್ಯಾಹ್ನ, ಮೆಲ್ಲಗೆ ಮದವೇರಿಸುವ ಸೋಮಾರಿತನ... ಅಯ್ಯೋ ಮುಂದಿನ ಗುರಿ, ಊರು... ಇವೆಲ್ಲ ಯಾರಿಗೆ ಬೇಕು ಎಂದು ಒಡಿಸ್ಯೂಸನ ಸೈನಿಕರು ತಾವರೆ ತಿಂದು ಕುಂತಲ್ಲೇ ಕೂರುತ್ತಾರೆ.

ಹೀಗೆ ತಾವರೆ ತಿಂದು ಇದ್ದಲ್ಲೇ ಇರಬಯಸುವವರ ಈ ಕತೆ, ಎಲ್ಲೆಂದರಲ್ಲಿ, ಯಾವುದರಲ್ಲಿ ಮುಳುಗಿದ್ದರೆ ಅದರಲ್ಲೇ ಇರುವ ಎಲ್ಲರ ಕತೆಯೂ ಆಗಿರಬಹುದೇನೋ! ಯಾರಿಗೆ ಬೇಡ ಈ ಸ್ಥಿತಿ? ಏನೂ ಮಾಡದೆ ಆರಾಮಾಗಿರುವುದು! ‘ಇಲ್ಲಿ ಏನೂ ಕೆಲಸ ಇಲ್ಲ. ಆರಾಮಾಗಿದ್ದೇನೆ’ಎಂದು ಆನಂದ ಪಡುವ ಜನರನ್ನು ನೋಡುತ್ತಲೇ ಇರುತ್ತೇವೆ. ಅಂಥವರು ಒಳಗೊಳಗೇ ಜಡರಾಗಿ ಕೊಳೆತು ನಾಶವಾಗುತ್ತಾರೆ ಎನ್ನುವವರೂ ಇರಬಹುದು. ಅದೇ ರೀತಿ ಸಂಗೀತ, ಓದು, ಕಲೆಗಳಲ್ಲಿ ಮುಳುಗಿ, ಬೇರೇನೂ ಬೇಡ ಎನ್ನುವವರ ಸ್ಥಿತಿಯನ್ನೂ ಈ ಕತೆ ಹೇಳುತ್ತಿದೆಯೆ? ಊರು ಬಿಟ್ಟು ನಗರ ಸೇರಿ, ಊರಿನತ್ತ ತಲೆ ಹಾಕಿಯೂ ಮಲಗದೆ ಇರುವವರ ಮಂಪರನ್ನೂ ಈ ಕತೆ ಸೂಚಿಸುತ್ತಿದೆಯೆ? ಅಥವಾ ಕೆಲಸದಲ್ಲೇ ಮುಳುಗಿ ಬೇರೇನೂ ಬೇಡ ಎನ್ನುವ ‘ವರ್ಕ್‌ಆಲ್ಕೋಹಾಲಿಕ್’ಗಳ-ಕಾಯಕ ನಶಾಜೀವಿಗಳ- ಸ್ಥಿತಿಯನ್ನೂ ಇದು ಹೇಳುತ್ತಿರಬಹುದಲ್ಲವೆ?

ಕತೆಯೊಂದರ ಬಗೆಬಗೆಯ ಅರ್ಥವಿಸ್ತಾರಗಳನ್ನು ನೋಡನೋಡುತ್ತಾ, ‘ವಾಚ್ಯಕ್ಕಳಿವುಂಟು; ರೂಪಕಕ್ಕಳಿವಿಲ್ಲ’ ಅನ್ನಿಸತೊಡಗುತ್ತದೆ! ಈ ಅನ್ನಿಸಿಕೆಗೆ ಪ್ರೇರಣೆಯಾದ ಬಸವಣ್ಣನವರ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಮಾಣಿಕದಲ್ಲಿ ವಾಚ್ಯ ಸ್ಥಾವರ, ರೂಪಕ ಜಂಗಮ ಎಂಬ ಅರ್ಥವೂ ಹೊರಡುತ್ತದೆ. ‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂಬ ಡೆರಿಡಾನ ಮಾತಿನ ಸತ್ಯ ಮತ್ತೆ ಮತ್ತೆ ಸಾಬೀತಾಗುತ್ತಿರುತ್ತದೆ!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X