ನೂರು ವರ್ಷ ದಾಟಿದ ಒಂದು ಕ್ಲಾಸಿಕ್

ಇದ್ದಕ್ಕಿದ್ದಂತೆ ರಾಬರ್ಟ್ ಫ್ರಾಸ್ಟ್ ಬರೆದ ‘ದ ರೋಡ್ ನಾಟ್ ಟೇಕನ್’ ಎಂಬ ಪ್ರಖ್ಯಾತ ಕವಿತೆಯಲ್ಲಿ ಬರುವ ‘ವೇ ಲೀಡ್ಸ್ ಆನ್ ಟು ವೇ...’ ಎಂಬ ಬಣ್ಣನೆ ತೇಲಿ ಬಂತು. ಬದುಕಿನಲ್ಲಿ ನಾವು ಹಿಡಿಯುವ ಒಂದು ಹಾದಿ ಮತ್ಯಾವುದೋ ಹಾದಿಗೆ ಒಯ್ಯುತ್ತದೆೆ ಎನ್ನುತ್ತದೆ ಈ ಸಾಲು. ಹೀಗೇ ಒಂದು ಹಾದಿ ಇನ್ನೊಂದಕ್ಕೆ, ಮತ್ತೊಂದಕ್ಕೆ ಕರೆದೊಯ್ಯುತ್ತಲೇ ನನ್ನ ಅಥವಾ ನಿಮ್ಮ ಅಥವಾ ಎಲ್ಲರ ಕ್ರಿಯೆಗಳೂ, ಬರಹಗಳೂ ಹುಟ್ಟಿರಬಹುದೇ? ಬರಹಗಳ ವಿಷಯದಲ್ಲಂತೂ, ನನಗರಿವಿಲ್ಲದೆಯೇ ನನ್ನನ್ನು ಎಲ್ಲೋ ಒಯ್ದು ‘ಪರವಶ’ವಾಗಿಸಿದ ಬರಹಗಳೇ ಆಕರ್ಷಕ ಎನ್ನಿಸತೊಡಗುತ್ತವೆ.
ಎರಡು ವಾರದ ಕೆಳಗೆ ಇದೇ ಅಂಕಣದಲ್ಲಿ ರಶ್ಯನ್ ಮಹಿಳೆ ನೀನಾ ಕುಟಿನಾರ ಗುಹಾವಾಸ ಕುರಿತು ‘ಗುಹಾರೂಪಕದ ಸುತ್ತ’ ಎಂಬ ಬರಹ ಬರೆಯುತ್ತಿರುವಾಗಲೇ ‘ಎ ಪ್ಯಾಸೇಜ್ ಟು ಇಂಡಿಯಾ’ದ ಮರಬಾರ್ ಗುಹೆಗಳು ಸುಳಿದಿದ್ದನ್ನು ನೀವು ಗಮನಿಸಿರಬಹುದು. ಹೀಗೆ ಒಂದು ಪ್ರತಿಮೆ ತಂತಾನೇ ಮತ್ತೊಂದಕ್ಕೆ ಒಯ್ಯುವ ಗಳಿಗೆಗಳೇ ನನ್ನ ನಿತ್ಯದ ಅದೃಷ್ಟದ ಗಳಿಗೆಗಳು! ರಶ್ಯನ್ ಮಹಿಳೆಯ ಗುಹೆ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಗೆ; ನಂತರ ಸ್ತ್ರೀವಾದಿಯೊಬ್ಬರು ಅಗೆದುಕೊಟ್ಟ ಅದೇ ಹೆಸರಿನ ಸಿನೆಮಾಕ್ಕೆ; ಗೆಳೆಯ ವಿಖಾರ್ ಅಹಮದ್ ಹುಡುಕಿಕೊಟ್ಟ ‘ಎ ಪ್ಯಾಸೇಜ್ ಟು ಇಂಡಿಯಾ’ಕ್ಕೆ ನೂರು ತುಂಬಿದ್ದನ್ನು ಕುರಿತ ಬರಹಕ್ಕೆ ನನ್ನನ್ನು ಕರೆದೊಯ್ದಿತು.
ಇಪ್ಪತ್ತೇಳು ವರ್ಷಗಳ ಕೆಳಗೆ ಒಂದು ಸಂಜೆ ಲಂಕೇಶರ ಜೊತೆ ‘ಎ ಪ್ಯಾಸೇಜ್ ಟು ಇಂಡಿಯಾ’ ಸಿನೆಮಾ ನೋಡುತ್ತಿರುವಾಗ, ಲಂಕೇಶರು ಗೋಡ್‌ಬೋಲೆಯ ಪಾತ್ರವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ನಮ್ಮನ್ನೆಲ್ಲ ನಗಿಸುತ್ತಿದ್ದ ಸುಂದರ ಚಣಗಳು ನೆನಪಾಗುತ್ತವೆ: ಪ್ರೊಫೆಸರ್ ಗೋಡ್‌ಬೋಲೆ ಮೈಯೆಲ್ಲ ಎಣ್ಣೆ ಸವರಿಕೊಂಡು, ಹೇಗೆ ಬೇಕೆಂದರೆ ಹಾಗೆ ಹಿಂದೂ ಫಿಲಾಸಫಿಯನ್ನು ನಾಲಗೆಯಲ್ಲೇ ನುಲಿಯಬಲ್ಲವನು. ‘ಮರಬಾರ್ ಗುಹೆಗಳ ಪ್ರವಾಸ ಯಶಸ್ವಿಯೇ ಮಿಸ್ಟರ್ ಗೋಡ್‌ಬೋಲೆ?’ ಎಂದು ಫೀಲ್ಡಿಂಗ್ ಕೇಳಿದರೆ, ಗೋಡ್‌ಬೋಲೆ ‘ಹೌ ಕೆನ್ ಐ ಸೇ, ಐ ವಾಸ್ ನಾಟ್ ದೇರ್’ ಎನ್ನುವನು! ಯಾವುದೋ ಬಿಕ್ಕಟ್ಟಿನ ಬಗ್ಗೆ ‘ನಿನ್ನ ಅಭಿಪ್ರಾಯವೇನು?’ ಎಂದರೆ, ‘ನನ್ನ ಅಭಿಪ್ರಾಯ ಕ್ರಿಯೆಯ ಪರಿಣಾಮವನ್ನು ಬದಲಿಸದು’ ಎಂದು ಅರೆ ಕಣ್ಣು ಮುಚ್ಚಿ ಅಪ್ಪಣೆ ಕೊಡಿಸುವನು!
ಗೋಡ್‌ಬೋಲೆಯ ‘ಹೌ ಕೆನ್ ಐ ಸೇ ಐ ವಾಸ್ ನಾಟ್ ದೇರ್’ ಎಂಬ ಮಾತನ್ನು ಲಂಕೇಶ್ ಆಗಾಗ ಅನುಕರಿಸಿ ಹೇಳುತ್ತಾ ನಗೆ ಉಕ್ಕಿಸುತ್ತಿದ್ದರು. ಹೇಳಿದ ಸಮಯಕ್ಕಿಂತ ಮೊದಲೇ ಇಂಗ್ಲಿಷ್ ಟೀಚರ್ ಫೀಲ್ಡಿಂಗ್‌ನ ಮನೆಗೆ ಬಂದ ಡಾಕ್ಟರ್ ಅಝೀಝ್, ಸ್ನಾನ ಮಾಡುತ್ತಿರುವ ಫೀಲ್ಡಿಂಗ್‌ನನ್ನು ಎಡೆಬಿಡದೆ ಮಾತಾಡಿಸುವ ದೃಶ್ಯ ಬಂದಾಗ, ‘ನೋಡಿ- ಈ ಇಂಡಿಯನ್ಸ್‌ಗೆ ಯಾವನಾರೂ ಪಂಕ್ಚುಯಾಲಿಟಿ ಕಲಿಸೋಕಾಗುತ್ತೇನ್ರಿ! ಹೇಳಿದ ಟೈಮಿಗಿಂತ ಮೊದಲೇ ಬರೋದು; ಇಲ್ಲಾ ಯಾವಾಗಲೋ ಬರೋದು?’ ಎಂದು ತಮ್ಮ ನಿತ್ಯದ ಅನುಭವವೇ ರಿಪ್ಲೇ ಆದಂತೆ ಲಂಕೇಶ್ ಕಿರಿಕಿರಿಗೊಳ್ಳುತ್ತಿದ್ದರು.
ಫಾಸ್ಟರನ ಕಾದಂಬರಿಯನ್ನು ಮೆಚ್ಚಿದ್ದ, ಪ್ರಾಯಶಃ ಪಾಠವನ್ನೂ ಮಾಡಿದ್ದ ಇಂಗ್ಲಿಷ್ ಮೇಷ್ಟ್ರು ಲಂಕೇಶ್ ಈ ಸಿನೆಮಾವನ್ನೂ ಹಲವು ಸಲ ನೋಡಿದಂತಿತ್ತು. ಈ ಕಾದಂಬರಿ, ಸಿನೆಮಾಗಳೆರಡೂ ಲಂಕೇಶರನ್ನು ಯಾಕಿಷ್ಟು ಸೆಳೆದಿದ್ದವು ಎಂಬುದು ಈಚೆಗೆ ಇವೆರಡನ್ನೂ ಹೊಕ್ಕಾಗ ನನಗೆ ಸರಿಯಾಗಿ ಅರ್ಥವಾಗತೊಡಗಿತು. ಆ ಕೆಲಸ ಈ ಕೆಲಸಗಳ ನಡುವೆಯೇ ಕಿಂಡಲ್‌ನಲ್ಲಿ ಈ ಕಾದಂಬರಿ ಓದುತ್ತಾ, ಬಿಟ್ಟು ಬಿಟ್ಟು ಸಿನೆಮಾ ನೋಡುತ್ತಿದವನಿಗೆ ಯಾವ ಕೆಲಸ ಮಾಡುತ್ತಿದ್ದರೂ ‘ಏ ಪ್ಯಾಸೇಜ್ ಟು ಇಂಡಿಯಾ’ದ ಪ್ಯಾಸೇಜಿನಲ್ಲೇ ಅಡ್ಡಾಡುತ್ತಿರುವಂತೆ ಭಾಸವಾಗುತ್ತಿತ್ತು! ಕಾದಂಬರಿಯಂಥ ಲಾಂಗ್ ನ್ಯಾರೇಟಿವ್‌ಗಳ- ಅಂದರೆ ಸುದೀರ್ಘ ನಿರೂಪಣೆಯ ಕೃತಿಗಳ- ಸಮ್ಮೋಹಿನಿ, ಮಾಯೆ, ಶಕ್ತಿ ಎಲ್ಲವೂ ಎಂದಿನಂತೆ ಮತ್ತೆ ಮೈಮನಕ್ಕಿಳಿಯ
ತೊಡಗಿದವು.
ಇದು ಒಂಭತ್ತು ವರ್ಷದ ಹುಡುಗನಾಗಿದ್ದಾಗಿನಿಂದಲೂ ನನ್ನ ಕಾದಂಬರಿಲೋಕದ ಅನುಭವ! ಅದು ತ್ರಿವೇಣಿ, ಅಶ್ವಿನಿ, ಎಂ.ಕೆ. ಇಂದಿರಾ, ಕಾರಂತರ ಕಾದಂಬರಿಯಿರಲಿ; ನಂತರ, ಆಲ್ಬರ್ಟ್ ಕಾಮುವಿನ ‘ಔಟ್‌ಸೈಡರ್’ ಕಾದಂಬರಿಯ ಕನ್ನಡಾನುವಾದ ‘ಅನ್ಯ’ ಇರಲಿ; ಆನಂತರ ವೀಣಾ ಶಾಂತೇಶ್ವರ, ಮಾರ್ಕ್ವೆಜ್, ಅಚಿಬೆ, ಸಲ್ಮಾನ್ ರಶ್ದಿಯವರ ಕಾದಂಬರಿಯಿರಲಿ... ಕಾದಂಬರಿ ನನ್ನನ್ನು ತನ್ನೊಳಗೆ ಬದುಕಿಸಿಕೊಳ್ಳುತ್ತಲೇ ಬಂದಿದೆ... ಅದು ಕಾಣಿಸುವ ಲೋಕ ಇವತ್ತಿಗೂ ನನ್ನ ಒಳದ್ರವ್ಯವಾಗಿರುವಂತಿದೆ; ಕಾದಂಬರಿಯೊಡನೆ ಇರುವುದು ಎಂದರೆ ಬದುಕುವುದು ಕೂಡ ಎಂದು ನಂಬುವ ನನಗೆ ಕಾದಂಬರಿಗಳನ್ನು ಪಠ್ಯವಾಗಿಸುವ ಅವಕಾಶ ಕಳೆದುಕೊಂಡ ಕಾಲೇಜು ಮೇಷ್ಟ್ರುಗಳು, ಮೇಡಂಗಳು ನತದೃಷ್ಟರು ಎನ್ನಿಸುತ್ತದೆ; ಅವರು ತಮ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಡನೆ ಬದುಕಿನ ಸುದೀರ್ಘ ಸಂವಾದ ನಡೆಸುವ ಅದ್ಭುತ ಅವಕಾಶ ಕಳೆದುಕೊಂಡಿದ್ದಾರೆ? ಎನ್ನಿಸುತ್ತದೆ.
ಫಾಸ್ಟರ್ 1924ರಲ್ಲಿ ಬರೆದ ‘ಎ ಪ್ಯಾಸೇಜ್ ಟು ಇಂಡಿಯಾ’ಗೆ ಕಳೆದ ವರ್ಷ ನೂರು ವರ್ಷ ತುಂಬಿತು. ಈ ಕಾದಂಬರಿಯ ಕೇಂದ್ರ ಘಟನೆಯನ್ನು ಎರಡು ವಾರಗಳ ಕೆಳಗೆ ಬರೆದ ‘ಗುಹಾರೂಪಕದ ಸುತ್ತ’ ಅಂಕಣದಲ್ಲಿ ಹೇಳಿದ್ದೇನೆ. 1984ರಲ್ಲಿ ಡೇವಿಡ್ ಲೀನ್ ಮಾಡಿದ ‘ಎ ಪ್ಯಾಸೇಜ್ ಟು ಇಂಡಿಯಾ’ ಸಿನೆಮಾಕ್ಕೆ ಈಗ ನಲವತ್ತು ವರ್ಷ ತುಂಬಿತು. ಈ ಸಿನೆಮಾ ಫಾಸ್ಟರ್ ಕಾದಂಬರಿಯನ್ನು ನಾಟಕ ರೂಪಕ್ಕಿಳಿಸಿದ ಇಂಡಿಯನ್-ಅಮೆರಿಕನ್ ಲೇಖಕಿ ಶಾಂತಾ ರಾಮರಾವು ಅವರ ಕೃತಿಯನ್ನೂ ಆಧರಿಸಿದೆ. ಶ್ರೇಷ್ಠ ಸಿನೆಮಾ ನಿರ್ದೇಶಕ ಡೇವಿಡ್ ಲೀನ್ ಮಾಡಿರುವ ಸಿನೆಮಾ ಇವತ್ತಿಗೂ ಮಾಸಿಲ್ಲ. ಅದರಲ್ಲೂ ಕಾದಂಬರಿಯಲ್ಲಿ ಅಝೀಝ್ ಮುಖದ ಮೇಲಿನ ಹಿಂಜರಿಕೆ, ಆಗಾಗ ಮಿನುಗುವ ಅವನ ಮೊಗಲ್ ಹೆಮ್ಮೆ, ಭಾರತದಲ್ಲಿ ಬದುಕುವ ವಿದ್ಯಾವಂತ ಮುಸ್ಲಿಮನೊಬ್ಬನ ಗೊಂದಲ, ಸಂಕೋಚ, ಅಸಹಾಯಕತೆ, ಬೆರಗು, ಕೋಪ, ದಿಗ್ಭ್ರಮೆ, ಕಹಿ, ಸಂಶಯ... ಇವೆಲ್ಲವನ್ನೂ ಸಹಜವಾಗಿ ಹಾದು ಹೋಗಿರುವ ವಿಕ್ಟರ್ ಬ್ಯಾನರ್ಜಿ; ಸಾವಿರಾರು ವರ್ಷಗಳಿಂದ ಗೋಡ್‌ಬೋಲೆಯ ಚರ್ಮದ ಭಾಗವಾಗಿರುವ ಹಿಪಾಕ್ರಸಿ; ಅದು ಹಿಪಾಕ್ರಸಿಯೆಂಬುದು ಆತನಿಗೇ ಅರಿವಿಲ್ಲದಿರಬಹುದಾದ ಹಿಪಾಕ್ರಸಿ; ಅದನ್ನು ಹಾಗೇ ಬಿಂಬಿಸಿರುವ ಅಲೆಕ್ ಗಿನ್ನಿಸ್; ಅಡೆಲಾ ಆಗಿರುವ ಜೂಡಿ ಡೇವಿಸ್, ಫೀಲ್ಡಿಂಗ್ ಪಾತ್ರಧಾರಿ ಜೇಮ್ಸ್ ಫಾಕ್ಸ್ ಇವರೆಲ್ಲ ನಾನು ಕಾದಂಬರಿಯಲ್ಲಿ ಕಂಡಂತೇ ಇದ್ದಾರೆ... ಇವರನ್ನೆಲ್ಲ ನಿಭಾಯಿಸಿರುವ ಡೇವಿಡ್ ಲೀನ್ ಹಾಗೂ ತಂಡ...ಎಲ್ಲ ಸೇರಿ ಸಿನೆಮಾ ಕೂಡ ಕಾದಂಬರಿಯಷ್ಟೇ ದೊಡ್ಡ ಕಲಾಕೃತಿಯಾಗಿದೆ.
ಈ ಸಿನೆಮಾ ಪಾತ್ರಗಳ ಮೂಲಕ ಮತ್ತೆ ಕಾದಂಬರಿಯತ್ತ ಮರಳಿದೆ. ಪೂರ್ವ-ಪಶ್ಚಿಮಗಳನ್ನು ಅರ್ಥ ಮಾಡಿಕೊಳ್ಳಲು ಹೊರಟ ಕೆಲವು ಸುದೀರ್ಘ ಸಂವಾದಗಳು ಕೊಂಚ ಡೇಟೆಡ್ ಅನ್ನಿಸತೊಡಗಿದರೂ, ಫಾಸ್ಟರ್ ಕತೆಗಾರಿಕೆಯ ಮೋಹಕ ಗುಣ ಹಾಗೇ ಇದೆ. ಒಂದೇ ಸಾಲಿನಲ್ಲಿ ಪಾತ್ರದ ಒಳಗುಣ ಹಿಡಿದಿಡುವ ಅವನ ಶಕ್ತಿ; ಜನ ತುಂಬಿದ ಬಝಾರುಗಳು; ಮೊಹರಂ ಸಂಭ್ರಮ; ಮತೀಯ ಗೊಂದಲ... ಓದುವವರ ಚಿತ್ತದಲ್ಲಿ ಇವೆಲ್ಲವನ್ನೂ ಬಹುಕಾಲ ಉಳಿಸುವ ಬರವಣಿಗೆಯ ಶಕ್ತಿ?ಇವನ್ನೆಲ್ಲ ಸಿನೆಮಾದ ಚಿತ್ರಗಳಾಗಿಸಿರುವ ಸಿನೆಮಾ ತಂಡದ ಕಲಾನಿಷ್ಠ ಧ್ಯಾನ?
ಇಷ್ಟೆಲ್ಲ ವಿಶಿಷ್ಟವಾಗಿದ್ದರೂ ಇವತ್ತು ‘ಎ ಪ್ಯಾಸೇಜ್ ಟು ಇಂಡಿಯಾ’ ಓದುತ್ತಿದ್ದರೆ, ವಸಾಹತುಕಾಲದ ಭಾರತದ ತಲ್ಲಣಗಳನ್ನು ವಸ್ತುನಿಷ್ಠವಾಗಿ ಅರಿಯಬಯಸುವ ಹೊರಗಿನ ಲೇಖಕನೊಬ್ಬ ಇದನ್ನೆಲ್ಲ ಬರೆಯುತ್ತಿದ್ದಾನೇನೋ ಅನ್ನಿಸುವುದು ಕೂಡ ಸಹಜ. ಆದರೂ ಇಲ್ಲಿರುವುದು ಟೂರಿಸ್ಟ್ ಮೆಂಟಾಲಿಟಿಯಲ್ಲ; ಯಾವುದೇ ಲೇಖಕ ಇನ್ನೊಂದು ಸಂಸ್ಕೃತಿಯನ್ನು ಕುರಿತು ಬರೆದಾಗ ನುಸುಳುವ ಸಹಜ ಸಮಸ್ಯೆ ಎನ್ನಿಸುತ್ತದೆ. ಇಲ್ಲೇ ಕನ್ನಡದಲ್ಲೇ ಒಂದು ಊರಿನ ಲೇಖಕ ಅದೇ ಊರಿನ ಇನ್ನೊಂದು ಕೇರಿಯ ಪಾತ್ರಗಳನ್ನು, ಆ ಪಾತ್ರಗಳ ಭಾಷೆಯ ಏರಿಳಿತಗಳನ್ನು ಕೂಡ ಸರಿಯಾಗಿ ಕೇಳಿಸಿಕೊಳ್ಳಲಾಗದೆ, ಊಹಿಸಿಕೊಂಡಂತೆ ಬರೆದ ಸಮಸ್ಯೆಗಳನ್ನು ಕಂಡಿದ್ದೇವೆ; ಇದು ಅನಂತಮೂರ್ತಿ, ಕಾರಂತರಂಥ ದೊಡ್ಡ ದೊಡ್ಡ ಲೇಖಕರ ಸಂದರ್ಭದಲ್ಲೇ ಕಾಣುತ್ತಿರುವಾಗ, ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದು ಬರೆದ ಫಾಸ್ಟರ್‌ನಲ್ಲಿ ಸಣ್ಣಪುಟ್ಟ ಕೊರತೆ ಕಂಡರೆ ಅಚ್ಚರಿಯೇನಲ್ಲ.
ಫಾಸ್ಟರ್ 1912-13ರ ನಡುವೆ ಇಂಡಿಯಾಕ್ಕೆ ಬಂದು ಗೆಳೆಯ ಸೈಯದ್ ರಾಸ್ ಮಸೂದ್ ಜೊತೆ ಕಳೆದ. ಇಂಡಿಯಾದುದ್ದಕ್ಕೂ ಅಡ್ಡಾಡಿದ. 1921-22ರ ನಡುವೆ ದೇವಾಸ್‌ನ ಮಹಾರಾಜನ ಪ್ರೈವೇಟ್ ಸೆಕ್ರೆಟರಿಯಾಗಿ ಕೆಲಸ ಮಾಡಿದ ಫಾಸ್ಟರ್, ವಸಾಹತೀಕರಣ ಕಾಲದ ಇಂಡಿಯಾದ ಸೂಕ್ಷ್ಮ ಸಾಂಸ್ಕೃತಿಕ ಸಂಘರ್ಷಗಳನ್ನು ಇನ್ನಷ್ಟು ಹತ್ತಿರದಿಂದ ಗ್ರಹಿಸಿದಂತಿದೆ. ಇಂಗ್ಲೆಂಡ್ ಹಾಗೂ ಇಂಡಿಯಾ; ಇಂಡಿಯಾದೊಳಗೇ ಹಲವು ಧರ್ಮ, ಜಾತಿಗಳ ಇಂಡಿಯಾಗಳು; ಮಾನವರ ಗುಹೆಗಳು, ಗುಹ್ಯಾಂತರಂಗಗಳು... ಇವನ್ನೆಲ್ಲ ಬೃಹತ್ ಬೀಸಿನಲ್ಲಿ ಹಿಡಿಯುತ್ತಾ, 400 ಪುಟಗಳ ಕಾದಂಬರಿಯಲ್ಲಿ ನಾಗರಿಕತೆಗಳ ಕತೆ ಹೇಳಹೊರಟ ಮಹತ್ವಾಕಾಂಕ್ಷೆ ಸುಲಭದ್ದಲ್ಲ!
ನೂರು ವರ್ಷ ದಾಟಿದ ಈ ಕ್ಲಾಸಿಕ್ ಮತ್ತೆ ನನ್ನನ್ನು ಹಿಡಿದಿದ್ದು ಒಂದು ಆಕಸ್ಮಿಕ ಅದೃಷ್ಟ! ಇಂಥ ಅದೃಷ್ಟಗಳು ನಿತ್ಯವೂ ಎಲ್ಲರ ಪಾಲಿಗಿರಲಿ.