ಲಕ್ಷ್ಮೇಶ್ವರ | ಖಾಯಂ ನೌಕರಿಗೆ ಆಗ್ರಹಿಸಿ ಸಫಾಯಿ ಕರ್ಮಚಾರಿ ಮಲ ಸುರಿದುಕೊಂಡು ಪ್ರತಿಭಟನೆ

ಗದಗ : ಸಫಾಯಿ ಕರ್ಮಚಾರಿ ಓರ್ವ ಪುರಸಭೆ ಎದುರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದೆ.
ಪುರಸಭೆ ಎದುರು ನಿನ್ನೆ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಫಾಯಿ ಕರ್ಮಚಾರಿ ಸುರೇಶ್ ಬಸವನಾಯ್ಕರ್ ಎಂಬ ವ್ಯಕ್ತಿ ಪಟ್ಟಣದ ಪುರಸಭೆಯಲ್ಲಿ ಕಳೆದ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸಫಾಯಿ ಕರ್ಮಚಾರಿಯಾಗಿ ಸೇವೆ ಸಲ್ಲಿಸಿದ್ದರು.
ʼನನಗೆ ಪುರಸಭೆಯಲ್ಲಿ ಖಾಯಂ ನೌಕರಿ ಸಿಗಲಿಲ್ಲ. ಹೀಗಾಗಿ ಪುರಸಭೆ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈಗ ನನ್ನ ಮಗನಿಗೆ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೂ ಯಾರೂ ಸ್ಪಂದಿಸಲಿಲ್ಲ. ಕಳೆದ ಕೆಲ ತಿಂಗಳ ಹಿಂದೆ ಪುರಸಭೆಯ ಆಡಳಿತ ಮಂಡಳಿ ಗುತ್ತಿಗೆ ಆಧಾರದ ಮೇಲೆ ಸುಮಾರು 10ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಖಾಯಂ ನೇಮಕ ಮಾಡಿಕೊಳ್ಳಲಾಗಿದೆ. ಈ ವೇಳೆಯಾದರೂ ನನ್ನ ಮಗನಿಗೆ ಪೌರ ಕಾರ್ಮಿಕರನ್ನಾಗಿ ನೇಮಕ ಮಾಡಿಕೊಳ್ಳಬಹುದಿತ್ತು. ಆಗಲೂ ಮಾಡಿಕೊಂಡಿಲ್ಲ. ಇದರಿಂದ ಬೇಸತ್ತು ಪುರಸಭೆ ಎದುರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ್ದೇನೆ ಎಂದರು.
ಮುಂಬರುವ ದಿನಗಳಲ್ಲಿ ನನ್ನ ಮಗನಿಗೆ ಪುರಸಭೆ ಅಧಿಕಾರಿಗಳು ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಇದೇ ತರಹ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾನೆ. ಈ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಸುರೇಶ್ ಅವರ ಮನವೊಲಿಸಿ, ಪ್ರತಿಭಟನೆ ಕೈಬಿಟ್ಟು ಮನೆಗೆ ಕಳುಹಿಸಿದರು.