66 ಮಕ್ಕಳನ್ನು ಅಮೆರಿಕಾ `ಅಪಹರಿಸಿದೆ' : ವೆನೆಝುವೆಲಾ ಆರೋಪ

PC : NDTV
ಕರಾಕಸ್, ಆ.20: ಅಮೆರಿಕವು ವೆನೆಝುವೆಲಾದ 66 ಮಕ್ಕಳನ್ನು ಅಕ್ರಮವಾಗಿ ಇರಿಸಿಕೊಂಡಿದೆ ಎಂದು ವೆನೆಝುವೆಲಾ ಸರಕಾರ ಮಂಗಳವಾರ ಆರೋಪಿಸಿದೆ.
ಈ ಮಕ್ಕಳನ್ನು ಹೆತ್ತವರಿಂದ ಪ್ರತ್ಯೇಕಿಸಿದ ಬಳಿಕ ಹೆತ್ತವರನ್ನು ಅಮೆರಿಕಾದಿಂದ ವೆನೆಝುವೆಲಾಕ್ಕೆ ಗಡೀಪಾರು ಮಾಡಲಾಗಿದೆ ಎಂದು ಸರಕಾರ ಪ್ರತಿಪಾದಿಸಿದ್ದು ಮಕ್ಕಳನ್ನು ವೆನೆಝುವೆಲಾದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದೆ.
ಅಮೆರಿಕಾದಲ್ಲಿ 66 ಮಕ್ಕಳನ್ನು ಅಪಹರಿಸಲಾಗಿದ್ದು ಈ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದೊಂದು ಕ್ರೂರ ಮತ್ತು ಅಮಾನವೀಯ ನೀತಿಯಾಗಿದೆ. 2025ರಲ್ಲಿ 10,631 ವೆನೆಝುವೆಲಾ ಪ್ರಜೆಗಳು ಅಮೆರಿಕಾದಿಂದ ನಿರ್ಗಮಿಸಿದ್ದು ಇದರಲ್ಲಿ ಕೆಲವರು ಸ್ವದೇಶಕ್ಕೆ ಆಗಮಿಸಿದ್ದರೆ ಉಳಿದವರು ಮೆಕ್ಸಿಕೋದಲ್ಲಿ ಅತಂತ್ರರಾಗಿದ್ದಾರೆ ಎಂದು ವೆನೆಝುವೆಲಾ ಸರಕಾರದ `ತಾಯ್ನಾಡಿಗೆ ವಾಪಸಾತಿ' ಅಭಿಯಾನದ ಅಧ್ಯಕ್ಷೆ ಕ್ಯಾಮಿಲಾ ಫ್ಯಾಭ್ರಿ ಹೇಳಿದ್ದಾರೆ.
2014ರಿಂದ 7.7 ದಶಲಕ್ಷಕ್ಕೂ ಅಧಿಕ ವೆನೆಝುವೆಲಾ ಪ್ರಜೆಗಳು ದೇಶವನ್ನು ತೊರೆದಿದ್ದಾರೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿ ಯು ಎನ್ ಎಚ್ ಸಿ ಆರ್ ವರದಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ವೆನೆಝುವೆಲಾ ಪ್ರಜೆಗಳಿಗೆ ಅಮೆರಿಕವು `ತಾತ್ಕಾಲಿಕ ಸಂರಕ್ಷಿತ ವಲಸೆ ಸ್ಥಾನಮಾನ' ನೀಡಿದ್ದು ಗೊತ್ತುಪಡಿಸಿದ ಅವಧಿಗೆ ಅಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ.
ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅಮೆರಿಕದಿಂದ ಲಕ್ಷಾಂತರ ದಾಖಲೆರಹಿತ ವಲಸಿಗರನ್ನು ಗಡೀಪಾರು ಮಾಡುವ ಆಕ್ರಮಣಕಾರಿ ಅಭಿಯಾನದ ಅಂಗವಾಗಿ ಆ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ.