ಗದಗ | ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯ ಮೃತದೇಹ ಪತ್ತೆ

ಗದಗ: ನಿನ್ನೆ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯ ಮೃತದೇಹ ಬುಧವಾರ ಪತ್ತೆಯಾದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯಾ.ಸ. ಹಡಗಲಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಹಳ್ಳದಲ್ಲಿ ನಿನ್ನೆ ಕೊಚ್ಚಿ ಹೋಗಿದ್ದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಸಮ್ಮ(35) ಗುರಿಕಾರ ಮೃತದೇಹ ಪತ್ತೆಯಾಗಿದೆ.
ನಿನ್ನೆ ಯಾ.ಸ ಹಡಗಲಿ ಗ್ರಾಮದ ಆರೋಗ್ಯ ಮೇಳ ಕರ್ತವ್ಯ ಮುಗಿಸಿ ಕೌಜಗೇರಿ ಗ್ರಾಮಕ್ಕೆ ಬರುವ ವೇಳೆ ಘಟನೆ ನಡೆದಿತ್ತು.
ಕೌಜಗೇರಿ ಆಯುಷ್ಮಾನ್ ಆರೋಗ್ಯ ಮಂದಿರ ಉಪ ಕೇಂದ್ರದ ಮೂವರು ಸಿಬ್ಬಂದಿ ಒಂದೇ ಬೈಕಿನಲ್ಲಿ ಬರುತ್ತಿದ್ದರು. ನೀರಿನ ರಭಸವನ್ನು ಲೆಕ್ಕಿಸದೇ ಹಳ್ಳ ದಾಟುವ ವೇಳೆ ನೀರಲ್ಲಿ ಮೂವರು ಕೊಚ್ಚಿ ಹೋಗಿದ್ದರು. ಇದರಲ್ಲಿ ಬಸವರಾಜ್ ಹಾಗೂ ವೀರಸಂಗಯ್ಯ ಎಂಬ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದ್ರೆ ಬಸಮ್ಮ ಪತ್ತೆ ಆಗಿರಲಿಲ್ಲ.
ಇಂದು ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳಿಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮಹಿಳಾ ಅಧಿಕಾರಿ ಬಸಮ್ಮರ ಮೃತದೇಹ ಮುಳ್ಳು ಕಂಟಿಯಲ್ಲಿ ಪತ್ತೆಯಾಗಿದ.
ಈ ಕುರಿತು ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.