ಧೀಮಂತ ಸಮಾಜವಾದಿಯ ವರ್ಷದ ಡೈರಿ

ಈಡೈರಿಯ ಶುರುವಿನಲ್ಲಿ ಶಾಂತವೇರಿ ಗೋಪಾಲಗೌಡರು ತಮ್ಮ ಹಳೆಯ ಡೈರಿಗಳು ‘ಯಾರ ಯಾರ ಮನೆಯಲ್ಲೋ ಬಿದ್ದಿವೆ. ಅವುಗಳನ್ನೆಲ್ಲ ಸಂಗ್ರಹಿಸುವುದು ಸಾಧ್ಯವಾದರೆ ಏನಾದರೂ ಪ್ರಯೋಜನವಾದೀತು’ ಎಂದು ಬರೆಯುತ್ತಾರೆ. ಕರ್ನಾಟಕದ ಧೀಮಂತ ನಾಯಕನ ಆ ಡೈರಿಗಳು ಯಾರ ಬಳಿಯಾದರೂ ಇದ್ದರೆ, ಅವುಗಳ ಪ್ರಕಟಣೆ ಕರ್ನಾಟಕದ ರಾಜಕೀಯ ಚರಿತ್ರೆಯ ಮಹತ್ವದ ದಾಖಲೆಯಾಗಬಲ್ಲದು.
ಮೈಸೂರಿನ ಡಾ. ವಿಷ್ಣುಮೂರ್ತಿಯವರಿಗೆ ಗೋಪಾಲಗೌಡರು 1960ರಲ್ಲಿ ಬರೆದ ಈ ಡೈರಿಯೂ ಸೇರಿದಂತೆ ನಂತರದ ಆರು ವರ್ಷದ ಡೈರಿಗಳು ಸಿಕ್ಕವು. ಗೌಡರ ಗೆಳೆಯರೂ ಆಗಿದ್ದ ವಿಷ್ಣುಮೂರ್ತಿ ಪ್ರಕಟಿಸಿದ್ದ ‘ಗೋಪಾಲಗೌಡ ಶಾಂತವೇರಿ: ಅಂತರಂಗ ಬಹಿರಂಗ’ ಪುಸ್ತಕದಲ್ಲಿ ಈ ಡೈರಿಗಳ ಜೊತೆಗೇ ಪತ್ರಗಳು, ಭಾಷಣಗಳು, ಶಾಂತವೇರಿ ಕುರಿತ ನೆನಪುಗಳು, ಪತ್ರಿಕಾ ಹೇಳಿಕೆಗಳು ಇವೆಲ್ಲ ಇದ್ದವು. ಧಾರವಾಡದ ಅನನ್ಯ ಪ್ರಕಾಶನ ಈ ಅಪೂರ್ವ ಚಾರಿತ್ರಿಕ ದಾಖಲೆಗಳನ್ನು 2024ರಲ್ಲಿ ಮತ್ತೆ ಪ್ರಕಟಿಸಿ ಅವನ್ನು ಮರುಜೀವಗೊಳಿಸಿದೆ. ಈ ಪುಸ್ತಕ ನೋಡನೋಡುತ್ತಾ, ನ್ಯಾಶನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ನನ್ನ ‘ಶಾಂತವೇರಿ ಗೋಪಾಲಗೌಡ’ ಪುಸ್ತಕಕ್ಕಾಗಿ 2017ರಲ್ಲಿ ಗೋಪಾಲಗೌಡರ ಡೈರಿಯಿಂದ ಆಯ್ದುಕೊಂಡ ಟಿಪ್ಪಣಿಗಳು ನೆನಪಾದವು:
1952ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದ ತರುಣ ಗೋಪಾಲಗೌಡರು 1957ರಲ್ಲಿ ಚುನಾವಣೆ ಸೋತರು. ಆನಂತರ ಯಾವ ಆದಾಯವೂ ಇಲ್ಲದೆ, ಬೆಂಗಳೂರಿನಲ್ಲಿ ಇರಲು ಮನೆಯೂ ಇಲ್ಲದೆ ಗೋಪಾಲಗೌಡರು ಹಲ್ಲುಕಚ್ಚಿ ಬದುಕುತ್ತಿದ್ದರು. ಅವರು ದಾಖಲಿಸಿರುವ 1960ರ ವರ್ಷದ ದಿನಚರಿಯ ವಿವರಗಳು: ‘ಸಂಜೆ ಬಾಟಾದಿಂದ ಎರಡು ಮೂರು ರೂಪಾಯಿಗಳನ್ನು ತರಿಸಿಕೊಂಡು ಕಾಲ ಹಾಕಲಾಯಿತು.’ ‘ಮಂಡ್ಯದವರು ಕೊಟ್ಟಿದ್ದ 40 ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು. ಇಂದು ಯಾವ ಹಣವೂ ಬರಲಿಲ್ಲ.’ ಸಣ್ಣ ಪುಟ್ಟ ಸಾಲ ಕೊಟ್ಟವರು ಮರಳಿ ಕೇಳುತ್ತಿದ್ದರು: ‘ಬೆಳಗ್ಗೆ ಶ್ರೀ ಬಸಪ್ಪ ಹಣ ವಸೂಲಿಗಾಗಿ ಬಂದಿದ್ದರು. ನಮ್ಮ ಪರಿಸ್ಥಿತಿ ವಿವರಿಸಿದ ಮೇಲೆ ಅವರೇ ನಮಗೆ ಪಂಜಾಬ್ ಕೆಫೆಯಲ್ಲಿ ವಡೆ, ಟೀ ಇತ್ಯಾದಿ ಕೊಡಿಸಿ ಕೈ ಬಿಟ್ಟರು... ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ಬಸಪ್ಪನವರಿಗೆ ವಾಯಿದೆ ಹೇಳಿ ಹೇಳಿ ಸಾಕಾಯಿತು.’
ಬೇರೆಯವರಿಂದ ಹಣ ತೆಗೆದುಕೊಳ್ಳುವಾಗ ಗೌಡರಿಗೆ ಅಪಾರ ಮುಜುಗರವೂ ಆಗುತ್ತಿತ್ತು: ‘ಗೆ. ಕೋಣಂದೂರುಲಿಂಗಪ್ಪ ರಾತ್ರಿ ರೈಲಿಗೆ ಮೈಸೂರಿಗೆ ಹೋದ. ನನ್ನ ಸ್ಥಿತಿ ನೋಡಿ ಆತನೇ ಹತ್ತು ರೂ. ಕೊಟ್ಟ. ಅದನ್ನು ಸ್ವೀಕರಿಸುವುದು ನನಗೆ ತುಂಬ ಕಷ್ಟವಾಯಿತು. ಆದರೂ ತೆಗೆದುಕೊಂಡೆ. ಆತ ವಿದ್ಯಾರ್ಥಿ. ನನಗಿಂತಲೂ ಅಸಹಾಯಕ, ಬಡವ. ನಾನು ಅವನಿಗೆ ಸಹಾಯ ಮಾಡುವುದು ಬಿಟ್ಟು, ನಾನು ಅವನಿಂದ ಹಣ ಪಡೆಯುವುದೆಂದರೆ ಆಭಾಸಕರ.’
ಸಣ್ಣಪುಟ್ಟ ಪ್ರಯಾಣದ ಖರ್ಚಿಗೂ ಹಣವಿಲ್ಲದೆ ಗೌಡರು ಅಸಹಾಯಕರಾಗಿದ್ದರು. ಬೆಂಗಳೂರಿನ ಮೆಜೆಸ್ಟಿಕ್‌ನ ಚಿಕ್ಕ ಲಾಲ್‌ಬಾಗ್ ಬಳಿ ಸಮಾಜವಾದಿ ಪಕ್ಷದ ಕಾರ್ಯಾಲಯವಿತ್ತು. ಕಾರ್ಯಾಲಯ ತೆರವುಗೊಳಿಸಬೇಕೆಂದು ಮಾಲಕರು ಕೇಸು ಹಾಕಿದ್ದರು. ಈ ಸಂಬಂಧ ಕೋರ್ಟಿನ ಅಲೆತವೂ ನಡೆಯುತ್ತಿತ್ತು. ‘ಮಾರ್ಗದರ್ಶಿ’ ವಾರಪತ್ರಿಕೆ ಪ್ರಕಟಿಸಲು ಮತ್ತೆ ಮತ್ತೆ ಸಾಲ ಎತ್ತಬೇಕಾಗಿತ್ತು. ಪತ್ರಿಕೆ ಅಚ್ಚು ಮಾಡಿದರೂ, ಪೋಸ್ಟ್ ಮಾಡಲು ಅಂಚೆ ಚೀಟಿ ಕೊಳ್ಳುವುದು ಕಷ್ಟವಿತ್ತು. ಪಕ್ಷಕ್ಕೆ ಹೊಸ ಸದಸ್ಯರನ್ನು ಮಾಡಿಸಿ, ಸದಸ್ಯರಿಂದ ಐದು, ಹತ್ತು ರೂಪಾಯಿ ಸದಸ್ಯತ್ವ ಶುಲ್ಕ ಪಡೆಯುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿತ್ತು.
ಗೋಪಾಲಗೌಡರ ಆರೋಗ್ಯವೂ ಕೆಡುತ್ತಿತ್ತು. ಪಿತ್ತಕೋಪ. ಅರುಚಿ, ಜ್ವರ, ಆಮಶಂಕೆ, ಇಂಜೆಕ್ಷನ್, ಮಾತ್ರೆ... ಹೀಗೆ ಇಡೀ ವರ್ಷ ಅನಾರೋಗ್ಯ. ಬಟ್ಟೆಗಳು ಹರಿದು ಹೋಗಿದ್ದವು. ‘ಹೊಸ ಬಟ್ಟೆಗೆ 8ರೂ. 10 ಪೈಸೆ ಮತ್ತು ಹೊಲಿಗೆಗೆ 2 ರೂ; 3 ರೂ. ಇಂಜೆಕ್ಷನ್, 1 ರೂ. 25 ಪೈ. ಮಾತ್ರೆ, 2 ರೂ. ಸಿಗರೇಟು.’ ಸಭೆಯೊಂದರ ಸಂಘಟಕರು ಹತ್ತು ರೂಪಾಯಿ ಮನಿಯಾರ್ಡರ್ ಮಾಡಿದ ಮೇಲೆ ಗೌಡರು ಮಂಡ್ಯದ ಸಭೆಗೆ ಹೋಗುತ್ತಾರೆ: ‘ಮಂಡ್ಯದವರು ಕೊಟ್ಟಿದ್ದ 40 ರೂ.ಗಳಲ್ಲಿ ಕಳೆದ ಒಂದು ವಾರದಿಂದ ಕಾಲ ಹಾಕಿದ್ದಾಯಿತು.’
ಅವರಿವರಿಂದ ಇಪ್ಪತ್ತು, ನಲವತ್ತು, ಇಪ್ಪತ್ತೈದು ರೂಪಾಯಿಗಳ ಕೈಗಡ, ಜಮಾ, ಸಹಾಯ ತೆಗೆದುಕೊಂಡು, ದುಡ್ಡಿದ್ದಾಗ ಎರಡೆರಡು ಪೇಜ್ ಕಂಪೋಸ್ ಮಾಡಿಸಿ, ಕಷ್ಟಪಟ್ಟು ಹಾಗೂ ಹೀಗೂ ನಡೆಸುತ್ತಿದ್ದ ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು’ ಎಂಬ ಗಾಢ ವಿಷಾದವೂ ಇಲ್ಲಿದೆ.
ಅಂದಿನ ಕರ್ನಾಟಕ ರಾಜಕೀಯದ ಅಗೋಚರ ಚರಿತ್ರೆಯಂತಿರುವ ಈ ಡೈರಿಯಲ್ಲಿ ಸೂಕ್ಷ್ಮ ಸಮಾಜವಾದಿ ನಾಯಕನ ರಾಜಕೀಯ ಹಿನ್ನಡೆಯ ಕಾಲದ ರಾಜಕೀಯ ಚಟುವಟಿಕೆಗಳು, ಸಾರ್ವಜನಿಕ ಜವಾಬ್ದಾರಿಗಳು, ಬಡತನ, ಅಭದ್ರತೆ, ಒಂಟಿತನ, ಸಂಜೆಯ ಹಾಗೂ ನಾಳೆಯ ಊಟದ ಖಾತ್ರಿಯಿರದ ಸ್ಥಿತಿ, ಇನ್ನೊಬ್ಬರಿಂದ ಹಣ ಪಡೆಯುವಾಗ ಹುಟ್ಟುವ ದೈನೇಸಿತನ, ಮತ್ತೆ ಮತ್ತೆ ಆತ್ಮಾಭಿಮಾನಕ್ಕೆ ಬೀಳುವ ಪೆಟ್ಟು...ಹೀಗೆ ಒಬ್ಬ ಸೂಕ್ಷ್ಮ ನಾಯಕನಿಗೆ ಹಲವು ದಿಕ್ಕಿನ ಕಷ್ಟಗಳು ಮುತ್ತುತ್ತವೆ.
ಆ ವರ್ಷ ಗೋಪಾಲಗೌಡರು ಧಾರವಾಡಕ್ಕೆ ಹೋದಾಗಿನ ಒಂದು ವಿವರ: ‘...ಇಲ್ಲಿ ಎಲ್ಲಾ ಥಂಡಿ- ರಾಜಕೀಯವೂ ಥಂಡಿ. ನಮ್ಮ ಗೆಳೆಯರಂತೂ ಉಸಿರಾಡಲು ಕೂಡ ಹಿಂದೆಗೆಯುತ್ತಿದ್ದಾರೆ. ನಿರಾಶೆ, ಅಸಹಾಯಕತೆ, ವಿಮುಖತೆ, ಜಿಗುಪ್ಸೆ ಎಲ್ಲಾ ಸೇರಿ ನಿಶ್ಚೇಷ್ಟಿತರಾಗಿದ್ದಾರೆ. ಜೀವನ ನಡೆಸುವುದು ತೀರಾ ಕಷ್ಟವಾಗಿದೆ ಈ ಜನಕ್ಕೆ. ಹೋರಾಡಲು ಶಕ್ತಿಯಿಲ್ಲ.’
ಆ ದಿನಗಳಲ್ಲಿ ಗೋಪಾಲಗೌಡರು ಹೈದರಾಬಾದ್‌ನಲ್ಲಿ ಕಂಡ ಸಮಾಜವಾದಿ ಕಾರ್ಯಾಲಯದ ಚಿತ್ರ: ‘ದುಂಡುಮೇಜಿನ ಸುತ್ತ ಗೆಳೆಯ ಮುರಹರಿ, ಅಧ್ಯಾತ್ಮ ತ್ರಿಪಾಠಿ, ಅಜನಾಲ್ವಿ ಉದಾಸರಾಗಿ ಕುಳಿತಿದ್ದರು. ಅಲ್ಲಲ್ಲಿ ಒಳಗೆ ಒಬ್ಬಿಬ್ಬರು ಕೂತಿದ್ದರು... ನಮ್ಮ ಬೆಂಗಳೂರು ಕಾರ್ಯಾಲಯಕ್ಕಿಂತ ಕಳಾಹೀನ, ಜೀವನ್ಮರಣ ಸ್ಥಿತಿ ಎಲ್ಲೆಲ್ಲೂ ಅದರ ಮುದ್ರೆ ಒತ್ತಿತ್ತು. ಕಸ ಕಡ್ಡಿಗಳ ರಾಶಿ, ನಗು ಸತ್ತ ಮುಖ, ಅಸಹಾಯಕ ಕೆಲಸಗಾರರು- ಅಯ್ಯೋ ಹೀಗಾಗಬಾರದಿತ್ತು ಎಂದು ಮನಸ್ಸಿಗೆ ಸಂಕಟವಾಯಿತು.’
ಹತಾಶೆ, ನಿರಾಶೆಗಳ ನಡುವೆಯೂ ಗೋಪಾಲಗೌಡ ಮತ್ತವರ ಸಮಾಜವಾದಿ ಸಂಗಾತಿಗಳು ಚಳವಳಿ ರಾಜಕಾರಣದ ಮೂಲಕ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುವ ಮೂಲಕ ಸಮಾಜವಾದಿ ಹೋರಾಟವನ್ನು ಜೀವಂತವಾಗಿ ಇಡಲೆತ್ನಿಸುತ್ತಿದ್ದರು. ಹರತಾಳ; ಅರಣ್ಯಭೂಮಿ ಆಕ್ರಮಿಸುವ ಉಪವಾಸ ಸತ್ಯಾಗ್ರಹ; ಇಂಗ್ಲಿಷ್ ತೊಲಗಿಸಿ ಆಂದೋಲನ; ಸಾಮಾನುಗಳನ್ನು ದಾಸ್ತಾನು ಮಾಡಿದ ಗೋಡೌನುಗಳ ಎದುರು ಸತ್ಯಾಗ್ರಹ; ಸವಿನಯ ಕಾನೂನುಭಂಗ ಚಳವಳಿ; ಕೋರ್ಟುಗಳ ಎದುರು ಪಿಕೆಟಿಂಗ್, ಬಂಧನ ಇತ್ಯಾದಿಗಳು ನಡೆಯುತ್ತಿದ್ದವು. ಆದರೆ ನಿರಾಶಾದಾಯಕ ಫಲಿತಾಂಶಗಳು ಕಾರ್ಯಕರ್ತರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದವು: ‘ಸಾರ್ವತ್ರಿಕ ಮುಷ್ಕರ ಅಷ್ಟಾಗಿ ಬೆಂಗಳೂರಿನಲ್ಲಿ ಯಶಸ್ವಿಯಾಗಲಿಲ್ಲ’; ‘ಕಾರ್ಪೊರೇಷನ್ ಎಲೆಕ್ಷನ್‌ನಲ್ಲಿ ನಮ್ಮ ಪಾರ್ಟಿಯ ಎಲ್ಲರೂ ಸೋತಿದ್ದಾರೆ.’
ಈ ಸ್ಥಿತಿಯಲ್ಲೂ ಗೌಡರು ಪಿ. ಕಾಳಿಂಗರಾಯರ ಹಾಡು ಕೇಳಿ ಮೈಮರೆಯುವುದು, ರೇಡಿಯೊದಲ್ಲಿ ಅಲಿ ಅಕ್ಬರ್ ಸರೋದ್ ವಾದನ ಕೇಳಿಸಿಕೊಳ್ಳುವುದು, ಕಾರಂತರ ‘ಅಳಿದ ಮೇಲೆ’ ಥರದ ಕಾದಂಬರಿಗಳನ್ನು ಓದುವುದು ಇವೆಲ್ಲ ಡೈರಿಯಲ್ಲಿವೆ. ‘ಲಂಕೇಶಪ್ಪನವರ ಜೊತೆ ಬಂದಿದ್ದ ಕೆ.ಎಸ್. ನಿಸಾರ್ ಅಹಮದ್ ಪದ್ಯ ಓದಿ’ದ್ದೂ ಇದೆ. ನೆಬೊಕೊವ್ ಅವರ ‘ಲೋಲಿತಾ’ ಕಾದಂಬರಿ, ಪರ್ಲ್ ಎಸ್. ಬಕ್ ಅವರ ‘ದಿ ಹಿಡನ್ ಫ್ಲವರ್ ಕಾದಂಬರಿ ಓದಿದ ವಿವರವೂ ಇದೆ: ‘ದಿನವೆಲ್ಲಾ ‘ದ ಹಿಡನ್ ಫ್ಲವರ್’ ಓದುತ್ತಾ ಕಳೆದೆ. ವಿಶ್ವದಲ್ಲಿ ಇಬ್ಬರು ಪ್ರೇಮಿಗಳು ತನ್ನ ಇಚ್ಛೆಯಂತೆ ಕೂಡಿ ಜೀವನ ನಡೆಸಲು ಸಮಾಜ ಎಷ್ಟು ಅಡ್ಡಿ ಬರುತ್ತದೆಂಬ ಸಮಸ್ಯೆಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ ಪರ್ಲ್ ಎಸ್. ಬಕ್; ಅಂಥವರಿಗೆ ಹುಟ್ಟಿದ ಮಕ್ಕಳು?’ ನಿರಾಶೆ, ಅನಿಶ್ಚಯಗಳ ನಡುವೆ ಸಾಹಿತ್ಯ, ಸಂಗೀತ, ರಾಜಕೀಯ ಚಿಂತನೆ, ಸಂಬಂಧಗಳು ಗೋಪಾಲಗೌಡರನ್ನು ಕೊಂಚವಾದರೂ ನೆಮ್ಮದಿಯಲ್ಲಿಟ್ಟ ಸೂಚನೆಗಳಿವೆ. ಗೋಪಾಲಗೌಡರು ತೀರಾ ಸ್ವ ಮರುಕವಿಲ್ಲದೆ ತಮ್ಮ ಹತಾಶೆಯ ಸ್ಥಿತಿಯನ್ನು ತೂಗಿಸಿಕೊಂಡು ಹೋಗಿರುವ ರೀತಿ ಅವರ ಅನನ್ಯ ಹಳ್ಳಿಗ ಛಲವನ್ನೂ ಸೂಚಿಸುತ್ತದೆ.
ಗೋಪಾಲಗೌಡರ ಈ ಸ್ಥಿತಿಯ ಬಗ್ಗೆ ಮುಂದೊಮ್ಮೆ ‘ಕಟ್ಟೆ ಪುರಾಣ’ದ ಬಿ.ಚಂದ್ರೇಗೌಡರ ಜೊತೆ ಮಾತಾಡುತ್ತಾ ಲಂಕೇಶ್ ಹೇಳಿದರು: ‘...ಆಗ ಗೋಪಾಲಗೌಡರು ತುಂಬ ಹಣಕಾಸಿನ ತೊಂದರೆಯಲ್ಲಿದ್ದರು. ನಾವೆಷ್ಟು ಅವಿವೇಕಿಗಳಾಗಿದ್ವು ಅಂದ್ರೆ, ಅವರ ಹತ್ರ ದುಡ್ಡಿದೆಯೋ ಇಲ್ಲವೋ ಅಂತ ಕೂಡ ಕೇಳುತ್ತಿರಲಿಲ್ಲ. ನಾವು ಅವರ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳದಷ್ಟು ಅಹಂಕಾರಿಗಳೂ ಸಿನಿಕರೂ ಆಗಿದ್ದೆವು.’ ಅವತ್ತು ಮಾತು ನಿಲ್ಲಿಸಿದಾಗ ಲಂಕೇಶರ ಕಣ್ಣು ತುಂಬಿ ಬಂದಿತ್ತು ಎಂದು ಚಂದ್ರೇಗೌಡ ನೆನಸಿಕೊಳ್ಳುತ್ತಾರೆ.
1960ರ ವರ್ಷ ಮುಗಿದ ದಿನ ಡಿಸೆಂಬರ್ 31ರಂದು ಗೋಪಾಲಗೌಡರು ಬರೆಯುತ್ತಾರೆ: ‘ಈ ವರ್ಷವೆಲ್ಲಾ ತೊಡಕಿನಿಂದಲೇ ಕಳೆಯಿತು. ಪಾರ್ಟಿಯ ಕೆಲಸಗಳು ತೃಪ್ತಿಕರವಾಗಿ ನಡೆಯಲಿಲ್ಲ. ಕಾನೂನುಭಂಗ ಚಳವಳಿಯೂ ಸಫಲವಾಗಲಿಲ್ಲ. ಗ್ರಾಮ ಪಂಚಾಯತ್ ಮತ್ತು ತಾಲೂಕು ಬೋರ್ಡುಗಳಿಗೆ ನಡೆದ ಚುನಾವಣೆಗಳಲ್ಲಿ ಪಾರ್ಟಿ ಹೇಳಿಕೊಳ್ಳುವಂತಹ ಪಾತ್ರ ವಹಿಸಲಿಲ್ಲ.
ಸದಸ್ಯತ್ವ ವೂ ನಡೆಯಲಿಲ್ಲ. ಸಂಘಟನೆ ಮತ್ತಷ್ಟು ಬಲಹೀನವಾಯಿತೆಂದೇ ಹೇಳಬೇಕು. ಗೆ. ಶಿವಪ್ಪ, ಕಣ್ಣನ್ ಮೊದಲಾದವರು ಪಿ.ಎಸ್.ಪಿ.ಗೆ ಹೊರಟು ಹೋದರು. ‘ಮಾರ್ಗದರ್ಶಿ’ ಪತ್ರಿಕೆ ಆರಂಭವಾಗಿ ಹಾಗೇ ಮುಕ್ತಾಯವಾಯಿತು. ಈ ಕಡೆಯ ಎರಡು ತಿಂಗಳುಗಳನ್ನು ಅನಾರೋಗ್ಯ ಮತ್ತು ವಿಶ್ರಾಂತಿಯಲ್ಲಿ ಕಳೆದೆ.’
ತತ್ವನಿಷ್ಠವಾದ ಶುಭ್ರ ರಾಜಕಾರಣಕ್ಕೆ ಒದಗಿದ ಸ್ಥಿತಿಯನ್ನು ದಾಖಲಿಸುವ ಈ ಡೈರಿಯ ವಿವರಗಳನ್ನು ನೋಡುತ್ತಿದ್ದರೆ ಎದೆ ಭಾರವಾಗತೊಡಗುತ್ತದೆ.