ಧಾರವಾಡ| ಗಲಾಟೆ ಪ್ರಕರಣ : ಇಬ್ಬರು ಪೊಲೀಸ್ ಪೇದೆಗಳ ಅಮಾನತು

ಧಾರವಾಡ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದ ಲಾಠಿ ಚಾರ್ಜ್ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದ ಲಾಠಿ ಚಾರ್ಜ್ ಪ್ರಕರಣ ರಾಜಕೀಯ ತಿರುವುಗಳನ್ನ ಪಡೆದುಕೊಂಡು ಸಾಕಷ್ಟು ಸದ್ದು ಮಾಡಿತ್ತು.
ಸಿಪಿಐ ಕಮತಗಿ ಹಾಗೂ ಪೊಲೀಸ್ ಪೇದೆ ಸೈಯದ್ ಎಂಬವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಅಮೃತ ದೇಸಾಯಿ ನೂರಾರು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.
ನಂತರ ನರೇಂದ್ರ ಗ್ರಾಮಕ್ಕೆ ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಗ್ರಾಮಕ್ಕೆ ತೆರಳಿ ಲಾಠಿ ಚಾರ್ಜ್‌ಗೆ ಕಾರಣರಾದ ಸಿಪಿಐ ಹಾಗೂ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಬೇಕು ಎಂದು ಎಸ್‌ಪಿ ಅವರಿಗೆ ಆಗ್ರಹಿಸಿದ್ದರು. ಸಾಕಷ್ಟು ರಾಜಕೀಯ ಚರ್ಚೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಬ್ಬರು ಪೊಲೀಸ್ ಪೇದೆಗಳಾದ ಸೈಯದ್ ಹಾಗೂ ಕೃಷ್ಣಾ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.