ಗದಗ : ನಗದು, ದಾಖಲೆಗಳಿದ್ದ ಬ್ಯಾಗ್ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಗದಗ : ಆಟೋ ಚಾಲಕರೊಬ್ಬರು 50 ಸಾವಿರ ಹಾಗೂ ಮಹತ್ವದ ದಾಖಲೆಗಳಿದ್ದ ಬ್ಯಾಗ್ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಗದಗ ತಾಲೂಕಿನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸಯ್ಯದ್ ಮುಲ್ಲಾ ಎಂಬವರು ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ನೀರಲಗಿ ಗ್ರಾಮದ ರವಿ ವಾಲ್ಮೀಕಿ ಎಂಬವರು ಬ್ಯಾಗ್ ಕಳೆದುಕೊಂಡ ವ್ಯಕ್ತಿ. ಜು.27 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿಬಾಬಾ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ರವಿ ಅವರು ಬ್ಯಾಗನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ಸಯ್ಯದ್ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ನೀಡುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಇಂದು (ಜು.29) ಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ವಾರಸುದಾರನಿಗೆ ಹಣ ಹಾಗೂ ದಾಖಲೆಗಳಿರುವ ಬ್ಯಾಗ್ ಹಸ್ತಾಂತರ ಮಾಡಲಾಯಿತು. ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸ್ ಇಲಾಖೆ, ಸಮುದಾಯ ರಕ್ಷಕ ಪ್ರಶಂಸಾ ಪ್ರಶಸ್ತಿ ನೀಡಿ ಗೌರವಿಸಿದರು. ಈ ವೇಳೆ ಆಟೋ ಸಂಘಟನೆ ಮುಖಂಡರು ಸೇರಿದಂತೆ ಅನೇಕ ಆಟೋ ಚಾಲಕರು ಉಪಸ್ಥಿತರಿದ್ದರು.