8 ಕಳವು ಪ್ರಕರಣಗಳನ್ನು ಭೇದಿಸಿದ ಗದಗ ಪೊಲೀಸರು: ಇಬ್ಬರ ಆರೋಪಿಗಳ ಬಂಧನ
ಚಿನ್ನಾಭರಣ, ದ್ವಿಚಕ್ರ ವಾಹನ ಸಹಿತ 14.50 ಲಕ್ಷ ರೂ. ಮೌಲ್ಯದ ಸೊತ್ತು ವಶ

ಗದಗ: ಜಿಲ್ಲೆಯ ಲಕ್ಷೇಶ್ವರ, ಶಿರಹಟ್ಟಿ, ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳ ಕಳ್ಳತನ ಸೇರಿದಂತೆ ಒಟ್ಟು 8 ಪ್ರಕರಣಗಳನ್ನು ಭೇದಿಸುವಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹೇಳಿದ್ದಾರೆ.
ಅವರು ಈ ಕುರಿತು ನಗರದ ಎಸ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಲಕ್ಷ್ಮೇಶ್ವರ ಪೊಲೀಸ್ ವ್ಯಾಪ್ತಿಯ ಆದರಹಳ್ಳಿ ಗ್ರಾಮದ ಸೋಗಿಹಾಳ ರಸ್ತೆಗೆ ಇರುವ ಒಬ್ಬರ ಮನೆಯ ಕೀಲಿ ಮುರಿದು ಮನೆಯಲ್ಲಿ ಕಪಾಟಿನಲ್ಲಿಟ್ಟಿದ್ದ ಒಟ್ಟು 15 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಆದರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ಮಾನಪ್ಪ ವಡ್ಡರ, ಇವರ ಗ್ರಾಮ ಒನ್ ಅನ್ ಲೈನ್ ಸೆಂಟರ್ ಕೀಲಿ ಮುರಿದು ಒಳನುಗ್ಗಿ 18 ಸಾವಿರ ರೂ. ಮೌಲ್ಯದ ಲ್ಯಾಪ್ ಟಾಪ್ ಕಳವುಗೈದ ಪ್ರಕರಣಕ್ಕೆ ಇಬ್ಬರನ್ನು ಬಂಧಿಸಲಾಗಿದೆ. ಜಿ. ಸತೀಶಗೌಡ ಲೇಶನಗೌಡ, ಲಕ್ಷ್ಮಣ ಯಲ್ಲಪ್ಪ ಮೊಡಿಕೇರ ಬಂಧಿತ ಆರೋಪಗಳು. ಪ್ರಕರಣದ ಇನ್ನೋರ್ವ ಆರೋಪಿ ಚಂದ್ರ ಯಾನೆ ಕುರಡಚಂದ್ರ ಹುಲಗಪ್ಪ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳು ಲಕ್ಷ್ಮೇಶ್ವರ, ಶಿರಹಟ್ಟಿ, ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಹಾಗೂ ಮೋಟರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ತಿಳಿದು ಬಂದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ 2 ಲಕ್ಷ ರೂ. ಮೌಲ್ಯದ ಒಟ್ಟು 4 ಬೈಕ್ ಗಳು, 12 ಲಕ್ಷ ರೂ. ಮೌಲ್ಯದ 122.5 ಗ್ರಾಂ ಚಿನ್ನಾಭರಣ, 2 ಸಾವಿರ ರೂ. ಮೌಲ್ಯದ 150 ಗ್ರಾಂ ಬೆಳ್ಳಿಯ ಆಭರಣಗಳು, ಒಟ್ಟು 22 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ ಗಳು ಹಾಗೂ 28 ಸಾವಿರ ರೂ. ಮೌಲ್ಯದ 2 ಲ್ಯಾಪ್ ಟಾಪ್ಗಳು ಸೇರಿ ಒಟ್ಟು 14,50,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಶಿರಹಟ್ಟಿ ಠಾಣೆಯಯ ಸಿಪಿಐ ನಾಗರಾಜ ಮಾಡಳ್ಳಿ, ಮುಳಗುಂದ ಠಾಣೆಯ ಪಿಐ ಸಂಗಮೇಶ ಶಿವಯೋಗಿ, ಲಕ್ಷ್ಮೇಶ್ವರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಟಿ.ಕೆ.ರಾಠೋಡ, ಶಿರಹಟ್ಟಿ ಠಾಣೆಯ ಪಿ.ಎಸ್.ಐ ಚನ್ನಯ್ಯ ದೇವೂರ, ಲಕ್ಷೇಶ್ವರ ಠಾಣೆಯ ಪಿಎಸ್ಐ ನಾಗರಾಜ ಗಡದ ಹಾಗೂ ಶಿರಹಟ್ಟಿ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶೇಖರ ಕಡಬಿನ, ಶಿರಹಟ್ಟಿ ವೃತ್ತದ ಆರ್.ಎಸ್.ಯರಗಟ್ಟಿ, ಲಕ್ಷೇಶ್ವರ ಪೊಲೀಸ್ ಠಾಣೆಯ ಎ.ಎಸ್.ಐ ಎನ್.ಎ.ಮೌಲ್ವಿ, ಎಂ.ಎ.ಶೇಖ್, ಸಿಬ್ಬಂದಿಯಾದ ಎಂ.ಎಸ್.ಬಳ್ಳಾರಿ, ಎ.ಆರ್.ಕಮ್ಮಾರ, ಡಿ.ಎಸ್.ನದಾಫ್, ಪಾಂಡುರಂಗ ರಾವ್, ಎಚ್.ಎ.ಕಲ್ಲಣ್ಣವರ, ಎಂ.ಆರ್.ಧಾರವಾಡ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಯ ಹನಮಂತ ದೊಡ್ಡಮನಿ, ಸೋಮು ರಾಮಗೇರಿ, ಬಸವರಾಜ ಮುಳಗುಂದ, ಸುದರ್ಶನ ಚೌಕಾ, ಡಿಸಿಆರ್ಬಿ ವಿಭಾಗದ ಜಾಫರ್ ಬಚ್ಚೇರಿ, ಆನಂದ್ ಸಿಂಗ್ ದೊಡ್ಡಮನಿ ಹಾಗೂ ಗದಗ ಜಿಲ್ಲೆಯ ತಾಂತ್ರಿಕ ವಿಭಾಗದ ಗುರು ಬೂದಿಹಾಳ ಹಾಗೂ ಸಂಜು ಕೊರಡೂರ ಅವರನ್ನು ಪ್ರಶಂಸಿದ ಎಸ್ಪಿ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದರು.